ಪದ್ಯ ೩೮: ಸರೋವರವು ಹೇಗೆ ಕಂಗೊಳಿಸಿತು?

ಉಲಿವ ಕೋಕಿಲ ಪಾಥಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ (ಗದಾ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕೋಗಿಲೆಗಳು ಪಾಠಕರು, ದುಂಬಿಗಳು ಗಾಯಕರು, ಹಂಸಗಳೇ ಸುಭಟರು, ಕೊಳರ್ವಕ್ಕಿಗಳೇ ದ್ವಾರಪಾಲಕರು, ಅರಳಿದ ಪರಿಮಳ ಭರಿತ ಹೊಂದಾವರೆಯೇ ಸಿಂಹಾಸನ, ಹೀಗೆ ಲಕ್ಷ್ಮೀದೇವಿಯ ಓಲಗಶಾಲೆಯಂತೆ ಸರೋವರವು ಕಂಗೊಳಿಸಿತು.

ಅರ್ಥ:
ಉಲಿ: ಶಬ್ದ; ಕೋಕಿಲ: ಕೋಗಿಲೆ; ಪಾಠಕ: ವಾಚಕ, ಭಟ್ಟಂಗಿ; ಮೊರೆ: ದುಂಬಿಯ ಧ್ವನಿ; ಝೇಂಕಾರ; ಅಳಿಕುಲ: ದುಂಬಿಯ ವಂಶ; ಗಾಯಕ: ಹಾಡುವವ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಆವಳಿ: ಗುಂಪು; ಸುಭಟ: ಪರಾಕ್ರಮಿ; ಜಡಿ: ಬೆದರಿಕೆ, ಹೆದರಿಕೆ; ಕೊಳ: ಸರೋವರ; ಪಡಿ: ಎಣೆ, ಸಾಟಿ; ಅಲರ್: ಹೂವು; ಹೊಂದಾವರೆ: ಕಮಲ; ನವ: ಹೊಸ; ಪರಿಮಳ: ಸುಗಂಧ; ಸಿಂಹಾಸನ: ಪೀಠ; ಲಲನೆ: ಹೆಣ್ಣು; ಓಲಗ: ದರ್ಬಾರು; ಶಾಲೆ: ನೆಲೆ, ಆಲಯ; ಮೆರೆ: ಹೊಳೆ; ಸರಸಿ: ಸರೋವರ;

ಪದವಿಂಗಡಣೆ:
ಉಲಿವ +ಕೋಕಿಲ +ಪಾಠಕರ +ಮೊರೆವ್
ಅಳಿಕುಳದ +ಗಾಯಕರ+ ಹಂಸಾ
ವಳಿಯ +ಸುಭಟರ +ಜಡಿವ +ಕೊಳರ್ವಕ್ಕಿಗಳ +ಪಡಿಯರರ
ಅಲರ್ದ +ಹೊಂದಾವರೆಯ +ನವ+ಪರಿ
ಮಳದ +ಸಿಂಹಾಸನದಿ+ ಲಕ್ಷ್ಮೀ
ಲಲನೆ+ಓಲಗ+ಶಾಲೆಯಂತಿರೆ+ ಮೆರೆದುದಾ +ಸರಸಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಕ್ಷ್ಮೀ ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ
(೨) ಸಿಂಹಾಸನವನ್ನು ಕಮಲದಲ್ಲಿ ಕಂಡ ಪರಿ – ಅಲರ್ದ ಹೊಂದಾವರೆಯ ನವಪರಿಮಳದ ಸಿಂಹಾಸನದಿ

ಪದ್ಯ ೩೭: ದುರ್ಯೋಧನನು ಯಾವ ವಿಷಯಕ್ಕೆ ಬೆದರಿದನು?

ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ (ಗದಾ ಪರ್ವ, ೩ ಸಂಧಿ, ೩೭ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ, ಕೌರವನು ಸಂಜಯನೊಡನೆ ಸರೋವರ ಬಳಿಗೆ ಬಂದನು. ಆಗ ಸುಗಂಧಪೂರಿತವಾದ ಹಿತಕರವಾದ ತಂಗಾಳಿ ಬೀಸಿ ದೇಹಕ್ಕೆ ಸಂತಸವಾದರೂ, ಭೀಮನ ತಂದೆಯು ತಾನಿರುವ ಗುಪ್ತಸ್ಥಾನವನ್ನರಿತನಂದು ಮನಸ್ಸು ಬೆದರಿತು.

ಅರ್ಥ:
ಸಹಿತ: ಜೊತೆ; ಜನಪ: ದೊರೆ; ಬಂದು: ಆಗಮಿಸು; ಸರೋವರ: ಸರಸಿ; ಅನಿಲ: ವಾಯು; ಇದಿರು: ಎದುರು; ಸುಗಂಧ: ಪರಿಮಳ; ಶೈತ್ಯ: ತಂಪು; ಪೂರ:ಬಹಳವಾಗಿ; ತನು: ದೇಹ; ಆಪ್ಯಾಯ: ಸಂತೋಷ, ಹಿತ; ಅಂತರ್ಮನ: ಅಂತಃಕರಣ; ಪಲ್ಲಟ: ಮಾರ್ಪಾಟು; ಜನಕ: ತಂದೆ; ಅರಿ: ತಿಳಿ; ಗುಪ್ತ: ರಹಸ್ಯ; ಸ್ಥಾನ: ಜಾಗ; ಸಂಗತಿ: ವಿಚಾರ;

ಪದವಿಂಗಡಣೆ:
ಎನುತ+ ಸಂಜಯ+ಸಹಿತ +ಕೌರವ
ಜನಪ+ ಬಂದನು +ತತ್ಸರೋವರಕ್
ಅನಿಲನ್+ಇದಿರಾದನು +ಸುಗಂಧದ +ಶೈತ್ಯ+ಪೂರದಲಿ
ತನುವಿಗ್+ಆಪ್ಯಾಯನದಿನ್+ಅಂತ
ರ್ಮನಕೆ +ಪಲ್ಲಟವಾಯ್ತು +ಭೀಮನ
ಜನಕನ್+ಅರಿದನು +ತನ್ನ +ಗುಪ್ತಸ್ಥಾನ +ಸಂಗತಿಯ

ಅಚ್ಚರಿ:
(೧) ಎರಡು ರೀತಿಯ ಅನುಭವ – ತನುವಿಗಾಪ್ಯಾಯನದಿನಂತರ್ಮನಕೆ ಪಲ್ಲಟವಾಯ್ತು
(೨) ಕೌರವ ಜನಪ, ಭೀಮನ ಜನಕ – ಪದಗಳ ಬಳಕೆ

ಪದ್ಯ ೩೬: ಭಾನುಮತಿಗೆ ಯಾವ ಸಂದೇಶವನ್ನು ನೀಡಲು ದುರ್ಯೋಧನನು ಹೇಳಿದನು?

ತೆಗಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ (ಗದಾ ಪರ್ವ, ೩ ಸಂಧಿ, ೩೬ ಪದ್ಯ)

ತಾತ್ಪರ್ಯ:
ನಮ್ಮ ಪಾಳೆಯವನ್ನು ತೆರವು ಮಾಡಿಸಿ ಹಸ್ತಿನಾಪುರಕ್ಕೆ ಕಳುಹಿಸು. ದುಶ್ಯಾಸನ ಕರ್ಣರ ರಾಣೀವಾಸವನ್ನು ಊರಿಗೆ ಕಳಿಸು. ಪಾಂಡವರ ವಿಜಯ ವಾರ್ತೆಯನ್ನು ಹಬಿಸಬೇಡ. ಭಾನುಮತಿಯು ನಂಬುವಂತೆ ಮಾತಾಡಿ ಸಮಾಧಾನ ಪಡಿಸು ಎಂದು ದುರ್ಯೋಧನನು ಹೇಳಿದನು.

ಅರ್ಥ:
ತೆಗಸು: ಹೊರತರು; ಪಾಳೆಯ: ಬೀಡು, ಶಿಬಿರ; ಗಜ: ಆನೆ; ನಗರ: ಊರು; ಐದು: ಹೋಗಿಸೇರು; ರಾಣಿ: ಅರಸಿ; ದಂಡಿಗೆ: ಮೇನಾ, ಪಲ್ಲಕ್ಕಿ; ಕಳುಹಿಸು: ತೆರಳು; ಸೂತಸುತ: ಕರ್ಣ; ಸೂತ: ಸಾರಥಿ; ಸುತ: ಮಗ; ಆದಿ: ಮೊದಲಾದ; ಹಗೆ: ವೈರಿ, ಶತ್ರು; ವಿಜಯ: ಗೆಲುವು; ಹರಹು: ವಿಸ್ತಾರ, ವೈಶಾಲ್ಯ; ನಂಬು: ವಿಶ್ವಾಸವಿಡು; ನುಡಿ: ಮಾತು; ಬಗೆ: ಎಣಿಸು; ಸಂತೈಸು: ಸಾಂತ್ವನಗೊಳಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ತೆಗಸು +ಪಾಳೆಯವೆಲ್ಲವನು +ಗಜ
ನಗರಿಗ್+ಐದಿಸು +ರಾಣಿಯರ +ದಂ
ಡಿಗೆಯ +ಕಳುಹಿಸು +ಸೂತಸುತ +ದುಶ್ಯಾಸನಾದಿಗಳ
ಹಗೆಯ +ವಿಜಯವ +ಹರಹದಿರು +ನಂ
ಬುಗೆಯ +ನುಡಿಯಲಿ +ಭಾನುಮತಿಯರ
ಬಗೆಯ +ಸಂತೈಸೆಂದು+ ಬೋಳೈಸಿದನು +ಸಂಜಯನ

ಅಚ್ಚರಿ:
(೧) ಹಗೆ, ನಂಬುಗೆ, ಬಗೆ, ದಂಡಿಗೆ – ಪ್ರಾಸ ಪದಗಳು
(೨) ಸಂತೈಸು, ಬೋಳೈಸು – ಸಮಾನಾರ್ಥಕ ಪದ

ಪದ್ಯ ೩೫: ದುರ್ಯೋಧನನು ಯಾವ ರಹಸ್ಯವನ್ನು ಸಂಜಯನಿಗೆ ಹೇಳಿದನು?

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ (ಗದಾ ಪರ್ವ, ೩ ಸಂಧಿ, ೩೫ ಪದ್ಯ)

ತಾತ್ಪರ್ಯ:
ಸಂಜಯ, ನಡೆದುಕೊಂಡು ಹೋಗಿ ಮುಟ್ಟಬಲ್ಲ ದೂರದಲ್ಲಿ ಒಂದು ವಿಶ್ವವಿಖ್ಯಾತ ಸರೋವರವಿದೆ. ಅದರ ಮಧ್ಯದಲ್ಲಿ ಒಂದು ದಿನದವರೆಗೆ ನೀರಿನಅಲ್ಲಿರುತ್ತೇನೆ. ಆನಂತರ ಯುದ್ಧಮಾಡಿ ಕುಂತಿಯ ಮಕ್ಕಳಿಗೆ ಯಮಲೋಕವನ್ನು ತೋರಿಸುತ್ತೇನೆ, ಇದು ರಹಸ್ಯ. ಇದನ್ನು ನನ್ನ ತಂದೆ ತಾಯಿಗಳಿಗೆ ತಿಳಿಸು ಎಂದು ದುರ್ಯೋಧನನು ಸಂಜಯನಿಗೆ ಹೇಳಿದನು.

ಅರ್ಥ:
ಸರೋವರ: ಸರಸಿ; ಹರಿದೂರ: ನಡಿಗೆಯ ಅಂತರ; ಭುವನ: ಭೂಮಿ; ವಿಖ್ಯಾತ: ಪ್ರಸಿದ್ಧ; ಮಧ್ಯ: ನಡುವೆ; ಮುಳುಗು: ನೀರಿನಲ್ಲಿ ಮೀಯು; ಪರಿಯಂತ: ವರೆಗು; ಸಲಲಿ: ನೀರು; ಕದನ: ಯುದ್ಧ; ಕೌಂತೇಯ: ಪಾಂಡವ; ಯಮ: ಜವ; ಸದನ: ಮನೆ, ನಿವಾಸ; ತೋರು: ಗೋಚರಿಸು; ರಹಸ್ಯ: ಗುಟ್ಟು; ಜನನಿ: ತಾಯಿ; ಜನಕ: ತಂದೆ; ಅರುಹು: ತಿಳಿಸು;

ಪದವಿಂಗಡಣೆ:
ಇದೆ+ ಸರೋವರವೊಂದು +ಹರಿ+ದೂ
ರದಲಿ +ಭುವನ+ಖ್ಯಾತ +ತನ್
ಮಧ್ಯದಲಿ+ ಮುಳುಗಿಹೆನ್+ಒಂದುದಿನ +ಪರಿಯಂತ +ಸಲಿಲದಲಿ
ಕದನದಲಿ +ಕೌಂತೇಯರನು +ಯಮ
ಸದನದಲಿ +ತೋರುವೆನು +ತಾನೆಂ
ಬುದು +ರಹಸ್ಯವು +ಜನನಿ +ಜನಕಂಗ್+ಅರುಹು +ನೀನೆಂದ

ಅಚ್ಚರಿ:
(೧) ಸಾಯಿಸುವೆ ಎಂದು ಹೇಳುವ ಪರಿ – ಕೌಂತೇಯರನು ಯಮ ಸದನದಲಿ ತೋರುವೆನು

ಪದ್ಯ ೩೪: ಸಂಜಯನು ದುರ್ಯೋಧನನಿಗೆ ಏನು ಹೇಳಿದ?

ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ಧಿಗಲಿಸೆಂದ (ಗದಾ ಪರ್ವ, ೩ ಸಂಧಿ, ೩೪ ಪದ್ಯ)

ತಾತ್ಪರ್ಯ:
ಸಂಜಯನು, ನನ್ನ ಪ್ರಲಾಪಕ್ಕೆ ನಿಮಗೆ ದ್ರೋಣ, ಭೀಷ್ಮ, ವಿದುರರು ಹೇಳಿದ ಭವಿಷ್ಯಕ್ಕಾದ ಗತಿಯೇ ಬಂತೇ? ಹೇಳಿ ಏನು ಫಲ, ಯುಧಿಷ್ಠಿರನು ತನಗಿಷ್ಟಬಂದಂತೆ ಇಅಲಿ. ನಿಮ್ಮ ತಂದೆತಾಯಿಗಳಿಗೆ ಏನು ಹೇಳಲಿ? ತಿಳಿಸಿರಿ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಅಡಿ: ಪಾದ; ಗುರು: ಆಚಾರ್ಯ; ಗಾಂಗೇಯ: ಭೀಷ್ಮ; ಆದಿ: ಮುಂತಾದರು; ಜೋಯಿಸ: ಜೋತಿಷಿ; ಪ್ರಳಾಪ: ಅಸಂಬದ್ಧವಾದ ಮಾತು, ಪ್ರಲಾಪ; ರಾಯ: ಒಡೆಯ; ಫಲ: ಪ್ರಯೋಜನ; ರಾಯ: ರಾಜ; ಒಲಿ: ಒಪ್ಪು, ಸಮ್ಮತಿಸು; ತಾಯಿ: ಮಾತೆ; ತಂದೆ: ಪಿತ; ಬುದ್ಧಿ: ತಿಳಿವು, ಅರಿವು;

ಪದವಿಂಗಡಣೆ:
ಜೀಯ +ನಿಮ್ಮಡಿಗಳಿಗೆ +ಗುರು +ಗಾಂ
ಗೇಯ +ವಿದುರಾದಿಗಳು +ಹೇಳಿದ
ಜೋಯಿಸವ +ಕೈಕೊಂಡಿರೇ +ನಮ್ಮೀ +ಪ್ರಳಾಪದಲಿ
ರಾಯ +ಫಲವೇನೈ +ಯುಧಿಷ್ಠಿರ
ರಾಯನ್+ಒಲಿದಂತಿರಲಿ +ನಿಮ್ಮಯ
ತಾಯಿ+ತಂದೆಗೆ +ಹೇಳ್ವೆನ್+ಏನನು +ಬುದ್ಧಿ+ಕಲಿಸೆಂದ

ಅಚ್ಚರಿ:
(೧) ಜೀಯ, ರಾಯ – ಸಾಮ್ಯಾರ್ಥ ಪದ
(೨) ತಿಳಿಸಿ ಎಂದು ಹೇಳುವ ಪರಿ – ಬುದ್ಧಿಗಲಿಸೆಂದ

ಪದ್ಯ ೩೩: ದುರ್ಯೋಧನನು ತನಗೇನು ಬೇಕು ಎಂದು ಹೇಳಿದನು?

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ (ಗದಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಂಜಯ, ನನ್ನ ಕೋಪ ಮಾಸಿಲ್ಲ, ಮನಸ್ಸಿನ ಧೈರ್ಯದ ಶಕ್ತಿ ಸಾಮರ್ಥ್ಯಗಳು ಮಾಸಿಲ್ಲ. ನಾಚಿಕೆಪಡುವ ಇಲ್ಲವೇ ಇಲ್ಲ. ಯುಧಿಷ್ಠಿರಾದಿ ಪಾಂಡವರಲ್ಲಿ ವಿರೋಧ ಹೋಗಿಲ್ಲ. ನೀನೇಕೆ ಸುಮ್ಮನೆ ಅಳುತ್ತಿರುವೆ? ಕೌರವನು ಶತ್ರುಗಳನ್ನು ಅಲುಗಾಡಿಸಿ ಕೊಲ್ಲಬಲ್ಲನು ಎಂಬ ಕೀರ್ತಿ ನನಗೆ ಬೇಕು. ಬೇರೆಯ ರಾಜ್ಯವನ್ನು ನಾನೊಲ್ಲೆ ಎಂದನು.

ಅರ್ಥ:
ಖಾತಿ: ಕೋಪ, ಕ್ರೋಧ; ಕಂದು: ಮಸಕಾಗು; ಮನ: ಮನಸ್ಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಧಾತು: ತೇಜಸ್ಸು; ಲಜ್ಜೆ: ನಾಚಿಕೆ, ಸಿಗ್ಗು; ಅಭಿಮತ: ಅಭಿಪ್ರಾಯ; ಜಾತಿ: ಕುಲ; ಕೆಡು: ಇಲ್ಲವಾಗು, ಸೋಲು; ವಿರೋಧ: ತಡೆ, ಅಡ್ಡಿ, ವೈರತ್ವ; ಬಿಡು: ತೊರೆ, ತ್ಯಜಿಸು; ಆದಿ: ಮುಂತಾದ; ಪ್ರಳಾಪ: ಪ್ರಲಾಪ, ದುಃಖ; ವಿಧೂತ: ಅಲುಗಾಡುವ, ಅಲ್ಲಾಡುವ; ರಿಪು: ವೈರಿ; ಖ್ಯಾತಿ: ಪ್ರಸಿದ್ಧಿ, ಹೆಸರುವಾಸಿ; ಬೇರೆ: ಅನ್ಯ;

ಪದವಿಂಗಡಣೆ:
ಖಾತಿ +ಕಂದದು +ಮನದ +ಧೈರ್ಯದ
ಧಾತು +ಕುಂದದು +ಲಜ್ಜೆ+ಅಭಿಮತ
ಜಾತಿಗೆಡದು+ ವಿರೋಧ +ಬಿಡದು +ಯುಧಿಷ್ಠಿರಾದ್ಯರಲಿ
ಏತಕಿದು +ನಿನ್ನೀ +ಪ್ರಳಾಪ +ವಿ
ಧೂತರಿಪು +ಕುರುರಾಯನ್+ಎಂಬೀ
ಖ್ಯಾತಿಯಲ್ಲದೆ +ಬೇರೆ +ರಾಜ್ಯವನ್ನೊಲ್ಲೆ +ನಾನೆಂದ

ಅಚ್ಚರಿ:
(೧) ದುರ್ಯೋಧನನ ವೀರನುಡಿ – ಕುರುರಾಯನೆಂಬೀ ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ

ಪದ್ಯ ೩೨: ದುರ್ಯೋಧನನು ಯಾವ ಪ್ರಮಾಣವನ್ನು ಮಾಡಿದನು?

ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರ ರಾಯನ ಕಂದನಲ್ಲೆಂದ (ಗದಾ ಪರ್ವ, ೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ದುರ್ಯೋಧನನು ಮಾತನಾಡುತ್ತಾ, ಸೈನಿಕರು ಸತ್ತರು, ಸೇನಾನಾಯಕರು ಅಪ್ಸರೆಯರನ್ನು ಓಲೈಸಿದರು, ಯುದ್ಧಮಾಡಲು ನಾನೊಬ್ಬನೇ ಆದೆ ಎಂದು ನಿನಗೆ ತೋರಿತಲ್ಲವೇ? ಆಳುಗಳ ಹಂಗನ್ನು ಸೇನಾನಾಯಕರ ಬಿಲ್ಲು ಕವಚಗಳ ಬಲವನ್ನೂ ಮನಸ್ಸಿನಲ್ಲಾದರೂ ಬಯಸಿದರೆ ನಾನು ಧೃತರಾಷ್ಟ್ರ ಮಗನೇ ಅಲ್ಲ.

ಅರ್ಥ:
ಆಳು: ಸೇವಕ; ಬಿದ್ದು: ಬೀಳು, ಕುಸಿ; ಬೇಹ: ಬೇಕಾದ; ನಾಯಕ: ಒಡೆಯ; ಓಲಗಿಸು: ಉಪಚರಿಸು; ಅಮರಿ: ಅಪ್ಸರೆ; ರಣ: ಯುದ್ಧ; ಊಳಿಗ: ಕೆಲಸ, ಕಾರ್ಯ; ತೋರು: ಗೋಚರಿಸು; ಹಂಗ: ದಾಕ್ಷಿಣ್ಯ, ಆಭಾರ; ಕೋಲ: ಬಾಣ; ಜೋಡು: ಜೊತೆ, ಜೋಡಿ; ಬಲ: ಶಕ್ತಿ, ಸೇನೆ; ಚಿತ್ತ: ಮನಸ್ಸು; ರಾಯ: ರಾಜ; ಕಂದ: ಮಗ;

ಪದವಿಂಗಡಣೆ:
ಆಳು +ಬಿದ್ದುದು +ಬೇಹ +ನಾಯಕರ್
ಓಲಗಿಸಿತ್+ಅಮರಿಯರನ್+ಈ+ ರಣ
ದೂಳಿಗಕೆ +ನಾನೊಬ್ಬನೆಂದೇ +ನಿನಗೆ +ತೋರಿತಲಾ
ಆಳ +ಹಂಗನು +ನಾಯಕರ+ ಬಿಲು
ಗೋಲ +ಜೋಡಿನ +ಬಲವ+ ಚಿತ್ತದೊಳ್
ಆಳಿದೊಡೆ +ಧೃತರಾಷ್ಟ್ರ +ರಾಯನ +ಕಂದನಲ್ಲೆಂದ

ಅಚ್ಚರಿ:
(೧) ನಾಯಕರು ಸತ್ತರು ಎಂದು ಹೇಳುವ ಪರಿ – ಬೇಹ ನಾಯಕರೋಲಗಿಸಿತಮರಿಯರನೀ