ಪದ್ಯ ೭: ಅರ್ಜುನನಿಗೆ ಯಾವ ಕನಸು ಬಿದ್ದಿತು?

ವಿಮಳ ದರ್ಭಾಂಕುರದ ಶಯನದೊ
ಳಮರಪತಿಸುತ ಪವಡಿಸಿದನನು
ಪಮ ವಿಳಾಸನು ಕನಸ ಕಂಡೆನೆನುತ್ತ ಕಂದೆರೆದ
ಸಮರವಿಜಯಕೆ ಶಿವನ ಕೃಪೆ ಸಂ
ಕ್ರಮಿಸಿತೆನಗೆನುತಿರಲು ಮುಂದಣ
ಕಮಲನಾಭನ ಕಂಡು ಬಿನ್ನಹ ಮಾಡಿದನು ನಗುತ (ದ್ರೋಣ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ಆಯುಧ ಶಾಲೆಯ ವೇದಿಕೆಯ ಮೇಲೆ ದರ್ಭೆಯ ಶಯ್ಯೆಯ ಮೇಲೆ ಮಲಗಿದ್ದ ಅರ್ಜುನನು ಕಣ್ಣು ತೆಗೆದು ಕನಸು ಬಿದ್ದಿತು, ಕನಸಿನಲ್ಲಿ ಶಿವನ ಕೃಪೆಯಾಯಿತು, ಎಂಉದ್ ಚಿಂತಿಸುತ್ತಾ ಕಣ್ತೆರೆದು ಮುಂದೆಯೇ ನಿಂತಿದ್ದ ಕೃಷ್ಣನಿಗೆ ಹೀಗೆಂದು ಹೇಳಿದನು.

ಅರ್ಥ:
ವಿಮಳ: ನಿರ್ಮಲ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಶಯನ: ನಿದ್ರೆ; ಅಮರಪತಿ: ಇಂದ್ರ; ಅಮರ: ದೇವತೆ; ಸುತ: ಮಗ; ಪವಡಿಸು: ನಿದ್ರಿಸು; ಅನುಪಮ: ಉತ್ಕೃಷ್ಟವಾದುದು; ಕನಸು: ಸ್ವಪ್ನ; ವಿಳಾಸ: ಅಂದ, ಸೊಬಗು; ಕಂಡು: ನೋಡು; ಕಂದೆರೆದ: ಕಣ್ಣನ್ನು ಬಿಟ್ಟು; ಸಮರ: ಯುದ್ಧ; ವಿಜಯ: ಗೆಲುವು; ಕೃಪೆ: ದಯೆ; ಸಂಕ್ರಮಿಸು: ಸೇರು, ಕೂಡು; ಮುಂದಣ: ಮುಂದೆ; ಕಮಲನಾಭ: ವಿಷ್ಣು; ಕಂಡು: ನೋಡು; ಬಿನ್ನಹ: ಕೋರಿಕೆ; ನಗು: ಹರ್ಷ;

ಪದವಿಂಗಡಣೆ:
ವಿಮಳ +ದರ್ಭಾಂಕುರದ+ ಶಯನದೊಳ್
ಅಮರಪತಿ+ಸುತ +ಪವಡಿಸಿದನ್+ಅನು
ಪಮ +ವಿಳಾಸನು +ಕನಸ +ಕಂಡೆನ್+ಎನುತ್ತ +ಕಂದೆರೆದ
ಸಮರ+ವಿಜಯಕೆ +ಶಿವನ +ಕೃಪೆ +ಸಂ
ಕ್ರಮಿಸಿತ್+ಎನಗ್+ಎನುತಿರಲು +ಮುಂದಣ
ಕಮಲನಾಭನ +ಕಂಡು +ಬಿನ್ನಹ +ಮಾಡಿದನು +ನಗುತ

ಅಚ್ಚರಿ:
(೧) ಅರ್ಜುನನನ್ನು ಅಮರಪತಿಸುತ, ಕೃಷ್ಣನನ್ನು ಕಮಲನಾಭ ಎಂದು ಕರೆದಿರುವುದು

ಪದ್ಯ ೪೫: ದೇವತೆಗಳೇಕೆ ಆಶ್ಚರ್ಯಗೊಂಡರು?

ಕಾಣಬಾರದು ಬಿಡುವ ಹೂಡುವ
ಕೇಣವನು ಪರಮಾಣು ಪುಂಜವ
ಕಾಣವೇ ಕಣ್ಣುಗಳು ನಮ್ಮವು ಮರ್ತ್ಯರಾಲಿಗಳೆ
ಜಾಣಪಣವಿದು ಶಿವ ಸುದರ್ಶನ
ಪಾಣಿಗಳಿಗಹುದಮರಪತಿ ಪದ
ದಾಣೆ ಹುಸಿಯಲ್ಲೆನುತ ಬೆರಗಾಯಿತ್ತು ಸುರಕಟಕ (ವಿರಾಟ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಪ್ರಯೋಗವನ್ನು ಕಂಡ ದೇವತೆಗಳು ಆಶ್ಚರ್ಯಗೊಂಡರು. ನಮಗೇನು ಮನುಷ್ಯರಂತೆ ರೆಪ್ಪೆಗಳಿವೆಯೇ? ಪರಮಾಣುಗಳನ್ನು ನಾವು ನೋಡಬಲ್ಲೆವು, ಆದರೆ ಅರ್ಜುನನು ಬಾಣವನ್ನು ಹೇಗೆ ಹೂಡಿದ, ಹೇಗೆ ಬಿಟ್ಟ ಎನ್ನುವುದು ನಮಗೆ ಕಾಣಿಸುತ್ತಿಲ್ಲ, ಇಂತಹ ಚಾಕಚಕ್ಯತೆಯು ಹರಿಹರರಿಗುಂಟು, ಇಂದ್ರನ ಪಾದದಾಣೆ ನಮ್ಮ ಈ ಮಾತು ಸುಳ್ಳಲ್ಲ ಎಂದು ದೇವತೆಗಳು ಆಶ್ಚರ್ಯಭರಿತರಾಗಿ ಹೇಳಿದರು.

ಅರ್ಥ:
ಕಾಣು: ತೋರು; ಬಿಡು: ತೊರೆ; ಹೂಡು: ತೊಡು; ಕೇಣ:ಮತ್ಸರ, ಕೋಪ, ದ್ವೇಷ; ಪರಮಾಣು: ಅತ್ಯಂತ ಸೂಕ್ಷ್ಮಕಣ; ಪುಂಜ: ಸಮೂಹ, ಗುಂಪು; ಕಣ್ಣು: ನಯನ; ಮರ್ತ್ಯ: ಮನುಷ್ಯ; ಆಲಿ: ಕಣ್ಣು; ಜಾಣ: ಬುದ್ಧಿವಂತ; ಪಣ: ಪಂದ್ಯ; ಪಾಣಿ: ಹಸ್ತ; ಅಮರಪತಿ: ಇಂದ್ರ; ಪದ: ಚರಣ; ಆಣೆ: ಪ್ರಮಾಣ; ಹುಸಿ: ಸುಳ್ಳು; ಬೆರಗು: ಆಶ್ಚರ್ಯ; ಸುರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಕಾಣಬಾರದು+ ಬಿಡುವ +ಹೂಡುವ
ಕೇಣವನು +ಪರಮಾಣು +ಪುಂಜವ
ಕಾಣವೇ +ಕಣ್ಣುಗಳು+ ನಮ್ಮವು+ ಮರ್ತ್ಯರ್+ಆಲಿಗಳೆ
ಜಾಣಪಣವಿದು+ ಶಿವ+ ಸುದರ್ಶನ
ಪಾಣಿಗಳಿಗ್+ಅಹುದ್+ಅಮರಪತಿ+ ಪದದ್
ಆಣೆ+ಹುಸಿಯಲ್ಲೆನುತ +ಬೆರಗಾಯಿತ್ತು +ಸುರ+ಕಟಕ

ಅಚ್ಚರಿ:
(೧) ಪರಮಾಣುವನ್ನು ಕಾಣುವ ಕಣ್ಣುಗಳು ಬಾಣವನ್ನು ಕಾಣಲಾಗಲಿಲ್ಲ ಎಂದು ಹೇಳುವ ಮೂಲಕ ಅರ್ಜುನನ ಚಾಣಾಕ್ಷತೆಯನ್ನು ವಿವರಿಸಲಾಗಿದೆ.