ಪದ್ಯ ೩೯: ಧರ್ಮರಾಜನಿಗೆ ಏಕೆ ಭೂಮಿಯ ಒಡೆತನವು ಅನುಚಿತ?

ಮೊದಲೊಳಮಲ ಬ್ರಹ್ಮಚರ್ಯವು
ಮದುವೆಯಾಯಿತು ಬಳಿಕ ವನವಾ
ಸದೊಳು ವಾನ ಪ್ರಸ್ಥವೆಂಬಾಶ್ರಮವನಳವಡಿಸಿ
ತುದಿಗೆ ತಾಂ ಸನ್ಯಾಸವನು ಮಾ
ಡಿದನು ಮತ್ತಳುಪುವೊಡೆ ರಾಜ್ಯದ
ಪದವಿಗನುಚಿತವಾಯ್ತು ಯಮಜಂಗೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತು ಇನ್ನು ಇತ್ತು, ಸಂಜಯನನು ದುರ್ಯೋಧನನ ಮಾತುಗಳನ್ನು ಹೇಳುತ್ತಾ ಮುಂದುವರೆಸಿದ, ಯುಧಿಷ್ಠಿರನು ಮೊದಲು ಬ್ರಹ್ಮಚರ್ಯನಾಗಿದ್ದ, ನಂತರ ಮದುವೆಮಾಡಿಕೊಂಡು ಗೃಹಸ್ಥನಾದ, ನಂತರ ವನವಾಸದಲ್ಲಿ ವಾನಪ್ರಸ್ಥಾಶ್ರಮವನ್ನು ಅನುಭವಿಸಿ, ವಿರಾಟನಗರದಲ್ಲಿ ಸನ್ಯಾಸವೂ ಅನುಭವಿಸಾಯಿತು. ಕ್ರಮವಾಗಿ ನಾಲ್ಕು ಆಶ್ರಮಗಳನ್ನು ಅನುಭವಿಸಿದ ಇವನಿಗೆ, ಭೂಮಿಯ ಒಡೆತನು ಅನುಚಿತವಾಗಿದೆ ಎಂದು ಹೇಳು ಎಂದು ಸಂಜಯನ ಬಳಿ ತಿಳಿಸಿದನು.

ಅರ್ಥ:
ಮೊದಲು: ಆದಿ; ಅಮಲ: ನಿರ್ಮಲ; ಬ್ರಹ್ಮಚರ್ಯ: ಇಂದ್ರಿಯ ನಿಗ್ರಹ ೨ ಚತುರಾಶ್ರಮಗಳಲ್ಲಿ ಮೊದಲನೆಯದು; ಮದುವೆ: ವಿವಾಹ; ಬಳಿಕ: ನಂತರ; ವನ: ಬನ, ಕಾಡು; ವಾಸ: ಇರುವಿಕೆ; ವಾನಪ್ರಸ್ಥ: ಚತುರಾಶ್ರಮಗಳಲ್ಲಿ ಮೂರನೆಯದು; ಅಳವಡಿಸು: ಹೊಂದಿಸು; ಯಮಜ: ಧರ್ಮರಾಯ; ಹೇಳು: ತಿಳಿಸು; ಅಳುಪು: ಬಯಸು;

ಪದವಿಂಗಡಣೆ:
ಮೊದಲೊಳ್+ಅಮಲ +ಬ್ರಹ್ಮಚರ್ಯವು
ಮದುವೆಯಾಯಿತು +ಬಳಿಕ +ವನವಾ
ಸದೊಳು +ವಾನಪ್ರಸ್ಥವೆಂಬ+ಆಶ್ರಮವನ್+ಅಳವಡಿಸಿ
ತುದಿಗೆ + ತಾಂ+ ಸನ್ಯಾಸವನು+ ಮಾ
ಡಿದನು +ಮತ್ತ್+ಅಳುಪುವೊಡೆ +ರಾಜ್ಯದ
ಪದವಿಗನುಚಿತವಾಯ್ತು +ಯಮಜಂಗೆಂದು+ ಹೇಳೆಂದ

ಅಚ್ಚರಿ:
(೧) ಮೊದಲು, ತುದಿ – ಪದಗಳ ಬಳಕೆ

ಪದ್ಯ ೩೮: ಸಂಜಯನು ದುರ್ಯೋಧನನ ಸಂದೇಶವನ್ನು ಹೇಗೆ ವಿವರಿಸಿದನು?

ನಾಡ ಬಯಸುವೊಡೆಮ್ಮೊಡನೆ ಹೊ
ಯ್ದಾಡುವುದು ಸಂಪ್ರತಿಗೆ ಚಿತ್ತವ
ಮಾಡಲಾಗದು ಸಂಧಿ ವೀರ ಕ್ಷತ್ರಿಯರ ಮತವೆ
ಬೇಡುವರೆ ಪಾರ್ಥಿವರು ನಾವದ
ನಾಡಬಾರದು ತಮ್ಮ ಜನನವ
ನೋಡಿ ನುಡಿವರು ಪಾಂಡುಸುತರಲ್ಲೆಂದು ಹೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸಂಜಯನನು ದುರ್ಯೋಧನನ ಸಂದೇಶವನ್ನು ಹೇಳಲಿಕ್ಕೆ ಶುರುಮಾಡಿದ. “ರಾಜ್ಯವು ಬೇಕಿದ್ದರೆ ನಮ್ಮೊಡನೆ ಯುದ್ಧವನ್ನು ಮಾಡಿ ಪಡೆಯಲಿ, ಸಂಧಿ ಬೇಡವೇ ಬೇಡ ವೀರ ಕ್ಷತ್ರಿಯರು ಸಂಧಿಗೆ ಹೋಗುವುದಿಲ್ಲ. ಕ್ಷತ್ರಿಯರು ಬೇಡುವುದು ತಪ್ಪು. ಆ ಒಂದು ಮಾತನ್ನು ನಾವು ಆಡಬಾರದು. ಪಾಂಡವರ ಜನನವನ್ನು ತಿಳಿದವರು ಅವರು ಪಾಂಡುಮಹಾರಾಜನ ಮಕ್ಕಳಲ್ಲ ಎನ್ನುತ್ತಾರೆ” ಎಂದು ಸಂಜಯನನು ಹೇಳಿದನು.

ಅರ್ಥ:
ನಾಡ: ನಾಡು, ಭೂಮಿ; ಬಯಸು: ಇಷ್ಟ; ಹೊಯ್ದಾಡು: ಹೋರಾಡು; ಸಂಪ್ರತಿ: ಸಂಧಾನ; ಚಿತ್ತ: ಮನಸ್ಸು; ಸಂಧಿ: ಸೇರಿಕೆ, ಸಂಯೋಗ; ವೀರ: ಕಲಿ, ಶೂರ; ಕ್ಷತ್ರಿಯ: ರಾಜ್ಯವನ್ನು ರಕ್ಷಿಸುವ; ಮತ: ಅಭಿಪ್ರಾಯ; ಬೇಡು: ಕೇಳು; ಪಾರ್ಥಿವ: ರಾಜ, ಕ್ಷತ್ರಿಯ; ಜನನ: ಹುಟ್ಟು; ನುಡಿ: ಮಾತಾಡು; ಸುತ: ಮಗ;

ಪದವಿಂಗಡಣೆ:
ನಾಡ +ಬಯಸುವೊಡ್+ಎಮ್ಮೊಡನೆ +ಹೊ
ಯ್ದಾಡುವುದು +ಸಂಪ್ರತಿಗೆ +ಚಿತ್ತವ
ಮಾಡಲಾಗದು +ಸಂಧಿ +ವೀರ +ಕ್ಷತ್ರಿಯರ +ಮತವೆ
ಬೇಡುವರೆ+ ಪಾರ್ಥಿವರು +ನಾವದ
ನಾಡಬಾರದು +ತಮ್ಮ +ಜನನವ
ನೋಡಿ +ನುಡಿವರು+ ಪಾಂಡುಸುತರಲ್ಲೆಂದು +ಹೇಳೆಂದ

ಅಚ್ಚರಿ:
(೧) ಸಂಪ್ರತಿ, ಸಂಧಿ; ಪಾರ್ಥಿವ, ಕ್ಷತ್ರಿಯ – ಸಮನಾರ್ಥಕ ಪದ
(೨) ದುರ್ಯೋಧನನ ಕಠೋರ ನುಡಿ – ತಮ್ಮ ಜನನವ ನೋಡಿ ನುಡಿವರು ಪಾಂಡುಸುತರಲ್ಲೆಂದು

ಪದ್ಯ ೩೭: ಶ್ರೀಕೃಷ್ಣನು ಸಂಜಯನಿಗೆ ಯಾವ ಪ್ರಶ್ನೆಗಳನ್ನು ಕೇಳಿದನು?

ಏನು ಬಂದಿಹ ಹದನು ಕಾರ್ಯವ
ನೇನನೆಂದನು ಕೌರವೇಶ್ವರ
ನೇನನೆಕ್ಕಟಿಗರೆದು ಬುದ್ಧಿಯ ಕಲಿಸಿ ಕಳುಹಿದನು
ಏನುವನು ನೀನುಳಿಪದಿರು ವಿನ
ಯಾನುಗತವಾಗಿರಲಿ ಮೇಣ್ ಶೌ
ರ್ಯಾನುಗತವಾಗಿರಲಿ ಬಿನ್ನವಿಸೆಂದನಸುರಾರಿ (ಉದ್ಯೋಗ ಪರ್ವ, ೨ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸಂಜಯನ ಮಾತನ್ನು ಕೇಳಿದ ಶ್ರೀಕೃಷ್ಣನು, “ಸಂಜಯ ನೀನೇಕೆ ಇಲ್ಲಿಗೆ ಬಂದಿರುವೆ? ಕೌರವನ ಮುಂದಿನ ನಡಿಗೆ ಏನು? ನಿನ್ನನ್ನು ಇಲ್ಲಿಗೆ ಕಳಿಸುವುದಕ್ಕೆ ಯಾವ ಸಂದೇಶವನ್ನು ನೀಡಿದ್ದಾನೆ? ಯಾವುದನ್ನು ಮುಚ್ಚುಮರೆಯಿಲ್ಲದೆ ವಿನಯಪೂರ್ವಕವಾಗಿರಲಿ, ಶೌರ್ಯದ ಮಾತಾಗಿರಲಿ ಅದನ್ನು ತಿಳಿಸು” ಎಂದು ಹೇಳಿದನು.

ಅರ್ಥ:
ಬಂದಿಹ: ಬಂದಿರುವೆ; ಹದ: ಸರಿಯಾದ ಸ್ಥಿತಿ; ಕಾರ್ಯ: ಕೆಲಸ; ಕೌರವೇಶ್ವರ: ದುರ್ಯೋಧನ; ಎಕ್ಕಟಿಗ: ಗೂಢಚಾರ, ಒಬ್ಬಂಟಿಗ, ಆಪ್ತ; ಬುದ್ಧಿ: ತಿಳಿವು, ಅರಿವು; ಕಲಿಸು: ಅರಿತುಕೊಳ್ಳು; ಕಳುಹು: ಹೋಗು; ಉಳಿ: ಅವಿತುಕೊ; ವಿನಯ: ಒಳ್ಳೆಯತನ, ಸೌಜನ್ಯ; ಮೇಣ್:ಮತ್ತು; ಶೌರ್ಯ: ಸಾಹಸ; ಬಿನ್ನವಿಸು: ಹೇಳು; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಏನು +ಬಂದಿಹ+ ಹದನು+ ಕಾರ್ಯವನ್
ಏನನೆಂದನು +ಕೌರವೇಶ್ವರನ್
ಏನನ್+ಎಕ್ಕಟಿಗರೆದು+ ಬುದ್ಧಿಯ +ಕಲಿಸಿ+ ಕಳುಹಿದನು
ಏನುವನು+ ನೀನ್+ಉಳಿಪದಿರು +ವಿನ
ಯಾನುಗತವಾಗಿರಲಿ+ ಮೇಣ್+ ಶೌರ್ಯ
ಅನುಗತವಾಗಿರಲಿ+ ಬಿನ್ನವಿಸ್+ಎಂದನ್+ಅಸುರಾರಿ