ಪದ್ಯ ೧೪: ಶಕುನಿ ಯಾವ ಕಾಲ ಒಳಿತೆಂದನು?

ಅವರ ವನವಾಸದ ದಿನಂಗಳು
ನವಗೆ ಸುದಿನ ಸುಖಾನುಭವವವ
ರವಧಿ ತುಂಬಿದ ಬಳಿಕ ನೋಡಾ ಸಾಧುಗಳ ಪರಿಯ
ನಿನಗೆ ದುರ್ಯೋಧನನ ಸಾಮ್ರಾ
ಜ್ಯವ ನಿರೀಕ್ಷಿಸುವರ್ತಿಯಲಿ ಪಾಂ
ಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅವರು ಕಾಡಿನಲ್ಲಿರುವ ದಿನಗಳೇ ನಮಗೆ ಸುದಿನಗಳು. ಸುಖವನ್ನನುಭವಿಸುವ ದಿನಗಳು. ವನವಾಸ ಮುಗಿಯಲಿ ನೀನು ಯಾರಿಗೆ ಮರುಗುತ್ತಿರುವೆಯೋ ಆ ಸಾಧುಗಳ ನಿಜವಾದ ಬಣ್ನ ಬಯಲಾಗುತ್ತದೆ. ದುರ್ಯೋಧನನ ಸಾಮ್ರಾಜ್ಯವನ್ನು ನೋಡುವ ಪ್ರೀತಿಯಿದ್ದರೆ, ಪಾಂಡವರು ಹಂಬಲವನ್ನು ಬಿಟ್ಟು ಬಿಡುವುದು ಉಚಿತ ಎಂದ ಶಕುನಿಯು ಹೇಳಿದನು.

ಅರ್ಥ:
ವನವಾಸ: ಕಾಡಿನಲ್ಲಿ ಜೀವನ; ದಿನ: ವಾರ; ಸುದಿನ: ಒಳ್ಳೆಯ ದಿನ; ಸುಖ: ನೆಮ್ಮದಿ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಸಾಧು: ಒಳ್ಳೆಯ ಜನ; ಪರಿ: ರೀತಿ; ಸಾಮ್ರಾಜ್ಯ: ಚಕ್ರಾಧಿಪತ್ಯ; ನಿರೀಕ್ಷೆ: ನೋಡುವುದು; ಹಂಬಲ: ಆಸೆ; ಉಚಿತ: ಸರಿಯಾದ ರೀತಿ;

ಪದವಿಂಗಡಣೆ:
ಅವರ +ವನವಾಸದ +ದಿನಂಗಳು
ನವಗೆ +ಸುದಿನ +ಸುಖಾನುಭವವ್+
ಅವರ್+ಅವಧಿ+ ತುಂಬಿದ +ಬಳಿಕ +ನೋಡಾ +ಸಾಧುಗಳ +ಪರಿಯ
ನಿನಗೆ +ದುರ್ಯೋಧನನ +ಸಾಮ್ರಾ
ಜ್ಯವ +ನಿರೀಕ್ಷಿಸುವರ್ತಿಯಲಿ+ ಪಾಂ
ಡವರ+ ಹಂಬಲ+ ಬಿಡುವುದ್+ಉಚಿತವಿದೆಂದನಾ+ ಶಕುನಿ

ಅಚ್ಚರಿ:
(೧) ಶಕುನಿಯ ಉಪದೇಶ – ಪಾಂಡವರ ಹಂಬಲ ಬಿಡುವುದುಚಿತವಿದೆಂದನಾ ಶಕುನಿ

ಪದ್ಯ ೧೩: ಧರ್ಮಜನ ಸ್ವಭಾವವನ್ನು ಶಕುನಿ ಹೇಗೆ ವಿವರಿಸಿದನು?

ಗಳಹನನಿಲಜ ಗಾಢಗರ್ವದ
ಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು ಮಕ್ಕಳು ವಿಪುಳ ಸಾಹಸರು
ಅಳಲಬಹುದರಸಂಗೆ ಘಳಿಗೆಗೆ
ತಿಳಿವನವದಿರ ಸಂಗದಲಿ ಮನ
ಮುಳಿವನೆರಡಿಟ್ಟಿಹನು ಧರ್ಮಜನೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಮನು ಬಾಯ್ಬಡುಕ, ಅರ್ಜುನನು ಮಹಾಗರ್ವದ ನೀಚನು, ನಕುಲ ಸಹದೇವರು ಇವರಿಬ್ಬರ ನೆರಳಿದ್ದಮ್ತೆ, ಅವರ ಮಕ್ಕಳು ಮಹಾಸಾಹಸಿಗಳು, ನಿಮ್ಮ ನಿಮ್ಮ ಮಕ್ಕಳ ಬಗೆಗೆ ಧರ್ಮಜನಲ್ಲಿ ಅನುಕಂಪವಿದ್ದೀತು, ಆದರೆ ತಮ್ಮಂದಿರ ಮತ್ತು ಮಕ್ಕಳ ಜೊತೆ ಸೇರಿ ವಿರೋಧಿಯಾಗುತ್ತಾನೆ, ಧರ್ಮಜನು ದ್ವಂದ್ವ ಸ್ವಭಾವದವನು, ದ್ರೋಹಿ ಎಂದು ಶಕುನಿ ದೂರಿದನು.

ಅರ್ಥ:
ಗಳಹ: ಅತಿಯಾಗಿ ಮಾತಾಡುವುದು; ಅನಿಲಜ: ವಾಯುಪುತ್ರ; ಗಾಢ: ತುಂಬ; ಗರ್ವ: ಅಹಂಕಾರ; ಹುಳು: ಕ್ರಿಮಿ; ದೇಹ: ಕಾಯ; ನೆಳಲು: ನೆರಳು; ಸುತ: ಮಕ್ಕಳು; ಮಕ್ಕಳು: ಪುತ್ರರು; ವಿಪುಳ: ತುಂಬ; ಸಾಹಸ: ಪರಾಕ್ರಮಿ; ಅಳಲು: ದುಃಖ; ಅರಸ: ರಾಜ; ಘಳಿಗೆ: ಸಮಯ; ತಿಳಿ: ಗೊತ್ತುಪಡಿಸು; ಸಂಗ: ಜೊತೆ; ಮನ: ಮನಸ್ಸು; ಮುಳಿ: ಸಿಟ್ಟು, ಕೋಪ;

ಪದವಿಂಗಡಣೆ:
ಗಳಹನ್+ಅನಿಲಜ +ಗಾಢ+ಗರ್ವದ
ಹುಳುಕನ್+ಅರ್ಜುನನ್+ಅವರ +ದೇಹದ
ನೆಳಲು+ ಮಾದ್ರೀಸುತರು +ಮಕ್ಕಳು +ವಿಪುಳ +ಸಾಹಸರು
ಅಳಲಬಹುದ್+ಅರಸಂಗೆ +ಘಳಿಗೆಗೆ
ತಿಳಿವನ್+ಅವದಿರ +ಸಂಗದಲಿ +ಮನ
ಮುಳಿವನ್+ಎರಡಿಟ್ಟಿಹನು +ಧರ್ಮಜನೆಂದನಾ +ಶಕುನಿ

ಅಚ್ಚರಿ:
(೧) ಪಾಂಡವರನ್ನು ಬಯ್ಯುವ ಪರಿ – ಗಳಹನನಿಲಜ ಗಾಢಗರ್ವದಹುಳುಕನರ್ಜುನನವರ ದೇಹದ
ನೆಳಲು ಮಾದ್ರೀಸುತರು

ಪದ್ಯ ೧೨: ಶಕುನಿಯು ಪಾಂಡವರ ಬಗ್ಗೆ ಏನು ನುಡಿದನು?

ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ (ಅರಣ್ಯ ಪರ್ವ, ೧೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ರಾಜ, ಪಾಂಡವರು ಮೋಸದಿಂದ ಕೌರವರನ್ನು ಹಾಳು ಮಾಡದೆ ಬಿಡುವುದಿಲ್ಲ. ಜೂಜಿನ ಸಭೆಯಲ್ಲಿ ಅವರು ಮಾಡಿದ ಪ್ರತಿಜ್ಞೆಯನ್ನು ಮರೆತಿರಾ? ಅವರು ಸಜ್ಜನರು, ಸಾಧುಗಳು, ನಿಮ್ಮ ಮಕ್ಕಳು ದುಷ್ಟರು, ಅಸಾಧುಗಳೆಂದು ನಿಮ್ಮ ಮನಸ್ಸಿನಲ್ಲಿ ತೋರಿತೇ ಎಂದು ಶಕುನಿಯು ಧೃತರಾಷ್ಟ್ರನನ್ನು ಕೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ಉಪಾಯ: ಯುಕ್ತಿ, ಹಂಚಿಕೆ; ಕೆಡಿಸು: ಹಾಳುಮಾಡು; ಮಾಣು: ನಿಲ್ಲು; ಪವನಜ: ಭೀಮ; ಭಾಷೆ: ಮಾತು, ನುಡಿ; ಮರೆ: ನೆನಪಿನಿಂದ ದೂರತಳ್ಳು; ಜೂಜು: ಜುಗಾರಿ, ಸಟ್ಟ; ಸಭೆ: ದರ್ಬಾರು; ಸುಜನ: ಒಳ್ಳೆಯ ಜನ; ಖಳ: ದುಷ್ಟ; ಅಮಲ: ನಿರ್ಮಲ; ಸಾಧು: ಒಳ್ಳೆಯ ಜನ; ಅಸಾಧು: ಕೆಟ್ಟಜನ; ತೋರು: ಗೋಚರಿಸು; ಚಿತ್ತ: ಮನಸ್ಸು;

ಪದವಿಂಗಡಣೆ:
ಅವರು +ಕುಹಕ+ಉಪಾಯದಲಿ +ಕೌ
ರವರ +ಕೆಡಿಸದೆ +ಮಾಣರ್+ಅರ್ಜುನ
ಪವನಜರ +ಭಾಷೆಗಳ +ಮರೆದಿರೆ+ ಜೂಜು +ಸಭೆಯೊಳಗೆ
ಅವರು +ಸುಜನರು +ನಿಮ್ಮವರು +ಖಳರ್
ಅವರು +ಸದಮಲ+ ಸಾಧುಗಳು+ ಕೌ
ರವರ್+ಅಸಾಧುಗಳೆಂದು +ತೋರಿತೆ +ನಿಮ್ಮ +ಚಿತ್ತದಲಿ

ಅಚ್ಚರಿ:
(೧) ಸಾಧು, ಅಸಾಧು; ಸುಜನ, ಖಳ – ವಿರುದ್ಧ ಪದಗಳು

ಪದ್ಯ ೧೧: ಪಾಂಡವರಿಗೆ ಅಳುವುದೇಕೆ ವ್ಯರ್ಥವೆಂದು ಶಕುನಿ ಹೇಳಿದನು?

ವಿಷಯಲಂಪಟರಕ್ಷಲೀಲಾ
ವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನನ್ಯಾಯವುಂಟೇ ನಿನ್ನ ಮಕ್ಕಳಲಿ
ಉಸುರಲಮ್ಮದೆ ಸತ್ಯವನು ಪಾ
ಲಿಸಲು ಹೊಕ್ಕರರಣ್ಯವನು ತ
ದ್ವ್ಯಸನ ಫಲಭೋಗಿಗಳಿಗಳಲುವಿರೇಕೆ ನೀವೆಂದ (ಅರಣ್ಯ ಪರ್ವ, ೧೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ವಿಷಯ ಲಂಪಟತೆಯನ್ನು ಉಳಿಸಿ ಬೆಳೆಸಲು, ಭೂಮಿಯನ್ನೇ ಜೂಜಿನಲ್ಲಿ ಪಣವಾಗಿ ಒಡ್ಡಿದರು. ನಿನ್ನ ಮಕ್ಕಳು ಮಾಡಿದ ಅನ್ಯಾಯವೇನು? ಪಾಂಡವರು ಜೂಜಿನಲ್ಲಿ ಸೋತು ಸತ್ಯಪಾಲನೆಗಾಗಿ ಕಾಡಿಗೆ ಹೋದರು. ತಾವೇ ತಂದುಕೊಂಡ ಕಷ್ಟವನ್ನು ಅನುಭವಿಸುತ್ತಾರೆ, ಅವರಿಗಾಗಿ ನೀವೇಕೆ ದುಃಖ ಪಡುತ್ತೀರಿ ಎಂದು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ವಿಷಯ: ಭೋಗಾಭಿಲಾಷೆ; ಲಂಪಟ: ವಿಷಯಾಸಕ್ತ, ಕಾಮುಕ; ಅಕ್ಷ: ಪಗಡೆ ಆಟದ ದಾಳ; ಲೀಲಾ: ಕ್ರೀಡೆ; ವ್ಯಸನ: ಚಟ; ಒತ್ತೆಯಿಡು: ಜೂಜಿನಲ್ಲಿ ಇಡತಕ್ಕ ಹಣ; ವಸುಮತಿ: ಭೂಮಿ; ಅನ್ಯಾವ: ಸರಿಯಿಲ್ಲದ; ಉಸುರು: ಹೇಳು, ಮಾತನಾಡು; ಸತ್ಯ: ದಿಟ; ಪಾಲಿಸು: ರಕ್ಷಿಸು, ಕಾಪಾಡು; ಹೊಕ್ಕು: ಸೇರು; ಅರಣ್ಯ: ಕಾದು; ಫಲ: ಪ್ರಯೋಜನ, ಫಲಿತಾಂಶ; ಭೋಗಿ: ವಿಷಯಾಸಕ್ತ ; ಅಳು: ಕೊರಗು;

ಪದವಿಂಗಡಣೆ:
ವಿಷಯ+ಲಂಪಟರ್+ಅಕ್ಷ+ಲೀಲಾ
ವ್ಯಸನಕ್+ಓಸುಗವ್+ಒತ್ತೆ+ಯಿಟ್ಟರು
ವಸುಮತಿಯನ್+ಅನ್ಯಾಯವುಂಟೇ+ ನಿನ್ನ+ ಮಕ್ಕಳಲಿ
ಉಸುರಲಮ್ಮದೆ +ಸತ್ಯವನು+ ಪಾ
ಲಿಸಲು +ಹೊಕ್ಕರ್+ಅರಣ್ಯವನು+ ತ
ದ್ವ್ಯಸನ +ಫಲಭೋಗಿಗಳಿಗ್+ಅಳಲುವಿರೇಕೆ+ ನೀವೆಂದ

ಅಚ್ಚರಿ:
(೧) ಪಾಂಡವರನ್ನು ಹಂಗಿಸುವ ಪರಿ – ವಿಷಯಲಂಪಟರಕ್ಷಲೀಲಾವ್ಯಸನಕೋಸುಗವೊತ್ತೆಯಿಟ್ಟರು
ವಸುಮತಿಯನ

ಪದ್ಯ ೧೦: ಶಕುನಿ ಧೃತರಾಷ್ಟ್ರನಿಗೆ ಹೇಗೆ ಉತ್ತರಿಸಿದನು?

ಈ ಕುಮಾರಕರಲ್ಲಲೇ ಕುಂ
ತೀಕುಮಾರರು ನವೆವುತಿದ್ದರೆ
ಸಾಕು ಸಾಕಳಲೇಕೆ ಸತ್ವಾಧಿಕರು ಸಜ್ಜನರು
ಈ ಕುರುಕ್ಷಿತಿಪತಿಯೊಳನ್ಯಾ
ಯೈಕ ಲವವುಂಟೇ ವಿಚಾರಿಸಿ
ಶೋಕವನು ಬಿಡಿ ಬಯಲಡೊಂಬೇಕೆಂದನಾ ಶಕುನಿ (ಅರಣ್ಯ ಪರ್ವ, ೧೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಶಕುನಿಯು ಧೃತರಾಷ್ಟ್ರನ ಮಾತುಗಳನ್ನು ಕೇಳಿ, ಎಲೈ ರಾಜನೇ ನಿಮ್ಮ ಮಕ್ಕಳೇನೂ ಬೀದಿ ಕರುಗಳಾಗಿಲ್ಲವಲ್ಲಾ, ಕುಂತಿಯ ಮಕ್ಕಳಿಗೆ ಕಷ್ಟ ಬಂದರೆ ಮಹಾಸತ್ವರೂ ಸಜ್ಜನರೂ ಆದ ನೀವೇಕೆ ಅಳಬೇಕು? ಕೌರವನಲ್ಲಿ ಲವಮಾತ್ರವಾದರೂ ಅನ್ಯಾಯವಿದೆಯೇ ಎಂದು ವಿಚಾರಿಸಿ, ಶೋಕವನ್ನು ಬಿಡಿ, ಡಂಭಾಚಾರವೇಕೆ ಎಂದು ಕೇಳಿದನು.

ಅರ್ಥ:
ಕುಮಾರ: ಮಕ್ಕಳು; ನವೆ: ಕೊರಗು; ಸಾಕು: ನಿಲ್ಲಿಸು; ಅಳಲು: ದುಃಖಿಸು; ಸತ್ವ: ಸಾತ್ವಿಕ ಗುಣ; ಸಜ್ಜನ: ಒಳ್ಳೆಯ ಜನ; ಕ್ಷಿತಿಪತಿ: ರಾಜ; ಅನ್ಯಾಯ: ಸರಿಯಿಲ್ಲದುದು; ಲವ: ಅಲ್ಪ, ಸ್ವಲ್ಪ; ವಿಚಾರಿಸು: ವಿಮರ್ಶಿಸು; ಶೋಕ: ದುಃಖ; ಬಿಡು: ತ್ಯಜಿಸು; ಬಯಲು: ಬರಿದಾದ, ವ್ಯರ್ಥವಾದ; ಡೊಂಬ: ವಂಚಕ;

ಪದವಿಂಗಡಣೆ:
ಈ +ಕುಮಾರಕರ್+ಅಲ್ಲಲೇ +ಕುಂ
ತೀ+ಕುಮಾರರು +ನವೆವುತಿದ್ದರೆ
ಸಾಕು +ಸಾಕ್+ಅಳಲೇಕೆ +ಸತ್ವಾಧಿಕರು+ ಸಜ್ಜನರು
ಈ +ಕುರು+ಕ್ಷಿತಿಪತಿಯೊಳ್+ಅನ್ಯಾ
ಯೈಕ+ ಲವವುಂಟೇ +ವಿಚಾರಿಸಿ
ಶೋಕವನು +ಬಿಡಿ +ಬಯಲಡೊಂಬ್+ಏಕೆಂದನಾ +ಶಕುನಿ

ಅಚ್ಚರಿ:
(೧) ಧೃತರಾಷ್ಟ್ರನ ಶೋಕವನ್ನು ವಿವರಿಸುವ ಪರಿ – ಬಯಲಡೊಂಬೇಕೆಂದನಾ ಶಕುನಿ
(೨) ಕೌರವರು ಸಜ್ಜನರೆಂದು ಹೇಳುವ ಪರಿ – ಈ ಕುರುಕ್ಷಿತಿಪತಿಯೊಳನ್ಯಾಯೈಕ ಲವವುಂಟೇ

ಪದ್ಯ ೯: ಧೃತರಾಷ್ಟ್ರನೇಕೆ ವ್ಯಥೆಪಟ್ಟನು?

ಖೇದವೇಕೆಂದೇನು ಮಕ್ಕಳು
ಬೀದಿಗರುವಾದರು ವನಾಂತದ
ಲಾದ ಚಿತ್ತವ್ಯಥೆಯ ಕೇಳಿದು ಬೆಂದುದೆನ್ನೊಡಲು
ಆ ದಿವಾಕರನಂತೆ ನಿಚ್ಚಲು
ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆಯೆಂದು ಬಿಸುಸುಯ್ದ (ಅರಣ್ಯ ಪರ್ವ, ೧೮ ಸಂಧಿ, ೯ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ತನ್ನ ನೋವನ್ನು ಹೇಳುತ್ತಾ, ದುಃಖವೇಕೆಂದು ಕೇಳುವಿರಾ? ಮಕ್ಕಳು ಬೀದಿಯಲ್ಲಿ ಅಲೆಯುವ ಬಿಟ್ಟಿ ಕರುಗಳಂತೆ ಅನಾಥರಾದರು. ಕಾಡಿನಲ್ಲಿ ಅವರಿಗೊದಗಿದ ಸಂಕಟವನ್ನು ಕೇಳಿ ನನ್ನ ದೇಹ ಸಂಕಟಪಟ್ಟಿತು. ಉದಯ ಮತ್ತು ಮುಳುಗುವ ಪ್ರತಿದಿನವೂ ಮಂದೇಹರೊಡನೆ ಹೋರವ ಸೂರ್ಯನಂತೆ ಇವರು ಬೆಳಗಾದರೆ ಬೈಗಾದರೆ ರಾಕ್ಷಸರೊಡನೆ ಹೋರಾಡಬೇಕಾಗಿ ಬಂದಿದೆ ಎಂದು ನಿಟ್ಟುಸಿರಿಟ್ಟನು.

ಅರ್ಥ:
ಖೇದ: ದುಃಖ; ಮಕ್ಕಳು: ತನುಜ; ಬೀದಿ: ದಾರಿ; ಕರು: ಹಸುವಿನ ಮರಿ; ವನ: ಕಾಡು; ಅಂತ: ಅಂಚು, ಸಮೀಪ; ಚಿತ್ತ: ಮನಸ್ಸು; ವ್ಯಥೆ: ದುಃಖ; ಕೇಳು: ಆಲಿಸು; ಬೇಯು: ಸಂಕಟಕ್ಕೊಳಗಾಗು; ಒಡಲು: ದೇಹ; ದಿವಾಕರ: ಸೂರ್ಯ; ನಿಚ್ಚ: ನಿತ್ಯ; ಕಾದು: ಹೋರಾಡು; ಉದಯ: ಹುಟ್ಟು; ಅಸ್ತಂಗತ: ಮುಳುಗು; ಜಾದಿ: ಜಾಜಿಗಿಡ ಮತ್ತು ಅದರ ಹೂವು; ಖಳ: ದುಷ್ಟ; ಅಟವಿ: ಕಾದು; ಕೋಟಲೆ: ತೊಂದರೆ; ಬಿಸುಸುಯ್: ನಿಟ್ಟುಸಿರು;

ಪದವಿಂಗಡಣೆ:
ಖೇದವೇಕೆಂದೇನು+ ಮಕ್ಕಳು
ಬೀದಿ+ಕರುವಾದರು+ ವನಾಂತದ
ಲಾದ +ಚಿತ್ತ+ವ್ಯಥೆಯ +ಕೇಳಿದು +ಬೆಂದುದ್+ಎನ್ನೊಡಲು
ಆ +ದಿವಾಕರನಂತೆ +ನಿಚ್ಚಲು
ಕಾದುದ್+ಉದಯ+ಅಸ್ತಂಗಳಲ್+ಇದನು
ಜಾದಿ +ಖಳರೊಡನ್+ಅಟವಿ+ಕೋಟಲೆಯೆಂದು +ಬಿಸುಸುಯ್ದ

ಅಚ್ಚರಿ:
(೧) ಮಕ್ಕಳು ಅನಾಥರಾದರು ಎಂದು ಹೇಳುವ ಪರಿ – ಮಕ್ಕಳು ಬೀದಿಗರುವಾದರು
(೨) ಉಪಮಾನದ ಪ್ರಯೋಗ – ಆ ದಿವಾಕರನಂತೆ ನಿಚ್ಚಲು ಕಾದುದುದಯಾಸ್ತಂಗಳಲಿದನು
ಜಾದಿ ಖಳರೊಡನಟವಿಗೋಟಲೆ