ಪದ್ಯ ೨೫: ಶಂತನು ಕಾಡಿನಲ್ಲಿ ಯಾರನ್ನು ಕಂಡನು?

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮವಚನವಲಂಘ್ಯವೆನೆ ಕಾ
ತರಿಸಿ ಭಗ್ನಮನೋರಥನು ಮರಳಿದನು ಮಂದಿರಕೆ (ಆದಿ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಂತನು ಬೇಟೆಯಾಡುತ್ತಿರುವಾಗ ಯೋಜನಗಮ್ಧಿಯ ಪದ್ಮಪುಷ್ಪದ ಸುವಾಸನೆಯು ಗಾಳಿಯಲ್ಲಿ ಬಂದಿತು. ಅವನು ಆ ದಾರಿಯನ್ನು ಹಿಡಿದು ಹೋಗಿ ಅವಳನ್ನು ಕಂಡು, ಮದನಶರಗಳಿಂದ ಗಾಯಗೊಂಡು ಅವಳಿಗೆ ನೀನು ಯಾರು? ಅರಮನೆಗೆ ಹೋಗೋಣ ಬಾ ಎಂದನು. ಅವಳು ನನ್ನ ತಂದೆಯ ಮಾತನ್ನು ದಾಟಲಾಗುವುದಿಲ್ಲ ಎಂದಳು. ಮನಸ್ಸು ಮುರಿದ ಶಂತನು ಕಾತರದಿಂದ ತನ್ನರಮನೆಗೆ ಹಿಂದಿರುಗಿದನು.

ಅರ್ಥ:
ಪರಿಮಳ: ಸುಗಂಧ; ಬಳಿ: ಹತ್ತಿರ; ಬಂದು: ಆಗಮಿಸು; ತರುಣಿ: ಹೆಣ್ಣು; ಕಂಡು: ನೋಡು; ಅರಸ: ರಾಜ; ಬೆಸಸು: ಹೇಳು; ಎಸು: ಬಾಣ ಪ್ರಯೋಗ; ಕಾಮ: ಮನ್ಮಥ; ಶರ: ಬಾಣ; ಮೈಯೊಡ್ಡು: ದೇಹವನ್ನು ತೋರು; ಅರಮನೆ: ರಾಜರ ಆಲಯ; ನಡೆ: ಚಲಿಸು; ತಂದೆ: ಪಿತ; ಪರಮ: ಶ್ರೇಷ್ಠ; ವಚನ: ಮಾತು; ಅಲಂಘ್ಯ: ದಾಟಲಸಾಧ್ಯವಾದ; ಕಾತರ: ಕಳವಳ; ಭಗ್ನ: ನಾಶ; ಮನೋರಥ: ಆಸೆ, ಬಯಕೆ; ಮರಳು: ಹಿಂದಿರುಗು; ಮಂದಿರ: ಆಲಯ, ಮನೆ;

ಪದವಿಂಗಡಣೆ:
ಪರಿಮಳದ +ಬಳಿವಿಡಿದು +ಬಂದ್ +ಈ
ತರುಣಿಯನು +ಕಂಡ್+ಆರು +ನೀನ್
ಎಂದ್+ಅರಸ +ಬೆಸಗೊಳುತ್+ಎಸುವ +ಕಾಮನ +ಶರಕೆ +ಮೈಯೊಡ್ಡಿ
ಅರಮನೆಗೆ +ನಡೆ+ಎನಲು +ತಂದೆಯ
ಪರಮ+ವಚನವ್+ಅಲಂಘ್ಯವ್+ಎನೆ +ಕಾ
ತರಿಸಿ +ಭಗ್ನ+ಮನೋರಥನು+ ಮರಳಿದನು +ಮಂದಿರಕೆ

ಅಚ್ಚರಿ:
(೧) ಮೋಹಗೊಂಡನು ಎಂದು ಹೇಳುವ ಪರಿ – ಎಸುವ ಕಾಮನ ಶರಕೆ ಮೈಯೊಡ್ಡಿ

ಪದ್ಯ ೬: ಕೃಪ, ಕೃತವರ್ಮರು ಹೇಗೆ ಎದ್ದು ಕುಳಿತರು?

ಇದು ಮದೀಯ ಮನೋರಥದ ಸಂ
ಹೃದಯದೊಲು ಸಂಕಲ್ಪ ಕಾರ್ಯಾ
ಭ್ಯುದಯ ಸೂಚಕವಾಯ್ತು ನಿದ್ರಾಮುದ್ರಿತೇಕ್ಷಣರ
ಪದವ ಹಿಡಿದಲ್ಲಾದಿದಡೆ ಮೈ
ಬೆದರುತೇನೇನೆನುತ ನಿದ್ರಾ
ಮದವಿಘೂರ್ಣನವಡಗಿ ಕುಳ್ಳಿರ್ದರು ಮಹಾರಥರು (ಗದಾ ಪರ್ವ, ೯ ಸಂಧಿ, ೬ ಪದ್ಯ)

ತಾತ್ಪರ್ಯ:
ಈ ಘಟನೆಯು ನನ್ನ ಮನೋರಥವನ್ನು ಪೂರೈಸುವ ಮಾರ್ಗವನ್ನು ಸೂಚಿಸಿದಂತಾಯಿತು. ನನ್ನ ಸಂಕಲ್ಪ ಸಿದ್ಧಿಗೆ ಇದೇ ದಾರಿ ಎಂದುಕೊಂಡು ಅಶ್ವತ್ಥಾಮನು ಕೃಪ, ಕೃತವರ್ಮರ ಕಾಲುಗಲನ್ನು ಅಲುಗಿಸಿದನು. ಅವರಿಬ್ಬರ ನಿದ್ದೆಯ ಮದವು ಅಡಗಿ ಏನು ಏನು ಎಂದು ಕೇಳುತ್ತಾ ಎದ್ದು ಕುಳಿತರು.

ಅರ್ಥ:
ಮದೀಯ: ನನ್ನ; ಮನೋರಥ: ಮನಸ್ಸಿನ ಆಸೆ, ಇಚ್ಛೆ; ಹೃದಯ: ಮನಸ್ಸು, ಅಂತಃಕರಣ; ಸಂಕಲ್ಪ: ನಿರ್ಧಾರ, ನಿರ್ಣಯ; ಕಾರ್ಯ: ಕೆಲಸ; ಅಭ್ಯುದಯ: ಏಳಿಗೆ; ಸೂಚಕ: ತೋರಿಸು, ಹೇಳು; ನಿದ್ರಾ: ಶಯನ; ಮುದ್ರೆ: ಮೊಹರು, ಚಿಹ್ನೆ; ಪದ: ಚರನ; ಹಿಡಿ: ಗ್ರಹಿಸು; ಅಲ್ಲಾಡಿಸು: ತೂಗಾಡು; ಮೈ: ತನು, ದೇಹ; ಬೆದರು: ಹೆದರು; ಮದ: ಅಮಲು, ಮತ್ತು; ಅಡಗು: ಅವಿತುಕೊಳ್ಳು, ಮರೆಯಾಗು; ಕುಳ್ಳಿರ್ದು: ಕುಳಿತು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಇದು +ಮದೀಯ +ಮನೋರಥದ +ಸಂ
ಹೃದಯದೊಲು +ಸಂಕಲ್ಪ+ ಕಾರ್ಯ
ಅಭ್ಯುದಯ +ಸೂಚಕವಾಯ್ತು +ನಿದ್ರಾಮುದ್ರಿತೇಕ್ಷಣರ
ಪದವ +ಹಿಡಿದ್+ಅಲ್ಲಾಡಿದಡೆ +ಮೈ
ಬೆದರುತ್+ ಏನ್+ಏನ್+ಎನುತ +ನಿದ್ರಾ
ಮದ+ವಿಘೂರ್ಣನವ್+ಅಡಗಿ +ಕುಳ್ಳಿರ್ದರು+ ಮಹಾರಥರು

ಅಚ್ಚರಿ:
(೧) ಮಲಗಿದ್ದರು ಎಂದು ಹೇಳಲು – ನಿದ್ರಾಮುದ್ರಿತೇಕ್ಷಣರ
(೨) ಎಚ್ಚರಗೊಂಡರು ಎಂದು ಹೇಳುವ ಪರಿ – ನಿದ್ರಾಮದವಿಘೂರ್ಣನವಡಗಿ ಕುಳ್ಳಿರ್ದರು

ಪದ್ಯ ೧೭: ಚಂದ್ರನು ಹೇಗೆ ಹೊಳೆದನು?

ವಿರಹಿಜನದೆದೆಗಿಚ್ಚು ಮನುಮಥ
ನರಸುತನದಭಿಷೇಕಘಟ ತಾ
ವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು
ಹರನ ಹಗೆಯಡ್ಡಣ ವಿಳಾಸಿನಿ
ಯರ ಮನೋರಥಫಲವೆನಲು ಮಿಗೆ
ಮೆರೆದನುದಯಾಚಲದ ಚಾವಡಿಯಲಿ ಸುಧಾಸೂತಿ (ದ್ರೋಣ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ವಿರಹಿಜನಗಳ ಎದೆಗಿಚ್ಚು, ಮನ್ಮಥನ ಪಟ್ಟಾಭಿಷೇಕಕ್ಕೆ (ನೀರು ತುಂಬಿದ) ಘಟ, ಕಮಲಗಳ ಕಗ್ಗೊಲೆಗಾರ, ಕುಮುದವನಕ್ಕೆ ವಿದೂಷಕ (ಚಂದ್ರ ಕುಮುದಗಳ ಪ್ರೀತಿಗೆ ಸಹಕಾರಿ), ಮನ್ಮಥನ ಗುರಾಣಿ, ವಿಲಾಸಿನಿಯರ ಮನೋರಥ ಫಲ ಎನ್ನುವಂತೆ ಚಂದ್ರನು ಉದಯಪರ್ವತದ ಚಾವಡಿಯಲ್ಲಿ ಹೊಳೆದನು.

ಅರ್ಥ:
ವಿರಹಿ:ವಿಯೋಗಿ; ಜನ: ಮನುಷ್ಯ; ಕಿಚ್ಚು: ಬೆಂಕಿ, ಅಗ್ನಿ; ಮನುಮಥ: ಕಾಮದೇವ; ಅರಸು: ರಾಜ; ಅಭಿಷೇಕ: ಮಂಗಳಸ್ನಾನ; ಘಟ: ದೇಹ; ತಾವರೆ: ಕಮಲ; ಕಗ್ಗೊಲೆ: ಸಾಯಿಸು; ಉತ್ಪಳ: ಕನ್ನೈದಿಲೆ; ವಿದೂಷಕ: ಹಾಸ್ಯದ, ತಮಾಷೆಯ; ಹರ: ಶಂಕರ; ಹಗೆ: ವೈರತ್ವ; ಅಡ್ಡಣ: ನಡುವೆ; ವಿಳಾಸಿನಿ: ಒಯ್ಯಾರಿ, ಬೆಡಗಿ; ಮನೋರಥ: ಆಸೆ, ಬಯಕೆ; ಫಲ: ಪ್ರಯೋಜನ; ಮಿಗೆ: ಹೆಚ್ಚು; ಮೆರೆ: ಹೊಳೆ, ಪ್ರಕಾಶಿಸು; ಉದಯಾಚಲ: ಪೂರ್ವದ ಬೆಟ್ಟ; ಚಾವಡಿ: ಸಭಾಸ್ಥಾನ; ಸುಧಾಸೂತಿ: ಕ್ಷೀರಸಾಗರದಲ್ಲಿ ಹುಟ್ಟಿದವನು, ಚಂದ್ರ;

ಪದವಿಂಗಡಣೆ:
ವಿರಹಿಜನದ್+ಎದೆ+ಕಿಚ್ಚು +ಮನುಮಥನ್
ಅರಸುತನದ್+ಅಭಿಷೇಕ+ಘಟ+ ತಾ
ವರೆಯ +ಕಗ್ಗೊಲೆಕಾರನ್+ಉತ್ಪಳವನ +ವಿದೂಷಕನು
ಹರನ+ ಹಗೆ+ಅಡ್ಡಣ +ವಿಳಾಸಿನಿ
ಯರ +ಮನೋರಥಫಲವ್+ಎನಲು +ಮಿಗೆ
ಮೆರೆದನ್+ಉದಯಾಚಲದ +ಚಾವಡಿಯಲಿ +ಸುಧಾಸೂತಿ

ಅಚ್ಚರಿ:
(೧) ಚಂದ್ರನನ್ನು ಹಲವು ರೀತಿಯಲ್ಲಿ ಕರೆದಿರುವ ಪರಿ – ವಿರಹಿಜನದೆದೆಗಿಚ್ಚು, ವಿಳಾಸಿನಿಯರ, ತಾವರೆಯ ಕಗ್ಗೊಲೆಕಾರನುತ್ಪಳವನ ವಿದೂಷಕನು ಮನೋರಥಫಲ

ಪದ್ಯ ೩೫: ಕಂಕನು ಯಾವ ಉಪಾಯವನ್ನು ಹೇಳಿದನು?

ಬವರವನು ಮನ್ನಿಸಲು ಬೇಕೆಂ
ದವನಿಪತಿ ನೆರೆನುಡಿಯೆ ಮಲ್ಲರ
ನಿವಹವೈತಹುದೆಂದು ನೇಮವನಿತ್ತುದೊಳಿತಾಯ್ತು
ಅವರು ಬಂದರೆ ನಾಳೆ ಮಾಡುವ
ಹವಣದಾವುದು ಬಿಟ್ಟುಕಳೆ ಹೇ
ಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ (ವಿರಾಟ ಪರ್ವ, ೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಯುದ್ಧವನ್ನು ಒಪ್ಪಿಕೊಳ್ಳಲೇಬೇಕಲ್ಲಾ ಎಂದು ವಿರಾಟ ರಾಜನು ಹೇಳಲು, ಕಂಕನು ನಾಳೆ ನೀವು ಮಲ್ಲರನ್ನು ಮತ್ತೆ ಬರಲು ಹೇಳಿದುದು ಒಳಿತಾಯಿತು. ನಾಳೆ ಅವರು ಬಂದರೆ ಏನು ಮಾಡಬೇಕೆಂಬ ಚಿಂತೆ ಬೇಡ, ಗೆಲ್ಲಲು ನಾನೊಂದು ಮಾರ್ಗವನ್ನು ನಿನಗೆ ಹೇಳುತ್ತೇನೆಂದು ನುಡಿದನು.

ಅರ್ಥ:
ಬವರ: ಕಾಳಗ, ಯುದ್ಧ; ಮನ್ನಿಸು: ಅಂಗೀಕರಿಸು; ಅವನಿಪತಿ: ರಾಜ; ಅವನಿ: ಭೂಮಿ; ನೆರೆ: ಸಮೀಪ, ಗುಂಪು; ನುಡಿ: ಮಾತು; ಮಲ್ಲ: ಜಟ್ಟಿ; ನಿವಹ: ಗುಂಪು; ನೇಮ: ನಿಯಮ; ಬಂದರೆ: ಆಗಮಿಸು; ನಾಳೆ: ಮರುದಿನ; ಹವಣ: ಸಿದ್ಧತೆ, ಪ್ರಯತ್ನ; ಬಿಡು: ತೊರೆ; ಕಳೆ: ಕಾಂತಿ; ಹೇಳು: ತಿಳಿಸು; ಗೆಲುವು: ಜಯ; ಮನೋರಥ: ಆಸೆ, ಬಯಕೆ;

ಪದವಿಂಗಡಣೆ:
ಬವರವನು +ಮನ್ನಿಸಲು +ಬೇಕೆಂದ್
ಅವನಿಪತಿ +ನೆರೆ+ನುಡಿಯೆ +ಮಲ್ಲರ
ನಿವಹವ್+ಐತಹುದೆಂದು +ನೇಮವನಿತ್ತುದ್+ಒಳಿತಾಯ್ತು
ಅವರು+ ಬಂದರೆ +ನಾಳೆ +ಮಾಡುವ
ಹವಣದ್+ಆವುದು +ಬಿಟ್ಟು+ಕಳೆ+ ಹೇ
ಳುವೆನು +ನಿನಗಿನ್ನೊಮ್ಮೆ +ಗೆಲುಗೈಯಹ +ಮನೋರಥವ

ಅಚ್ಚರಿ:
(೧) ಕಂಕನ ಉಪಾಯ – ಕಳೆ ಹೇಳುವೆನು ನಿನಗಿನ್ನೊಮ್ಮೆ ಗೆಲುಗೈಯಹ ಮನೋರಥವ

ಪದ್ಯ ೫೪: ಭಟರು ಇಂದ್ರನಿಗೆ ಏನು ಹೇಳಿದರು?

ಕಟ್ಟುಗುಡಿಯನು ಖೋಡಿಯೇ ಜಗ
ಜಟ್ಟಿಗಳು ನುಗ್ಗಾಯ್ತಲೇ ನೀ
ನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ
ಕೆಟ್ಟುದಹಿತ ನಿವಾತಕವಚರ
ಥಟ್ಟು ಹುಡಿಹುಡಿಯಾಯ್ತು ದನುಜರ
ಹುಟ್ಟು ಉರಿದುದು ಜೀಯ ಚಿತ್ತೈಸೆಂದರಿಂದ್ರಂಗೆ (ಅರಣ್ಯ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಒಡೆಯಾ, ವಿಜಯ ಧ್ವಜವನ್ನೇರಿಸು, ದುರುಳತನದಿಂದ ಮೆರೆಯುತ್ತಿದ್ದ ದಾನವರ ಪರಾಕ್ರಮಿಗಳು ಅಳಿಸಿಹೋಗಿದ್ದಾರೆ, ನೀನ ನೆಟ್ಟ ಸಸಿ ಕಲ್ಪವೃಕ್ಷದ ಸಸಿ, ಅದು ಬಯಸಿದುದನ್ನು ನೀಡುತ್ತದೆ, ಶತ್ರುಗಳಾದ ನಿವಾತಕವಚರ ಸೈನ್ಯ ಪುಡಿಯಾಯಿತು, ಅಸುರರ ಹುಟ್ಟಡಗಿತು ಎಂದು ಭಟರು ಇಂದ್ರನಿಗೆ ಹೇಳಿದರು.

ಅರ್ಥ:
ಕಟ್ಟು: ಹೂಡು; ಗುಡಿ: ಧ್ವಜ, ಬಾವುಟ; ಖೋಡಿ: ದುರುಳತನ; ಜಗಜಟ್ಟಿ: ಪರಾಕ್ರಮಿ; ನುಗ್ಗು: ಚೂರಾಗು; ನಟ್ಟ: ಹೂಳು, ನಿಲ್ಲಿಸು; ಸಸಿ: ಎಳೆಯ ಗಿಡ, ಸಸ್ಯ; ಸುರ: ದೇವತೆ; ಕುಜ: ಗಿಡ, ಮರ; ಸುರಕುಜ: ದೇವತೆಗಳ ಮರ, ಕಲ್ಪವೃಕ್ಷ; ಕೊಡು: ನೀಡು; ಮನೋರಥ: ಆಸೆ, ಬಯಕೆ; ಕೆಟ್ಟು: ಹಾಳಾಗು; ಅಹಿತ: ವೈರಿ; ಥಟ್ಟು: ಗುಂಪು; ಹುಡಿ: ಪುಡಿ; ದನುಜ: ರಾಕ್ಷಸ; ಹುಟ್ಟು: ಜನನ; ಉರಿ: ಸುಡು; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು; ಇಂದ್ರ: ಶಕ್ರ;

ಪದವಿಂಗಡಣೆ:
ಕಟ್ಟು+ಗುಡಿಯನು +ಖೋಡಿಯೇ +ಜಗ
ಜಟ್ಟಿಗಳು +ನುಗ್ಗಾಯ್ತಲೇ +ನೀ
ನಟ್ಟ +ಸಸಿ +ಸುರಕುಜವಲೇ +ಕೊಡದೇ +ಮನೋರಥವ
ಕೆಟ್ಟುದ್+ಅಹಿತ +ನಿವಾತಕವಚರ
ಥಟ್ಟು +ಹುಡಿಹುಡಿಯಾಯ್ತು +ದನುಜರ
ಹುಟ್ಟು +ಉರಿದುದು +ಜೀಯ +ಚಿತ್ತೈಸೆಂದರ್+ಇಂದ್ರಂಗೆ

ಅಚ್ಚರಿ:
(೧) ಅರ್ಜುನನ ಹಿರಿಮೆಯನ್ನು ಹೊಗಳುವ ಪರಿ – ನೀನಟ್ಟ ಸಸಿ ಸುರಕುಜವಲೇ ಕೊಡದೇ ಮನೋರಥವ

ಪದ್ಯ ೪: ಅಮರಾವತಿಯನ್ನು ಅರ್ಜುನನು ಹೇಗೆ ವರ್ಣಿಸಿದನು?

ಮುದದ ನೆಲೆ ಶುಭದಿನಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊಂಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳಮೇಳವದ
ಮುದದ ಮಡು ಭೋಗೈಕ ನಿಧಿ ಸಂ
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿಂದೀಸುದಿನವಮರಾವತೀ ನಗರ (ಅರಣ್ಯ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ಹಿಂದಿನಿಂದ ಇಂದಿನವರೆಗೆ ನನ್ನ ಅಮರಾವತಿಯು ಸಂತೋಷದ ನೆಲೆಯಾಗಿತ್ತು. ಶುಭವು ಅಲ್ಲಿ ನೆಲೆಸಿತ್ತು, ಸೊಗಸಿನ ಸ್ಥಾನವಾಗಿತ್ತು, ಲೀಲಾವಿನೋದ ಸ್ಥಾನವಾಗಿತ್ತು, ಒಡನಾಡಿ ಸುಖಿಸಲು ತವರು ಮನೆಯಂತಿತ್ತು, ಮುದವು ಇಲ್ಲಿ ಮಡುಗಟ್ಟಿತ್ತು, ಭೋಗದ ನಿಧಿಯಾಗಿತ್ತು, ಸಂಪತ್ತಿನ ಜನ್ಮ ಸ್ಥಳವಾಗಿತ್ತು, ಮನೋರಥವು ಉದಿಸುವ ಜಾಗವಾಗಿತ್ತು.

ಅರ್ಥ:
ಮುದ: ಸಂತಸ; ನೆಲೆ: ಸ್ಥಾನ; ಶುಭ: ಮಂಗಳ; ಸೊಗಸು: ಚೆಲುವು; ಸದನ: ಆಲಯ; ಸೌಖ್ಯ: ಸುಖ, ನೆಮ್ಮದಿ; ಗರುಡಿ: ವ್ಯಾಯಾಮಶಾಲೆ; ಸೊಂಪು: ಸೊಗಸು, ಚೆಲುವು; ಪದವಿ: ಹುದ್ದೆ; ಲೀಲೆ: ಆನಂದ, ಸಂತೋಷ; ತಾಣ: ನೆಲೆ, ಬೀಡು; ತಾಯ್ಮನೆ: ತವರು; ಖೇಳ: ಆಟ; ಮೇಳ: ಸೇರುವಿಕೆ, ಕೂಡುವಿಕೆ; ಮಡು: ನದಿ, ಹೊಳೆ; ಭೋಗ: ಸುಖ, ಸೌಖ್ಯ; ನಿಧಿ: ಐಶ್ವರ್ಯ; ಸಂಪದ: ಐಶ್ವರ್ಯ, ಸಿರಿ; ಜನ್ಮ: ಹುಟ್ಟು; ಸ್ಥಳ: ಜಾಗ; ಮನೋರಥ: ಆಸೆ, ಬಯಕೆ; ಉದಯ: ಉದಿಸು, ಹುಟ್ಟು; ಗಿರಿ: ಬೆಟ್ಟ; ಹಿಂದೆ: ಮೊದಲು; ಈಸು: ಇಷ್ಟು; ದಿನ: ವಾರ; ಅಮರಾವತಿ: ಸ್ವರ್ಗ; ನಗರ: ಊರು;

ಪದವಿಂಗಡಣೆ:
ಮುದದ +ನೆಲೆ +ಶುಭದಿನಕ್ಕೆ +ಸೊಗಸಿನ
ಸದನ +ಸೌಖ್ಯದ +ಗರುಡಿ+ ಸೊಂಪಿನ
ಪದವಿ+ ಲೀಲೆಯ +ತಾಣ +ತಾಯ್ಮನೆ+ ಖೇಳ+ಮೇಳವದ
ಮುದದ +ಮಡು +ಭೋಗೈಕ +ನಿಧಿ +ಸಂ
ಪದದ +ಜನ್ಮಸ್ಥಳ +ಮನೋರಥದ್
ಉದಯಗಿರಿ +ಹಿಂದ್+ಈಸು+ದಿನವ್+ಅಮರಾವತೀ +ನಗರ

ಅಚ್ಚರಿ:
(೧) ಅಮರಾವತಿಯ ಹಿರಿಮೆ – ಮುದದ ಮಡು, ಭೋಗೈಕ ನಿಧಿ, ಸಂಪದದ ಜನ್ಮಸ್ಥಳ, ಮನೋರಥದುದಯಗಿರಿ

ಪದ್ಯ ೪೫: ಭೀಮನೇಕೆ ಉತ್ಸಾಹಗೊಂಡನು?

ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗ
ಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ
ತಳಿತುದಾಪ್ಯಾಯಾನ ಮನೋರಥ
ಫಲಿಸಿತರಸಿಯ ಹರುಷದರ್ಪಣ
ಬೆಳಗುವುದು ಮಝಬಾಪೆನುತ ಭುಲ್ಲವಿಸಿದನು ಭೀಮ (ಅರಣ್ಯ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ತಂಗಾಳಿಯ ಆಲಿಂಗನದಿಂದ ಭೀಮನ ಮಾರ್ಗಾಯಾಸವು ಮುರಿದು ಹೋಯಿತು. ಬೆವರ ಹನಿಗಳು ಆರಿದವು. ಕೂದಲುಗಳು ಆ ತಂಪಿಗೆ ಎದ್ದು ನಿಂತವು. ಬಾಯಾರಿಕೆ ಕಡಿಮೆಯಾಗಿ ಆನಂದದ ಭಾವನೆ ಹೆಚ್ಚಿತು. ದ್ರೌಪದಿಯ ಮನೋರಥವು ಫಲಿಸಿತು ಆಕೆಯ ಹರ್ಷದ ಕನ್ನಡಿ ನಿರ್ಮಲವಾಯಿತು, ಭಲೇ ಭಲೇ ಎಂದು ಯೋಚಿಸುತ್ತಾ ಭೀಮನು ಹಿಗ್ಗಿದನು.

ಅರ್ಥ:
ಝಳ: ಪ್ರಕಾಶ, ಕಾಂತಿ; ಲಳಿ: ರಭಸ; ಲಟಕಟ: ಚಕಿತನಾಗು; ಮಾರ್ಗ: ದಾರಿ; ಸ್ಖಲಿತ: ಜಾರಿಬಿದ್ದ, ಕಳಚಿ ಬಿದ್ದಿರುವ; ಖೇದ: ದುಃಖ; ಸ್ವೇದ: ಬೆವರು; ಬಿಂದು: ಹನೆ; ಒಳಸರಿ: ಆವಿಯಾಗು; ರೋಮಾಳಿ: ಕೂದಲುಗಳು; ಕಾಣಿಸೆ: ತೋರು; ತೃಷೆ: ನೀರಡಿಕೆ; ದೆಸೆ: ದಿಕ್ಕು; ಮುರಿ: ಸೀಳು; ತಳಿತ: ಚಿಗುರಿದ; ಆಪ್ಯಾಯನ: ಸುಖ, ಹಿತ; ಮನೋರಥ: ಆಸೆ, ಬಯಕೆ; ಫಲಿಸಿತು: ದೊರೆತುದು; ಅರಸಿ: ರಾಣಿ; ಹರುಷ: ಸಂತಸ; ದರ್ಪಣ: ಕನ್ನಡಿ; ಬೆಳಗು: ಪ್ರಕಾಶಿಸು; ಮಝಬಾಪು: ಭಲೇ; ಭುಲ್ಲವಿಸು: ಉತ್ಸಾಹಗೊಳ್ಳು;

ಪದವಿಂಗಡಣೆ:
ಝಳದ +ಲಳಿ+ ಲಟಕಟಿಸೆ +ಮಾರ್ಗ
ಸ್ಖಲಿತ+ ಖೇದ +ಸ್ವೇದ +ಬಿಂದುಗಳ್
ಒಳಸರಿಯೆ +ರೋಮಾಳಿಕಾಣಿಸೆ +ತೃಷೆಯ +ದೆಸೆ +ಮುರಿಯೆ
ತಳಿತುದ್+ಆಪ್ಯಾಯಾನ +ಮನೋರಥ
ಫಲಿಸಿತರಸಿಯ + ಹರುಷ+ದರ್ಪಣ
ಬೆಳಗುವುದು +ಮಝಬಾಪೆನುತ+ ಭುಲ್ಲವಿಸಿದನು+ ಭೀಮ

ಅಚ್ಚರಿ:
(೧) ಆಯಾಸ ಕಡಿಮೆಯಾಯಿತೆಂದು ಹೇಳುವ ಪರಿ – ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇದ ಸ್ವೇದ ಬಿಂದುಗಳೊಳಸರಿಯೆ ರೋಮಾಳಿಕಾಣಿಸೆ ತೃಷೆಯ ದೆಸೆ ಮುರಿಯೆ

ಪದ್ಯ ೧೬: ಭೀಮನ ಮಾರ್ಗವನ್ನು ಯಾರು ನಿಲ್ಲಿಸಿದರು?

ನಾವು ಮರ್ತ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ಮನೋರಥದ
ತಾವರೆಯ ತಹೆನೆನುತ ಸಿಂಹಾ
ರಾವದಲಿ ವಿಕ್ರಮಿಸೆ ವಿಗಡನ
ಡಾವರವ ಬಲು ಬಾಲ ತಡೆದುದು ಪವನಜನ ಪಥವ (ಅರಣ್ಯ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಹನುಮನಿಗೆ ಉತ್ತರಿಸುತ್ತಾ, ನಾವು ಮನುಷ್ಯರು, ದೂರದಿಂದ ಬೀಸುವ ಕಮಲಗಂಧದ ಸೊಗಸನ್ನು ನನ್ನ ಪತ್ನಿಯು ಇಷ್ಟಪಟ್ಟಳು. ಆ ಪುಷ್ಪವನ್ನು ನೋಡಬೇಕೆಂದು ಬಯಸಿದಳು. ಅವಳ ಮನೋರಥವನ್ನು ಪೂರೈಸಲು ಹೊರಟಿದ್ದೇನೆ, ಎಂದು ಹೇಳಿ ಮುಂದುವರೆಯಲು ಅವನ ಗಮನವನ್ನು ಹನುಮಂತನ ಬಾಲವು ತಡೆಯಿತು.

ಅರ್ಥ:
ಮರ್ತ್ಯ: ಮನುಷ್ಯ; ದೂರ: ಅಂತರ; ರಾಜೀವ: ಕಮಲ; ಗಂಧ: ಪರಿಮಳ; ಸಮೀರ: ವಾಯು; ಸಂಭಾವನೆ: ಮನ್ನಣೆ, ಅಭಿಪ್ರಾಯ; ಸೊಗಸು: ಚೆಲುವು; ಸತಿ: ಹೆಂಡತಿ; ಮನೋರಥ: ಇಚ್ಛೆ; ತಾವರೆ: ಕಮಲ; ತಹೆ: ತಂದುಕೊಡು; ಸಿಂಹಾರವ: ಗರ್ಜನೆ; ವಿಕ್ರಮ: ಗತಿ, ಗಮನ, ಹೆಜ್ಜೆ; ವಿಗಡ: ಶೌರ್ಯ, ಪರಾಕ್ರಮ; ಡಾವರ: ತೀವ್ರತೆ, ರಭಸ; ಬಲು: ದೊಡ್ಡ; ಬಾಲ: ಪುಚ್ಛ; ತಡೆ: ನಿಲ್ಲಿಸು; ಪವನಜ: ವಾಯುಪುತ್ರ; ಪಥ: ಮಾರ್ಗ;

ಪದವಿಂಗಡಣೆ:
ನಾವು +ಮರ್ತ್ಯರು +ದೂರದಲಿ+ ರಾ
ಜೀವ+ಗಂಧ +ಸಮೀರಣನ +ಸಂ
ಭಾವನೆಗೆ +ಸೊಗಸಿದಳು +ಸತಿ+ಆಕೆಯ +ಮನೋರಥದ
ತಾವರೆಯ +ತಹೆನೆನುತ+ ಸಿಂಹಾ
ರಾವದಲಿ +ವಿಕ್ರಮಿಸೆ+ ವಿಗಡನ
ಡಾವರವ+ ಬಲು+ ಬಾಲ+ ತಡೆದುದು+ ಪವನಜನ +ಪಥವ

ಅಚ್ಚರಿ:
(೧) ರಾಜೀವ, ತಾವರೆ – ಸಮನಾರ್ಥಕ ಪದ
(೨) ಸ ಕಾರದ ಸಾಲು ಪದ – ಸಮೀರಣನ ಸಂಭಾವನೆಗೆ ಸೊಗಸಿದಳು ಸತಿ

ಪದ್ಯ ೫: ದ್ರೌಪದಿ ಯಾರ ಬಳಿ ಬಂದು ತನ್ನ ಮನೋರಥವನ್ನು ಹೇಳಿದಳು?

ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ (ಅರಣ್ಯ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆ ಸುಗಂಧ ಹೂವಿನ ಪರಿಮಳ ಆಕರ್ಷಿಸಿತು. ಅದನ್ನು ನೋಡಲು ಬಯಸಿದ ಆಕೆ, ಧರ್ಮಜ, ನಕುಲ ಅಥವ ಸಹದೇವರಿಂದ ನನ್ನ ಆಶೆಯು ಪೂರೈಸಲಾಗುವುದಿಲ್ಲ ಎಂದು ಅರಿತು, ಅರ್ಜುನನು ಸಮೀಪದಲ್ಲಿರದ ಕಾರಣ, ವೈರಿಗಳಲ್ಲಿ ಭಯವನ್ನುಂಟುಮಾಡುವ ಭೀಮನೇ ಈ ಕಾರ್ಯಕ್ಕೆ ಸರಿಯೆಂದು ತಿಳಿದು ದ್ರೌಪದಿಯು ಆತನ ಬಳಿಗೆ ಹೋಗಿ ಮಧುರ ವಚನದಿಂದ ಹೀಗೆ ಹೇಳಿದಳು.

ಅರ್ಥ:
ಅರಸ: ರಾಜ; ಮೇಣ್: ಅಥವ; ಮನೋರಥ: ಕಾಮನೆ, ಆಸೆ; ವಿಸ್ತರಣ: ಹರಡು, ವಿಸ್ತಾರ; ನುಡಿ: ಮಾತು; ಸಮೀಪ: ಹತ್ತಿರ; ಅರಿ: ವೈರಿ; ಭಯಂಕರ: ಸಾಹಸಿ, ಗಟ್ಟಿಗ; ಗೋಚರಿಸು: ತೋರು; ಹೊರೆ: ಆಶ್ರಯ,ರಕ್ಷಣೆ; ಬಂದು: ಆಗಮಿಸು; ನಗು: ಸಂತಸ; ನುಡಿ: ಮಾತಾಡು; ಮಧುರ: ಸಿಹಿ; ವಚನ: ನುಡಿ, ಮಾತು;

ಪದವಿಂಗಡಣೆ:
ಅರಸನಲಿ +ಮೇಣ್ +ನಕುಲ +ಸಹದೇ
ವರಲಿ +ತನ್ನ +ಮನೋರಥಕೆ +ವಿ
ಸ್ತರಣವಾಗದು +ನುಡಿವಡಿಲ್ಲ್+ಅರ್ಜುನ +ಸಮೀಪದಲಿ
ಅರಿ+ಭಯಂಕರ+ ಭೀಮನೇ +ಗೋ
ಚರಿಸುವನಲಾ+ಎನುತಲ್+ಆತನ
ಹೊರೆಗೆ +ಬಂದಳು +ನಗುತ +ನುಡಿದಲು +ಮಧುರ +ವಚನದಲಿ

ಅಚ್ಚರಿ:
(೧) ಭೀಮನನ್ನು ಪರಿಚಯಿಸುವ ಪರಿ – ಅರಿಭಯಂಕರ
(೨) ಕೋರಿಕೆಯನ್ನು ತಿಳಿಸುವ ಮುನ್ನ – ಆತನ ಹೊರೆಗೆ ಬಂದಳು ನಗುತ ನುಡಿದಲು ಮಧುರ ವಚನದಲಿ

ಪದ್ಯ ೧೦೦: ಅರ್ಜುನನ ಮನದಮೇಲೆ ಯಾರು ದಾಳಿ ಮಾಡಿದರು?

ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸರಿವಳೆ ಸುರಿದುದೀಶ್ವರನಂಘ್ರಿಕಮಲದಲಿ
ಢಗೆಯತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ (ಅರಣ್ಯ ಪರ್ವ, ೭ ಸಂಧಿ, ೧೦೦ ಪದ್ಯ)

ತಾತ್ಪರ್ಯ:
ಈ ಅಮೋಘ ಯೋಗವನ್ನು ಕಂಡು ಜಗತ್ತು ಉಘೇ ಉಘೇ ಎಂದು ಜಯಘೋಷವನ್ನು ಕೂಗಿತು, ಜಯಧ್ವನಿಯು ಆಗಸದಲ್ಲಿ ಮೊಳಗಿತು, ಹೂಮೊಗ್ಗುಗಳ ಮಳೆ ಶಿವನ ಪಾದಕಮಲಗಳ ಮೇಲೆ ಬಿದ್ದವು. ಅರ್ಜುನನ ಆಯಾಸ ಹಾರಿಹೋಯಿತು, ಅವನ ಮನೋರಥದ ಅಗಳು ತುಂಬಿತು, ಹರ್ಷೋತ್ಸವಗಳು ಅರ್ಜುನನ ಮನಸ್ಸು ಬುದ್ಧಿಗಳನ್ನು ತುಂಬಿದವು.

ಅರ್ಥ:
ಜಗವು: ಪ್ರಪಂಚ; ಉಘೇ: ಜಯ; ಧ್ವನಿ: ಶಬ್ದ, ರವ; ಗಗನ: ಆಗಸ; ಗಾಢಿಸು: ಮೊಳಗು, ತುಂಬಿಕೊಳ್ಳು; ಹೂವು: ಪುಷ್ಪ; ಮುಗುಳ: ಮೂಡು, ಮೊಳೆ; ಸರಿವಳೆ: ಸುರಿ; ಈಶ್ವರ: ಶಂಕರ; ಅಂಘ್ರಿ: ಪಾದ; ಕಮಲ: ಪದ್ಮ; ಢಗೆ: ಕಾವು, ದಗೆ; ಮುರಿ: ಸೀಳು, ಬಿರುಕು; ಮನೋರಥ: ಇಚ್ಛೆ, ಆಸೆ; ಅಗಳು: ಕೋಟೆಯ ಕಂದಕ; ತುಂಬು: ಪೂರ್ಣಗೊಳ್ಳು; ನರ: ಅರ್ಜುನ; ಮನ: ಮನಸ್ಸು, ಚಿತ್ತ; ಬುದ್ಧಿ: ತಿಳಿವು, ಅರಿವು; ನೆರೆ: ಸಮೀಪ; ಸಿಲುಕು: ಬಂಧನಕ್ಕೊಳಗಾದುದು; ಹರುಷ: ಸಂತಸ; ಉತ್ಸವ: ಹಬ್ಬ; ದಾಳಿ: ಆಕ್ರಮಣ, ಮುತ್ತಿಗೆ;

ಪದವಿಂಗಡಣೆ:
ಜಗುವ್+ ಉಘೇಯೆಂದುದು+ ಜಯಧ್ವನಿ
ಗಗನದಲಿ+ ಗಾಢಿಸಿತು+ ಹೂವಿನ
ಮುಗುಳ +ಸರಿವಳೆ+ ಸುರಿದುದ್+ಈಶ್ವರನ್+ಅಂಘ್ರಿ+ಕಮಲದಲಿ
ಢಗೆಯತಳಿ+ ಮುರಿದುದು +ಮನೋರಥದ್
ಅಗಳು +ತುಂಬಿತು +ನರನ +ಮನ +ಬು
ದ್ಧಿಗಳು+ ನೆರೆ +ಸಿಲುಕಿತ್ತು+ ಹರುಷೋತ್ಸವದ+ ದಾಳಿಯಲಿ

ಅಚ್ಚರಿ:
(೧) ಜಯ, ಉಘೇ – ಸಮನಾರ್ಥಕ ಪದ
(೨) ಮನೋರಥ ಈಡೇರಿರುವುದನ್ನು ವಿವರಿಸುವ ಪರಿ – ನರನ ಮನ ಬುದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ