ಪದ್ಯ ೩೩: ಅರ್ಜುನನು ಕೃಷ್ಣನಿಗೆ ಏನು ಹೇಳಿದನು?

ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ (ಗದಾ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ಶ್ರೀಕೃಷ್ಣನಿಗೆ, ಒಡೆಯಾ ಕುರುಬಲವು ಸ್ವರ್ಗವನ್ನು ಬಯಸಿ ನಮ್ಮ ಸೇನೆಯ ಮೇಲೆ ಬಿದ್ದಿತು. ಧರ್ಮಜನೊಬ್ಬನೇ ಶತ್ರು ಸೈನ್ಯದ ಹಿಂಡನ್ನೊಡೆದು ಯುದ್ಧಮಾಡುತ್ತಿದ್ದಾನೆ. ನಾನೂ ಹೋಗಿ ಅವನಿಗೆ ಸಹಾಯಕನಾಗಿ ಯುದ್ಧಮಾಡಿ ಸಂತೈಸುತ್ತೇನೆ ಎಂದು ಹೇಳಲು ಶ್ರೀಕೃಷ್ಣನು ನಕ್ಕು ಅರ್ಜುನನ ಪ್ರಚಂಡವಾದ ಕುದುರೆಗಳನ್ನು ಚಪ್ಪರಿಸಿ ರಥವನ್ನು ನಡೆಸಿದನು.

ಅರ್ಥ:
ಮೇಲೆ: ಊರ್ಧ್ವ; ಲೋಕ: ಜಗತ್ತು; ಬಯಸು: ಇಚ್ಛಿಸು; ಬಲ: ಸೈನ್ಯ; ಬಿದ್ದು: ಎರಗು; ಜೀಯ: ಒಡೆಯ; ನೃಪಾಲ: ರಾಜ; ಏಕಾಂಗ: ಒಬ್ಬನೆ; ಹೊಕ್ಕು: ಸೇರು; ಹೊದರು: ತೊಡಕು, ತೊಂದರೆ; ಬಡಿ: ಸೀಳು, ಪೆಟ್ಟು; ಅವನಿಪ: ರಾಜ; ಸಂಭಾಳಿಸು: ಸಂತೈಸು; ನಗು: ಹರ್ಷ; ಲಕ್ಷ್ಮೀಲೋಲ: ಲಕ್ಷ್ಮಿಯ ಪ್ರಿಯಕರ (ಕೃಷ್ಣ); ಚಪ್ಪರಿಸು: ಸವಿ, ರುಚಿನೋಡು; ನರ: ಅರ್ಜುನ; ಉದ್ದಂಡ: ಪ್ರಬಲವಾದ; ವಾಜಿ: ಕುದುರೆ;

ಪದವಿಂಗಡಣೆ:
ಮೇಲು+ಲೋಕವ +ಬಯಸಿ +ಕುರುಬಲ
ಮೇಲೆ +ಬಿದ್ದುದು +ಜೀಯ +ಜಡಿದು +ನೃ
ಪಾಲನ್+ಏಕಾಂಗದಲಿ +ಹೊಕ್ಕನು +ಹೊದರನ್+ಒಡೆಬಡಿದು
ಮೇಲುದಾಯದಲ್+ಅವನಿಪನ+ ಸಂ
ಭಾಳಿಸುವೆನ್+ಎನೆ +ನಗುತ+ ಲಕ್ಷ್ಮೀ
ಲೋಲ +ಚಪ್ಪರಿಸಿದನು +ನರನ್+ಉದ್ದಂಡ+ವಾಜಿಗಳ

ಅಚ್ಚರಿ:
(೧) ಸ್ವರ್ಗವನ್ನು ಮೇಲುಲೋಕ ಎಂದು ಕರೆದಿರುವುದು;
(೨) ಮೇಲು ಪದದ ಬಳಕೆ – ಮೇಲುಲೋಕವ ಬಯಸಿ ಕುರುಬಲ ಮೇಲೆ ಬಿದ್ದುದು ಜೀಯ; ಮೇಲುದಾಯದಲವನಿಪನ ಸಂಭಾಳಿಸುವೆನೆನೆ