ಪದ್ಯ ೪೧: ಭೀಮನು ದುರ್ಯೋಧನನ ಮಾತನ್ನು ಕೇಳಿ ಹೇಗೆ ಪ್ರತಿಕ್ರಯಿಸಿದನು?

ಸಾಕು ಕೌರವ ನಾಯ ಮಾತನ
ದೇಕೆ ಚಿತ್ತೈಸುವಿರಿ ದೂತನ
ನೂಕು ನೂಕು ಕುಠಾರ ದುರ್ಯೋಧನನನೊಡೆಹೊಯ್ದು
ಶಾಕಿನಿಯರನು ರಕುತವಾರಿಯೊ
ಳೋಕುಳಿಯನಾಡಿಸುವೆ ನಿಲು ತಡ
ವೇಕೆನುತ ಘುಡುಘುಡಿಸಿ ಕಿಡಿಕಿಡಿಯೋದನಾ ಭೀಮ (ಉದ್ಯೋಗ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಸಂಜಯನ ಬಾಯಿಂದ ಕೇಳಿದ ಭೀಮ ಕುಪಿತಗೊಂಡನು. ಕೌರವನ ನಾಯಿ ಯಾದ ದುರ್ಯೋಧನನ ಮಾತುಗಳನ್ನು ಸಾಕು ಮಾದು, ಅದನ್ನೇಕೆ ಗಮನವಿಟ್ಟು ಕೇಳುತ್ತಿರುವಿರಿ, ದೂತನನ್ನು ಮೊದಲು ನೂಕಿ, ಕುಲಕ್ಕೆ ಕೊಡಲಿಯಾದ ದುರ್ಯೋಧನನನ್ನು ಸಾಯಿಸಿ ಅವನ ರಕ್ತವನ್ನು ಶಾಕಿನಿಯರು ಓಕುಳಿಯಾಡುವಂತೆ ಮಾಡುತ್ತೇನೆ. ತಡ ಮಾಡುವುದು ಬೇಡ ಎಂದು ಕೋಪಗೊಂಡ ಭೀಮನು ಗರ್ಜಿಸಿದನು.

ಅರ್ಥ:
ಸಾಕು: ನಿಲ್ಲಿಸು; ನಾಯ: ನಾಯಿ, ಶ್ವಾನ; ಮಾತು: ವಾಣಿ; ಚಿತ್ತೈಸು: ಮನಸಿಟ್ಟು ಕೇಳು; ದೂತ: ಸೇವಕ; ನೂಕು: ತಳ್ಳು;ಕುಠಾರ: ಕೊಡಲಿ; ಒಡೆ: ಕೆಡವು; ಶಾಕಿನಿ: ಕ್ಷುದ್ರ ದೇವತೆ; ರಕುತ: ನೆತ್ತರು; ವಾರಿ: ಸಮುದ್ರ; ಓಕುಳಿ: ಬಣ್ಣದ ನೀರು; ಆಡಿಸು: ಆಟವಾಡು; ನಿಲು: ನಿಲ್ಲು; ತಡ: ನಿಧಾನ; ಘುಡುಘುಡು: ಜೋರಾಗಿ ಗರ್ಜಿಸು; ಕಿಡಿಕಿಡಿ: ಕೋಪಗೊಳ್ಳು;

ಪದವಿಂಗಡಣೆ:
ಸಾಕು +ಕೌರವ +ನಾಯ +ಮಾತನದ್
ಏಕೆ +ಚಿತ್ತೈಸುವಿರಿ +ದೂತನ
ನೂಕು+ ನೂಕು+ ಕುಠಾರ +ದುರ್ಯೋಧನನನ್+ಒಡೆಹೊಯ್ದು
ಶಾಕಿನಿಯರನು +ರಕುತ+ವಾರಿಯೊಳ್
ಓಕುಳಿಯನ್+ಆಡಿಸುವೆ +ನಿಲು +ತಡ
ವೇಕೆನುತ +ಘುಡುಘುಡಿಸಿ+ ಕಿಡಿಕಿಡಿಯೋದನಾ +ಭೀಮ

ಅಚ್ಚರಿ:
(೧) ಘುಡುಘುಡಿಸಿ, ಕಿಡಿಕಿಡಿ – ಜೋಡಿ ಪದಗಳ ಬಳಕೆ
(೨) ದುರ್ಯೋಧನನನ್ನು ಬೈಯುವ ರೀತಿ – ಕೌರವ ನಾಯ
(೩) ದುರ್ಯೋಧನನ ಅಂತ್ಯ ಹೇಗೆ ಮಾಡಬೇಕು – ದುರ್ಯೋಧನನನೊಡೆಹೊಯ್ದು
ಶಾಕಿನಿಯರನು ರಕುತವಾರಿಯೊಳೋಕುಳಿಯನಾಡಿಸುವೆ

ನಿಮ್ಮ ಟಿಪ್ಪಣಿ ಬರೆಯಿರಿ