ಪದ್ಯ ೩೭: ಯಾವ ಮರಗಳು ಸೈನ್ಯರ ಕಾಲ್ತುಳಿತಕ್ಕೆ ಬಿದ್ದವು?

ಬಲದ ಪದಘಟ್ಟಣೆಗೆ ಹೆಮ್ಮರ
ನುಲಿದು ಬಿದ್ದವು ಸಾಲ ಪೂಗಾ
ವಳಿ ಕಪಿತ್ಥ ಲವಂಗ ತುಂಬುರ ನಿಂಬ ದಾಳಿಂಬ
ಫಲ ಪಲಾಶ ರಸಾಲ ಶಮಿಗು
ಗ್ಗುಳ ಮಧೂಕಾಶೋಕ ಬಿಲ್ವಾ
ಮಲಕ ಜಂಬೀರಾದಿಗಳು ನುಗ್ಗಾಯ್ತು ನಿಮಿಷದಲಿ (ಅರಣ್ಯ ಪರ್ವ, ೧೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸೈನ್ಯದ ಕಾಲ್ತುಳಿತಕ್ಕೆ, ಹೆಮ್ಮರಗಳು ಸದ್ದು ಮಾಡುತ್ತಾ ಮುರಿದು ಬಿದ್ದವು. ನಿಮಿಷ ಮಾತ್ರದಲ್ಲಿ ಸಾಲ, ಅಡಕೆ, ಬೇಲ, ಲವಂಗ, ತುಂಬುರ, ನಿಮ್ಬೆ, ದಾಳಿಂಬೆ, ಮುತ್ತುಗ, ಮಾವು, ಬನ್ನಿ, ಗುಗ್ಗಳ, ಹಿಪ್ಪೆ, ಅಶೋಕ, ಬಿಲ್ವ, ನೆಲ್ಲಿ, ಕಂಚಿ ಮೊದಲಾದ ಮರಗಳು ಹಣ್ಣುಗಳೊಡನೆ ಬಿದ್ದವು.

ಅರ್ಥ:
ಬಲ: ಸೈನ್ಯ; ಪದ: ಕಾಲು; ಘಟ್ಟಣೆ: ಅಪ್ಪಳಿಸುವಿಕೆ, ಹೊಡೆತ; ಹೆಮ್ಮರ: ದೊಡ್ಡ ಮರ; ಉಲಿ: ಧ್ವನಿ; ಬಿದ್ದು: ಕೆಳಕ್ಕೆ ಉರುಳು; ಸಾಲ: ಮತ್ತಿಮರ, ಸರ್ಜ ವೃಕ್ಷ; ಪೂಗ: ಅಡಿಕೆಮರ; ಆವಳಿ: ಸಾಲು, ಗುಂಪು; ಕಪಿತ್ಥ: ಬೇಲದ ಮರ; ತುಂಬುರ: ಒಂದು ಬಗೆಯ ಮರ; ನಿಂಬ: ಮಂದಾರವೃಕ್ಷ, ನಿಂಬೆ; ಫಲ: ಹಣ್ಣು; ಪಲಾಶ: ಮುತ್ತುಗದ ಮರ; ರಸಾಲ: ಮಾವು; ಶಮಿ: ಬನ್ನಿಯ ಮರ; ಗುಗ್ಗುಳ: ಸಾಂಭ್ರಾಣಿ, ಒಂದು ಬಗೆಯ ಮರ; ಮಧೂಕ: ಒಂದು ಜಾತಿಯ ಗಿಡ; ಅಶೋಕ: ಒಂದು ಜಾತಿಯ ಮರ; ಅಮಲ: ನೆಲ್ಲಿ; ಜಂಬೀರ: ನಿಂಬೆಯ ಗಿಡ; ನುಗ್ಗು: ನೂಕಾಟ, ಪುಡಿ; ನಿಮಿಷ: ಕ್ಷಣ;

ಪದವಿಂಗಡಣೆ:
ಬಲದ +ಪದಘಟ್ಟಣೆಗೆ +ಹೆಮ್ಮರ
ನುಲಿದು +ಬಿದ್ದವು +ಸಾಲ+ ಪೂಗಾ
ವಳಿ +ಕಪಿತ್ಥ +ಲವಂಗ +ತುಂಬುರ +ನಿಂಬ+ ದಾಳಿಂಬ
ಫಲ+ ಪಲಾಶ+ ರಸಾಲ +ಶಮಿ+ಗು
ಗ್ಗುಳ +ಮಧೂಕ+ಅಶೋಕ +ಬಿಲ್ವಾ
ಮಲಕ+ ಜಂಬೀರಾದಿಗಳು+ ನುಗ್ಗಾಯ್ತು +ನಿಮಿಷದಲಿ

ಅಚ್ಚರಿ:
(೧) ಮರಗಳ ಹೆಸರು – ಸಾಲ, ಪೂಗ, ಕಪಿತ್ಥ, ಲವಂಗ, ತುಂಬುರ, ನಿಂಬ, ದಾಳಿಂಬ,
ಫಲ, ಪಲಾಶ, ರಸಾಲ, ಶಮಿ, ಗುಗ್ಗುಳ, ಮಧೂಕ,ಅಶೋಕ, ಬಿಲ್ವ, ಅಮಲ, ಜಂಬೀರ

ಪದ್ಯ ೩೯ : ಕೂರ್ಮವೇಷದಲ್ಲಿ ಕೃಷ್ಣನ ಮಹಿಮೆ ಏನು?

ಖೂಳನಾಯ್ಗಳು ಬಲ್ಲರೇ ಶಿಶು
ಪಾಲಕಾದಿದೊಠಾರರೀ ಗೋ
ಪಾಲ ಕಾಣಿರೆ ಕೂರ್ಮವೇಷವ ಧರಿಸಿ ಮೇದಿನಿಯ
ಸಾಲಹೆಡೆಯಲಿ ಹೊತ್ತ ಪನ್ನಗ
ಪಾಲಕನನಾ ಮಂದರದ ಕಡ
ಗೋಲನಾಂತ ಮಹಾತ್ಮನೀತನನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶಿಶುಪಾಲನೇ ಮುಂತಾದ ಕೆಲಸಕ್ಕೆ ಬಾರದ ನಾಯಿಗಳಿಗೇನು ಗೊತ್ತು ಕೃಷ್ಣನ ಮಹಿಮೆ? ಈ ಗೋಪಾಲನೇ ಕೂರ್ಮಾವತಾರವನ್ನು ಧರಿಸಿ ಭೂಮಿಯನ್ನು ಹೊತ್ತ ಆದಿಶೇಷನನ್ನು ಸಮುದ್ರ ಮಥನದಲ್ಲಿ ಕಡಗೋಲಾಗಿದ್ದ ಮಂದರ ಪರ್ವತವನ್ನೂ ಹೊತ್ತ ಮಹಾತ್ಮ ಇವನ ಮಹಿಮೆಯನ್ನರಿಯಬಲ್ಲವರಾರು ಎಂದು ಭೀಷ್ಮರು ಪ್ರಶ್ನಿಸಿದರು.

ಅರ್ಥ:
ಖೂಳ: ದುಷ್ಟ; ನಾಯಿ: ಕುನ್ನಿ; ಆದಿ: ಮುಂತಾದ; ದೊಠಾರ: ನಿಂದೆ, ಮೂದಲೆ; ಕಾಣಿರೆ: ನೋಡಿ; ಕೂರ್ಮ: ಆಮೆ; ವೇಷ: ರೂಪ; ಧರಿಸಿ: ತೆಗೆದುಕೊಳ್ಳು, ಹೊರು; ಮೇದಿನಿ: ಭೂಮಿ; ಸಾಲ: ಪ್ರಾಕಾರ; ಹೆಡೆ: ಹಾವಿನ ಶಿರ; ಹೊತ್ತು: ಧರಿಸು; ಪನ್ನಗ: ಹಾವು; ಪಾಲಕ: ರಕ್ಷಿಸುವ; ಮಂದರ: ಪರ್ವತದ ಹೆಸರು; ಕಡಗೋಲು: ಕಡಿಯುವ ಸಾಧನ; ಮಹಾತ್ಮ: ಶ್ರೇಷ್ಠ; ಅರಿ: ತಿಳಿ;

ಪದವಿಂಗಡಣೆ:
ಖೂಳ+ನಾಯ್ಗಳು +ಬಲ್ಲರೇ +ಶಿಶು
ಪಾಲಕಾದಿ+ದೊಠಾರರ್+ಈ+ ಗೋ
ಪಾಲ +ಕಾಣಿರೆ+ ಕೂರ್ಮ+ವೇಷವ+ ಧರಿಸಿ+ ಮೇದಿನಿಯ
ಸಾಲಹೆಡೆಯಲಿ +ಹೊತ್ತ +ಪನ್ನಗ
ಪಾಲಕನನ್+ಆ+ ಮಂದರದ+ ಕಡ
ಗೋಲನಾಂತ +ಮಹಾತ್ಮನ್+ಈತನನ್+ಅರಿವರಾರೆಂದ

ಅಚ್ಚರಿ:
(೧) ಶಿಶುಪಾಲ, ಗೋಪಾಲ, ಸಾಲ, ಪನ್ನಗಪಾಲ, ಕಡಗೋಲ – ಪ್ರಾಸ ಪದಗಳು
(೨) ಧರಿಸು, ಹೊತ್ತು – ಸಾಮ್ಯಾರ್ಥ ಪದ