ಪದ್ಯ ೧೪: ಶ್ರುತಾಯುಧನ ಅಂತ್ಯವು ಹೇಗಾಯಿತು?

ವರುಣನಿತ್ತುಪದೇಶ ಬರಿದಿ
ದ್ದರನು ಹೊಯ್ದರೆ ತನ್ನ ಕೊಲುವುದು
ನಿರುತವೆನಲದ ಮರೆದು ಹೊಯ್ದನು ಹರಿಯ ಮಸ್ತಕವ
ಕೆರಳಿ ಗದೆ ಮುರಹರನ ಮುಟ್ಟದೆ
ಮರಳಿ ತನ್ನನೆ ಕೊಂದುದೇನ
ಚ್ಚರಿಯೊ ದೈವದ್ರೋಹಿಗೆತ್ತಣ ಲೇಸುಬಹುದೆಂದ (ದ್ರೋಣ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ವರುಣನು ಶ್ರುತಾಯುಧನಿಗೆ ಆ ಗದೆಯನ್ನು ಕೊಟ್ಟು ಇದನ್ನು ಯುದ್ಧಮಾಡದಿರುವವರ ಮೇಲೆ ಪ್ರಯೋಗಿಸಬೇಡ ಎಂದು ಎಚ್ಚರಿಸಿದ್ದನು. ಹಾಗೇನಾದರೂ ನೀನು ಪ್ರಯೋಗಿಸಿದರೆ ಅದು ನಿನ್ನನ್ನೇ ಕೊಲ್ಲುತ್ತದೆ ಎಂದು ಹೇಳಿದ್ದನು. ಶ್ರುತಾಯುಧನು ಇದನ್ನು ಮರೆತು ಶ್ರೀಕೃಷ್ಣನ ಮೇಲೆ ಆ ಗದೆಯನ್ನು ಹೊಯ್ಯಲು, ಆ ಗದೆಯು ಕೋಪಗೊಂಡು ಶ್ರೀಕೃಷ್ಣನನ್ನು ಮುಟ್ಟದೆ ಶ್ರುತಾಯುಧನನ್ನೇ ಕೊಂದಿತು, ಏನಾಶ್ಚರ್ಯ ದೈವ ದ್ರೋಹಿಗೆ ಎಲ್ಲಿ ಒಳಿತಾದೀತು.

ಅರ್ಥ:
ವರುಣ: ನೀರಿನ ಅಧಿದೇವತೆ; ಉಪದೇಶ: ಬೋಧಿಸುವುದು; ಬರಿ: ಕೇವಲ; ಹೊಯ್ದು: ಹೊಡೆ; ಕೊಲು: ಸಾಯಿಸು; ನಿರುತ: ದಿಟ, ಸತ್ಯ; ಮರೆ: ಜ್ಞಾಪಕವಿಲ್ಲದ ಸ್ಥಿತಿ; ಹರಿ: ವಿಷ್ಣು; ಮಸ್ತಕ: ತಲೆ; ಕೆರಳು: ಕೋಪಗೊಳ್ಳು; ಗದೆ: ಮುದ್ಗರ; ಮುರಹರ: ಕೃಷ್ಣ; ಮುಟ್ಟು: ತಾಗು; ಮರಳಿ: ಮತ್ತೆ, ಹಿಂದಿರುಗು; ಕೊಂದು: ಸಾಯಿಸು; ಅಚ್ಚರಿ: ಆಶ್ಚರ್ಯ; ದೈವ: ಭಗವಂತ; ದ್ರೋಹ: ಮೋಸ; ಲೇಸು: ಒಳಿತು;

ಪದವಿಂಗಡಣೆ:
ವರುಣನಿತ್+ಉಪದೇಶ +ಬರಿದಿ
ದ್ದರನು+ ಹೊಯ್ದರೆ +ತನ್ನ +ಕೊಲುವುದು
ನಿರುತವ್+ಎನಲ್+ಅದ +ಮರೆದು +ಹೊಯ್ದನು +ಹರಿಯ+ ಮಸ್ತಕವ
ಕೆರಳಿ +ಗದೆ +ಮುರಹರನ +ಮುಟ್ಟದೆ
ಮರಳಿ +ತನ್ನನೆ +ಕೊಂದುದ್+ಏನ್
ಅಚ್ಚರಿಯೊ +ದೈವ+ದ್ರೋಹಿಗ್+ಎತ್ತಣ+ ಲೇಸುಬಹುದೆಂದ

ಅಚ್ಚರಿ:
(೧) ಹರಿ, ಮುರಹರ – ಕೃಷ್ಣನನ್ನು ಕರೆದ ಪರಿ
(೨) ಹಿತನುಡಿ – ದೈವದ್ರೋಹಿಗೆತ್ತಣ ಲೇಸುಬಹುದೆಂದ

ಪದ್ಯ ೪೬: ಕೃಪಾಚಾರ್ಯರನ್ನು ಅರ್ಜುನನು ಹೇಗೆ ಸೋಲಿಸಿದನು?

ತರಹರಿಸಿ ಶರವೈದರಲಿ ಸಂ
ಹರಿಸಿಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ (ವಿರಾಟ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ರಥಕ್ಕೆ ಬಿದ್ದ ಹೊಡೆತವನ್ನು ಸುಧಾರಿಸಿಕೊಂಡು, ಕೃಪನು ಐದು ಬಾಣಗಳನ್ನು ಉಳಿದುಕೋ ಎಂದು ಹೇಳುತ್ತಾ ಅರ್ಜುನನ ಬಳಿ ಬಿಟ್ಟನು. ಅರ್ಜುನನ ರಥದ ಕುದುರೆಗಳಿಗೆ ಪೆಟ್ಟು ಬಿದ್ದಿತು, ಕೋಪಗೊಂಡ ಅರ್ಜುನನು ಅರ್ಧಚಂದ್ರ ಬಾಣದಿಂದ ಕೃಪನ ಸಾರಥಿ, ಕುದುರೆಗಳನ್ನು, ಕೃಪನು ಹಿಡಿದ ಬಿಲ್ಲನ್ನು ಕತ್ತರಿಸಿ ಹಾಕಲು ಕೃಪಾಚಾರ್ಯನು ತೊಲಗಿ ಹೋದನು.

ಅರ್ಥ:
ತರಹರಿಸು: ತಡಮಾಡು; ಶರ: ಬಾಣ; ಐದು: ಬಂದು ಸೇರು; ಸಂಹರಿಸು: ನಾಶಮಾಡು; ಎಚ್ಚು: ಬಾಣಬಿಡು; ತುರಗ: ಕುದುರೆ; ತಾಗು: ಮುಟ್ಟು; ನೊಂದವು: ಪೆಟ್ಟು; ರಥ: ಬಂಡಿ; ವಾಜಿ: ಕುದುರೆ; ಕೆರಳು: ಕೋಪಗೊಳ್ಳು; ಸರಳು: ಬಾಣ; ಸಾರಥಿ: ಸೂತ; ಕರ: ಕೈ; ಬಿಲ್ಲು: ಚಾಪ; ಕಡಿ: ಸೀಳು; ತೊಲಗು: ದೂರ ಸರಿ;

ಪದವಿಂಗಡಣೆ:
ತರಹರಿಸಿ +ಶರವ್+ಐದರಲಿ+ ಸಂ
ಹರಿಸಿಕೊಳ್ಳೆಂದ್+ಎಚ್ಚೊಡ್+ಈತನ
ತುರಗವನು+ ತಾಗಿದವು +ನೊಂದವು +ರಥದ +ವಾಜಿಗಳು
ಕೆರಳಿ+ ಫಲುಗುಣನ್+ಅರ್ಧಚಂದ್ರದ
ಸರಳಿನಲಿ+ ಸಾರಥಿಯ+ ತುರಗವ
ಕರದ +ಬಿಲ್ಲನು +ಕಡಿಯೆ +ತೊಲಗಿದನಾ +ಕೃಪಾಚಾರ್ಯ

ಅಚ್ಚರಿ:
(೧) ತುರಗ, ವಾಜಿ; ಸರಳು, ಶರ – ಸಮನಾರ್ಥಕ ಪದ

ಪದ್ಯ ೪೭: ಧರ್ಮಜನ ಹಿರಿಮೆಯನ್ನು ಧೃತರಾಷ್ಟ್ರ ಹೇಗೆ ಹೇಳಿದ?

ಕೇಳಿದನು ಬಿಸುಸುಯ್ದನಕಟ ವಿ
ಕಾಳಿಸಿತೆ ಕೌರವನ ಬುದ್ಧಿ ವಿ
ಟಾಳ ಸಂಗತಿಯಾಯ್ತಲಾ ಪಿಸುಣಾರ ಕೆರಳಿಚದು
ಕೇಳು ಮಗನೇ ಧರ್ಮಪುತ್ರನ
ಮೇಲೆ ಮುನಿವರೆ ರಾಜಋಷಿ ನರ
ಪಾಲ ಮಾತ್ರವೆ ಶಿವ ಮಹಾದೇವೆಂದನಾ ಭೂಪ (ಸಭಾ ಪರ್ವ, ೧೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ತನ್ನ ಪುತ್ರ ದುರ್ಯೋಧನನ ಮಾತನ್ನು ಧೃತರಾಷ್ಟ್ರ ಆಲಿಸಿ ನಿಟ್ಟುಸಿರುಬಿಟ್ಟು ಅಯ್ಯೋ ಇವನಿಗೇಕೆ ಈ ಕೆಟ್ಟಬುದ್ಧಿ ಬಂದಿತು. ಚಾಡಿಯ ಮಾತು ಯಾರನ್ನು ತಾನೆ ಕೆರಳಿಸುವುದಿಲ್ಲ. ಮಗನ ಬುದ್ಧಿ ಅಪವಿತ್ರವಾಯಿತೇ ಎಂದುಕೊಂಡು, ಮಗನೇ, ಧರ್ಮಜನ ಮೇಲೆ ಕೋಪಗೊಳ್ಳುವುದು ಸರಿಯೇ? ಅವನು ಎಲ್ಲರಂತೆ ಸಾಮಾನ್ಯ ರಾಜನೇ? ಅವನು ರಾಜರ್ಷಿ, ಶಿವ ಶಿವ ನಿನಗೇಕೆ ಈ ಬುದ್ಧಿ ಬಂದಿತು ಎಂದು ಕೇಳಿದನು.

ಅರ್ಥ:
ಕೇಳು: ಆಲಿಸು; ಬಿಸುಸುಯ್ದ: ನಿಟ್ಟುಸಿರು; ಅಕಟ: ಅಯ್ಯೋ; ವಿಕಳ: ಭ್ರಮೆ, ಭ್ರಾಂತಿ; ಬುದ್ಧಿ: ಮನಸ್ಸು, ಚಿತ್ತ; ವಿಟಾಳ: ಅಪವಿತ್ರತೆ, ಮಾಲಿನ್ಯ; ಸಂಗತಿ: ವಿಚಾರ; ಪಿಸುಣ: ಚಾಡಿಕೋರ; ಕೆರಳು: ಪ್ರಚೋದಿಸು; ಮಗ: ಪುತ್ರ; ಮುನಿ: ಕೋಪಗೊಳ್ಳು; ರಾಜಋಷಿ: ರಾಜ ಹಾಗೂ ಋಷಿಯ ವ್ಯಕ್ತಿತ್ವಗಳನ್ನು ಮೈಗೂಡಿಸಿಕೊಂಡವನು; ನರಪಾಲ: ರಾಜ; ನರ: ಮನುಷ್ಯ; ಮಾತ್ರ: ಕೇವಲ; ಶಿವ: ಶಂಕರ, ಭಗವಂತ; ಭೂಪ: ರಾಜ;

ಪದವಿಂಗಡಣೆ:
ಕೇಳಿದನು+ ಬಿಸುಸುಯ್ದನ್+ಅಕಟ +ವಿ
ಕಾಳಿಸಿತೆ+ ಕೌರವನ+ ಬುದ್ಧಿ +ವಿ
ಟಾಳ +ಸಂಗತಿ+ಆಯ್ತಲಾ+ ಪಿಸುಣಾರ +ಕೆರಳಿಚದು
ಕೇಳು +ಮಗನೇ +ಧರ್ಮಪುತ್ರನ
ಮೇಲೆ +ಮುನಿವರೆ +ರಾಜಋಷಿ +ನರ
ಪಾಲ +ಮಾತ್ರವೆ +ಶಿವ+ ಮಹಾದೇವ+ಎಂದನಾ +ಭೂಪ

ಅಚ್ಚರಿ:
(೧) ವಿಕಾಳಿಸಿತೆ, ವಿಟಾಳ – ಪದಗಳ ಬಳಕೆ
(೨) ಧರ್ಮಜನ ಹಿರಿಮೆ – ಧರ್ಮಪುತ್ರನ ಮೇಲೆ ಮುನಿವರೆ ರಾಜಋಷಿ ನರಪಾಲ ಮಾತ್ರವೆ