ಪದ್ಯ ೧೬: ದುಂಬಿಗಳನ್ನು ಯಾರು ನೂಕಿದರು?

ವಿನುತ ಸುಕವಿಯ ಸೂಕ್ತಿ ತಾಗಿದ
ಮುನಿಗಳಂತಃಕರಣದಂತಿರೆ
ಹೊನಲುವರಿದವು ಚಂದ್ರಕಾಂತದ ಸಾಲಶಿಲೆ ಕರಗಿ
ಮನದ ಕತ್ತಲೆ ಗುರುವರನ ವಾ
ಕ್ಕಿನಲಿ ತೊಲಗುವವೋಲು ತುಂಬಿಯ
ತನತನಗೆ ನೂಕಿದವು ವಿಕಸಿತ ಕೈರವಾದಿಗಳು (ದ್ರೋಣ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಸುಜ್ಞಾನಿಯ ಸೂಕ್ತಿಯು ಸೊಗಸಿದ ಮುನಿಗಳಂತಃಕರಣದಂತೆ ಚಂದ್ರಕಾಂತ ಶಿಲೆಗಳ ಸಾಲು ಕರಗಿ ಹಳ್ಳ ಹರಿದವು. ಮನಸ್ಸಿನ ಕತ್ತಲೆಯು ಗುರು ಉಪದೇಶದಿಂದ ತೊಲಗುವಂತೆ, ಅರಳಿದ ಕುಮುದಗಳು ದುಂಬಿಗಳನ್ನು ನೂಕಿದವು.

ಅರ್ಥ:
ವಿನುತ: ಸ್ತುತಿಗೊಂಡ; ಕವಿ: ಕಾವ್ಯವನ್ನು ರಚಿಸುವವ; ಸೂಕ್ತಿ: ಒಳ್ಳೆಯ ಮಾತು; ತಾಗು: ಮುಟ್ಟು; ಮುನಿ: ಋಷಿ; ಅಂತಃಕರಣ: ಮನಸ್ಸು; ಹೊನಲು: ಪ್ರವಾಹ, ನೀರೋಟ; ಚಂದ್ರಕಾಂತ: ಬೆಳದಿಂಗಳಿನಲ್ಲಿ ದ್ರವಿಸುವುದೆಂದು ಭಾವಿಸಲಾದ ಒಂದು ಬಗೆಯ ಬಿಳಿಯ ಕಲ್ಲು; ಶಿಲೆ: ಕಲ್ಲು; ಕರಗು: ಮಾಯವಾಗು; ಮನ: ಮನಸ್ಸು; ಕತ್ತಲೆ: ಅಂಧಕಾರ; ಗುರು: ಆಚಾರ್ಯ; ವರ: ಶ್ರೇಷ್ಠ; ವಾಕ್ಕು: ಮಾತು; ತೊಲಗು: ಹೊರಹಾಕು; ತುಂಬಿ: ಭ್ರಮರ; ನೂಕು: ತಳ್ಳು; ವಿಕಸಿತ: ಅರಳಿದ; ಕೈರವ: ಬಿಳಿಯ ನೈದಿಲೆ, ನೀಲಕಮಲ; ಆದಿ: ಮುಂತಾದ;

ಪದವಿಂಗಡಣೆ:
ವಿನುತ +ಸುಕವಿಯ +ಸೂಕ್ತಿ +ತಾಗಿದ
ಮುನಿಗಳ್+ಅಂತಃಕರಣದಂತಿರೆ
ಹೊನಲುವ್+ಅರಿದವು+ ಚಂದ್ರಕಾಂತದ +ಸಾಲಶಿಲೆ +ಕರಗಿ
ಮನದ +ಕತ್ತಲೆ +ಗುರುವರನ +ವಾ
ಕ್ಕಿನಲಿ +ತೊಲಗುವವೋಲು +ತುಂಬಿಯ
ತನತನಗೆ+ ನೂಕಿದವು +ವಿಕಸಿತ +ಕೈರವಾದಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ವಿನುತ ಸುಕವಿಯ ಸೂಕ್ತಿ ತಾಗಿದಮುನಿಗಳಂತಃಕರಣದಂತಿರೆ; ಮನದ ಕತ್ತಲೆ ಗುರುವರನ ವಾಕ್ಕಿನಲಿ ತೊಲಗುವವೋಲು

ಪದ್ಯ ೨೪: ದ್ರೌಪದಿಯು ವಿರಾಟ ನಗರಕ್ಕೆ ಹೇಗೆ ಬಂದಳು?

ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ
ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳಢಾಳವೊಪ್ಪಿರೆ ಬಂದಳಬುಜಮುಖಿ (ವಿರಾಟ ಪರ್ವ, ೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಸೂರ್ಯನಿಗೆ ಹೆದರಿ ಚಂದ್ರನು ಕತ್ತಲೆಯ ತೆಕ್ಕೆಗಳನ್ನು ಮರೆಮಾಡಿಟ್ಟನೋ ಎಂಬಂತೆ ದ್ರೌಪದಿಯ ಮುಡಿ ಕೂದಲುಗಳು ಕಂಡವು. ಸೂರ್ಯನ ತಾಪಕ್ಕೆ ಮತ್ತೆ ಹೆದರಿ ಕನ್ನೈದಿಲೆಯನ್ನು ಇಟ್ಟಿರುವನೋ ಎಂಬಂತಹ ಕಣ್ಣುಗಳು, ಕಂಗಳ ಕಾಂತಿ ಹೊಳೆಯುತ್ತಿರಲು ದ್ರೌಪದಿಯು ವಿರಾಟ ನಗರದಲ್ಲಿ ಬರುತ್ತಿದ್ದಳು.

ಅರ್ಥ:
ತರಣಿ: ಸೂರ್ಯ; ಅಂಜು: ಹೆದರು; ಇಂದು: ಚಂದ್ರ; ತಲೆ: ಶಿರ; ಕಾಯ್ದು: ಕಾಪಾಡು; ಮರೆ: ಕಾಣದಾಗು; ತಿಮಿರ: ಕತ್ತಲು; ಹೊರಳು: ತಿರುವು, ಬಾಗು; ಮುಡಿ: ಶಿರ; ಮೋಹ: ಆಕರ್ಷಣೆ, ಸೆಳೆತ, ಭ್ರಾಂತಿ; ವೇಣಿ: ಜಡೆ, ತರುಬು; ವಲ್ಲರಿ: ಬಳ್ಳಿ; ಹಿರಿದು: ದೊಡ್ಡ; ಸೈರಿಸು: ತಾಳು, ಸಹಿಸು; ಇರಿಸು: ಇಡು; ಕೈರವ: ಬಿಳಿಯ ನೈದಿಲೆ, ನೀಲಕಮಲ; ಕಂಗಳು: ಕಣ್ಣು, ನಯನ; ಢಾಳ: ಕಾಂತಿ, ಪ್ರಕಾಶ; ಬಂದು: ಆಗಮಿಸು; ಅಬುಜಮುಖಿ: ಕಮಲದಂತ ಮುಖವುಳ್ಳವಳು;

ಪದವಿಂಗಡಣೆ:
ತರಣಿಗ್+ಅಂಜಿದಡ್+ಇಂದು+ ತಲೆ+ಕಾ
ಯ್ದಿರಿಸಿದನೊ+ ಮರೆಯಾಗಿ+ ತಿಮಿರದ
ಹೊರಳಿಗಳನ್+ಎನೆ+ ಮುಡಿಗೆ +ಮೋಹಿದ +ವೇಣಿ+ವಲ್ಲರಿಯ
ಹಿರಿದು +ಸೈರಿಸಲಾರೆನೆಂದ್+ಒಡ
ನಿರಿಸಿದನೊ +ಕೈರವವನ್+ಎನಲ್+ಎಂದ್
ಅರರೆ +ಕಂಗಳ+ಢಾಳ+ವೊಪ್ಪಿರೆ +ಬಂದಳ್+ಅಬುಜಮುಖಿ

ಅಚ್ಚರಿ:
(೧) ಉಪಮಾನಗಳ ಬಳಕೆ – ತರಣಿಗಂಜಿದಡಿಂದು ತಲೆಗಾಯ್ದಿರಿಸಿದನೊ; ಹಿರಿದು ಸೈರಿಸಲಾರೆನೆಂದೊಡ
ನಿರಿಸಿದನೊ ಕೈರವವ

ಪದ್ಯ ೧೫: ರವಿಯ ಉದಯವು ಹೇಗಾಯಿತು?

ಅರಸ ಕೇಳಭ್ಯುದಿತವಾದುದು
ಸರಸ ಕೈರವ ರಾಜಿ ಕೋಮಲ
ಸರಸಿರುಹವನವಾದುದಾಕ್ಷಣ ಸುರಭಿ ನಿರ್ಮುಕ್ತ
ಕಿರಣ ತೋಮರ ದಕ್ಷಿಣೋರು
ಸ್ಫುರಣ ತಿಮಿರ ಮೃಗೀಕದಂಬಕ
ತರಣಿ ನೂಕಿದನುದಯಶೈಲಕೆ ರತುನಮಯ ರಥವ (ಕರ್ಣ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೂರ್ಯೋದಯವನ್ನು ಬಹಳ ಸುಂದರವಾಗಿ ವರ್ಣಿಸಲಾಗಿದೆ. ಸಂಜಯನು ಧೃತರಾಷ್ಟ್ರನಿಗೆ ಯುದ್ಧದ ಸಂಗತಿ ಹೇಳುತ್ತಾ, ನೀರಿನಲ್ಲರಳಿದೆ ನೈದಿಲೆಗಳು ಮುಚ್ಚಿದವು, ಮೃದುವಾದ ತಾವರೆ ವನಗಳ ಸುಗಂಧವು ಸ್ವಚ್ಛಂದವಾಗಿ ಎಲ್ಲೆಡೆ ಹರಡಿತು. ತನ್ನ ಕಿರಣಗಳೆಂಬ ಬಾಣವನ್ನು ತನ್ನ ಬಲಗೈಯಲ್ಲಿ ಹಿಡಿದು, ಕತ್ತಲೆಯ ಮೃಗಗಳನ್ನು ಬೇಟೆಯಾಡಲು ಸೂರ್ಯನ್ ಉದಯಾಚಲಕ್ಕೆ ರತ್ನಮಯ ರಥದಲ್ಲಿ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಅಭ್ಯುದಿತ: ಇಳಿಗೆ; ಸರಸ: ನೀರು; ಕೈರವ: ನೈದಿಲೆ, ನೀಲಕಮಲ; ರಾಜಿ: ಗುಂಪು, ಸಮೂಹ; ಕೋಮಲ: ಮೃದು ಸರಸಿರುಹ: ಕಮಲ; ವನ: ಕಾಡು, ಬನ; ಸುರಭಿ: ಸುಗಂಧ; ನಿರ್ಮುಕ್ತ: ಸಂಪೂರ್ಣವಾಗಿ ಮುಕ್ತಿ ಹೊಂದಿದ; ಕಿರಣ: ರಶ್ಮಿ, ಬೆಳಕಿನ ಕದಿರು; ತೋಮರ: ತಿದಿಯಲ್ಲಿ ಅರ್ಧಚಂದ್ರಾಕೃತಿಯಲ್ಲಿರುವ ಒಂದು ಬಗೆಯ ಬಾಣ, ಈಟಿಯಂತಿರುವ ಆಯುಧ; ದಕ್ಷಿಣ: ಬಲ; ಉರ: ಎದೆ, ವಕ್ಷಸ್ಥಳ; ಸ್ಫುರಣ:ಹೊಳಪು, ಅಲುಗಾಟ; ತಿಮಿರ: ಕತ್ತಲು; ಮೃಗೀಕ: ಮೃಗಗಳು; ಕದಂಬಕ: ಸಮೂಹ; ನೂಕು: ತಳ್ಳು; ಉದಯ: ಹುಟ್ಟು; ಶೈಲ: ಬೆಟ್ಟ; ರತುನ: ರತ್ನ, ಬೆಲೆಬಾಳುವ ಮಣಿ; ರಥ: ತೇರು;

ಪದವಿಂಗಡಣೆ:
ಅರಸ +ಕೇಳ್+ಅಭ್ಯುದಿತ+ವಾದುದು
ಸರಸ+ ಕೈರವ+ ರಾಜಿ +ಕೋಮಲ
ಸರಸಿರುಹ+ವನವಾದುದ್+ಆ ಕ್ಷಣ+ ಸುರಭಿ +ನಿರ್ಮುಕ್ತ
ಕಿರಣ+ ತೋಮರ+ ದಕ್ಷಿಣೋರು
ಸ್ಫುರಣ+ ತಿಮಿರ +ಮೃಗೀಕದಂಬಕ
ತರಣಿ +ನೂಕಿದನ್+ಉದಯಶೈಲಕೆ+ ರತುನಮಯ+ ರಥವ

ಅಚ್ಚರಿ:
(೧) ಸೂರ್ಯೋದಯವನ್ನು ಕೈರವ, ತಾವರೆಗಳ ಮೂಲಕ ವಿವರಿಸಿರುವುದು