ಪದ್ಯ ೮೮: ಭೀಷ್ಮನ ಸ್ಥಿತಿ ಹೇಗಿತ್ತು?

ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾತ್ರಯದೊಳಗೆ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ತುರ್ಯ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳತೊಳಗಿದನು ರಥದೊಳಗೆ (ವಿರಾಟ ಪರ್ವ, ೯ ಸಂಧಿ, ೮೮ ಪದ್ಯ)

ತಾತ್ಪರ್ಯ:
ಎಚ್ಚರ, ಕನಸು, ಗಾಢ ನಿದ್ರೆಗಳೆಂಬ ಮುರು ಅವಸ್ಥೆಗಳಲ್ಲಿ ಕರ್ತೃ ನಾನು ಭೋಕ್ತ್ರ ನಾನು ಎಂದು ಅಭಿಮಾನಿಸುವ ಜೀವನು ಒಂದಾಗಿ ತನ್ನ ನಿಜವನ್ನು ಮರೆಯುತ್ತಾನೆ, ಆದರೆ ಸಹಜಾವಸ್ಥೆಯಾದ ತುರಿಯಾವಸ್ಥೆಗಲ್ಲಿರುವ ಜ್ಞಾನಿಗೆ ಈ ಅವಸ್ಥೆಗಳ ಲೇಪವಿಲ್ಲ. ಸಮಸ್ತ ಸೈನ್ಯವು ನಿದ್ದೆಯಲ್ಲಿದ್ದರೂ ಜ್ಞಾನಿಯಾದ ಭೀಷ್ಮನು ನಿರ್ಮಲನಾಗಿ ರಥದಲ್ಲಿ ಕುಳಿತು ರಾರಾಜಿಸುತ್ತಿದ್ದನು.

ಅರ್ಥ:
ಕನಸು: ಸ್ವಪ್ನ; ಮೇಣ್: ಮತ್ತು, ಅಥವ; ಎಚ್ಚರ: ನಿದ್ರೆಯಿಂದ ಏಳುವುದು; ಸುಷುಪ್ತಿ: ಮೈಮರೆತ ಸ್ಥಿತಿ; ನಿದ್ರಾವಸ್ಥೆ; ಅವಸ್ಥೆ: ಸ್ಥಿತಿ; ತ್ರಯ: ಮೂರು; ಜೀವ: ಪ್ರಾಣ; ಸಂಚಿಸು: ಶೇಖರವಾಗು; ಬೀಳು: ಜಾರು; ತುರ್ಯ: ನಾಲ್ಕನೆ, ಪರಮಾತ್ಮನಲ್ಲಿ ಐಕ್ಯವಾಗುವ ಸ್ಥಿತಿ; ಸಿಲುಕು: ಬಿಗಿ; ಬಲ: ಶಕ್ತಿ; ತೂಕಡಿಸು: ನಿದ್ರೆಗೆ ಜಾರು; ಝೋಂಪಿಸು: ಮೈಮರೆ, ಎಚ್ಚರ ತಪ್ಪು; ತನಿ: ಹೆಚ್ಚಾಗು; ಕೆಡೆ:ಮಲಗು, ಕುಸಿ; ಭಾಗೀರಥಿ: ಗಂಗೆ; ನಂದನ: ಮಗ; ನಿರ್ಮಲ: ಶುಚಿ; ತೊಳತೊಳಗು: ಹೊಳೆ; ರಥ: ಬಂಡಿ;

ಪದವಿಂಗಡಣೆ:
ಕನಸು +ಮೇಣ್+ಎಚ್ಚರು +ಸುಷುಪ್ತಿಗಳ್
ಎನಿಪ್+ ಅವಸ್ಥಾ+ತ್ರಯದೊಳಗೆ +ಜೀ
ವನು +ವಿಸಂಚಿಸಿ +ಬೀಳ್ವನಲ್ಲದೆ+ ತುರ್ಯ +ಸಿಲುಕುವನೆ
ಇನಿತು+ ಬಲ +ತೂಕಡಿಸಿ+ ಝೋಂಪಿಸಿ
ತನಿ+ಕೆಡೆಯೆ +ಭಾಗೀರಥೀ +ನಂ
ದನನು +ನಿರ್ಮಲನಾಗಿ +ತೊಳತೊಳಗಿದನು +ರಥದೊಳಗೆ

ಅಚ್ಚರಿ:
(೧) ಜ್ಞಾನಿಯ ಲಕ್ಷಣ – ಕನಸು ಮೇಣೆಚ್ಚರು ಸುಷುಪ್ತಿಗಳೆನಿಪವಸ್ಥಾತ್ರಯದೊಳಗೆ ಜೀವನು ವಿಸಂಚಿಸಿ ಬೀಳ್ವನಲ್ಲದೆ ತುರ್ಯ ಸಿಲುಕುವನೆ