ಪದ್ಯ ೧೪: ಅರ್ಜುನನು ಭೀಷ್ಮನನ್ನು ಹೇಗೆ ಹಂಗಿಸಿದನು?

ತೊಲತೊಲಗು ಕಲಿ ಭೀಷ್ಮ ವೃದ್ಧರಿ
ಗೆಳಭಟರ ಕೂಡಾವುದಂತರ
ವಳಿಬಲರ ಹೆದರಿಸಿದ ಹೆಕ್ಕಳವೇಕೆ ಸಾರೆನುತ
ತುಳುಕಿದನು ಕೆಂಗೋಳ ಜಲಧಿಯ
ನೆಲನದಾವುದು ದಿಕ್ಕದಾವುದು
ಸಲೆ ನಭೋಮಂಡಲವದಾವುದೆನಲೈ ಕಲಿ ಪಾರ್ಥ (ಭೀಷ್ಮ ಪರ್ವ, ೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನು ಭೀಷ್ಮನನ್ನು ಎದುರಿಸುತ್ತಾ, ನೀನಾದರೂ ಮುದುಕ, ನೀನೆಲ್ಲಿ ಯುವಕನಾದ ನಾನೆಲ್ಲಿ, ಕೈಲಾಗದ ಯೋಧರನ್ನು ಬೆದರಿಸಿದ ಮಾತ್ರಕ್ಕೆ ನೀನು ಹೆಚ್ಚಿನ ವೀರನಾಗಲಾರೆ, ತೊಲಗು, ತೊಲಗು ಎನ್ನುತ್ತಾ ಕೆಂಪಾದ ಗರಿಗಳುಳ್ಳ ಬಾಣಗಳನ್ನು ಪ್ರಯೋಗಿಸಲು ಭೂಮಿ ಯಾವುದು, ಆಕಾಶವಾವುದು ಯಾವುದು ಯಾವ ದಿಕ್ಕು ಎಂದು ತಿಳಿಯದಂತಾಯಿತು.

ಅರ್ಥ:
ತೊಲಗು: ದೂರ ಸರಿ; ಕಲಿ: ಶೂರ; ವೃದ್ಧ: ವಯಸ್ಸಾದವನು, ಮುದುಕ; ಎಳ: ಚಿಕ್ಕ; ಭಟ: ಸೈನಿಕ; ಕೂಡು: ಸೇರು; ಅಂತರ: ದೂರ; ಅಳಿಬಲ: ನಾಶವಾಗುವ ಸೈನ್ಯ; ಹೆದರಿಸು: ಬೆದರಿಸು; ಹೆಕ್ಕಳ: ಹೆಚ್ಚಳ, ಅತಿಶಯ; ಸಾರು: ಡಂಗುರ ಹೊಡೆಸು, ಪ್ರಕಟಿಸು; ತುಳುಕು: ಹೊರಸೂಸುವಿಕೆ; ಕೆಂಗೋಲ: ಕೆಂಪಾದ ಬಾಣ; ಜಲಧಿ: ಸಾಗರ; ನೆಲ: ಭೂಮಿ; ದಿಕ್ಕು: ದಿಸೆಹ್; ಸಲೆ: ವಿಸ್ತೀರ್ಣ; ನಭೋ: ಆಗಸ; ಮಂಡಲ: ನಾಡಿನ ಒಂದು ಭಾಗ; ಕಲಿ: ಶೂರ;

ಪದವಿಂಗಡಣೆ:
ತೊಲತೊಲಗು +ಕಲಿ +ಭೀಷ್ಮ +ವೃದ್ಧರಿಗ್
ಎಳಭಟರ+ ಕೂಡಾವುದ್+ಅಂತರವ್
ಅಳಿಬಲರ +ಹೆದರಿಸಿದ +ಹೆಕ್ಕಳವೇಕೆ+ ಸಾರೆನುತ
ತುಳುಕಿದನು +ಕೆಂಗೋಳ +ಜಲಧಿಯ
ನೆಲನದ್+ಆವುದು +ದಿಕ್ಕದ್+ಆವುದು
ಸಲೆ +ನಭೋಮಂಡಲವದ್+ಆವುದ್+ಎನಲೈ +ಕಲಿ +ಪಾರ್ಥ

ಅಚ್ಚರಿ:
(೧) ಭೀಷ್ಮನನ್ನು ಹಂಗಿಸುವ ಪರಿ – ತೊಲತೊಲಗು ಕಲಿ ಭೀಷ್ಮ ವೃದ್ಧರಿಗೆಳಭಟರ ಕೂಡಾವುದಂತರ

ಪದ್ಯ ೫೭: ಯುಧಿಷ್ಠಿರನು ಯಾವುದನ್ನು ಪಣಕ್ಕೆ ಒಡ್ಡಿದನು?

ಅರಸಿಯರ ಮೈಗಾಹುಗಳ ಕಿಂ
ಕರರು ಸಾವಿರವಿದರ ಪಣ ನಿ
ಮ್ಮರಸನಲಿ ಪಣವೇನೆನಲು ನೀವೇನನೊಡ್ಡಿದಿರಿ
ಮರಳಿ ಬೆಸಗೊಳಬೇಡ ನಮ್ಮಲಿ
ಬರಹವದು ಹಾಕೆನುತ ಸಾರಿಯ
ಬೆರಸಿ ತಿವಿದಾಡಿದನು ಹೆಕ್ಕಳವಿಕ್ಕಿದನು ಶಕುನಿ (ಸಭಾ ಪರ್ವ, ೧೪ ಸಂಧಿ, ೫೭ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ರಾಣಿಯರ ರಕ್ಷಣೆಗೆ ಸಾವಿರ ಮಂದಿಯಿರುವರು, ಅವರೆಲ್ಲರನ್ನೂ ಪಣಕ್ಕೆ ಇಡುತ್ತೇನೆ, ನಿಮ್ಮ ರಾಜನ ಪಣವೇನೆಂದು ಕೇಳಲು, ಶಕುನಿಯು, ನೀನು ಕೇಳುವ ಅವಶ್ಯಕವೇ ಇಲ್ಲ, ನೀನು ಏನನ್ನು ಪಣಕ್ಕೆ ಇಡುತ್ತೀಯೋ ಅದೇ ನಮ್ಮ ಪಣ ಕೂಡ ಎನ್ನುತ್ತಾ ಶಕುನಿಯು ಆಟವಾಡಿ ಮೇಲುಗೈ ಸಾಧಿಸಿದನು.

ಅರ್ಥ:
ಅರಸಿ: ರಾಣಿ; ಮೈಗಾಹು: ರಕ್ಷಣೆ; ಮೈ: ತನು; ಕಿಂಕರ: ಸೇವಕ; ಸಾವಿರ: ಸಹಸ್ರ; ಪಣ: ಜೂಜಿಗೆ ಒಡ್ಡಿದ ವಸ್ತು; ಅರಸ: ರಾಜ; ಮರಳಿ: ಮತ್ತೆ, ಪುನಃ; ಬೆಸ: ಕೇಳುವುದು, ಪ್ರಶ್ನಿಸು; ಹಾಯ್ಕು: ಹಾಕು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ತಿವಿ: ಚುಚ್ಚು; ಬೆರಸು: ಕೂಡಿಸು; ಹೆಕ್ಕಳ: ಗರ್ವ, ಜಂಭ, ಹೆಚ್ಚಳ;

ಪದವಿಂಗಡಣೆ:
ಅರಸಿಯರ +ಮೈಗಾಹುಗಳ+ ಕಿಂ
ಕರರು +ಸಾವಿರವ್+ಇದರ +ಪಣ +ನಿಮ್ಮ್
ಅರಸನಲಿ +ಪಣವೇನ್+ಎನಲು +ನೀವೇನನ್+ಒಡ್ಡಿದಿರಿ
ಮರಳಿ +ಬೆಸಗೊಳಬೇಡ +ನಮ್ಮಲಿ
ಬರಹವದು +ಹಾಕೆನುತ+ ಸಾರಿಯ
ಬೆರಸಿ+ ತಿವಿದಾಡಿದನು +ಹೆಕ್ಕಳವಿಕ್ಕಿದನು +ಶಕುನಿ

ಅಚ್ಚರಿ:
(೧) ಅರಸ, ಅರಸಿ – ಜೋಡಿ ಪದ
(೨) ರಕ್ಷಣೆಯ ಸೇವಕರನ್ನು ಮೈಗಾಹುಗ ಎಂಬ ಪದಪ್ರಯೋಗ

ಪದ್ಯ ೧೫: ದ್ರೌಪದಿಯು ಕೃಷ್ಣನನ್ನು ಹೇಗೆ ಸ್ಮರಿಸಿದಳು?

ಮಸಗಿದರೆ ಮಾಗಧನು ಯಜ್ಞವ
ಮಿಸುಕಲೀವನೆ ಚೈದ್ಯನಿಂದು
ಬ್ಬಸವ ಮಾಡಿದೊಡೆಮ್ಮ ಕೈಯಲಿ ಹರಿವ ಹೆಕ್ಕಳವೆ
ಶಿಶುವೊರಲಿದರೆ ಕಂಬದಲಿ ತೋ
ರಿಸಿದ ಕರುಣಾ ಜಲಧಿಯೇ ಪಾ
ಲಿಸಿದೆಲಾ ಪಾಂಡವರನೆಂದಳು ಹೊರಳಿ ಚರಣದಲಿ (ಸಭಾ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜರಾಸಂಧನು ಕೆರಳಿದ್ದರೆ ಯಜ್ಞವಾಗಲು ಬಿಡುತ್ತಿದ್ದನೇ? ಶಿಶುಪಾಲನ ವಿರೋಧವನ್ನು ನಾವು ಪರಿಹರಿಸಲಾಗುತ್ತಿತ್ತೇ, ಯಾವ ರೀತಿ ಬಾಲಕ ಪ್ರಹ್ಲಾದನು ಮೊರೆಯಿಟ್ಟಾಗ ಕಂಬದಿಂದ ಹೊರಬಂದು ಪ್ರಹ್ಲಾದನನ್ನು ರಕ್ಷಿಸಿದನೋ ಅದೇ ರೀತಿ ದಯಾಸಾಗರನಾದ ಕೃಷ್ಣನು ಪಾಂಡವರನ್ನು ಕಾಪಾಡಿದನು ಎನ್ನುತ್ತಾ ದ್ರೌಪದಿಯು ಕೃಷ್ಣನ ಪಾದಗಳಿಗೆ ನಮಸ್ಕರಿಸಿದಳು.

ಅರ್ಥ:
ಮಸಗು: ಹರಡು; ಕೆರಳು; ತಿಕ್ಕು; ಮಾಗಧ: ಜರಾಸಂಧ; ಯಜ್ಞ: ಕ್ರತು, ಅಧ್ವರ; ಮಿಸುಕು: ಅಲುಗಾಡು, ಅಲ್ಲಾಟ; ಚೈದ್ಯ: ಶಿಶುಪಾಲ; ಉಬ್ಬಸ: ಸಂಕಟ, ಮೇಲುಸಿರು; ಕೈ: ಹಸ್ತ; ಹರಿವ: ಚಲಿಸು, ಸಾಗು; ಹೆಕ್ಕಳ: ಹೆಚ್ಚಳ, ಅತಿಶಯ; ಶಿಶು: ಮಕ್ಕಳು; ಒರಲು: ಅರಚು, ಕೂಗಿಕೊಳ್ಳು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ತೋರು: ಗೋಚರಿಸು; ಕರುಣ: ದಯೆ; ಜಲಧಿ: ಸಾಗರ; ಪಾಲಿಸು: ರಕ್ಷಿಸು; ಹೊರಳು: ತಿರುವು, ಬಾಗು; ಚರಣ: ಪಾದ;

ಪದವಿಂಗಡಣೆ:
ಮಸಗಿದರೆ+ ಮಾಗಧನು +ಯಜ್ಞವ
ಮಿಸುಕಲ್+ಈವನೆ +ಚೈದ್ಯನಿಂದ್
ಉಬ್ಬಸವ +ಮಾಡಿದೊಡ್+ಎಮ್ಮ +ಕೈಯಲಿ +ಹರಿವ +ಹೆಕ್ಕಳವೆ
ಶಿಶುವ್+ಒರಲಿದರೆ +ಕಂಬದಲಿ +ತೋ
ರಿಸಿದ+ ಕರುಣಾ +ಜಲಧಿಯೇ +ಪಾ
ಲಿಸಿದೆಲಾ +ಪಾಂಡವರನ್+ಎಂದಳು +ಹೊರಳಿ +ಚರಣದಲಿ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಮಸಗಿದರೆ ಮಾಗಧನು; ಹರಿವ ಹೆಕ್ಕಳವೆ;ಪಾಲಿಸಿದೆಲಾ ಪಾಂಡವರ
(೨) ಉಪಮಾನದ ಪ್ರಯೋಗ – ಶಿಶುವೊರಲಿದರೆ ಕಂಬದಲಿ ತೋರಿಸಿದ ಕರುಣಾ ಜಲಧಿಯೇ ಪಾ
ಲಿಸಿದೆಲಾ ಪಾಂಡವರನ್
(೩) ನಮಸ್ಕರಿಸು ಎಂದು ಹೇಳಲು – ಹೊರಳಿ ಚರಣದಲಿ

ಪದ್ಯ ೫೦: ಕರ್ಣನು ಅರ್ಜುನನನ್ನು ಯುದ್ಧಕ್ಕೆ ಹೇಗೆ ಆಹ್ವಾನಿಸಿದ?

ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ್ವ ರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ (ಕರ್ಣ ಪರ್ವ, ೨೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ಕೃಪ ಅಶ್ವತ್ಥಾಮರನ್ನು ಎದುರಿಸಲು ಹೋಗುತ್ತಿದ್ದುದನ್ನು ಕಂಡ ಕರ್ಣನು, ಛಿ, ಎಲವೋ ಅರ್ಜುನ ಜೂಜಿನ ಒಡಂಬಡಿಕೆ ಇರುವುದು ನಮಗೆ ಮತ್ತು ನಿಮಗೆ, ಆ ಬ್ರಾಹ್ಮಣರ ಮೇಲೇಕೆ ಜೋರು, ಅತ್ತ ಹೋಗದೆ ನನ್ನ ಎದುರು ಬಾ, ಬಾಣದ ಹಿಡಿತದ ಮೇಲೆ ಎಲ್ಲಾ ನಂಬಿಕೆಯಿಟ್ಟು ನಿನ್ನೆದೆಯನ್ನು ಸೀಳದೆ ಬಿಡುವೆನೆ ನಾನು ಬಾ ಎಂದು ಕರ್ಣನು ಅರ್ಜುನನನ್ನು ಯುದ್ಧಕ್ಕೆ ಕರೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು; ಒಡಬಡಿಕೆ: ಒಪ್ಪಿಗೆ; ಹಾರುವ: ಬ್ರಹ್ಮಣ; ಹೆಕ್ಕಳ:ಗರ್ವ, ಜಂಭ; ಹೋಗು: ತೊಲಗು; ಇದಿರಾಗು: ಎದುರು ಬಾ; ಹಿಡಿ: ಮುಷ್ಟಿ, ಬಂಧನ; ಮುಷ್ಟಿ: ಅಂಗೈ; ಸರ್ವ: ಎಲ್ಲಾ; ರವಣ: ಚಂಚಲವಾದ, ಅಸ್ಥಿರವಾದ; ಕೊಡಹಿ: ಸೀಳು; ಎದೆ: ವಕ್ಷಸ್ಥಳ; ಎರಲ್: ಗಾಳಿ; ಕೊಳ್ಳದೆ: ಪಡೆಯದೆ; ಬಿಡು: ತೊರೆ; ಕರೆ: ಬರೆಮಾಡು;

ಪದವಿಂಗಡಣೆ:
ಫಡಫಡ್+ಎಲವೋ +ಪಾರ್ಥ +ಜೂಜಿಂಗ್
ಒಡಬಡಿಕೆ +ನಿಮಗ್+ಎಮಗೆ +ಹಾರುವರ್
ಒಡನೆ+ ಹೆಕ್ಕಳವೇಕೆ +ಹೋಗದಿರ್+ಇತ್ತಲ್+ಇದಿರಾಗು
ಹಿಡಿದ +ಮುಷ್ಟಿಗೆ +ಸರ್ವ +ರವಣವ
ಕೊಡಹಿ +ನಿನ್ನೆದೆ+ವೆರಳ+ಕೊಳ್ಳದೆ
ಬಿಡುವೆನೇ+ ಬಾ +ಎನುತ +ಕರೆದನು +ಕರ್ಣನ್+ಅರ್ಜುನನ

ಅಚ್ಚರಿ:
(೧) ಕರ್ಣನ ಶೂರತ್ವದ ನುಡಿ: ಹಿಡಿದ ಮುಷ್ಟಿಗೆ ಸರ್ವ ರವಣವ ಕೊಡಹಿ ನಿನ್ನೆದೆವೆರಳಕೊಳ್ಳದೆ ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ

ಪದ್ಯ ೨೪: ಭೀಮನ ಮೇಲೆ ಶಕುನಿಯ ಎಷ್ಟು ಸೈನ್ಯದ ಗುಂಪು ದಾಳಿಮಾಡಿತು?

ಮತ್ತೆ ಕರ್ಣನ ಭೀಮನಾಹವ
ಹೊತ್ತಿದುದು ಹಿಂದಾದ ಹೆಕ್ಕಳ
ಹತ್ತು ಸಾವಿರ ಹಡೆಯದೇ ಫಡ ನೂಕು ನೂಕೆನುತ
ಮತ್ತೆ ಗಜಘಟೆಯಾರು ಸಾವಿರ
ಮುತ್ತಿದವು ಸೌಬಲನ ಥಟ್ಟಿನೊ
ಳೊತ್ತಿಬಿಟ್ಟವು ನಾಲ್ಕು ಸಾವಿರ ಕುದುರೆ ರಥಸಹಿತ (ಕರ್ಣ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಉತ್ತೇಜಿತನಾದ ಕರ್ಣನು ಭೀಮನ ಜೊತೆ ಮತ್ತೆ ಕಾದಾಡಿದನು. ಹಿಂದೆ ಭೀಮನು ಸಾಧಿಸಿದ ಗೆಲವು ಒಂದಕ್ಕೆ ಹತ್ತುಸಾವಿರದಷ್ಟನ್ನು ಹಿಂದಿರುಗಿಸದೆ ಬಿಟ್ಟೇವೇ ಛೇ ಇವನ ಮೇಲೆ ನುಗ್ಗು ಎನ್ನುತ್ತಾ ಶಕುನಿಯ ಸೈನ್ಯದ ಆರು ಸಾವಿರ ಆನೆಗಳು, ನಾಲ್ಕು ಸಾವಿರ ಕುದುರೆ ರಥಗಳು ಭೀಮನನ್ನು ಮುತ್ತಿದವು.

ಅರ್ಥ:
ಮತ್ತೆ: ಪುನಃ; ಆಹವ: ಯುದ್ಧ; ಹೊತ್ತು: ಜೋರಾಗು; ಹಿಂದೆ: ಪೂರ್ವ; ಹೆಕ್ಕಳ: ಹೆಚ್ಚಳ; ಸಾವಿರ: ಸಹಸ್ರ; ಹಡೆ: ಸೈನ್ಯ, ದಂಡು; ಫಡ:ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ನೂಕು: ತಳ್ಳು; ಗಜಘಟೆ: ಆನೆಯ ಸೈನ್ಯ; ಮುತ್ತು: ಆವರಿಸು; ಸೌಬಲ: ಶಕುನಿ; ಥಟ್ಟು:ಸೈನ್ಯ, ಪಡೆ; ಒತ್ತು: ಆಕ್ರಮಿಸು, ಮುತ್ತು; ಕುದುರೆ: ಅಶ್ವ; ರಥ: ಬಂಡಿ, ತೇರು; ಸಹಿತ: ಜೊತೆ;

ಪದವಿಂಗಡಣೆ:
ಮತ್ತೆ +ಕರ್ಣನ +ಭೀಮನ್+ಆಹವ
ಹೊತ್ತಿದುದು +ಹಿಂದಾದ +ಹೆಕ್ಕಳ
ಹತ್ತು +ಸಾವಿರ +ಹಡೆಯದೇ +ಫಡ+ ನೂಕು+ ನೂಕೆನುತ
ಮತ್ತೆ +ಗಜಘಟೆ+ಆರು +ಸಾವಿರ
ಮುತ್ತಿದವು +ಸೌಬಲನ +ಥಟ್ಟಿನೊಳ್
ಒತ್ತಿಬಿಟ್ಟವು +ನಾಲ್ಕು +ಸಾವಿರ +ಕುದುರೆ +ರಥಸಹಿತ

ಅಚ್ಚರಿ:
(೧) ಹ ಕಾರದ ಸಾಲು ಪದಗಳು – ಹೊತ್ತಿದುದು ಹಿಂದಾದ ಹೆಕ್ಕಳ ಹತ್ತು ಸಾವಿರ ಹಡೆಯದೇ
(೨) ಶಕುನಿ ಸೈನ್ಯದ ಬಲ – ಆರು ಸಾವಿರ ಆನೆ, ನಾಲ್ಕು ಸಾವಿರ ಕುದುರೆ