ಪದ್ಯ ೧೯: ಸೈನಿಕರು ಏನೆಂದು ದೂರಿದರು?

ಅರಿಭಟರು ಪವನಜನನಾನುತ
ಮರಳುತುಬ್ಬರ ಬವರವನು ತಂ
ದರನೆಲೆಗೆ ಹಾಯ್ಕಿದರು ಕರ್ಣಾದಿಗಳ ಮುಂಬಿನಲಿ
ಜರಿದುದತಿರಥರಾಜಿ ಬಾಯಲಿ
ಕರಿಕೆ ಹಾಯ್ದುದು ಭೂಮಿಪಾಲರ
ಬಿರುದು ಮುದ್ರಿಸಿದವು ಸಮೀರಕುಮಾರನುರವಣೆಗೆ (ದ್ರೋಣ ಪರ್ವ, ೧೩ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕೌರವ ಸೈನ್ಯದವರು ಭೀಮನನ್ನೆದುರಿಸಿ ಓಡಿಹೋಗಿ, ಅರಸನ ನೆಲೆಗೆ ಹೋಗಿ ಕರ್ಣನೇ ಮೊದಲಾದವರ ಮುಂದೆ, ಅತಿರಥರು ಹಿಂದಕ್ಕೆ ಸರಿದರು. ಬಾಯಲ್ಲಿ ಹುಲ್ಲುಗರಿಕೆಯನ್ನಿಟ್ಟುಕೊಂಡು, ತಮ್ಮ ಬಿರುದಿನ ಪಟಗಳನ್ನು ತೆಗೆದು ಸುತ್ತಿ ಪೆಟ್ಟಿಗೆಯಲ್ಲಿಟ್ಟು ಬೀಗ ಹಾಕಿದರು ಎಂದು ದೂರಿದರು.

ಅರ್ಥ:
ಅರಿ: ವೈರಿ; ಭಟ: ಸೈನಿಕ; ಪವನಜ: ವಾಯುಪುತ್ರ (ಭೀಮ); ಆನು: ಎದುರಿಸು; ಮರಳು: ಹಿಂದಿರುಗು; ಉಬ್ಬರ: ಅತಿಶಯ; ಬವರ: ಯುದ್ಧ; ನೆಲೆ: ಆಶ್ರಯ; ಹಾಯ್ಕು: ಇಡು, ಇರಿಸು; ಆದಿ: ಮುಂತಾದ; ಮುಂಬು:ಮುಂಭಾಗ, ಮುಂಬದಿ; ಜರಿ: ಸೀಳು; ಅತಿರಥ: ಪರಾಕ್ರಮಿ; ಆಜಿ: ಯುದ್ಧ; ಕರಿಕೆ: ಗರಿಕೆ, ಹುಲ್ಲು; ಹಾಯ್ದು: ಹೊಡೆ; ಭೂಮಿಪಾಲ: ರಾಜ; ಬಿರುದು: ಗೌರವ ಸೂಚಕ ಪದ; ಮುದ್ರಿಸು: ಗುರುತುಮಾಡು; ಸಮೀರಕುಮಾರ: ವಾಯುಪುತ್ರ; ಸಮೀರ: ವಾಯು; ಉರವಣೆ: ಆತುರ, ಅವಸರ;

ಪದವಿಂಗಡಣೆ:
ಅರಿಭಟರು+ ಪವನಜನನ್+ಆನುತ
ಮರಳುತ್+ಉಬ್ಬರ +ಬವರವನು +ತಂ
ದರ+ನೆಲೆಗೆ +ಹಾಯ್ಕಿದರು+ ಕರ್ಣಾದಿಗಳ +ಮುಂಬಿನಲಿ
ಜರಿದುದ್+ಅತಿರಥರ್+ಆಜಿ +ಬಾಯಲಿ
ಕರಿಕೆ +ಹಾಯ್ದುದು +ಭೂಮಿಪಾಲರ
ಬಿರುದು+ ಮುದ್ರಿಸಿದವು +ಸಮೀರಕುಮಾರನ್+ಉರವಣೆಗೆ

ಅಚ್ಚರಿ:
(೧) ಪವನಜ, ಸಮೀರಕುಮಾರ – ಭೀಮನನ್ನು ಕರೆದ ಪರಿ
(೨) ರಾಜರ ಸ್ಥಿತಿ – ಬಾಯಲಿ ಕರಿಕೆ ಹಾಯ್ದುದು ಭೂಮಿಪಾಲರ ಬಿರುದು ಮುದ್ರಿಸಿದವು

ಪದ್ಯ ೭೩: ಕೌರವರು ಇಂದ್ರಪ್ರಸ್ಥನಗರದ ಅಧಿಕಾರ ಹೇಗೆ ಪಡೆದರು?

ಹರಿದರಿಂದ್ರಪ್ರಸ್ಥಕಾತನ
ಚರರು ಸಚಿವರು ಹೊಕ್ಕು ಪಾಂಡವ
ರರಮನೆಯ ಮುದ್ರಿಸಿದರಲ್ಲಿಯ ನಾಡು ಬೀಡುಗಳ
ಕರೆಸಿ ಕಾಣಿಕೆಗೊಂಡು ಠಾಣಾಂ
ತರದ ನಾಯಕವಾಡಿಗಳ ಸಂ
ವರಣೆಗಳ ಸಂತವಿಸಿದರು ಕುರುರಾಜ ಮುದ್ರೆಯಲಿ (ಸಭಾ ಪರ್ವ, ೧೭ ಸಂಧಿ, ೭೩ ಪದ್ಯ)

ತಾತ್ಪರ್ಯ:
ಕೌರವನ ದೂತರು, ಸಚಿವರು, ಇಂದ್ರಪ್ರಸ್ಥ ನಗರಕ್ಕೆ ಹೋಗಿ ಪಾಂಡವರ ಅರಮನೆಗೆ ಬೀಗಮುದ್ರೆ ಹಾಕಿದರು. ಪಾಂಡವರ ರಾಜ್ಯದ ನಾಡುಬೀಡುಗಳ ನಾಯಕರನ್ನು ಕರೆಸಿ ಕೌರವನ ಮುದ್ರೆಯಿಂದ ಅವರಿಗೆ ಅಧಿಕಾರವನ್ನು ನೀಡಿದರು.

ಅರ್ಥ:
ಹರಿದು: ಚಲಿಸು; ಚರರು: ದೂತರು; ಸಚಿವ: ಮಂತ್ರಿ; ಹೊಕ್ಕು: ಸೇರು; ಅರಮನೆ: ರಾಜರ ಆಲಯ; ಮುದ್ರಿಸು: ಕಟ್ಟು, ಗುರುತುಮಾಡು; ನಾಡು: ಪುರ, ಊರು; ಬೀಡು: ಮನೆ, ವಾಸಸ್ಥಳ; ಕರೆಸು: ಬರೆಮಾಡು; ಕಾಣಿಕೆ: ಉಡುಗೊರೆ; ಠಾಣೆ: ನೆಲೆ, ಬೀಡು; ಅಂತರ: ವ್ಯತ್ಯಾಸ, ಭೇದ; ನಾಯಕ: ಒಡೆಯ; ವಾಡಿ: ಗೋಡೆ; ಬಿಡಾರ; ಸಂವರಣೆ: ಸಜ್ಜು; ಸಂತವಿಸು: ತೃಪ್ತಿಗೊಳಿಸು; ಮುದ್ರೆ: ಗುರುತು;

ಪದವಿಂಗಡಣೆ:
ಹರಿದರ್+ಇಂದ್ರಪ್ರಸ್ಥಕ್+ಆತನ
ಚರರು+ ಸಚಿವರು +ಹೊಕ್ಕು +ಪಾಂಡವರ್
ಅರಮನೆಯ +ಮುದ್ರಿಸಿದರ್+ಅಲ್ಲಿಯ +ನಾಡು +ಬೀಡುಗಳ
ಕರೆಸಿ +ಕಾಣಿಕೆಗೊಂಡು +ಠಾಣಾಂ
ತರದ +ನಾಯಕ+ವಾಡಿಗಳ+ ಸಂ
ವರಣೆಗಳ +ಸಂತವಿಸಿದರು +ಕುರುರಾಜ +ಮುದ್ರೆಯಲಿ

ಅಚ್ಚರಿ:
(೧) ನಾಡು ಬೀಡು – ಜೋಡಿ ಪದ

ಪದ್ಯ ೩೨: ವೃಷಸೇನ ಬಾಣದ ಕೈಚಳಕ ಹೇಗಿತ್ತು?

ಆವ ವಹಿಲದೊಳರ್ಜುನನ ಬಾ
ಣಾವಳಿಯ ತರಿದೊಟ್ಟಿ ಮಗುಳೆ ಶ
ರಾವಳಿಯ ಕೊನೆಗಳಲಿ ಮುದ್ರಿಸಿದನು ಧನಂಜಯನ
ನಾವರಿಯೆವೀಸದುಭುತವನಿವ
ಕಾವನೇ ಮಿಕ್ಕವರನರ್ಜುನ
ದೇವನಲಿ ಸರಿಮಿಗಿಲ ಕಾದಿದನರಸ ಕೇಳೆಂದ (ಕರ್ಣ ಪರ್ವ, ೨೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನಿಗೆ ಸಂಜಯನು ವಿವರಿಸುತ್ತಾ, ಅರ್ಜುನನು ಬಿಟ್ಟ ಬಾಣಗಳನ್ನು ಎಷ್ಟು ಬೇಗ ಕತ್ತರಿಸಿ ತನ್ನ ಬಾಣಗಳಿಂದ ಅರ್ಜುನನ ದೇಹವನ್ನು ಗಾಯಗೊಳಿಸಿದನೋ ಏನೋ! ಇಂತಹ ಅದ್ಭುತ ಕೈಚಳಕವನ್ನು ನಾವು ಕಾಣಲಿಲ್ಲ. ಅರ್ಜುನನಿಗೆ ಸರಿಮಿಗಿಲಾಗಿ ಕಾದುವ ಇವನು ಉಳಿದವರನ್ನು ಕಾಯುವನೇ?

ಅರ್ಥ:
ವಹಿಲ: ಬೇಗ, ತ್ವರೆ; ಬಾಣ: ಶರ; ಆವಳಿ: ಸಾಲು, ಗುಂಪು; ತರಿ: ಕಡಿ, ಕತ್ತರಿಸು; ಮಗುಳೆ: ಮತ್ತೆ; ಶರಾವಳಿ: ಬಾಣಗಳ ಸಾಲು; ಕೊನೆ: ತುದಿ, ಕಡೆ; ಮುದ್ರಿಸು: ಕೆತ್ತು, ಗುರುತುಮಾಡು; ಅರಿ: ತಿಳಿ; ಅದುಭುತ: ವಿಸ್ಮಯವನ್ನುಂಟು ಮಾಡುವ; ಮಿಕ್ಕವರು: ಉಳಿದವರು; ದೇವ: ಒಡೆಯ; ಸರಿಮಿಗಿಲು: ಸರಿಸಮಾನ; ಕಾದು: ಹೋರಾಡು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆವ +ವಹಿಲದೊಳ್+ಅರ್ಜುನನ +ಬಾ
ಣಾವಳಿಯ +ತರಿದೊಟ್ಟಿ+ ಮಗುಳೆ +ಶ
ರಾವಳಿಯ +ಕೊನೆಗಳಲಿ +ಮುದ್ರಿಸಿದನು +ಧನಂಜಯನ
ನಾವರಿಯೆವ್+ಈಸ್+ಅದುಭುತವನ್+ಇವ
ಕಾವನೇ+ ಮಿಕ್ಕವರನ್+ಅರ್ಜುನ
ದೇವನಲಿ +ಸರಿಮಿಗಿಲ+ ಕಾದಿದನ್+ಅರಸ +ಕೇಳೆಂದ

ಅಚ್ಚರಿ:
(೧) ಬಾಣ, ಶರ – ಸಮನಾರ್ಥಕ ಪದ
(೨) ವೃಷಸೇನನ ಕೈಚಳಕ – ಆವ ವಹಿಲದೊಳರ್ಜುನನ ಬಾಣಾವಳಿಯ ತರಿದೊಟ್ಟಿ ಮಗುಳೆ ಶ
ರಾವಳಿಯ ಕೊನೆಗಳಲಿ ಮುದ್ರಿಸಿದನು ಧನಂಜಯನ
(೩) ಬಾಣಗಳಿಂದ ಆವರಿಸಿದನು ಎಂದು ಹೇಳಲು – ಶರಾವಳಿಯ ಕೊನೆಗಳಲಿ ಮುದ್ರಿಸಿದನು