ಪದ್ಯ ೪೨: ದುರ್ಯೋಧನನು ರಣರಂಗದಲ್ಲಿ ಯಾರನ್ನು ಎದುರಿಸಿದನು?

ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ (ಗದಾ ಪರ್ವ, ೧ ಸಂಧಿ, ೪೨ ಪದ್ಯ)

ತಾತ್ಪರ್ಯ:
ಎಡಬಲದ ಸೈನ್ಯಗಳು ಮುರಿದುಬೀಳಲು, ನಿನ್ನ ಮಗನಾದ ದುರ್ಯೋಧನನು ಸೈರಿಸಿಕೊಂಡು ಓಡುತ್ತಿದ್ದ ಕುದುರೆಗಳನ್ನು ನಿಲ್ಲಿಸಿ, ಕಾಲಾಳುಗಳಿಗೆ ಧೈರ್ಯವನ್ನು ತುಂಬಿದನು. ಬಹುವಿಧದ ರಣ ವಾದ್ಯಗಳು ಮೊಳಗಲು, ಕೌರವನು ಅರ್ಜುನನ್ನೆದುರಿಸದುದು ಮಾರಿಯ ಸೆರಗನ್ನು ಹಿಡಿದಂತಾಯಿತು.

ಅರ್ಥ:
ಮುರಿ: ಸೀಳು; ಎಡಬಲ: ಅಕ್ಕಪಕ್ಕ; ಅಂಕ: ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ತರುಬು: ತಡೆ, ನಿಲ್ಲಿಸು; ನಿನ್ನಾತ: ನಿನ್ನ ಮಗ; ಸೈರಿಸು: ತಾಳು, ಸಹಿಸು; ಹರಿ: ಸೀಳು; ದಳ: ಸೈನ್ಯ; ಕೂಡು: ಜೋಡಿಸು; ಕಲಿ: ಶೂರ; ಕಾಲಾಳು: ಸೈನಿಕ; ಒರಲು: ಕೂಗು; ವಿಧ: ರೀತಿ; ವಾದ್ಯ: ಸಂಗೀತದ ಸಾಧನ; ಬಿರುದನಿ: ಒರಟಾದ ಶಬ್ದ; ಉಬ್ಬೆದ್ದು: ಹೆಚ್ಚಾಗು; ಮಾರಿ: ಕ್ಷುದ್ರ ದೇವತೆ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ; ಹಿಡಿ: ಗ್ರಹಿಸು; ಕೆಣಕು: ರೇಗಿಸು;

ಪದವಿಂಗಡಣೆ:
ಮುರಿದುದ್+ಎಡಬಲವಂಕ+ ಪಾರ್ಥನ
ತರುಬಿದನು +ನಿನ್ನಾತ +ಸೈರಿಸಿ
ಹರಿ+ದಳವ +ಕೂಡಿದನು +ಕಲಿ+ಮಾಡಿದನು +ಕಾಲಾಳ
ಒರಲಿದವು +ಬಹುವಿಧದ +ವಾದ್ಯದ
ಬಿರುದನಿಗಳ್+ಉಬ್ಬೆದ್ದು +ಮಾರಿಯ
ಸೆರಗ +ಹಿಡಿದನು +ಕೌರವೇಶ್ವರನ್+ಅರ್ಜುನನ +ಕೆಣಕಿ

ಅಚ್ಚರಿ:
(೧) ರೂಪಕದ ಪ್ರಯೋಗ -ಮಾರಿಯ ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ

ಪದ್ಯ ೩: ಪಾಂಡವ ಸೇನೆಯು ಹೇಗೆ ಹತವಾಯಿತು?

ಕ್ಷಿತಿಪ ಚಿತ್ತೈಸೀಚೆಯಲಿ ಗುರು
ಸುತ ಸುಶರ್ಮಕ ಶಲ್ಯ ನಿನ್ನಯ
ಸುತನು ಕೃತವರ್ಮನು ಕೃಪಾಚಾರ್ಯಾದಿಗಳು ಮಸಗಿ
ಘೃತಸಮುದ್ರದ ಸೆರಗ ಸೋಂಕಿದ
ಹುತವಹನ ಸೊಂಪಿನಲಿ ವೈರಿ
ಪ್ರತತಿಯನು ತರುಬಿದರು ತರಿದರು ಸರಳ ಸಾರದಲಿ (ಶಲ್ಯ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಈಚೆಕಡೆಯಲ್ಲಿ ಅಶ್ವತ್ಥಾಮ, ಸುಧರ್ಮ, ದುರ್ಯೋಧನ ಕೃತವರ್ಮ, ಕೃಪನೇ ಮೊದಲಾದವರು ಮುನ್ನುಗ್ಗಿ ಹೊಡೆಯಲು, ಅವರ ಬಾಣಗಳ ಏಟಿಗೆ ಬಿಸಿಗೆ ತುಪ್ಪದ ಸಾಗರವು ಕರಗಿದಂತೆ ಪಾಂಡವ ಸೇನೆಯು ನಾಶವಾಯಿತು.

ಅರ್ಥ:
ಕ್ಷಿತಿಪ: ರಾಜ; ಚಿತ್ತೈಸು: ಗಮನವಿಟ್ಟು ಕೇಳು; ಸುತ: ಮಗ; ಆದಿ: ಮುಂತಾದ; ಮಸಗು: ಕೆರಳು; ತಿಕ್ಕು; ಘೃತ: ತುಪ್ಪ; ಸಮುದ್ರ: ಸಾಗರ; ಸೆರಗು: ಅಂಚು, ತುದಿ; ಸೋಂಕು: ಮುಟ್ಟು, ತಾಗು; ಹುತವಹ: ಅಗ್ನಿ; ಸೊಂಪು: ಸೊಗಸು, ಚೆಲುವು; ವೈರಿ: ಅರಿ, ಶತ್ರು; ಪ್ರತತಿ: ಗುಂಪು; ತರುಬು: ತಡೆ, ನಿಲ್ಲಿಸು; ತರಿ: ಕಡಿ, ಕತ್ತರಿಸು; ಸರಳ: ಬಾಣ; ಸಾರ: ಸತ್ವ;

ಪದವಿಂಗಡಣೆ:
ಕ್ಷಿತಿಪ +ಚಿತ್ತೈಸ್+ಈಚೆಯಲಿ +ಗುರು
ಸುತ +ಸುಶರ್ಮಕ +ಶಲ್ಯ+ ನಿನ್ನಯ
ಸುತನು +ಕೃತವರ್ಮನು +ಕೃಪಾಚಾರ್ಯ+ಆದಿಗಳು+ ಮಸಗಿ
ಘೃತ+ಸಮುದ್ರದ +ಸೆರಗ+ ಸೋಂಕಿದ
ಹುತವಹನ+ ಸೊಂಪಿನಲಿ +ವೈರಿ
ಪ್ರತತಿಯನು +ತರುಬಿದರು +ತರಿದರು+ ಸರಳ+ ಸಾರದಲಿ

ಅಚ್ಚರಿ:
(೧) ರೂಪಕದ ಪ್ರಯೋಗ – ಘೃತಸಮುದ್ರದ ಸೆರಗ ಸೋಂಕಿದ ಹುತವಹನ ಸೊಂಪಿನಲಿ ವೈರಿ ಪ್ರತತಿಯನು ತರುಬಿದರು
(೨) ಸುತ – ೨, ೩ ಸಾಲಿನ ಮೊದಲ ಪದ

ಪದ್ಯ ೮: ಗೂಢಾಚಾರರು ಏನೆಂದು ಹೇಳಿದರು?

ಮುರಿದು ಬರುತಿದೆ ಸೇನೆ ಸಾಕೀ
ಪರಿಯ ಸೈರಣೆ ನಿಮ್ಮ ಮಾವನ
ಕುರಿದರಿಗೆ ಖತಿಗೊಂಡು ಕಾದಿ ವಿರಾಟ ಕೈಕೆಯರು
ತುರುಗಿದರು ತೆತ್ತೀಸರಲಿ ತೆಗೆ
ಮರೆಯ ಮಾತೇ ವಿಜಯಲಕ್ಷ್ಮಿಯ
ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ (ದ್ರೋಣ ಪರ್ವ, ೧೮ ಸಂಧಿ, ೮ ಪದ್ಯ)

ತಾತ್ಪರ್ಯ:
ರಣರಂಗದಿಂದ ಅರಸನ ನೆಲೆಗೆ ಬಂದ ದೂತರು, ಜೀಆ, ದ್ರೋಣನು ನಿಮ್ಮ ಮಾವನನ್ನು ಕುರಿಯಂತೆ ಕಡಿದು ಹಾಕಿದನು. ಇದರಿಂದ ಕೋಪಗೊಂಡ ವಿರಾಟನು, ಕೇಕೆಯನೂ ದ್ರೋಣನೊಡನೆ ಕಾದಿ ದೇವತೆಗಳ ಲೋಕಕ್ಕೆ ಹೋದರು. ಮರೆ ಮುಚ್ಚಿನ ಮಾತೇಕೆ, ದ್ರೋಣನು ವಿಜಯಲಕ್ಷ್ಮಿಯ ಸೆರಗನ್ನುಹಿಡಿದೆಳೆದನು ಎಂದು ಧರ್ಮಜನಿಗೆ ಹೇಳಿದರು.

ಅರ್ಥ:
ಮುರಿ: ಸೀಳು; ಬರುತಿದೆ: ಆಗಮಿಸು; ಸೇನೆ: ಸೈನ್ಯ; ಸಾಕು: ನಿಲ್ಲು; ಪರಿ: ರೀತಿ; ಸೈರಣೆ: ತಾಳ್ಮೆ; ಮಾವ: ಹೆಂಡತಿಯ ತಂದೆ; ಕುರಿ: ಮೇಷ; ಖತಿ: ಕೋಪ; ಕಾದು: ಹೋರಾದು; ತುರುಗು: ಹೆಚ್ಚಾಗು, ಅಧಿಕವಾಗು; ತೆತ್ತು: ತಿರಿಚು, ಸುತ್ತು; ತೆಗೆ: ಹೊರತರು; ಮರೆ: ಮುಚ್ಚು; ಮಾತು: ವಾಣಿ; ವಿಜಯ: ಗೆಲುವು; ಸೆರಗು: ಬಟ್ಟೆ, ಉತ್ತರೀಯ; ಹಿಡಿ: ಗ್ರಹಿಸು; ಚರ: ಗೂಢಚಾರ, ಸೇವಕ; ಭೂಪತಿ: ರಾಜ;

ಪದವಿಂಗಡಣೆ:
ಮುರಿದು +ಬರುತಿದೆ +ಸೇನೆ +ಸಾಕ್+ಈ
ಪರಿಯ +ಸೈರಣೆ +ನಿಮ್ಮ +ಮಾವನ
ಕುರಿದರಿಗೆ+ ಖತಿಗೊಂಡು +ಕಾದಿ +ವಿರಾಟ +ಕೈಕೆಯರು
ತುರುಗಿದರು +ತೆತ್ತೀಸರಲಿ +ತೆಗೆ
ಮರೆಯ +ಮಾತೇ +ವಿಜಯಲಕ್ಷ್ಮಿಯ
ಸೆರಗ+ ಹಿಡಿದನು +ದ್ರೋಣನ್+ಎಂದರು +ಚರರು+ ಭೂಪತಿಗೆ

ಅಚ್ಚರಿ:
(೧) ದ್ರುಪದನನ್ನು ಕೊಂದ ಪರಿ – ನಿಮ್ಮ ಮಾವನ ಕುರಿದರಿಗೆ
(೨) ಜಯವನ್ನು ಸಮೀಪಿಸಿದ ಎಂದು ಹೇಳುವ ಪರಿ – ವಿಜಯಲಕ್ಷ್ಮಿಯ ಸೆರಗ ಹಿಡಿದನು ದ್ರೋಣನೆಂದರು ಚರರು ಭೂಪತಿಗೆ

ಪದ್ಯ ೨೭: ಷಡುರಥರ ಪರಿಸ್ಥಿತಿ ಹೇಗಾಯಿತು?

ಹರಿದು ಬಿದ್ದವು ಜೋಡು ಮೆಯ್ಯಲಿ
ಮುರಿದವಗಣಿತ ಬಾಣದೇರಿನೊ
ಳೊರೆದ ರಕುತದ ಧಾರೆ ನಾದಿತು ರಥದ ಹಲಗೆಗಳ
ಅರಿವು ಮರೆದಪಕೀರ್ತಿನಾರಿಯ
ಸೆರಗ ಹಿಡಿದರು ಹೇಳಲೇನದ
ನರಿಯೆನೇಕಾಂತದಲಿ ಕರ್ಣನ ಕರೆದನಾ ದ್ರೋಣ (ದ್ರೋಣ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಆರು ರಥಿಕರ ಕವಚಗಳು ಹರಿದು ಕೆಳಕ್ಕೆ ಬಿದ್ದವು. ಬಾನಗಳು ಮೈಗೆನೆಟ್ತು ರಕ್ತ ಸುರಿದು ರಥದ ಹಲಗೆಗಳು ತೊಯ್ದವು. ಅಪಕೀರ್ತಿ ಎಂಬ ಹೆಂಗಸಿನ ಸೆರಗು ಹಿಡಿದರು. ರಾಜ ನಾನು ನಿಮಗೆ ಹೇಗೆ ಹೇಳಲೆಂದು ತಿಳಿಯುತ್ತಿಲ್ಲ, ದ್ರೋಣನು ಕರ್ಣನನ್ನು ಕರೆದು ಏಕಾಂತದಲ್ಲಿ ಹೀಗೆಂದು ಹೇಳಿದನು.

ಅರ್ಥ:
ಹರಿ: ಕತ್ತರಿಸು; ಬಿದ್ದು: ಬೀಳು; ಜೋಡು: ಜೊತೆ; ಮೆಯ್ಯಲಿ: ದೇಹದಲ್ಲಿ; ಮುರಿ:ಸೀಳು; ಅಗಣಿತ: ಎಣಿಕೆಗೆ ಮೀರಿದ; ಬಾಣ: ಸರಳು; ಏರು: ಹೆಚು; ಒರೆ: ಸವರು; ರಕುತ: ನೆತ್ತರು; ಧಾರೆ: ವರ್ಷ; ನಾದು: ಕಲಸು; ರಥ: ಬಂಡಿ; ಹಲಗೆ: ಮರಗಳ ಅಗಲವಾದ ಸೀಳು; ಅರಿ: ತಿಳಿ; ಮರೆ: ಜ್ಞಾಪಕದಿಂದ ದೂರವಾಗು; ಅಪಕೀರ್ತಿ: ಅಪಯಶಸ್ಸು; ನಾರಿ: ಹೆಣ್ಣು; ಸೆರಗು: ಉತ್ತರೀಯ; ಹಿಡಿ: ಗ್ರಹಿಸು; ಅರಿ: ತಿಳಿ; ಏಕಾಂತ: ಒಬ್ಬನೇ; ಕರೆ: ಬರೆಮಾಡು;

ಪದವಿಂಗಡಣೆ:
ಹರಿದು+ ಬಿದ್ದವು +ಜೋಡು +ಮೆಯ್ಯಲಿ
ಮುರಿದವ್+ಅಗಣಿತ +ಬಾಣದ್+ಏರಿನೊಳ್
ಒರೆದ +ರಕುತದ +ಧಾರೆ +ನಾದಿತು +ರಥದ +ಹಲಗೆಗಳ
ಅರಿವು +ಮರೆದ್+ಅಪಕೀರ್ತಿನಾರಿಯ
ಸೆರಗ+ ಹಿಡಿದರು +ಹೇಳಲೇನದನ್
ಅರಿಯೆನ್+ಏಕಾಂತದಲಿ +ಕರ್ಣನ +ಕರೆದನಾ +ದ್ರೋಣ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಅರಿವು ಮರೆದಪಕೀರ್ತಿನಾರಿಯಸೆರಗ ಹಿಡಿದರು

ಪದ್ಯ ೫: ಭೀಮನನ್ನು ಯಾರು ತಡೆದರು?

ಮುರಿದು ಬಹ ನಿಜಸೇನೆಗಭಯದ
ಸೆರಗ ಬೀಸುತ ಭೀಮಸೇನನ
ತರುಬಿ ನಿಂದನು ಭೀಷ್ಮ ಬಿಗಿದನು ಸರಳಲಂಬರವ
ತೆರಹುಗೊಡವಂಬುಗಳು ಭೀಮಗೆ
ಬೆರಗು ಬಲಿದುದು ಹೊಕ್ಕು ಸಾತ್ಯಕಿ
ಯಿರಿದು ಭೀಷ್ಮನ ಬಲದಲೂಡಿದನಖಿಳ ಖಗಕುಲವ (ಭೀಷ್ಮ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಸೋತು ಹಿಂದಿರುಗುತ್ತಿದ್ದ ತನ್ನ ಸೈನ್ಯಕ್ಕೆ ಭೀಷ್ಮನು ಅಭಯವನ್ನು ಕೊಟ್ಟು, ಭೀಮನನ್ನು ತಡೆದು ನಿಂತನು. ಭೀಷ್ಮನ ಬಾಣಗಳಿಂದ ಆಗಸವನ್ನು ತುಂಬಲು, ಭೀಮನಿಗೆ ಮುಂದುಗಾಣದಂತಾಯಿತು. ಭೀಮನು ಆಶ್ಚರ್ಯ ಚಕಿತನಾಗಿ ನಿಲ್ಲಲು ಸಾತ್ಯಕಿಯು ಒಳಹೊಕ್ಕು ಭೀಷ್ಮನ ಸೈನ್ಯವನ್ನು ಕಡಿದು ಪಕ್ಷಿಗಳಿಗೆ ಆಹಾರವನ್ನು ಕೊಟ್ಟನು.

ಅರ್ಥ:
ಮುರಿ: ಸೀಳು; ಬಹ: ಬಹಳ; ಸೇನೆ: ಸೈನ್ಯ, ದಳ; ಅಭಯ: ನಿರ್ಭಯತೆ, ರಕ್ಷಣೆ; ಸೆರಗ: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬೀಸು: ಬೀಸುವಿಕೆ, ತೂಗುವಿಕೆ; ತರುಬು: ತಡೆ, ನಿಲ್ಲಿಸು; ನಿಂದನು: ನಿಲ್ಲು; ಬಿಗಿ: ಭದ್ರ, ಗಟ್ಟಿ; ಸರಳು: ಬಾಣ; ಅಂಬರ: ಆಗಸ; ತೆರಹು: ಗುರುತು, ಚಿಹ್ನೆ; ಅಂಬು: ಬಾಣ; ಬೆರಗು: ಆಶ್ಚರ್ಯ; ಬಲಿದು: ಸಮರ್ಥ; ಹೊಕ್ಕು: ಸೇರು; ಬಲ: ಸೈನ್ಯ; ಅಖಿಳ: ಎಲ್ಲಾ; ಖಗ: ಪಕ್ಷಿ; ಕುಲ: ವಂಶ;

ಪದವಿಂಗಡಣೆ:
ಮುರಿದು +ಬಹ+ ನಿಜಸೇನೆಗ್+ಅಭಯದ
ಸೆರಗ +ಬೀಸುತ +ಭೀಮಸೇನನ
ತರುಬಿ +ನಿಂದನು +ಭೀಷ್ಮ +ಬಿಗಿದನು +ಸರಳಲ್+ಅಂಬರವ
ತೆರಹುಕೊಡವ್+ಅಂಬುಗಳು+ ಭೀಮಗೆ
ಬೆರಗು +ಬಲಿದುದು +ಹೊಕ್ಕು +ಸಾತ್ಯಕಿ
ಇರಿದು +ಭೀಷ್ಮನ +ಬಲದಲ್+ಊಡಿದನ್+ಅಖಿಳ+ ಖಗಕುಲವ

ಅಚ್ಚರಿ:
(೧) ಬಹಳ ಬಾಣಗಳನ್ನೆಂದು ಹೇಳಲು – ಭೀಷ್ಮ ಬಿಗಿದನು ಸರಳಲಂಬರವ
(೨) ಅಂಬು, ಸರಳ – ಸಮನಾರ್ಥಕ ಪದ

ಪದ್ಯ ೨೬: ದ್ರೌಪದಿ ದೇವಲೋಕದ ಮತ್ತಾರನ್ನು ತನ್ನ ಸಹಾಯಕ್ಕೆ ಬೇಡಿಕೊಂಡಳು?

ಅಂಧನೊಬ್ಬನೆ ಮಾವ ನೀವೇ
ನಂಧರಾದಿರೆ ಪಾಂಡು ಕರುಣಾ
ಸಿಂಧು ನೀ ಸೈರಿಸುವುದೇ ತನ್ನೀ ವಿಪತ್ತಿನಲಿ
ಅಂಧಕಾಸುರಮಥನ ನೀನೇ
ಬಂಧಿಸಿದೆಲಾ ಪೂರ್ವವರ ಸಂ
ಬಂಧವನು ನೀ ಸೆರಗ ಬಿಡಿಸೆಂದೊರಲಿದಳು ತರಳೆ (ಸಭಾ ಪರ್ವ, ೧೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹೇ ಮಾವ ಪಾಂಡು ಮಹಾರಾಜರೇ, ಮಾವ ಧೃತರಾಷ್ಟ್ರ ಕುರುಡನಾದರೇ, ನೀವು ಕುರುಡರಾದಿರೇ? ನನಗೆ ಬಂದಿರುವ ಈ ವಿಪತ್ತನ್ನು ನೋಡಿ ನೀವು ಸುಮ್ಮನಿರುವಿರೇ? ಹೇ ಪರಮೇಶ್ವರ, ಅಂಧಕಾಸುರಮಥನ ಮಾಡಿ ಹಿಂದೆ ಧರೆಯನ್ನು ರಕ್ಷಿಸಿದವ, ಪಾಂಡವರ ನನ್ನ ಸಂಬಂಧವನ್ನು ಹಿಂದೆ ಏರ್ಪಡಿಸಿದವನು ನೀನೆ ಅಲ್ಲವೇ ನೀನಾದರೂ ನನ್ನ ಸೆರಗನ್ನು ಬಿಡಿಸು ಎಂದು ಗೋಳಿಟ್ಟಳು ದ್ರೌಪದಿ.

ಅರ್ಥ:
ಅಂಧ: ಕುರುಡ; ಕರುಣಾಸಿಂಧು: ದಯಾ ಸಾಗರ; ಸೈರಿಸು: ತಾಳು, ಸಹಿಸು; ವಿಪತ್ತು: ಕಷ್ಟ; ಮಥನ: ನಾಶಮಾಡಿದ; ಬಂಧಿಸು: ಕೂಡಿಸು; ಪೂರ್ವ: ಹಿಂದೆ; ವರ: ಶ್ರೇಷ್ಠ; ಸಂಬಂಧ: ಸಹವಾಸ, ಹೊಂದಾಣಿಕೆ; ಸೆರಗು: ವಸ್ತ್ರ, ಸೀರೆಯ ಭಾಗ; ಬಿಡಿಸು: ಕಳಚು, ಸಡಿಲಿಸು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಅಂಧನ್+ಒಬ್ಬನೆ +ಮಾವ +ನೀವೇನ್
ಅಂಧರಾದಿರೆ+ ಪಾಂಡು +ಕರುಣಾ
ಸಿಂಧು +ನೀ +ಸೈರಿಸುವುದೇ+ ತನ್ನೀ+ ವಿಪತ್ತಿನಲಿ
ಅಂಧಕಾಸುರಮಥನ +ನೀನೇ
ಬಂಧಿಸಿದೆಲಾ +ಪೂರ್ವ+ವರ+ ಸಂ
ಬಂಧವನು +ನೀ +ಸೆರಗ +ಬಿಡಿಸೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಶಿವನನ್ನು ಅಂಧಕಾಸುರಮಥನ ಎಂದು ಕರೆದಿರುವುದು

ಪದ್ಯ ೨೪: ದುರ್ಯೋಧನನು ಶಲ್ಯನ ಕೋಪವನ್ನು ಹೇಗೆ ಶಮನ ಮಾಡಲು ಪ್ರಯತ್ನಿಸಿದನು?

ಒಡನೆ ನಿಂದನು ಸೆರಗ ಹಿಡಿದವ
ಗಡಿಸಲೇಕಿನ್ನೆನುತ ಗುಣದಲಿ
ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ
ನುಡಿಗೆ ಕೋಪಿಸಲೇಕೆ ಮನವೊಡ
ಬಡುವುದೇ ಕೈಕೊಂಬುದಲ್ಲದ
ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ (ಕರ್ಣ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಲ್ಯನ ಕ್ರೋಧದ ಮಾತುಗಳನ್ನು ಕೇಳಿ ದುರ್ಯೋಧನನು ನಿಂತನು, ತನ್ನ ಉತ್ತರೀಯವನ್ನು ಹಿಡಿದು ಹೀಗೇಕೆ ವಿರೋಧಿಸುವಿರಿ ಎಂದು ವಿನಯದಿಂದ ಕೇಳಿ ಸಂತೈಸಿದನು. ನಾನಾಡಿದ ಮಾತಿನಿಂದ ನೀವೇಕೆ ಕೋಪಗೊಳ್ಳುವಿರಿ, ನಿಮ್ಮ ಮನಸ್ಸಿಗೆ ಇದು ಉಚಿತವೆನಿಸಿದರೆ ಒಪ್ಪಿಕೊಳ್ಳಿ ಇಲ್ಲವಾದರೆ ನಿಮಗೆ ಆಜ್ಞೆಕೊಡುವವರು ಯಾರಿದ್ದಾರೆ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಒಡನೆ: ತಕ್ಷಣ; ನಿಂದನು: ನಿಲ್ಲು; ಸೆರಗ: ಉತ್ತರೀಯ; ಹಿಡಿದು: ಗ್ರಹಿಸು, ಕೈಕೊಳ್ಳು; ಗಡಸು: ಗಟ್ಟಿ, ಒರಟು; ಅವಗಡಿಸು: ವಿರೋಧಿಸು; ಗುಣ: ನಡತೆ, ಸ್ವಭಾವ; ನುಡಿ: ಮಾತು; ಕುಳ್ಳಿರಿಸು: ಕೂತುಕೋ, ಆಸೀನನಾಗು; ಸಂತೈಸು: ಸಮಾಧಾನ ಪಡಿಸು; ವಿನಯ: ಒಳ್ಳೆಯತನ, ಸೌಜನ್ಯ; ಕೋಪ: ಸಿಟ್ಟು, ಕ್ರೋಧ; ಮನ: ಮನಸ್ಸು; ಒಡಬಡು: ಹೊಂದು; ಕೈಕೊಂಬು: ಒಪ್ಪಿಕೋ, ಮಾಡು; ಒಡೆಯ: ನಾಯಕ; ರಾಯ: ರಾಜ;

ಪದವಿಂಗಡಣೆ:
ಒಡನೆ +ನಿಂದನು +ಸೆರಗ +ಹಿಡಿದ್+ಅವ
ಗಡಿಸಲೇಕಿನ್+ಎನುತ +ಗುಣದಲಿ
ನುಡಿದು +ಕುಳ್ಳಿರಿಸಿದನು+ ಸಂತೈಸಿದನು+ ವಿನಯದಲಿ
ನುಡಿಗೆ+ ಕೋಪಿಸಲೇಕೆ+ ಮನವ್+ಒಡ
ಬಡುವುದೇ +ಕೈಕೊಂಬುದ್+ಅಲ್ಲದಡ್
ಒಡೆಯರುಂಟೇ +ನಿಮಗೆ+ ಎಂದನು +ಕೌರವರ+ ರಾಯ

ಅಚ್ಚರಿ:
(೧) ಒಡನೆ, ಒಡೆಯ – ೧, ೬ ಸಾಲಿನ ಮೊದಲ ಪದ
(೨) ನಿಲ್ಲುವ ಪರಿ – ಒಡನೆ ನಿಂದನು ಸೆರಗ ಹಿಡಿದ್
(೩) ಸಂತೈಸುವ ಬಗೆ – ಮನವೊಡಬಡುವುದೇ ಕೈಕೊಂಬುದಲ್ಲದಡೊಡೆಯರುಂಟೇ ನಿಮಗೆ
(೪) ಒಡೆಯ, ರಾಯ – ಸಮನಾರ್ಥಕ ಪದ, ೬ನೇ ಸಾಲಿನ ಮೊದಲ ಮತ್ತು ಕೊನೆ ಪದ