ಪದ್ಯ ೩೭: ಯಾವ ಮರಗಳು ಸೈನ್ಯರ ಕಾಲ್ತುಳಿತಕ್ಕೆ ಬಿದ್ದವು?

ಬಲದ ಪದಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶ ರಸಾಲ ಶಮಿಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ (ಅರಣ್ಯ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲ್ತುಳಿತಕ್ಕೆ, ಹೆಮ್ಮರಗಳು ಸದ್ದು ಮಾಡುತ್ತಾ ಮುರಿದು ಬಿದ್ದವು. ನಿಮಿಷ ಮಾತ್ರದಲ್ಲಿ ಸಾಲ, ಅಡಕೆ, ಬೇಲ, ಲವಂಗ, ತುಂಬುರ, ನಿಮ್ಬೆ, ದಾಳಿಂಬೆ, ಮುತ್ತುಗ, ಮಾವು, ಬನ್ನಿ, ಗುಗ್ಗಳ, ಹಿಪ್ಪೆ, ಅಶೋಕ, ಬಿಲ್ವ, ನೆಲ್ಲಿ, ಕಂಚಿ ಮೊದಲಾದ ಮರಗಳು ಹಣ್ಣುಗಳೊಡನೆ ಬಿದ್ದವು.

ಅರ್ಥ:
ಬಲ: ಸೈನ್ಯ; ಪದ: ಕಾಲು; ಘಟ್ಟಣೆ: ಅಪ್ಪಳಿಸುವಿಕೆ, ಹೊಡೆತ; ಹೆಮ್ಮರ: ದೊಡ್ಡ ಮರ; ಉಲಿ: ಧ್ವನಿ; ಬಿದ್ದು: ಕೆಳಕ್ಕೆ ಉರುಳು; ಸಾಲ: ಮತ್ತಿಮರ, ಸರ್ಜ ವೃಕ್ಷ; ಪೂಗ: ಅಡಿಕೆಮರ; ಆವಳಿ: ಸಾಲು, ಗುಂಪು; ಕಪಿತ್ಥ: ಬೇಲದ ಮರ; ತುಂಬುರ: ಒಂದು ಬಗೆಯ ಮರ; ನಿಂಬ: ಮಂದಾರವೃಕ್ಷ, ನಿಂಬೆ; ಫಲ: ಹಣ್ಣು; ಪಲಾಶ: ಮುತ್ತುಗದ ಮರ; ರಸಾಲ: ಮಾವು; ಶಮಿ: ಬನ್ನಿಯ ಮರ; ಗುಗ್ಗುಳ: ಸಾಂಭ್ರಾಣಿ, ಒಂದು ಬಗೆಯ ಮರ; ಮಧೂಕ: ಒಂದು ಜಾತಿಯ ಗಿಡ; ಅಶೋಕ: ಒಂದು ಜಾತಿಯ ಮರ; ಅಮಲ: ನೆಲ್ಲಿ; ಜಂಬೀರ: ನಿಂಬೆಯ ಗಿಡ; ನುಗ್ಗು: ನೂಕಾಟ, ಪುಡಿ; ನಿಮಿಷ: ಕ್ಷಣ;

ಪದವಿಂಗಡಣೆ:
ಬಲದ +ಪದಘಟ್ಟಣೆಗೆ +ಹೆಮ್ಮರ
ನುಲಿದು +ಬಿದ್ದವು +ಸಾಲ+ ಪೂಗಾ
ವಳಿ +ಕಪಿತ್ಥ +ಲವಂಗ +ತುಂಬುರ +ನಿಂಬ+ ದಾಳಿಂಬ
ಫಲ+ ಪಲಾಶ+ ರಸಾಲ +ಶಮಿ+ಗು
ಗ್ಗುಳ +ಮಧೂಕ+ಅಶೋಕ +ಬಿಲ್ವಾ
ಮಲಕ+ ಜಂಬೀರಾದಿಗಳು+ ನುಗ್ಗಾಯ್ತು +ನಿಮಿಷದಲಿ

ಅಚ್ಚರಿ:
(೧) ಮರಗಳ ಹೆಸರು – ಸಾಲ, ಪೂಗ, ಕಪಿತ್ಥ, ಲವಂಗ, ತುಂಬುರ, ನಿಂಬ, ದಾಳಿಂಬ,
ಫಲ, ಪಲಾಶ, ರಸಾಲ, ಶಮಿ, ಗುಗ್ಗುಳ, ಮಧೂಕ,ಅಶೋಕ, ಬಿಲ್ವ, ಅಮಲ, ಜಂಬೀರ

ಪದ್ಯ ೩೮: ಇಂದ್ರಕೀಲ ಪರ್ವತದ ಭೂಮಿ ಯಾರ ವಿಹಾಸ ಸ್ಥಾನವಾಗಿತ್ತು?

ಚಾರುತರ ಪರಿಪಕ್ವ ನವ ಖ
ರ್ಜೂರ ರಸಧಾರಾ ಪ್ರವಾಹ ಮ
ನೋರಮೇಕ್ಷು ವಿಭೇದ ವಿದ್ರುಮ ರಸದ ದಾಳಿಂಬ
ಭೂರಿ ಜಂಬುಮಧೂಕ ಪನಸ
ಸ್ಫಾರ ರಸಪೂರಾನುಕಲಿತ ವಿ
ಹಾರ ಸುರಮಹಿಳಾಭಿರಂಜನವಖಿಳ ವನಭೂಮಿ (ಅರಣ್ಯ ಪರ್ವ, ೫ ಸಂಧಿ, ೩೮ ಪದ್ಯ)

ತಾತ್ಪರ್ಯ:
ಪರಿಪಕ್ವವಾದ ಖರ್ಜೂರ ರಸಗಳ ಧಾರೆ, ಮನಸ್ಸನ್ನು ಸೆಳೆಯುವ ಅನೇಕ ವಿಧವಾದ ಕಬ್ಬುಗಳು, ಚಿಗುರಿನ ಬಣ್ಣದ ದಾಳಿಂಬೆ, ದೊಡ್ಡ ನೇರಳೆ, ಹಿಪ್ಪೆ, ಹಲಸು ಮೊದಲಾದ ಹಣ್ಣುಗಳು ಸಮೃದ್ಧವಾಗಿದ್ದ ಆ ವನವು ಅಪ್ಸರೆಯರ ಮನೋರಂಜನ ಭೂಮಿಯಾಗಿತ್ತು.

ಅರ್ಥ:
ಚಾರು: ಸುಂದರ; ಪಕ್ವ: ಹಣ್ಣಾದ; ನವ: ಹೊಸ; ರಸ: ಸಾರ; ಧಾರೆ: ಮೇಲಿನಿಂದ ಹರಿದುಬರುವ; ಪ್ರವಾಹ: ಹರಿಯುವಿಕೆ, ಪ್ರವಹಿಸುವಿಕೆ; ಮನೋರಮ: ಸುಂದರ; ಇಕ್ಷು: ಕಬ್ಬಿನ ಜಿಲ್ಲೆ; ವಿಭೇದ: ಒಡೆಯುವಿಕೆ, ಬೇರ್ಪಡಿಸುವಿಕೆ; ವಿದ್ರುಮ: ಹವಳ; ಭೂರಿ: ಹೆಚ್ಚು, ಅಧಿಕ; ಜಂಬು: ನೇರಳೆ; ಮಧೂಕ: ಒಂದು ಜಾತಿಯ ಗಿಡ; ಪನಸ: ಹಲಸು; ಪೂರ: ಭರಿತ; ಅನುಕಲಿತ: ಕೂಡಿದ; ವಿಹಾರ: ಅಲೆದಾಟ, ತಿರುಗಾಡುವುದು; ಸುರಮಹಿಳ: ಅಪ್ಸರೆ; ಅಭಿರಂಜನ: ಉಲ್ಲಾಸ, ಸಂತೋಷ; ಅಖಿಳ: ಎಲ್ಲಾ; ವನ: ಕಾಡು; ಭೂಮಿ: ಪೃಥ್ವಿ;

ಪದವಿಂಗಡಣೆ:
ಚಾರುತರ+ ಪರಿಪಕ್ವ +ನವ +ಖ
ರ್ಜೂರ +ರಸಧಾರಾ +ಪ್ರವಾಹ +ಮ
ನೋರಮ+ಇಕ್ಷು +ವಿಭೇದ +ವಿದ್ರುಮ +ರಸದ +ದಾಳಿಂಬ
ಭೂರಿ+ ಜಂಬು+ಮಧೂಕ +ಪನಸ
ಸ್ಫಾರ+ ರಸಪೂರ+ಅನುಕಲಿತ +ವಿ
ಹಾರ +ಸುರಮಹಿಳ+ಅಭಿರಂಜನವ್+ಅಖಿಳ+ ವನಭೂಮಿ

ಅಚ್ಚರಿ:
(೧) ಹಣ್ಣಿನ ರಸದ ವರ್ಣನೆ – ಖರ್ಜೂರ ರಸಧಾರಾ ಪ್ರವಾಹ, ಮನೋರಮೇಕ್ಷು ವಿಭೇದ ವಿದ್ರುಮ ರಸದ ದಾಳಿಂಬ
(೨) ಖರ್ಜೂರ, ಇಕ್ಷು, ದಾಳಿಂಬ, ಜಂಬು, ಪನಸ – ಹಣ್ಣುಗಳ ಹೆಸರು