ಪದ್ಯ ೭೩: ದುರ್ಯೋಧನನು ಏನೆಂದು ಗರ್ಜಿಸಿದನು?

ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ (ಶಲ್ಯ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಶಲ್ಯನ ಮರಣದ ಸುದ್ದಿಯು ದುರ್ಯೋಧನನನ್ನು ತಲುಪಿತು. ಆತನು ತನ್ನ ಸೈನಿಕರು, ರಾವುತರು, ಮದಗಜಗಳು, ರಥಗಳನ್ನು ಕರೆಸಿದನು. ಅವರ ನಡುವೆ ಕೌರವನ್ ರಥವು ಮಹಾವೇಗದಿಂದ ನುಗ್ಗಿತು. ಪಾಂಡವರನ್ನು ಹೊಯ್ಯಿರಿ, ಹೊಯ್ಯಿರಿ ಎಂದು ಕೌರವನು ಗರ್ಜಿಸಿದನು.

ಅರ್ಥ:
ಕೇಳು: ಆಲಿಸು; ನೃಪಾಲ: ರಾಜ; ಅವಸಾನ: ಸಾವು; ಕರಸು: ಬರೆಮಾಡು; ಆಳು: ಸೇವಕ, ಸೈನಿಕ; ಕುದುರೆ: ಹಯ; ರಥ: ಬಂಡಿ; ಮದ: ಅಮಲು, ಅಹಂಕಾರ; ಉತ್ಕಟ: ಹೆಚ್ಚಾದ; ಗಜಘಟೆ: ಆನೆಗಳ ಗುಂಪು; ಆವಳಿ: ಸಾಲು; ಮೇಳ: ಸೇರುವಿಕೆ, ಗುಂಪು; ಮೋಡಿ: ರೀತಿ, ಶೈಲಿ; ರಥ: ಬಂಡಿ; ದುವ್ವಾಳಿಸು: ಓಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ತನುಜ: ಮಕ್ಕಳು; ಹೊಯ್: ಹೊಡೆ; ಹೊಕ್ಕು: ಸೇರು; ಲಳಿ: ರಭಸ; ಲಗ್ಗೆ: ಮುತ್ತಿಗೆ;

ಪದವಿಂಗಡಣೆ:
ಕೇಳಿದನು +ಕುರುರಾಯ +ಮಾದ್ರ+ನೃ
ಪಾಲನ್+ಅವಸಾನವನು +ಕರಸಿದನ್
ಆಳು +ಕುದುರೆಯ +ರಥ +ಮದ+ಉತ್ಕಟ+ ಗಜಘಟ+ಆವಳಿಯ
ಮೇಳವದ +ಮೋಡಿಯಲಿ +ರಥ+ ದು
ವ್ವಾಳಿಸಿತು +ಫಡ +ಪಾಂಡು+ತನುಜರ
ಸಾಲ +ಹೊಯ್ +ಹೊಯ್ದೆನುತ +ಹೊಕ್ಕನು +ಲಳಿಯ +ಲಗ್ಗೆಯಲಿ

ಅಚ್ಚರಿ:
(೧) ಜೋಡಿ ಪದಗಳು – ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ

ಪದ್ಯ ೧೩: ಕರ್ಣನ ಬಾಣಗಳ ಅಬ್ಬರ ಹೇಗಿತ್ತು?

ಶರಹತಿಗೆ ಮುಖದಿರುಹಿ ಕಾಲಾಳ್
ತುರಗಸೇನೆಯ ಮರೆಯ ಸಾರಿತು
ತುರಗದಳ ಬಗಿದಂಡುಗೊಂಡುದು ಗಜಘಟಾವಳಿಯ
ಕರಿಘಟಾವಳಿ ಕೋಲಿನುರುಬೆಗೆ
ತೆರಳಿದವು ತೇರುಗಳ ಮರೆಯಲಿ
ಹೊರಳಿಯೊಡೆದುದು ತೇರ ಥಟ್ಟು ನಿಹಾರದೆಸುಗೆಯಲಿ (ಕರ್ಣ ಪರ್ವ, ೨೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳ ಪೆಟ್ಟಿಗೆ ಕಾಲಾಳುಗಳು ಕುದುರೆಯ ಹಿಂಭಾಗಕ್ಕೆ ರಕ್ಷಣೆ ಪಡೆಯಲು ಸೇರಿತು, ಕುದುರೆಗಳ ದಳವು ಬೆನ್ನುತೋರಿಸಿ ಆನೆಗಳ ಹಿಂದಕ್ಕೂ, ಆನೆಗಳು ಬಾಣಗಳ ಹೊಡೆತಕ್ಕೆ ಹಿಮ್ಮೆಟ್ಟಿ ರಥಗಳ ಹಿಂದಕ್ಕೂ ಹೋದವು ರಥಗಳು ಮಂಜಿನಂತೆ ಮುಸುಕಿದ ಬಾಣಗಳಿಗೆ ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದವು.

ಅರ್ಥ:
ಶರ: ಬಾಣ; ಹತಿ: ಹೊಡೆತ ಮುಖ: ಆನನ; ತಿರುಹಿ: ತಿರುಗು; ಕಾಲಾಳು: ಸೈನಿಕರು; ತುರಗ: ಅಶ್ವ; ಸೇನೆ: ಸೈನ್ಯ; ಮರೆ: ಹಿಂಬದಿ; ಸಾರು: ಹರಡು; ದಳ: ಸೈನ್ಯ; ಬಗಿದು: ಹೋಳು, ಭಾಗ; ಬಗಿ: ತೋಡು; ಗಜ: ಆನೆ; ಘಟಾವಳಿ: ಗುಂಪು; ಕರಿ: ಆನೆ; ಕೋಲು: ಬಾಣ; ಉರುಬೆ: ಅಬ್ಬರ; ತೆರಳು: ಹೊರಡು; ತೇರು: ಬಂಡಿ, ರಥ; ಮರೆ: ಹಿಂಭಾಗ; ಹೊರಳಿ: ತಿರುವು, ಬಾಗು, ಉರುಳು; ಒಡೆ: ಸೀಳು; ತೇರು: ರಥ; ಥಟ್ಟು: ಗುಂಪು; ನಿಹಾರದೆಸುಗೆ: ಮಂಜಿನಂತೆ ದಟ್ಟವಾಗಿ ಮುಸುಗಿದ ಬಾಣಪ್ರಯೋಗ; ಎಸು: ಬಾಣ ಪ್ರಯೋಗ ಮಾಡು, ಎಚ್ಚು;

ಪದವಿಂಗಡಣೆ:
ಶರಹತಿಗೆ+ ಮುಖದಿರುಹಿ +ಕಾಲಾಳ್
ತುರಗಸೇನೆಯ +ಮರೆಯ +ಸಾರಿತು
ತುರಗದಳ +ಬಗಿದಂಡು+ಕೊಂಡುದು +ಗಜಘಟಾವಳಿಯ
ಕರಿ+ಘಟಾವಳಿ +ಕೋಲಿನ್+ಉರುಬೆಗೆ
ತೆರಳಿದವು +ತೇರುಗಳ +ಮರೆಯಲಿ
ಹೊರಳಿ+ಒಡೆದುದು +ತೇರ +ಥಟ್ಟು +ನಿಹಾರದ್+ಎಸುಗೆಯಲಿ

ಅಚ್ಚರಿ:
(೧) ಗಜ, ಕರಿ; ಶರ, ಕೋಲು – ಸಮನಾರ್ಥಕ ಪದ
(೨) ತುರಗ, ಘಟಾವಳಿ – ೨ ಬಾರಿ ಪ್ರಯೋಗ