ಪದ್ಯ ೫೨: ಕರ್ಣನು ಏನು ಹೇಳಿ ಅರ್ಜುನನಿಗೆ ಬಾಣ ಬಿಟ್ಟನು?

ಭರತಭಾಷೆಯಲಾ ವಿಧಾವಂ
ತರು ವಿರಾಟನ ಮನೆಯಲಿದ್ದುದ
ನರಿಯೆವೇ ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ
ಸರಸಮಾತಂತಿರಲಿ ಚಾಪ
ಸ್ಫುರಣದಭಿನಯದಂಗಹಾರದ
ಪರಿಯ ತೋರಾ ಎನುತ ತೆಗೆದೆಚ್ಚನು ಧನಂಜಯನ (ಕರ್ಣ ಪರ್ವ, ೨೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ ನೀನು ಭರತನಾಟ್ಯದಲ್ಲಿ ವಿದ್ವಾಂಸನಲ್ಲವೇ, ವಿರಾಟನ ಅರಮನೆಯಲ್ಲಿದುದು ನಮಗೆ ತಿಳಿದಿದೆ, ನಿಮ್ಮ ವಿದ್ಯೆಗಳ ಬಗ್ಗೆ ನಮಗೇನು ಗೊತ್ತು, ಸರಸದ ಮಾತುಗಳು ಹಾಗಿರಲಿ, ಬಿಲ್ಲಿನ ಕಂಪನದ ಅಭಿನಯವನ್ನು ತೋರಿಸು, ಎನ್ನುತ್ತಾ ಅರ್ಜುನನನ್ನು ಬಾಣಗಳಿಂದ ಘಾತಿಸಿದನು.

ಅರ್ಥ:
ಭರತಭಾಷೆ: ಭರತನಾಟ್ಯ; ಭಾಷೆ: ಮಾತು, ನುಡಿ; ವಿಧಾವಂತರು: ವಿದ್ವಾಂಸರು, ಪರಿಣಿತರು;
ಮನೆ: ಆಲಯ; ಅರಿ: ತಿಳಿ; ಬಲ್ಲೆ: ತಿಳಿ; ವಿದ್ಯೆ: ಜ್ಞಾನ; ಸರಸ: ಚೆಲುವು, ವಿನೋದ; ಮಾತು: ವಾಣಿ; ಚಾಪ: ಬಿಲ್ಲು; ಸ್ಫುರಣ: ಹೊಳೆಯುವುದು, ಮಿನುಗುವುದು; ಅಭಿನಯ: ನೃತ್ಯ; ಅಂಗಹಾರ: ನಾಟ್ಯದ ಅಭಿನಯ ಮುದ್ರೆ; ಪರಿ: ರೀತಿ; ತೊರು: ಪ್ರದರ್ಶಿಸು; ತೆಗೆ: ಹೊರತರು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಭರತಭಾಷೆಯಲಾ +ವಿಧಾವಂ
ತರು +ವಿರಾಟನ +ಮನೆಯಲಿದ್ದುದನ್
ಅರಿಯೆವೇ +ನಾವೆತ್ತ+ ಬಲ್ಲೆವು+ ನಿಮ್ಮ +ವಿದ್ಯೆಗಳ
ಸರಸಮಾತ್+ಅಂತಿರಲಿ +ಚಾಪ
ಸ್ಫುರಣದ್+ಅಭಿನಯದ್+ಅಂಗಹಾರದ
ಪರಿಯ +ತೋರಾ +ಎನುತ+ ತೆಗೆದೆಚ್ಚನು+ ಧನಂಜಯನ

ಅಚ್ಚರಿ:
(೧) ಭರತನಾಟ್ಯ ಎಂದು ಹೇಳಲು – ಭರತಭಾಷೆ ಪದದ ಬಳಕೆ
(೨) ಹಂಗಿಸುವ ಪರಿ – ಭರತಭಾಷೆಯಲಾ ವಿಧಾವಂತರು; ನಾವೆತ್ತ ಬಲ್ಲೆವು ನಿಮ್ಮ ವಿದ್ಯೆಗಳ

ಪದ್ಯ ೫೧: ಅರ್ಜುನನು ಹೇಗೆ ಕರ್ಣನ ಎದುರು ನಿಂತನು?

ಅರಸ ಕೇಳೈ ಸಿಡಿಲಗರ್ಜನೆ
ಗುರವಣಿಪ ಕೇಸರಿಯವೊಲು ಕೃಪ
ಗುರುಸುತರ ಬಿಸುಟಿತ್ತ ಹಾಯ್ದನು ಹಗೆಯ ಸಮ್ಮುಖಕೆ
ತಿರುಪು ಸದರವು ನಿನಗೆ ಗತಿಕಾ
ಹುರ ಕಣಾವಳಿ ಕಂಠಗತ ಬಾ
ಹಿರನು ನೀನೆಲೆ ಕರ್ಣ ಫಡ ಹೋಗೆನುತ ತೆಗೆದೆಚ್ಚ (ಕರ್ಣ ಪರ್ವ, ೨೪ ಸಂಧಿ, ೫೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಯಾವ ರೀತಿ ಸಿಡಿಲ ಗರ್ಜನೆಗೆ ಪ್ರತಿಯಾಗಿ ಸಿಂಹವು ಕೂಗುವುದೋ ಆ ರೀತಿ ಅರ್ಜುನನು ಕೃಪ ಅಶ್ವತ್ಥಾಮರನ್ನು ಬಿಟ್ಟು ಕರ್ಣನ ಸಮ್ಮುಖಕ್ಕೆ ಬಂದನು. ನಾನು ತಿರುಗಿ ಬಂದುದು ಸದರವೆಂದು ತಿಳಿಯದಿರು, ಕೋಪದಿಂದ ಬರುವ ಬಾಣಗಳು ನಿನ್ನ ಕಂಠಕ್ಕೆರಗುತ್ತವೆ, ಛಿ ಕರ್ಣ ನೀನು ಹೊರಗಿನವನೆಂದು ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಿಡಿಲು: ಚಿಮ್ಮು, ಸಿಡಿ; ಗರ್ಜನೆ: ಆರ್ಭಟ; ಉರವಣಿ:ಆಧಿಕ್ಯ, ಅಬ್ಬರ; ಕೇಸರಿ: ಸಿಂಹ; ಬಿಸುಟು: ಬಿಟ್ಟು; ಹಾಯ್ದು: ಚಿಮ್ಮು; ಹಗೆ: ವೈರಿ; ಸಮ್ಮುಖ: ಎದುರು; ತಿರುಪು: ಸುತ್ತುವುದು, ತಿರುಗಾಟ; ಸದರ: ಸಲಿಗೆ, ಸಸಾರ; ಗತಿ: ಸ್ಥಿತಿ; ಕಾಹುರ: ಆವೇಶ, ಸೊಕ್ಕು, ಕೋಪ; ಕಣೆ: ಬಾಣ; ಆವಳಿ: ಗುಂಪು, ಸಾಲು; ಕಂಠ: ಕೊರಳು; ಬಾಹಿರ: ಹೊರಗಿನವ; ಫಡ; ತಿರಸ್ಕಾರದ ಮಾತು; ಹೋಗು: ತೊಲಗು; ತೆಗೆ: ಹೊರಗೆ ತರು; ಎಚ್ಚ: ಬಾಣಬಿಡು;

ಪದವಿಂಗಡಣೆ:
ಅರಸ +ಕೇಳೈ +ಸಿಡಿಲ+ಗರ್ಜನೆಗ್
ಉರವಣಿಪ +ಕೇಸರಿಯವೊಲು +ಕೃಪ
ಗುರುಸುತರ+ ಬಿಸುಟ್+ಇತ್ತ +ಹಾಯ್ದನು +ಹಗೆಯ +ಸಮ್ಮುಖಕೆ
ತಿರುಪು +ಸದರವು+ ನಿನಗೆ+ ಗತಿ+ಕಾ
ಹುರ+ ಕಣಾವಳಿ+ ಕಂಠಗತ+ ಬಾ
ಹಿರನು +ನೀನ್+ಎಲೆ +ಕರ್ಣ +ಫಡ+ ಹೋಗೆನುತ +ತೆಗೆದೆಚ್ಚ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಾಹುರ ಕಣಾವಳಿ ಕಂಠಗತ
(೨) ಉಪಮಾನದ ಪ್ರಯೋಗ – ಸಿಡಿಲಗರ್ಜನೆಗುರವಣಿಪ ಕೇಸರಿಯವೊಲು

ಪದ್ಯ ೫೦: ಕರ್ಣನು ಅರ್ಜುನನನ್ನು ಯುದ್ಧಕ್ಕೆ ಹೇಗೆ ಆಹ್ವಾನಿಸಿದ?

ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ್ವ ರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ (ಕರ್ಣ ಪರ್ವ, ೨೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ಕೃಪ ಅಶ್ವತ್ಥಾಮರನ್ನು ಎದುರಿಸಲು ಹೋಗುತ್ತಿದ್ದುದನ್ನು ಕಂಡ ಕರ್ಣನು, ಛಿ, ಎಲವೋ ಅರ್ಜುನ ಜೂಜಿನ ಒಡಂಬಡಿಕೆ ಇರುವುದು ನಮಗೆ ಮತ್ತು ನಿಮಗೆ, ಆ ಬ್ರಾಹ್ಮಣರ ಮೇಲೇಕೆ ಜೋರು, ಅತ್ತ ಹೋಗದೆ ನನ್ನ ಎದುರು ಬಾ, ಬಾಣದ ಹಿಡಿತದ ಮೇಲೆ ಎಲ್ಲಾ ನಂಬಿಕೆಯಿಟ್ಟು ನಿನ್ನೆದೆಯನ್ನು ಸೀಳದೆ ಬಿಡುವೆನೆ ನಾನು ಬಾ ಎಂದು ಕರ್ಣನು ಅರ್ಜುನನನ್ನು ಯುದ್ಧಕ್ಕೆ ಕರೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು; ಒಡಬಡಿಕೆ: ಒಪ್ಪಿಗೆ; ಹಾರುವ: ಬ್ರಹ್ಮಣ; ಹೆಕ್ಕಳ:ಗರ್ವ, ಜಂಭ; ಹೋಗು: ತೊಲಗು; ಇದಿರಾಗು: ಎದುರು ಬಾ; ಹಿಡಿ: ಮುಷ್ಟಿ, ಬಂಧನ; ಮುಷ್ಟಿ: ಅಂಗೈ; ಸರ್ವ: ಎಲ್ಲಾ; ರವಣ: ಚಂಚಲವಾದ, ಅಸ್ಥಿರವಾದ; ಕೊಡಹಿ: ಸೀಳು; ಎದೆ: ವಕ್ಷಸ್ಥಳ; ಎರಲ್: ಗಾಳಿ; ಕೊಳ್ಳದೆ: ಪಡೆಯದೆ; ಬಿಡು: ತೊರೆ; ಕರೆ: ಬರೆಮಾಡು;

ಪದವಿಂಗಡಣೆ:
ಫಡಫಡ್+ಎಲವೋ +ಪಾರ್ಥ +ಜೂಜಿಂಗ್
ಒಡಬಡಿಕೆ +ನಿಮಗ್+ಎಮಗೆ +ಹಾರುವರ್
ಒಡನೆ+ ಹೆಕ್ಕಳವೇಕೆ +ಹೋಗದಿರ್+ಇತ್ತಲ್+ಇದಿರಾಗು
ಹಿಡಿದ +ಮುಷ್ಟಿಗೆ +ಸರ್ವ +ರವಣವ
ಕೊಡಹಿ +ನಿನ್ನೆದೆ+ವೆರಳ+ಕೊಳ್ಳದೆ
ಬಿಡುವೆನೇ+ ಬಾ +ಎನುತ +ಕರೆದನು +ಕರ್ಣನ್+ಅರ್ಜುನನ

ಅಚ್ಚರಿ:
(೧) ಕರ್ಣನ ಶೂರತ್ವದ ನುಡಿ: ಹಿಡಿದ ಮುಷ್ಟಿಗೆ ಸರ್ವ ರವಣವ ಕೊಡಹಿ ನಿನ್ನೆದೆವೆರಳಕೊಳ್ಳದೆ ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ

ಪದ್ಯ ೪೯: ಅರ್ಜುನನು ಯುದ್ಧಕ್ಕೆ ಹೇಗೆ ತಯಾರಿ ಮಾಡಿಕೊಂಡನು?

ಬೋಳವಿಸಿದನು ಶಲ್ಯನನು ಮಿಗೆ
ಸೂಳವಿಸಿದನು ಭುಜವನುಬ್ಬಿ ನೊ
ಳಾಳವಿಸಿದನು ಚಾಪಗಾನಸ್ವಾನಕವನರಿದು
ಮೇಳವಿಸಿ ನಿಜರಥವ ಕೆಲದಲಿ
ಜೋಳವಿಸಿ ಹೊದೆಯಂಬನಹಿತನ
ಪಾಳಿಸುವಡಂಬಿದೆಯೆನುತ ತೂಗಿದನು ಮಾರ್ಗಣೆಯ (ಕರ್ಣ ಪರ್ವ, ೨೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಸಾರಥಿಯಾದ ಶಲ್ಯನನ್ನು ಸಮಾಧಾನ ಪಡಿಸಿದನು. ತನ್ನ ತೋಳನ್ನು ತಟ್ಟಿ, ಬಿಲ್ಲಿನ ಹೆದೆಯನ್ನು ಜೇವಡೆದು ಪರೀಕ್ಷಿಸಿ, ರಥವನ್ನು ಹೊಂದಿಸಿ, ಬಾಣಗಳ ಹೊರೆಯನ್ನು ಜೋಡಿಸಿಕೊಂಡು, ಶತ್ರುವನ್ನು ಸೀಳಿಹಾಕಲು ಬಾಣಗಳಿವೆ ಎಂದು ಅರಿತು ಬಾಣಗಳನ್ನು ಬಿಡಲು ಸಿದ್ದನಾದನು.

ಅರ್ಥ:
ಬೋಳೈಸು: ಸಮಾಧಾನಪಡಿಸು; ಮಿಗೆ: ಮತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಭುಜ: ಬಾಹು; ಉಬ್ಬು: ಹೆಚ್ಚಾಗು; ಆಳ: ಅಂತರಾಳ, ಗಾಢತೆ; ಆಲೈಸು: ಮನಸ್ಸಿಟ್ಟು ಕೇಳು; ಚಾಪ: ಬಿಲ್ಲು; ಗಾನ: ಸ್ವರ, ಸದ್ದು; ಸ್ವಾನ: ಶಬ್ದ, ಧ್ವನಿ; ಅರಿ: ತಿಳಿ; ಮೇಳ: ಗುಂಪು; ನಿಜ: ತನ್ನ, ದಿಟ; ರಥ: ಬಂಡಿ; ಕೆಲ: ಕೊಂಚ, ಸ್ವಲ್ಪ; ಜೋಳವಿಸು: ಜೋಡಿಸು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಅಂಬು: ಬಾಣ; ಅಹಿತ: ವೈರಿ, ಹಗೆ; ಪಾಳಿ: ಸರದಿ, ಶ್ರೇಣಿ; ತೂಗು: ಅಲ್ಲಾಡಿಸು, ಇಳಿಬೀಡು; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ;

ಪದವಿಂಗಡಣೆ:
ಬೋಳವಿಸಿದನು+ ಶಲ್ಯನನು+ ಮಿಗೆ
ಸೂಳವಿಸಿದನು +ಭುಜವನ್+ಉಬ್ಬಿನೊಳ್
ಆಳವಿಸಿದನು +ಚಾಪಗಾನ+ಸ್ವಾನಕವನ್+ಅರಿದು
ಮೇಳವಿಸಿ+ ನಿಜರಥವ+ ಕೆಲದಲಿ
ಜೋಳವಿಸಿ+ ಹೊದೆ+ಅಂಬನ್+ಅಹಿತನ
ಪಾಳಿಸುವಡ್+ಅಂಬಿದೆ+ಎನುತ +ತೂಗಿದನು +ಮಾರ್ಗಣೆಯ

ಅಚ್ಚರಿ:
(೧) ಬಿಲ್ಲಿನ ಶಬ್ದವನ್ನು ಕೇಳಿ ಎಂದು ಹೇಳಲು – ಚಾಪಗಾನ ಸ್ವಾನಕವನರಿದು
(೨) ಪ್ರಾಸ ಪದಗಳು – ಬೋಳವಿಸಿ, ಸೂಳವಿಸಿ, ಆಳವಿಸಿ, ಮೇಳವಿಸಿ, ಜೋಳವಿಸಿ

ಪದ್ಯ ೪೮: ಕರ್ಣನು ಹೇಗೆ ಯುದ್ಧಕ್ಕೆ ಮರುಳಿದನು?

ನೋಡಿದನು ಕೆಲಬಲನನುಗಿದೀ
ಡಾಡಿದನು ನಟ್ಟಂಬುಗಳ ಹರಿ
ಜೋಡಬಿಟ್ಟನು ತೊಳೆದನಂಗೋಪಾಂಗ ಶೋಣಿತವ
ಕೂಡೆ ಕಸ್ತುರಿಗಂಧದಲಿ ಮುಳು
ಗಾಡಿ ದಿವ್ಯದುಕೂಲದಲಿ ಮೈ
ಗೂಡಿ ಮೆರೆದನು ಕರ್ಣನನುಪಮ ತೀವ್ರತೇಜದಲಿ (ಕರ್ಣ ಪರ್ವ, ೨೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಮೂರ್ಛೆಯಿಂದ ಎಚ್ಚೆತ್ತು, ಅಕ್ಕಪಕ್ಕದಲ್ಲಿ ತನ್ನ ಸೈನ್ಯವನ್ನು ನೋಡಿ, ತನ್ನ ಮೈಗೆ ನೆಟ್ಟಿದ ಬಾಣಗಳನ್ನು ಕಿತ್ತು, ಹರಿದ ಕವಚವನ್ನು ತೆಗೆದುಕಾಕಿ, ಅಂಗೋಪಾಂಗಗಳಿಗೆ ಅಂಟಿದ್ದ ರಕ್ತವನ್ನು ತೊಳೆದು, ಕಸ್ತೂರಿ ಗಂಧವನ್ನು ಲೇಪಿಸಿಕೊಂಡು, ಹೊಸ ಬಟ್ಟೆಯನ್ನುಟ್ಟು ತೇಜಸ್ಸಿನಿಂದ ಕರ್ಣನು ಹೊಳೆದನು.

ಅರ್ಥ:
ನೋಡು: ವೀಕ್ಷಿಸು; ಕೆಲ: ಸ್ವಲ್ಪ; ಬಲ: ಸೈನ್ಯ; ಉಗಿದು: ಹೊರಹಾಕು; ಈಡಾಡು: ಕಿತ್ತು, ಒಗೆ, ಚೆಲ್ಲು; ನಟ್ಟ: ಚುಚ್ಚಿದ; ಅಂಬು: ಬಾಣ; ಹರಿ: ಸೀಳಿದ; ಜೋಡು: ಕವಚ; ಬಿಟ್ಟನು: ತೊರೆ; ತೊಳೆ: ಸ್ವಚ್ಛಗೊಳಿಸು; ಅಂಗೋಪಾಂಗ: ಅಂಗಗಳು; ಶೋಣಿತ: ರಕ್ತ; ಕೂಡು: ಸೇರು ; ಕಸ್ತುರಿ: ಸುಗಂಧ ದ್ರವ್ಯ; ಗಂಧ: ಚಂದನ; ಮುಳುಗು: ತೋಯು; ದಿವ್ಯ: ಶ್ರೇಷ್ಠ; ದುಕೂಲ: ಬಟ್ಟೆ; ಮೈಗೂಡಿ: ತೊಟ್ಟು; ಮೆರೆ: ಹೊಳೆ, ಅನುಪಮ: ಹೋಲಿಕೆಗೆ ಮೀರಿದ; ತೀವ್ರ: ಹೆಚ್ಚಾದ, ಅಧಿಕ; ತೇಜ: ಕಾಂತಿ;

ಪದವಿಂಗಡಣೆ:
ನೋಡಿದನು+ ಕೆಲಬಲನನ್+ಉಗಿದ್
ಈಡಾಡಿದನು +ನಟ್ಟ್+ಅಂಬುಗಳ+ ಹರಿ
ಜೋಡ+ಬಿಟ್ಟನು +ತೊಳೆದನ್+ಅಂಗೋಪಾಂಗ +ಶೋಣಿತವ
ಕೂಡೆ +ಕಸ್ತುರಿ+ಗಂಧದಲಿ+ ಮುಳು
ಗಾಡಿ +ದಿವ್ಯ+ದುಕೂಲದಲಿ +ಮೈ
ಗೂಡಿ +ಮೆರೆದನು +ಕರ್ಣನನ್+ಅನುಪಮ +ತೀವ್ರ+ತೇಜದಲಿ

ಅಚ್ಚರಿ:
(೧) ನೋಡಿ, ಈಡಾಡಿ, ಮೈಗೂಡಿ, ಮುಳುಗಾಡಿ – ಪ್ರಾಸ ಪದಗಳು

ಪದ್ಯ ೪೭: ಕರ್ಣನಲ್ಲಿ ಅಂಗಾಗಗಳಲ್ಲಿ ಯಾವ ರಸವು ಹರಿದವು?

ಅರಸ ಕೇಳಾಕ್ಷಣಕೆ ಮುಗ್ಗಿತು
ಮರವೆ ನೆಗ್ಗಿತು ಭೀತಿ ಧೈರ್ಯದ
ತಿರುಳು ಬಲಿದುದು ಕೋಪ ತಳಿದುದು ಖೋಡಿ ನೀರೊರೆಯೆ
ಕರಣಪಲ್ಲಟಪಾಡಿನಲಿ ಸಂ
ವರಿಸಿಕೊಂಡುದು ವೀರರಸವು
ಬ್ಬರಿಸಿ ಸರ್ವೇಂದ್ರಿಯವ ಮುಸುಕಿತು ನಿಮ್ಮ ದಳಪತಿಯ (ಕರ್ಣ ಪರ್ವ, ೨೪ ಸಂಧಿ, ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಅಷ್ಟರ ಹೊತ್ತಿಗೆ ಕರ್ಣನು ತನ್ನ ಮೂರ್ಛೆ ಯಿಂದ ಹೊರಬರುತ್ತಿದ್ದ, ಅವನನ್ನು ಆವರಿಸಿದ ಭೀತಿಯು ಮಾಯವಾಯಿತು, ಧೈರ್ಯ ಗಟ್ಟಿಗೊಂಡಿತು ಕೋಪವ ಚಿಗುರತೊಡಗಿತು, ಸಂಶಯವು ನೀರಾಯಿತು. ಇಂದ್ರಿಯಗಳು ಮರವೆಯನ್ನು, ದೌರ್ಬಲ್ಯವನ್ನು ಕಳೆದುಕೊಂಡವು. ವೀರರಸವು ಕರ್ಣನ ನರನಾಡಿಗಳಲ್ಲಿ ಹರಿದವು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಣ: ಗಳಿಗೆ; ಮುಗ್ಗು: ಕುಗ್ಗು, ನಾಶವಾಗು; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ನೆಗ್ಗು: ಕುಗ್ಗು, ಕುಸಿ; ಭೀತಿ: ಭಯ; ಧೈರ್ಯ: ದಿಟ್ಟತನ, ಎದೆಗಾರಿಕೆ; ತಿರುಳು: ಸಾರ; ಬಲಿ: ಹೆಚ್ಚಾಗು; ಕೋಪ: ಕ್ರೋಧ; ತಳಿ:ಹರಡು; ಖೋಡಿ: ಅನುಮಾನ, ಸಂಶಯ, ದುರುಳತನ; ನೀರೊರೆ: ನೀರು ಚೆಲ್ಲು; ಕರಣ: ಜ್ಞಾನೇಂದ್ರಿಯ; ಪಲ್ಲಟ: ಬದಲಾವಣೆ, ಮಾರ್ಪಾಟು; ಪಾಡು:ಸ್ಥಿತಿ, ಅವಸ್ಥೆ; ಸಂವರಿಸು: ಸಮಾಧಾನಗೊಳಿಸು; ವೀರ: ಶೌರ್ಯ; ರಸ: ಸಾರ; ಉಬ್ಬರಿಸು: ಹೆಚ್ಚಾಗು; ಸರ್ವ: ಎಲ್ಲಾ; ಇಂದ್ರಿಯ: ದೇಹದ ಅಂಗಗಳು; ಮುಸುಕು: ಆವರಿಸು; ದಳಪತಿ: ಸೇನಾಧಿಪತಿ;

ಪದವಿಂಗಡಣೆ:
ಅರಸ+ ಕೇಳ್+ಆ+ಕ್ಷಣಕೆ +ಮುಗ್ಗಿತು
ಮರವೆ +ನೆಗ್ಗಿತು +ಭೀತಿ +ಧೈರ್ಯದ
ತಿರುಳು +ಬಲಿದುದು +ಕೋಪ +ತಳಿದುದು +ಖೋಡಿ +ನೀರೊರೆಯೆ
ಕರಣ+ಪಲ್ಲಟ+ಪಾಡಿನಲಿ +ಸಂ
ವರಿಸಿ+ಕೊಂಡುದು +ವೀರ+ರಸವ್
ಉಬ್ಬರಿಸಿ +ಸರ್ವೇಂದ್ರಿಯವ +ಮುಸುಕಿತು +ನಿಮ್ಮ +ದಳಪತಿಯ

ಅಚ್ಚರಿ:
(೧) ಪದದ ಬಳಕೆ – ಮುಗ್ಗಿತು ಮರವೆ, ನೆಗ್ಗಿತು ಭೀತಿ
(೨) ವೀರರಸದ ಹರಿವು – ವೀರರಸವುಬ್ಬರಿಸಿ ಸರ್ವೇಂದ್ರಿಯವ ಮುಸುಕಿತು