ಪದ್ಯ ೧: ದುರ್ಯೋಧನನು ಭೀಷ್ಮರಿಗೆ ಏನು ಹೇಳಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡುಕುಮಾರರಡವಿಯ
ಬೀಳು ಕೊಂಡಜ್ಞಾತವಾಸದೊಳಿರಲು ಕೌರವನು
ಕಾಲ ಸವೆದುದು ಪಾಂಡುಸುತರಿಗೆ
ಮೇಲೆ ನೆಗಳುವುದಾವ ರಾಯರ
ಊಳಿಗವು ತಾನೆನುತ ತಿಳಿಹಿದನವನು ಭೀಷ್ಮಂಗೆ (ವಿರಾಟ ಪರ್ವ, ೪ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ಮಹಾರಾಜ ಕೇಳು, ಪಾಂಡವರು ವನವಾಸ ಮುಗಿಸಿ ಅಜ್ಞಾತವಾಸದ ಒಂದು ವರ್ಷವು ಮುಗಿಯುತ್ತಾ ಬರಲು, ದುರ್ಯೋಧನನು ಭೀಷ್ಮರನ್ನು ಕಂಡು, ಪಾಂಡವರು ಯಾವ ರಾಜನ ಸೇವೆಯಲ್ಲಿರುವರೋ ತಿಳಿದು ಕೊಳ್ಳಬೇಕೆಂದು ಹೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಕುಮಾರ: ಮಕ್ಕಳು; ಅಡವಿ: ಕಾಡು; ಬೀಳು: ಕುಸಿ, ಎರಗು; ಅಜ್ಞಾತ: ಯಾರಿಗೂ ತಿಳಿಯದ ಸ್ಥಿತಿ; ಕಾಲ: ಸಮಯ; ಸವೆದು: ಕಳೆ, ನೀಗು; ಸುತ: ಮಕ್ಕಳು; ನೆಗಳು:ಉಂಟಾಗು, ಕೈಗೊಳ್ಳು; ತಿಳುಹು: ತಿಳಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾಂಡುಕುಮಾರರ್+ಅಡವಿಯ
ಬೀಳು +ಕೊಂಡ್+ಅಜ್ಞಾತವಾಸದೊಳ್+ಇರಲು +ಕೌರವನು
ಕಾಲ +ಸವೆದುದು +ಪಾಂಡುಸುತರಿಗೆ
ಮೇಲೆ +ನೆಗಳುವುದ್+ಆವ +ರಾಯರ
ಊಳಿಗವು +ತಾನೆನುತ +ತಿಳಿಹಿದನ್+ಅವನು +ಭೀಷ್ಮಂಗೆ

ಅಚ್ಚರಿ:
(೧) ಕೇಳು, ಬೀಳು – ಪ್ರಾಸ ಪದ
(೨) ಸುತ, ಕುಮಾರ – ಸಮನಾರ್ಥಕ ಪದ

ಪದ್ಯ ೬೪: ದೈತ್ಯರು ದುರ್ಯೋಧನನ ನಿರ್ಧಾರವನ್ನು ತಪ್ಪೆಂದರೇಕೆ?

ಅರಸ ನೀ ಪ್ರಾಯೋಪವೇಶದಿ
ಮರಣ ದೀಕ್ಷಿತನಾದೆ ಗಡ ನಿ
ಮ್ಮರಸು ಕುಲಕನುಚಿತವ ನೆನೆದೈ ಕಾಕ ಬಲೆಸಿದೆಲಾ
ಸುರರು ಪಾಂಡುಕುಮಾರರಾಗವ
ತರಸಿದರು ಗೆಲವವದಿರಿಗೆ ತಾ
ವಿರಲು ಸುಡಲೀ ದೈತ್ಯ ಜನ್ಮವನೆಂದರಾ ಖಳರು (ಅರಣ್ಯ ಪರ್ವ, ೨೨ ಸಂಧಿ, ೬೪ ಪದ್ಯ)

ತಾತ್ಪರ್ಯ:
ರಾಜ, ನೀನು ಅನ್ನ ನೀರು ಬಿಟ್ಟು ಮರಣಹೊಂದುವ ದೀಕ್ಷೆ ಹಿಡಿದೆ, ಇದು ಕ್ಷತ್ರಿಯಕುಲಕ್ಕೆ ಅನುಚಿತವಾದ ನಿರ್ಧಾರ, ನೀನು ತಪ್ಪುಮಾಡಿದೆ, ದೇವತೆಗಳು ಪಾಂಡವರಾಗಿ ಅವತರಿಸಿದ್ದಾರೆ, ನಿನ್ನ ನಿರ್ಧಾರದಿಂದ ಅವರಿಗೆ ಗೆಲುವಾಗುತ್ತದೆ, ನಾವಿದ್ದೂ ಅವರು ಗೆದ್ದರೆ ಈ ರಾಕ್ಷಸ ಜನ್ಮವನ್ನು ಸುಡಬೇಕೆಂದು ಹೇಳಿದರು.

ಅರ್ಥ:
ಅರಸ: ರಾಜ; ಪ್ರಾಯೋಪವೇಶ: ಅನ್ನ ನೀರು ಇಲ್ಲದೆ ಪ್ರಾಣ ಬಿಡುವುದು; ಮರಣ: ಸಾವು; ದೀಕ್ಷೆ: ವ್ರತ, ನಿಯಮ; ಗಡ: ಅಲ್ಲವೇ; ಕುಲ: ವಂಶ; ಅನುಚಿತ: ಸರಿಯಲ್ಲದ; ನೆನೆ: ಜ್ಞಾಪಿಸಿಕೋ; ಕಾಕ: ನೀಚ, ಕ್ಷುಲ್ಲಕ; ಬಳಸು: ಆವರಿಸುವಿಕೆ; ಸುರ: ದೇವತೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಗೆಲವು: ಜಯ; ಅವದಿರು: ಅವರು; ಸುಡು: ದಹಿಸು; ದೈತ್ಯ: ರಾಕ್ಷಸ; ಜನ್ಮ: ಹುಟ್ಟು; ಖಳ: ದುಷ್ಟ;

ಪದವಿಂಗಡಣೆ:
ಅರಸ +ನೀ +ಪ್ರಾಯೋಪವೇಶದಿ
ಮರಣ+ ದೀಕ್ಷಿತನಾದೆ+ ಗಡ +ನಿ
ಮ್ಮರಸು+ ಕುಲಕ್+ಅನುಚಿತವ +ನೆನೆದೈ +ಕಾಕ +ಬಳೆಸಿದೆಲಾ
ಸುರರು +ಪಾಂಡುಕುಮಾರರಾಗ್+ಅವ
ತರಸಿದರು+ ಗೆಲವ್+ಅವದಿರಿಗೆ +ತಾ
ವಿರಲು +ಸುಡಲೀ +ದೈತ್ಯ +ಜನ್ಮವನೆಂದರಾ+ ಖಳರು

ಅಚ್ಚರಿ:
(೧) ಸುರರು ಅವತರಿಸಿದ ಬಗೆ – ಸುರರು ಪಾಂಡುಕುಮಾರರಾಗವತರಸಿದರು

ಪದ್ಯ ೨೩: ಕೃಷ್ಣನು ಸತ್ಯಭಾಮೆಗೆ ಏನು ಹೇಳಿದ?

ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ
ಮಂದಮತಿ ಪವಮಾನಜನ ಕತ
ದಿಂದ ಪಾಂಡುಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ (ಅರಣ್ಯ ಪರ್ವ, ೪ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಕೃಷ್ಣನನ್ನು ಬಹುಬಗೆಯಿಂದ ಕರೆದು ಬೇಡಿಕೊಳ್ಳುತ್ತಿರಲು, ಅತ್ತ ಕೃಷ್ಣನು ಆನಂದದಿಂದ ಸತ್ಯಭಾಮೆಯ ಜೊತೆಗಿದ್ದನು. ಅವನ ಜ್ಞಾನಮಯ ದೃಷ್ಠಿಯಿಂದ ಪಾಂಡವರಿಗೊದಗಿದ ವಿಷಯವನ್ನು ತಿಳಿದು ಸತ್ಯಭಾಮೆಗೆ, ಮಂದಬುದ್ಧಿಯುಳ್ಳ ಭೀಮನ ದೆಸೆಯಿಂದ ಪಾಂಡವರಿಗೆ ಋಷಿಯ ಶಾಪದ ಕೇಡು ತಟ್ಟಲಿದೆ ಎಂದು ಹೇಳಿದನು.

ಅರ್ಥ:
ಭಜಿಸು: ಆರಾಧಿಸು; ನೃಪ: ರಾಜ; ಗೋವಿಂದ: ಕೃಷ್ಣ; ಅಮಳ: ನಿರ್ಮಲ; ಜ್ಞಾನ: ಬುದ್ಧಿ, ತಿಳುವಳಿಕೆ; ಸಾನಂದ: ಸಂತೋಷ; ಕೂಡೆ: ಜೊತೆ; ಮಂದಮತಿ: ಚುರುಕಾಗಿಲ್ಲದ ಬುದ್ಧಿ; ಪವಮಾನಜ: ಭೀಮ; ಪವಮಾನ: ವಾಯು; ಕತ: ಕಾರಣ, ನಿಮಿತ್ತ; ಕುಮಾರ: ಮಕ್ಕಳು; ಕೇಡು: ಆಪತ್ತು; ಬಹುದು: ಬರುತ್ತದೆ; ಋಷಿ: ಮುನಿ; ಶಾಪ: ನಿಷ್ಠುರವಾದ ನುಡಿ;

ಪದವಿಂಗಡಣೆ:
ಎಂದು+ ಭಜಿಸುತ್ತಿರಲು +ನೃಪ +ಗೋ
ವಿಂದನ್+ಅಮಳ+ಜ್ಞಾನದಲಿ +ಸಾ
ನಂದದಿಂದಲೆ +ಸತ್ಯಭಾಮಾದೇವಿಯರ+ ಕೂಡೆ
ಮಂದಮತಿ +ಪವಮಾನಜನ +ಕತ
ದಿಂದ +ಪಾಂಡುಕುಮಾರರಿಗೆ +ಕೇ
ಡಿಂದು +ಬಹುದಾ +ಋಷಿಯ +ಶಾಪದಿ+ ಶಿವಶಿವಾಯೆಂದ

ಅಚ್ಚರಿ:
(೧) ಭೀಮನನ್ನು ಕರೆದ ಬಗೆ – ಮಂದಮತಿ ಪವಮಾನಜ

ಪದ್ಯ ೩೩: ಕೃಷ್ಣನು ಸಂಧಾನಕ್ಕೆ ಯಾವ ಕೋರಿಕೆಯನ್ನು ಮುಂದಿಟ್ಟನು?

ಸಲುವ ರಾಜ್ಯದ ಭಾಗವನು ನಿನ
ಗೊಲಿದು ಬಿಡುವರು ಗ್ರಾಮವೈದನು
ಸಲಿಸಿ ಪಾಂಡುಕುಮಾರರನು ನಿನ್ನತ್ತ ಮಾಡಿದಡೆ
ಕುಲದ ಕೊಲೆ ತಪ್ಪುವುದು ಸದ್ಗತಿ
ಸುಲಭವಪ್ಪುದು ನಿನ್ನ ಮನದೊಳು
ಹೊಳೆದ ಹದನನು ಹೇಳೆನುತೆ ನೇಮಿಸಿದನಸುರಾರಿ (ಉದ್ಯೋಗ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿದ ಕೃಷ್ಣನು ಸಂಧಾನಕ್ಕೆ ತಂದ ಸೂತ್ರವನ್ನು ಮುಂದಿಟ್ಟನು. ಅವರಿಗೆ ಬರಬೇಕಾದ ಅರ್ಧರಾಜ್ಯವನ್ನು ನೀನೇ ಅನುಭವಿಸಲು ಅವರು ನಿನಗೆ ಬಿಟ್ಟುಕೊಡುತ್ತಾರೆ, ಅವರಿಗೆ ನೀನು ಐದು ಗ್ರಾಮಗಳನ್ನು ನೀಡಿದರೆ ಸಾಕು. ಅವರು ನಿನ್ನ ಪರವಾಗುತ್ತಾರೆ, ಅದರಿಂದ ಕುಲದ ಕೊಲೆ ತಪ್ಪುತ್ತದೆ ನಿನಗೂ ಸದ್ಗತಿ ದೊರೆಯುತ್ತದೆ. ಈ ವಿಚಾರದ ಬಗ್ಗೆ ನೀನು ಏನು ಹೇಳುತ್ತೀಯ ಎಂದು ಕೃಷ್ಣನು ದುರ್ಯೋಧನನನ್ನು ಪ್ರಶ್ನಿಸಿದನು.

ಅರ್ಥ:
ಸಲು: ಸೇರು, ಕೂಡು; ರಾಜ್ಯ: ದೇಶ; ಭಾಗ: ಅಂಗ; ಒಲಿ: ಸಮ್ಮತಿಸು, ಬಯಸು; ಬಿಡು: ತೊರೆ; ಗ್ರಾಮ: ಹಳ್ಳಿ, ಊರು; ಸಲಿಸು: ದೊರಕಿಸಿ ಕೊಡು; ಕುಮಾರ: ಪುತ್ರ; ನಿನ್ನತ್ತ: ಹತ್ತಿರ; ಮಾಡು: ನೆರವೇರಿಸು; ಕುಲ: ವಂಶ; ಕೊಲೆ: ವಧೆ, ಹಿಂಸೆ; ತಪ್ಪುವುದು: ನಿಲ್ಲುವುದು; ಸದ್ಗತಿ: ಒಳ್ಳೆಯ ಯುಕ್ತಿ; ಸುಲಭ: ಸರಾಗ; ಮನ: ಮನಸ್ಸು; ಹೊಳೆದ: ತೋರಿದ; ಹದ: ರೀತಿ; ಹೇಳು: ತಿಳಿಸು; ನೇಮಿಸು: ಅಪ್ಪಣೆ ಮಾಡು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಸಲುವ +ರಾಜ್ಯದ +ಭಾಗವನು +ನಿನಗ್
ಒಲಿದು +ಬಿಡುವರು +ಗ್ರಾಮವ್+ಐದನು
ಸಲಿಸಿ +ಪಾಂಡುಕುಮಾರರನು +ನಿನ್ನತ್ತ +ಮಾಡಿದಡೆ
ಕುಲದ +ಕೊಲೆ +ತಪ್ಪುವುದು +ಸದ್ಗತಿ
ಸುಲಭವಪ್ಪುದು +ನಿನ್ನ +ಮನದೊಳು
ಹೊಳೆದ +ಹದನನು +ಹೇಳೆನುತೆ+ ನೇಮಿಸಿದನ್+ಅಸುರಾರಿ

ಅಚ್ಚರಿ:
(೧) ‘ಹ’ ಕಾರದ ತ್ರಿವಳಿ ಪದ – ಹೊಳೆದ ಹದನನು ಹೇಳೆನುತೆ

ಪದ್ಯ ೧೩೭: ಜಯವು ಯಾರಿಗೆ ಒಲಿಯುತ್ತಾಳೆ?

ಎಲ್ಲಿ ಯೋಗಾಧಿಪತಿ ಮುರಹರ
ನೆಲ್ಲಿಯರ್ಜುನ ದೇವನಿಹನ
ಲ್ಲಲ್ಲಿ ಜಯಸಿರಿಯಲ್ಲದೇ ಬೇರಿಲ್ಲ ಕೇಳಿದನು
ಬಲ್ಲವರೆ ಬಲ್ಲರು ಕಣಾ ನೀ
ನಿಲ್ಲಿ ಪಾಂಡುಕುಮಾರರಿಗೆ ಸರಿ
ಯಿಲ್ಲ ಬಲ್ಲೈಹಿಂದೆ ಬಂದ ವಿಪತ್ಪರಂಪರೆಯ (ಉದ್ಯೋಗ ಪರ್ವ, ೩ ಸಂಧಿ, ೧೩೭ ಪದ್ಯ)

ತಾತ್ಪರ್ಯ:
ಎಲ್ಲಿ ಯೋಗೇಶ್ವರನಾದ ಕೃಷ್ಣನಿರುವನೋ, ಎಲ್ಲಿ ಬಲಶಾಲಿಯಾದ ಅರ್ಜುನನಿರುವನೋ ಅಲ್ಲಿಯೇ ಜಯಲಕ್ಷ್ಮಿ ನೆಲೆಸಿರುತ್ತಾಳೆ, ಇದನ್ನು ಬಲ್ಲವರೇ ಬಲ್ಲರು. ಇಲ್ಲಿ ಪಾಂಡುಪುತ್ರರಿಗೆ ಧರ್ಮ ಪರಾಕ್ರಮಗಳಲ್ಲಿ ಸರಿಸಮನಾದವರು ಯಾರೂ ಇಲ್ಲ. ಹಿಂದೆ ಬಂದ ವಿಪತ್ತಿನ ಪರಂಪರೆಯು ನಿನಗೆ ನೆನಪಿಲ್ಲವೇ ಎಂದು ವಿದುರ ಕೇಳಿದ.

ಅರ್ಥ:
ಯೋಗ:ಹೊಂದಿಸುವಿಕೆ, ಜೋಡಿಸುವಿಕೆ; ಅಧಿಪತಿ: ರಾಜ; ಮುರಹರ: ಕೃಷ್ಣ; ದೇವ: ಸುರ, ದೈವ; ಜಯ: ವಿಜಯ, ಗೆಲುವು; ಸಿರಿ: ಐಶ್ವರ್ಯ; ಬೇರೆ: ಅನ್ಯ; ಬಲ್ಲವರು: ತಿಳಿದವರು; ಕುಮಾರರು: ಪುತ್ರರು; ಬಲ್ಲೆ: ತಿಳಿದಿರುವೆ; ಹಿಂದೆ: ಪೂರ್ವದಲ್ಲಿ; ಬಂದ: ಆಗಮಿಸು; ವಿಪತ್ತು: ಆಪತ್ತು,ಕಷ್ಟ, ತೊಂದರೆ;

ಪದವಿಂಗಡಣೆ:
ಎಲ್ಲಿ +ಯೋಗಾಧಿಪತಿ +ಮುರಹರನ್
ಎಲ್ಲಿ+ ಅರ್ಜುನ +ದೇವನ್+ಇಹನ್
ಅಲ್ಲಲ್ಲಿ +ಜಯಸಿರಿಯಲ್ಲದೇ +ಬೇರಿಲ್ಲ +ಕೇಳಿದನು
ಬಲ್ಲವರೆ +ಬಲ್ಲರು +ಕಣಾ +ನೀ
ನಿಲ್ಲಿ+ ಪಾಂಡುಕುಮಾರರಿಗೆ+ ಸರಿ
ಯಿಲ್ಲ +ಬಲ್ಲೈಹಿಂದೆ+ ಬಂದ+ ವಿಪತ್ತ್+ಪರಂಪರೆಯ

ಅಚರಿ:
(೧) ಎಲ್ಲಿ ಅಲ್ಲಲ್ಲಿ, ಇಲ್ಲಿ, ನಿಲ್ಲಿ – ಪ್ರಾಸ ಪದಗಳು
(೨) ಬಲ್ಲವರೆ ಬಲ್ಲರು – ‘ಬ’ಕಾರದ ಜೋಡಿ ಪದ