ಪದ್ಯ ೫: ಜಗತ್ತು ಪಾಂಡುರಾಜನ ಆಳ್ವಿಕೆಯಲ್ಲಿ ಹೇಗೆ ತೋರಿತು?

ಪಸರಿಸಿದ ಪರಿಧೌತಕೀರ್ತಿ
ಪ್ರಸರದಲಿ ಬೆಳುಪಾಯ್ತು ಜನ ನಿ
ಪ್ಪಸರದಲಿ ಝಳಪಿಸುವ ಖಂಡೆಯ ಸಿರಿಯ ಸೊಂಪಿನಲಿ
ಮಸಗಿತಗ್ಗದ ಕೆಂಪು ಪರಬಲ
ವಿಸರ ದಳನ ಕ್ರೋಧಮಯ ತಾ
ಮಸದಿನಸಿತಾಭಾಸಮಾದುದು ಭುವನವಿಸ್ತಾರ (ಆದಿ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಪಾಂಡುರಾಜನ ಶುದ್ಧವಾದ ಕಿರ್ತಿಯು ಹರಡಿ ಜಗತ್ತು ಬಿಳುಪಾಯಿತು. ನಿಷ್ಠುರತೆಯಿಂದ ಅವನು ಝಳಪಿಸುವ ಕತ್ತಿಯ ದೆಸೆಯಿಂದ ಜಗತ್ತು ಕೆಂಪಾಯಿತು. ಶತ್ರುಸೈನ್ಯವನ್ನು ಬಗ್ಗುಬಡಿಯುವ ಅವನ ಕೋಪದಿಂದ ಜಗತ್ತು ಕಪ್ಪಾಗಿ ಕಾಣಿಸುತ್ತಿತ್ತು.

ಅರ್ಥ:
ಪಸರಿಸು: ಹರಡು; ಧೌತ: ಬಿಳಿ, ಶುಭ್ರ; ಕೀರ್ತಿ: ಖ್ಯಾತಿ; ಬಿಳುಪು: ಬಿಳಿಯ ಬಣ್ಣ; ಜನ: ಮನುಷ್ಯರು; ನಿಪ್ಪಸರ: ಅತಿಶಯ, ಹೆಚ್ಚಳ; ಝಳಪಿಸು: ಬೀಸು, ಹೆದರಿಸು; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಸೊಂಪು: ಸೊಗಸು, ಚೆಲುವು; ಮಸಗು: ಹರಡು; ಅಗ್ಗ: ಶ್ರೇಷ್ಠ; ಪರಬಲ: ವೈರಿ; ವಿಸರ: ವಿಸ್ತಾರ, ವ್ಯಾಪ್ತಿ; ದಳ: ಸೈನ್ಯ; ಕ್ರೋಧ: ಕೋಪ; ತಾಮಸ: ಕತ್ತಲೆ, ಅಂಧಕಾರ, ನಿಧಾನ; ಅಸಿತ: ಕಪ್ಪಾದುದು; ಭಾಸ: ಕಾಣು; ಭುವನ: ಜಗತ್ತು; ವಿಸ್ತಾರ: ಹರಡು; ಆಭಾಸ: ಕಾಂತಿ, ಪ್ರಕಾಶ;

ಪದವಿಂಗಡಣೆ:
ಪಸರಿಸಿದ +ಪರಿಧೌತ+ಕೀರ್ತಿ
ಪ್ರಸರದಲಿ +ಬೆಳುಪಾಯ್ತು +ಜನ +ನಿ
ಪ್ಪಸರದಲಿ +ಝಳಪಿಸುವ +ಖಂಡೆಯ +ಸಿರಿಯ +ಸೊಂಪಿನಲಿ
ಮಸಗಿತ್+ಅಗ್ಗದ+ ಕೆಂಪು +ಪರಬಲ
ವಿಸರ+ ದಳನ +ಕ್ರೋಧಮಯ +ತಾ
ಮಸದಿನ್+ಅಸಿತ್+ಆಭಾಸಮಾದುದು +ಭುವನ+ವಿಸ್ತಾರ

ಅಚ್ಚರಿ:
(೧) ಪಸರಿಸಿ, ಪ್ರಸರ, ನಿಪ್ಪಸರ – ಪದಗಳ ಬಳಕೆ
(೨) ಬೆಳುಪು, ಕೆಂಪು, ಅಸಿತ – ಬಣ್ಣಗಳ ಬಳಕೆ
(೩) ರೂಪಕದ ಪ್ರಯೋಗ – ಪರಬಲ ವಿಸರ ದಳನ ಕ್ರೋಧಮಯ ತಾಮಸದಿನಸಿತಾಭಾಸಮಾದುದು

ಪದ್ಯ ೧೩: ಕೌರವನು ಹೇಗೆ ಚೇತರಿಸಿಕೊಂಡನು?

ಹಾರಿತೊಂದೆಸೆಗಾಗಿ ಗದೆ ಮುರಿ
ದೇರಿದವು ಕಣ್ಣಾಲಿ ನೆತ್ತಿಯ
ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ
ಜಾರಿತಂತಸ್ತಿಮಿತ ಭಯ ಹುರಿ
ಹೇರಿತಧಿಕಕ್ರೋಧ ಕರಣದ
ತಾರುಥಟ್ಟಡಗಿದುದಪಸರಿಸಿತಸು ನಿಜಾಂಗದಲಿ (ಗದಾ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗದೆ ಒಂದು ಕಡೆಗೆ ಹಾರಿತು. ಕಣ್ಣುಗುಡ್ಡೆಗಳು ನೆಟ್ಟುಕೊಂಡವು. ನೆತ್ತಿಯಿಂದ ರಕ್ತ ಒಂದು ನಿಮಿಷ ಹರಿಯಿತು. ಒಂದು ವಿಘಳಿಗೆಯಲ್ಲಿ ಮೂರ್ಛೆ ಕಳೆದು ಪ್ರಾಣಬಂದು ಮನಸ್ಸಿನಲ್ಲಿ ಅತಿಶಯ ಕ್ರೋಧ ಆವರಿಸಿತು.

ಅರ್ಥ:
ಹಾರು: ಲಂಘಿಸು; ದೆಸೆ: ದಿಕ್ಕು; ಗದೆ: ಮುದ್ಗರ; ಮುರಿ: ಸೀಳು; ಏರು: ಮೇಲೇಳು; ಕಣ್ಣಾಲಿ: ಕಣ್ಣಿನ ಕೊನೆ; ನೆತ್ತಿ: ಶಿರ; ಜೋರು: ಸೋರುವಿಕೆ; ಮುಸುಕು: ಹೊದಿಕೆ; ಮುಖ: ಆನನ; ವಿಘಳಿಗೆ: ಕಾಲ; ಮಾತ್ರ: ಕೇವಲ; ಜಾರು: ಕೆಳಗೆ ಬೀಳು; ಅಂತಸ್ತಿಮಿತ: ಮನಶ್ಶಾಂತಿಯುಳ್ಳ; ಭಯ: ಅಂಜಿಕೆ; ಹುರಿಯೇರು: ಚ್ಚು, ಬಲ, ಗಟ್ಟಿತನ; ಅಧಿಕ: ಹೆಚ್ಚು; ಕ್ರೋಧ: ಕೋಪ; ಕರಣ: ಕಿವಿ; ತಾರು: ಸೊರಗು, ಬಡಕಲಾಗು; ಥಟ್ಟು: ಪಕ್ಕ, ಕಡೆ; ಅಡಗು: ಅವಿತುಕೊಳ್ಳು; ಪಸರಿಸು: ಹರದು; ಅಂಗ: ದೇಹದ ಭಾಗ;

ಪದವಿಂಗಡಣೆ:
ಹಾರಿತ್+ಒಂದೆಸೆಗಾಗಿ+ ಗದೆ +ಮುರಿದ್
ಏರಿದವು +ಕಣ್ಣಾಲಿ +ನೆತ್ತಿಯ
ಜೋರು +ಮುಸುಕಿತು +ಮುಖವನೊಂದು +ವಿಘಳಿಗೆ +ಮಾತ್ರದಲಿ
ಜಾರಿತ್+ಅಂತಸ್ತಿಮಿತ +ಭಯ +ಹುರಿ
ಹೇರಿತ್+ಅಧಿಕ+ಕ್ರೋಧ +ಕರಣದ
ತಾರುಥಟ್ಟ್+ಅಡಗಿದುದ+ಪಸರಿಸಿತ್+ಅಸು+ ನಿಜಾಂಗದಲಿ

ಅಚ್ಚರಿ:
(೧) ಒಂದೇ ಪದವಾಗಿ ರಚನೆ – ತಾರುಥಟ್ಟಡಗಿದುದಪಸರಿಸಿತಸು
(೨) ದುರ್ಯೋಧನನ ಸ್ಥಿತಿ – ಮುರಿದೇರಿದವು ಕಣ್ಣಾಲಿ ನೆತ್ತಿಯ ಜೋರು ಮುಸುಕಿತು ಮುಖವನೊಂದು ವಿಘಳಿಗೆ ಮಾತ್ರದಲಿ

ಪದ್ಯ ೫೫: ಶಲ್ಯನು ಕೋಪಗೊಳ್ಳಲು ಕಾರಣವೇನು?

ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ (ಶಲ್ಯ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನ ದಾಳಿಯಿಂದ ರಥ ಸಾರಥಿಗಳು ಇಲ್ಲದಂತಾಗಲು, ಶಲ್ಯನು ಕೋಪದಿಂದುರಿದನು. ಕೋಪಾಗ್ನಿಯು ಕಣ್ಣನ್ನಾವರಿಸಿತು. ತಲ್ಲಣಿಸುತ್ತಿದ್ದ ಕುರುಸೇನೆಯನ್ನು ಸಮಾಧಾನ ಪಡಿಸಿ ಕತ್ತಿ ಗುರಾಣಿಗಳನ್ನು ಹಿಡಿದು ಧರ್ಮಜನ ರಥದ ಮೇಲೆರಗಿ ರಥವನ್ನು ಕುದುರೆಗಳನ್ನು ಹೊಡೆದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ರಥ: ಬಂಡಿ; ಸಾರಥಿ: ಸೂತ; ವಿಸಂಚ: ಪಿತೂರಿ, ಕಪಟ; ಉರಿ: ಜ್ವಾಲೆ, ಸಂಕಟ; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಪಲ್ಕೈಸು: ಆವರಿಸು; ಅಕ್ಷಿ: ಕಣ್ಣು; ಬಲ: ಸೈನ್ಯ; ತಲ್ಲಣ: ಗೊಂದಲ; ಉರೆ: ಹೆಚ್ಚು; ಸಂಹರಿಸು: ನಾಶಮಾಡು; ಹರಿ: ಕಡಿ, ಕತ್ತರಿಸು; ಆಯುಧ: ಶಸ್ತ್ರ; ಅರಿ: ವೈರಿ: ಧರಣಿಪ: ರಾಜ; ಹೊಯ್ದು: ಹೊಡೆ; ರಥ: ಬಂಡಿ; ಹಯಾವಳಿ: ಕುದುರೆಗಳ ಸಾಲು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಮಾದ್ರೇ
ಶ್ವರನ +ರಥ +ಸಾರಥಿ +ವಿಸಂಚಿಸಲ್
ಉರಿದನ್+ಅಧಿಕ+ಕ್ರೋಧ+ಶಿಖಿ +ಪಲ್ಕೈಸಿತ್+ಅಕ್ಷಿಯಲಿ
ಕುರು+ಬಲದ +ತಲ್ಲಣವನ್+ಉರೆ +ಸಂ
ಹರಿಸಿ +ಹರಿಗೆ+ಅಡಾಯುಧದಲ್+ಅರಿ
ಧರಣಿಪನ+ಮೇಲ್ವಾಯ್ದು +ಹೊಯ್ದನು +ರಥ +ಹಯಾವಳಿಯ

ಅಚ್ಚರಿ:
(೧) ಧರ್ಮಜ ಎಂದು ಹೇಳಲು – ಅರಿಧರಣಿಪ ಪದದ ಬಳಕೆ
(೨) ಶಲ್ಯನ ಮನಸ್ಥಿತಿ – ಉರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
(೩) ಹರಿ, ಅರಿ – ೫ನೇ ಸಾಲಿನ ಮೊದಲ ಹಾಗು ಕೊನೆ ಪದ

ಪದ್ಯ ೨೭: ಅರ್ಜುನನಲ್ಲಿ ಯಾವ ರಸಭಾವ ಹೊಮ್ಮಿತು?

ಉಕ್ಕಿದುದು ತನಿ ವೀರರಸ ಕುದಿ
ದುಕ್ಕಿ ಹರಿದುದು ರೌದ್ರ ರಸವವ
ರಕ್ಕಜವ ನಭಕೊತ್ತಿ ಪರಿದುದು ಶಾಂತಿರಸಲಹರಿ
ಮಿಕ್ಕು ಬಹಳ ಕ್ರೋಧವೊಡಲೊಳ
ಗುಕ್ಕಿ ತಮಳೋತ್ಸಾಹ ಚಾಪಳ
ಸುಕ್ಕಿತೊಂದೇ ನಿಮಿಷ ಮೋನದೊಳಿರ್ದನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮಜನ ಹಂಗಿಸುವ ನುಡಿಗಳನ್ನು ಕೇಳಿ ಶೂರನಾದ ಅರ್ಜುನನ ಮನಸ್ಸಿನಲ್ಲಿ ವೀರರಸ ಉಕ್ಕಿತು. ರೌದ್ರರಸವು ದೇಹದ ಕಣಕಣದಲ್ಲಿ ಹೊರಹೊಮ್ಮಿತು, ಮತ್ಸರ ಹೊಟ್ಟೆಕಿಚ್ಚಿನ ರಸವನ್ನು ನಭಕ್ಕೆ ತೂರಿ ಶಾಂತಿರಸವು ಮನವನ್ನು ಆವರಿಸಿತು. ಅತಿಶಯ ಕೋಪವುಂಟಾಗಿ ನಿರುತ್ಸಾಹತೆ ಮೂಡಿತು. ಒಂದು ಕ್ಷಣದಲ್ಲಿ ಚಿತ್ತದ ಚಪಲತೆ ಮಾಯವಾಗಿ ಮೌನವು ಅರ್ಜುನನನ್ನು ಆವರಿಸಿತು.

ಅರ್ಥ:
ಉಕ್ಕು: ಹೊಮ್ಮಿ ಬರು ; ತನಿ:ಅತಿಶಯವಾಗು; ವೀರ: ಕಲಿ, ಶೂರ, ಪರಾಕ್ರಮಿ; ರಸ: ತಿರುಳು, ಸಾರ; ಕುದಿ: ಕೋಪಗೊಳ್ಳು, ಮರುಳು; ಹರಿ: ಚದರು; ರೌದ್ರ: ಭಯಂಕರ; ಅಕ್ಕಜ: ಹೊಟ್ಟೆಕಿಚ್ಚು, ಅಸೂಯೆ; ನಭ: ಆಗಸ; ಒತ್ತು: ನೂಕು; ಪರಿ: ರೀತಿ; ಶಾಂತಿ: ಮೌನ, ನೀರವತೆ; ಲಹರಿ: ರಭಸ, ಆವೇಗ; ಮಿಕ್ಕು: ಉಳಿದ; ಬಹಳ: ತುಂಬ; ಕ್ರೋಧ: ಕೋಪ; ಒಡಲು: ದೇಹ; ತಮ: ಅಂಧಕಾರ; ಉತ್ಸಾಹ: ಶಕ್ತಿ, ಬಲ, ಹುರುಪು; ಚಾಪಳ: ಚಪಲತೆ; ಸುಕ್ಕು:ನಿರುತ್ಸಾಹ, ಮಂಕಾಗು; ಮೋನ: ಮಾತನಾಡದಿರುವಿಕೆ, ಮೌನ;

ಪದವಿಂಗಡಣೆ:
ಉಕ್ಕಿದುದು +ತನಿ +ವೀರರಸ +ಕುದಿದ್
ಉಕ್ಕಿ +ಹರಿದುದು +ರೌದ್ರ +ರಸವವರ್
ಅಕ್ಕಜವ +ನಭಕೊತ್ತಿ+ ಪರಿದುದು+ ಶಾಂತಿ+ರಸ+ಲಹರಿ
ಮಿಕ್ಕು +ಬಹಳ +ಕ್ರೋಧ+ಒಡಲೊಳಗ್
ಉಕ್ಕಿ +ತಮಳೋತ್ಸಾಹ +ಚಾಪಳ
ಸುಕ್ಕಿತ್+ಒಂದೇ +ನಿಮಿಷ+ ಮೋನದೊಳ್+ಇರ್ದನಾ +ಪಾರ್ಥ

ಅಚ್ಚರಿ:
(೧) ಅರ್ಜುನನಲ್ಲಿ ಉಕ್ಕಿದ ಹಲವು ರಸಗಳು – ವೀರ, ರೌದ್ರ, ಶಾಂತಿ, ಕ್ರೋಧ

ಪದ್ಯ ೪೪: ಪಂಡಿತನ ಲಕ್ಷಣವೇನು?

ಹರುಷದರ್ಪ ಕ್ರೋಧ ಲಜ್ಜಾ
ತುರತೆ ಮಾನ ವಿಮಾನ ವಿವರಲಿ
ನಿರುತ ಸಮನೆಂದೆನಿಸಿ ಕೃತ್ಯಾಕೃತ್ಯ ಕೌಶಲವ
ವಿರಚಿಸುವ ಕಾಲದಲಿ ಶೀತೋ
ತ್ಕರದಿ ಭಯವೊಡ್ಡೈಸಲದರಿಂ
ಪರಿಹರಿಸದಾ ಕಾರ್ಯವೆಸಗುವನವನೆ ಪಂಡಿತನು (ಉದ್ಯೋಗ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ವಿದುರ ಈ ಪದ್ಯದಲ್ಲಿ ಪಂಡಿತನ ಲಕ್ಷಣವನ್ನು ವಿವರಿಸಿದ್ದಾನೆ. ಪಂಡಿತನಾದವನು, ಹರ್ಷ, ಅಹಂಕಾರ, ಕ್ರೋಧ, ನಾಚಿಕೆ, ಆತುರತೆ, ಮಾನ, ಅಪಮಾನಗಳು ಬಂದಾಗ ಸಮಚಿತ್ತವನ್ನು ಉಳಿಸಿಕೊಳ್ಳಬೇಕು, ಏನು ಮಾಡಬೇಕು, ಏನು ಮಾಡಬಾರದು ಎಂದು ಚಿಂತೆ ಬಂದಾಗ ಭಯದಿಂದ ನಡುಕ ಬಂದರೆ ಆ ಕಾರ್ಯವಾಗದು. ಆದರೆ ಆ ಭಯಕ್ಕೆ ಅವಕಾಶಕೊಡದೆ ಕಾರ್ಯವನ್ನು ಮಾಡುವವನೇ ಪಂಡಿತನು ಎಂದು ವಿದುರ ತಿಳಿಸಿದ.

ಅರ್ಥ:
ಹರುಷ: ಸಂತೋಷ; ದರ್ಪ: ಅಹಂಕಾರ; ಕ್ರೋಧ: ಕೋಪ; ಲಜ್ಜ: ನಾಚಿಕೆ; ಆತುರತೆ: ಅವಸರ; ಮಾನ: ಮರ್ಯಾದೆ, ಗೌರವ; ವಿಮಾನ: ಅಪಮಾನ; ವಿವರ: ವಿಸ್ತಾರ, ಹರಹು, ಕಂಡಿ; ನಿರುತ: ದಿಟ, ಸತ್ಯ; ಸಮ: ಸರಿಸಮಾನವಾದುದು; ಕೃತ್ಯ: ಕೆಲಸ; ಕೌಶಲ: ಜಾಣತನ, ಚದುರು; ವಿರಚಿಸು: ರೂಪಿಸು, ರಚಿಸು; ಕಾಲ: ಸಮಯ; ಶೀತ:ತಣ್ಣಗಿರುವ; ಉತ್ಕರ:ಸೀಳುವುದು, ರಾಶಿ; ಭಯ: ಹೆದರಿಕೆ; ಪರಿಹರಿಸು: ನಿವಾರಣೆ; ಕಾರ್ಯ: ಕೆಲಸ; ಎಸಗು:ಮಾಡು; ಪಂಡಿತ:ವಿದ್ವಾಂಸ;

ಪದವಿಂಗಡಣೆ:
ಹರುಷ+ದರ್ಪ +ಕ್ರೋಧ +ಲಜ್ಜ
ಆತುರತೆ+ ಮಾನ +ವಿಮಾನ +ವಿವರಲಿ
ನಿರುತ +ಸಮನೆಂದ್+ಎನಿಸಿ +ಕೃತ್ಯಾಕೃತ್ಯ +ಕೌಶಲವ
ವಿರಚಿಸುವ +ಕಾಲದಲಿ +ಶೀತ
ಉತ್ಕರದಿ +ಭಯವೊಡ್ಡೈಸಲ್+ಅದರಿಂ
ಪರಿಹರಿಸದಾ +ಕಾರ್ಯವ್+ಎಸಗುವನ್+ಅವನೆ+ ಪಂಡಿತನು

ಅಚ್ಚರಿ:
(೧) ಜೋಡಿ ಪದಗಳು: ಕೃತ್ಯಾಕೃತ್ಯ ಕೌಶಲವ
(೨) ಮಾನ ವಿಮಾನ ವಿವರಲಿ – ಮಾನ ಪದದ ಬಳಕೆ, ‘ವಿ’ ಕಾರದ ಜೋಡಿ ಪದ