ಪದ್ಯ ೩೯: ಯಮನ ನಗರಿಗೆ ಎಷ್ಟು ಮಂದಿ ಹೋದರು?

ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ (ಗದಾ ಪರ್ವ, ೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಐನೂರು ಆನೆಗಲೂ, ಸಾವಿರದ ಮುನ್ನೂರೆರಡು ರಥಗಳು, ಎಂಬತ್ತು ಸಾವಿರ ಕಾಲಾಳುಗಳು, ಯಮನಗರಿಗೆ ಹೋದರು. ಮತ್ತೆ ಸಾವಿರ ಕುದುರೆಗಳು, ನೂರು ರಥಗಳು ಇನ್ನೂರೆಂಟು ಆನೆಗಳು, ಲೆಕ್ಕವಿಲ್ಲದಷ್ಟು ಕಾಲಾಳುಗಳು ಅಲ್ಲಿಗೇ ಹೋದರು.

ಅರ್ಥ:
ಕರಿಘಟೆ: ಆನೆಗಳ ಗುಂಪು; ರಥ: ಬಂಡಿ; ಸಾವಿರ: ಸಹಸ್ರ; ತುರಗ: ಅಶ್ವ, ಕುದುರೆ; ವಿಗಡ: ಶೌರ್ಯ, ಪರಾಕ್ರಮ; ಪಾಯದಳ: ಕಾಲಾಳು; ತೆರಳು: ಗಮಿಸು; ಅಂತಕಪುರ: ಯಮನ ಊರು, ನರಕ; ಪುನರಪಿ: ಮತ್ತೆ; ಮದ: ಮತ್ತು, ಅಮಲು; ಅಗಣಿತ: ಲೆಕ್ಕವಿಲ್ಲದ; ಪಾಯದಳ: ಕಾಲಾಳು;

ಪದವಿಂಗಡಣೆ:
ಕರಿಘಟೆಗಳ್+ಐನೂರು +ರಥ+ ಸಾ
ವಿರದ +ಮೂನೂರೆರಡು +ಸಾವಿರ
ತುರಗದಳವ್+ಎಂಬತ್ತು +ಸಾವಿರ +ವಿಗಡ +ಪಾಯದಳ
ತೆರಳಿತ್+ಅಂತಕಪುರಿಗೆ +ಪುನರಪಿ
ತುರಗ +ಸಾವಿರ +ನೂರು +ರಥ +ಮದ
ಕರಿಗಳ್+ಇನ್ನೂರೆಂಟು +ಸಾವಿರ್+ಅಗಣಿತ +ಪಾಯದಳ

ಅಚ್ಚರಿ:
(೧) ಕರಿ, ತುರಗ, ಪಾಯದಳ – ೧,೬; ೩,೫ ಸಾಲಿನ ಮೊದಲ ಪದ; ೩, ೬ ಸಾಲಿನ ಕೊನೆ ಪದ

ಪದ್ಯ ೩೮: ರಣರಂಗದ ಚಿತ್ರಣ ಹೇಗಾಗಿತ್ತು?

ಉಡಿಯೆ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡಿಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ (ಗದಾ ಪರ್ವ, ೧ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮುಖದ ಕವಚವು ಮುರಿಯಲು, ಆನೆಗಳು ಜೋದರನ್ನು ಕೆಳಕ್ಕೆ ಕೆಡವಿ ಓಡಿದವು. ಗೊರಸುಗಳು ಕತ್ತರಿಸಿದಾಗ ಕುದುರೆಗಳು ರಾವುತರನ್ನು ಕೆಡವಿ ಹೋದವು. ಸಾರಥಿಯು ಸಾಯಲು, ರಥಗಳು ನಿಂತವು. ಮಹಾರಥರು ಸತ್ತು ಮೆದೆಯಂತೆ ಬಿದ್ದರು. ಪದಾತಿಗಳೆಷ್ಟು ಮಂದಿ ಬಿದ್ದರೆಂದು ನಾನರಿಯೆ.

ಅರ್ಥ:
ಉಡಿ:ಸೊಂಟ; ಮೋರೆ: ಮುಖ; ಜೋಡು: ಜೊತೆ, ಜೋಡಿ; ಜೋದ: ಆನೆಮೇಲೆ ಕೂತು ಯುದ್ಧಮಾಡುವವ; ಕೊಡಹಿ: ಕೆಡವಿ; ಹಾಯ್ದು: ಹೊಡೆ; ದಂತಿಘಟೆ: ಆನೆಗಳ ಗುಂಪು; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಕದಿ: ಸೀಳು; ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಹಾಯಿಕು: ಹಾಕು; ರಾವುತ: ಕುದುರೆಸವಾರ; ಮಡಿ: ಸಾವು; ಸಾರಥಿ: ಸೂತ; ಮಗ್ಗು: ಕುಂದು, ಕುಗ್ಗು; ರಥ: ಬಂಡಿ; ನಡೆ: ಚಲಿಸು; ಕಾದು: ಹೋರಾಡು; ಮಹಾರಥ: ಪರಾಕ್ರಮಿ; ಮೆದೆ: ಒಡ್ಡು, ಗುಂಪು; ಕೆಡೆ: ಬೀಳು, ಕುಸಿ; ಉಳಿದ: ಮಿಕ್ಕ; ಪದಾತಿ: ಕಾಲಾಳು; ಪತನ: ಬೀಳು; ಅರಿ: ತಿಳಿ;

ಪದವಿಂಗಡಣೆ:
ಉಡಿಯೆ+ ಮೋರೆಯ +ಜೋಡು +ಜೋದರ
ಕೊಡಹಿ +ಹಾಯ್ದವು +ದಂತಿಘಟೆ +ಖುರ
ಕಡಿವಡಿಯೆ +ಕುದುರೆಗಳು +ಹಾಯ್ದವು +ಹಾಯ್ಕಿ +ರಾವುತರ
ಮಡಿಯೆ +ಸಾರಥಿ +ಮಗ್ಗಿದವು +ರಥ
ನಡೆದು +ಕಾದಿ +ಮಹಾರಥರು +ಮೆದೆ
ಕೆಡೆದುದ್+ಉಳಿದ +ಪದಾತಿ+ಪತನವನ್+ಅರಿಯೆ +ನಾನೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ನಡೆದು ಕಾದಿ ಮಹಾರಥರು ಮೆದೆಗೆಡೆದುದುಳಿದ ಪದಾತಿ

ಪದ್ಯ ೩೭: ಅರ್ಜುನನು ಯಾರನ್ನು ಕಡಿದಟ್ಟಿದನು?

ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳವ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ (ಗದಾ ಪರ್ವ, ೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲೈ ರಾಜನೇ ಕೇಳು, ಅರ್ಜುನನು ಕೆರಳಿದರೆ ಇದಿರಾಳಿಗಳು ಗೆಲ್ಲಲು ಸಾಧ್ಯವೇ? ಮುಂದೆ ಬಂದ ಆನೆಗಳು, ಎಡಕ್ಕೆ ಮುತ್ತಿದ ರಥಗಳು, ಬಲಕ್ಕೆ ಆಕ್ರಮಿಸಿದ ರಾವುತರು, ಸಿಡಿದೆದ್ದ ಕಾಲಾಳುಗಳು ಎಲ್ಲವನ್ನೂ ನಿಶ್ಯಂಕೆಯಿಂದ ಅವನು ಕಡಿದೊಟ್ಟಿದನು.

ಅರ್ಥ:
ಮುಂಕುಡಿ: ಮುಂದೆ; ಹಿಡಿ: ಗ್ರಹಿಸು; ಆನೆ: ಗಜ; ಎಡವಂಕ: ವಾಮಭಾಗ; ಔಕು: ಒತ್ತು, ಹಿಚುಕು; ರಥ: ಬಂಡಿ; ಚಯ: ಗುಂಪು; ಬಲವಂಕ: ಬಲಭಾಗ; ಒತ್ತು: ಮುತ್ತು; ರಾವುತ: ಕುದುರೆಸವಾರ; ಉಬ್ಬೆದ್ದ: ಹೆಚ್ಚಾಗು; ಪಯದಳ: ಕಾಲಾಳು; ಶಂಕೆ: ಅನುಮಾನ; ಕಾಣು: ತೋರು; ಬಲ: ಸೈನ್ಯ; ತರಿ: ಸೀಳು; ಒಟ್ಟು: ರಾಶಿ, ಗುಂಪು; ಮಾರಂಕ: ಪ್ರತಿಯುದ್ಧ; ನಿಲುವು: ಇರುವಿಕೆ, ಸ್ಥಿತಿ; ಮುನಿ: ಕೋಪ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಂಕುಡಿಯ+ ಹಿಡಿದ್+ಆನೆಗಳನ್+ಎಡ
ವಂಕಕ್+ಔಕಿದ +ರಥಚಯವ +ಬಲ
ವಂಕಕ್+ಒತ್ತಿದ +ರಾವುತರನ್+ಉಬ್ಬೆದ್ದ+ ಪಯದಳವ
ಶಂಕೆಯನು +ನಾ +ಕಾಣೆ +ಬಲನ್+ಎಡ
ವಂಕವನು +ತರಿದೊಟ್ಟಿದನು +ಮಾ
ರಂಕ +ನಿಲುವುದೆ +ಪಾರ್ಥ +ಮುನಿದಡೆ+ ಭೂಪ +ಕೇಳೆಂದ

ಅಚ್ಚರಿ:
(೧) ಎಡವಂಕ, ಬಲವಂಕ – ವಿರುದ್ಧ ಪದಗಳು

ಪದ್ಯ ೩೬: ಯಾರ ಹೊಡೆತವು ಸೈನ್ಯವನ್ನು ಧೂಳಿಪಟ ಮಾಡಿತು?

ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು (ಗದಾ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ನಮ್ಮ ಸೈನ್ಯದ ಪರಾಕ್ರಮವನ್ನು ಹೇಗೆ ವರ್ಣಿಸಲಿ, ಈ ಚತುರಂಗ ಸೈನ್ಯದ ಕಾಟವನ್ನು ಅತಿರಥರೂ ತಡೆಯಲಾರರು. ಆದರೆ ಈ ಪರಾಕ್ರಮವೆಲ್ಲವೂ ಕತ್ತಲ ಕಡಲಂತೆ, ಅರ್ಜುನನು ಅದರಲ್ಲಿ ಮುಳುಗಿದ ಸೂರ್ಯನಂತೆ, ಅವನ ಹೊಡೆತಕ್ಕೆ ಈ ಸೈನ್ಯವು ಧೂಳಿಪಟವಾಯಿತು.

ಅರ್ಥ:
ಜೀಯ: ಒಡೆಯ; ಬಲ: ಸೈನ್ಯ; ಆನೆ: ಗಜ; ವಿಕ್ರಮ: ಶೂರ, ಸಾಹಸ; ಅತಿರಥ: ಪರಾಕ್ರಮಿ; ನಿಲು: ನಿಲ್ಲು, ತಡೆ; ಕೆಲಬಲ: ಅಕ್ಕಪಕ್ಕ, ಎಡಬಲ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಪಹತಿ: ಹೊಡೆತ; ಭಾನು: ಸೂರ್ಯ; ಮಂಡಲ: ಜಗತ್ತು, ವರ್ತುಲಾಕಾರ; ಅಕಟ: ಅಯ್ಯೋ; ತಿಮಿರ: ಅಂಧಕಾರ; ಅಂಭೋನಿಧಿ: ಸಾಗರ; ಅಕ್ಕಾಡು: ನಷ್ಟವಾಗು; ನಿರಂತರ: ಯಾವಾಗಲು; ದಳ: ಸೈನ್ಯ; ಥಟ್ಟು: ಗುಂಪು; ಧೂಳಿ: ಮಣ್ಣಿನ ಪುಡಿ; ಧೂಳಿಪಟ: ನಾಶವಾಗುವಿಕೆ;

ಪದವಿಂಗಡಣೆ:
ಏನನೆಂಬೆನು+ ಜೀಯ +ಕುರುಬಲದ್
ಆನೆಗಳ+ ವಿಕ್ರಮವನ್+ಅತಿರಥರ್
ಏನ+ ನಿಲುವರು +ಕೆಲಬಲನ +ಚತುರಂಗದ್+ಉಪಹತಿಗೆ
ಭಾನುಮಂಡಲವ್+ಅಕಟ +ತಿಮಿರಾಂ
ಭೋನಿಧಿಯಲ್+ಅಕ್ಕಾಡಿತೆಂಬವೊಲ್
ಆ+ ನಿರಂತರ+ ದಳದ +ಥಟ್ಟಣೆ +ಧೂಳಿಪಟವಾಯ್ತು

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುಮಂಡಲವಕಟ ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್
(೨) ಒಂದೇ ಪದವಾಗಿ ರಚನೆ – ತಿಮಿರಾಂಭೋನಿಧಿಯಲಕ್ಕಾಡಿತೆಂಬವೊಲ್