ಪದ್ಯ ೬೮: ಕುರುಸೇನೆಯು ಚೀರಲು ಕಾರಣವೇನು?

ಕಾರಿದನು ರುಧಿರವನು ಧರಣಿಗೆ
ಹಾರಿ ಬಿದ್ದನು ಮಾದ್ರಪತಿಯೆದೆ
ಡೋರಿನಲಿ ಡಾವರಿಸಿದವು ರಕ್ತಾಂಬುಧಾರೆಗಳು
ಮೀರಿತಸು ಕಂಠವನು ನಾಸಿಕ
ಕೇರಿದುದು ನಿಟ್ಟುಸುರು ನಿಮಿಷಕೆ
ಚೀರಿದುದು ಕುರುರಾಯದಳ ಶಲ್ಯಾವಸಾನದಲಿ (ಶಲ್ಯ ಪರ್ವ, ೩ ಸಂಧಿ, ೬೮ ಪದ್ಯ)

ತಾತ್ಪರ್ಯ:
ಶಲ್ಯನು ರಕ್ತವನ್ನು ಕಾರಿ ಭೂಮಿಗೆ ಹಾರಿ ಬಿದ್ದನು. ಎದೆಯ ಹೋರಿನಲ್ಲಿ ರಕ್ತವು ಹರಿಯಿತು. ಪ್ರಾಣವು ಕಂಠವನ್ನು ಮೀರಿ ಮೂಗಿಗೆ ಏರಿ ಹಾರಿಹೋಯಿತು. ಶಲ್ಯನ ಅವಸಾನದಿಂದ ಕುರುಸೇನೆಯು ಆಕ್ರಂದನಕ್ಕೊಳಗಾಯಿತು.

ಅರ್ಥ:
ಕಾರು: ಮಳೆಗಾಲ; ರುಧಿರ: ರಕ್ತ, ನೆತ್ತರು; ಧರಣಿ: ಭೂಮಿ; ಹಾರು: ಲಂಘಿಸು; ಬೀಳು: ಕುಸಿ; ಮಾದ್ರಪತಿ: ಮದ್ರ ದೇಶದ ಒಡೆಯ (ಶಲ್ಯ); ಎದೆ: ಉರು; ಡೋರು: ತೂತು, ರಂಧ್ರ; ರಕ್ತ: ನೆತ್ತರು; ಅಂಬುಧಾರೆ: ಮಳೆ; ಮೀರು: ಹೆಚ್ಚಾಗು; ಕಂಠ: ಕೊರಳು; ನಾಸಿಕ: ಮೂಗು; ಏರು: ಮೇಲೇಳು; ನಿಟ್ಟುಸುರು: ದೀರ್ಘವಾದ ಉಸಿರು; ನಿಮಿಷ: ಕ್ಷಣ, ಕಾಲ ಪ್ರಮಾಣ; ಚೀರು: ಕಿರಚು, ಕೂಗು; ದಳ: ಸೈನ್ಯ; ಅವಸಾನ: ಸಾವು;

ಪದವಿಂಗಡಣೆ:
ಕಾರಿದನು +ರುಧಿರವನು +ಧರಣಿಗೆ
ಹಾರಿ +ಬಿದ್ದನು +ಮಾದ್ರಪತಿ+ಎದೆ
ಡೋರಿನಲಿ +ಡಾವರಿಸಿದವು +ರಕ್ತಾಂಬು+ಧಾರೆಗಳು
ಮೀರಿತ್+ಅಸು +ಕಂಠವನು +ನಾಸಿಕಕ್
ಏರಿದುದು +ನಿಟ್ಟುಸುರು +ನಿಮಿಷಕೆ
ಚೀರಿದುದು +ಕುರುರಾಯದಳ +ಶಲ್ಯ+ಅವಸಾನದಲಿ

ಅಚ್ಚರಿ:
(೧) ಪ್ರಾಣವು ಹೋಗುವುದನ್ನು ವಿವರಿಸುವ ಪರಿ – ಮೀರಿತಸು ಕಂಠವನು ನಾಸಿಕಕೇರಿದುದು ನಿಟ್ಟುಸುರು