ಪದ್ಯ ೧೬: ಸಮಸಪ್ತಕರು ಭೀಮಾರ್ಜುನರಿಗೆ ಏನು ಹೇಳಿದರು?

ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ (ಗದಾ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆಗ ಸಮಸಪ್ತಕರು ಸೇನೆಯೊಡನೆ ಸುಶರ್ಮನು ಅರ್ಜುನನನ್ನು ನಿಲ್ಲಿಸಿ ಛೇ ಇದು ಯಾವ ರೀತಿಯ ಮಾತು, ಕೌರವನು ಬಚ್ಚಿಟ್ಟುಕೊಳ್ಳುವವನೇ? ಸುಳ್ಳು, ನಿನ್ನನ್ನು ಸಾಯಿಸಿ ನಿನ್ನ ಮಾಂಸವನ್ನು ಬೇತಾಳರಿಗೆ ಉಣಿಸದೆ ಆತ ಬಿಡುವನೇ? ನೀನೇನು ಮಂಗಳಪಾಥಕನೇ? ಇನ್ನೊಬ್ಬರನ್ನು ಹೀಗಳೆದರೆ ಏನು ಫಲ ಎಂದು ಕೇಳಿದನು.

ಅರ್ಥ:
ಫಡ: ತಿರಸ್ಕಾರದ ಮಾತು; ಅಡಗು: ಬಚ್ಚಿಟ್ಟುಕೋ; ಅಡಗು: ಮಾಂಸ; ತರಿ: ಸೀಳು; ಉಣಬಡಿಸು: ಊಟಕ್ಕೆ ಇಡು; ವೇತಾಳ: ಬೇತಾಳ, ದೆವ್ವ; ಗಡಬಡಿ: ಆತುರ; ಪರರ: ಬೇರೆಯವರ; ಉನ್ನತಿ: ಏಳಿಗೆ; ಕೆಡೆ: ಬೀಳು, ಕುಸಿ; ನುಡಿ: ಮಾತಾಡು; ಫಲ: ಪ್ರಯೋಜನ; ತಡೆ: ನಿಲ್ಲಿಸು; ಸಮಸಪ್ತಕ: ಪ್ರಮಾಣ ಮಾಡಿ ಯುದ್ಧಕ್ಕೆ ಬಂದವರು; ದಳ: ಸೈನ್ಯ; ಸಹಿತ: ಜೊತೆ; ವೈತಾಳಿಕ: ಹೊಗಳುಭಟ್ಟ;

ಪದವಿಂಗಡಣೆ:
ಫಡ +ಫಡ+ಎಲವೋ +ಪಾರ್ಥ +ಕುರುಪತಿ
ಅಡಗುವನೆ +ನಿನ್ನ್+ಅಡಗ +ತರಿದ್+ಉಣ
ಬಡಿಸನೇ +ವೇತಾಳರಿಗೆ+ ವೈತಾಳಿಕನೆ+ ನೀನು
ಗಡಬಡಿಸಿ +ಪರರ್+ಉನ್ನತಿಯ +ಕೆಡೆ
ನುಡಿದು +ಫಲವೇನ್+ಎನುತ +ಪಾರ್ಥನ
ತಡೆದನ್+ಅಂದು +ಸುಶರ್ಮ +ಸಮಸಪ್ತಕರ+ ದಳ +ಸಹಿತ

ಅಚ್ಚರಿ:
(೧) ಅಡಗು, ಅಡಗ; ವೇತಾಳ ವೈತಾಳಿಕ – ಪದಗಳ ಬಳಕೆ
(೨) ದುರ್ಯೋಧನನನ್ನು ಹೊಗಳುವ ಪರಿ – ಕುರುಪತಿಯಡಗುವನೆ ನಿನ್ನಡಗ ತರಿದುಣಬಡಿಸನೇ ವೇತಾಳರಿಗೆ

ಪದ್ಯ ೫೭: ಧರ್ಮರಾಯನನ್ನು ಯಾರಿಗೆ ಶರಣಾಗಲು ಕರ್ಣನು ಹೇಳಿದನು?

ಸಿಕ್ಕಿದೆಯಲಾ ಸ್ವಾಮಿದ್ರೋಹಿಗ
ಳಿಕ್ಕಿ ಹೋದರೆ ಭೀಮ ಫಲುಗುಣ
ರೆಕ್ಕತುಳದಲಿ ತೊಡಕಿ ನೀಗಿದೆಲಾ ನಿಜೋನ್ನತಿಯ
ಚುಕ್ಕಿಗಳು ನಿನ್ನವರ ಮಡುವಿನ
ಲಿಕ್ಕಿ ಕೌರವರಾಯನನು ಮರೆ
ವೊಕ್ಕು ಬದುಕಾ ಧರ್ಮಸುತ ಬಾಯೆಂದನಾ ಕರ್ಣ (ಕರ್ಣ ಪರ್ವ, ೧೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಎಲೈ ಧರ್ಮರಾಯ ನೀನು ನನಗೆ ಸಿಕ್ಕಿಬಿದ್ದೆಯಲಾ! ಸ್ವಾಮಿದ್ರೋಹಿಗಳಾದ ಭೀಮಾರ್ಜುನರು ನಿನ್ನನ್ನು ಒಬ್ಬೊಂಟಿಯಾಗಿ ಬಿಟ್ಟು ಹೋದರೇ? ನನ್ನೊಡನೆ ದ್ವಂದ್ವ ಯುದ್ಧದಲ್ಲಿ ಸೆಣಸಿ ನಿನ್ನ ಹಿರಿಮೆಯನ್ನು ಕಳೆದುಕೊಂಡೆಯಲ್ಲವೇ? ನಿನ್ನವರು ಕ್ಷುದ್ರರು ಅವರನ್ನು ಮಡುವಿನಲ್ಲಿ ಮುಳುಗಿಸಿ ಕೌರವನಿಗೆ ಶರಣಾಗಿ ಬದುಕು, ಬಾ ಎಂದು ಕರ್ಣನು ಯುಧಿಷ್ಠಿರನನ್ನು ಹಂಗಿಸಿದನು.

ಅರ್ಥ:
ಸಿಕ್ಕು: ಅಡ್ಡಿ, ನಿರ್ಬಂಧ; ಸ್ವಾಮಿ: ಒಡೆಯ; ದ್ರೋಹ: ವಿಶ್ವಾಸಘಾತ, ವಂಚನೆ; ಇಕ್ಕು: ಹೊಡಿ, ಬಿಟ್ಟು ಹೋಗು; ಹೋಗು: ತೆರಳು; ಎಕ್ಕ: ಒಂದು; ಅತುಳ: ಹೋಲಿಕೆಯಿಲ್ಲದ; ತೊಡಕು: ಸಿಕ್ಕು, ಗೋಜು; ನೀಗು: ನಿವಾರಿಸಿಕೊಳ್ಳು; ನಿಜ: ದಿಟ; ಉನ್ನತಿ: ಹಿರಿಮೆ; ಚುಕ್ಕಿ: ಕ್ಷುದ್ರರು, ಅಲ್ಪ; ಮಡು: ಕೊಳ, ಸರೋವರ; ರಾಯ: ರಾಜ; ಮರೆವೊಕ್ಕು: ಶರಣಾಗತ; ಬದುಕು: ಜೀವಿಸು; ಬಾ: ಆಗಮಿಸು;

ಪದವಿಂಗಡಣೆ:
ಸಿಕ್ಕಿದೆಯಲಾ +ಸ್ವಾಮಿ+ದ್ರೋಹಿಗಳ್
ಇಕ್ಕಿ +ಹೋದರೆ +ಭೀಮ +ಫಲುಗುಣರ್
ಎಕ್ಕ್+ಅತುಳದಲಿ +ತೊಡಕಿ +ನೀಗಿದೆಲಾ+ ನಿಜ+ಉನ್ನತಿಯ
ಚುಕ್ಕಿಗಳು+ ನಿನ್ನವರ+ ಮಡುವಿನಲ್
ಇಕ್ಕಿ +ಕೌರವರಾಯನನು +ಮರೆ
ವೊಕ್ಕು +ಬದುಕಾ +ಧರ್ಮಸುತ+ ಬಾಯೆಂದನಾ+ ಕರ್ಣ

ಅಚ್ಚರಿ:
(೧) ಸಿಕ್ಕಿ, ಇಕ್ಕಿ, ಚುಕ್ಕಿ – ಪ್ರಾಸ ಪದಗಳು
(೨) ಅಲ್ಪವ್ಯಕ್ತಿಗಳು ಎಂದು ಹೇಳಲು – ಚುಕ್ಕಿಗಳು ಪದದ ಬಳಕೆ

ಪದ್ಯ ೬೯: ರಾಜರ ಸ್ವಭಾವವೇನು?

ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನ ಮತಿ ನಿನಗುಂಟೆ ಭೂಮೀಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೬೯ ಪದ್ಯ)

ತಾತ್ಪರ್ಯ:
ಪರರಿಗೆ ಮನ್ನಣೆ ಮಾಡುವಾಗ ಸಣ್ಣದಾಗಿ (ಅಲ್ಪವಾಗಿ), ಮಾತಿನಲ್ಲಿ ದೊಡ್ಡ ಹಿರಿಮೆಯನ್ನು ಉಂಟುಮಾಡುವುದು, ತನ್ನವರಿಗೆ, ಮಾತಿನಲ್ಲಿ ಹೊಗಳಿಕೆಯಿಲ್ಲ, ಹೆಚ್ಚಿನ ಮನ್ನಣೆಯನ್ನು ಮಾಡುವುದು, ರಾಜರ ಸ್ವಭಾವ. ನಿನಗೆ ವಿಶಾಲ ಮನೋಭಾವವಿದೆಯೋ, ಎಂದು ನಾರದರು ಕೇಳಿದರು.

ಅರ್ಥ:
ಮನ್ನಣೆ:ಗೌರವ; ಅಲ್ಪ: ಸ್ವಲ್ಪ; ನುಡಿ: ಮಾತು; ಉನ್ನತಿ:ಮೇಲ್ಮೆ, ಹಿರಿಮೆ; ಎಸಗು: ಉಂಟುಮಾಡು; ಪರರು: ಅನ್ಯರು; ತನ್ನವರು: ಸ್ವಂತದವರು; ಉಗ್ಗಡ: ಅತಿಶಯ; ಪರಿಕರಣೆ:ಸಿದ್ಧತೆ; ಮಾತು: ವಾಕ್; ಭಿನ್ನ:ಬೇರೆ; ತೋರು: ಕಾಣು; ರಾಯ: ರಾಜ; ಗನ್ನ: ಕಪಟ, ಮೋಸ; ಗತಕ:ಕೃತಕವಾದುದು; ಭೂಮೀಪಾಲ: ರಾಜ;

ಪದವಿಂಗಡಣೆ:
ಮನ್ನಣೆಯೊಳ್+ಅಲ್ಪತೆಯ ನುಡಿಯೊಳಗ್
ಉನ್ನತಿಯನ್+ಎಸಗುವುದು +ಪರರಿಗೆ
ತನ್ನವರಿಗ್+ಉಗ್ಗಡದ +ಪರಿಕರಣೆಯನು +ಮಾತಿನಲಿ
ಭಿನ್ನವನು+ ತೋರುವುದು +ರಾಯರ
ಗನ್ನ+ಗತಕ +ಕಣಾ +ವಿಪುಳ+ ಸಂ
ಪನ್ನ +ಮತಿ +ನಿನಗುಂಟೆ +ಭೂಮೀಪಾಲ +ಕೇಳೆಂದ

ಅಚ್ಚರಿ:
(೧) ರಾಯ, ಭೂಮೀಪಾಲ – ಸಮನಾರ್ಥಕ ಪದಗಳು