ಪದ್ಯ ೫೯: ಯಾರ ಹೊಡೆತದಿಂದ ಅಭಿಮನ್ಯುವು ಭೂಮಿಗೆ ಬಿದ್ದನು?

ಕರಹತಿಗೆ ಧಡಧಡಿಸಿ ತಿರ್ರನೆ
ತಿರುಗಿ ಬೀಳುತ ಧೈರ್ಯದಲಿ ಹೊಡ
ಕರಿಸಿ ಹೊರಬಿನೊಳೆದ್ದು ಹೊಯ್ದನು ಪಾರ್ಥನಂದನನ
ಅರಿ ಕೃಪಾಣದ ಘಾಯವನು ತರ
ಹರಿಸಲರಿಯದೆ ಬೀಳುತಹಿತನ
ನೆರಗಿದನು ಬಳಿಕವನಿಗೊರಗಿದರಾ ಕುಮಾರಕರು (ದ್ರೋಣ ಪರ್ವ, ೬ ಸಂಧಿ, ೫೯ ಪದ್ಯ)

ತಾತ್ಪರ್ಯ:
ಆ ಹೊಡೆತಕ್ಕೆ ದುಶ್ಯಾಸನನ ಮಗನು ಧಡಧಡಿಸಿ ತಿರ್ರನೆ ತಿರುಗಿ ಬಿದ್ದು ಧೈರ್ಯದಿಂದೆದ್ದು ಅಭಿಮನ್ಯುವನ್ನು ಕತ್ತಿಯಿಂದ ಹೊಡೆದನು. ಆ ಗಾಯವನ್ನು ತಡೆದುಕೊಳ್ಳಲ್ಲಾಗದೆ ಅಭಿಮನ್ಯುವು ಬೀಳುತ್ತಾ ಶತ್ರುವಿನ ಮೇಲೆರಗಿದನು, ಇಬ್ಬರು ಕುಮಾರರು ಭೂಮಿಗೆ ಬಿದ್ದರು.

ಅರ್ಥ:
ಕರ: ಹಸ್ತ; ಹತಿ: ಪೆಟ್ಟು, ಹೊಡೆತ; ಧಡಧಡ: ಬೇಗ, ಆತುರವನ್ನು ತಿಳಿಸುವ ಪದ; ತಿರುಗು: ವೃತ್ತಾಕಾರವಾಗಿ ಚಲಿಸು; ಬೀಳು: ಎರಗು; ಧೈರ್ಯ: ಕೆಚ್ಚು; ಹೊಡಕರಿಸು: ಕಾಣಿಸು, ಬೇಗಬೆರಸು; ಹೊರಬಿ: ಹೊರ ವಲಯದ; ಎದ್ದು: ಮೇಲೇಳು; ಹೊಯ್ದು: ಹೊಡೆ; ನಂದನ: ಮಗ; ಅರಿ: ವೈರಿ; ಕೃಪಾಣ: ಕತ್ತಿ, ಖಡ್ಗ; ಘಾಯ: ಪೆಟ್ಟು; ತರಹರಿಸು: ಕಳವಳಿಸು, ತಡಮಾಡು; ಅರಿ: ತಿಳಿ; ಬೀಳು: ಜಾರು; ಅಹಿತ: ಶತ್ರು; ಎರಗು: ಬೀಳು; ಬಳಿಕ: ನಂತರ; ಅವನಿ: ಭೂಮಿ; ಒರಗು: ಮಲಗು, ಕೆಳಕ್ಕೆ ಬಾಗು; ಕುಮಾರ: ಮಕ್ಕಳು;

ಪದವಿಂಗಡಣೆ:
ಕರಹತಿಗೆ +ಧಡಧಡಿಸಿ +ತಿರ್ರನೆ
ತಿರುಗಿ +ಬೀಳುತ +ಧೈರ್ಯದಲಿ +ಹೊಡ
ಕರಿಸಿ+ ಹೊರಬಿನೊಳ್+ಎದ್ದು +ಹೊಯ್ದನು +ಪಾರ್ಥ+ನಂದನನ
ಅರಿ +ಕೃಪಾಣದ +ಘಾಯವನು +ತರ
ಹರಿಸಲ್+ಅರಿಯದೆ +ಬೀಳುತ್+ಅಹಿತನನ್
ಎರಗಿದನು +ಬಳಿಕ್+ಅವನಿಗ್+ಒರಗಿದರಾ +ಕುಮಾರಕರು

ಅಚ್ಚರಿ:
(೧) ಯುದ್ಧವನ್ನು ಚಿತ್ರಿಸುವ ಪರಿ – ಕರಹತಿಗೆ ಧಡಧಡಿಸಿ ತಿರ್ರನೆ ತಿರುಗಿ ಬೀಳುತ
(೨) ಅರಿ, ಅಹಿತ – ಸಮಾನಾರ್ಥಕ ಪದ
(೩) ಅರಿ ಪದದ ಬಳಕೆ – ಅರಿ ಕೃಪಾಣದ ಘಾಯವನು ತರಹರಿಸಲರಿಯದೆ