ಪದ್ಯ ೭೧: ಶಲ್ಯನ ನಂತರ ಧರ್ಮಜನು ಯಾರನ್ನು ಸಾಯಿಸಿದನು?

ಆತನಸ್ತ್ರವ ಮುರಿಯೆಸುತ ರಥ
ಸೂತ ಹಯವನು ತರಿದು ಬಾಣ
ವ್ರಾತದಲಿ ಶಲ್ಯಾನುಜನ ಹೂಳಿದನು ಹರಹಿನಲಿ
ಈತನನು ಕೆಡಹಿದನು ಸಾಲ್ವಮ
ಹೀತಳಾಧಿಪನವನ ಹರಿಬಕೆ
ಭೂತಳೇಶನ ಕೆಣಕಿ ಕಂಡನು ವರ ಸುರವ್ರಜವ (ಶಲ್ಯ ಪರ್ವ, ೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಶಲ್ಯಾನುಜನ ಅಸ್ತ್ರವನು ಮುರಿದು, ರಥ ಸಾರಥಿ ಕುದುರೆಗಳನ್ನು ಕತ್ತರಿಸಿದ ಧರ್ಮಜನು ಬಾಣಗಳಿಂದ ಅವನನ್ನು ಸಂಹರಿಸಿದನು. ಅವನ ಸೇಡನ್ನು ತೀರಿಸಲು ಸಾಲ್ವರಾಜನು ಬಂದು ಧರ್ಮಜನನ್ನು ಕೆಣಕಿ ಧರ್ಮಜನ ಬಾಣಗಳಿಂದ ಸಾವನಪ್ಪಿ ದೇವತೆಗಳ ಜೊತೆಗೆ ಸೇರಿದನು.

ಅರ್ಥ:
ಅಸ್ತ್ರ: ಶಸ್ತ್ರ, ಆಯುಧ; ಮುರಿ: ಸೀಳು; ಎಸು: ಬಾಣ ಪ್ರಯೋಗ ಮಾಡು; ರಥ: ಬಂಡಿ; ಸೂತ: ಸಾರಥಿ; ಹಯ: ಕುದುರೆ; ತರಿ: ಸೀಳು; ಬಾಣ: ಅಂಬು, ಸರಳು; ವ್ರಾತ: ಗುಂಪು; ಅನುಜ: ತಮ್ಮ; ಹೂಳು: ಕವಿ, ಮುಚ್ಚು; ಹರಹು: ವಿಸ್ತಾರ, ವೈಶಾಲ್ಯ, ಹೆಚ್ಚಳ; ಕೆಡಹು: ಬೀಳಿಸು; ಮಹೀತಳಾಧಿಪ: ರಾಜ; ಹರಿಬ: ಕೆಲಸ; ಭೂತಳೇಶ: ರಾಜ; ಕೆಣಕು: ಪ್ರಚೋದಿಸು; ಕಂಡು: ನೋಡು; ವರ: ಶ್ರೇಷ್ಠ; ಸುರ: ದೇವತೆ, ಅಮರ; ವ್ರಜ: ಗುಂಪು;

ಪದವಿಂಗಡಣೆ:
ಆತನ್+ಅಸ್ತ್ರವ +ಮುರಿ+ಎಸುತ+ ರಥ
ಸೂತ +ಹಯವನು +ತರಿದು +ಬಾಣ
ವ್ರಾತದಲಿ+ ಶಲ್ಯ+ಅನುಜನ +ಹೂಳಿದನು +ಹರಹಿನಲಿ
ಈತನನು +ಕೆಡಹಿದನು+ ಸಾಲ್ವ+ಮ
ಹೀತಳಾಧಿಪನ್+ಅವನ +ಹರಿಬಕೆ
ಭೂತಳೇಶನ +ಕೆಣಕಿ +ಕಂಡನು +ವರ +ಸುರವ್ರಜವ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಹೂಳಿದನು ಹರಹಿನಲಿ, ಕಂಡನು ವರ ಸುರವ್ರಜವ
(೨) ಭೂತಳೇಶ, ಮಹೀತಳಾಧಿಪ; ವ್ರಾತ, ವ್ರಜ – ಸಮಾನಾರ್ಥಕ ಪದ

ಪದ್ಯ ೨: ಧರ್ಮಜನ ಆನಂದ ಸ್ಥಿತಿಯು ಹೇಗಿತ್ತು?

ಮಾತುದೋರದು ಹೆಚ್ಚಿದಾನಂ
ದಾತಿರೇಕಕೆ ಚಿತ್ತ ನೆರೆಯದು
ಹೂತು ಹಿಗ್ಗುವ ಪುಳಕರಾಜಿಗೆ ದೇಹ ಕಿರಿದೆನುತ
ಕಾತರಿಸಿದನು ಮೇಲೆ ಮೇಲೆ ಮ
ಹೀತಳಾಧಿಪ ಮೈಮರೆಯೆ ತೆಗೆ
ದಾತನನು ತಕ್ಕೈಸಿದನು ಕಾರುಣ್ಯನಿಧಿ ನಗುತ (ದ್ರೋಣ ಪರ್ವ, ೧೫ ಸಂಧಿ, ೨ ಪದ್ಯ)

ತಾತ್ಪರ್ಯ:
ಧರ್ಮಜನಿಗೆ ಮಾತೇ ಹೊರಡಲಿಲ್ಲ. ಆದ ಆನಂದಕ್ಕೆ ಮನಸ್ಸು ಸಾಲದಾಯಿತು. ರೋಮಾಂಚನಕ್ಕೆ ದೇಹವೇ ಚಿಕ್ಕದಾಯಿತು. ಕಾತರದಿಂದ ಮುಂದುವರೆದು ಧರ್ಮಜನು ಮೈಮರೆದನು. ಶ್ರೀಕೃಷ್ಣನು ಅವನನ್ನೆತ್ತಿ ತಬ್ಬಿಕೊಂಡನು.

ಅರ್ಥ:
ಮಾತು: ವಾಣಿ; ತೋರು: ಗೋಚರಿಸು; ಹೆಚ್ಚು: ಅಧಿಕ; ಆನಂದ: ಸಂತೋಷ; ಅತಿರೇಕ: ಹೆಚ್ಚು; ಚಿತ್ತ: ಮನಸ್ಸು; ನೆರೆ: ಗುಂಪು; ಹೂತ: ಅರಳಿದ; ಹಿಗ್ಗು: ಸಂತೋಷ, ಆನಂದ; ಪುಳಕ: ರೋಮಾಂಚನ; ದೇಹ: ಶರೀರ; ಕಿರಿದು: ಚಿಕ್ಕದ್ದು; ಕಾತರಿಸು: ತವಕಗೊಳ್ಳು; ಮಹೀತಳ: ಭೂಮಿ; ಅಧಿಪ: ರಾಜ; ಮೈ: ತನು; ಮರೆ: ಜ್ಞಾಪಕದಲ್ಲಿಟ್ಟುಕೊಳ್ಳದಿರು; ತೆಗೆ: ಹೊರತರು; ದಾತ: ಒಡೆಯ, ಸ್ವಾಮಿ; ತಕ್ಕೈಸು: ಆಲಿಂಗಿಸು; ಕಾರುಣ್ಯ: ದಯೆ; ನಿಧಿ: ಸಾಗರ; ನಗು: ಹರ್ಷ;

ಪದವಿಂಗಡಣೆ:
ಮಾತು+ತೋರದು +ಹೆಚ್ಚಿದ್+ಆನಂದ
ಅತಿರೇಕಕೆ +ಚಿತ್ತ +ನೆರೆಯದು
ಹೂತು +ಹಿಗ್ಗುವ +ಪುಳಕರಾಜಿಗೆ +ದೇಹ +ಕಿರಿದೆನುತ
ಕಾತರಿಸಿದನು +ಮೇಲೆ +ಮೇಲೆ +ಮ
ಹೀತಳಾಧಿಪ +ಮೈಮರೆಯೆ +ತೆಗೆದ್
ಆತನನು +ತಕ್ಕೈಸಿದನು +ಕಾರುಣ್ಯನಿಧಿ +ನಗುತ

ಅಚ್ಚರಿ:
(೧) ಹೆಚ್ಚಿನಾನಂದವಾಯಿತು ಎಂದು ಹೇಳಲು – ಹೂತು ಹಿಗ್ಗುವ ಪುಳಕರಾಜಿಗೆ ದೇಹ ಕಿರಿದೆನುತ

ಪದ್ಯ ೨೩: ಧರ್ಮಜನು ಭೀಮನಿಗೆ ಏನು ಹೇಳಿದನು?

ಆತನಿಂಗಿತದನುವನಿಅರಿದು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯಊರಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನ ಮನಸ್ಸಿನ ಭಾವನೆಯನ್ನರಿತು, ವಲಲ ದುಡುಕಬೇಡ, ತಾಳ್ಮೆಯಿಂದಿರು, ಆ ಮರವನ್ನು ಬೀಳಿಸಬೇಡ, ಊರಿನ ಸಜ್ಜನರು ಇದರಡಿ ಕುಳಿತಿರುತ್ತಾರೆ, ಊರ ಹೊರಗೆ ಒಣಗಿದ ಮರವಿದೆ ಅದನ್ನು ತರಿಸಿಕೋಮ್ಡು ಅಡುಗೆ ಮಾಡು ಎಂದನು.

ಅರ್ಥ:
ಇಂಗಿತ: ಭಾವನೆ; ಅನುವು: ರೀತಿ; ಅರಿ: ತಿಳಿ; ಮಹೀತಳಾಧಿಪ: ರಾಜ; ಮಹೀತಳ: ಭೂಮಿ; ಅಧಿಪ: ಒಡೆಯ; ಕಾತರ: ಕಳವಳ; ಸೈರಿಸು: ಸಮಾಧಾನ; ಅಕಟ: ಅಯ್ಯೋ; ತರು: ಮರ; ಮುರಿ: ಸೀಳು, ನಾಶಮಾಡು; ಸುಜನ: ಸಜ್ಜನ; ವ್ರಾತ: ಗುಂಪು; ಆಶ್ರಯ: ಆಸರೆ; ಊರು: ಪುರ; ಹೊರಗೆ: ಆಚೆ; ಮಹಾತಿಶಯ: ಅತಿ ದೊಡ್ಡ; ಬಾಣಸಿನ: ಅಡುಗೆ; ಮನೆ: ಆಲಯ;

ಪದವಿಂಗಡಣೆ:
ಆತನ್+ಇಂಗಿತದ್+ಅನುವನ್+ಅರಿದು +ಮ
ಹೀತಳಾಧಿಪ+ ಧರ್ಮಸುತನ್+ಅತಿ
ಕಾತರಿಸದಿರು +ವಲಲ +ಸೈರಿಸು +ಸೈರಿಸ್+ಅಕಟೆನುತ
ಈ +ತರುವ +ಮುರಿಯದಿರು +ಸುಜನ
ವ್ರಾತಕ್+ಆಶ್ರಯ+ ಊರ+ಹೊರಗೆ+ ಮ
ಹಾತಿಶಯ +ತರುವುಂಟು +ನಿನ್ನಯ +ಬಾಣಸಿನ +ಮನೆಗೆ

ಅಚ್ಚರಿ:
(೧) ರಾಜ ಎಂದು ಹೇಳುವ ಪರಿ – ಮಹೀತಳಾಧಿಪ

ಪದ್ಯ ೨೯: ಕೃಷ್ಣನಿಗೆ ಗೌರವವನ್ನು ರಾಜಸಭೆಯಲ್ಲೇಕೆ ನೀಡಬಾರದು?

ಸ್ನಾತಕವ್ರತಿಯಲ್ಲ ಋತ್ವಿಜ
ನೀತನಲ್ಲಾಚಾರ್ಯನಲ್ಲ ಮ
ಹೀತಳಾಧಿಪನಲ್ಲ ಗುರುವಲ್ಲಸುರರಿಪು ನಿಮಗೆ
ಈತನೇ ಪ್ರಿಯನೆಂದು ಕೃಷ್ಣಂ
ಗೋತು ಕೊಡುವರೆ ಬೇರೆ ಕೊಡುವುದು
ಭೂತಳೇಶರ ಮುಂದೆ ಮನ್ನಿಪುದುಚಿತವಲ್ಲೆಂದ (ಸಭಾ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನು ಗೃಹಸ್ಥನಲ್ಲ, ಯಜ್ಞದಲ್ಲಿ ಋತ್ವಿಜನಲ್ಲ, ನಿಮಗೆ ಆಚಾರ್ಯನಲ್ಲ, ರಾಜನಲ್ಲ ನಿಮಗೆ ಗುರುವಲ್ಲ ಇವನು ನಿಮಗೆ ಪ್ರಿಯನಾದವನೆಂದು ಮನ್ನಿಸುತ್ತೇವೆ ಎಂದು ಹೇಳಿದರೆ, ಆ ಮನ್ನಣೆಯನ್ನು ರಾಜರಸಭೆಯೆದುರು ಮಾಡಬೇಡಿ ಬೇರಲ್ಲಾದರೂ ಕರೆದುಕೊಂಡು ಮಾಡಿಕೊಳ್ಳಿ ಎಂದು ಶಿಶುಪಾಲನು ಗುಡುಗಿದನು.

ಅರ್ಥ:
ಸ್ನಾತಕ: ಗೃಹಸ್ಥ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಋತ್ವಿಜ: ಯಜ್ಞ ಮಾಡುವವ; ಆಚಾರ್ಯ: ಗುರು; ಮಹೀ: ಭೂಮಿ; ಮಹೀತಳಾಧಿಪ: ರಾಜ; ಗುರು: ಆಚಾರ್ಯ; ಅಸುರರಿಪು: ರಾಕ್ಷಸರ ವೈರಿ; ಪ್ರಿಯ: ಇಷ್ಟವಾದವ; ಭೂತಳೇಶ: ರಾಜ; ಮುಂದೆ: ಎದುರು; ಮನ್ನಿಸು: ಗೌರವಿಸು; ಉಚಿತ: ಸರಿಯಾದ;

ಪದವಿಂಗಡಣೆ:
ಸ್ನಾತಕವ್ರತಿಯಲ್ಲ+ ಋತ್ವಿಜನ್
ಈತನಲ್ಲ+ಆಚಾರ್ಯನಲ್ಲ+ ಮ
ಹೀತಳ+ಅಧಿಪನಲ್ಲ +ಗುರುವಲ್ಲ್+ಅಸುರರಿಪು +ನಿಮಗೆ
ಈತನೇ +ಪ್ರಿಯನೆಂದು +ಕೃಷ್ಣಂ
ಗೋತು +ಕೊಡುವರೆ+ ಬೇರೆ+ ಕೊಡುವುದು
ಭೂತಳೇಶರ+ ಮುಂದೆ +ಮನ್ನಿಪುದ್+ಉಚಿತವಲ್ಲೆಂದ

ಅಚ್ಚರಿ:
(೧) ಕೊಡುವರೆ, ಕೊಡುವುದು – ಪದಗಳ ಬಳಕೆ
(೨) ಸ್ನಾತಕ, ಋತ್ವಿಜ, ಆಚಾರ್ಯ, ಮಹೀತಳಾಧಿಪ, ಗುರು – ಈ ಗುಂಪಿನವನಲ್ಲ ಎಂದು ಹೇಳಲು ಬಳಸಿದ ಪದಗಳು
(೩) ಮಹೀತಳಾಧಿಪ, ಭೂತಳೇಶ – ಸಮನಾರ್ಥಕ ಪದ