ಪದ್ಯ ೫೦: ಕರ್ಣನು ಅರ್ಜುನನನ್ನು ಯುದ್ಧಕ್ಕೆ ಹೇಗೆ ಆಹ್ವಾನಿಸಿದ?

ಫಡಫಡೆಲವೋ ಪಾರ್ಥ ಜೂಜಿಂ
ಗೊಡಬಡಿಕೆ ನಿಮಗೆಮಗೆ ಹಾರುವ
ರೊಡನೆ ಹೆಕ್ಕಳವೇಕೆ ಹೋಗದಿರಿತ್ತಲಿದಿರಾಗು
ಹಿಡಿದ ಮುಷ್ಟಿಗೆ ಸರ್ವ ರವಣವ
ಕೊಡಹಿ ನಿನ್ನೆದೆವೆರಳಕೊಳ್ಳದೆ
ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ (ಕರ್ಣ ಪರ್ವ, ೨೪ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅರ್ಜುನನು ಕೃಪ ಅಶ್ವತ್ಥಾಮರನ್ನು ಎದುರಿಸಲು ಹೋಗುತ್ತಿದ್ದುದನ್ನು ಕಂಡ ಕರ್ಣನು, ಛಿ, ಎಲವೋ ಅರ್ಜುನ ಜೂಜಿನ ಒಡಂಬಡಿಕೆ ಇರುವುದು ನಮಗೆ ಮತ್ತು ನಿಮಗೆ, ಆ ಬ್ರಾಹ್ಮಣರ ಮೇಲೇಕೆ ಜೋರು, ಅತ್ತ ಹೋಗದೆ ನನ್ನ ಎದುರು ಬಾ, ಬಾಣದ ಹಿಡಿತದ ಮೇಲೆ ಎಲ್ಲಾ ನಂಬಿಕೆಯಿಟ್ಟು ನಿನ್ನೆದೆಯನ್ನು ಸೀಳದೆ ಬಿಡುವೆನೆ ನಾನು ಬಾ ಎಂದು ಕರ್ಣನು ಅರ್ಜುನನನ್ನು ಯುದ್ಧಕ್ಕೆ ಕರೆದನು.

ಅರ್ಥ:
ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜೂಜು: ಏನಾದರು ಒತ್ತೆ ಇಟ್ಟು ಆಡುವುದು; ಒಡಬಡಿಕೆ: ಒಪ್ಪಿಗೆ; ಹಾರುವ: ಬ್ರಹ್ಮಣ; ಹೆಕ್ಕಳ:ಗರ್ವ, ಜಂಭ; ಹೋಗು: ತೊಲಗು; ಇದಿರಾಗು: ಎದುರು ಬಾ; ಹಿಡಿ: ಮುಷ್ಟಿ, ಬಂಧನ; ಮುಷ್ಟಿ: ಅಂಗೈ; ಸರ್ವ: ಎಲ್ಲಾ; ರವಣ: ಚಂಚಲವಾದ, ಅಸ್ಥಿರವಾದ; ಕೊಡಹಿ: ಸೀಳು; ಎದೆ: ವಕ್ಷಸ್ಥಳ; ಎರಲ್: ಗಾಳಿ; ಕೊಳ್ಳದೆ: ಪಡೆಯದೆ; ಬಿಡು: ತೊರೆ; ಕರೆ: ಬರೆಮಾಡು;

ಪದವಿಂಗಡಣೆ:
ಫಡಫಡ್+ಎಲವೋ +ಪಾರ್ಥ +ಜೂಜಿಂಗ್
ಒಡಬಡಿಕೆ +ನಿಮಗ್+ಎಮಗೆ +ಹಾರುವರ್
ಒಡನೆ+ ಹೆಕ್ಕಳವೇಕೆ +ಹೋಗದಿರ್+ಇತ್ತಲ್+ಇದಿರಾಗು
ಹಿಡಿದ +ಮುಷ್ಟಿಗೆ +ಸರ್ವ +ರವಣವ
ಕೊಡಹಿ +ನಿನ್ನೆದೆ+ವೆರಳ+ಕೊಳ್ಳದೆ
ಬಿಡುವೆನೇ+ ಬಾ +ಎನುತ +ಕರೆದನು +ಕರ್ಣನ್+ಅರ್ಜುನನ

ಅಚ್ಚರಿ:
(೧) ಕರ್ಣನ ಶೂರತ್ವದ ನುಡಿ: ಹಿಡಿದ ಮುಷ್ಟಿಗೆ ಸರ್ವ ರವಣವ ಕೊಡಹಿ ನಿನ್ನೆದೆವೆರಳಕೊಳ್ಳದೆ ಬಿಡುವೆನೇ ಬಾ ಎನುತ ಕರೆದನು ಕರ್ಣನರ್ಜುನನ

ನಿಮ್ಮ ಟಿಪ್ಪಣಿ ಬರೆಯಿರಿ