ಪದ್ಯ ೪೩: ಕೌರವನ ಬಾಗಿಲಲ್ಲಿ ಯಾರು ಬಂದು ನಿಂತರು?

ಮುರಿದುದಿದು ಗಂಧರ್ವ ಬಲ ಮಿ
ಕ್ಕುರುಬಿಕೊಂಡೇ ಬಂದುದಗ್ಗದ
ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ
ಕರಿತುರಗ ರಥಪಾಯದಳ ಹೆಣ
ಹೊರಳಿಗಟ್ಟಿತು ಪಾಳೆಯದ ಗೋ
ಪುರದ ಹೊರ ಬಾಹೆಯಲಿ ನಿಂದುದು ಬಲಕೆ ಬೇಹವರು (ಅರಣ್ಯ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಕೌರವರ ಸೈನ್ಯ ಮುರಿಯಿತು. ಗಂಧರ್ವರು ಇವರನ್ನು ಅಟ್ಟಿಸಿಕೊಂಡು ಬಂದರು. ಸೈನ್ಯದಲ್ಲಿದ್ದ ಬಲಶಾಲಿಗಳು ಮಡಿದರು, ದುರ್ಯೋಧನನಿಗೆ ದುರ್ಯಶ ಬಂದಿತು, ಕೌರವರ ಚತುರಂಗ ಸೈನ್ಯದಲ್ಲಿದ್ದವರ ಹೆಣಗಳುರುಳಿದವು. ಕೌರವನ ಪಾಳೆಯದ ಮಹಾದ್ವಾರದ ಬಳಿ ಅಳಿದುಳಿದ ಸೈನ್ಯವು ಬಂದು ನಿಂತಿತು.

ಅರ್ಥ:
ಮುರಿ: ಸೀಳು; ಗಂಧರ್ವ: ದೇವತೆಗಳ ಒಂದು ಗುಂಪು; ಬಲ: ಶಕ್ತಿ; ಮಿಕ್ಕ: ಉಳಿದ; ಉರುಬು: ಅತಿಶಯವಾದ ವೇಗ, ಮೇಲೆಬೀಳು; ಬಂದು: ಆಗಮನ; ಅಗ್ಗ: ಶ್ರೇಷ್ಠ; ಗರುವ: ಗರ್ವ, ಸೊಕ್ಕು; ಅಳಿ: ನಾಶಾಅಗು; ಬರಿ: ಕೇವಲ; ಯಶ: ಯಶಸ್ಸು, ಸಾಧನೆ; ಉಳಿ: ಮಿಕ್ಕು; ಅರಸ: ರಾಜ; ಕರಿ: ಆನೆ; ತುರಗ: ಕುದುರೆ; ರಥ; ಬಂಡಿ, ತೇರು; ಪಾಯದಳ: ಕಾಲಾಳು, ಸೈನ್ಯ; ಹೆಣ: ಸತ್ತ ದೇಹ; ಹೊರಳು: ಉರುಳಾಡು; ಪಾಳೆ: ಪಾಳೆಯ, ಸೀಮೆ; ಗೋಪುರ: ಮಹಾದ್ವಾರ; ಹೊರ: ಆಚೆ; ಬಾಹೆ: ಬದಿ, ಹೊರಭಾಗ; ನಿಂದು: ನಿಲ್ಲು; ಬೇಹು: ಗೂಢಚರ್ಯೆ;

ಪದವಿಂಗಡಣೆ:
ಮುರಿದುದ್+ಇದು +ಗಂಧರ್ವ +ಬಲ +ಮಿಕ್ಕ್
ಉರುಬಿಕೊಂಡೇ +ಬಂದುದ್+ಅಗ್ಗದ
ಗರುವರ್+ಅಳಿದುದು +ಬರಿಯ +ದುರ್ಯಶವ್+ಉಳಿದುದ್+ಅರಸಂಗೆ
ಕರಿ+ತುರಗ+ ರಥ+ಪಾಯದಳ +ಹೆಣ
ಹೊರಳಿಗಟ್ಟಿತು +ಪಾಳೆಯದ +ಗೋ
ಪುರದ +ಹೊರ +ಬಾಹೆಯಲಿ +ನಿಂದುದು +ಬಲಕೆ +ಬೇಹವರು

ಅಚ್ಚರಿ:
(೧) ದುರ್ಯೋಧನನ ಅಪದಶೆಯನ್ನು ಹೇಳುವ ಪರಿ – ಅಗ್ಗದ ಗರುವರಳಿದುದು ಬರಿಯ ದುರ್ಯಶವುಳಿದುದರಸಂಗೆ

ನಿಮ್ಮ ಟಿಪ್ಪಣಿ ಬರೆಯಿರಿ