ಪದ್ಯ ೬೫: ಅಭಿಮನ್ಯುವಿನ ಕಾಯವನ್ನು ಎಲ್ಲಿಗೆ ತರಲಾಯಿತು?

ಹಲವು ಗಜಗಳು ಸಿಂಹ ಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನ ಮರಿಯ ಮುರಿದವೊಲಾಯಿತಕಟೆನುತ
ಅಳಲಿದುದು ಸುರ ಕಟಕವವನಿಯೊ
ಳಿಳಿದರಪ್ಸರ ಗಣಿಕೆಯರು ಕೋ
ಮಳನ ತಂದರು ವಾಸವನ ಸಿಂಹಾಸನದ ಹೊರೆಗೆ (ದ್ರೋಣ ಪರ್ವ, ೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅನೇಕ ಆನೆಗಳು ಸೇರಿ ಒಂದು ಸಿಂಹದ ಮರಿಯನ್ನು ಕೊಂದಹಾಗೆ, ಹಾವಿನ ಬಳಗವು ಗರುಡನ ಮರಿಯನ್ನು ಸಾಯಿಸಿದ ಹಾಗೆ ಅಭಿಮನ್ಯುವಿನ ಸಾವು ಎಂದು ಆಕಾಶದಲ್ಲಿ ದೇವತೆಗಳು ದುಃಖಿಸಿದರು. ಅಪ್ಸರೆಯರು ಕೋಮಲಕಾಯದ ಅಭಿಮನ್ಯುವನ್ನು ದೇವೇಂದ್ರನ ಸಿಂಹಾಸನದ ಬಳಿಗೆ ಕರೆ ತಂದರು.

ಅರ್ಥ:
ಹಲವು: ಬಹಳ; ಗಜ: ಆನೆ; ಸಿಂಹ: ಕೇಸರಿ; ಶಿಶು: ಚಿಕ್ಕಮರಿ; ಗೆಲಿದು: ಜಯಿಸು; ಪರಿ: ರೀತಿ; ಹಾವು: ಉರಗ; ಬಳಗ: ಗುಂಪು; ಗರುಡ: ವಿಷ್ಣುವಿನ ವಾಹನ; ಮರಿ: ಚಿಕ್ಕದ್ದು; ಮುರಿ: ಸಾಯಿಸು; ಅಕಟ: ಅಯ್ಯೋ; ಅಳಲು: ದುಃಖಿಸು; ಸುರ: ದೇವತೆ; ಕಟಕ: ಗುಂಪು; ಅವನಿ: ಭೂಮಿ; ಅಪ್ಸರೆ: ದೇವತಾ ಸ್ತ್ರೀ; ಗಣಿಕೆ: ವೇಶ್ಯೆ; ಕೋಮಳ: ಮೃದು; ವಾಸವ: ಇಂದ್ರ; ಸಿಂಹಾಸನ: ಪೀಠ; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಹಲವು +ಗಜಗಳು +ಸಿಂಹ +ಶಿಶುವನು
ಗೆಲಿದ +ಪರಿಯಂತಾಯ್ತು +ಹಾವಿನ
ಬಳಗ+ ಗರುಡನ+ ಮರಿಯ +ಮುರಿದವೊಲ್+ಆಯಿತ್+ಅಕಟೆನುತ
ಅಳಲಿದುದು +ಸುರ +ಕಟಕವ್+ಅವನಿಯೊಳ್
ಇಳಿದರ್+ಅಪ್ಸರ +ಗಣಿಕೆಯರು +ಕೋ
ಮಳನ +ತಂದರು +ವಾಸವನ+ ಸಿಂಹಾಸನದ +ಹೊರೆಗೆ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಹಲವು ಗಜಗಳು ಸಿಂಹ ಶಿಶುವನುಗೆಲಿದ ಪರಿ; ಹಾವಿನ ಬಳಗ ಗರುಡನ ಮರಿಯ ಮುರಿದವೊಲ್

ಪದ್ಯ ೪೦: ವೀರರನ್ನು ಹೇಗೆ ಹುರುದುಂಬಿಸುತ್ತಿದ್ದರು?

ಕುಣಿವ ತೊಡರಿನ ಪೆಂಡೆಯದ ಡೊಂ
ಕಣಿಯ ಬಿರುದರ ನೂಕುನೂಕೆನೆ
ಹಿಣಿಲ ಬಾವುಲಿಗಾರರಾವೆಡೆ ಭಾಷೆಯತಿಬಲರು
ಹೊಣಕೆಯಿದಲೇ ಹಿಂದ ಹಾರದಿ
ರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು (ಭೀಷ್ಮ ಪರ್ವ, ೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಾಲಿಗೆ ಬಿರುದಿನ ಖಡ್ಗವನ್ನು ಕಟ್ಟಿದವರನ್ನು ಡೊಂಕಣಿಯವರನ್ನು ಯುದ್ಧಕ್ಕೆ ಕಳಿಸು ಎಂದಪ್ಪಣೆಯಾಯಿತು. ಹಿಣಿಲು ಬಾವಲಿ ಹಾಕಿದ ಮಾತಿನ ವೀರರೆಲ್ಲಿ? ಮುನ್ನುಗ್ಗುವ ಸಮಯವಿದು, ಹಿಂದಿನವರನ್ನು ಬಯಸಬೇಡಿ, ನಿಮ್ಮನ್ನು ಅಣಕಿಸುತ್ತಿಲ್ಲ ಅಪ್ಸರ ಸ್ತ್ರೀಯರು ನಿಮ್ಮ ಸಂಗವನ್ನು ಬಯಸುತ್ತಿದ್ದಾರೆ ಮುನ್ನುಗ್ಗಿರಿ ಎಂದು ರಣಡಂಗುರವನ್ನು ಸಾರಿದರು.

ಅರ್ಥ:
ಕುಣಿ: ನರ್ತಿಸು; ತೊಡರು: ಬಿರುದಿನ ಸಂಕೇತವಾಗಿ ಧರಿಸುವ ಕಾಲ ಬಳೆ; ಪೆಂಡೆಯ: ಕಾಲಿನ ಖಡ್ಗ; ಡೊಂಕಣಿ: ಈಟಿ; ಬಿರುದು: ಗೌರವಸೂಚಕ ಪದ; ನೂಕು: ತಳ್ಳು; ಹಿಣಿಲು: ಹೆರಳು, ಜಡೆ; ಬಾವುಲಿ: ಒಂದು ಬಗೆಯ ಕಿವಿಯಾಭರಣ; ಭಾಷೆ: ಮಾತು; ಅತಿಬಲ: ಪರಾಕ್ರಮಿ; ಹೊಣಕೆ: ಜೊತೆ, ಜೋಡಿ; ಹಿಂದ: ಹಿಂಭಾಗ; ಹಾರು: ಎದುರುನೋಡು; ಅಣಕಿಸು: ಹಂಗಿಸು; ಮಾತು: ವಾಣಿ; ದಿವಿಜ: ದೇವತೆ; ಗಣಿಕೆ: ವೇಶ್ಯೆ; ದಿವಿಜರಗಣಿಕೆ: ಅಪ್ಸರೆ; ಬಯಸು: ಆಸೆಪಡು; ಸಾರು: ಹರಡು;

ಪದವಿಂಗಡಣೆ:
ಕುಣಿವ +ತೊಡರಿನ+ ಪೆಂಡೆಯದ+ ಡೊಂ
ಕಣಿಯ +ಬಿರುದರ +ನೂಕುನೂಕ್+ಎನೆ
ಹಿಣಿಲ +ಬಾವುಲಿಗಾರರ್+ಆವೆಡೆ +ಭಾಷೆ+ಅತಿಬಲರು
ಹೊಣಕೆಯಿದಲೇ +ಹಿಂದ +ಹಾರದಿರ್
ಅಣಕಿಸುವ +ಮಾತಿಲ್ಲ +ದಿವಿಜರ
ಗಣಿಕೆಯರು +ಬಯಸುವರು +ನೂಕುವದೆಂದು +ಸಾರಿದರು

ಅಚ್ಚರಿ:
(೧) ವೀರಸ್ವರ್ಗ ಲಭಿಸುವುದು ಎಂದು ಹೇಳುವ ಪರಿ – ಹಿಂದ ಹಾರದಿರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು

ಪದ್ಯ ೨೬: ಊರ್ವಶಿಯು ಅರ್ಜುನನಿಗೆ ಏನು ಹೇಳಿದಳು?

ಪ್ರಣವದರ್ಥವಿಚಾರವೆತ್ತಲು
ಗಣಿಕೆಯರ ಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತವರ್ಷದವದಿರ
ಭಣಿತ ನಮ್ಮೀ ದೇವಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು, ಅರ್ಜುನ, ವೇಶ್ಯೆಯರ ಮನೆಯ ಸಂಗೀತದ ತಾಳದ ಗಣಿತವೆಲ್ಲಿ, ಓಂಕಾರದ ಅರ್ಥದ ವಿಚಾರವೆಲ್ಲಿ, ಸಂದರ್ಭದಲ್ಲಿ ಜೊಳ್ಳುಗಳಾದ ಭಾರತ ವರ್ಷದವರ ಮಾತು, ನಮ್ಮ ಚೈತ್ರರಥ ಉದ್ಯಾನಕ್ಕೂ, ಸಣಬಿನ ಹೊಲಕ್ಕು ಹೋಲಿಕೆಯಿದ್ದ ಹಾಗೆ ಎಂದು ಊರ್ವಶಿ ಉತ್ತರಿಸಿದಳು.

ಅರ್ಥ:
ಪ್ರಣವ: ಓಂಕಾರ; ಅರ್ಥ: ಶಬ್ದದ ಅಭಿಪ್ರಾಯ; ವಿಚಾರ: ವಿಮರ್ಶೆ; ಗಣಿಕೆ: ವೇಶ್ಯೆ; ಮನೆ: ಆಲಯ; ಸ್ವರಾಕ್ಷರ: ಸಂಗೀತ; ಗಣಿತ: ಲೆಕ್ಕಾಚಾರ; ಲಕ್ಷಣ: ಗುರುತು, ಚಿಹ್ನೆ; ರತಿಕೇಳಿ: ಸುರತಕ್ರೀಡೆ, ಸಂಭೋಗ; ಕೇಳು: ಆಲಿಸು; ವಿಧಾನ: ರೀತಿ; ಬಣಗು: ಅಲ್ಪವ್ಯಕ್ತಿ; ಭಣಿತೆ: ಸಂಭಾಷಣೆ, ಮಾತುಕತೆ; ದೇವಲೋಕ: ಸ್ವರ್ಗ; ಸಣಬು: ಒಂದು ಬಗೆಯ ಸಸ್ಯ; ಚೈತ್ರ:ವಸಂತಮಾಸ; ರಥ: ಬಂಡಿ; ಚೈತ್ರರಥ: ಅರಳಿರುವ ಗಿಡಮರಗಳ ಉದ್ಯಾನ; ಇಂದುಮುಖಿ: ಚಂದ್ರನನಂತ ಮುಖವುಳ್ಳವಳು;

ಪದವಿಂಗಡಣೆ:
ಪ್ರಣವದ್+ಅರ್ಥ+ವಿಚಾರವ್+ಎತ್ತಲು
ಗಣಿಕೆಯರ +ಮನೆಯ +ಸ್ವರಾಕ್ಷರ
ಗಣಿತ +ಲಕ್ಷಣವೆತ್ತ+ ರತಿಕೇಳೀ+ ವಿಧಾನದಲಿ
ಬಣಗು +ಭಾರತವರ್ಷದ್+ಅವದಿರ
ಭಣಿತ +ನಮ್ಮೀ +ದೇವಲೋಕಕೆ
ಸಣಬಿನಾರವೆ+ ಚೈತ್ರರಥದೊಳಗ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಣಬಿನಾರವೆ ಚೈತ್ರರಥದೊಳಗೆ
(೨) ಹೋಲಿಸುವ ಪರಿ – ಪ್ರಣವದರ್ಥವಿಚಾರವೆತ್ತಲುಗಣಿಕೆಯರ ಮನೆಯ ಸ್ವರಾಕ್ಷರ ಗಣಿತ ಲಕ್ಷಣವೆತ್ತ

ಪದ್ಯ ೨: ದುರ್ಯೋಧನನು ದಾಸಿಯರನ್ನು ಯಾಕೆ ದೂರವಿಟ್ಟನು

ಆರತಿಯ ಗಣಿಕೆಯರ ಸುಳಿವು
ಪ್ಪಾರತಿಯ ದಾದಿಯರ ಪಾಯವ
ಧಾರು ಸೂಳಾಯತರ ಮಂಗಳ ವಚನದೈದೆಯರ
ದೂರದಲಿ ನಿಲಿಸಿದನು ಭಂಗದ
ಭಾರಣೆಯ ಬಿಸುಸುಯ್ಲ ಸೂರೆಯ
ಸೈರಣೆಯ ಸೀವಟದ ಸಿರಿಮಂಚದಲಿ ಪವಡಿಸಿದ (ಸಭಾ ಪರ್ವ, ೧೩ ಸಂಧಿ, ೨ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಅರಮನೆಯನ್ನು ಪ್ರವೇಶಿಸುತ್ತಿರುವುದನ್ನು ತಿಳಿದ ದಾಸಿಯರು ಆರತಿ, ಉಪ್ಪಾರತಿ ಯನ್ನು ತಂದರು, ಹೊಗಳುಭಟ್ಟರು ಮಂಗಳವಚನವನ್ನು ಹೇಳಲು ಮುಂದಾದರು, ಅಲ್ಲಿಗೆ ಬಂದಿದ್ದ ದಾಸಿಯರು, ಗಣಿಕೆಯರು, ಸೇವಕಿಯರು, ವಂದಿ ಮಾಗಧರನ್ನು ದೂರದಲ್ಲೇ ನಿಲ್ಲಿಸಿ, ಅತಿಶಯ ಅಪಮಾನದ ದೆಸೆಯಿಂದ ಬಂದ ಬಿಸಿಯ ನಿಟ್ಟುಸಿರಿಡುತ್ತಾ ತನ್ನ ತಾಳ್ಮೆಯ ಎಲ್ಲೆ ಮೀರಿ ತನ್ನ ಮಂಚದ ಮೇಲೆ ಮಲಗಿದನು.

ಅರ್ಥ:
ಗಣಿಕೆ: ವೇಶ್ಯೆ; ಆರತಿ:ನೀರಾಜನ; ಸುಳಿವು: ಗುರುತು, ಕುರುಹು; ಉಪ್ಪಾರತಿ: ಉಪ್ಪಿನ ಆರತಿ; ದಾದಿ: ದಾಸಿ; ಪಾಯವಧಾರು: ಎಚ್ಚರಿಕೆ, ಪಾದಕ್ಕೆ ಎಚ್ಚರಿಕೆ; ಸೂಳಾಯತ: ಮಂಗಳ ಪಾಠಕ, ವಂದಿ; ಮಂಗಳ: ಶುಭ; ವಚನ: ಮಾತು, ವಾಣಿ; ಐದು: ಹೋಗಿ ಸೇರು; ಐದೆ: ವಿಶೇಷವಾಗಿ; ದೂರ: ಅಂತರ; ನಿಲಿಸು: ತಡೆ; ಭಂಗ: ಸೀಳು; ಭಾರಣೆ: ಮಹಿಮೆ, ಗೌರವ; ಬಿಸುಸುಯ್ಲ: ಬಿಸಿಯುಸಿರು; ಸೂರೆ: ಕೊಳ್ಳೆ, ಲೂಟಿ; ಸೈರಣೆ: ತಾಳ್ಮೆ, ಸಹನೆ; ಸೀವಟ: ಅಲಂಕಾರ; ಸಿರಿ: ಐಶ್ವರ್ಯ; ಮಂಚ: ಶಯನಕ್ಕೆ ಉಪಯೋಗಿಸುವ ಸಾಧನ, ಪರ್ಯಂಕ; ಪವಡಿಸು: ಮಲಗು;

ಪದವಿಂಗಡಣೆ:
ಆರತಿಯ +ಗಣಿಕೆಯರ +ಸುಳಿವ್
ಉಪ್ಪಾರತಿಯ +ದಾದಿಯರ +ಪಾಯವ
ಧಾರು +ಸೂಳಾಯತರ+ ಮಂಗಳ+ ವಚನದ್+ಐದೆಯರ
ದೂರದಲಿ +ನಿಲಿಸಿದನು +ಭಂಗದ
ಭಾರಣೆಯ+ ಬಿಸುಸುಯ್ಲ+ ಸೂರೆಯ
ಸೈರಣೆಯ +ಸೀವಟದ +ಸಿರಿಮಂಚದಲಿ+ ಪವಡಿಸಿದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಭಂಗದ ಭಾರಣೆಯ ಬಿಸುಸುಯ್ಲ
(೨) ಸ ಕಾರದ ಸಾಲು ಪದ – ಸೂರೆಯ ಸೈರಣೆಯ ಸೀವಟದ ಸಿರಿಮಂಚದಲಿ
(೩) ಗಣಿಕೆ, ದಾದಿ, ಸೂಳಾಯತ – ವಿವಿಧ ಸಹಾಯಕರ ಹೆಸರು

ಪದ್ಯ ೨೧: ಮದ್ರದೇಶದ ಜನರ ಗುಣ ಎಂತಹುದು?

ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ಕೋಪದಿಂದ ಎಲವೋ ಶಲ್ಯ ನಿನ್ನ ಮಾದ್ರದೇಶದ ಜನರೆಂತಹವರು ಎಂದು ನಾನು ಹೇಳಬೇಕೆ, ನಿಮ್ಮ ದೇಶದವರು ಯುದ್ಧ ಸಮಯದಲ್ಲಿ ಒಡೆಯನನ್ನು ಜರಿದು ಜಾರಿಕೊಂಡು ಓಡಿ ಹೋಗುವವರು, ಅವರು ಮಾತನಾಡುವುದೇ ಒಂದು, ನಡತೆಯೇ ಮತ್ತೊಂದು, ಮದ್ಯವನ್ನು ಕಂಠಪೂರ್ತಿ ಕುಡಿದು ಅತಿಯಾಗಿ ಸೊಕ್ಕಿ ಗಣಿಕೆಯರ ನಡುವೆ ಬತ್ತಲೆಯಾಗಿ ಕುಣಿಯುವ ಭಂಡರು ನೀವು ಎಂದು ಕರ್ಣನು ಶಲ್ಯನನ್ನು ಜರಿದನು.

ಅರ್ಥ:
ರಣ: ಯುದ್ಧ; ಒಡೆಯ: ದೊರೆ; ಜರೆ: ಬಯ್ಯುವುದು, ತೆಗಳು; ಜಾರುವ: ನುಣುಚಿಕೊಳ್ಳು, ಹಾಳಾಗು; ಗುಣ: ಸ್ವಭಾವ; ಸಮುದ್ರ: ಸಾಗರ; ಭಣಿತೆ:ಸಂಭಾಷಣೆ; ಬೇರೆ: ಅನ್ಯ;ನಡೆವಳಿ: ನಡವಳಿಕೆ, ವರ್ತನೆ; ಗಣಿಕೆ: ಸೂಳೆ, ವೇಶ್ಯೆ; ಮಧ್ಯ: ನಡುವೆ; ತಣಿವು:ತೃಪ್ತಿ, ಸಮಾಧಾನ; ತನಿ: ಹೆಚ್ಚಾಗು, ಅತಿಶಯವಾಗು; ಸೊಕ್ಕು: ಅಮಲು, ಮದ; ಬತ್ತಲೆ: ನಗ್ನವಾಗಿ; ಕುಣಿ: ನರ್ತಿಸು; ಭಂಗಿ: ದೇಹದ ನಿಲುವು, ವಿನ್ಯಾಸ; ಭಂಡ:ನಾಚಿಕೆ ಇಲ್ಲದವನು; ಕೇಳು: ಆಲಿಸು;

ಪದವಿಂಗಡಣೆ:
ರಣದೊಳ್+ಒಡೆಯನ +ಜರೆದು +ಜಾರುವ
ಗುಣಸಮುದ್ರರು +ಮಾದ್ರದೇಶದ
ಭಣಿತೆ +ತಾನದು +ಬೇರೆ +ನಡೆವಳಿಯಂಗವದು +ಬೇರೆ
ಗಣಿಕೆಯರ +ಮಧ್ಯದಲಿ +ಮದ್ಯದ
ತಣಿವಿನಲಿ +ತನಿಸೊಕ್ಕಿ +ಬತ್ತಲೆ
ಕುಣಿವ +ಭಂಗಿಯ +ಭಂಡರ್+ಎಲವೋ +ಶಲ್ಯ +ಕೇಳೆಂದ

ಅಚ್ಚರಿ:
(೧) ಗುಣಸಮುದ್ರರು – ಜರೆದು ಜಾರುವ ಗುಣ ನಿಮ್ಮಲ್ಲಿ ಅಧಿಕವಾಗಿದೆ ಎಂದು ಹೇಳಲು ಬಳಸಿದ ಪದ
(೨) ನುಡಿದಂತೆ ನಡೆಯರು ಎಂದು ಹೇಳಲು – ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
(೩) ಜೋಡಿ ಪದಗಳು – ಮಧ್ಯದಲಿ ಮದ್ಯದ; ತಣಿವಿನಲಿ ತನಿಸೊಕ್ಕಿ; ಭಂಗಿಯ ಭಂಡರ್;

ಪದ್ಯ ೫: ಗೋಪಾಲಕ ಊರಿನ ಜನರಿಗೆ ಏನು ಹೇಳಿದ?

ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಹಾರಣೆ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ
ರಣವು ಕಿರಿದಲ್ಲೆನುತ ಧರೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ (ವಿರಾಟ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ವಿರಾಟ ನಗರಕ್ಕೆ ಗೋಪಾಲಕನು ಬರಲು, ನಿನ್ನೆ ರಾತ್ರಿ ಯುದ್ಧವನ್ನು ಬಿಟ್ಟು ಬೇರೇನು ಬಂತು ಅಂತ ಎಲ್ಲರೂ ಕೇಳಲು, ಭಾರಿ ಯುದ್ಧ ಎನ್ನುತ್ತಾ ಅವರು ಅರಮನೆಗೆ ಬಂದನು. ಅಲ್ಲಿ ವಿರಾಟ ಪುತ್ರನಾದ ಉತ್ತರನನ್ನು ಸ್ತ್ರೀಯರ ಮಧ್ಯೆ ಇರುವುದನ್ನು ಕಂಡನು.

ಅರ್ಥ:
ಗಣನೆ: ಲೆಕ್ಕಕ್ಕೆ; ಅಂಕಣ: ನಡುವಿನ ಪ್ರದೇಶ; ಭಾರಣೆ:ಮಹಿಮೆ; ನೂಕು: ತಳ್ಳು; ರಣದ: ಕಾಳಗ; ವಾರ್ತೆ: ಸುದ್ದಿ; ಜನ: ಮನುಷ್ಯರ ಗುಂಪು; ಗಜಬಜಿ: ಜನರ ಮಾತಾಡುವುದಕ್ಕೆ ಉಪಯೋಗಿಸುವ ಪದ; ಕಿರಿ: ಚಿಕ್ಕದು; ಧರೆ: ಭೂಮಿ; ಸಂದಣಿ: ಗುಂಪು; ಮೇಳ: ಹೊಂದಾಣಿಕೆ; ಮಧ್ಯ: ನಡು; ಗಣಿಕೆ: ಸ್ತ್ರೀ, ವೇಶ್ಯ; ಮೆರೆ: ತೋರಿಸು; ಕಂಡನು: ನೋಡು;

ಪದವಿಂಗಡಣೆ:
ಗಣನೆ+ಯಿಲ್ಲದು +ಮತ್ತೆ +ಮೇಲ್
ಅಂಕಣದ +ಹಾರಣೆ +ನೂಕಿತ್+ಎಲವೋ
ರಣದ+ ವಾರ್ತೆಯದ್+ ಏನ್+ ಎನುತ +ಜನವೆಲ್ಲ +ಗಜಬಜಿಸೆ
ರಣವು +ಕಿರಿದಲ್+ಎನುತ +ಧರೆ +ಸಂ
ದಣಿಸಲ್+ಅವನ್+ಐತಂದು +ಮೇಳದ
ಗಣಿಕೆಯರ +ಮಧ್ಯದಲಿ +ಮೆರೆದಿರೆ+ ಕಂಡನ್+ಉತ್ತರನ

ಅಚ್ಚರಿ:
(೧) ಗಣನೆ, ಗಣಿಕೆ – ಪದಗಳ ಬಳಕೆ

ಪದ್ಯ ೧೦: ಅರ್ಜುನನು ಧರ್ಮರಾಯನಿಗೆ ತನ್ನ ಶೌರ್ಯದ ಬಗ್ಗೆ ಹೇಗೆ ಉತ್ತರಿಸಿದನು?

ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣೆಗಳಿವು ನಾಳಿನಲಿ ಕಬ್ಬಿನ
ಕಣೆಗಳೋ ಗಾಂಡೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆಂದನಾಪಾರ್ಥ (ಸಭಾ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಸಾಮಂತರಾಜರು ಮಣಿಯುವುದಿಲ್ಲವೆ? ಅಪ್ಸರೆಯರು ನಗುವರೆ? ಸುಯೋಧನನು ಅಪಹಾಸ್ಯಮಾಡುವನೆ? ಶಿವ ಶಿವ ಇದರಲ್ಲಿ ತಪ್ಪೇನು, ನನ್ನ ಈ ಬಾಣಗಳು ಕಬ್ಬಿನ ಕೋಲುಗಳೆ? ಗಾಂಡೀವ ಸತ್ವಹೀನವೆ? ಅರ್ಜುನ ವೃಕ್ಷವು ಗುಣಹೀನವೇ? ಎಂದು ಅರ್ಜುನನು ಕೇಳಿದನು.

ಅರ್ಥ:
ಮಣಿ: ಬಾಗು; ಮನ್ನೆಯ: ಗೌರವಕ್ಕೆ ಪಾತ್ರವಾದವ; ನಾಕ: ಸ್ವರ್ಗ; ಗಣಿಕೆ: ಸ್ತ್ರೀ; ನಗು: ಹಾಸ್ಯಮಾಡು; ಅಣಕು: ಅಪಹಾಸ್ಯ; ತಪ್ಪು: ನೀತಿಬಿಟ್ಟ ನಡೆ; ಕಣೆ:ಬಾಣ; ನಾಳಿ: ನಾಲೆ; ಕಬ್ಬು: ಇಕ್ಷುದಂಡ; ಕಣೆ: ಬಿದಿರು ಕೋಲು; ನಿರ್ಗುಣ: ಸತ್ವಹೀನ; ಮಹಿ:ಭೂಮಿ, ಅತ್ತಿ; ರುಹ: ವೃಕ್ಷ;

ಪದವಿಂಗಡಣೆ:
ಮಣಿಯರೇ +ಮನ್ನೆಯರು +ನಾಕದ
ಗಣಿಕೆಯರು +ನಗುವರೆ+ ಸುಯೋಧನನ್
ಅಣಕವಾಡುವನೇ +ಶಿವಾ +ತಪ್ಪೇನು +ತಪ್ಪೇನು
ಕಣೆಗಳಿವು +ನಾಳಿನಲಿ+ ಕಬ್ಬಿನ
ಕಣೆಗಳೋ +ಗಾಂಡೀವವಿದು +ನಿ
ರ್ಗುಣವೊ +ತಾನರ್ಜುನ +ಮಹೀರುಹವ್ +ಎಂದನಾ+ಪಾರ್ಥ

ಅಚ್ಚರಿ:
(೧) ಕಣೆ ಪದದ ಬಳಕೆ – ಬಾಣ ಮತ್ತು ಬಿದಿರು ಕೋಲು ಎಂದು ಅರ್ಥೈಸುವ ಪದ