ಪದ್ಯ ೪೧: ಶಲ್ಯನು ಆಯುಧವನ್ನಿಡಿದು ಏನೆಂದು ಗರ್ಜಿಸಿದನು?

ತುಡುಕಿದನು ಬಿಲುಸರಳನಕಟವ
ಗಡಿಸಿದನಲಾ ಧರ್ಮಸುತನು
ಗ್ಗಡದಲೊಂದು ಮುಹೂರ್ತವಾಯಿತೆ ಹಗೆಗೆ ಸುಮ್ಮಾನ
ತೊಡಕಿದೆಡೆಗೆ ಜಯಾಪಜಯ ಸಂ
ಗಡಿಸುವುವು ತಪ್ಪೇನು ಯಮಸುತ
ಹಿಡಿ ಧನುವನನುವಾಗೆನುತ ಮೂದಲಿಸಿದನು ಶಲ್ಯ (ಶಲ್ಯ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶಲ್ಯನು ಚೇತರಿಸಿಕೊಂಡು ತನ್ನ ಬಿಲ್ಲು ಬಾಣಗಳನ್ನು ಹಿಡಿದು, ಎಲಾ! ಧರ್ಮಜ ನನ್ನನ್ನು ಒಂದು ಮುಹೂರ್ತಕಾಲ ಮೂರ್ಛೆಗೊಳಿಸಿ ವೈರಿಗಳಿಗೆ ಸಂತೋಷವನ್ನುಂಟು ಮಾಡಿದನೆ? ಯುದ್ಧದಲ್ಲಿ ಗೆಲುವು ಸೋಲುಗಳಾಗುವುದು ಸಹಜ. ಇದರಲ್ಲೇನು ತಪ್ಪು? ಧರ್ಮಜ ಬಿಲ್ಲು ಹಿಡಿ, ಯುದ್ಧಕ್ಕೆ ಸಿದ್ಧನಾಗು ಎಂದು ಶಲ್ಯನು ಗರ್ಜಿಸಿದನು.

ಅರ್ಥ:
ತುಡುಕು: ಹೋರಾಡು, ಸೆಣಸು; ಬಿಲು: ಬಿಲ್ಲು, ಚಾಪ; ಸರಳು: ಬಾಣ; ಅಕಟ: ಅಯ್ಯೋ; ಅವಗಡಿಸು: ಕಡೆಗಣಿಸು, ಸೋಲಿಸು; ಸುತ: ಮಗ; ಉಗ್ಗಡ: ಅತಿಶಯ; ಮುಹೂರ್ತ: ಒಳ್ಳೆಯ ಸಮಯ, ಕೆಲಕಾಲ, ~೪೮ ನಿಮಿಷಗಳು; ಹಗೆ: ವೈರಿ; ಸುಮ್ಮಾನ: ಸಂತೋಷ, ಹಿಗ್ಗು; ಜಯ: ಗೆಲುವು; ಅಪಜಯ: ಸೋಳು; ಸಂಗಡಿಸು: ಒಟ್ಟಾಗು, ಗುಂಪಾಗು; ತಪ್ಪು: ಸರಿಯಲ್ಲದ್ದ; ಸುತ: ಮಗ; ಹಿಡಿ: ಗ್ರಹಿಸು; ಧನು: ಬಿಲ್ಲು; ಅನುವು: ಸೊಗಸು, ರೀತಿ; ಮೂದಲಿಸು: ಹಂಗಿಸು;

ಪದವಿಂಗಡಣೆ:
ತುಡುಕಿದನು +ಬಿಲು+ಸರಳನ್+ಅಕಟ್+ಅ
ಗಡಿಸಿದನಲಾ+ ಧರ್ಮಸುತನ್+
ಉಗ್ಗಡದಲೊಂದು+ ಮುಹೂರ್ತವಾಯಿತೆ +ಹಗೆಗೆ+ ಸುಮ್ಮಾನ
ತೊಡಕಿದೆಡೆಗೆ+ ಜಯ+ಅಪಜಯ +ಸಂ
ಗಡಿಸುವುವು +ತಪ್ಪೇನು +ಯಮಸುತ
ಹಿಡಿ +ಧನುವನ್+ಅನುವಾಗೆನುತ +ಮೂದಲಿಸಿದನು+ ಶಲ್ಯ

ಅಚ್ಚರಿ:
(೧) ಸೋಲು ಗೆಲುವು ಸಹಜ ಎಂದು ಹೇಳುವ ಪರಿ – ತೊಡಕಿದೆಡೆಗೆ ಜಯಾಪಜಯ ಸಂಗಡಿಸುವುವು

ಪದ್ಯ ೩೯: ಶಲ್ಯನ ಅಂತ್ಯವು ಹೇಗಾಯಿತು?

ಪ್ರಳಯಪವನನ ಹೊಯ್ಲಿನಲಿ ಕಳ
ವಳಿಸಿದಮರಾದ್ರಿಯವೊಲುದುರಿದ
ಬಿಲುಸರಳ ಹೆಗಲೋರೆಗೊರಳರೆಮುಚ್ಚುಗಣ್ಣುಗಳ
ತಳಿತ ರಕ್ತಾಂಕುರದ ಬಳಕೆಗೆ
ಬಳಲಿದಿಂದ್ರಿಯಕುಳದ ಮೂರ್ಛಾ
ವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ (ಶಲ್ಯ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ಪ್ರಳಯದ ಅಂತ್ಯದ ವಾಯುವಿನ ಧಾಳಿಗೆ ಕಳವಳಿಸಿದ ಮೇರು ಪರ್ವತದಂತೆ ಶಲ್ಯನು ಬಿಲ್ಲು ಬಾಣಗಳನ್ನು ಕೈಬಿಟ್ಟನು. ಅವನ ಕೊರಳು ಓರೆಯಾಯಿತು. ರಕ್ತ ಸುರಿದು ಇಂದ್ರಿಯಗಳು ಬಳೈ ರಥದ ಮಧ್ಯದಲ್ಲಿ ಮೂರ್ಛಿತನಾದನು.

ಅರ್ಥ:
ಪ್ರಳಯ: ವಿನಾಶದ ಕಾಲ, ಯುಗದ ಅಂತ್ಯ; ಪವನ: ವಾಯು; ಹೊಯ್ಲು: ಹೊಡೆ; ಕಳವಳ: ಗೊಂದಲ ಅಮರಾದ್ರಿ: ಮೇರು ಪರ್ವತ; ಉದುರು: ಕೆಳಕ್ಕೆ ಬೀಳು; ಬಿಲು: ಬಿಲ್ಲು, ಚಾಪ; ಸರಳು: ಬಾಣ; ಹೆಗಲು: ಭುಜ; ಓರೆ:ವಕ್ರ, ಡೊಂಕು; ಕೊರಳು: ಕಂಠ; ಅರೆ: ಅರ್ಧ; ಮುಚ್ಚು: ಮರೆಮಾಡು, ಹೊದಿಸು; ಕಣ್ಣು: ನಯನ; ತಳಿತ: ಚಿಗುರಿದ; ರಕ್ತ: ನೆತ್ತರು; ಅಂಕುರ: ಮೊಳಕೆ, ಹುಟ್ಟು; ಬಳಕೆ: ಉಪಯೋಗ; ಬಳಲು: ಆಯಾಸಗೊಳ್ಳು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಮೂರ್ಛೆ: ಜ್ಞಾನತಪ್ಪು; ವಿಲಸಿತ:ಅರಳಿದ, ಪ್ರಫುಲ್ಲ; ಅಂಗ: ಭಾಗ; ರಥ: ಬಂಡಿ; ಮಧ್ಯ: ನಡುವೆ;

ಪದವಿಂಗಡಣೆ:
ಪ್ರಳಯ+ಪವನನ +ಹೊಯ್ಲಿನಲಿ +ಕಳ
ವಳಿಸಿದ್+ಅಮರಾದ್ರಿಯವೊಲ್+ಉದುರಿದ
ಬಿಲುಸರಳ +ಹೆಗಲ್+ಓರೆ+ಕೊರಳ್+ಅರೆ+ಮುಚ್ಚು+ಕಣ್ಣುಗಳ
ತಳಿತ +ರಕ್ತಾಂಕುರದ +ಬಳಕೆಗೆ
ಬಳಲಿದ್+ಇಂದ್ರಿಯಕುಳದ +ಮೂರ್ಛಾ
ವಿಲಸಿತಾಂಗದ+ ಶಲ್ಯನಿದ್ದನು +ರಥದ +ಮಧ್ಯದಲಿ

ಅಚ್ಚರಿ:
(೧) ಶಲ್ಯನ ಅಂತ್ಯವನ್ನು ವಿವರಿಸುವ ಪರಿ – ಮೂರ್ಛಾವಿಲಸಿತಾಂಗದ ಶಲ್ಯನಿದ್ದನು ರಥದ ಮಧ್ಯದಲಿ
(೨) ಉಪಮಾನದ ಪ್ರಯೋಗ – ಪ್ರಳಯಪವನನ ಹೊಯ್ಲಿನಲಿ ಕಳವಳಿಸಿದಮರಾದ್ರಿಯವೊಲ್

ಪದ್ಯ ೫೫: ಧರ್ಮರಾಯನ ಸ್ಥಿತಿಯನ್ನು ನೋಡಿ ಯಾರು ಶೋಕ ಪಟ್ಟರು?

ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆ
ತ್ತರ ನಿಹಾರದ ಮೈಯ ಸಡಲಿದ ಕೈಯ ಬಿಲುಸರಳ
ಅರಸನನು ಕಂಡಳಲಿದರು ಚಾ
ಮರದ ಛತ್ರದ ಹಡಪದವರಾ
ಪ್ತರು ವಿಘಾತಿಯಲಂಬಕಿತ್ತರು ಬಹಳ ಶೋಕದಲಿ (ಕರ್ಣ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ಕರ್ಣನ ಬಾಣಗಳ ಪೆಟ್ಟಿನಿಂದ ಧರ್ಮಜನು ಕೆಳಕ್ಕುರುಳಿದನು. ಅವನ ಕಣ್ಣುಗುಡ್ಡೆಗಳು ಅರ್ಧ ಹಿಂದಕ್ಕೆ ತಿರುಗಿದವು. ಕತ್ತು ಓಲಿತು, ರಕ್ತ ಮೈ ಮೇಲೆ ಒಂದೇ ಸಮನಾಗಿ ಹೊರಬರುತ್ತಿತ್ತು, ಕೈಯಲ್ಲಿದ್ದ ಬಿಲ್ಲು ಬಾಣಗಳ ನಿಯಂತ್ರಣ ತಪ್ಪಿ ಸಡಿಲಗೊಂಡವು. ಈ ಸ್ಥಿತಿಯಲ್ಲಿದ್ದ ಧರ್ಮಜನನ್ನು ನೋಡಿ ಛತ್ರ, ಚಾಮರ, ಹಡಪದವರು, ಆಪ್ತರೂ ದುಃಖಿಸಿದರು. ನೆಟ್ಟ ಬಾಣಗಳನ್ನು ಅತ್ಯಂತ ಶೋಕದಿಂದ ಹೊರತೆಗೆಯಲು ಪ್ರಯತ್ನಿಸಿದರು.

ಅರ್ಥ:
ಅರೆ: ಅರ್ಧ; ಮರಳು: ಹಿಂದಕ್ಕೆ ಹೋಗು; ಆಲಿ: ಕಣ್ಣಿನ ಮಧ್ಯೆ ಇರುವ ಕರಿಯ ಗುಡ್ಡೆ; ಹೆಗಲು: ಭುಜ; ಮುರಿ: ಸೀಳು; ಗೋಣು:ಕಂಠ, ಕುತ್ತಿಗೆ; ದುರುದುರಿಪ: ಒಂದೇ ಸಮನಾಗಿ ಹೊರ ಚಿಮ್ಮು; ನೆತ್ತರ: ರಕ್ತ; ನಿಹಾರ: ಮಂಜು; ಮೈ: ತನು, ಶರೀರ; ಸಡಲು: ಬಿಗಿಯಿಲ್ಲದಂತಾಗು, ಶಿಥಿಲ; ಕೈ: ಕರ; ಬಿಲು: ಬಿಲ್ಲು; ಸರಳು: ಬಾಣ; ಅರಸ; ರಾಜ; ಕಂಡು: ನೋಡಿ; ಅಳಲು: ನೋವಾಗು, ಅಳು, ದುಃಖಿಸು; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಛತ್ರ: ಕೊಡೆ; ಹಡಪ: ಕೈಚೀಲ; ಆಪ್ತ: ಬೇಕಾದವರು, ಹತ್ತಿರದವರು; ವಿಘಾತಿ: ಹೊಡೆತ; ಅಂಬು: ಬಾಣ; ಕೀಳು: ಹೊರಕ್ಕೆ ತರು; ಶೋಕ: ದುಃಖ, ದುಗುಡ; ಬಹಳ: ತುಂಬ;

ಪದವಿಂಗಡಣೆ:
ಅರೆ+ಮರಳುವ್+ಆಲಿಗಳ+ ಹೆಗಲಲಿ
ಮುರಿದ +ಗೋಣಿನ +ದುರುದುರಿಪ +ನೆ
ತ್ತರ +ನಿಹಾರದ +ಮೈಯ +ಸಡಲಿದ +ಕೈಯ +ಬಿಲುಸರಳ
ಅರಸನನು +ಕಂಡ್+ಅಳಲಿದರು +ಚಾ
ಮರದ +ಛತ್ರದ +ಹಡಪದವರ್
ಆಪ್ತರು +ವಿಘಾತಿಯಲ್+ಅಂಬ+ಕಿತ್ತರು +ಬಹಳ +ಶೋಕದಲಿ

ಅಚ್ಚರಿ:
(೧) ಅಂಬು, ಸರಳು – ಸಮನಾರ್ಥಕ ಪದ
(೨) ಧರ್ಮರಾಯನ ಸ್ಥಿತಿಯನ್ನು ವರ್ಣಿಸುವ ಸಾಲು – ಅರೆಮರಳುವಾಲಿಗಳ ಹೆಗಲಲಿ
ಮುರಿದ ಗೋಣಿನ ದುರುದುರಿಪ ನೆತ್ತರ ನಿಹಾರದ ಮೈಯ ಸಡಲಿದ ಕೈಯ ಬಿಲುಸರಳ