ಪದ್ಯ ೨೫: ಶಕುನಿಯ ಸೈನ್ಯವನ್ನು ಯಾರು ನಾಶಮಾಡಿದರು?

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ (ಗದಾ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮ ಸುದರ್ಶನನ ಮಾಂಸಖಂಡಗಳನ್ನು ತರಿದು ಕೊಂದನು. ನಕುಲನು ಇಪ್ಪತ್ತೈದು ಬಾಣಗಳಿಂದ ಉಲೂಕನನ್ನು ಸಂಹರಿಸಿದನು. ಸಹದೇವನು ಬಾಣಗಳ ಮೊಳಗಿನಿಂದ ಶಕುನಿಯ ಸೈನ್ಯವನ್ನು ಚಚ್ಚಿ ಸಂಹರಿಸಿದನು.

ಅರ್ಥ:
ಕೆಡಹು: ಬೀಳಿಸು; ತಮ್ಮ: ಸಹೋದರ; ಅಡಗು: ಮಾಂಸ; ಉದರು: ಹರಡು; ಉಳೂಕ: ಗೂಬೆ; ಕಡಿ: ಸೀಲು; ಬಿಸುಟು: ಹೊರಹಾಕು; ಬಾಣ: ಅಂಬು, ಶರ; ತುಡುಕು: ಹೋರಾಡು, ಸೆಣಸು; ಅಂಬು: ಬಾಣ; ಗಡಣ: ಗುಂಪು; ಸೌಬಲ: ಶಕುನಿ; ಸೇನೆ: ಸೈನ್ಯ; ಕಡಲ: ಸಾಗರ; ಮೊಗೆ: ತುಂಬಿಕೊಳ್ಳು, ಬಾಚು; ಮೋದು: ಪೆಟ್ಟು, ಹೊಡೆತ; ಶರಜಾಲ: ಬಾಣಗಳ ಗುಂಪು; ಝಂಕಿಸು: ಆರ್ಭಟಿಸು;

ಪದವಿಂಗಡಣೆ:
ಕೆಡಹಿ+ ದುರ್ಯೋಧನನ +ತಮ್ಮನನ್
ಅಡಗ್+ಉದರಿ +ಮಾಡಿದನ್+ಉಳೂಕನ
ಕಡಿದು +ಬಿಸುಟನು +ನಕುಲನ್+ಇಪ್ಪತ್ತೈದು +ಬಾಣದಲಿ
ತುಡುಕಿದನು +ಸಹದೇವನ್+ಅಂಬಿನ
ಗಡಣದಲಿ +ಸೌಬಲನ +ಸೇನೆಯ
ಕಡಲ +ಮೊಗೆದನು +ಮೋದಿದನು +ಶರಜಾಲ +ಝಂಕೃತಿಯ

ಅಚ್ಚರಿ:
(೧) ರೌದ್ರತೆಯ ವರ್ಣನೆ – ಕೆಡಹಿ ದುರ್ಯೋಧನನ ತಮ್ಮನನಡಗುದರಿ ಮಾಡಿದನು

ಪದ್ಯ ೭: ಸಾತ್ಯಕಿಯು ಹೇಗೆ ಯುದ್ಧವನ್ನು ಮಾಡಿದನು?

ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ
ಬಿಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ (ಗದಾ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ಕೃಪ, ಕೃತವರ್ಮರ ಬಾಣಗಳು ಕಿಡಿಯುಗುಳುತ್ತಾ ಬಂದರೆ ಸಾತ್ಯಕಿಯು ಬೆಚ್ಚಿದನೇ ಬೆದರಿದನೇ? ಅವರ ಬಾಣಗಳನ್ನು ಕಡಿದು ಮತ್ತೆ ಬಾಣಗಳನ್ನು ಬಿಟ್ಟನು.

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು; ಕವಿ: ಆವರಿಸು; ಶರಜಾಲ: ಬಾಣಗಳ ಗುಂಪು; ಜಡಿ: ಕೊಲ್ಲು, ಗದರಿಸು, ಬೆದರಿಸು; ಕಿಡಿ: ಬೆಂಕಿ; ಗಡಣ: ಸಮೂಹ; ಬಿಚ್ಚು: ಬೇರೆಯಾಗು; ಬೆಚ್ಚು: ಭಯಗೊಳ್ಳು; ಬೆದರು: ಹೆದರು; ಕೈಕೊಂಡು: ಗ್ರಹಿಸು; ರಿಪು: ವೈರಿ; ಶರಾಳಿ: ಬಾಣಗಳ ಗುಂಪು; ಕೊಚ್ಚು: ಕತ್ತರಿಸು; ಕೊಡಹು: ಒದರು; ಮಿಗೆ: ಅಧಿಕ; ಭಂಗಿಸು: ನಾಶಮಾಡು; ವಿಭಾಡಿಸು: ನಾಶಮಾಡು;

ಪದವಿಂಗಡಣೆ:
ಎಚ್ಚನ್+ಅಶ್ವತ್ಥಾಮನ್+ಆ+ ಕೃಪನ್
ಎಚ್ಚನಾ +ಕೃತವರ್ಮಕನು +ಕವಿದ್
ಎಚ್ಚನೀ +ಶರಜಾಲ +ಜಡಿದವು +ಕಿಡಿಯ +ಗಡಣದಲಿ
ಬಿಚ್ಚಿದನೆ+ ಬೆದರಿದನೆ +ಕೈಕೊಂಡ್
ಎಚ್ಚು +ಸಾತ್ಯಕಿ +ರಿಪು+ಶರಾಳಿಯ
ಕೊಚ್ಚಿದನು +ಕೊಡಹಿದನು +ಮಿಗೆ +ಭಂಗಿಸಿ +ವಿಭಾಡಿಸಿದ

ಅಚ್ಚರಿ:
(೧) ಶರಜಾಲ, ಶರಾಳಿ – ಸಮಾನಾರ್ಥಕ ಪದ
(೨) ಎಚ್ಚು: ೧-೩ ಸಾಲಿನ ಮೊದಲ ಪದ

ಪದ್ಯ ೪೮: ಧರ್ಮಜನು ಶತ್ರು ಸೈನ್ಯವನ್ನು ಹೇಗೆ ಸಂಹರಿಸಿದನು?

ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ
ಭಾನುಬಿಂಬವ ತಗೆವ ತಮದ ವಿ
ತಾನದಂತಿರೆ ವಿರಸಾಯ್ತು ಶ
ರಾನುಗತಶರಜಾಲ ಜನದ ವಿಡಾಯ್ಲತನವೆಂದ (ಗದಾ ಪರ್ವ, ೧ ಸಂಧಿ, ೪೮ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ, ಧರ್ಮಜನ ಕ್ಷಾತ್ರ ಪೌರುಷವನ್ನು ಹೇಗೆ ತಾನೆ ಹೊಗಳಲಿ? ತನ್ನನ್ನು ಮುತ್ತಿದ ಚತುರಂಗ ಸೈನ್ಯವನ್ನು ಸೂರ್ಯ ಕಿರಣವು ಕತ್ತಲನ್ನೋಡಿಸುವಂತೆ ಲೀಲಾಜಾಲವಾಗಿ ಸಂಹರಿಸಿದನು.

ಅರ್ಥ:
ಹೇಳು: ತಿಳಿಸು; ಅವನಿಪತಿ: ರಾಜ; ಸೂನು: ಮಗ; ಕ್ಷಾತ್ರ: ಕ್ಷತ್ರಿಯ; ಆನೆ: ಪರಾಕ್ರಮಿ; ಅಗ್ಗಳೆ: ಶ್ರೇಷ್ಠತೆ; ರಾವ್ತರು: ಕುದುರೆ ಸವಾರ; ರಥ: ಬಂಡಿ; ಪದಾತಿ: ಕಾಲಾಳು; ಭಾನು: ಸೂರ್ಯ; ಬಿಂಬ: ಪ್ರಕಾಶ; ತಗೆ: ಹೊರತರು; ತಮ: ಅಂಧಕಾರ; ವಿತಾನ: ಹಬ್ಬುವಿಕೆ, ವಿಸ್ತಾರ; ವಿರಸ: ವಿರೋಧ, ಸತ್ವವಿಲ್ಲದ; ಶರ: ಬಾಣ; ಅನುಗತ: ಜೊತೆಯಲ್ಲಿ ಬರುವವನು; ಶರಜಾಲ: ಬಾಣಗಳ ಗುಂಪು; ಜನ: ಮನುಷ್ಯ; ವಿಡಾಯಿ: ಶಕ್ತಿ, ಆಡಂಬರ;

ಪದವಿಂಗಡಣೆ:
ಏನು+ ಹೇಳುವೆನ್+ಅವನಿಪತಿ +ಯಮ
ಸೂನುವಿನ +ಸುಕ್ಷಾತ್ರವನು +ನಿ
ನ್ನಾನೆಗಳನ್+ಅಗ್ಗಳೆಯ +ರಾವ್ತರ +ರಥ+ಪದಾತಿಗಳ
ಭಾನು+ಬಿಂಬವ +ತಗೆವ +ತಮದ +ವಿ
ತಾನದಂತಿರೆ +ವಿರಸಾಯ್ತು +ಶ
ರಾನುಗತ+ಶರಜಾಲ+ ಜನದ+ ವಿಡಾಯ್ಲ+ತನವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುಬಿಂಬವ ತಗೆವ ತಮದ ವಿತಾನದಂತಿರೆ
(೨) ಶರ ಪದದ ಬಳಕೆ – ಶರಾನುಗತಶರಜಾಲ

ಪದ್ಯ ೫: ಅಶ್ವತ್ಥಾಮ ಮತ್ತು ಅರ್ಜುನರ ಯುದ್ಧದ ತೀವ್ರತೆ ಹೇಗಿತ್ತು?

ಮೊಗೆದವಶ್ವತ್ಥಾಮನೆಚ್ಚಂ
ಬುಗಳನರ್ಜುನನಂಬು ಪಾರ್ಥನ
ಬಿಗಿದವಾ ನಿಮಿಷದಲಿ ಭಾರದ್ವಾಜ ಶರಜಾಲ
ತಗಡುಗಿಡಿಗಳ ಸೂಸುವುರಿಧಾ
ರೆಗಳ ಘೃತಲೇಪನದ ಬಂಧದ
ಹೊಗರುಗಣೆ ಹೂಳಿದವು ಗುರುಸುತನಂಬಿನಂಬುಧಿಯ (ಶಲ್ಯ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿ ಬಿಟ್ಟ ಬಾಣಗಳನ್ನು ಅರ್ಜುನನು ಮೊಗೆದು ಹಾಕಿದನು. ಅಶ್ವತ್ಥಾಮನ ಬಾಣಗಳು ಅರ್ಜುನನನ್ನು ಬಂಧಿಸಿದವು. ಕಿಡಿಗಳನ್ನು ತಗಡಿನಂತೆ ಸೂಸುತ್ತಾ, ಉರಿಯ ಧಾರೆಗಳನ್ನುಗುಳುತ್ತಾ ಅರ್ಜುನನ ಘೃತಲೇಪನದ ಅಂಬುಗಳು ಅಶ್ವತ್ಥಾಮನ ಬಾಣಗಳನ್ನು ಮುಚ್ಚಿಹಾಕಿದನು.

ಅರ್ಥ:
ಮೊಗೆ: ನುಂಗು, ಕಬಳಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬಿಗಿ: ಬಂಧಿಸು; ಶರಜಾಲ: ಬಾಣಗಳ ಗುಂಪು; ತಗಡು: ದಟ್ಟಣೆ, ಸಾಂದ್ರತೆ; ಕಿಡಿ: ಬೆಂಕಿ; ಸೂಸು: ಹೊರಹೊಮ್ಮು; ಧಾರೆ: ಮಳೆ; ಘೃತ: ತುಪ್ಪ; ಲೇಪನ: ಬಳಿಯುವಿಕೆ, ಹಚ್ಚುವಿಕೆ; ಬಂಧ: ಕಟ್ಟು; ಹೊಗರು: ಕಾಂತಿ, ಪ್ರಕಾಶ; ಹೂಳು: ಮುಚ್ಚು; ಅಂಬುಧಿ: ಸಾಗರ;

ಪದವಿಂಗಡಣೆ:
ಮೊಗೆದವ್+ಅಶ್ವತ್ಥಾಮನ್+ಎಚ್ಚ್
ಅಂಬುಗಳನ್+ಅರ್ಜುನನ್+ಅಂಬು +ಪಾರ್ಥನ
ಬಿಗಿದವಾ +ನಿಮಿಷದಲಿ +ಭಾರದ್ವಾಜ +ಶರಜಾಲ
ತಗಡು+ಕಿಡಿಗಳ +ಸೂಸು+ಉರಿ+ಧಾ
ರೆಗಳ+ ಘೃತ+ಲೇಪನದ +ಬಂಧದ
ಹೊಗರುಗಣೆ +ಹೂಳಿದವು +ಗುರುಸುತನ್+ಅಂಬಿನ್+ಅಂಬುಧಿಯ

ಅಚ್ಚರಿ:
(೧) ಅಂಬು ಪದದ ಬಳಕೆ – ಗುರುಸುತನಂಬಿನಂಬುಧಿಯ
(೨) ಉಪಮಾನದ ಪ್ರಯೋಗ – ತಗಡುಗಿಡಿಗಳ ಸೂಸುವುರಿಧಾರೆಗಳ ಘೃತಲೇಪನದ ಬಂಧದ ಹೊಗರುಗಣೆ ಹೂಳಿದವು

ಪದ್ಯ ೬೩: ಧರ್ಮಜನ ಬಾಣಗಳು ಯಾರ ದೇಹವನ್ನು ನೆಟ್ಟವು?

ಏನ ಹೇಳುವೆನರಸ ಕುಂತೀ
ಸೂನುವೇ ಕಿರುಕುಳನೆ ಶಲ್ಯನ
ನೂನ ಶರಜಾಲದಲಿ ನೊಂದನು ಬಹಳ ಧೈರ್ಯದಲಿ
ಭಾನುವಿನ ತಮದೊದವಿದನುಸಂ
ಧಾನದಂತಿರೆಯಹಿತಭಟನ ಸ
ಘಾನತೆಯನೆತ್ತಿದವು ಕುತ್ತಿದವಂಬು ದಳಪತಿಯ (ಶಲ್ಯ ಪರ್ವ, ೨ ಸಂಧಿ, ೬೩ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ, ನಾನೇನೆಂದು ಹೇಳಲಿ, ಧರ್ಮಜನೇನು ಅಲ್ಪನೇ? ಶಲ್ಯನ ನಿರಂತರ ಬಾಣಾಘಾತದಿಂದ ನೊಂದರೂ, ಬೆಳಕು ಕತ್ತಲಿನ ಯುದ್ಧದಮ್ತೆ ಧರ್ಮಜನು ಬಿಟ್ಟ ಬಾಣಗಳು ಶಲ್ಯನ ಮೈಗೆ ನೆಟ್ಟವು.

ಅರ್ಥ:
ಅರಸ: ರಾಜ; ಸೂನು: ಮಗ; ಕಿರುಕುಳ: ತೊಂದರೆ, ಸಾಮಾನ್ಯ; ನೂನ: ಭಂಗ; ಶರಜಾಲ: ಬಾಣಗಳ ಗುಂಪು; ನೊಂದು: ನೋವು; ಬಹಳ: ತುಂಬ; ಧೈರ್ಯ: ಎದೆಗಾರಿಕೆ, ಕೆಚ್ಚು; ಭಾನು: ಸೂರ್ಯ; ತಮ: ಅಂಧಕಾರ; ಅನುಸಂಧಾನ: ಹೆದೆಗೆ ಬಾಣ ಹೂಡುವುದು, ಪ್ರಯೋಗ; ಅಹಿತಭಟ: ವೈರಿ ಸೈನಿಕ; ಸಘಾನ: ಘನತೆಯಿಂದ ಕೂಡಿ; ಎತ್ತು: ಮೇಲೇರು; ಕುತ್ತು: ತೊಂದರೆ, ಆಪತ್ತು; ಅಂಬು: ಬಾಣ; ದಳಪತಿ: ಸೇನಾಧಿಪತಿ; ಅವಿ: ಬಚ್ಚಿಟ್ಟುಕೊಳ್ಳು; ಒದವು: ಉಂಟಾಗು;

ಪದವಿಂಗಡಣೆ:
ಏನ +ಹೇಳುವೆನ್+ಅರಸ +ಕುಂತೀ
ಸೂನುವೇ+ ಕಿರುಕುಳನೆ+ ಶಲ್ಯನ
ನೂನ +ಶರಜಾಲದಲಿ +ನೊಂದನು+ ಬಹಳ +ಧೈರ್ಯದಲಿ
ಭಾನುವಿನ +ತಮದ್+ಒದವಿದ್+ಅನುಸಂ
ಧಾನದಂತಿರೆ+ಅಹಿತ+ಭಟನ+ ಸ
ಘಾನತೆಯನ್+ಎತ್ತಿದವು +ಕುತ್ತಿದವ್+ಅಂಬು +ದಳಪತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಾನುವಿನ ತಮದೊದವಿದನುಸಂಧಾನದಂತಿರೆ

ಪದ್ಯ ೩೭: ಶಲ್ಯನ ದಾಳಿಯು ಹೇಗಿತ್ತು?

ದಳಪತಿಯ ದುವ್ವಾಳಿ ಪಾಂಡವ
ಬಲವ ಕೆದರಿತು ಕಲ್ಪಮೇಘದ
ಹೊಲಿಗೆ ಹರಿದವೊಲಾಯ್ತು ಮಾದ್ರೇಶ್ವರನ ಶರಜಾಲ
ಅಳುಕದಿರಿ ಬದ್ದರದ ಬಂಡಿಯ
ನಿಲಿಸಿ ಹರಿಗೆಯ ಪಾಠಕರು ಕೈ
ಕೊಳಲಿ ಮುಂದಣ ನೆಲನನೆನುತುಬ್ಬರಿಸಿತರಿಸೇನೆ (ದ್ರೋಣ ಪರ್ವ, ೨ ಸಂಧಿ ೩೭ ಪದ್ಯ)

ತಾತ್ಪರ್ಯ:
ಶಲ್ಯನ ದಾಳಿಯಿಂದ ಪಾಂಡವ ಸೇನೆ ಚದುರಿತು. ಕಲ್ಪಾಂತದ ಮೋಡದ ಹೊಲಿಗೆ ಹರಿದು ಬೀಳುವ ಮಳೆಯಂತೆ ಶಲ್ಯನ ಬಾಣಗಳು ಸುರಿದವು. ವೈರಿಸೇನೆಯು ಹೆದರ ಬೇಡಿ ಬದ್ದರದ ಬಂಡಿಗಳನ್ನು ನಡುವೆ ನಿಲ್ಲಿಸಿ, ಗುರಾಣಿಯನ್ನು ಹಿಡಿದವರು, ಪಾಠಕರು ದಳಪತಿಯ ಮುಂದೆ ನಿಲ್ಲಲಿ ಎಂದು ವೈರಿಸೇನೆ ಸಂಭ್ರಮಿಸಿತು.

ಅರ್ಥ:
ದಳಪತಿ: ಸೇನಾಧಿಪತಿ; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಬಲ: ಸೈನ್ಯ; ಕೆದರು: ಹರಡು; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಮೇಘ: ಮೋಡ; ಹೊಲಿಗೆ: ಸಂಬಂಧ, ಹೊಂದಾಣಿಕೆ, ಹೊಲಿಯುವಿಕೆ; ಹರಿ: ಚೆದರು; ಶರ: ಬಾಣ; ಜಾಲ: ಗುಂಪು; ಅಳುಕು: ಹೆದರು; ಬದ್ಧರ: ಆತ್ಮರಕ್ಷಣಾರ್ಥವಾಗಿ ಬಳಸುತ್ತಿದ್ದ ಒಂದು ಬಗೆಯ ಉಪಕರಣ; ಬಂಡಿ: ರಥ; ನಿಲಿಸು: ತಡೆ; ಹರಿಗೆ: ತಲೆಪೆರಿಗೆ; ಪಾಠಕ: ಹೊಗಳುಭಟ್ಟ; ಮುಂದಣ: ಮುಂಚೆ; ನೆಲ: ಭೂಮಿ; ಉಬ್ಬು: ಅತಿಶಯ; ಅರಿ: ವೈರಿ;

ಪದವಿಂಗಡಣೆ:
ದಳಪತಿಯ+ ದುವ್ವಾಳಿ +ಪಾಂಡವ
ಬಲವ +ಕೆದರಿತು +ಕಲ್ಪ+ಮೇಘದ
ಹೊಲಿಗೆ +ಹರಿದವೊಲಾಯ್ತು +ಮಾದ್ರೇಶ್ವರನ+ ಶರಜಾಲ
ಅಳುಕದಿರಿ +ಬದ್ದರದ +ಬಂಡಿಯ
ನಿಲಿಸಿ +ಹರಿಗೆಯ +ಪಾಠಕರು +ಕೈ
ಕೊಳಲಿ +ಮುಂದಣ +ನೆಲನನ್+ಎನುತ್+ಉಬ್ಬರಿಸಿತ್+ಅರಿಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪಾಂಡವ ಬಲವ ಕೆದರಿತು ಕಲ್ಪಮೇಘದ ಹೊಲಿಗೆ ಹರಿದವೊಲಾಯ್ತು

ಪದ್ಯ ೩೭: ದ್ರುಪದನು ದ್ರೋಣನನ್ನು ಹೇಗೆ ಇದಿರಿಗೊಂಡನು?

ಆಳನೊಪ್ಪಿಸಿ ಜಾರದಿರು ಪಾಂ
ಚಾಲಪತಿ ಫಡ ನಿಲ್ಲೆನುತ ಶರ
ಜಾಲದಲಿ ಹೂಳಿದನು ದ್ರುಪದನ ಕೆಲದ ಬಲದವರ
ಖೂಳ ಫಡ ಹಾರುವರು ಬರಿ ಮಾ
ತಾಳಿಗಳು ತಾವೇಕೆ ನಾವೇ
ಕಾಳುತನ ತನಗೆತ್ತಲೆನುತಿದಿರಾದನಾದ್ರುಪದ (ದ್ರೋಣ ಪರ್ವ, ೧೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನು ನುಡಿಯುತ್ತಾ, “ದ್ರುಪದಾ ಸೈನಿಕರನ್ನು ಮುಂದೂಡಿ ಓಡಿಹೋಗಬೇಡ, ನಿಲ್ಲು, ಎನ್ನುತ್ತಾ ದ್ರೋಣನು ದ್ರುಪದನ ಕೆಲಬಲದವರನ್ನು ಬಾಣಗಳಿಂದ ಹೊಡೆದನು. ಆಗ ದ್ರುಪದನು ಖೂಳಾ ಛೀ ನೀನು ಬರೀ ಬಾಯಿಮಾತಿನ ಬ್ರಾಹ್ಮಣ, ನೀವು ವೀರರೋ ನಾವು ವೀರರೋ ನಿಲ್ಲು ಎನ್ನುತ್ತಾ ದ್ರೋಣನನ್ನು ಇದಿರಿಸಿದನು.

ಅರ್ಥ:
ಆಳು: ಸೇವಕ; ಒಪ್ಪು: ಸಮ್ಮತಿ; ಜಾರು: ಬೀಳು; ಪತಿ: ಒಡೆಯ; ಫಡ: ತಿರಸ್ಕಾರವನ್ನು ಸೂಚಿಸುವ ಪದ; ನಿಲ್ಲು: ತಡೆ; ಶರ: ಬಾಣ; ಜಾಲ: ಗುಂಪು; ಹೂಳು: ಹೂತು ಹಾಕು; ಬಲ: ಸೈನ್ಯ; ಖೂಳ: ದುಷ್ಟ; ಹಾರುವ: ಬ್ರಾಹ್ಮಣ; ಮಾತಾಳಿ: ಅತಿಯಾಗಿ ಮಾತನಾಡುವವನು, ವಾಚಾಳಿ; ಆಳುತನ: ವೀರ; ಇದಿರು: ಎದುರು;

ಪದವಿಂಗಡಣೆ:
ಆಳನೊಪ್ಪಿಸಿ +ಜಾರದಿರು +ಪಾಂ
ಚಾಲಪತಿ +ಫಡ +ನಿಲ್ಲೆನುತ +ಶರ
ಜಾಲದಲಿ +ಹೂಳಿದನು +ದ್ರುಪದನ +ಕೆಲದ +ಬಲದವರ
ಖೂಳ +ಫಡ +ಹಾರುವರು +ಬರಿ +ಮಾ
ತಾಳಿಗಳು +ತಾವೇಕೆ +ನಾವೇಕ್
ಆಳುತನ +ತನಗೆತ್ತಲ್+ಎನುತ್+ಇದಿರಾದನ್+ಆ+ದ್ರುಪದ

ಅಚ್ಚರಿ:
(೧) ದ್ರೋಣನನ್ನು ಬಯ್ಯುವ ಪರಿ – ಖೂಳ ಫಡ ಹಾರುವರು ಬರಿ ಮಾತಾಳಿಗಳು
(೨) ದ್ರುಪದನನ್ನು ಪಾಂಚಾಲಪತಿ ಎಂದು ಕರೆದಿರುವುದು

ಪದ್ಯ ೧೯: ಅರ್ಜುನನ ಬಾಣಗಳು ಹೇಗೆ ಶಬ್ದವನ್ನು ಮಾಡಿದವು?

ಇರಿದು ಚಕ್ರವ್ಯೂಹವನು ಕುರಿ
ದರಿಯ ಮಾಡಿ ಕಿರೀಟಿಯದರಿಂ
ಹೊರಗೆ ಹಂಸವ್ಯೂಹದಲಿ ಕೆಣಕಿದನು ಕಾಳೆಗವ
ತುರುಗಿದವು ತೂರಂಬು ತಲೆಗಳ
ತರಿದು ಬಿಸುಟವು ಘಮ್ಮು ಘಲಿಲೆನೆ
ನಿರಿನಿಳಿಲುಗರೆದೊರಲಿದವು ಫಲುಗುಣನ ಶರಜಾಲ (ದ್ರೋಣ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಲ್ಲಿಂದ ಮುಂದೆ ಅರ್ಜುನನು ಚರ್ಕ್ರವ್ಯೂಹಕ್ಕೆ ನುಗ್ಗಿ ಕುರಿಗಳನ್ನು ಕಡಿಯುವಂತೆ ಶತ್ರುಗಳನ್ನು ಸಂಹರಿಸಿದನು. ಬಳಿಕ ಹಂಸವ್ಯೂಹಕ್ಕೆ ನುಗ್ಗಿ ಕಾಳಗವನ್ನಾರಂಭಿಸಿದನು. ಅವನು ಬಿಟ್ಟ ಬಾಣಗಳು ತಲೆಗಳನ್ನು ಕಡಿದು ಬಿಸುಟಿದವು. ಘಮ್ಮು, ಘಲಿಲು ನಿರಿ ನಿಳಿಲು ಶಬ್ದಮಾಡುತ್ತಾ ಅವನ ಬಾಣಗಳು ಗರ್ಜಿಸಿದವು.

ಅರ್ಥ:
ಇರಿ: ಚುಚ್ಚು; ಕುರಿದರಿ: ಸಣ್ಣದಾಗಿ ಕತ್ತರಿಸು; ಕಿರೀಟಿ: ಅರ್ಜುನ; ಹೊರಗೆ: ಆಚೆ; ಕೆಣಕು: ರೇಗಿಸು, ಪ್ರಚೋದಿಸು; ಕಾಳೆಗ: ಯುದ್ಧ; ತುರುಗು: ಸಂದಣಿಸು; ತೂರಂಬು: ಹಾರಿ ಬರುವ ಬಾಣ; ತಲೆ: ಶಿರ; ತರಿ:ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಘಮ್ಮು, ಘಲಿ: ಶಬ್ದವನ್ನು ವಿವರಿಸುವ ಪದ; ನಿರಿನಿಳಿಲು: ನಿರಿ ಎಂದು ಶಬ್ದ ಮಾಡಿ; ಒರಲು: ಅರಚು, ಕೂಗಿಕೊಳ್ಳು; ಶರ: ಬಾಣ; ಜಾಲ: ಬಲೆ, ಸಮೂಹ;

ಪದವಿಂಗಡಣೆ:
ಇರಿದು +ಚಕ್ರವ್ಯೂಹವನು +ಕುರಿ
ದರಿಯ +ಮಾಡಿ +ಕಿರೀಟಿ+ಅದರಿಂ
ಹೊರಗೆ +ಹಂಸವ್ಯೂಹದಲಿ +ಕೆಣಕಿದನು +ಕಾಳೆಗವ
ತುರುಗಿದವು +ತೂರಂಬು +ತಲೆಗಳ
ತರಿದು +ಬಿಸುಟವು +ಘಮ್ಮು +ಘಲಿಲ್+ಎನೆ
ನಿರಿನಿಳಿಲುಗರೆದ್+ಒರಲಿದವು +ಫಲುಗುಣನ +ಶರಜಾಲ

ಅಚ್ಚರಿ:
(೧) ಶಬ್ದವನ್ನು ವಿವರಿಸುವ ಪದಗಳು – ಘಮ್ಮು ಘಲಿಲೆನೆನಿರಿನಿಳಿಲು
(೨) ತ ಕಾರದ ಸಾಲು ಪದಗಳು – ತುರುಗಿದವು ತೂರಂಬು ತಲೆಗಳ ತರಿದು

ಪದ್ಯ ೬೧: ಅಭಿಮನ್ಯುವಿನ ಬಾಣಗಳು ಶತ್ರುಸೈನ್ಯವನ್ನು ಹೇಗೆ ನಾಶಮಾಡಿದವು?

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹನಾದದಲಿ
ನಿಟಿಲನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದರಿಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ (ದ್ರೋಣ ಪರ್ವ, ೫ ಸಂಧಿ, ೬೧ ಪದ್ಯ)

ತಾತ್ಪರ್ಯ:
ತುಪ್ಪದ ಆಹುತಿಯಿಮ್ದ ಹೆಚ್ಚುವ ಹೋಮಾಗ್ನಿಯಂತೆ ಅಭಿಮನ್ಯುವಿನ ಪರಾಕ್ರಮ ವರ್ಧಿಸಿತು. ಶಿವನ ಹಣೆಯ ನೇತ್ರದ ಅಗ್ನಿ ಛಟಛಟಿಸುವಂತೆ, ಶತ್ರು ಸೈನ್ಯವೆಂಬ ಕಾಡನ್ನು ಅಭಿಮನ್ಯುವಿನ ಬಾಣಗಳು ನಾಶಮಾಡಿದವು.

ಅರ್ಥ:
ಭಟ: ಸೈನಿಕ; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಘೃತ: ತುಪ್ಪ, ಆಜ್ಯ; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ಘಟಿಸು: ಸಂಭವಿಸು; ಅಗ್ನಿ: ಬೆಂಕಿ; ರಣ: ಯುದ್ಧ; ಚೌಪಟ: ನಾಲ್ಕು ಪಟ್ಟು; ಚತುರ್ಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಹೊಕ್ಕು: ಸೇರು; ಸಿಂಹ: ಕೇಸರಿ; ಸಿಂಹನಾದ: ಗರ್ಜನೆ; ನಿಟಿಲ: ಹಣೆ, ಫಾಲ; ನೇತ್ರ: ಕಣ್ಣು; ಕೋಪ: ಕ್ರೋಧ; ಶಿಖಿ: ಬೆಂಕಿ; ಲಟಕಟ: ಉದ್ರೇಕಗೊಳ್ಳು; ಹೆಚ್ಚು: ಅಧಿಕ; ಅಟವಿ: ಕಾಡು; ಸವರಿಸು: ನಾಶಮಾದು; ಕುಮಾರ: ಮಗ; ಶರ: ಬಾಣ; ಜಾಲ: ಸಮೂಹ;

ಪದವಿಂಗಡಣೆ:
ಭಟ +ಛಡಾಳಿಸಿದನು +ಘೃತ+ಆಹುತಿ
ಘಟಿಸಿದ್+ಅಗ್ನಿಯವೋಲು +ರಣ +ಚೌ
ಪಟ +ಚತುರ್ಬಲದೊಳಗೆ +ಹೊಕ್ಕನು +ಸಿಂಹನಾದದಲಿ
ನಿಟಿಲನೇತ್ರನ +ಕೋಪ+ಶಿಖಿ +ಲಟ
ಕಟಿಸುವಂತಿರೆ+ ಹೆಚ್ಚಿದ್+ಅರಿ+ಬಲದ್
ಅಟವಿಯನು +ಸವರಿದುದು +ಪಾರ್ಥಕುಮಾರ +ಶರಜಾಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭಟ ಛಡಾಳಿಸಿದನು ಘೃತಾಹುತಿ ಘಟಿಸಿದಗ್ನಿಯವೋಲು; ನಿಟಿಲನೇತ್ರನ ಕೋಪಶಿಖಿ ಲಟಕಟಿಸುವಂತಿರೆ

ಪದ್ಯ ೫೦: ಭಗದತ್ತನು ಅರ್ಜುನನ ಮೇಲೆ ಹೇಗೆ ಆಕ್ರಮಣ ಮಾಡಿದನು?

ನರನ ಶರಜಾಲವನು ಖಂಡಿಸಿ
ಸುರಿದನಂಬನು ಕೃಷ್ಣರಾಯನ
ಸಿರಿಯೊಡಲ ಸೋಂಕಿದವು ನೂಕಿದವಂಬು ಗರಿ ಸಹಿತ
ನ್ರನ ಕುದುರೆಯ ಮೇಲೆ ಸಿಂಧದ
ಹರಿಯ ತನುವಿನ ಮೇಲೆ ತಳಿತವು
ಶರನಿಕರ ಬಿಡದೆಚ್ಚನಾ ಭಗದತ್ತನರ್ಜುನನ (ದ್ರೋಣ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಭಗದತ್ತನು ಅರ್ಜುನನ ಬಾಣಗಳನ್ನು ಕಡಿದು ಬಾಣಗಳ ಮಳೆಯನ್ನು ಸುರಿಸಿದನು. ಅವನ ಬಾಣಗಳು ಶ್ರೀ ಕೃಷ್ಣನ ದೇಹದಲ್ಲಿ ನಟ್ಟವು. ಕುದುರೆಗಳ ದೇಹದಲ್ಲಿ ಗರಿಸಹಿತ ನುಗ್ಗಿದವು. ಬಾವುಟದಲ್ಲಿದ್ದ ಹನುಮಂತನಿಗೂ ನಟ್ಟವು. ಭಗದತ್ತನು ಮತ್ತೆ ಮತ್ತೆ ಅರ್ಜುನನನ್ನು ಹೊಡೆದನು.

ಅರ್ಥ:
ನರ: ಅರ್ಜುನ; ಶರಜಾಲ: ಬಾಣಗಳ ಗುಂಪು; ಖಂಡಿಸು: ನಾಶಪಡಿಸು; ಸುರಿ: ಹರಡು ಅಂಬು: ಬಾಣ; ರಾಯ: ರಾಜ; ಸಿರಿ: ಶ್ರೇಷ್ಠ, ಐಶ್ವರ್ಯ; ಒಡಲು: ದೇಹ; ಸೋಂಕು: ತಾಗು; ನೂಕು: ತಳ್ಳು; ಗರಿ: ಬಾಣದ ಹಿಂಭಾಗ; ಸಹಿತ: ಜೊತೆ; ಕುದುರೆ: ಅಶ್ವ; ಸಿಂಧ: ಬಾವುಟ; ಹರಿ: ಕೋತಿ, ಹನುಮ; ತನು: ದೇಹ; ತಳಿತ: ಚಿಗುರಿದ; ಶರ: ಬಾಣ; ನಿಕರ: ಗುಂಪು; ಬಿಡು: ತೆರಳು; ಎಚ್ಚು: ಬಾಣ ಪ್ರಯೋಗ;

ಪದವಿಂಗಡಣೆ:
ನರನ+ ಶರಜಾಲವನು +ಖಂಡಿಸಿ
ಸುರಿದನ್+ಅಂಬನು +ಕೃಷ್ಣರಾಯನ
ಸಿರಿ+ಒಡಲ +ಸೋಂಕಿದವು +ನೂಕಿದವ್+ಅಂಬು +ಗರಿ +ಸಹಿತ
ನರನ+ ಕುದುರೆಯ+ ಮೇಲೆ +ಸಿಂಧದ
ಹರಿಯ +ತನುವಿನ +ಮೇಲೆ +ತಳಿತವು
ಶರ+ನಿಕರ+ ಬಿಡದ್+ಎಚ್ಚನಾ +ಭಗದತ್ತನ್+ಅರ್ಜುನನ

ಅಚ್ಚರಿ:
(೧) ಶರಜಾಲ, ಶರನಿಕರ, ಅಂಬು – ಸಮಾನಾರ್ಥಕ ಪದ
(೨) ನರನ – ೧, ೪ ಸಾಲಿನ ಮೊದಲ ಪದ