ಪದ್ಯ ೫೦: ಕೃಷ್ಣನನ್ನು ಸ್ವಾಗತಿಸಲು ಸಿದ್ಧತೆಗಳು ಹೇಗಿದ್ದವು?

ಕಳಸ ಕನ್ನಡಿ ವಾದ್ಯರವ ಮಂ
ಗಳ ಮಹಾಂಬುಧಿ ಮಸಗಿದುದು ಚಾ
ಪಳ ಪತಾಕಾವಳಿಯ ವಿಮಳಚ್ಛತ್ರ ಚಾಮರದ
ಹೊಳೆವ ಕಂಗಳ ಮುಖದ ಕಾಂತಿಯ
ಮೊಲೆಗಳೊಡ್ಡಿನ ಮಂದಗಮನದ
ತಳಿತ ಮುಸುಕಿನ ಮೌಳಿಕಾತಿಯರೆಸೆದರೊಗ್ಗಿನೊಳು (ವಿರಾಟ ಪರ್ವ, ೧೧ ಸಂಧಿ, ೫೦ ಪದ್ಯ)

ತಾತ್ಪರ್ಯ:
ಥಳಥಳಿಸುವ ಕಣ್ಣುಗಳು, ಹೊಳೆವ ಮುಖಕಾಂತಿಯ ಸ್ತ್ರೀಯರು ಮುಸುಕನ್ನು ಹಾಕಿಕೊಂಡು, ಮಂದಗಮನದಿಂದ ಕಳಶ ಕನ್ನಡಿಗಳನ್ನು ಹಿಡಿದು ಬರುತ್ತಿರಲು, ಮಂಗಳವಾದ್ಯಗಳು ಭೋರ್ಗರೆಯುತ್ತಿದ್ದವು. ಛತ್ರ, ಚಾಮರಗಳು ಸಂಭ್ರಮದಿಮ್ದ ಅಲುಗುತ್ತಾ ಮುಂದುವರಿಯುತ್ತಿದ್ದವು. ಶ್ರೀಕೃಷ್ಣನನ್ನು ಇದಿರುಗೊಳ್ಳಲು ಮಹಾಸಂಭ್ರಮದಿಂದ ಪಾಂಡವರು ಪಲ್ಲಕ್ಕಿಗಳಲ್ಲಿ ಬರುತ್ತಿದ್ದರು.

ಅರ್ಥ:
ಕಳಸ: ಕುಂಭ; ಕನ್ನಡಿ: ಮುಕುರ; ವಾದ್ಯ: ಸಂಗೀತದ ಸಾಧನ; ರವ: ಶಬ್ದ; ಮಂಗಳ: ಶುಭ; ಅಂಬುಧಿ: ಸಗರ; ಮಸಗು: ಹರಡು; ಚಾಪಳ: ಚಪಲ; ಪತಾಕ: ಬಾವುಟ; ಆವಳಿ: ಸಾಲು, ಗುಂಪು; ವಿಮಳ: ನಿರ್ಮಲ; ಛತ್ರ: ಕೊಡೆ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಹೊಳೆ: ಪ್ರಕಾಶ; ಕಂಗಳು: ಕಣ್ಣು; ಮುಖ: ಆನನ; ಕಾಂತಿ: ಪ್ರಕಾಶ; ಮೊಳೆ: ಚಿಗುರು, ಅಂಕುರಿಸು, ಮೂಡು; ಒಡ್ಡು: ತೋರು; ಮಂದ: ನಿಧಾನ; ಗಮನ: ಚಲನೆ; ತಳಿತ: ಚಿಗುರು; ಮುಸುಕು: ಹೊದಿಕೆ; ಮೌಳಿ: ಶಿರ; ಮೌಳಿಕಾತಿ: ಶ್ರೇಷ್ಠಳು; ಎಸೆ: ತೋರು; ಒಗ್ಗು: ಗುಂಪು, ಸಮೂಹ;

ಪದವಿಂಗಡಣೆ:
ಕಳಸ+ ಕನ್ನಡಿ+ ವಾದ್ಯ+ರವ +ಮಂ
ಗಳ+ ಮಹಾಂಬುಧಿ +ಮಸಗಿದುದು +ಚಾ
ಪಳ +ಪತಾಕಾವಳಿಯ+ ವಿಮಳ+ಚ್ಛತ್ರ+ ಚಾಮರದ
ಹೊಳೆವ +ಕಂಗಳ +ಮುಖದ +ಕಾಂತಿಯ
ಮೊಲೆಗಳ್+ಒಡ್ಡಿನ +ಮಂದ+ಗಮನದ
ತಳಿತ +ಮುಸುಕಿನ+ ಮೌಳಿಕಾತಿಯರ್+ಎಸೆದರ್+ಒಗ್ಗಿನೊಳು

ಅಚ್ಚರಿ:
(೧) ಶುಭವನ್ನು ಸೂಚಿಸುವ ಪರಿ – ಮಂಗಳ ಮಹಾಂಬುಧಿ ಮಸಗಿದುದು

ಪದ್ಯ ೨೭: ರಾಣಿಯರೇಕೆ ಅಳುಕಿದರು?

ಜನರ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು (ವಿರಾಟ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ದ್ರೌಪದಿಯ ಲಾವಣ್ಯದ ಮೋಹನ ಸಮುದ್ರದಲ್ಲಿ ಜನರ ಅರಿವು ಮುಳುಗಿಹೋಯಿತು. ಅವಳು ರಾಣಿಯ ಮನೆಗೆ ಬರಲು ಅಂತಃಪುರದ ಸ್ತ್ರೀಯರೆಲ್ಲರೂ ಬೆರಗಾಗಿ, ಇವಳು ಮನುಷ್ಯಳಲ್ಲ, ಮನುಷ್ಯ ಸ್ತ್ರೀಯರಿಗೆ ಇಷ್ಟೊಂದು ರೂಪ ಹೇಗೆ ಬಂದೀತು ಇದು ಆಶ್ಚರ್ಯಕರವೆಂದುಕೊಂಡು ಮನಸ್ಸಿನಲ್ಲೇ ತಮ್ಮ ಪಾಡೇನೆಂದಳುಕಿದರು.

ಅರ್ಥ:
ಜನ: ಮನುಷ್ಯ; ಜಾಣ: ಬುದ್ಧಿವಂತಿಕೆ; ಕಾಡು: ಪೀಡಿಸು; ಮೋಹನ: ಭ್ರಾಂತಿಗೊಳಿಸುವ, ಆಕರ್ಷಿಸು; ಮಹಾಂಬುಧಿ: ಸಾಗರ; ನೃಪ: ರಾಜ; ಅಂಗನೆ: ಸ್ತ್ರೀ; ಭವನ: ಆಲಯ; ಬರಲು: ಆಗಮಿಸಲು; ಬೆರಗು: ಆಶ್ಚರ್ಯ; ಅಖಿಳ: ಎಲ್ಲಾ; ನಾರಿ: ಸ್ತ್ರೀ; ವನಿತೆ: ಹೆಣ್ಣು; ಮಾನಿಸೆ: ಮನುಷ್ಯ; ಮನುಜ: ಮಾನವ; ಇನಿತು: ಇಷ್ಟು; ರೂಪ: ಆಕೃತಿ; ವಿಸ್ಮಯ: ಆಶ್ಚರ್ಯ; ಮನ: ಮನಸ್ಸು; ಅಳುಕು: ಹೆದರು; ಈಶ: ಒಡೆಯ; ಅರಸಿ: ರಾಣಿ;

ಪದವಿಂಗಡಣೆ:
ಜನರ +ಜಾಣಕ್+ಕಾಡಲ್+ಆ+ ಮೋ
ಹನ +ಮಹಾಂಬುಧಿಯೊಳಗೆ+ ನೃಪನ್+ಅಂ
ಗನೆಯ +ಭವನಕೆ+ ಬರಲು +ಬೆರಗಾಯ್ತಖಿಳ+ ನಾರಿಯರು
ವನಿತೆ +ಮಾನಿಸೆಯಲ್ಲ +ಮನುಜರಿ
ಗಿನಿತು +ರೂಪೆಲ್ಲಿಯದು+ ವಿಸ್ಮಯ
ವೆನುತ+ ಮನದೊಳಗ್+ಅಳುಕಿದರು+ ಮತ್ಸ್ಯೇಶನ್+ಅರಸಿಯರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಜನರ ಜಾಣಕ್ಕಾಡಲಾ ಮೋಹನ ಮಹಾಂಬುಧಿಯೊಳಗೆ
(೨) ಬ ಕಾರದ ತ್ರಿವಳಿ ಪದ – ಭವನಕೆ ಬರಲು ಬೆರಗಾಯ್ತಖಿಳ
(೩) ನಾರಿ, ವನಿತೆ, ಅಂಗನೆ, ಅರಸಿ – ಸ್ತ್ರೀ, ಹೆಣ್ಣು ಪದದ ರೂಪಗಳ ಪ್ರಯೋಗ

ಪದ್ಯ ೪೦: ಸೈನ್ಯದ ಆಗಮನವನ್ನು ಹೇಗೆ ಹೋಲಿಸಲಾಗಿದೆ?

ಪ್ರಳಯಜಲನಿಧಿಯಂತೆ ದಳ ಬರ
ಲಿಳೆ ಕುಸಿಯೆ ಕಮಠಗೆ ಮೇಲುಸು
ರುಲಿಯೆ ದಿಗುದಂತಿಗಳು ಮೊಣಕಾಲೂರಿ ಮನಗುಂದೆ
ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ ನಡೆದುದು ಕಡುಭರದ ಕಾ
ಲ್ದುಳಿಯ ಕದನಾಳಾಪಕರ ಕಾಹುರತೆ ಹೊಸತಾಯ್ತು (ಉದ್ಯೋಗ ಪರ್ವ, ೧೨ ಸಂದಿ, ೪೦ ಪದ್ಯ)

ತಾತ್ಪರ್ಯ:
ಆ ಸೈನ್ಯವು ಪ್ರಳಯಕಾಲದ ಸಮುದ್ರದಂತೆ ಬರಲು ಭೂಮಿ ಕುಸಿಯಿತು, ಕೂರ್ಮನಿಗೆ ಮೇಲುಸಿರು ಬಂದಿತು, ದಿಗ್ಗಜಗಳು ಮೊಳಕಾಲನ್ನೂರಿ ಖಿನ್ನಮನಸ್ಕವಾದವು. ಸೈನ್ಯವು ಸಮುದ್ರವನ್ನು ಮುಕ್ಕುಳಿಸುತ್ತಾ ನಡೆಯಿತು. ಯುದ್ದಕ್ಕೆ ಕಲುಕೆದರುತ್ತಾ ಹೋಗುವ ಆ ದಳದ ಕೋಪವು ಹೊಸದಾಗಿ ಕಾಣಿಸಿತು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಜಲ: ನೀರು; ಜಲನಿಧಿ: ಸಮುದ್ರ; ದಳ: ಸೈನ್ಯ; ಬರಲು: ಆಗಮಿಸಲು; ಇಳೆ: ಭೂಮಿ; ಕುಸಿ: ಕೆಳಗೆ ಬೀಳು; ಕುಗ್ಗು, ಕುಂದು; ಕಮಠ:ಕೂರ್ಮ; ಮೇಲೆ: ಎತ್ತರ; ಉಸಿರು: ಶ್ವಾಸ, ವಾಯು; ಉಲಿ:ಧ್ವನಿ; ದಿಗು: ದಿಕ್ಕು; ದಂತಿ: ಆನೆ; ದಿಗುದಂತಿ: ದಿಗ್ಗಜ; ಮೊಣಕಾಲು: ಮಂಡಿ; ಊರು: ನೆಲೆಸು; ಮನ: ಮನಸ್ಸು; ಕುಂದು: ಕೊರತೆ, ನೂನ್ಯತೆ; ಬಲ: ಸೈನ್ಯ; ಮಹಾಂಬುಧಿ: ಮಹಾಸಾಗರ; ಬಲು: ಬಹಳ; ಕಡಲ: ಸಾಗರ, ಸಮುದ್ರ; ಮುಕ್ಕುಳಿಸು: ಎಡವು; ನಡೆ: ಚಲಿಸು; ಕಡು: ವಿಶೇಷ, ಅಧಿಕ; ಭರ: ವೇಗ; ಕಾಲ್ದುಳಿ: ಕಾಲಿನಿಂದ ತುಳಿ, ಅಪ್ಪಳಿಸು; ಕದನ: ಯುದ್ಧ; ಆಲಾಪ: ವಿಸ್ತಾರ; ಕಾಹುರ: ಕಾಲಿನಿಂದ ದಾಟುವ ಸಣ್ಣ ಹೊಳೆ; ಹೊಸ: ನವೀನ;

ಪದವಿಂಗಡಣೆ:
ಪ್ರಳಯ+ಜಲನಿಧಿಯಂತೆ +ದಳ+ ಬರಲ್
ಇಳೆ +ಕುಸಿಯೆ+ ಕಮಠಗೆ +ಮೇಲ್+ಉಸುರ್
ಉಲಿಯೆ +ದಿಗುದಂತಿಗಳು +ಮೊಣಕಾಲೂರಿ +ಮನಗುಂದೆ
ಬಲಮಹಾಂಬುಧಿ+ ಬಲುಗಡಲ+ ಮು
ಕ್ಕುಳಿಸಿ+ ನಡೆದುದು +ಕಡುಭರದ+ ಕಾ
ಲ್ದುಳಿಯ+ ಕದನ+ಆಳಾಪಕರ+ ಕಾಹುರತೆ+ ಹೊಸತಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಪ್ರಳಯಜಲನಿಧಿಯಂತೆ; ಇಳೆ ಕುಸಿಯೆ ಕಮಠಗೆ ಮೇಲುಸು
ರುಲಿಯೆ; ದಿಗುದಂತಿಗಳು ಮೊಣಕಾಲೂರಿ ಮನಗುಂದೆ; ಬಲಮಹಾಂಬುಧಿ ಬಲುಗಡಲ ಮು
ಕ್ಕುಳಿಸಿ
(೨) ‘ಕ’ಕಾರದ ಸಾಲು ಪದ – ಕಡುಭರದ ಕಾಲ್ದುಳಿಯ ಕದನಾಳಾಪಕರ ಕಾಹುರತೆ
(೩) ಜಲನಿಧಿ, ಅಂಬುಧಿ, ಕಡಲ – ಸಮುದ್ರದ ಸಮನಾರ್ಥಕ ಪದಗಳು