ಪದ್ಯ ೧: ಭೀಮ ದುರ್ಯೋಧನರು ಹೇಗೆ ಕಾದಿದರು?

ಕೇಳು ಧೃತರಾಷ್ಟ್ರಾವನಿಪ ಕೈ
ಮೇಳವಿಸಿದರು ವಿಷಮ ಸಮರಕ
ರಾಳರೋಷಶ್ವಾಸ ಧೂಮಳಮುಖಭಯಂಕರರು
ಚಾಳನದ ಚೌಪಟರು ಶಸ್ತ್ರಾ
ಸ್ಫಾಳನದ ವಜ್ರಾಭಿಘಾತಾ
ಭೀಳನಿಷ್ಠುರರೊದಗಿದರು ಕೌರವ ವೃಕೋದರರು (ಗದಾ ಪರ್ವ, ೭ ಸಂಧಿ, ೧ ಪದ್ಯ)

ತಾತ್ಪರ್ಯ:
ಕರಾಳ ರೋಷದ ಉಸಿರಿನ ಹೊಗೆಯನ್ನು ಸೂಸುತ್ತಾ, ಶತ್ರುಗಳು ಸುತ್ತಮುತ್ತಿದರೂ ಇದಿರಿಸಿ ಗೆಲ್ಲಬಲ್ಲ ಪರಾಕ್ರಮಿಗಳಾದ ಭೀಮ ದುರ್ಯೋಧನರು, ಭಯಂಕರ ವಜ್ರಾಯುಧದ ಹೊಡೆತವನ್ನು ಹೋಲುವ ನಿಷ್ಠುರ ಗದಾಘಾತದಿಂದ ಅಸಮಾನ ಪರಾಕ್ರಮವನ್ನು ಪ್ರದರ್ಶಿಸುತ್ತಾ ಕಾದಿದರು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಮೇಳವಿಸು: ಸೇರು, ಜೊತೆಯಾಗು; ಕೈ: ಹಸ್ತ; ಕೈಮೇಳವಿಸು: ಕೈ ಕೈ ಸೇರಿಸಿ ಹೋರಾಡು; ವಿಷಮ: ಕಷ್ಟವಾದ; ಸಮರ: ಯುದ್ಧ; ಕರಾಳ: ಭಯಂಕರ; ರೋಷ: ಕೋಪ; ಶ್ವಾಸ: ಉಸಿರು; ಧೂಮ: ಹೊಗೆ; ಮುಖ: ಆನನ; ಭಯಂಕರ: ಘೋರವಾದ; ಚಾಳನ: ಚಲನೆ; ಚೌಪಟ: ನಾಲ್ಕು ಕಡೆಯೂ ಕಾದಾಡುವ ವೀರ; ಶಸ್ತ್ರ: ಆಯುಧ; ವಜ್ರ: ಗಟ್ಟಿ; ಘಾತ: ಹೊಡೆತ; ನಿಷ್ಠುರ: ಕಠಿಣವಾದುದು; ಒದಗು: ಲಭ್ಯ, ದೊರೆತುದು; ವೃಕೋದರ: ಭೀಮ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ಕೈ
ಮೇಳವಿಸಿದರು +ವಿಷಮ +ಸಮರ+ಕ
ರಾಳ+ರೋಷ+ಶ್ವಾಸ+ ಧೂಮಳ+ಮುಖ+ಭಯಂಕರರು
ಚಾಳನದ +ಚೌಪಟರು +ಶಸ್ತ್ರಾ
ಸ್ಫಾಳನದ +ವಜ್ರಾಭಿಘಾತಾ
ಭೀಳ+ನಿಷ್ಠುರರ್+ಒದಗಿದರು +ಕೌರವ +ವೃಕೋದರರು

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ವಿಷಮ ಸಮರ ಕರಾಳ ರೋಷಶ್ವಾಸ ಧೂಮಳಮುಖಭಯಂಕರರು

ಪದ್ಯ ೧೫: ಅಶ್ವತ್ಥಾಮನು ಕರ್ಣನ ಮೇಲೇಕೆ ಕೋಪಗೊಂಡನು?

ಕೇಳಿದಶ್ವತ್ಥಾಮ ಕಿಡಿಗಳ
ನಾಲಿಗಳೊಳುಗುಳಿದನು ಕೇಳೆಲೆ
ಖೂಳ ಸೂತನ ಮಗನೆ ಸುಭಟಾಂಗದೊಳು ಖರೆಯನಲಾ
ಕೀಳುಜಾತಿಗೆ ತಕ್ಕನುಡಿಗಳು
ಮೇಳವಿಸಿದವು ಕುಲವ ನಾಲಗೆ
ಹೇಳಿತೆಂಬುದು ತಪ್ಪದಾಯಿತು ಕರ್ಣ ಕೇಳೆಂದ (ವಿರಾಟ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಕರ್ಣನು ಕೃಪಾಚಾರ್ಯರನ್ನು ಹಂಗಿಸುವುದನ್ನು ಕೇಳಿದ ಅಶ್ವತ್ಥಾಮನ ಕಣ್ಣುಗಳಲ್ಲಿ ಕಿಡಿಗಳನ್ನುಗುಳಿದವು, ಎಲವೋ ಖೂಳನಾದ ಸೂತಪುತ್ರ ಕರ್ಣ, ನೀನು ಪರಾಕ್ರಮದಲ್ಲಿ, ಯುದ್ಧದಲ್ಲಿ ಬಹಳ ಹೆಚ್ಚಿನವನೋ? ನಿನ್ನ ಜಾತಿಗೆ ತಕ್ಕ ಮಾತುಗಳನ್ನಾಡಿದೆ, ಕುಲವನ್ನು ನಾಲಗೆ ಹೇಳಿತು ಎಂಬ ಗಾದೆ ತಪ್ಪಲಿಲ್ಲ ಎಂದನು.

ಅರ್ಥ:
ಕೇಳು: ಆಲಿಸು; ಕಿಡಿ: ಬೆಂಕಿ; ಆಲಿ: ಕಣ್ಣು;ಉಗುಳು: ಹೊರಹಾಕು; ಕೇಳು: ಆಲಿಸು; ಖೂಳ: ದುಷ್ಟ; ಸೂತ: ಸಾರಥಿ ಮಗ: ತನಯ; ಸುಭಟ: ಪರಾಕ್ರಮಿ; ಖರೆ: ನಿಜ; ಕೀಳು: ಅಲ್ಪ, ಕೆಳಮಟ್ಟ; ಜಾತಿ: ಹುಟ್ಟಿದ ಕುಲ, ವಂಶ; ತಕ್ಕ: ಸರಿಯಾದ; ನುಡಿ: ಮಾತು; ಮೇಳವಿಸು: ಕೂಡಿಸು, ಸೇರಿಸು; ಕುಲ: ವಂಶ; ನಾಲಗೆ: ಜಿಹ್ವೆ; ಹೇಳು: ತಿಳಿಸು; ತಪ್ಪು: ಸರಿಯಲ್ಲದ; ಕೇಳು: ಆಲಿಸು;

ಪದವಿಂಗಡಣೆ:
ಕೇಳಿದ್+ಅಶ್ವತ್ಥಾಮ +ಕಿಡಿಗಳನ್
ಆಲಿಗಳೊಳ್+ಉಗುಳಿದನು +ಕೇಳ್+ಎಲೆ
ಖೂಳ +ಸೂತನ +ಮಗನೆ+ ಸುಭಟಾಂಗದೊಳು +ಖರೆಯನಲ್+ಆ
ಕೀಳುಜಾತಿಗೆ+ ತಕ್ಕ+ನುಡಿಗಳು
ಮೇಳವಿಸಿದವು+ ಕುಲವ +ನಾಲಗೆ
ಹೇಳಿತೆಂಬುದು +ತಪ್ಪದಾಯಿತು+ ಕರ್ಣ+ ಕೇಳೆಂದ

ಅಚ್ಚರಿ:
(೧) ನಾಣ್ಣುಡಿಯ ಬಳಕೆ – ಕುಲವ ನಾಲಗೆ ಹೇಳಿತೆಂಬುದು ತಪ್ಪದಾಯಿತು
(೨) ಕೋಪವನ್ನು ವಿವರಿಸುವ ಪರಿ – ಕಿಡಿಗಳನಾಲಿಗಳೊಳುಗುಳಿದನು

ಪದ್ಯ ೪೯: ಅರ್ಜುನನು ಯುದ್ಧಕ್ಕೆ ಹೇಗೆ ತಯಾರಿ ಮಾಡಿಕೊಂಡನು?

ಬೋಳವಿಸಿದನು ಶಲ್ಯನನು ಮಿಗೆ
ಸೂಳವಿಸಿದನು ಭುಜವನುಬ್ಬಿ ನೊ
ಳಾಳವಿಸಿದನು ಚಾಪಗಾನಸ್ವಾನಕವನರಿದು
ಮೇಳವಿಸಿ ನಿಜರಥವ ಕೆಲದಲಿ
ಜೋಳವಿಸಿ ಹೊದೆಯಂಬನಹಿತನ
ಪಾಳಿಸುವಡಂಬಿದೆಯೆನುತ ತೂಗಿದನು ಮಾರ್ಗಣೆಯ (ಕರ್ಣ ಪರ್ವ, ೨೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕರ್ಣನು ತನ್ನ ಸಾರಥಿಯಾದ ಶಲ್ಯನನ್ನು ಸಮಾಧಾನ ಪಡಿಸಿದನು. ತನ್ನ ತೋಳನ್ನು ತಟ್ಟಿ, ಬಿಲ್ಲಿನ ಹೆದೆಯನ್ನು ಜೇವಡೆದು ಪರೀಕ್ಷಿಸಿ, ರಥವನ್ನು ಹೊಂದಿಸಿ, ಬಾಣಗಳ ಹೊರೆಯನ್ನು ಜೋಡಿಸಿಕೊಂಡು, ಶತ್ರುವನ್ನು ಸೀಳಿಹಾಕಲು ಬಾಣಗಳಿವೆ ಎಂದು ಅರಿತು ಬಾಣಗಳನ್ನು ಬಿಡಲು ಸಿದ್ದನಾದನು.

ಅರ್ಥ:
ಬೋಳೈಸು: ಸಮಾಧಾನಪಡಿಸು; ಮಿಗೆ: ಮತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಭುಜ: ಬಾಹು; ಉಬ್ಬು: ಹೆಚ್ಚಾಗು; ಆಳ: ಅಂತರಾಳ, ಗಾಢತೆ; ಆಲೈಸು: ಮನಸ್ಸಿಟ್ಟು ಕೇಳು; ಚಾಪ: ಬಿಲ್ಲು; ಗಾನ: ಸ್ವರ, ಸದ್ದು; ಸ್ವಾನ: ಶಬ್ದ, ಧ್ವನಿ; ಅರಿ: ತಿಳಿ; ಮೇಳ: ಗುಂಪು; ನಿಜ: ತನ್ನ, ದಿಟ; ರಥ: ಬಂಡಿ; ಕೆಲ: ಕೊಂಚ, ಸ್ವಲ್ಪ; ಜೋಳವಿಸು: ಜೋಡಿಸು; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಅಂಬು: ಬಾಣ; ಅಹಿತ: ವೈರಿ, ಹಗೆ; ಪಾಳಿ: ಸರದಿ, ಶ್ರೇಣಿ; ತೂಗು: ಅಲ್ಲಾಡಿಸು, ಇಳಿಬೀಡು; ಮಾರ್ಗಣೆ: ಪ್ರತಿಯಾಗಿ ಬಿಡುವ ಬಾಣ, ಎದುರು ಬಾಣ;

ಪದವಿಂಗಡಣೆ:
ಬೋಳವಿಸಿದನು+ ಶಲ್ಯನನು+ ಮಿಗೆ
ಸೂಳವಿಸಿದನು +ಭುಜವನ್+ಉಬ್ಬಿನೊಳ್
ಆಳವಿಸಿದನು +ಚಾಪಗಾನ+ಸ್ವಾನಕವನ್+ಅರಿದು
ಮೇಳವಿಸಿ+ ನಿಜರಥವ+ ಕೆಲದಲಿ
ಜೋಳವಿಸಿ+ ಹೊದೆ+ಅಂಬನ್+ಅಹಿತನ
ಪಾಳಿಸುವಡ್+ಅಂಬಿದೆ+ಎನುತ +ತೂಗಿದನು +ಮಾರ್ಗಣೆಯ

ಅಚ್ಚರಿ:
(೧) ಬಿಲ್ಲಿನ ಶಬ್ದವನ್ನು ಕೇಳಿ ಎಂದು ಹೇಳಲು – ಚಾಪಗಾನ ಸ್ವಾನಕವನರಿದು
(೨) ಪ್ರಾಸ ಪದಗಳು – ಬೋಳವಿಸಿ, ಸೂಳವಿಸಿ, ಆಳವಿಸಿ, ಮೇಳವಿಸಿ, ಜೋಳವಿಸಿ