ಪದ್ಯ ೫೫: ಶಲ್ಯನು ಕೋಪಗೊಳ್ಳಲು ಕಾರಣವೇನು?

ಅರಸ ಕೇಳೈ ಬಳಿಕ ಮಾದ್ರೇ
ಶ್ವರನ ರಥ ಸಾರಥಿ ವಿಸಂಚಿಸ
ಲುರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
ಕುರುಬಲದ ತಲ್ಲಣವನುರೆ ಸಂ
ಹರಿಸಿ ಹರಿಗೆಯಡಾಯುಧದಲರಿ
ಧರಣಿಪನಮೇಲ್ವಾಯ್ದು ಹೊಯ್ದನು ರಥ ಹಯಾವಳಿಯ (ಶಲ್ಯ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಧರ್ಮಜನ ದಾಳಿಯಿಂದ ರಥ ಸಾರಥಿಗಳು ಇಲ್ಲದಂತಾಗಲು, ಶಲ್ಯನು ಕೋಪದಿಂದುರಿದನು. ಕೋಪಾಗ್ನಿಯು ಕಣ್ಣನ್ನಾವರಿಸಿತು. ತಲ್ಲಣಿಸುತ್ತಿದ್ದ ಕುರುಸೇನೆಯನ್ನು ಸಮಾಧಾನ ಪಡಿಸಿ ಕತ್ತಿ ಗುರಾಣಿಗಳನ್ನು ಹಿಡಿದು ಧರ್ಮಜನ ರಥದ ಮೇಲೆರಗಿ ರಥವನ್ನು ಕುದುರೆಗಳನ್ನು ಹೊಡೆದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬಳಿಕ: ನಂತರ; ರಥ: ಬಂಡಿ; ಸಾರಥಿ: ಸೂತ; ವಿಸಂಚ: ಪಿತೂರಿ, ಕಪಟ; ಉರಿ: ಜ್ವಾಲೆ, ಸಂಕಟ; ಅಧಿಕ: ಹೆಚ್ಚು; ಕ್ರೋಧ: ಕೋಪ; ಶಿಖಿ: ಬೆಂಕಿ; ಪಲ್ಕೈಸು: ಆವರಿಸು; ಅಕ್ಷಿ: ಕಣ್ಣು; ಬಲ: ಸೈನ್ಯ; ತಲ್ಲಣ: ಗೊಂದಲ; ಉರೆ: ಹೆಚ್ಚು; ಸಂಹರಿಸು: ನಾಶಮಾಡು; ಹರಿ: ಕಡಿ, ಕತ್ತರಿಸು; ಆಯುಧ: ಶಸ್ತ್ರ; ಅರಿ: ವೈರಿ: ಧರಣಿಪ: ರಾಜ; ಹೊಯ್ದು: ಹೊಡೆ; ರಥ: ಬಂಡಿ; ಹಯಾವಳಿ: ಕುದುರೆಗಳ ಸಾಲು;

ಪದವಿಂಗಡಣೆ:
ಅರಸ +ಕೇಳೈ +ಬಳಿಕ+ ಮಾದ್ರೇ
ಶ್ವರನ +ರಥ +ಸಾರಥಿ +ವಿಸಂಚಿಸಲ್
ಉರಿದನ್+ಅಧಿಕ+ಕ್ರೋಧ+ಶಿಖಿ +ಪಲ್ಕೈಸಿತ್+ಅಕ್ಷಿಯಲಿ
ಕುರು+ಬಲದ +ತಲ್ಲಣವನ್+ಉರೆ +ಸಂ
ಹರಿಸಿ +ಹರಿಗೆ+ಅಡಾಯುಧದಲ್+ಅರಿ
ಧರಣಿಪನ+ಮೇಲ್ವಾಯ್ದು +ಹೊಯ್ದನು +ರಥ +ಹಯಾವಳಿಯ

ಅಚ್ಚರಿ:
(೧) ಧರ್ಮಜ ಎಂದು ಹೇಳಲು – ಅರಿಧರಣಿಪ ಪದದ ಬಳಕೆ
(೨) ಶಲ್ಯನ ಮನಸ್ಥಿತಿ – ಉರಿದನಧಿಕಕ್ರೋಧಶಿಖಿ ಪಲ್ಕೈಸಿತಕ್ಷಿಯಲಿ
(೩) ಹರಿ, ಅರಿ – ೫ನೇ ಸಾಲಿನ ಮೊದಲ ಹಾಗು ಕೊನೆ ಪದ