ಪದ್ಯ ೫೨: ಕರ್ಣನು ಧರ್ಮರಾಯನನ್ನು ಯಾವ ಮಾತುಗಳಿಂದ ಹಂಗಿಸಿದನು?

ಕಾವನಾರೈ ಕರ್ಣಮುನಿದರೆ
ಜೀವದಲಿ ಕಕ್ಕುಲಿತೆಯೇಕೆ ಶ
ರಾವಳಿಗಳಿವಲಾ ಕರಾಗ್ರದಲುಗ್ರಧನುವಿದಲಾ
ನಾವು ಸೂತನ ಮಕ್ಕಳುಗಳೈ
ನೀವಲೇ ಕ್ಷತ್ರಿಯರು ನಿಮಗೆದು
ದಾವುದಂತರವತಿಬಳರು ನೀವೆನುತ ತೆಗೆದೆಚ್ಚ (ಕರ್ಣ ಪರ್ವ, ೧೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕರ್ಣನು ಕೋಪಗೊಂಡರೆ ನಿಮ್ಮನ್ನು ರಕ್ಷಿಸುವವರಾರು? ಇನ್ನು ಜೀವದ ಮೇಲಿನ ಆಸೆಯೇತಕ್ಕೆ? ಕೈಯಲ್ಲಿ ಉಗ್ರವಾದ ಬಿಲ್ಲಿದೆ ಬತ್ತಳಿಕೆಯಲ್ಲಿ ಬಾಣಗಳಿವೆ, ನೀವೆ ನಿಂತು ನನ್ನನ್ನು ಎದುರಿಸಿ, ಓಹೋ ನಾವದರೂ ಸೂತಪುತ್ರರು, ನೀವು ಕ್ಷತ್ರಿಯರು ಅತಿ ಶಕ್ತಿಶಾಲಿಗಳು! ನಾವೆಲ್ಲಿ ನೀವೆಲ್ಲಿ ಎಂದು ಹೇಳುತ್ತಾ ಕರ್ಣನು ಧರ್ಮಜನ ಮೇಲೆ ಬಾಣ ಪ್ರಯೋಗ ಮಾಡಿದನು.

ಅರ್ಥ:
ಕಾವು: ರಕ್ಷಣೆ; ಮುನಿ: ಕೋಪ; ಜೀವ: ಬದುಕುವ; ಕಕ್ಕುಲಿತೆ: ಚಿಂತೆ, ಪ್ರೀತಿ; ಶರ: ಬಾಣ; ಆವಳಿ: ಸಾಲು, ಗುಂಪು; ಕರ: ಹಸ್ತ; ಅಗ್ರ: ಮುಂಭಾಗ; ಉಗ್ರ: ಭಯಂಕರ; ಧನು: ಬಿಲ್ಲು; ಸೂತ: ರಥವನ್ನು ಓಡಿಸುವವ; ಮಕ್ಕಳು: ಸುತರು; ಕ್ಷತ್ರಿಯ: ರಾಜ್ಯವನ್ನು ಆಳುವ ಪಂಗಡ; ಅಂತರ: ದೂರ; ಬಳರು: ಶಕ್ತಿವಂತರು; ಎಚ್ಚ: ಬಾಣಹೂಡು;

ಪದವಿಂಗಡಣೆ:
ಕಾವನಾರೈ +ಕರ್ಣ+ಮುನಿದರೆ
ಜೀವದಲಿ +ಕಕ್ಕುಲಿತೆ+ಏಕೆ +ಶ
ರಾವಳಿಗಳ್+ಇವಲ್+ಆ+ ಕರಾಗ್ರದಲ್+ಉಗ್ರ+ಧನುವಿದಲಾ
ನಾವು+ ಸೂತನ+ ಮಕ್ಕಳುಗಳೈ
ನೀವಲೇ +ಕ್ಷತ್ರಿಯರು +ನಿಮಗೆದುದ್
ಆವುದ್+ಅಂತರವ್+ಅತಿಬಳರು +ನೀವೆನುತ +ತೆಗೆದೆಚ್ಚ

ಅಚ್ಚರಿ:
(೧) ಧರ್ಮರಾಯನನ್ನು ಹಂಗಿಸುವ ಪರಿ – ನಾವು ಸೂತನ ಮಕ್ಕಳು, ನೀವಲೇ ಕ್ಷತ್ರಿಯಲು, ಅತಿಬಳರು

ನಿಮ್ಮ ಟಿಪ್ಪಣಿ ಬರೆಯಿರಿ