ಪದ್ಯ ೪೪: ಭೀಷ್ಮಾರ್ಜುನರ ಬಾಣ ಪ್ರಯೋಗದ ವೇಗ ಹೇಗಿತ್ತು?

ಆವ ವಿಧದಲಿ ಪಾರ್ಥನೆಸುವನ
ದಾವ ಬೇಗದಿ ಮುರಿವನೀತನ
ದಾವ ಚಾಪ ರಹಸ್ಯವಿದ್ಯೆಗಳೊಳಗೆ ಬಳಸಿದನೊ
ಆ ವಿಧದಲಾ ಪರಿಯಲಾ ಸಂ
ಭಾವನೆಯಲಾ ಲುಳಿಯಲಾ ನಾ
ನಾ ವಿಧಾನದಲೊದಗಿ ಸರಿ ಮಿಗಿಲೆನಿಸಿದನು ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಯಾವ ವಿಧದಲ್ಲಿ ಅರ್ಜುನನು ಬಾಣಪ್ರಯೋಗ ಮಾಡುತ್ತಿದ್ದನೋ, ಅಷ್ಟೇ ಬೇಗ ಭೀಷ್ಮನು ಅವನ್ನು ಮುರಿದು ಹಾಕುವನು. ಬಿಲ್ವಿದ್ಯೆಯ ಯಾವ ರಹಸ್ಯದಿಂದ ಅರ್ಜುನನು ಹೊಡೆಯುತ್ತಿದ್ದನೋ ಅದೇ ರೀತಿ ಅದೇ ಸ್ವೀಕಾರ. ಅದಕ್ಕೇನು ಎದುರೊಡ್ಡಬೇಕೋ ಅದೇ ವೇಗದಿಂದ ಭೀಷ್ಮನು ನಾನಾ ಪರಿಯಿಮ್ದ ಅರ್ಜುನನಿಗೆ ಸರಿಮಿಗಿಲಾಗಿ ಕಾದಿದನು.

ಅರ್ಥ:
ವಿಧ: ರೀತಿ; ಎಸು: ಬಾಣ ಪ್ರಯೋಗ ಮಾಡು; ಬೇಗ: ವೇಗ; ಮುರಿ: ಸೀಳು; ಚಾಪ: ಬಿಲ್ಲು; ರಹಸ್ಯ: ಗುಟ್ತು; ವಿದ್ಯೆ: ಜ್ಞಾನ; ಬಳಸು: ಉಪಯೋಗಿಸು; ವಿಧ: ರೀತಿ; ಪರಿ: ಕ್ರಮ; ಸಂಭಾವನೆ: ಆಲೋಚನೆ, ಅಭಿಪ್ರಾಯ; ಲುಳಿ: ರಭಸ, ವೇಗ; ವಿಧಾನ: ರೀತಿ; ಮಿಗಿಲು: ಹೆಚ್ಚು;

ಪದವಿಂಗಡಣೆ:
ಆವ +ವಿಧದಲಿ+ ಪಾರ್ಥನ್+ಎಸುವನದ್
ಆವ +ಬೇಗದಿ +ಮುರಿವನ್+ಈತನದ್
ಆವ+ ಚಾಪ +ರಹಸ್ಯ+ವಿದ್ಯೆಗಳೊಳಗೆ +ಬಳಸಿದನೊ
ಆ +ವಿಧದಲ್+ಆ+ ಪರಿಯಲ್+ಆ ಸಂ
ಭಾವನೆಯಲ್+ಆ+ ಲುಳಿಯಲ್+ಆ+ ನಾ
ನಾ +ವಿಧಾನದಲ್+ಒದಗಿ +ಸರಿ +ಮಿಗಿಲೆನಿಸಿದನು+ ಭೀಷ್ಮ

ಅಚ್ಚರಿ:
(೧) ಆವ ಪದದ ಪ್ರಯೋಗ – ೧-೩ ಸಾಲಿನ ಮೊದಲ ಪದ

ಪದ್ಯ ೪೩: ಭೀಷ್ಮಾರ್ಜುನರು ಯಾವ ಅಸ್ತ್ರಗಳಿಂದ ಯುದ್ಧವನ್ನು ಮಾಡಿದರು?

ಉರಗ ಬಾಣವನಿವರು ಕರೆದರು
ಗರುಡ ಶರದಲಿ ಪಾರ್ಥ ತವಿಸಿದ
ನುರಿಯ ವಿಶಿಖವನಿವರು ನಂದಿಸಿದರು ಜಲಾಸ್ತ್ರದಲಿ
ಗಿರಿಶಿಳೀಮುಖಕಿವರು ವಜ್ರವ
ಹರಿಸಿದರು ತಿಮಿರಾಸ್ತ್ರವೆದ್ದರೆ
ತರಣಿ ಮಾರ್ಗಣದಿಂದ ತರಿದನು ಭೀಷ್ಮ ವಹಿಲದಲಿ (ಭೀಷ್ಮ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಷ್ಮನು ಬಿಟ್ಟ ಸರ್ಪಾಸ್ತ್ರವನ್ನು ಅರ್ಜುನನು ಗರುಡಾಸ್ತ್ರದಿಂದ ಕಡಿದನು, ಅರ್ಜುನನ ಆಗ್ನೇಯಾಸ್ತ್ರವನ್ನು ಭೀಷ್ಮನು ವರುಣಾಸ್ತ್ರದಿಂದ ಉಪಶಮನ ಮಾಡಿದನು, ಪರ್ವತಾಸ್ತ್ರವನ್ನು ಭೀಷ್ಮನು ವಜ್ರಾಸ್ತ್ರದಿಂದ ವಿಫಲಗೊಳಿಸಿದನು, ಅರ್ಜುನನ ತಿಮಿರಾಸ್ತ್ರವನ್ನು ಭೀಷ್ಮನು ಸೂರ್ಯಾಸ್ತ್ರದಿಂದ ಗೆದ್ದನು.

ಅರ್ಥ:
ಉರಗ: ಹಾವು; ಬಾಣ: ಅಂಬು; ಕರೆ: ಬರೆಮಾಡು; ಶರ: ಬಾಣ; ತವಿಸು: ಕೊಲ್ಲು, ನಾಶಮಾಡು; ಉರಿ: ಬೆಂಇ; ವಿಶಿಖ: ಬಾಣ, ಅಂಬು; ನಂದಿಸು: ಆರಿಸು; ಜಲ: ನೀರು; ಅಸ್ತ್ರ: ಶಸ್ತ್ರ; ಗಿರಿ: ಬೆಟ್ಟ; ಶಿಳೀಮುಖ: ಬಾಣ; ವಜ್ರ: ವಜ್ರಾಸ್ತ್ರ; ಹರಿಸು: ಬಿಡು, ವ್ಯಾಪಿಸು; ತಿಮಿರ: ಕತ್ತಲೆ; ತರಣಿ: ಸೂರ್ಯ; ಮಾರ್ಗಣ: ಬಾಣ; ತರಿ: ಬಿಡು; ವಹಿಲ: ಬೇಗ, ತ್ವರೆ;

ಪದವಿಂಗಡಣೆ:
ಉರಗ +ಬಾಣವನ್+ಇವರು +ಕರೆದರು
ಗರುಡ +ಶರದಲಿ +ಪಾರ್ಥ +ತವಿಸಿದನ್
ಉರಿಯ +ವಿಶಿಖವನ್+ಇವರು +ನಂದಿಸಿದರು+ ಜಲಾಸ್ತ್ರದಲಿ
ಗಿರಿ+ಶಿಳೀಮುಖಕ್+ಇವರು +ವಜ್ರವ
ಹರಿಸಿದರು +ತಿಮಿರಾಸ್ತ್ರವ್+ಎದ್ದರೆ
ತರಣಿ+ ಮಾರ್ಗಣದಿಂದ +ತರಿದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ಬಾಣಕ್ಕೆ ಬಳಸಿದ ಪದಗಳು – ಬಾಣ, ಶರ, ವಿಶಿಖ, ಶಿಳೀಮುಖ, ಮಾರ್ಗಣ
(೨) ಅಸ್ತ್ರಗಳ ಬಲಕೆ – ಉರಗ, ಗರುಡ; ಉರಿ, ಜಲ; ಗಿರಿ, ವಜ್ರ; ತಿಮಿರ, ತರಣಿ;

ಪದ್ಯ ೪೨: ಭೀಷ್ಮಾರ್ಜುನರ ಕಾಳಗದಲ್ಲಿ ಬಾಣಗಳ ಸ್ಥಿತಿ ಏನಾಯಿತು?

ಎಸಲು ಕಡಿದನು ಪಾರ್ಥನೀತನ
ವಿಶಿಖವನು ತರಿದವನು ಕಿಡಿ ದ
ಳ್ಳಿಸುವ ಧಾರೆಯ ಭೂರಿ ಬಾಣದ ಬಲೆಯ ಬೀಸಿದನು
ಕುಸುರಿದರಿದನು ಮತ್ತೆ ಜೋಡಿಸಿ
ನಿಶಿತ ಶರದಲಿ ಬಳಿಕಲವನಿಗೆ
ಹಸುಗೆ ಮಾಡಿದನಿತ್ತ ಸವೆದವು ಸರಳು ಸಮರದಲಿ (ಭೀಷ್ಮ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಷ್ಮನು ಎಚ್ಚ ಬಾಣಗಳನ್ನು ಅರ್ಜುನನು ಕತ್ತರಿಸಿ ಕಿಡಿಯುಗುಳುವ ಬಾಣಗಳ ಬಲೆಯನ್ನು ಭೀಷ್ಮನ ಮೇಲೆ ಬೀಸಿದನು. ಭೀಷ್ಮನು ಅರ್ಜುನನ ಬಾಣಗಳನ್ನು ತುಂಡು ತುಂಡಾಗಿ ಕತ್ತರಿಸಿ ಮತ್ತೆ ಬಾಣಗಳನ್ನು ಬಿಟ್ಟನು. ಲೆಕ್ಕವಿಲ್ಲದಷ್ಟು ಬಾಣಗಳು ಅವರ ಯುದ್ಧದಲ್ಲಿ ತುಂಡಾಗಿ ಬಿದ್ದವು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಕಡಿ: ಸೀಳು; ವಿಶಿಖ: ಬಾಣ, ಅಂಬು; ತರಿ: ಕಡಿ, ಕತ್ತರಿಸು; ಕಿಡಿ: ಬೆಂಕಿ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಧಾರೆ: ಪ್ರವಾಹ; ಭೂರಿ: ಹೆಚ್ಚು, ಅಧಿಕ; ಬಾಣ: ಅಂಬು; ಬಲೆ: ಜಾಲ, ಬಂಧನ; ಬೀಸು: ಹರಾದು; ಕುಸುರಿ: ಸಣ್ಣ ತುಂಡು, ಚೂರು; ಅರಿ: ಕತ್ತರಿಸು; ಜೋಡಿಸು: ಕೂಡಿಸು; ನಿಶಿತ: ಹರಿತವಾದುದು; ಶರ: ಬಾಣ; ಬಳಿಕ: ನಂತರ; ಹಸುಗೆ: ವಿಭಾಗ, ಪಾಲು; ಸವೆ: ತೀರು; ಸರಳು: ಬಾಣ; ಸಮರ: ಯುದ್ಧ;

ಪದವಿಂಗಡಣೆ:
ಎಸಲು +ಕಡಿದನು +ಪಾರ್ಥನ್+ಈತನ
ವಿಶಿಖವನು +ತರಿದ್+ಅವನು +ಕಿಡಿ +ದ
ಳ್ಳಿಸುವ +ಧಾರೆಯ +ಭೂರಿ +ಬಾಣದ +ಬಲೆಯ +ಬೀಸಿದನು
ಕುಸುರಿದ್+ಅರಿದನು +ಮತ್ತೆ +ಜೋಡಿಸಿ
ನಿಶಿತ +ಶರದಲಿ +ಬಳಿಕಲ್+ಅವನಿಗೆ
ಹಸುಗೆ +ಮಾಡಿದನ್+ಇತ್ತ +ಸವೆದವು +ಸರಳು +ಸಮರದಲಿ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೂರಿ ಬಾಣದ ಬಲೆಯ ಬೀಸಿದನು
(೨) ಸ ಕಾರದ ತ್ರಿವಳಿ ಪದ – ಸವೆದವು ಸರಳು ಸಮರದಲಿ

ಪದ್ಯ ೪೧: ಭೀಷ್ಮನು ಮತ್ತೆ ಹೇಗೆ ಗುಡುಗಿದನು?

ಸಾರು ಫಡ ಕೆಲಬಲದ ಹಂಗಿನ
ವೀರನೇ ಕಲಿ ಭೀಷ್ಮ ಮುನಿದರೆ
ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು
ಮೇರೆಗಿದ್ದೆನು ಮಕ್ಕಳೆಂದೇ
ವೈರಬಂಧವ ಬಿಟ್ಟೆನಕಟ ವಿ
ಕಾರಿತನವೇ ನಮ್ಮೊಡನೆಯೆನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ತನ್ನ ದೇಹವನ್ನು ಬಾಣಗಳು ನೆಟ್ಟಿರಲು, ಭೀಷ್ಮನು ಕೋಪಗೊಂಡು, ತೆಗೆ ಅಕ್ಕ ಪಕ್ಕದವರ ಹಂಗಿನಲ್ಲಿ ಹೋರಾಡುವ ವೀರನು ನಾನಲ್ಲ, ನಾನು ಕೋಪಗೊಂಡರೆ ಶಿವನನ್ನೇ ನನ್ನ ಜೊತೆಗೆ ಹೋರಾಡಲು ಕರೆಯಬೇಕು, ಮಕ್ಕಳೆಂದು ಕಟ್ಟುಹಾಕಿಕೊಂಡು ವೈರವನ್ನು ಬಿಟ್ಟಿದ್ದೆ, ಈಗ ಆ ಬಂಧವನ್ನು ತೊರೆದಿರುವೆ, ನನ್ನೊಡನೆ ಇಂತಹ ವೈರವನ್ನು ತೋರುತ್ತಿರುವವನೇ, ನೋಡಲಿ ಎಂದು ಭೀಷ್ಮನು ಬಾಣಗಳನ್ನು ಪ್ರಯೋಗಿಸಿದನು.

ಅರ್ಥ:
ಸಾರು: ಹರಡು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಕೆಲಬಲ: ಅಕ್ಕಪಕ್ಕ, ಎಡಬಲ; ಹಂಗು: ದಾಕ್ಷಿಣ್ಯ; ವೀರ: ಶೂರ; ಕಲಿ: ಶೂರ; ಮುನಿ: ಕೋಪಗೊಳ್ಳು; ಹೋರಟೆ: ಕಾಳಗ, ಯುದ್ಧ; ಬರಹೇಳು: ಆಗಮಿಸು; ಭರ್ಗ:ಶಿವ, ಶೋಭೆ; ಪಾಡು: ಸ್ಥಿತಿ; ಮೇರು: ಮಿಗಿಲಾದುದು; ಮೇರೆ: ಎಲ್ಲೆ, ಗಡಿ, ಆಶ್ರಯ; ಮಕ್ಕಳು: ಸುತರು; ವೈರ: ಶತ್ರುತ್ವ; ಬಂಧ: ಕಟ್ಟು, ಬಂಧನ, ವ್ಯಾಮೋಹ; ಬಿಟ್ಟೆ: ತೊರೆದೆ; ಅಕಟ: ಅಯ್ಯೋ; ವಿಕಾರಿ: ದುಷ್ಟ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಸಾರು +ಫಡ +ಕೆಲಬಲದ +ಹಂಗಿನ
ವೀರನೇ +ಕಲಿ +ಭೀಷ್ಮ +ಮುನಿದರೆ
ಹೋರಟೆಗೆ +ಬರಹೇಳು +ಭರ್ಗನನ್+ಇವನ +ಪಾಡೇನು
ಮೇರೆಗಿದ್ದೆನು +ಮಕ್ಕಳೆಂದೇ
ವೈರ+ಬಂಧವ+ ಬಿಟ್ಟೆನ್+ಅಕಟ+ ವಿ
ಕಾರಿತನವೇ +ನಮ್ಮೊಡನೆ+ಎನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ಭೀಷ್ಮನ ಪರಾಕ್ರಮ – ಕಲಿ ಭೀಷ್ಮ ಮುನಿದರೆ ಹೋರಟೆಗೆ ಬರಹೇಳು ಭರ್ಗನನಿವನ ಪಾಡೇನು

ಪದ್ಯ ೪೦: ಭೀಷ್ಮನ ಸ್ಥಿತಿ ಹೇಗಾಯಿತು?

ಜೋಡು ಹರಿದುದು ತಾಳ ಹಳವಿಗೆ
ನೀಡಿ ಕೆಡೆದುದು ಸಾರಥಿಗಳನು
ಹೂಡಿತಂತಕ ಪುರಿಗೆ ತೇಜಿಗಳಸುವ ಕಾರಿದವು
ಗೂಡುಗೊಂಡುದು ವಿಕ್ರಮಾನಳ
ನಾಡಬಾರದು ಭೀಷ್ಮನನು ಕೈ
ಗೂಡಿ ಕವಿಯಲಿ ದ್ರೋಣ ಗುರುಸುತರೆಂದುದಖಿಲಜನ (ಭೀಷ್ಮ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ಭೀಷ್ಮನ ಕವಚವು ಹರಿದು ಹೋಯಿತು. ಭೀಷ್ಮರ ರಥದ ಮೇಲಿದ್ದ ತಾಳೆಗರಿಯ ಚಿತ್ರವನ್ನು ಹೊಂದಿದ್ದ ಧ್ವಜವು ಮುರಿದು ಬಿತ್ತು. ಸಾರಥಿಯು ಯಮಪುರಕ್ಕೆ ಹೋದನು. ಕುದುರೆಗಳು ಪ್ರಾಣವನ್ನೇ ಬಿಟ್ಟವು. ಅರ್ಜುನನ ವಿಕ್ರಮಾಗ್ನಿ ಭೀಷ್ಮನ ಮೇಲೆ ಗೂಡು ಕಟ್ಟಿತು. ದ್ರೋಣ ಅಶ್ವತ್ಥಾಮರು ಅರ್ಜುನನ ಮೇಲೆ ಯುದ್ಧಕ್ಕೆ ಹೋಗಲಿ ಎಂದು ಎಲ್ಲರೂ ಕೂಗಿದರು.

ಅರ್ಥ:
ಜೋಡು: ಜೊತೆ; ಹರಿ: ಸೀಳು; ತಾಳ: ಓಲೆಗರಿಮರ; ಹಳವಿಗೆ: ಬಾವುಟ; ಕೆಡೆ: ಬೀಳು, ಕುಸಿ; ಸಾರಥಿ: ರಥಿಕ; ಹೂಡು: ಬೀಸು, ಒಡ್ಡು; ಅಂತಕ: ಯಮ; ಪುರಿ: ಊರು; ತೇಜಿ: ಕುದುರೆ; ಅಸು: ಪ್ರಾಣ; ಕಾರು: ಬಿಡು, ತ್ಯಜಿಸು; ಗೂಡು: ನೆಲೆ; ವಿಕ್ರಮ: ಗಮನ, ಶೂರ; ಅನಲ: ಬೆಂಕಿ; ಕೈಗೂಡು: ಜೊತೆಯಾಗು; ಕವಿ: ಆವರಿಸು; ಸುತ:ಮಗ; ಅಖಿಲ: ಎಲ್ಲಾ; ಜನ: ಮನುಷ್ಯರ ಗುಂಪು;

ಪದವಿಂಗಡಣೆ:
ಜೋಡು +ಹರಿದುದು +ತಾಳ +ಹಳವಿಗೆ
ನೀಡಿ +ಕೆಡೆದುದು +ಸಾರಥಿಗಳನು
ಹೂಡಿತ್+ಅಂತಕಪುರಿಗೆ +ತೇಜಿಗಳ್+ಅಸುವ +ಕಾರಿದವು
ಗೂಡುಗೊಂಡುದು +ವಿಕ್ರಮ+ಅನಳನ್
ಆಡಬಾರದು+ ಭೀಷ್ಮನನು +ಕೈ
ಗೂಡಿ +ಕವಿಯಲಿ+ ದ್ರೋಣ +ಗುರುಸುತರ್+ಎಂದುದ್+ಅಖಿಲ+ಜನ

ಅಚ್ಚರಿ:
(೧) ಸಾರಥಿ ಸತ್ತನು ಎಂದು ಹೇಳುವ ಪರಿ – ಸಾರಥಿಗಳನು ಹೂಡಿತಂತಕ ಪುರಿಗೆ
(೨) ಕುದುರೆಗಳ ಪ್ರಾಣ ಬಿಟ್ಟವು ಎಂದು ಹೇಳುವ ಪರಿ – ತೇಜಿಗಳಸುವ ಕಾರಿದವು
(೩) ಭೀಷ್ಮನ ಸ್ಥಿತಿ – ಜೋಡು ಹರಿದುದು ತಾಳ ಹಳವಿಗೆ ನೀಡಿ ಕೆಡೆದುದು

ಪದ್ಯ ೩೯: ಅರ್ಜುನನ ಬಾಣಗಳು ಭೀಷ್ಮನನ್ನು ಹೇಗೆ ಆವರಿಸಿದವು?

ಮುತ್ತಿದವು ನರನಂಬು ಫಣಿಗಳು
ಹುತ್ತ ಹೊಗುವಂದದಲಿ ಖಂಡವ
ಕುತ್ತಿ ಹಾಯ್ದವು ಕೆತ್ತಿ ಹರಿದವು ಕಿಬ್ಬರಿಗಳೆಲುವ
ಮೆತ್ತಿದವು ಕೈಮೈಗಳಲಿ ತಲೆ
ಯೊತ್ತಿದವು ವಜ್ರಾಂಗಿಯಲಿ ಭಟ
ನತ್ತಲಿತ್ತಲೆನಲ್ಕೆ ಬಳಸಿದವಾ ನದೀಸುತನ (ಭೀಷ್ಮ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಹಾವುಗಳು ಹುತ್ತವನ್ನು ಹೊಗುವಂತೆ ಅರ್ಜುನನ ಬಾಣಗಳು ಭೀಷ್ಮನನ್ನು ಮುಸುಕಿದವು. ಮೈಯೊಳಗೆ ನೆಟ್ಟು ಹೊರಬಂದವು. ಪಕ್ಕೆಯೆಲುಬುಗಳನ್ನು ಮುರಿದವು. ಮೈಕೈಗಳಿಗೆ ಮೆತ್ತಿಕೊಂಡವು. ವಜ್ರಾಂಗಿಯಾದ ಭೀಷ್ಮನ ಅತ್ತಲೂ ಇತ್ತಲೂ ಎಲ್ಲಾ ಕಡೆಗೂ ಬಾಣಗಳು ನಾಟಿದವು.

ಅರ್ಥ:
ಮುತ್ತು: ಆವರಿಸು; ನರ: ಅರ್ಜುನ; ಅಂಬು: ಬಾಣ; ಫಣಿ: ಹಾವು; ಹುತ್ತ: ಹಾವುಗಳಿರುವ ಸ್ಥಳ; ಹೊಗು: ಸೇರು; ಖಂಡ: ತುಂಡು, ಚೂರು; ಕುತ್ತು: ತೊಂದರೆ, ಆಪತ್ತು; ಹಾಯಿ: ಮೇಲೆಬೀಳು; ಕೆತ್ತು: ಅದಿರು, ನಡುಗು; ಹರಿ: ಚಲಿಸು; ಕಿಬ್ಬರಿ:ಪಕ್ಕೆಯ ಕೆಳ ಭಾಗ; ಎಲುವು: ಮೂಳೆ; ಮೆತ್ತು: ಬಳಿ, ಲೇಪಿಸು; ಕೈ: ಹಸ್ತ; ಮೈ: ತನು; ತಲೆ: ಶಿರ; ಒತ್ತು: ಮುತ್ತು; ವಜ್ರಾಂಗಿ: ಗಟ್ಟಿಯಾದ ಕವಚ; ಭಟ: ಸೈನಿಕ; ಅತ್ತಲಿತ್ತ: ಅಲ್ಲಿಂದಿಲ್ಲಿಗೆ; ಬಳಸು: ಹರಡು; ನದೀಸುತ: ಭೀಷ್ಮ;

ಪದವಿಂಗಡಣೆ:
ಮುತ್ತಿದವು +ನರನ್+ಅಂಬು +ಫಣಿಗಳು
ಹುತ್ತ +ಹೊಗುವಂದದಲಿ +ಖಂಡವ
ಕುತ್ತಿ +ಹಾಯ್ದವು +ಕೆತ್ತಿ +ಹರಿದವು +ಕಿಬ್ಬರಿಗಳ್+ಎಲುವ
ಮೆತ್ತಿದವು +ಕೈ+ಮೈಗಳಲಿ +ತಲೆ
ಒತ್ತಿದವು+ ವಜ್ರಾಂಗಿಯಲಿ +ಭಟನ್
ಅತ್ತಲಿತ್ತಲ್+ ಎನಲ್ಕೆ +ಬಳಸಿದವಾ +ನದೀಸುತನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುತ್ತಿದವು ನರನಂಬು ಫಣಿಗಳು ಹುತ್ತ ಹೊಗುವಂದದಲಿ

ಪದ್ಯ ೩೮: ಅರ್ಜುನನು ಮತ್ತೆ ಹೇಗೆ ಬಾಣಗಳನ್ನು ಹೂಡಿದನು?

ಬಸಿವ ರಕುತವ ಬಳಿದು ಖಾತಿಯ
ಮಸಕದಲಿ ಕೈಮರೆದು ಮಿಗೆ ದ
ಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
ಹೊಸ ಮಸೆಯ ಬಾಯ್ಧಾರೆಗಳ ಶರ
ವಿಸರವನು ತೊಡಚಿದನು ಭೀಷ್ಮನ
ಮುಸುಕಿದನು ಮಗುಳೆಚ್ಚು ಪುನರಪಿ ಕರೆದನಂಬುಗಳ (ಭೀಷ್ಮ ಪರ್ವ, ೯ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮೈಯಿಂದೊಸರುವ ರಕ್ತವನ್ನು ಬಳಿದು ಅರ್ಜುನನು ಮಹಾಕೋಪದಿಂದ ಮೈಮರೆದು ಕೋಪದಿಂದ ಹಲ್ಲನ್ನ ಕಡಿದು, ಹುಬ್ಬುಗಳನ್ನು ಗಂಟಿಟ್ಟು, ಹೊಸದಾಗಿ ಮಸೆದ ಬಾಯಿಧಾರೆಗಳುಳ್ಳ ಬಾಣಗಳಿಂದ ಭೀಷ್ಮನನ್ನು ಮುಚ್ಚಿ, ಮತ್ತೆ ಬಾಣಗಳನ್ನು ಬಿಟ್ಟನು.

ಅರ್ಥ:
ಬಸಿ: ಒಸರು, ಸ್ರವಿಸು; ರಕುತ: ನೆತ್ತರು; ಬಳಿ:ಎಡೆ, ಸ್ಥಳ; ಖಾತಿ: ಕೋಪ, ಕ್ರೋಧ; ಮಸಕ: ಆಧಿಕ್ಯ, ಹೆಚ್ಚಳ; ಕೈ: ಹಸ್ತ; ಮರೆ:ನೆನಪಿನಿಂದ ದೂರ ಮಾಡು; ಮಿಗೆ: ಹೆಚ್ಚು; ದಳ್ಳಿಸು: ಧಗ್ ಎಂದು ಉರಿ; ಹೊಗರು: ಕಾಂತಿ, ಪ್ರಕಾಶ; ಔಡು: ಹಲ್ಲಿನಿಂದ ಕಚ್ಚು; ಕಚ್ಚು: ಕಡಿ; ಹುಬ್ಬು: ಕಣ್ಣಿನ ಮೇಲಿನ ರೋಮಾವಳಿ; ಬಲಿ: ಹೆಚ್ಚಾಗು; ಹೊಸ: ನವೀನ; ಮಸೆ: ಹರಿತವಾದುದು; ಬಾಯ್ಧಾರೆ: ಮೊನೆಯಾದ ಅಲಗು; ಶರ: ಬಾಣ; ವಿಸರ: ವಿಸ್ತಾರ, ವ್ಯಾಪ್ತಿ; ತೊಡಚು: ಕಟ್ಟು, ಬಂಧಿಸು; ಮುಸುಕು: ಆವರಿಸು; ಮಗುಳು: ಹಿಂತಿರುಗು; ಎಚ್ಚು: ಬಾಣ ಪ್ರಯೋಗ ಮಾಡು; ಪುನರಪಿ: ಮತ್ತೆ; ಕರೆ: ಬರೆಮಾಡು, ಹೂಡು; ಅಂಬು: ಬಾಣ;

ಪದವಿಂಗಡಣೆ:
ಬಸಿವ+ ರಕುತವ +ಬಳಿದು +ಖಾತಿಯ
ಮಸಕದಲಿ +ಕೈಮರೆದು +ಮಿಗೆ +ದ
ಳ್ಳಿಸುತ +ಹೊಗರಿಡುತ್+ಔಡುಗಚ್ಚುತ +ಹುಬ್ಬುಗಳ +ಬಲಿದು
ಹೊಸ +ಮಸೆಯ +ಬಾಯ್ಧಾರೆಗಳ +ಶರ
ವಿಸರವನು +ತೊಡಚಿದನು +ಭೀಷ್ಮನ
ಮುಸುಕಿದನು +ಮಗುಳೆಚ್ಚು +ಪುನರಪಿ+ ಕರೆದನ್+ಅಂಬುಗಳ

ಅಚ್ಚರಿ:
(೧) ಕೋಪವನ್ನು ಚಿತ್ರಿಸುವ ಪರಿ – ಖಾತಿಯ ಮಸಕದಲಿ ಕೈಮರೆದು ಮಿಗೆ ದಳ್ಳಿಸುತ ಹೊಗರಿಡುತೌಡುಗಚ್ಚುತ ಹುಬ್ಬುಗಳ ಬಲಿದು
(೨) ಮ ಕಾರದ ಪದಗಳ ಬಳಕೆ – ಮಸಕ, ಮುಸುಕಿ, ಮಗುಳು, ಮಸೆ, ಮಿಗೆ

ಪದ್ಯ ೩೭: ಬಾಣಗಳು ಅರ್ಜುನನ ಮೇಲೆ ಹೇಗೆ ಆಕ್ರಮಣ ಮಾಡಿದವು?

ಹನುಮ ಮಸೆಗಂಡನು ಮುರಾಂತಕ
ಕನಲಿದನು ಕಡುನೊಂದು ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ
ಮೊನೆಯಲಗು ಮುಕ್ಕುರುಕೆ ರಥವನು
ತನಿಗೊಡಹಿ ಮುಗ್ಗಿದವು ತೇಜಿಗ
ಳನುವರಕೆ ಮುಖದಿರುಹಿದವು ಕಲಿ ಭೀಷ್ಮನುಪಟಳಕೆ (ಭೀಷ್ಮ ಪರ್ವ, ೯ ಸಂಧಿ, ೩೭ ಪದ್ಯ)

ತಾತ್ಪರ್ಯ:
ಭೀಷ್ಮನ ಬಾಣಗಲ ಕಾಟಕ್ಕೆ ಹನುಮಮ್ತನು ಗಾಯಗೊಂಡನು. ಶ್ರೀಕೃಷ್ಣನು ತುಂಬಾನೊಂದು ಕೋಪಗೊಂಡನು. ಬಾಣಗಳೆಂಬ ಪ್ರಯಾಣಿಕರು ಅರ್ಜುನನ ದೇಹದೊಳಗೆ ದಾರಿಮಾಡಿಕೊಂಡು ಹೋದರು. ಕೂರಂಬುಗಳು ಮುತ್ತಿ ಮೈಕೊಡವಿ ಮುಗ್ಗುರಿಸಿ ಮುಖತಿರುವಿ ಹಿಂದಕ್ಕೆ ಹೋದವು.

ಅರ್ಥ:
ಹನುಮ: ಆಂಜನೇಯ; ಮಸೆ: ಒರಸು; ಹೋರಾಡು, ಕಾದು; ಮುರಾಂತಕ: ಕೃಷ್ಣ; ಕನಲು: ಸಿಟ್ಟಿಗೇಳು, ಕೆರಳು; ಕದುನೊಂದು: ತುಂಬ ನೋವುನ್ನುಂಡು; ತನು: ದೇಹ; ಹೆಬ್ಬಟ್ಟೆ: ದೊಡ್ಡದಾದ ದಾರಿ; ಬಾಣ: ಸರಳು; ಪಥಿಕ: ದಾರಿಗ, ಪ್ರಯಾಣಿಕ; ಮೊನೆ: ಚೂಪಾದ; ಅಲಗು: ಆಯುಧದ ಮೊನೆ, ಕತ್ತಿ; ಮುಕ್ಕು: ನಾಶಮಾಡು,ತಿಣುಕು; ರಥ: ಬಂಡಿ; ತನಿ: ಚೆನ್ನಾಗಿ ಬೆಳೆದುದು, ಹೆಚ್ಚಾಗು; ಕೊಡಹು: ಅಲ್ಲಾಡಿಸು; ಮುಗ್ಗು: ಬಾಗು, ಮಣಿ; ತೇಜಿ: ಕುದುರೆ; ಅನುವರ: ಯುದ್ಧ; ಮುಖ: ಆನನ; ತಿರುಹು: ಅಲೆದಾಡು, ಸುತ್ತು; ಕಲಿ: ಶೂರ; ಉಪಟಳ: ತೊಂದರೆ, ಹಿಂಸೆ;

ಪದವಿಂಗಡಣೆ:
ಹನುಮ +ಮಸೆಗಂಡನು+ ಮುರಾಂತಕ
ಕನಲಿದನು +ಕಡುನೊಂದು +ಪಾರ್ಥನ
ತನುವಿನಲಿ+ ಹೆಬ್ಬಟ್ಟೆಯಾದುದು +ಬಾಣ+ಪಥಿಕರಿಗೆ
ಮೊನೆ+ಅಲಗು +ಮುಕ್ಕುರುಕೆ +ರಥವನು
ತನಿ+ಕೊಡಹಿ+ ಮುಗ್ಗಿದವು +ತೇಜಿಗಳ್
ಅನುವರಕೆ+ ಮುಖದ್+ಇರುಹಿದವು +ಕಲಿ +ಭೀಷ್ಮನ್+ಉಪಟಳಕೆ

ಅಚ್ಚರಿ:
(೧) ರೂಪಕದ ಪ್ರಯೋಗ – ಬಾಣದ ಹೆದ್ದಾರಿ ಎಂದು ವಿವರಿಸುವ ಪರಿ – ಪಾರ್ಥನ
ತನುವಿನಲಿ ಹೆಬ್ಬಟ್ಟೆಯಾದುದು ಬಾಣಪಥಿಕರಿಗೆ