ಪದ್ಯ ೩: ದೂತನ ಯಾವ ಮಾತಿಗೆ ಧರ್ಮರಾಯನ ಕಳವಳವು ದೂರವಾಯಿತು?

ಕಥೆಗೆ ನಿನ್ನೊಡ ಹುಟ್ಟಿದನ ಸಾ
ರಥಿತನವ ಕೈಕೊಂಡನಿನ್ನೀ
ಪೃಧಿವಿ ನಿನ್ನಯ ರಾಣಿವಾಸವು ಚಿಂತೆ ಬೇಡಿದಕೆ
ವ್ಯಥಿತವಾಯಿತು ವೈರಿ ಬಲ ಸಂ
ಪ್ರಥಿತ ಸಾಹಸನಾದೆ ನೀನೆನೆ
ಶಿಥಿಲ ಸಂಶಯನಂಗಚಿತ್ತವನಿತ್ತನಾತಂಗೆ (ಉದ್ಯೋಗ ಪರ್ವ, ೨ ಸಂಧಿ, ೩ ಪದ್ಯ)

ತಾತ್ಪರ್ಯ:
ಧರ್ಮರಾಯನು ದೂತನಿಗೆ ಏನಾಯಿತು ಎಂದು ಕೇಳಲು, ದೂತನು ಪರಮಾತ್ಮನಾದ ಶ್ರೀಕೃಷ್ಣನು ನಿನ್ನೊಡನೆ ಹುಟ್ಟಿದ ನಿನ್ನ ತಮ್ಮನಾದ ಪಾರ್ಥನಿಗೆ ಸಾರಥಿಯಾಗಲು ಒಪ್ಪಿದನೆಂಬುವುದು ಈಗ ಕಥೆಯಾಗಿದೆ. ಭೂಮಿಯು ನಿನ್ನ ರಾಣಿವಾಸಕ್ಕೆ ಸೇರಿದಳು, ಇನ್ನು ಚಿಂತೆ ಬಿಡು, ಶತ್ರುಗಳು ದುಃಖಿಸುವಂತಾಯಿತು, ನೀನು ಮಹಾ ಸಾಹಸಿಯಾಗಿ ಪ್ರಸಿದ್ಧಿ ಪಡೆದೆ ಎಂದು ಹೇಳಲು, ಪ್ರಸನ್ನನಾದ ಯುಧಿಷ್ಠಿರನು ದೂತನಿಗೆ ಉಡುಗೊರೆಯನ್ನು ನೀಡಿ ಕಳುಹಿಸಿದನು.

ಅರ್ಥ:
ಕಥೆ: ವಿವರವಾದ ಸಂಗತಿ; ಒಡ: ಒಟ್ಟಿಗೆ; ಹುಟ್ಟಿದ: ಜನಿಸಿದ; ಸಾರಥಿ: ಗಾಡಿ ಓಡಿಸುವವ; ಕೈಕೊಂಡನು: ನಿರ್ವಹಿಸು, ವಹಿಸಿಕೊಳ್ಳು; ಪೃಥಿವಿ: ಭೂಂಇ; ರಾಣಿವಾಸ: ಅಂತಃಪುರ; ಚಿಂತೆ: ಯೋಚನೆ; ಬೇಡು: ಕೇಳು; ವ್ಯಥಿತ: ದುಃಖಿತನಾದ;ವೈರಿ: ಶತ್ರು; ಬಲ: ಶಕ್ತಿ; ಸಂಪ್ರಥಿತ: ಅತಿ ಪ್ರಸಿದ್ಧವಾದ; ಸಾಹಸ: ಶೌರ್ಯ; ಶಿಥಿಲ: ಬಲಹೀನವಾದುದು; ಸಂಶಯ: ಅನುಮಾನ, ಸಂದೇಹ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ; ಆತಂಗೆ: ಅವನಿಗೆ;

ಪದವಿಂಗಡಣೆ:
ಕಥೆಗೆ +ನಿನ್ನೊಡ +ಹುಟ್ಟಿದನ+ ಸಾ
ರಥಿ+ತನವ +ಕೈಕೊಂಡನ್+ಇನ್+ ಈ
ಪೃಧಿವಿ +ನಿನ್ನಯ +ರಾಣಿವಾಸವು+ ಚಿಂತೆ+ ಬೇಡಿದಕೆ
ವ್ಯಥಿತವಾಯಿತು +ವೈರಿ +ಬಲ+ ಸಂ
ಪ್ರಥಿತ+ ಸಾಹಸನಾದೆ+ ನೀನ್+ಎನೆ
ಶಿಥಿಲ+ ಸಂಶಯನ್+ಅಂಗಚಿತ್ತವನ್+ಇತ್ತನ್+ಆತಂಗೆ

ಅಚ್ಚರಿ:
(೧) ಭೂಮಿಯು ನಿನ್ನ ವಶವಾಯಿತು ಎಂದು ಹೇಳಲು – ಪೃತಿವಿ ನಿನ್ನಯ ರಾಣಿವಾಸವು
(೨) ವ್ಯಥಿತ, ಪ್ರಥಿತ – ಪ್ರಾಸ ಪದಗಳು
(೩) ನಿನ್ನ – ೧, ೩ ಸಾಲಿನ ೨ನೇ ಪದ ಮತ್ತು ೫ ಸಾಲಿನ ಕೊನೆ ಪದ

ನುಡಿಮುತ್ತುಗಳು: ಉದ್ಯೋಗ ಪರ್ವ, ೨ ಸಂಧಿ

  • ಭೂಮಿಯು ನಿನ್ನ ವಶವಾಯಿತು ಎಂದು ಹೇಳಲು – ಪೃಥಿವಿ ನಿನ್ನಯ ರಾಣಿವಾಸವು (ಪದ್ಯ ೩)
  • ಬಂಧುಗಳ ದರುಶನ ಫಲವಲಾ ಸಂಸಾರ ತರುವಿಂಗೆ – ಸಂಸಾರವನ್ನು ಭದ್ರಪಡಿಸುವ ಬಗೆ (ಪದ್ಯ ೧೩)
  • ತರುಣಿಯರ ವರ್ಣನೆ – ಪರಿಮಳದ ಜಂಗಮ ಭರಣಿಯರು ಮನುಮಥವಿರಿಂಚನ ತರುಣಿಯರು (ಪದ್ಯ ೨೫)

ಪದ್ಯ ೨: ದೂತನು ಯುಧಿಷ್ಠಿರನಿಗೆ ಏನು ಹೇಳಿದನು?

ಇದಿರುಗೊಳ್ಳೇಳರಸ ಕಟ್ಟಿಸು
ಮುದದಿ ಗುಡಿಯನು ರಣದೊಳಹಿತರ
ಸದೆದೆ ಹೋಗಿನ್ನೇನು ಸರಿಯೇ ಸುರರು ಗಿರರುಗಳು
ಪದವನರಸಿದರಾಳಿಗೊಂಡನು
ಸದಮಲ ಶ್ರುತಿತತಿಯನೆಂಬ
ಗ್ಗದ ಮಹಾಪರದೈವ ಬಿಜಯಂಗೈದನೇಳೆಂದ (ಉದ್ಯೋಗ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ದೂತನು ಧರ್ಮರಾಯನ ಮುಂದೆ ಬಂದು ನಮಸ್ಕರಿಸಿ, ರಾಜ ಎದ್ದೇಳು, ಸಂತೋಷದಿಂದ ಧ್ವಜವನ್ನು ಹಾರಿಸು, ಯುದ್ಧದಲ್ಲಿ ಶತ್ರುಗಳನ್ನು ನೀನು ಹೊಡೆದು ಹಾಕಿರುವೆ, ನಿನಗೆ ದೇವತೆಗಳು ಗೀವತೆಗಳು ಸರಿಸಮರೇ? ತನ್ನನ್ನು ಹುಡುಕಿ ಪಾದಗಳಿಗೆ ನಮಸ್ಕರಿಸಲು ಬಂದ ವೇದಗಳನ್ನು ಬಳಿಗೆ ಬಿಟ್ಟುಕೊಳ್ಳದೆ ಉಪೇಕ್ಷಿಸಿದ ಮಹಾಪರದೈವವು ಬರುತ್ತಿದೆ, ಇದಿರುಗೊಳ್ಳಲು ಏಳು, ಎಂದನು.

ಅರ್ಥ:
ಇದಿರು: ಎದುರು; ಏಳು: ಮೇಲೇಳು; ಅರಸ: ರಾಜ; ಕಟ್ಟಿಸು: ನಿರ್ಮಿಸು; ಮುದ: ಸಂತೋಷ; ಗುಡಿ: ಆಲಯ; ರಣ: ಯುದ್ಧ; ಅಹಿತ: ಹಿತವಲ್ಲದವರು; ಸದೆ: ಹೊಡೆ; ಹೋಗು: ನಡೆ; ಸರಿ: ಒಳ್ಳೆಯ; ಸುರ: ದೇವತೆ; ಗಿರ: ವಾಗ್ದೇವಿ; ಪದ: ಚರಣ; ಅರಸಿ: ಹುಡುಕು; ಆಳಿ: ಗುಂಪು; ಸದಮಲ: ಪವಿತ್ರವಾದ; ಶ್ರುತಿ: ವೇದ; ತತಿ: ಸಕಾಲ, ಗುಂಪು; ಅಗ್ಗ:ಶ್ರೇಷ್ಠ; ಮಹಾ: ಹೆಚ್ಚಿನ, ಶ್ರೇಷ್ಠ; ಪರದೈವ: ಪರಮಾತ್ಮ; ಬಿಜಯಂಗೈ: ದಯಮಾಡಿಸು;

ಪದವಿಂಗಡಣೆ:
ಇದಿರುಗೊಳ್+ಏಳ್+ಅರಸ +ಕಟ್ಟಿಸು
ಮುದದಿ +ಗುಡಿಯನು +ರಣದೊಳ್+ಅಹಿತರ
ಸದೆದೆ +ಹೋಗ್+ಇನ್ನೇನು +ಸರಿಯೇ +ಸುರರು +ಗಿರರುಗಳು
ಪದವನ್+ಅರಸಿದರ್+ಆಳಿಗೊಂಡನು
ಸದಮಲ +ಶ್ರುತಿ+ತತಿಯನ್+ಎಂಬ್
ಅಗ್ಗದ +ಮಹಾಪರದೈವ+ ಬಿಜಯಂಗೈದನ್+ಏಳೆಂದ

ಅಚ್ಚರಿ:
(೧) ಆಡು ಮಾತಿನ ಪ್ರಯೋಗ – ಸುರರು ಗಿರರು
(೨) ೪ ಸಾಲಿನಲ್ಲಿ ಒಂದೇ ಪದದ ಬಳಕೆ

ಪದ್ಯ ೧: ಧರ್ಮರಾಯನಿಗೆ ಯಾವ ಕಳವಳವಿತ್ತು?

ಎಲೆ ಪರೀಕ್ಷಿತ ತನಯ ಕೇಳು
ಮ್ಮಳಿಸಿದನು ಯಮಸೂನು ಮುರರಿಪು
ಫಲುಗುಣಗೆ ಮೈಗೊಡುವನೋ ಕೌರವರಿಗೊಳಗಹನೊ
ತಿಳಿಯಲರಿದೆನುತಿರಲು ಬಲಗ
ಣ್ಣಲುಗಿತಿದಿರೊಳು ಕೈಯ ಗುಡಿಯಲಿ
ಸುಳಿದನೊಬ್ಬನು ಬಹಳ ಮಾರ್ಗಶ್ರಮದ ಭಾರದಲಿ (ಉದ್ಯೋಗ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೆ ಜನಮೇಜಯ ಮಹಾರಾಜ ಕೇಳು, ಧರ್ಮರಾಯನಿಗೆ ಕೃಷ್ಣನು ಅರ್ಜುನನ ಪಕ್ಷಕ್ಕೆ ಬರುವನೋ ಇಲ್ಲ ದುರ್ಯೋಧನನ ಪಕ್ಷಕ್ಕೆ ಹೋಗುವನೋ ಎನ್ನುವ ಕಳವಳ ಹೆಚ್ಚಿತು, ಹೀಗಿರಲು ಅವನ ಬಲಗಣ್ಣ ಅದಿರಿತು, ಎದುರಿನಲ್ಲಿ ಧ್ವಜವನ್ನು ಹಿಡಿದು ದೂತನೊಬ್ಬನು ಮಾರ್ಗದಲ್ಲಿ ಆಯಾಸದಿಂದ ಬರುವುದನ್ನು ಕಂಡನು.

ಅರ್ಥ:
ತನಯ: ಮಗ; ಕೇಳು: ಆಲಿಸು; ಉಮ್ಮಳಿಸು: ಅ೦ತರಾಳದಿ೦ದ ಹೊರಹೊಮ್ಮು; ಸೂನು: ಮಗ; ರಿಪು: ವೈರಿ; ಮುರರಿಪು: ಕೃಷ್ಣ; ಮೈ: ತನು; ಕೊಡು: ನೀಡು; ತಿಳಿ: ಅರಿ,ಸಮಾಧಾನ; ಕಣ್ಣು: ನಯನ; ಅಲುಗು: ಅದುರು; ಇದಿರು: ಎದುರು; ಕೈ: ಕರ; ಗುಡಿ:ಕುಟೀರ, ಮನೆ; ಸುಳಿ: ಕಾಣಿಸಿಕೊಳ್ಳು; ಬಹಳ: ತುಂಬ; ಮಾರ್ಗ: ದಾರಿ; ಶ್ರಮ: ಆಯಾಸ; ಭಾರ: ಹೆಚ್ಚು;

ಪದವಿಂಗಡಣೆ:
ಎಲೆ +ಪರೀಕ್ಷಿತ+ ತನಯ +ಕೇಳ್
ಉಮ್ಮಳಿಸಿದನು +ಯಮಸೂನು +ಮುರರಿಪು
ಫಲುಗುಣಗೆ +ಮೈಗೊಡುವನೋ +ಕೌರವರಿಗ್+ಒಳಗಹನೊ
ತಿಳಿಯಲ್+ಅರಿದ್+ಎನುತಿರಲು +ಬಲ
ಕಣ್ಣ್+ಅಲುಗಿತ್+ಇದಿರೊಳು +ಕೈಯ +ಗುಡಿಯಲಿ
ಸುಳಿದನ್+ಒಬ್ಬನು +ಬಹಳ +ಮಾರ್ಗಶ್ರಮದ +ಭಾರದಲಿ

ಅಚ್ಚರಿ:
(೧) ಜನಮೇಜಯನನ್ನು ಪರೀಕ್ಷಿತ ತನಯ ಎಂದು ಕರೆದಿರುವುದು
(೨) ಯುಧಿಷ್ಠಿರನನ್ನು ಯಮಸೂನು ಎಂದು ಕರೆದಿರುವುದು
(೩) ಸೂನು, ತನಯ – ಸಮನಾರ್ಥಕ ಪದ
(೪) ಶುಭಸೂಚನೆಯ ಸಂಕೇತ – ಬಲಗಣ್ಣು ಅದಿರುವುದು – ಜನಸಾಮಾನ್ಯರ ನಂಬಿಕೆಯನ್ನು ತೋರಿರುವುದು
(೫) ಕೈ, ಮೈ – ೩, ೫ ಸಾಲಿನ ಪದಗಳ ಬಳಕೆ

ಪದ್ಯ ೪೫: ದೇವರ ಮಹಿಮೆ ಎಂತಹದು?

ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳು ವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವತನವೆಲೆ ನೃಪತಿ ಕೇಳೆಂದ (ಉದ್ಯೋಗ ಪರ್ವ, ೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನನ್ನು ಸಾರಥಿಯಾಗಲೆಂದು ಕೇಳಿದಾಗ ಕೃಷ್ಣನು ನಕ್ಕು ಸಂತೋಷದಿಂದಲೇ ಸಾರಥಿಯಾಗಲು ಒಪ್ಪಿದನು. ವೈಶಂಪಾಯನರು ಜನಮೇಜನಯ ರಾಜನಿಗೆ ಕೃಷ್ಣನ ಈ ವರ್ತನೆಯನ್ನು ವಿವರಿಸುತ್ತಾ, ರಾಜ ತನ್ನ ಸೇವಕರಲ್ಲಿ ಕೃಷ್ಣನಿಗೆ ಎಂತಹ ಕರುಣೆ, ಅವರಲ್ಲಿ ಆತ ಗರ್ವ, ಅಹಂಕಾರವನ್ನೇ ತೋರುವುದಿಲ್ಲ. ಬಲಿ ಚಕ್ರವತಿಯ ಬಾಗಿಲ ಕಾಯುವುದು, ಅರ್ಜುನನಿಗೆ ಸಾರಥಿಯಾಗುವುದು ಈ ಮಾತನ್ನು ಸಮರ್ಥಿಸುತ್ತದೆ ಎಂದು ಹೇಳಿದನು.

ಅರ್ಥ:
ಎನಲು: ಹೀಗೆ ಹೇಳಲು; ನಗುತ: ಸಂತೋಷ; ಸಾರಥಿ: ಗಾಡಿ ಓಡಿಸುವವ; ಕೈಕೊಂಡು: ಕೈಹಿಡಿದು; ಕೃಪಾಳು: ದಯೆ ಯುಳ್ಳವ; ಅನುನಯ:ನಯವಾದ ಮಾತುಗಳಿಂದ ಮನವೊಲಿಸುವುದು, ಪ್ರೀತಿ; ಬಲ್ಲೆನು: ತಿಳಿದಿರುವೆ; ಭೃತ್ಯ:ಆಳು, ಸೇವಕ; ವರ್ಗ: ಗುಂಪು; ಅಹಂ: ಗರ್ವ; ವೈರೋಚನ: ಇಂದ್ರ; ಪಡಿ: ಬಾಗಿಲಿನ ನಿಲುವು, ಚೌಕಟ್ಟು, ದ್ವಾರಬಂಧ; ಕಿರೀಟಿ: ಅರ್ಜುನ; ಮನೆ: ಆಲಯ; ಬಂಡಿ: ಗಾಡಿ; ಬೋವತ: ಬಂಡಿ ಓಡಿಸುವವ, ಸಾರಥಿ; ನೃಪತಿ: ರಾಜ;

ಪದವಿಂಗಡಣೆ:
ಎನಲು +ನಗುತ+ಎತ್ತಿದನು +ಸಾರಥಿ
ತನವ+ ಕೈಕೊಂಡನು +ಕೃಪಾಳು +ವಿ
ನ+ಅನುನಯವ +ನಾನೆತ್ತ +ಬಲ್ಲೆನು + ಭೃತ್ಯ+ವರ್ಗದಲಿ
ತನಗ್+ಅಹಂಕೃತಿಯಿಲ್ಲ+ ವೈರೋ
ಚನಿಯ +ಪಡಿಹಾರಿಕೆ +ಕಿರೀಟಿಯ
ಮನೆಯ +ಬಂಡಿಯ +ಬೋವತನವ್+ಎಲೆ +ನೃಪತಿ +ಕೇಳೆಂದ

ಅಚ್ಚರಿ:
(೧) ಸಾರಥಿ, ಬೋವತನ – ಸಮನಾರ್ಥಕ ಪದ
(೨) ವೈರೋಚನಿ, ಕಿರೀಟಿ – ಇವರ ಬಗ್ಗೆ ದೇವನು ತೋರಿದ ಕೃಪೆಯ ವರ್ಣನೆ

ಪದ್ಯ ೪೪: ಅರ್ಜುನನು ಕೃಷ್ಣನನ್ನು ಯಾವ ರೀತಿ ಸಹಾಯ ಮಾಡಲು ಕೇಳಿದನು?

ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕ್ತರು ಭಕ್ತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ (ಉದ್ಯೋಗ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನ ಮಾತನ್ನು ಕೇಳಿ ತನ್ನ ಬೇಡಿಕೆಯನ್ನು ಹೀಗಿಟ್ಟನು. ನೀವು ಕೇವಲ ದೇವರಲ್ಲ, ದೇವರ ದೇವರಾದ ಈಶ್ವರನಿಗೆ ನೀವು ಒಡೆಯರು. ನಿಮ್ಮ ಮಹಿಮೆಯನ್ನು ಹೊಗಳಲು ವೇದಗಳಿಗೂ ಆಗುವುದಿಲ್ಲ. ಆ ಮಾತು ಹಾಗಿರಲಿ ನಾವು ನಿಮ್ಮ ಭಕ್ತರು ಭಕ್ತರ ಭೃತ್ಯನೆಂಬ ಬಿರುದುಳ್ಳ ನೀವು ನನ್ನ ಸಾರಥಿಯಾಗಿ ಸೇವಕನನ್ನು ಕಾಪಾಡಬೇಕು ಎನ್ನುತ್ತಾ ಶ್ರೀಕೃಷ್ಣನ ಪಾದಗಳಿಗೆ ಹಣೆಯನ್ನು ಚಾಚಿದನು.

ಅರ್ಥ:
ದೇವ: ಸುರ, ದಿವಿಜ; ಒಡೆಯ: ಪ್ರಭು, ಯಜಮಾನ; ಹೊಗಳು: ಪ್ರಶಂಸೆ; ವೇದ: ಜ್ಞಾನ; ಅವಳಿ: ಗುಂಪು; ಮಾತು: ವಾಣಿ; ಭಕ್ತ: ಆರಾಧಕ; ಭೃತ್ಯ: ಆಳು, ಸೇವಕ; ಸಾರಥಿ: ಗಾಡಿ ಓಡಿಸುವ; ಕಾವು: ಕಾಪಾಡು; ಹಣೆ: ಲಲಾಟ; ಚಾಚು: ಹರಡು; ಪದ: ಚರಣ;

ಪದವಿಂಗಡಣೆ:
ದೇವ +ಮಾತ್ರವೆ +ನೀವು +ದೇವರ
ದೇವರ+ಒಡೆಯರು +ಹೊಗಳುವರೆ+ ವೇ
ದಾವಳಿಗಳಳವಲ್ಲ+ ಸಾಕಾ +ಮಾತದಂತಿರಲಿ
ನಾವು +ಭಕ್ತರು +ಭಕ್ತ +ಭೃತ್ಯರು
ನೀವು +ಸಾರಥಿಯಾಗಿ +ಭೃತ್ಯನ
ಕಾವುದೆಂದ್+ಅರ್ಜುನನು +ಹಣೆ +ಚಾಚಿದನು +ಹರಿಪದಕೆ

ಅಚ್ಚರಿ:
(೧) ನಾವು ನೀವು – ಪದಗಳ ಬಳಕೆ
(೨) ‘ಭ’ ಕಾರದ ತ್ರಿವಳಿ ಪದ – ಭಕ್ತರು ಭಕ್ತ ಭೃತ್ಯರು
(೩) ಭೃತ್ಯ – ೪, ೫ ಸಾಲಿನ ಕೊನೆ ಪದ

ಪದ್ಯ ೪೩: ನೀವು ನನ್ನನ್ನು ಆಯ್ಕೆಮಾಡಿದ್ದು ಸರಿಯಲ್ಲ ಎಂದು ಕೃಷ್ಣನು ಏಕೆ ಹೇಳಿದನು?

ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವೆದೇನು ಹೇಳೆಂದ (ಉದ್ಯೋಗ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನನಿಗೆ ಹೇಳುತ್ತಾ, ನಮ್ಮಲ್ಲಿ ಏನು ಇಲ್ಲ, ಬರಿಗೈಯಲ್ಲಿ ಬರುವೆವು, ಹಾಗೆ ಬಂದರೆ ನಮಗಾವ ಕೆಲಸ ವಿರುತ್ತದೆ. ಉಂಡಾಡಿಗುಂಡನ ಹಾಗೆ ಕುಳಿತುಕೊಳ್ಳುವುದು ನಮ್ಮ ಸ್ವಭಾವವಲ್ಲ, ನಿಮ್ಮ ಹಂಗಿನಲ್ಲಿರಲು ನಮಗೆ ಇಷ್ಟವಿಲ್ಲ. ನಾನು ದೇವನೆಂದು ನೀವೆಲ್ಲರೂ ಹೇಳುತ್ತೀರಿ, ಆದರೆ ದೇವರ ಲವಲೇಶವು ಇಲ್ಲ. ನಾನು ನಿಮ್ಮ ಜೊತೆ ಬಂದು ಮಾಡುವುದಾದರೂ ಏನು, ಹೇಳು ಎಂದು ಕೃಷ್ಣನು ನುಡಿದನು.

ಅರ್ಥ:
ಬರಿಗೈ: ಏನು ಇಲ್ಲದ ಸ್ಥಿತಿ; ಕೈ: ಕರ, ಹಸ್ತ; ಬರಲು: ಬಂದರೆ; ಕೆಲಸ: ಕಾರ್ಯ; ಕುಳ್ಳಿಹರು: ಕುಳಿತುಕೊಳ್ಳುವರು; ಹಂಗು: ದಾಕ್ಷಿಣ್ಯ, ಆಭಾರ; ಕದನ: ಯುದ್ಧ; ದೇವ: ದೈವತ್ವ ಇರುವ ವ್ಯಕ್ತಿ; ಲವ:ಅಲ್ಪ, ಸ್ವಲ್ಪ; ಬಲ್ಲೆವು: ತಿಳಿ;

ಪದವಿಂಗಡಣೆ:
ನಾವು +ಬರಿಗೈ+ಯವರು +ಬರಲ್+ಎಮಗ್
ಆವುದ್+ಅಲ್ಲಿಯ +ಕೆಲಸ +ಉಂಡುಂ
ಡಾವು +ಕುಳ್ಳಿಹರಲ್ಲ+ ಹಂಗಾಗ್+ಇರೆವು +ಕದನದಲಿ
ದೇವನೆಂದೇ +ನೀವು +ಬಗೆವಿರಿ
ದೇವತನ+ ನಮ್ಮಲ್ಲಿ +ಲವವಿಲ್ಲ
ಆವು +ಬಲ್ಲೆವು +ಬಂದು +ಮಾಡುವೆದೇನು +ಹೇಳೆಂದ

ಅಚ್ಚರಿ:
(೧) ಜೋಡಿ ಪದ – ಬರಿಗೈಯವರು ಬರಲೆಮ;
(೨) ದೇವ – ೫, ೬ ಸಾಲಿನ ಮೊದಲ ಪದ

ಪದ್ಯ ೪೨: ಕೃಷ್ಣನ ಮಾತಿಗೆ ಅರ್ಜುನನ ಉತ್ತರವೇನು?

ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುದಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎಮಗೆ ಶ್ರಮವುಂಟದುನಿಲಲಿಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ (ಉದ್ಯೋಗ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತನ್ನು ಕೇಳಿ ಅರ್ಜುನನು ನಗುತ್ತಾ, ಮನಸ್ಸಿನಲ್ಲಿದ್ದುದನ್ನು ಮುಚ್ಚಿಟ್ಟು ಯಾರಿಗೆ ಈ ಮಾತನ್ನು ಹೇಳುತ್ತಿರುವೆ? ನಿಮ್ಮ ಶಿಷ್ಯನಲ್ಲಿ ಇಂದ್ರಜಾಲ ನಾಟಕವಾಡುವ ಇಚ್ಛೆಯೇ ನಿಮಗೆ? ನಿಮ್ಮ ಗರುಡಿಯ ವರಸೆಗಳು ನಮಗೆ ಗೊತ್ತು. ನನ್ನ ಸೋದರರಿಗೆ ನಿಮ್ಮ ಅಪಾರ ಮಹಿಮೆಯು ಗೊತ್ತಿಲ್ಲವೇ ಎಂದು ಕೇಳಿದನು.

ಅರ್ಥ:
ಎನಲು: ಹೀಗೆ ಹೇಳಲು; ಗಹಗಹಿಸು: ನಕ್ಕು; ಮನ: ಮನಸ್ಸು; ಕದ್ದು: ದೋಚು, ಕಳ್ಳತನ ಮಾಡು; ಆಡು: ಆಟವಾಡು; ನಿಜ: ನೈಜ, ಸತ್ಯ; ಶಿಷ್ಯ: ವಿದ್ಯಾರ್ಥಿ; ನಾಟಕ: ನೈಜವಲ್ಲದ; ಇಂದ್ರಜಾಲ: ಮಾಯಾವಿದ್ಯೆ; ಗರುಡಿ: ವ್ಯಾಯಾಮಶಾಲೆ; ಶ್ರಮ: ಆಯಾಸ; ಅನುಜ: ತಮ್ಮ; ಅಗ್ರಜ: ಅಣ್ಣ; ಅರಿ: ತಿಳಿ; ಅನುಪಮಿತ: ಉಪಮಾತೀತ; ಮಹಿಮ: ಹಿರಿಮೆ ಯುಳ್ಳವನು; ಅವಲಂಬನ: ಆಧಾರ;

ಪದವಿಂಗಡಣೆ:
ಎನಲು +ಗಹಗಹಿಸಿದನ್+ಇದಾರಿಗೆ
ಮನವ +ಕದ್ದ್+ಆಡುದಿರಿ+ ನಿಜ+ ಶಿ
ಷ್ಯನಲಿ +ನಾಟಕದ್+ಇಂದ್ರಜಾಲವೆ +ನಿಮ್ಮ +ಗರುಡಿಯಲಿ
ಎಮಗೆ+ ಶ್ರಮವುಂಟದು+ನಿಲಲಿ+ಯೆನ್ನ
ಅನುಜರ್+ಅಗ್ರಜರ್+ಅರಿಯರೇ +ನಿಮ್ಮ್
ಅನುಪಮಿತ +ಮಹಿಮ +ಅವಲಂಬವನ್+ಎಂದನಾ+ ಪಾರ್ಥ

ಪದ್ಯ ೪೧: ಶ್ರೀಕೃಷ್ಣನು ಅರ್ಜುನನಿಗೆ ಮರುಳೇ ಎಂದು ಏಕೆ ಕರೆದ?

ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದಡೆ
ಮರುಳುಗುಟ್ಟದೆ ಮಾಣ್ಬರೇ ನಿಮ್ಮಣ್ಣ ತಮ್ಮದಿರು (ಉದ್ಯೋಗ ಪರ್ವ, ೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನನ್ನು ನೋಡಿ ಕೃಷ್ಣನು, ಯುದ್ಧಕ್ಕೆ ಬೇಕಾದ ಕತ್ತಿಯನ್ನು ಬಿಟ್ಟು ಕತ್ತಿಯಿಡುವ ಒರೆಯನ್ನು ಆಯ್ದುಕೊಂಡಿರುವೆಯೆಲ್ಲಾ, ನೀನು ಹುಚ್ಚನಲ್ಲವೇ? ಯಾದವ ಸೈನ್ಯವನ್ನು ಬಿಟ್ಟು ಯುದ್ಧ ಮಾಡದ ಈ ಯಾದವನನ್ನು ಆರಿಸಿ ನೀನು ನಿಜಕ್ಕು ಹುಚ್ಚನಂತೆ ವರ್ತಿಸಿದೆ. ಇದನ್ನು ಕೇಳಿದರೆ ನಿನ್ನ ಸೋದರರು ನೀನು ಮರುಳನೆಂದು ಹೇಳುವುದಿಲ್ಲವೇ? ಎಂದು ಶ್ರೀಕೃಷ್ಣನು ಕೇಳಿದನು.

ಅರ್ಥ:
ಸುರಗಿ: ಸಣ್ಣ ಕತ್ತಿ, ಚೂರಿ; ಬಿಸುಟು: ಬಿಸಾಕಿ; ಒರೆ: ಕತ್ತಿಯನ್ನು ಇಡುವ ಸಾಧನ; ಅಂಗೀಕರಿಸು: ಸ್ವೀಕರಿಸು; ಅಂದದ: ಹಾಗೆ; ಆಹವ: ಯುದ್ಧ; ಧುರಭರ: ಜೋರಾದ ಯುದ್ಧ; ಬಲ: ಸೈನ್ಯ; ಒಲ್ಲದೆ: ಒಪ್ಪದೆ; ಮಂದಮತಿ: ಬುದ್ಧಿಹೀನ; ಮರುಳೆ: ಹುಚ್ಚ; ಕಾದದ: ಯುದ್ಧಮಾಡದ; ಬರಿದೆ:ಪಕ್ಕ, ಬದಿ, ವ್ಯರ್ಥವಾದ; ಬಯಸು: ಇಷ್ಟಪಡು; ಕೇಳು: ಆಲಿಸು; ಮರುಳು: ಹುಚ್ಚು; ಮಾಣ್: ಬಿಟ್ಟು; ಅಣ್ಣತಮ್ಮ: ಸೋದರರು;

ಪದವಿಂಗಡಣೆ:
ಸುರಗಿಯನು +ಬಿಸುಟ್+ಒರೆಯನ್+ಅಂಗೀ
ಕರಿಸಿದಂದದಲ್ +ಆಹವದ +ಧುರ
ಭರದ +ಯಾದವ +ಬಲವನೊಲ್ಲದೆ+ ಮಂದಮತಿಯಾಗಿ
ಮರುಳೆ +ಕಾದದ +ಕಟ್ಟದ್+ಎಮ್ಮನು
ಬರಿದೆ + ಬಯಸಿದೆಯಿದನು +ಕೇಳ್ದಡೆ
ಮರುಳುಗುಟ್ಟದೆ +ಮಾಣ್ಬರೇ +ನಿಮ್ಮಣ್ಣ +ತಮ್ಮದಿರು

ಅಚ್ಚರಿ:
(೧) ಧುರಭರ – ಜೋರಾದ ಎಂದು ಅರ್ಥೈಸುವ ಪದದ ಬಳಕೆ
(೨) ಮರುಳೆ, ಮರುಳು – ೪, ೬ ಸಾಲಿನ ಮೊದಲ ಪದ

ಪದ್ಯ ೪೦: ದುರ್ಯೋಧನನು ಯಾರ ಜೊತೆ ಹಸ್ತಿನಾಪುರಕ್ಕೆ ಹೊರಟನು?

ಎನಲು ಕರ ಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತ ಬಲಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸುನಗುತಲಿಂತೆಂದನು ಧನಂಜಯಗೆ (ಉದ್ಯೋಗ ಪರ್ವ, ೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೃಷ್ಣನ ಮಾತುಗಳನ್ನು ಕೇಳಿದ ದುರ್ಯೋಧನನು ನಿಮ್ಮ ಕಾಣಿಕೆ (ಸೈನ್ಯ) ಬಹಳ ಒಳ್ಳೆಯದಾಯಿತೆಂದು ಹೇಳಿ, ಬಲರಾಮ ಕೃತವರ್ಮ ಮುಂತಾದ ಯಾದವರನ್ನು ಭೇಟಿಮಾಡಿ ಸಮಸ್ತ ಯಾದವ ಸೈನ್ಯದೊಡನೆ ಹಸ್ತಿನಾಪುರಕ್ಕೆ ಹೋದನು. ಇತ್ತ ಶ್ರೀಕೃಷ್ಣನು ನಸುನಗುತ್ತಾ ಅರ್ಜುನನ ಬಳಿ ಹೀಗೆ ಹೇಳಿದನು.

ಅರ್ಥ:
ಕರ: ಕಾಣಿಕೆ, ವಿಶೇಷ; ಲೇಸು: ಒಳ್ಳೆಯದು; ಕಳುಹಿಸು: ಬೀಳ್ಕೊಡು; ಕಂಡು: ನೋಡು; ನಿಖಿಳ: ಎಲ್ಲಾ; ವಿನುತ: ಸ್ತುತಿಗೊಂಡ; ಬಲ: ಸೈನ್ಯ; ಸಹಿತ: ಜೊತೆ; ಒಲವು: ಸಂತೋಷ; ಹಾಯಿ: ಹೋಗು; ಬಳಿಕ: ನಂತರ; ದನುಜ: ರಾಕ್ಷಸ; ರಿಪು: ವೈರಿ; ನಸುನಗು: ಮಂದಸ್ಮಿತ;

ಪದವಿಂಗಡಣೆ:
ಎನಲು +ಕರ+ ಲೇಸೆಂದು + ದುರಿಯೋ
ಧನನು +ಕಳುಹಿಸಿಕೊಂಡು +ಬಲರಾ
ಮನನು +ಕೃತವರ್ಮನನು+ ಕಂಡನು +ನಿಖಿಳ +ಯಾದವರ
ವಿನುತ +ಬಲಸಹಿತ+ಒಲವಿನಲಿ+ ಹ
ಸ್ತಿನಪುರಿಗೆ+ ಹಾಯಿದನು +ಬಳಿಕೀ
ದನುಜರಿಪು+ ನಸುನಗುತಲ್+ಇಂತೆಂದನು +ಧನಂಜಯಗೆ

ಅಚ್ಚರಿ:
(೧) ಮೊದಲ ಮೂರು ಸಾಲಿನ ೨ನೇ ಪದ ‘ಕ’ ಕಾರದಿಂದ ಪ್ರಾರಂಭ
(೨) ದನುಜರಿಪು, ಧನಂಜಯ – ೬ ಸಾಲಿನ ಮೊದಲ ಮತ್ತು ಕೊನೆ ಪದ ‘ದ’ ಕಾರದಿಂದ ಪ್ರಾರಂಭ