ಪದ್ಯ ೪೪: ದುರ್ಯೋಧನನು ಯಾರ ಬಳಿ ಯುದ್ಧಕ್ಕೆ ಹೋದನು?

ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ (ಗದಾ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ನಿನ್ನ ಮಗನು ಅರ್ಜುನನ ಮೇಲೆ ಬಾಣಗಳನ್ನು ಬಿಟ್ಟನು. ಅರ್ಜುನನು ಬಾಣಗಳನ್ನು ತುಂಡುಮಾಡಿ ಅವನಿಗೆ ಗಾಯಗಳಾಗುವಂತೆ ಹೊಡೆದನು. ಕೌರವನ ಮನಸ್ಸಿನ ಮದವು ಹೆಚ್ಚಿ ಅರ್ಜುನನನ್ನು ಲೆಕ್ಕಿಸದೆ ಧರ್ಮಜನ ಸೇನೆಯತ್ತು ವೇಗವಾಗಿ ಹೋದನು.

ಅರ್ಥ:
ಜನಪ: ರಾಜ; ಕೇಳು: ಆಲಿಸು; ಮಗ: ಪುತ್ರ; ಎಚ್ಚು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ; ಚಿನಕಡಿ: ಕತ್ತರಿಸು; ಮಗುಳು: ಮತ್ತೆ; ಎಚ್ಚು: ಬಾಣ ಪ್ರಯೋಗ ಮಾದು; ತೋರಿಸು: ಪ್ರದರ್ಶಿಸು; ಮನ: ಮನಸ್ಸು; ಮದ: ಅಹಂಕಾರ; ಮೀರು: ಹೆಚ್ಚಾಗು; ಕಿರೀಟಿ: ಅರ್ಜುನ; ಮೊನೆ: ಚೂಪಾದ; ಕಣೆ: ಬಾಣ; ಮನ್ನಿಸು: ಗೌರವಿಸು, ಮರ್ಯಾದೆ ಮಾಡು; ದುವ್ವಾಳಿಸು: ವೇಗವಾಗಿ ಓಡು; ಅವನೀಪತಿ: ರಾಜ; ಮೋಹರ: ಯುದ್ಧ;

ಪದವಿಂಗಡಣೆ:
ಜನಪ +ಕೇಳೈ +ನಿನ್ನ +ಮಗನ್
ಅರ್ಜುನನನ್+ಎಚ್ಚನು +ಫಲಗುಣ+ಅಸ್ತ್ರವ
ಚಿನಕಡಿದು +ಮಗುಳ್+ಎಚ್ಚು +ಪಾರ್ಥನೊಳ್+ಏರ +ತೋರಿಸಿದ
ಮನದ+ ಮದ +ಮೀರಿತು +ಕಿರೀಟಿಯ
ಮೊನೆ+ಕಣೆಯ +ಮನ್ನಿಸದೆ +ದುರ್ಯೋ
ಧನನು +ದುವ್ವಾಳಿಸಿದನ್+ಅವನೀಪತಿಯ +ಮೋಹರಕೆ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮನದ ಮದ ಮೀರಿತು
(೨) ಫಲುಗುಣ, ಕಿರೀಟಿ, ಅರ್ಜುನ, ಪಾರ್ಥ – ಅರ್ಜುನನನ್ನು ಕರೆದ ಪರಿ
(೨) ಜನಪ, ಅವನೀಪತಿ – ಸಮಾನಾರ್ಥಕ ಪದ

ಪದ್ಯ ೭೩: ದುರ್ಯೋಧನನು ಏನೆಂದು ಗರ್ಜಿಸಿದನು?

ಕೇಳಿದನು ಕುರುರಾಯ ಮಾದ್ರನೃ
ಪಾಲನವಸಾನವನು ಕರಸಿದ
ನಾಳು ಕುದುರೆಯ ರಥ ಮದೋತ್ಕಟ ಗಜಘಟಾವಳಿಯ
ಮೇಳವದ ಮೋಡಿಯಲಿ ರಥ ದು
ವ್ವಾಳಿಸಿತು ಫಡ ಪಾಂಡುತನುಜರ
ಸಾಲ ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ (ಶಲ್ಯ ಪರ್ವ, ೩ ಸಂಧಿ, ೭೩ ಪದ್ಯ)

ತಾತ್ಪರ್ಯ:
ಶಲ್ಯನ ಮರಣದ ಸುದ್ದಿಯು ದುರ್ಯೋಧನನನ್ನು ತಲುಪಿತು. ಆತನು ತನ್ನ ಸೈನಿಕರು, ರಾವುತರು, ಮದಗಜಗಳು, ರಥಗಳನ್ನು ಕರೆಸಿದನು. ಅವರ ನಡುವೆ ಕೌರವನ್ ರಥವು ಮಹಾವೇಗದಿಂದ ನುಗ್ಗಿತು. ಪಾಂಡವರನ್ನು ಹೊಯ್ಯಿರಿ, ಹೊಯ್ಯಿರಿ ಎಂದು ಕೌರವನು ಗರ್ಜಿಸಿದನು.

ಅರ್ಥ:
ಕೇಳು: ಆಲಿಸು; ನೃಪಾಲ: ರಾಜ; ಅವಸಾನ: ಸಾವು; ಕರಸು: ಬರೆಮಾಡು; ಆಳು: ಸೇವಕ, ಸೈನಿಕ; ಕುದುರೆ: ಹಯ; ರಥ: ಬಂಡಿ; ಮದ: ಅಮಲು, ಅಹಂಕಾರ; ಉತ್ಕಟ: ಹೆಚ್ಚಾದ; ಗಜಘಟೆ: ಆನೆಗಳ ಗುಂಪು; ಆವಳಿ: ಸಾಲು; ಮೇಳ: ಸೇರುವಿಕೆ, ಗುಂಪು; ಮೋಡಿ: ರೀತಿ, ಶೈಲಿ; ರಥ: ಬಂಡಿ; ದುವ್ವಾಳಿಸು: ಓಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಪದ; ತನುಜ: ಮಕ್ಕಳು; ಹೊಯ್: ಹೊಡೆ; ಹೊಕ್ಕು: ಸೇರು; ಲಳಿ: ರಭಸ; ಲಗ್ಗೆ: ಮುತ್ತಿಗೆ;

ಪದವಿಂಗಡಣೆ:
ಕೇಳಿದನು +ಕುರುರಾಯ +ಮಾದ್ರ+ನೃ
ಪಾಲನ್+ಅವಸಾನವನು +ಕರಸಿದನ್
ಆಳು +ಕುದುರೆಯ +ರಥ +ಮದ+ಉತ್ಕಟ+ ಗಜಘಟ+ಆವಳಿಯ
ಮೇಳವದ +ಮೋಡಿಯಲಿ +ರಥ+ ದು
ವ್ವಾಳಿಸಿತು +ಫಡ +ಪಾಂಡು+ತನುಜರ
ಸಾಲ +ಹೊಯ್ +ಹೊಯ್ದೆನುತ +ಹೊಕ್ಕನು +ಲಳಿಯ +ಲಗ್ಗೆಯಲಿ

ಅಚ್ಚರಿ:
(೧) ಜೋಡಿ ಪದಗಳು – ಹೊಯ್ ಹೊಯ್ದೆನುತ ಹೊಕ್ಕನು ಲಳಿಯ ಲಗ್ಗೆಯಲಿ

ಪದ್ಯ ೨೮: ಅರ್ಜುನನು ಹೇಗೆ ಸೈನ್ಯವನ್ನು ಭೇದಿಸಿದನು?

ಎಂದು ವಾಘೆಯ ಕೊಂಡು ರಥವನು
ಮುಂದೆ ದುವ್ವಾಳಿಸಿದನಿತ್ತಲು
ಹಿಂದೆ ನಿಂದುದು ಗಜ ರಥಾಶ್ವ ಪದಾತಿ ಚತುರಂಗ
ಇಂದುಮುಖಿಯಿಹ ತೇರು ಹಾಯ್ದುದು
ಮುಂದೆ ಹೊಳ್ಳುಗರಡ್ಡವಿಸಿದರೆ
ಬಂದ ಹೊಲ್ಲೆಹವೇನೆನುತ ಹೊಕ್ಕೆಚ್ಚನಾ ಪಾರ್ಥ (ಅರಣ್ಯ ಪರ್ವ, ೨೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹೀಗೆ ಹೇಳುತ್ತಾ ಜಯದ್ರಥನು ರಥವನ್ನು ವೇಗವಾಗಿ ಚಲಿಸಿದನು. ಅವನ ಚತುರಂಗ ಸೈನ್ಯವು ಭೀಮಾರ್ಜುನರ ಮುಂದೆ ನಿಂತಿತು. ದ್ರೌಪದಿಯಿರುವ ರಥವು ಹೋಗುತ್ತಿದೆ, ಇಲ್ಲಿ ಈ ಜೊಳ್ಳುಗಳು ಅಡ್ಡನಿಂತರೆ ನಮಗೇನೂ ಕಷ್ಟವಿಲ್ಲ ಎಂದು ಹೇಳುತ್ತಾ ಅರ್ಜುನನು ಸೈನ್ಯದೊಳಗೆ ಹೊಕ್ಕು ಬಾಣಗಳನ್ನು ಬಿಟ್ಟನು.

ಅರ್ಥ:
ವಾಘೆ: ಲಗಾಮು; ಕೊಂಡು: ಹಿಡಿದು; ರಥ: ಬಂಡಿ; ಮುಂದೆ: ಎದುರು; ದುವ್ವಾಳಿಸು: ರಭಸದಿಂದ ಚಲಿಸು; ಹಿಂದೆ: ಹಿಂಭಾಗ; ನಿಂದು: ನಿಲ್ಲು; ಗಜ: ಆನೆ; ರಥ: ಬಂಡಿ; ಅಶ್ವ: ಕುದುರೆ; ಪದಾತಿ: ಕಾಲಾಳು, ಸೈನಿಕ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು; ತೇರು: ಬಂಡಿ; ಹಾಯ್ದು: ತೆರಳು; ಹೊಳ್ಳು: ಜೊಳ್ಳು, ಹುರುಳಿಲ್ಲದುದು; ಅಡ್ಡವಿಸು: ಅಡ್ಡ ಹಾಕು; ಬಂದು: ಆಗಮಿಸು; ಹೊಲ್ಲೆಹ: ದೋಷ; ಹೊಕ್ಕು: ತಳ್ಳು, ನೂಕು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಎಂದು+ ವಾಘೆಯ +ಕೊಂಡು+ ರಥವನು
ಮುಂದೆ +ದುವ್ವಾಳಿಸಿದನ್+ಇತ್ತಲು
ಹಿಂದೆ +ನಿಂದುದು +ಗಜ+ ರಥ+ಅಶ್ವ+ ಪದಾತಿ +ಚತುರಂಗ
ಇಂದುಮುಖಿಯಿಹ+ ತೇರು +ಹಾಯ್ದುದು
ಮುಂದೆ +ಹೊಳ್ಳುಗರ್+ಅಡ್ಡವಿಸಿದರೆ
ಬಂದ +ಹೊಲ್ಲೆಹವೇನ್+ಎನುತ +ಹೊಕ್+ಎಚ್ಚನಾ +ಪಾರ್ಥ

ಅಚ್ಚರಿ:
(೧) ಅರ್ಜುನನ ದಿಟ್ಟತನ – ಹೊಳ್ಳುಗರಡ್ಡವಿಸಿದರೆ ಬಂದ ಹೊಲ್ಲೆಹವೇನೆನುತ ಹೊಕ್ಕೆಚ್ಚನಾ ಪಾರ್ಥ

ಪದ್ಯ ೫೫: ದೇವತೆಗಳ ಸೇವಕರು ಏನೆಂದು ಹೇಳಿದರು?

ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯುದಿವಿಜರ
ಸೂಳೆಯರು ಸೆರೆಬಿಟ್ಟು ಬಂದರು ಯಕ್ಷಕಿನ್ನರರ
ಕಾಲ ಸಂಕಲೆ ಕಡಿದವಾ ಖಳ
ರೂಳಿಗಕೆ ಕಡೆಯಾಯ್ತು ಸುರಪುರ
ದಾಳುವೇರಿಯ ಕಾಹುತೆಗೆಯಲಿಯೆಂದರಾ ಚರರು (ಅರಣ್ಯ ಪರ್ವ, ೧೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ದೇವತೆಗಳ ಸೇವಕರು ಇಂದ್ರನ ಬಳಿ ನಿವೇದಿಸಿದರು. ಕಾಲಕೇಯರ ರಾಜಧಾನಿಯಲ್ಲಿ ಮೃತ್ಯುವು ನುಗ್ಗಿತು. ಅಪ್ಸರೆಅ ಸ್ತ್ರೀಯರು ಸೆರೆಯಿಂದ ಬಿಡುಗಡೆಯಾದರು. ದೇವತೆಗಳ ಕಾಲ ಸರಪಳಿಗಳು ಕಡಿದು ಹೋದವು. ಅವರ ಜೀತದ ಬಾಳು ಮುಗಿಯಿತು. ಇನ್ನು ಅಮರಾವತಿಯ ಕೋಟೆಯ ಕಾವಲನ್ನು ತೆಗೆಸಿಬಿಡು ಎಂದು ಹೇಳಿದರು.

ಅರ್ಥ:
ನಗರ: ಊರು; ದುವ್ವಾಳಿಸು: ಕುದುರೆ ಸವಾರಿ ಮಾಡು; ಮೃತ್ಯು: ಸಾವು; ದಿವಿಜ: ದೇವತೆ, ಸುರರು; ದಿವಿಜರ ಸೂಳೆಯರು: ಅಪ್ಸರೆ; ಸೆರೆ: ಬಂಧನ; ಬಿಟ್ಟು: ತೊರೆದು; ಬಂದರು: ಆಗಮಿಸು; ಕಾಲ: ಸಮಯ; ಸಂಕಲೆ: ಸೆರೆ, ಬಂಧನ; ಖಳ: ದುಷ್ಟ; ಊಳಿಗ:ಕೆಲಸ, ಕಾರ್ಯ; ಕಡೆ: ಕೊನೆ; ಸುರಪುರ: ಅಮರಾವತಿ; ಆಳುವೇರಿ: ಕೋಟೆಯ ಸುತ್ತಣ ಗೋಡೆ; ಕಾಹು: ರಕ್ಷಿಸುವವ; ತೆಗೆ: ಹೊರತರು; ಚರ: ಸೇವಕ;

ಪದವಿಂಗಡಣೆ:
ಕಾಲಕೇಯರ +ನಗರಿಯಲಿ +ದು
ವ್ವಾಳಿಸಿತಲೇ +ಮೃತ್ಯು+ದಿವಿಜರ
ಸೂಳೆಯರು +ಸೆರೆಬಿಟ್ಟು +ಬಂದರು +ಯಕ್ಷ+ಕಿನ್ನರರ
ಕಾಲ +ಸಂಕಲೆ +ಕಡಿದವ್+ಆ+ ಖಳರ್
ಊಳಿಗಕೆ +ಕಡೆಯಾಯ್ತು +ಸುರಪುರದ್
ಆಳುವೇರಿಯ+ ಕಾಹು+ತೆಗೆಯಲಿ+ಎಂದರಾ +ಚರರು

ಅಚ್ಚರಿ:
(೧) ಕಾಲಕೇಯರು ಸೋತರು ಎಂದು ಹೇಳುವ ಪರಿ – ಕಾಲಕೇಯರ ನಗರಿಯಲಿ ದು
ವ್ವಾಳಿಸಿತಲೇ ಮೃತ್ಯು
(೨) ಅಪ್ಸರೆಯರನ್ನು ಕರೆಯುವ ಪರಿ – ದಿವಿಜರ ಸೂಳೆಯರು