ಪದ್ಯ ೫೦: ಧರ್ಮಜನನ್ನು ಶಲ್ಯನು ಹೇಗೆ ಹಂಗಿಸಿದನು?

ಧನುವನೆರಡಂಬಿನಲಿ ಮಗುಳೆ
ಚ್ಚನು ಮಹೀಶನ ಸಾರಥಿಯ ಮೈ
ನನೆಯೆ ನವ ರುಧಿರದಲಿ ಮಗುಳೆಚ್ಚನು ಯುಧಿಷ್ಥಿರನ
ಮನನ ಶಾಸ್ತ್ರಶ್ರವಣ ನಿಯಮಾ
ಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ (ಶಲ್ಯ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅವನ ಧನುಸ್ಸನ್ನು ಎರಡು ಬಾಣಗಳಲ್ಲಿ ಮುರಿದು, ಸಾರಥಿಯ ದೇಹವು ರಕ್ತದಲ್ಲಿ ತೋಯುವಂತೆ ಹೊಡೆದನು. ಮತ್ತೆ ಯುಧಿಷ್ಠಿರನನ್ನು ಬಾಣಗಳಿಂದ ನೋಯಿಸಿದನು. ಅರಸ, ನಿನಗೆ ಶರ್ವಣ, ಮನನ, ನಿಯಮ, ಆಸನ, ಧ್ಯಾನ, ಸಮಾಧಿ, ಉಪಾಸನೆಗಳೇ ಯೋಗ್ಯವಾದ ಕರ್ಮಗಳು, ನಿನಗೆ ಯುದ್ಧದ ತೊಂದರೆ ಏಕೆ ಎಂದು ಹಂಗಿಸಿದನು.

ಅರ್ಥ:
ಧನು: ಬಿಲ್ಲು; ಅಂಬು: ಬಾಣ; ಮಗುಳು: ಹಿಂತಿರುಗು, ಪುನಃ; ಎಚ್ಚು: ಬಾಣ ಪ್ರಯೋಗ ಮಾದು; ಮಹೀಶ: ರಾಜ; ಸಾರಥಿ: ಸೂತ; ಮೈ: ದೇಹ ನನೆ: ಮುಳುಗು, ತೋಯು; ನವ: ಹೊಸ; ರುಧಿರ: ರಕ್ತ; ಮನನ: ಜ್ಞಾಪಿಸಿಕೊಳ್ಳುವಿಕೆ; ಶಾಸ್ತ್ರ: ಧಾರ್ಮಿಕ ವಿಷಯ; ಶ್ರವಣ: ಕೇಳುವಿಕೆ; ನಿಯಮ:ಕಟ್ಟುಪಾಡು; ಆಸನ: ಕುಳಿತುಕೊಳ್ಳುವುದು; ಸಮಾಧಿ: ಏಕಾಗ್ರತೆ; ಧ್ಯಾನ: ಚಿಂತನೆ; ವಿದ್ಯ: ಜ್ಞಾನ; ವಿನಯ: ಒಳ್ಳೆಯತನ, ಸೌಜನ್ಯ; ರಣ: ಯುದ್ಧ; ಜಂಜಡ: ತೊಂದರೆ, ಕಷ್ಟ;

ಪದವಿಂಗಡಣೆ:
ಧನುವನ್+ಎರಡ್+ಅಂಬಿನಲಿ +ಮಗುಳ್
ಎಚ್ಚನು +ಮಹೀಶನ+ ಸಾರಥಿಯ+ ಮೈ
ನನೆಯೆ +ನವ +ರುಧಿರದಲಿ +ಮಗುಳ್+ಎಚ್ಚನು +ಯುಧಿಷ್ಥಿರನ
ಮನನ+ ಶಾಸ್ತ್ರ+ಶ್ರವಣ +ನಿಯಮಾ
ಸನ +ಸಮಾಧಿ +ಧ್ಯಾನ +ವಿದ್ಯಾ
ವಿನಯವಲ್ಲದೆ+ ರಣದ+ ಜಂಜಡವೇಕೆ+ ನಿಮಗೆಂದ

ಅಚ್ಚರಿ:
(೧) ಧರ್ಮಜನನ್ನು ಹಂಗಿಸುವ ಪರಿ – ಮನನ ಶಾಸ್ತ್ರಶ್ರವಣ ನಿಯಮಾಸನ ಸಮಾಧಿ ಧ್ಯಾನ ವಿದ್ಯಾ
ವಿನಯವಲ್ಲದೆ ರಣದ ಜಂಜಡವೇಕೆ ನಿಮಗೆಂದ
(೨) ಮಗುಳೆಚ್ಚನು – ೨ ಬಾರಿ ಪ್ರಯೋಗ

ಪದ್ಯ ೬೯: ದ್ರೋಣಚಾರ್ಯರ ಸಮಾಧಿ ಸ್ಥಿತಿಗೆ ಹೇಗೆ ತಲುಪಿದರು?

ನಾಸಿಕಾಗ್ರದಲಿಟ್ಟ ಕಂಗಳ
ಸೂಸದುಸುರಿನ ಶಶಿಕಿರಣಪೀ
ಯೂಷಪಾನದ ರೋಮಪುಳಕದ ಗುಡಿಯ ಬೀಡುಗಳ
ಆ ಸುಷುಮ್ನಾ ನಾದಿಯಲಿ ಕಾ
ಳಾಶಿಸಿದ ಪವನನ ಸಮಾಧಿ ವಿ
ಳಾಸನೆಸೆದನು ಸೌಖ್ಯ ಭಾವದ ಜಡಿವ ಝೊಮ್ಮಿನಲಿ (ದ್ರೋಣ ಪರ್ವ, ೧೮ ಸಂಧಿ, ೬೯ ಪದ್ಯ)

ತಾತ್ಪರ್ಯ:
ದ್ರೋಣಾಚಾರ್ಯರ ಕಂಗಳ ದೃಷ್ಟಿ ನಾಸಿಕಾಗ್ರದಲ್ಲಿತ್ತು. ಉಸಿರಾಟ ನಿಂತು ಹೋಯಿತು. ಇಡಾ ಪಿಂಗಳಾ ನಾಡಿಗಳೆರಡೂ ಆಜ್ಞಾಚಕ್ರದಲ್ಲಿ ನಿಲ್ಲಲು, ಸಹಸ್ರಾರ ಕಮಲನಾಳದಿಂದ ಅಮೃತ ಪಾನ ಮಾಡಿದನು. ಸುಷುಮ್ನಾ ನಾಡಿಯಲ್ಲಿ ವಾಯುವನ್ನು ನಿಲ್ಲಿಸಿ ಸಮಾಧಿಯ ಅಪರಿಮಿತ ಸೌಖ್ಯವನ್ನು ಅನುಭವಿಸಿದನು.

ಅರ್ಥ:
ನಾಸಿಕ: ಮೂಗು; ಅಗ್ರ; ತುದಿ; ಕಂಗಳು: ಕಣ್ಣು, ನೇತ್ರ; ಸೂಸು: ಹೊರಹೊಮ್ಮು; ಉಸುರು: ಗಾಳಿ; ಶಶಿ: ಚಂದ್ರ; ಕಿರಣ: ಪ್ರಕಾಶ; ಪೀಯೂಷ: ಅಮೃತ, ಸುಧೆ; ರೋಮ: ಕೂದಲು; ಪುಳಕ: ರೋಮಾಂಚನ; ಗುಡಿ: ಮಂಡಲ; ಬೀಡು: ವಾಸಸ್ಥಳ; ನಾಡಿ: ಶರೀರದಲ್ಲಿ ರಕ್ತ ಚಲನೆಗಾಗಿ ಇರುವ ಕೊಳವೆಯಾಕಾರದ ರಚನೆ; ಕಾಳಾಶಿಸು: ಹೊಂದಿಸು; ಪವನ: ವಾಯು; ಸಮಾಧಿ: ಏಕಾಗ್ರತೆ, ತನ್ಮಯತೆ; ವಿಳಾಸ: ಉಲ್ಲಾಸ; ಎಸೆ: ಹೊರಹಾಕು; ಸೌಖ್ಯ: ಸುಖ, ಸಂತಸ; ಭಾವ: ಭಾವನೆ; ಜಡಿ: ಹರಡು, ಝಳಪಿಸು; ಝೊಮ್ಮು: ಪುಳುಕ;

ಪದವಿಂಗಡಣೆ:
ನಾಸಿಕ+ಅಗ್ರದಲಿಟ್ಟ+ಕಂಗಳ
ಸೂಸದ್+ಉಸುರಿನ +ಶಶಿ+ಕಿರಣ+ಪೀ
ಯೂಷ+ಪಾನದ +ರೋಮಪುಳಕದ +ಗುಡಿಯ +ಬೀಡುಗಳ
ಆ +ಸುಷುಮ್ನಾ +ನಾಡಿಯಲಿ +ಕಾ
ಳಾಶಿಸಿದ+ ಪವನನ +ಸಮಾಧಿ +ವಿ
ಳಾಸನ್+ಎಸೆದನು +ಸೌಖ್ಯ +ಭಾವದ +ಜಡಿವ +ಝೊಮ್ಮಿನಲಿ

ಅಚ್ಚರಿ:
(೧) ಪವನ, ಉಸುರು – ಸಾಮ್ಯಾರ್ಥ ಪದ

ಪದ್ಯ ೬೮: ದ್ರೋಣರು ರಥದಲ್ಲಿ ಹೇಗೆ ಕುಳಿತರು?

ಎನುತ ರಥದೊಳು ರಚಿಸಿ ಪದ್ಮಾ
ಸನವನಿಂದ್ರಿಯಕರಣವೃತ್ತಿಯ
ನನಿತುವನು ತಡೆದೆತ್ತಿ ಮೂಲಾಧಾರ ಮಾರುತನ
ಇನ ಶಶಿಗಳೊಂದಾಗೆ ನಾಡಿಗ
ಳನಿಲನಿಕರವನುಗಿದು ಬಿಂದು
ಧ್ವನಿ ಕಳಾಪರಿಲುಳಿತನೆಸೆದನು ವರ ಸಮಾಧಿಯಲಿ (ದ್ರೋಣ ಪರ್ವ, ೧೮ ಸಂಧಿ, ೬೮ ಪದ್ಯ)

ತಾತ್ಪರ್ಯ:
ರಥದಲ್ಲಿ ಪದ್ಮಾಸನವನ್ನು ಹಾಕಿ ಕುಲಿತ ದ್ರೋಣನು ಇಂದ್ರಿಯ ಮನಸ್ಸುಗಳ ಅಷ್ಟೂ ವೃತ್ತಿಯನ್ನು ತಡೆದು, ಸೂರ್ಯ ಚಂದ್ರರು ಒಂದಾಗುವ ಪರಿ, ಇಡಾ, ಪಿಂಗಳಾ ಸುಷುಮ್ನಾಡಿಗಳ ವಾಯುವನ್ನು ನಿಲ್ಲಿಸಿ ನಾದ ಬಿಂದು ಕಲಾತೀತವಾದ ಸಮಾಧಿಯಲ್ಲಿ ನಿಂತನು.

ಅರ್ಥ:
ರಥ: ಬಂಡಿ; ರಚಿಸು: ನಿರ್ಮಿಸು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಕರಣ: ಜ್ಞಾನೇಂದ್ರಿಯ, ಮನಸ್ಸು; ವೃತ್ತಿ: ಕೆಲಸ; ಅನಿತು: ಅಷ್ಟು; ತಡೆ: ನಿಲ್ಲಿಸು; ಮಾರುತ: ವಾಯು; ಇನ: ಸೂರ್ಯ; ಶಶಿ: ಚಂದ್ರ; ನಾಡಿ: ರೀರದಲ್ಲಿ ರಕ್ತ ಚಲನೆಗಾಗಿ ಇರುವ ಕೊಳವೆಯಾಕಾರದ ರಚನೆ, ಧಮನಿ; ಅನಿಲ: ವಾಯು; ನಿಕರ: ಸಮೂಹ; ಉಗಿ: ಹೊರಹಾಕು; ಬಿಂದು: ಹನಿ; ಧ್ವನಿ: ರವ, ಶಬ್ದ; ಲುಳಿ: ಕಾಂತಿ; ಎಸೆ: ತೋರು; ವರ: ಶ್ರೇಷ್ಠ; ಸಮಾಧಿ: ಏಕಾಗ್ರತೆ, ತನ್ಮಯತೆ;

ಪದವಿಂಗಡಣೆ:
ಎನುತ+ ರಥದೊಳು +ರಚಿಸಿ +ಪದ್ಮಾ
ಸನವನ್+ಇಂದ್ರಿಯ+ಕರಣ+ವೃತ್ತಿಯನ್
ಅನಿತುವನು +ತಡೆದೆತ್ತಿ +ಮೂಲಾಧಾರ +ಮಾರುತನ
ಇನ+ ಶಶಿಗಳೊಂದಾಗೆ +ನಾಡಿಗಳ್
ಅನಿಲ+ನಿಕರವನ್+ಉಗಿದು +ಬಿಂದು
ಧ್ವನಿ +ಕಳಾಪರಿ+ಲುಳಿತನ್+ಎಸೆದನು +ವರ +ಸಮಾಧಿಯಲಿ

ಅಚ್ಚರಿ:
(೧) ಸಮಾಧಿಯಲ್ಲಿ ಕುಳಿತುಕೊಳ್ಳುವ ಪರಿ – ನಾಡಿಗಳನಿಲನಿಕರವನುಗಿದು ಬಿಂದು ಧ್ವನಿ ಕಳಾಪರಿಲುಳಿತನೆಸೆದನು ವರ ಸಮಾಧಿಯಲಿ

ಪದ್ಯ ೨೧: ಭೂರಿಶ್ರವನು ಯಾವ ಸ್ಥಿತಿಗೆ ಹೋದನು?

ಎಲವೊ ಸಾತ್ಯಕಿ ಬದುಕಿದೈ ನರ
ನುಳುಹಿಕೊಂಡನು ಹೋಗೆನುತ ಹೆಡ
ತಲೆಯನೊದೆದನು ನಿಂದು ಬರಿಕೈ ಮುರಿದ ಗಜದಂತೆ
ಒಲೆವುತೈತಂದೊಂದು ರಣಮಂ
ಡಲದೊಳಗೆ ಪದ್ಮಾಸನವನನು
ಕೊಳಿಸಿ ಯೋಗಾರೂಢನಾದನು ವರಸಮಾಧಿಯಲಿ (ದ್ರೋಣ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೂರಿಶ್ರವನು, ಎಲವೋ ಸಾತ್ಯಕಿ, ಅರ್ಜುನನು ನಿನ್ನನ್ನುಳಿಸಿಕೊಂಡ, ನೀನು ಬದುಕಿದೆ ಹೋಗು ಎಂದು ಸಾತ್ಯಕಿಯ ತಲೆಯನ್ನು ಒದೆದನು. ಸೊಂಡಿಲು ಮುರಿದ ಆನೆಯಂತೆ ತೂಗಾಡುತ್ತಾ ಬಂದು ರಣರಂಗದ ಒಮ್ದು ಪ್ರದೇಶದಲ್ಲಿ ಪದ್ಮಾಸನದಲ್ಲಿ ಕುಳಿತು ಯೋಗಾರೂಢನಾಗಿ ಸಮಾಧಿ ಸ್ಥಿತಿಯಲ್ಲಿದ್ದನು.

ಅರ್ಥ:
ಬದುಕು: ಜೀವಿಸು; ನರ: ಅರ್ಜುನ; ಉಳುಹು: ಕಾಪಾಡು; ಹೋಗು: ತೆರಳು; ಹೆಡತಲೆ: ಹಿಂದಲೆ; ಒದೆ: ಜಾಡಿಸು, ನೂಕು; ನಿಂದು: ನಿಲ್ಲು; ಬರಿಕೈ: ಏನೂ ಇಲ್ಲದೆ; ಮುರಿ: ಸೀಳು; ಗಜ: ಆನೆ; ಒಲೆ: ತೂಗಾಡು; ರಣ: ಯುದ್ಧ; ಮಂಡಲ: ಸೀಮೆ, ನಾಡಿನ ಒಂದು ಭಾಗ; ಪದ್ಮಾಸನ: ಯೋಗಾಸನದ ಭಂಗಿ; ಯೋಗ: ಧ್ಯಾನ; ವರ: ಶ್ರೇಷ್ಠ; ಸಮಾಧಿ: ಏಕಾಗ್ರತೆ;

ಪದವಿಂಗಡಣೆ:
ಎಲವೊ +ಸಾತ್ಯಕಿ +ಬದುಕಿದೈ +ನರನ್
ಉಳುಹಿಕೊಂಡನು +ಹೋಗೆನುತ +ಹೆಡ
ತಲೆಯನ್+ಒದೆದನು +ನಿಂದು +ಬರಿಕೈ+ ಮುರಿದ +ಗಜದಂತೆ
ಒಲೆವುತ್+ಐತಂದ್+ಒಂದು +ರಣ+ಮಂ
ಡಲದೊಳಗೆ +ಪದ್ಮಾಸನವನನು
ಕೊಳಿಸಿ+ ಯೋಗಾರೂಢನಾದನು +ವರ+ಸಮಾಧಿಯಲಿ

ಅಚ್ಚರಿ:
(೧) ಭೂರಿಶ್ರವನ ಸ್ಥಿತಿಯನ್ನು ಹೋಲಿಸಿದ ಪರಿ – ನಿಂದು ಬರಿಕೈ ಮುರಿದ ಗಜದಂತೆ

ಪದ್ಯ ೬೩: ಯಾರು ದುರ್ಯೋಧನನನ್ನು ಕರೆದುಕೊಂಡು ಹೋದರು?

ರಾಯನೀಪರಿನುಡಿದು ಜನ ಸಮು
ದಾಯವನು ಕಳುಹಿದನು ಸುಮನೋ
ಭೂಯ ಸಾಪೇಕ್ಷೆಯ ಸಮಾಧಿಯೊಳಿರಲು ರಾತ್ರಿಯಲಿ
ದಾಯವಿದು ತಮಗೆಂದು ದೈತ್ಯನಿ
ಕಾಯ ಬಂದು ರಸಾತಳಕೆ ಕುರು
ರಾಯನನು ಕೊಂಡೊಯ್ದು ತಿಳುಹಿದರವರು ಸಾಮದಲಿ (ಅರಣ್ಯ ಪರ್ವ, ೨೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ದುರ್ಯೊಧನನು ಜನರನ್ನು ಹಿಂದಕ್ಕೆ ಕಳಿಸಿದನು. ನಂತರ ಭಗವಂತನ ಭಕ್ತಿಯನ್ನು ಬಯಸಿ ಸಮಾಧಿಯಲ್ಲಿದ್ದನು. ರಾತ್ರಿಯಾಯಿತು, ಆಗ ರಾಕ್ಷಸರು ಲೆಕ್ಕ ಹಾಕಿ ಇದೇ ಸಮಯವೆಂದು ಕೌರವನನ್ನು ರಸಾತಳಕ್ಕೆ ತೆಗೆದುಕೊಂಡು ಹೋಗಿ ಅವನಿಗೆ ಸಾಂಗವಗಿ ಸಾಮೋಪಾಯದಿಂದ ಹೀಗೆ ಹೇಳಿದರು.

ಅರ್ಥ:
ರಾಯ: ರಾಜ; ಪರಿ: ರೀತಿ; ನುಡಿ: ಮಾತು; ಜನ: ಗುಂಪು; ಸಮುದಾಯ: ಸಮೂಹ, ಗುಂಪು; ಕಳುಹಿ: ತೆರಳು; ಸುಮನ: ಒಳ್ಳೆಯ ಮನಸ್ಸು; ಉಭಯ: ಎರಡು; ಸಾಪೇಕ್ಷ: ಪೂರಕವಾದುದು; ಸಮಾಧಿ: ಏಕಾಗ್ರತೆ, ತನ್ಮಯತೆ; ರಾತ್ರಿ: ನಿಶಿ, ಇರುಳು; ದಾಯ:ಸಮಯ; ದೈತ್ಯ: ರಾಕ್ಷಸ; ನಿಕಾಯ: ಗುಂಪು; ಬಂದು: ಆಗಮಿಸು; ರಸಾತಳ: ಭೂಮಿಯ ಮೇಲ್ಭಾಗ;ಕೊಂಡೊಯ್ದು: ಕರೆದುಕೊಂಡು ಹೋಗು; ತಿಳುಹಿ: ಹೇಳು ಸಾಮ: ಸಮಾಧಾನ;

ಪದವಿಂಗಡಣೆ:
ರಾಯನ್+ಈ+ಪರಿನುಡಿದು+ ಜನ +ಸಮು
ದಾಯವನು+ ಕಳುಹಿದನು+ ಸುಮನೋ
ಭೂಯ +ಸಾಪೇಕ್ಷೆಯ +ಸಮಾಧಿಯೊಳಿರಲು+ ರಾತ್ರಿಯಲಿ
ದಾಯವಿದು+ ತಮಗೆಂದು+ ದೈತ್ಯ+ನಿ
ಕಾಯ +ಬಂದು +ರಸಾತಳಕೆ+ ಕುರು
ರಾಯನನು +ಕೊಂಡೊಯ್ದು +ತಿಳುಹಿದರವರು+ ಸಾಮದಲಿ

ಅಚ್ಚರಿ:
(೧) ರಾಯ, ದಾಯ, ಸಮುದಾಯ,ನಿಕಾಯ, ಭೂಯ – ಪ್ರಾಸ ಪದಗಳು

ಪದ್ಯ ೬: ಗಣಿಕೆಯರ ಸುಗಂಧವು ಹೇಗೆ ಪರಿಣಾಮ ಬೀರಿತು?

ನೇವುರದ ದನಿ ದಟ್ಟಿಸಿತು ವೇ
ದಾವಳಿಯ ನಿರ್ಘೋಷವನು ನಾ
ನಾ ವಿಭೂಷಣ ಕಾಂತಿ ಕೆಣಕಿತು ಮುನಿ ಸಮಾಧಿಗಳ
ಆ ವಧೂಜನದಂಗಗಂಧ
ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ (ಅರಣ್ಯ ಪರ್ವ, ೧೯ ಸಂಧಿ, ೬ ಪದ್ಯ)

ತಾತ್ಪರ್ಯ:
ವೇದ ಘೋಷದ ಧ್ವನಿಯನ್ನು ಗಣಿಕೆಯರ ಕಾಲಂದುಗೆಯ ಸದ್ದು ತಡೆಯಿತು. ಅವರು ಧರಿಸಿದ್ದ ನಾನಾ ಆಭರಣಗಳ ಕಾಂತಿಯು ಮುನಿಗಳ ಸಮಾಧಿಯನ್ನು ಕೆಣಕಿತು. ಆ ತರುಣಿಯರ ದೇಹ ಗಂಧವು ಬ್ರಾಹ್ಮಣರು ಹೋಮ ಮಾಡಿದ್ದ ಚರು ಪುರೋಡಾಶಗಳ ಕಂಪನ್ನು ಆವರಿಸಿತು.

ಅರ್ಥ:
ನೇವುರ: ಅಂದುಗೆ, ನೂಪುರ; ದನಿ: ಶಬ್ದ; ದಟ್ಟ: ಒತ್ತಾದುದು, ಸಾಂದ್ರವಾದುದು; ವೇದ: ಶೃತಿ; ಆವಳಿ: ಗುಂಪು, ಸಾಲು; ನಿರ್ಘೋಷ: ದೊಡ್ಡ ಘೋಷಣೆ; ನಾನಾ: ಬಹಳ; ವಿಭೂಷಣ: ಒಡವೆ, ಆಭರಣ; ಕಾಂತಿ: ಪ್ರಕಾಶ; ಕೆಣಕು: ರೇಗಿಸು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ವಧು: ಹೆಂಗಸು, ಸ್ತ್ರೀ; ಅಂಗ: ದೇಹದ ಭಾಗ; ಗಂಧ: ಪರಿಮಳ; ಪ್ರಾವರಣ: ಮೇಲುಹೊದಿಕೆ; ಹುತ: ಹವಿಸ್ಸು; ಚರು: ನೈವೇದ್ಯ, ಹವಿಸ್ಸು; ಪುರೋಡಾಶ: ಯಜ್ಞ ಯಾಗಾದಿಗಳಲ್ಲಿ ಅರ್ಪಿಸುವ ಹವಿಸ್ಸು; ಆವಳಿ: ಗುಂಪು, ಸಾಲು; ಸೌರಭ: ಸುಗಂಧ; ಮುಸುಕು: ಆವರಿಸು; ವನ: ಕಾಡು; ವಳಯ: ಆವರಣ;

ಪದವಿಂಗಡಣೆ:
ನೇವುರದ +ದನಿ +ದಟ್ಟಿಸಿತು +ವೇ
ದಾವಳಿಯ +ನಿರ್ಘೋಷವನು +ನಾ
ನಾ +ವಿಭೂಷಣ +ಕಾಂತಿ +ಕೆಣಕಿತು +ಮುನಿ +ಸಮಾಧಿಗಳ
ಆ +ವಧೂಜನದ್+ಅಂಗ+ಗಂಧ
ಪ್ರಾವರಣ+ ಹುತ +ಚರು+ ಪುರೋಡಾ
ಶಾವಳಿಯ +ಸೌರಭವ +ಮುಸುಕಿತು +ವನದ +ವಳಯದಲಿ

ಅಚ್ಚರಿ:
(೧) ವೇದಾವಳಿ, ಪುರೋಡಾಶಾವಳಿ- ಆವಳಿ ಪದದ ಬಳಕೆ
(೨) ಸುಗಂಧ ಹರಡುವ ಪರಿ – ವಧೂಜನದಂಗಗಂಧ ಪ್ರಾವರಣ ಹುತ ಚರು ಪುರೋಡಾ
ಶಾವಳಿಯ ಸೌರಭವ ಮುಸುಕಿತು ವನದ ವಳಯದಲಿ

ಪದ್ಯ ೪೬: ಇಂದ್ರನಿಗೆ ಅರ್ಜುನನೇನು ಹೇಳಿದ?

ಕಂದೆರೆದು ನೋಡಿದನು ನೀವೇ
ನೆಂದರೆಯು ಹೃದಯಾಬ್ಜಪೀಠದ
ಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ
ಇಂದಿನೀ ಬಹಿರಂಗ ಚಿಹ್ನೆಯ
ಕುಂದು ಹೆಚ್ಚಿನಲೇನು ಫಲವೆನ
ಲಂದು ತಲೆದೂಗಿದನು ಸುರಪತಿ ತೋರಿದನು ನಿಜವ (ಅರಣ್ಯ ಪರ್ವ, ೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಅರ್ಜುನನು ಕಣ್ಣು ತೆರೆದು ನೋಡಿ, ನಾನು ಹೃದಯ ಕಮಲಪೀಠದಲ್ಲಿ ಶಿವನನ್ನು ಕುಳ್ಳಿರಿಸಿ ಸಮಾಧಿಯಲ್ಲಿ ಅವನನ್ನು ಮೆಚ್ಚಿಸುತ್ತಿದ್ದೇನೆ. ಬಹಿರಂಗ ಚಿಹ್ನೆಗಳ ನ್ಯೂನಾತಿರಿಕ್ತಗಳನ್ನು ಎಣಿಸಿ ಹೆಚ್ಚು ಕಡಿಮೆ ಎನ್ನಲು ಏನು ಪ್ರಯೋಜನ ಎಂದು ಕೇಳಲು, ಇಂದ್ರನು ಅರ್ಜುನನ ಉತ್ತರಕ್ಕೆ ಮೆಚ್ಚಿ, ತನ್ನ ಸ್ವರೂಪವನ್ನು ತೋರಿದನು.

ಅರ್ಥ:
ಕಂದೆರೆದು: ಕಣ್ಣು ಬಿಚ್ಚಿ; ನೋಡು: ವೀಕ್ಷಿಸು; ಹೃದಯ: ಎದೆ; ಅಬ್ಜ: ಕಮಲ; ಪೀಠ: ಆಸನ; ಇಂದು: ಚಂದ್ರ; ಮೌಳಿ: ಶಿರ; ಮೆಚ್ಚಿಸು: ಸಂತೋಷಗೊಳಿಸು, ಹರ್ಷಗೊಳಿಸು; ಸಮಾಧಿ: ಏಕಾಗ್ರತೆ, ತನ್ಮಯತೆ; ಬಹಿರಂಗ: ಹೊರಗಡೆ; ಚಿಹ್ನೆ: ಗುರುತು; ಕುಂದು: ಕೊರತೆ, ನೂನ್ಯತೆ; ಹೆಚ್ಚು: ಜಾಸ್ತಿ; ಫಲ: ಪ್ರಯೋಜನ; ತಲೆ: ಶಿರ; ತೂಗು: ಅಲ್ಲಾಡಿಸು; ಸುರಪತಿ: ಇಂದ್ರ; ಸುರ: ದೇವತೆ; ತೋರು: ಗೋಚರಿಸು; ನಿಜ: ದಿಟ;

ಪದವಿಂಗಡಣೆ:
ಕಂದೆರೆದು +ನೋಡಿದನು +ನೀವೇನ್
ಎಂದರೆಯು+ ಹೃದಯ+ಅಬ್ಜ+ಪೀಠದಲ್
ಇಂದುಮೌಳಿಯನ್+ಇರಿಸಿ+ ಮೆಚ್ಚಿಸುವೆನು +ಸಮಾಧಿಯಲಿ
ಇಂದಿನ್+ಈ+ ಬಹಿರಂಗ+ ಚಿಹ್ನೆಯ
ಕುಂದು +ಹೆಚ್ಚಿನಲ್+ಏನು +ಫಲವೆನಲ್
ಅಂದು +ತಲೆದೂಗಿದನು +ಸುರಪತಿ+ ತೋರಿದನು +ನಿಜವ

ಅಚ್ಚರಿ:
(೧) ಮೌಳಿ, ತಲೆ – ಸಮನಾರ್ಥಕ ಪದ
(೨) ಶಿವನನ್ನು ಮೆಚ್ಚಿಸುವ ಪರಿ – ಹೃದಯಾಬ್ಜಪೀಠದಲಿಂದುಮೌಳಿಯನಿರಿಸಿ ಮೆಚ್ಚಿಸುವೆನು ಸಮಾಧಿಯಲಿ

ಪದ್ಯ ೧೦: ಕರ್ಣನು ಯಾವ ಸ್ಥಿತಿಯಲ್ಲಿ ಕುಳಿತಿದ್ದನು?

ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರಭಾಗದಲಿ
ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ (ಕರ್ಣ ಪರ್ವ, ೨೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಹೃದಯಕಮಲದ ಅಂತರಂಗದಲ್ಲಿ ಶ್ರೀಕೃಷ್ಣನನ್ನು ಕಂಡನು. ತನ್ನ ಎದುರು ಅರ್ಜುನನ ಮಣಿಮಯ ರಥದ ಮುಂದೆ ಶೋಭಿಸುವ ಕೃಷ್ಣನನ್ನು ಕಂಡನು. ಒಳಗೂ ಹೊರಗೂ ಇರುಅವನು ಹರಿಯೇ ಎಂಬ ಅಭೇದವನ್ನು ತಿಳಿದು, ಜಾಗ್ರತ ಅವಸ್ಥೆಯಲ್ಲಿಯೇ ಸಮಾಧಿಯನ್ನು ಹೊಂದಿದನು.

ಅರ್ಥ:
ಒಳಗೆ: ಅಂತರ್ಯ; ಹೃದಯ: ಎದೆ, ವಕ್ಷಸ್ಥಳ; ಅಂಬುಜ: ಕಮಲ; ಮಧ್ಯ: ನಡುವೆ; ಮುರವೈರಿ: ಕೃಷ್ಣ; ಹೊರವಳಯ: ಬಾಹಿರ; ಫಲುಗುಣ: ಅರ್ಜುನ; ಮಣಿ: ಶ್ರೇಷ್ಠವಾದ ರತ್ನ; ರಥ: ಬಂಡಿ, ತೇರು; ಅಗ್ರ: ಮುಂದೆ; ಹೊಳೆ: ಪ್ರಕಾಶಿಸು; ಹರಿ: ಕೃಷ್ಣ; ಕಂಡು: ನೋಡಿ; ಹೊರಗೊಳಗೆ: ಅಂತರ, ಬಾಹಿರದಲ್ಲಿ; ಭೇದ: ವ್ಯತ್ಯಾಸ; ತಿಳಿ: ಅರಿ; ನಿಜ: ದಿಟ; ಎಚ್ಚರ: ಜಾಗೃತವಾಗಿರುವ ಸ್ಥಿತಿ; ಸಮಾಧಿ: ಏಕಾಗ್ರತೆ, ತನ್ಮಯತೆ;

ಪದವಿಂಗಡಣೆ:
ಒಳಗೆ +ಹೃದಯ+ಅಂಬುಜದ+ ಮಧ್ಯ
ಸ್ಥಳದೊಳಗೆ+ ಮುರವೈರಿಯನು+ ಹೊರ
ವಳಯದಲಿ +ಫಲುಗುಣನ+ ಮಣಿರಥದ್+ಅಗ್ರಭಾಗದಲಿ
ಹೊಳೆವ+ ಹರಿಯನು +ಕಂಡನ್+ಇದು +ಹೊರ
ಗೊಳಗೆ +ಹರಿ +ತಾನೆಂಬ್+ಅಭೇದವ
ತಿಳಿದು+ ನಿಜದೆಚ್ಚರ+ ಸಮಾಧಿಯೊಳ್+ಇರ್ದನಾ +ಕರ್ಣ

ಅಚ್ಚರಿ:
(೧) ಮುರವೈರಿ, ಹರಿ – ಕೃಷ್ಣನನ್ನು ಕರೆದಿರುವ ಬಗೆ