ಪದ್ಯ ೩೮: ಹಣ್ಣಿನ ಗಿಡಗಳಿಗೆ ಬಂದ ದುಸ್ಥಿತಿ ಎಂತಹುದು?

ಕದಡಿದವು ಸರಸಿಗಳು ಕೆಡೆದವು
ಕದಳಿಗಳು ಗೊನೆಸಹಿತ ಮುಂಡಿಗೆ
ಮುದುಡಿ ನೆಲಕೊರಗಿದವು ಮಿರುಗುವ ನಾಗವಲ್ಲಿಗಳು
ತುದಿಗೊನೆಯ ಚೆಂದೆಂಗು ಖುರ್ಜೂ
ರದಲಿ ಕಾಣೆನು ಹುರುಳ ನಾರಂ
ಗದ ವಿರಾಮವನೇನನೆಂಬೆನು ನಿಮಿಷ ಮಾತ್ರದಲಿ (ಅರಣ್ಯ ಪರ್ವ, ೧೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸರೋವರಗಳು ಕದಡಿದವು, ಗೊನೆಸಹಿತ ಬಾಳೆ ಗಿಡಗಳು ಬಿದ್ದವು, ಕೇದಗೆ ನೆಲಕ್ಕೊರಗಿದವು, ಮಿರುಗುವ ವೀಳೆಯದೆಲೆಯ ಬಳ್ಳಿಗಳು, ಗೊನೆ ಬಿಟ್ಟ ಕೆಂಪು ತೆಂಗಿನ ಕಾಯಿ ಗೊನೆಗಳು, ಖರ್ಜೂರಗಳು ನಾಶವಾದವು. ಕಿತ್ತಲೆ ಗಿಡಗಳಿಗೆ ಬಂದ ದುಸ್ಥಿತಿಯನ್ನು ನಾನು ಏನೆಂದು ಹೇಳಲಿ ಎಂದು ವೈಶಂಪಾಯನರು ಹೇಳಿದರು.

ಅರ್ಥ:
ಕದಡು: ಬಗ್ಗಡ, ರಾಡಿ; ಸರಸಿ: ಸರೋವರ; ಕೆಡೆ: ಬೀಳು, ಕುಸಿ; ಕದಳಿ: ಬಾಳೆ; ಗೊನೆ: ತುದಿ, ಅಗ್ರಭಾಗ, ಗೊಂಚಲು; ಸಹಿತ: ಜೊತೆ; ಮುಂಡಿಗೆ: ಕಟ್ಟು, ಕಂತೆ; ಮುದುಡು: ಬಾಗು, ಕೊಂಕು; ನೆಲ: ಭೂಮಿ; ಒರಗು: ಮಲಗು, ಕೆಳಕ್ಕೆ ಬಾಗು; ಮಿರುಗು: ಕಾಂತಿ, ಹೊಳಪು; ನಾಗವಲ್ಲಿ: ವೀಳ್ಯದೆಲೆ; ತುದಿ: ಅಗ್ರಭಾಗ; ಚೆಂದೆಂಗು: ಚೆಲುವಾಗ ತೆಂಗು; ಕಾಣೆ: ತೋರು; ನಾರಂಗ: ಕಿತ್ತಲೆ; ವಿರಾಮ: ಬಿಡುವು; ನಿಮಿಷ: ಕ್ಷಣ;

ಪದವಿಂಗಡಣೆ:
ಕದಡಿದವು +ಸರಸಿಗಳು +ಕೆಡೆದವು
ಕದಳಿಗಳು +ಗೊನೆ+ಸಹಿತ+ ಮುಂಡಿಗೆ
ಮುದುಡಿ +ನೆಲಕೊರಗಿದವು+ ಮಿರುಗುವ +ನಾಗವಲ್ಲಿಗಳು
ತುದಿ+ಗೊನೆಯ +ಚೆಂದೆಂಗು +ಖುರ್ಜೂ
ರದಲಿ +ಕಾಣೆನು +ಹುರುಳ +ನಾರಂ
ಗದ +ವಿರಾಮವನ್+ಏನನೆಂಬೆನು +ನಿಮಿಷ +ಮಾತ್ರದಲಿ

ಅಚ್ಚರಿ:
(೧) ಕದಳಿ, ಮುಂಡಿಗೆ, ನಾಗವಲ್ಲಿ, ತೆಂಗು, ಖರ್ಜೂರ, ನಾರಂಗ – ಗಿಡಗಳ ಹೆಸರು

ಪದ್ಯ ೨೬: ಉದ್ಯಾನವನದ ಸೌಂದರ್ಯ ಹೇಗಿತ್ತು?

ಮಘಮಘಿಪ ಹೊಂಬಾಳೆಗಳ ರಸ
ವೊಗುವ ಮಧುರದ್ರಾಕ್ಷೆಗಳ ನಿಡು
ಮುಗಿಲ ತುಡುಕುವ ತೆಂಗುಗಳ ನೆರೆ ಕಾತ ಪನಸುಗಳ
ಬಿಗಿದ ಪಣ್ಗೊನೆವಾಳೆಗಳ ಸೊಂ’
ಪೊಗುವ ಕರ್ಪೂರ ದ್ರುಮೌಘದ
ಸೊಗಸು ಸೆಳೆದುದು ಮನವನಾ ಗಜನಗರದುಪವನದ (ಉದ್ಯೋಗ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹೊಂಬಾಳೆಗಳಿಂದ ಹೊರಹೊಮ್ಮುವ ಸುವಾಸನೆ, ರಸಭರಿತ, ಸಿಹಿಯಾದ ದ್ರಾಕ್ಷಿಯ ಗೊಂಚಲು, ಆಗಸವನ್ನು ಚುಂಬಿಸುವ ಉದ್ದವಾದ ತೆಂಗಿನಮರಗಳ ಗುಂಪು, ಕಾಯಿಬಿಟ್ಟ ಹಲಸಿನ ಮರ, ಭದ್ರವಾದ ಗೊಂಚಲಿನಲ್ಲಿ ಹೊಮ್ಮಿದ ಬಾಳೆಹಣ್ಣಿನ ಗಿಡಗಳು, ಕರ್ಪೂರ ಸುವಾಸನೆಯನ್ನು ಬೀರುವ ಸುಗಂಧ ಮರಗಳಿರುವ ಹಸ್ತಿನಾಪುರಿಯ ಉದ್ಯಾನದ ಸೊಗಸು ಮನಸ್ಸನ್ನು ಸೆಳೆಯುತ್ತಿದ್ದವು.

ಅರ್ಥ:
ಮಘಮಘಿಪ: ಸುವಾಸನೆಯನ್ನು ಬೀರು; ಹೊಂಬಾಳೆ: ಬಾಳೆಯ ಗಿಡ ಮತ್ತು ಅದರ ಹಣ್ಣು, ತೆಂಗು ಮತ್ತು ಅಡಕೆಮರಗಳಲ್ಲಿ ಕಾಯಿ ಬಿಡುವುದಕ್ಕೆ ಮುಂಚೆ ಬೆಳೆಯುವ ಹೂವಿನ ಗೊಂಚಲಿಗೆ ಹೊಂಬಾಳೆ; ರಸ: ಸಾರ; ವೊಗು: ಹೊರಹೊಮ್ಮು; ಮಧುರ: ಸಿಹಿ; ನಿಡು: ಉದ್ದ, ದೀರ್ಘ; ಮುಗಿಲು: ಆಗಸ; ತುಡುಕುವ: ಮುಟ್ಟುವ; ನೆರೆ: ಗುಂಪು; ಕಾತು: ಕಾಯಿಬಿಟ್ಟ; ಪಸಸು: ಹಲಸು; ಬಿಗಿ: ಭದ್ರ, ಗಟ್ಟಿ; ಪಣ್: ಹಣ್ಣು; ಗೊನೆ: ಗೊಂಚಲು; ಆವಳಿ: ಸಾಲು; ಸೊಂಪು: ಸೊಗಸು, ಚೆಲುವು; ಕರ್ಪೂರ: ಒಂದು ಬಗೆಯ ಸುಗಂಧ ದ್ರವ್ಯ; ದ್ರುಮ: ವೃಕ್ಷ, ಗಿಡ, ಮರ; ಔಘ:ಗುಂಪು, ಸಮೂಹ; ಸೊಗಸು: ಚೆಲುವು; ಸೆಳೆ: ಜಗ್ಗು, ಎಳೆ; ಮನ: ಮನಸ್ಸು; ಗಜ: ಹಸ್ತಿ; ನಗರ: ಊರು; ಉಪವನ: ಉದ್ಯಾನ;

ಪದವಿಂಗಡಣೆ:
ಮಘಮಘಿಪ +ಹೊಂಬಾಳೆಗಳ +ರಸ
ವೊಗುವ +ಮಧುರ+ದ್ರಾಕ್ಷೆಗಳ+ ನಿಡು
ಮುಗಿಲ+ ತುಡುಕುವ +ತೆಂಗುಗಳ +ನೆರೆ +ಕಾತ +ಪನಸುಗಳ
ಬಿಗಿದ +ಪಣ್ಗೊನೆವಾಳೆಗಳ +ಸೊಂ
ಪೊಗುವ +ಕರ್ಪೂರ +ದ್ರುಮೌಘದ
ಸೊಗಸು +ಸೆಳೆದುದು +ಮನವನಾ +ಗಜನಗರದ್+ಉಪವನದ

ಅಚ್ಚರಿ:
(೧) ಹೊಂಬಾಳೆ, ದ್ರಾಕ್ಷಿ, ತೆಂಗು, ಪನಸು, ಪಣ್ಗೊನೆ, ಬಾಳೆ – ಹಣ್ಣುಗಳ ವಿವರ
(೨) ಸುವಾಸನೆಯನ್ನು ಸೂಚಿಸುವ ಪದ – ಮಘಮಘಿಪ, ಸೊಂಪು, ಕರ್ಪೂರ