ಪದ್ಯ ೨: ಸೂರ್ಯೋದಯವು ಹೇಗೆ ಕಂಡಿತು?

ಏಳು ಕುದುರೆಯ ಖುರಪುಟದ ಕೆಂ
ದೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ
ಹೇಳಲೇನು ಮಹೇಂದ್ರ ವರದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು (ವಿರಾಟ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಸೂರ್ಯ ರಥಕ್ಕೆ ಕಟ್ಟಿದ ಏಳು ಕುದುರೆಗಳ ಖುರಪುಟದ ಹೊಡೆತದಿಂದೆದ್ದ ಕೆಂದೂಳೋ, ಕುಂತೀಪುತ್ರರ ಏಳಿಗೆಯನ್ನು ಸೂಚಿಸುವ ರಾಗರಸವೋ? ಪೂರ್ವ ದಿಗ್ಬಾಲಕಿಯ ಬೈತಲೆಗೆ ಹಚ್ಚಿದ ಕುಂಕುಮವೋ, ಎಂಬಂತೆ ಸೂರ್ಯರಶ್ಮಿಗಳು ಕಾಣಿಸಿದವು.

ಅರ್ಥ:
ಕುದುರೆ: ಅಶ್ವ; ಖುರಪುಟ:ಗೊರಸು, ಪ್ರಾಣಿಗಳ ಕೊಳಗು; ಕೆಂದೂಳಿ: ಕೆಂಪಾದ ಮಣ್ಣಿನ ಧೂಳು; ಏಳಿಗೆ: ಅಭಿವೃದ್ಧಿ; ತನಿ: ಹೆಚ್ಚಾಗು, ಅತಿಶಯವಾಗು; ಉಬ್ಬರ: ಅತಿಶಯ; ಪಸರಿಸು: ಹರಡು; ಹೇಳು: ತಿಳಿಸು; ಮಹೇಂದ್ರ: ಇಂದ್ರ; ವರದಿ: ಸುದ್ದಿ, ಸಮಾಚಾರ; ಬಾಲಕಿ: ಹೆಣ್ಣು; ಬೈತಲೆ: ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಕುಂಕುಮ: ಮಂಗಳ ದ್ರವ್ಯ; ಜಾಲ: ಸಮೂಹ; ಹೇಳು: ತಿಳಿಸು; ದಿನಪನ: ರವಿ, ಸೂರ್ಯ; ಚೂಣಿ: ಮುಂದಿನ ಸಾಲು, ಮುಂಭಾಗ; ರಂಜಿಸು: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಏಳು +ಕುದುರೆಯ +ಖುರಪುಟದ +ಕೆಂ
ದೂಳಿಯೋ +ಕುಂತೀ+ ಕುಮಾರಕರ್
ಏಳಿಗೆಯ+ ತನಿರಾಗರಸ+ಉಬ್ಬರಿಸಿ +ಪಸರಿಸಿತೊ
ಹೇಳಲೇನು+ ಮಹೇಂದ್ರ +ವರದಿಗ್
ಬಾಲಕಿಯ +ಬೈತಲೆಯ+ ಕುಂಕುಮ
ಜಾಲವೋ +ಹೇಳೆನಲು +ದಿನಪನ+ ಚೂಣಿ +ರಂಜಿಸಿತು

ಅಚ್ಚರಿ:
(೧) ಉಪಮಾನದ ಪ್ರಯೋಗಗಳು – ಏಳು ಕುದುರೆಯ ಖುರಪುಟದ ಕೆಂದೂಳಿಯೋ, ಮಹೇಂದ್ರ ವರದಿ
ಗ್ಬಾಲಕಿಯ ಬೈತಲೆಯ ಕುಂಕುಮ ಜಾಲವೋ

ಪದ್ಯ ೫೨: ಅರ್ಜುನನು ವೈರಿಪಡೆಗೆ ಏನು ಹೇಳಿದ?

ತಿರುಗಿ ಕೆಂದೂಳಿಡುತ ತುರುಗಳು
ಪುರಕೆ ಹಾಯ್ದವು ನಲವು ಮಿಗಲು
ತ್ತರ ಕಿರೀಟಿಗಳಾಂತುನಿಂದರು ಮತ್ತೆ ಕಾಳಗಕೆ
ಅರಸು ಮೋಹರ ಮುರಿದ ಹರಿಬವ
ಮರಳಿಚುವ ಮಿಡುಕುಳ್ಳ ವೀರರ
ಧುರಕೆ ಬರಹೇಳೆನುತ ಬಾಣವ ತೂಗಿದನು ಪಾರ್ಥ (ವಿರಾಟ ಪರ್ವ, ೮ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೆಂದೂಳಿನ್ನೆಬ್ಬಿಸುತ್ತಾ ವಿರಾಟನ ತುರುಗಳು ಊರಿಗೆ ಓಡುತ್ತಾ ಹೋದವು. ಉತ್ತರ ಅರ್ಜುನರಿಬ್ಬರೂ ಯುದ್ಧಕ್ಕೆ ಸಿದ್ಧರಾಗಿ ನಿಂತರು. ರಾಜನ ಸೈನ್ಯವು ಸೋತು ಹೋಯಿತು, ಈ ಅಪಮಾನವನ್ನು ತೊಡೆದು ಹಾಕಬಲ್ಲ ವೀರರನ್ನು ಯುದ್ಧಕ್ಕೆ ಬರಲು ಹೇಳು ಎಂದು ಅರ್ಜುನನು ಬಾಣವನ್ನು ತೂಗುತ್ತಾ ನಿಂತನು.

ಅರ್ಥ:
ತಿರುಗು: ಹಿಂದಿರುಗು; ಕೆಂದೂಳಿ: ಕೆಂಪಾದ ಧೂಳು; ತುರು: ಹಸು; ಪುರ: ಊರು; ಹಾಯ್ದು: ಚಲಿಸು; ನಲವು: ಸಂತೋಷ; ಕಾಳಗ: ಯುದ್ಧ; ಅರಸು: ರಾಜ; ಮೋಹರ: ಯುದ್ಧ; ಮುರಿ: ಸೀಳು; ಹರಿಬ: ಕೆಲಸ, ಕಾರ್ಯ; ಮರಳು: ಹಿಂದಕ್ಕೆ ಬರು; ಬಾಣ: ಶರ; ತೂಗು: ಅಲ್ಲಾಡಿಸು, ತೂಗಾಡಿಸು;

ಪದವಿಂಗಡಣೆ:
ತಿರುಗಿ +ಕೆಂದೂಳಿಡುತ +ತುರುಗಳು
ಪುರಕೆ+ ಹಾಯ್ದವು +ನಲವು +ಮಿಗಲ್
ಉತ್ತರ+ ಕಿರೀಟಿಗಳಾಂತು+ನಿಂದರು+ ಮತ್ತೆ +ಕಾಳಗಕೆ
ಅರಸು+ ಮೋಹರ +ಮುರಿದ +ಹರಿಬವ
ಮರಳಿಚುವ +ಮಿಡುಕುಳ್ಳ+ ವೀರರ
ಧುರಕೆ +ಬರಹೇಳೆನುತ +ಬಾಣವ +ತೂಗಿದನು +ಪಾರ್ಥ

ಅಚ್ಚರಿ:
(೧) ಯುದ್ಧಕ್ಕೆ ಆಹ್ವಾನವನ್ನು ನೀಡುವ ಪರಿ – ಅರಸು ಮೋಹರ ಮುರಿದ ಹರಿಬವ ಮರಳಿಚುವ ಮಿಡುಕುಳ್ಳ ವೀರರ ಧುರಕೆ ಬರಹೇಳೆನುತ