ಪದ್ಯ ೫೬: ಧರ್ಮಜನ ಸಾರಥಿಯು ರಥವನ್ನೆಲ್ಲಿಗೆ ಕೊಂಡೊಯ್ದನು?

ವಾರುವದ ವೈಚಿತ್ರಗತಿಯ ನಿ
ಹಾರದಲಿ ಸಾರಥಿ ನರೇಂದ್ರನ
ತೇರ ತಿರುಗಿಸಿದನು ವಿಘಾತಿಯಲೊಂದು ಬಾಹೆಯಲಿ
ಆರಿ ಹೊಯ್ದನು ಹಯವನಗ್ಗದ
ವಾರಣಾವಳಿಗಳ ಪದಾತಿಯ
ತೇರ ತೆಕ್ಕೆಯನಿಕ್ಕಿದನು ಪ್ರತ್ಯೇಕ ಸಾವಿರವ (ಶಲ್ಯ ಪರ್ವ, ೩ ಸಂಧಿ, ೫೬ ಪದ್ಯ)

ತಾತ್ಪರ್ಯ:
ಧರ್ಮಜನ ಸಾರಥಿಯು ರಥದ ಕುದುರೆಗಳನ್ನು ವಿಚಿತ್ರವಾಗಿ ನಡೆಸಿ ಒಂದು ಪಕ್ಕಕ್ಕೆ ಕೊಂಡೊಯ್ದನು. ಶಲ್ಯನು ಕೂಗುತ್ತಾ ಕುದುರೆ, ಆನೆ ಪದಾತಿ ತೇರುಗಳನ್ನು ಸಹಸ್ರ ಸಂಖ್ಯೆಯಲ್ಲಿ ಕೊಂದನು.

ಅರ್ಥ:
ವಾರುವ: ಅಶ್ವ, ಕುದುರೆ; ವೈಚಿತ್ರ: ಆಶ್ಚರ್ಯಕರವಾದುದು; ಗತಿ: ವೇಗ; ನಿಹಾರ: ಹಿಂದಕ್ಕೆ ಸರಿಯುವುದು; ಸಾರಥಿ: ಸೂತ; ನರೇಂದ್ರ: ರಾಜ; ತೇರು: ಬಂಡಿ; ತಿರುಗಿಸು: ಸುತ್ತು, ಸಂಚರಿಸು; ವಿಘಾತ: ನಾಶ, ಧ್ವಂಸ; ಬಾಹೆ: ಪಕ್ಕ, ಪಾರ್ಶ್ವ; ಹೊಯ್ದು: ಹೊಡೆ; ಹಯ: ಕುದುರೆ; ಅಗ್ಗ: ಶ್ರೇಷ್ಠ; ವಾರಣ: ಆನೆ; ಆವಳಿ: ಗುಂಪು; ಪದಾತಿ: ಸೈನಿಕ, ಕಾಲಾಳು; ತೇರು: ಬಂಡಿ; ತೆಕ್ಕೆ: ಗುಂಪು, ಸಮೂಹ; ಇಕ್ಕು: ಇರಿಸು, ಇಡು; ಪ್ರತ್ಯೇಕ: ಬೇರೆ; ಸಾವಿರ: ಸಹಸ್ರ;

ಪದವಿಂಗಡಣೆ:
ವಾರುವದ+ ವೈಚಿತ್ರ+ಗತಿಯ+ ನಿ
ಹಾರದಲಿ+ ಸಾರಥಿ+ ನರೇಂದ್ರನ
ತೇರ +ತಿರುಗಿಸಿದನು +ವಿಘಾತಿಯಲೊಂದು +ಬಾಹೆಯಲಿ
ಆರಿ+ ಹೊಯ್ದನು +ಹಯವನ್+ಅಗ್ಗದ
ವಾರಣಾವಳಿಗಳ +ಪದಾತಿಯ
ತೇರ +ತೆಕ್ಕೆಯನ್+ಇಕ್ಕಿದನು +ಪ್ರತ್ಯೇಕ +ಸಾವಿರವ

ಅಚ್ಚರಿ:
(೧) ತೇರ – ೩, ೬ ಸಾಲಿನ ಮೊದಲ ಪದ
(೨) ಧರ್ಮಜ ಎಂದು ಹೇಳಲು ನರೇಂದ್ರ ಪದದ ಬಳಕೆ

ಪದ್ಯ ೫೫: ಶಲ್ಯನು ಕೋಪಗೊಳ್ಳಲು ಕಾರಣವೇನು?

ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ (ಶಲ್ಯ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನ ದಾಳಿಯಿಂದ ರಥ ಸಾರಥಿಗಳು ಇಲ್ಲದಂತಾಗಲು, ಶಲ್ಯನು ಕೋಪದಿಂದುರಿದನು. ಕೋಪಾಗ್ನಿಯು ಕಣ್ಣನ್ನಾವರಿಸಿತು. ತಲ್ಲಣಿಸುತ್ತಿದ್ದ ಕುರುಸೇನೆಯನ್ನು ಸಮಾಧಾನ ಪಡಿಸಿ ಕತ್ತಿ ಗುರಾಣಿಗಳನ್ನು ಹಿಡಿದು ಧರ್ಮಜನ ರಥದ ಮೇಲೆರಗಿ ರಥವನ್ನು ಕುದುರೆಗಳನ್ನು ಹೊಡೆದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ರಥ: ಬಂಡಿ; ಸಾರಥಿ: ಸೂತ; ವಿಸಂಚ: ಪಿತೂರಿ, ಕಪಟ; ಉರಿ: ಜ್ವಾಲೆ, ಸಂಕಟ; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಪಲ್ಕೈಸು: ಆವರಿಸು; ಅಕ್ಷಿ: ಕಣ್ಣು; ಬಲ: ಸೈನ್ಯ; ತಲ್ಲಣ: ಗೊಂದಲ; ಉರೆ: ಹೆಚ್ಚು; ಸಂಹರಿಸು: ನಾಶಮಾಡು; ಹರಿ: ಕಡಿ, ಕತ್ತರಿಸು; ಆಯುಧ: ಶಸ್ತ್ರ; ಅರಿ: ವೈರಿ: ಧರಣಿಪ: ರಾಜ; ಹೊಯ್ದು: ಹೊಡೆ; ರಥ: ಬಂಡಿ; ಹಯಾವಳಿ: ಕುದುರೆಗಳ ಸಾಲು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಮಾದ್ರೇ
ಶ್ವರನ +ರಥ +ಸಾರಥಿ +ವಿಸಂಚಿಸಲ್
ಉರಿದನ್+ಅಧಿಕ+ಕ್ರೋಧ+ಶಿಖಿ +ಪಲ್ಕೈಸಿತ್+ಅಕ್ಷಿಯಲಿ
ಕುರು+ಬಲದ +ತಲ್ಲಣವನ್+ಉರೆ +ಸಂ
ಹರಿಸಿ +ಹರಿಗೆ+ಅಡಾಯುಧದಲ್+ಅರಿ
ಧರಣಿಪನ+ಮೇಲ್ವಾಯ್ದು +ಹೊಯ್ದನು +ರಥ +ಹಯಾವಳಿಯ

ಅಚ್ಚರಿ:
(೧) ಧರ್ಮಜ ಎಂದು ಹೇಳಲು – ಅರಿಧರಣಿಪ ಪದದ ಬಳಕೆ
(೨) ಶಲ್ಯನ ಮನಸ್ಥಿತಿ – ಉರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
(೩) ಹರಿ, ಅರಿ – ೫ನೇ ಸಾಲಿನ ಮೊದಲ ಹಾಗು ಕೊನೆ ಪದ

ಪದ್ಯ ೫೪: ಧರ್ಮಜನ ಕೈಚಳಕವು ಹೇಗೆ ತೋರಿತು?

ತೇರು ಹುಡಿಹುಡಿಯಾಯ್ತು ಹೂಡಿದ
ವಾರುವಂಗಳನಲ್ಲಿ ಕಾಣೆನು
ಸಾರಥಿಯ ತಲೆ ನೆಲದೊಳದ್ದುದು ಮಿದುಳ ಜೊಂಡಿನಲಿ
ಆರಿ ಬೊಬ್ಬಿರಿದರಸನೆಸಲು
ಬ್ಬಾರದಲಿ ಕಣೆಯಡಸಿದವು ಕೈ
ವಾರವೇಕೆ ಛಡಾಳಿಸಿತು ಚಪಳತೆ ಯುಧಿಷ್ಠಿರನ (ಶಲ್ಯ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಶಲ್ಯನ ರಥವು ಪುಡಿಪುಡಿಯಾಯಿತು. ರಥಕ್ಕೆ ಕಟ್ಟಿದ ಕುದುರೆಗಳು ಅಲ್ಲಿ ಕಾಣಿಸುತ್ತಿಲ್ಲ. ಶಲ್ಯನ ಸಾರಥಿಯ ತಲೆಯು ನೆಲದ ಮೇಲೆ ಬಿದ್ದ ಮಿದುಳಿನ ಜೋಂಡಿನಲ್ಲಿ ಕಾಣದಂತಾಯಿತು. ಧರ್ಮಜನು ಗರ್ಜಿಸಿ ಬೊಬ್ಬಿರಿದು ಬಾಣಗಳನ್ನು ಬಿಡಲು, ಶಲ್ಯನ ಮೇಲೆ ಬಾಣಗಳು ಮುತ್ತಿ ನಟ್ಟವು. ಧರ್ಮಜನ ಕೈಚಳಕ ಅಧಿಕವಾಯಿತು.

ಅರ್ಥ:
ತೇರು: ಬಂಡಿ; ಹುಡಿ: ಪುಡಿ; ಹೂಡು: ನೊಗಹೇರು; ವಾರುವ: ಕುದುರೆ; ಕಾಣು: ತೋರು; ಸಾರಥಿ: ಸೂತ; ತಲೆ: ಶಿರ; ನೆಲ: ಭೂಮಿ; ಅದ್ದು: ಮುಳುಗು; ಮಿದುಳು: ಮಸ್ತಿಷ್ಕ; ಜೋಂಡು: ಜೊತೆ; ಬೊಬ್ಬಿರಿ: ಗರ್ಜಿಸು; ಅರಸ: ರಾಜ; ಎಸಲು: ಬಾಣ ಪ್ರಯೋಗ ಮಾಡು; ಉಬ್ಬಾರ: ಅತಿಶಯ; ಕಣೆ: ಬಾಣ; ಅಡಸು: ಬಿಗಿಯಾಗಿ ಒತ್ತು, ಮುತ್ತು; ಕೈವಾರ: ಸಾಮರ್ಥ್ಯ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಚಪಳ: ಚಂಚಲ;

ಪದವಿಂಗಡಣೆ:
ತೇರು +ಹುಡಿಹುಡಿಯಾಯ್ತು +ಹೂಡಿದ
ವಾರುವಂಗಳನ್+ಅಲ್ಲಿ +ಕಾಣೆನು
ಸಾರಥಿಯ +ತಲೆ +ನೆಲದೊಳ್+ಅದ್ದುದು +ಮಿದುಳ +ಜೊಂಡಿನಲಿ
ಆರಿ +ಬೊಬ್ಬಿರಿದ್+ಅರಸನ್+ಎಸಲ್
ಉಬ್ಬಾರದಲಿ+ ಕಣೆ+ಅಡಸಿದವು +ಕೈ
ವಾರವೇಕೆ+ ಛಡಾಳಿಸಿತು+ ಚಪಳತೆ +ಯುಧಿಷ್ಠಿರನ

ಅಚ್ಚರಿ:
(೧) ಧರ್ಮಜನ ಬಾಣ ಪ್ರಯೋಗದ ರೀತಿ – ಆರಿ ಬೊಬ್ಬಿರಿದರಸನೆಸಲುಬ್ಬಾರದಲಿ ಕಣೆಯಡಸಿದವು

ಪದ್ಯ ೫೩: ಧರ್ಮಜನು ಎಷ್ಟು ಬಾಣಗಳಿಂದ ಶಲ್ಯನ ರಥವನ್ನು ಕಡೆದನು?

ಕಾದುಕೊಳು ಮಾದ್ರೇಶ ಕುರುಬಲ
ವೈದಿಬರಲಿಂದಿನಲಿ ನಿನ್ನಯ
ಮೈದುನನ ಕಾಣಿಕೆಯಲೇ ಸಂಘಟನೆಗೀ ಸರಳು
ಕೈದುಕಾತಿಯರುಂಟೆ ಕರೆ ನೀ
ನೈದಲಾರೆಯೆನುತ್ತ ಮೂನೂ
ರೈದು ಶರದಲಿ ಕಡಿದನಾ ಸಾರಥಿಯ ರಥ ಹಯವ (ಶಲ್ಯ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಶಲ್ಯ, ಕೌರವ ಬಲವು ನಿನ್ನ ಸಹಾಯಕ್ಕೆ ಒಗ್ಗಟ್ಟಾಗಿ ಬರಲಿ, ನನ್ನ ಬಾಣಗಳ ದಾಳಿಯಿಂದ ನಿನ್ನನ್ನು ಕಾಪಾಡಿಕೋ. ಈಗ ನಾನು ಬಿಡುವ ಈ ಬಾಣಗಳು ನಿನ್ನ ಮೈದುನನ ಕಾಣಿಕೆಯೆಂದು ಭಾವಿಸು. ಈ ಬಾಣವನ್ನು ನೀನು ತಡೆದುಕೊಳ್ಳಲಾರೆ, ಆದ್ದರಿಂದ ನಿನ್ನ ಸೇನೆಯಲ್ಲಿ ಕೈದುಕಾತಿಯರಿದ್ದರೆ ನಿನ್ನ ಸಹಾಯಕ್ಕೆ ಕರೆದುಕೋ ಎಂದು ಮೂದಲಿಸಿ ಧರ್ಮಜನು ಮುನ್ನೂರೈದು ಬಾಣಗಳಿಂದ ಶಲ್ಯ್ನ ಸಾರಥಿ, ರಥ, ಕುದುರೆಗಳನ್ನು ಕಡೆದನು.

ಅರ್ಥ:
ಕಾದು: ಹೋರಾಟ, ಯುದ್ಧ, ಸೈರಿಸು; ಐದು: ಬಂದು ಸೇರು; ಮೈದುನ: ತಂಗಿಯ ಗಂಡ; ಕಾಣಿಕೆ: ಕೊಡುಗೆ; ಸಂಘಟನೆ: ಜೋಡಣೆ; ಸರಳು: ಬಾಣ; ಕೈದು: ಆಯುಧ; ಕೈದುಕಾರ: ಪರಾಕ್ರಮಿ; ಕರೆ: ಬರೆಮಾದು; ಶರ: ಬಾಣ; ಕಡಿ: ಸೀಳು; ಸಾರಥಿ: ಸೂತ; ರಥ: ಬಂಡಿ; ಹಯ: ಕುದುರೆ;

ಪದವಿಂಗಡಣೆ:
ಕಾದುಕೊಳು+ ಮಾದ್ರೇಶ +ಕುರುಬಲವ್
ಐದಿಬರಲ್+ಇಂದಿನಲಿ +ನಿನ್ನಯ
ಮೈದುನನ +ಕಾಣಿಕೆಯಲೇ +ಸಂಘಟನೆಗೀ+ ಸರಳು
ಕೈದುಕಾತಿಯರುಂಟೆ +ಕರೆ +ನೀನ್
ಐದಲಾರೆ+ಎನುತ್ತ +ಮೂನೂ
ರೈದು +ಶರದಲಿ +ಕಡಿದನಾ +ಸಾರಥಿಯ +ರಥ+ ಹಯವ

ಅಚ್ಚರಿ:
(೧) ಪರಾಕ್ರಮಿ ಎಂದು ಹೇಳಲು – ಕೈದುಕಾತಿ ಪದದ ಬಳಕೆ

ಪದ್ಯ ೫೨: ಧರ್ಮಜನು ಶಲ್ಯನತ್ತ ಹೇಗೆ ಬಾಣಗಳನ್ನು ಬಿಟ್ಟನು?

ಬೊಬ್ಬಿರಿದುದಾ ಸೇನೆ ರಾಯನ
ಸರ್ಬದಳ ಜೋಡಿಸಿತು ಸೋಲದ
ಮಬ್ಬು ಹರೆದುದು ಜಯದ ಜಸವೇರಿದನು ನರನಾಥ
ಉಬ್ಬಿದನು ಸತ್ಕ್ಷೇತ್ರತೇಜದ
ಗರ್ಭ ಗಾಡಿಸಿತಾರಿ ಮಿಡಿದನು
ತೆಬ್ಬಿನಸ್ತ್ರವ ತೂಗಿ ತುಳುಕಿದನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಪಾಂಡವರ ಸೇನೆಯೆಲ್ಲವೂ ಕೂಡಿ ಗರ್ಜಿಸಿತು. ಸೋಲಿನ ಮಬ್ಬು ಹಾರಿತು, ಧರ್ಮಜನು ಜಯದ ಉತ್ಸಾಹದಿಂದುಬ್ಬಿದನು. ಅವನಲ್ಲಿದ್ದ ಕ್ಷಾತ್ರತೇಜಸ್ಸು ಹೊರಹೊಮ್ಮಿತು. ಅವನು ಗರ್ಜಿಸಿ ಹೆದೆಯನ್ನು ನೇವರಿಸಿ ಬಾಣವನ್ನು ಹೂಡಿ ಅಸ್ತ್ರಗಳ ಸಮುದ್ರವನ್ನೇ ಶಲ್ಯನತ್ತ ತೂರಿದನು.

ಅರ್ಥ:
ಬೊಬ್ಬಿರಿ: ಗರ್ಜಿಸು; ಸೇನೆ: ಸೈನ್ಯ; ರಾಯ: ರಾಜ; ಸರ್ಬದಳ: ಎಲ್ಲಾ ಸೈನ್ಯ; ಜೋಡು: ಕೂಡಿಸು; ಸೋಲು: ಪರಾಭವ; ಮಬ್ಬು: ನಸುಗತ್ತಲೆ, ಮಸುಕು; ಹರೆ: ವ್ಯಾಪಿಸು; ಜಯ: ಗೆಲುವು; ಜಸ: ಯಶಸ್ಸು; ಏರು: ಮೇಲೇಳು; ನರನಾಥ: ರಾಜ; ಉಬ್ಬು: ಹಿಗ್ಗು, ಗರ್ವಿಸು; ಕ್ಷತ್ರ: ಕ್ಷತ್ರಿಯ; ತೇಜ: ಕಾಂತಿ; ಗರ್ಭ: ಹೊಟ್ಟೆ; ಗಾಢಿಸು: ತುಂಬಿಕೊಳ್ಳು; ಅರಿ: ವೈರಿ; ಮಿಡಿ: ತವಕಿಸು; ತೆಬ್ಬು: ಬಿಲ್ಲಿನ ತಿರುವು; ಅಸ್ತ್ರ: ಶಸ್ತ್ರ; ತೂಗು: ಅಲ್ಲಾಡು; ತುಳುಕು: ತುಂಬಿ ಹೊರಸೂಸು; ಅಂಬು: ಬಾಣ; ಅಂಬುಧಿ: ಸಾಗರ;

ಪದವಿಂಗಡಣೆ:
ಬೊಬ್ಬಿರಿದುದಾ +ಸೇನೆ +ರಾಯನ
ಸರ್ಬದಳ+ ಜೋಡಿಸಿತು +ಸೋಲದ
ಮಬ್ಬು +ಹರೆದುದು +ಜಯದ +ಜಸವೇರಿದನು +ನರನಾಥ
ಉಬ್ಬಿದನು +ಸತ್ಕ್ಷತ್ರ+ತೇಜದ
ಗರ್ಭ +ಗಾಡಿಸಿತ+ಅರಿ+ ಮಿಡಿದನು
ತೆಬ್ಬಿನಸ್ತ್ರವ +ತೂಗಿ +ತುಳುಕಿದನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಎಷ್ಟು ಬಾಣಗಳಿದ್ದವೆಂದು ವಿವರಿಸುವ ಪರಿ – ತುಳುಕಿದನಂಬಿನಂಬುಧಿಯ