ಪದ್ಯ ೧೭: ಭೀಮನು ಕೌರವನ ಯಾವ ಭಾಗಕ್ಕೆ ಹೊಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ (ಗದಾ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಭೀಮನು ಗದೆಯಂದ ಹೊಡೆದರೆ, ಅದರಿಂದುದುರುವ ಕಿಡಿಗಳು ಸೂರ್ಯಮಂಡಲವನ್ನು ಮುಸುಕುವುವು. ಕೌರವನು ಗದೆಯಿಂದ ಹೊಡೆಯಲು ಭೀಮನು ತಪ್ಪಿಸಿಕೊಂಡು, ಅಬ್ಬರಿಸಿ ಶತ್ರುವಿನ ಕೊರಳಿಗೆ ಹೊಡೆದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಧರಧುರ: ಆರ್ಭಟ, ಕೋಲಾಹಲ; ಹೊಯ್ಲು: ಹೊಡೆತ; ಗದೆ: ಮುದ್ಗರ; ಹೊರಳು: ತಿರುಗು; ಕಿಡಿ: ಬೆಂಕಿ; ಝೊಂಪಿಸು: ಮೈಮರೆ, ಎಚ್ಚರತಪ್ಪು; ಉರು: ಹೆಚ್ಚಾದ, ಅತಿದೊಡ್ಡ; ಖದ್ಯೋತ: ಸೂರ್ಯ; ಮಂಡಲ: ವರ್ತುಲಾಕಾರ; ಅರಸ: ರಾಜ; ಎರಗು: ಬಾಗು; ಅನಿಲಸುತ: ಭೀಮ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಕಳಚು: ಸಡಲಿಸು; ಕ್ಷಣ: ಸಮಯದ ಪ್ರಮಾಣ; ಅಬ್ಬರಿಸು: ಗರ್ಜಿಸು; ಹೊಯ್ದು: ಹೊಡೆ; ನೃಪ: ರಾಜ; ಕಂಧರ: ಕೊರಳು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ಹೊಯ್ಲುಗಳ +ಗದೆಯಲಿ
ಹೊರಳಿ+ಕಿಡಿ +ಝೊಂಪಿಸಿದುವ್+ಉರು +ಖದ್ಯೋತ +ಮಂಡಲವ
ಅರಸನ್+ಎರಗಿದಡ್+ಅನಿಲಸುತ +ಪೈ
ಸರಿಸಿ+ ಕಳಚಿದನಾ +ಕ್ಷಣದೊಳ್
ಅಬ್ಬರಿಸಿ+ ಹೊಯ್ದನು+ ಭೀಮ +ಕೌರವ+ನೃಪನ +ಕಂಧರವ

ಅಚ್ಚರಿ:
(೧) ರೂಪಕದ ಪ್ರಯೋಗ – ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ

ಪದ್ಯ ೩೧: ಪಾಂಡವ ಸೇನೆಯು ಏಕೆ ಝೋಂಪಿಸಿತು?

ವಿಲಸದಪಸವ್ಯದಲಿ ರಿಪು ಮಂ
ಡಳಿಸಿ ಹೊಯ್ದನು ಸವ್ಯಮಂಡಲ
ವಲಯದಿಂದಾ ಭೀಮಸೇನನ ಹೊಯ್ಲ ಹೊರಬೀಸಿ
ಒಳಬಗಿದು ಕಿಬ್ಬರಿಯ ಕಂಡ
ಪ್ಪಳಿಸಿದನು ನಿನ್ನಾತನಾಚೆಯ
ದಳದ ಭಟತತಿ ಹಾಯೆನಲು ಝೋಂಪಿಸಿದನಾ ಭೀಮ (ಗದಾ ಪರ್ವ, ೬ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅಪ್ರದಕ್ಷಿಣೆ ಮಾಡುತ್ತಾ ಭೀಮನು ಕೌರವನನ್ನು ಹೊಡೆದನು. ಕೌರವನು ಪ್ರದಕ್ಷಿಣೆ ಗತಿಯಿಂದ ಭೀಮನ ಹೊಡೆತವನ್ನು ನಿವಾರಿಸಿ, ಒಳನುಗ್ಗಿ, ಹೊಟ್ಟೆಯ ಕೆಲಭಾಗಕ್ಕೆ ಹೊಯ್ಯಲು ಭೀಮನು ಓಲಿ ಬೀಳುವುದನ್ನು ಕಂಡು ಪಾಂಡವ ಸೇನೆ ಹಾ ಎಂದು ಕೂಗಿತು.

ಅರ್ಥ:
ಅಪಸವ್ಯ: ಬಲಗಡೆ, ಕಾಳಗದಲ್ಲಿ ಒಂದು ಸಂಚಾರಕ್ರಮ; ವಿಲಸ: ಕ್ರೀಡೆ, ಬೆಡಗು; ರಿಪು: ವೈರಿ; ಮಂಡಲ: ವರ್ತುಲಾಕಾರ; ಹೊಯ್ದು: ಹೋರಾಡು; ಸವ್ಯ: ಪ್ರದಕ್ಷಿಣೆಯ ಕ್ರಮ; ವಲಯ: ವಿಭಾಗ, ಪ್ರದೇಶ; ಹೊಯ್ಲ: ಹೊಡೆ; ಬೀಸು: ತೂಗುವಿಕೆ; ಬಗಿ: ಹೋಳು, ಭಾಗ; ಕಿಬ್ಬರಿ: ಪಕ್ಕೆಯ ಕೆಳ ಭಾಗ; ಕಂಡು: ತೋರು; ಅಪ್ಪಳಿಸು: ತಟ್ಟು, ತಾಗು; ದಳ: ಸೈನ್ಯ; ಭಟ: ಸೈನಿಕ; ತತಿ: ಗುಂಪು; ಎನಲು: ಹೇಳಲು; ಝೋಂಪಿಸು: ಮೈಮರೆ, ಎಚ್ಚರ ತಪ್ಪು;

ಪದವಿಂಗಡಣೆ:
ವಿಲಸದ್+ಅಪಸವ್ಯದಲಿ +ರಿಪು +ಮಂ
ಡಳಿಸಿ +ಹೊಯ್ದನು +ಸವ್ಯ+ಮಂಡಲ
ವಲಯದಿಂದಾ +ಭೀಮಸೇನನ +ಹೊಯ್ಲ+ ಹೊರಬೀಸಿ
ಒಳಬಗಿದು +ಕಿಬ್ಬರಿಯ +ಕಂಡ್
ಅಪ್ಪಳಿಸಿದನು +ನಿನ್ನಾತನ್+ಆಚೆಯ
ದಳದ +ಭಟ+ತತಿ +ಹಾಯೆನಲು +ಝೋಂಪಿಸಿದನಾ +ಭೀಮ

ಅಚ್ಚರಿ:
(೧) ಸವ್ಯ, ಅಪಸವ್ಯ – ವಿರುದ್ಧ ಪದಗಳು
(೨) ಹೊಯ್ದ, ಹೊಯ್ಲ – ಸಮಾನಾರ್ಥಕ ಪದ

ಪದ್ಯ ೧: ಪಾಂಡವರು ಕೊಳದ ಬಳಿ ಹೇಗೆ ಶಬ್ದವನ್ನು ಮಾಡಿದರು?

ಕೇಳು ಧೃತರಾಷ್ಟ್ರವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಶತ್ರುಗಳು ಕೊಳದ ಸುತ್ತಲೂ ಗುಂಪುಗಟ್ಟಿ ಗರ್ಜಿಸಲಾರಂಭಿಸಿದರು. ಭೇರಿಗಳು ಮತ್ತೆ ಮತ್ತೆ ಬಡಿದವು. ಹೆಗ್ಗಾಳೆಗಳು ಚೀರಿದವು. ಅನೇಕ ವಾದ್ಯಗಳನ್ನು ಬಾರಿಸಿದರು. ಆ ಶಬ್ದಕ್ಕೆ ಕುಲಗಿರಿಗಳ ಬೆಸುಗೆ ಬಿಟ್ಟಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ರಿಪು: ವೈರಿ; ಜಾಲ: ಗುಂಪು; ಜಡಿ: ಬೆದರಿಕೆ, ಗದರಿಸು; ಕೊಳ: ಸರೋವರ; ತಡಿ: ದಡ; ತೂಳ:ಆವೇಶ, ಉನ್ಮಾದ; ಬಲು: ಬಹಳ; ಬೊಬ್ಬೆ: ಆರ್ಭಟ, ಗರ್ಜನೆ; ಅಬ್ಬರ: ಆರ್ಭಟ; ಅಭ್ರ: ಆಗಸ; ಮಂಡಲ: ವರ್ತುಲಾಕಾರ, ಜಗತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ಬಹುವಿಧ: ಬಹಳ; ವಾದ್ಯ: ಸಂಗೀತದ ಸಾಧನ; ಹೆಗ್ಗಾಳೆ: ದೊಡ್ಡ ಕಹಳೆ; ಚೀರು: ಗರ್ಜಿಸು, ಕೂಗು; ಬೈಸಿಕೆ: ಬೆಸುಗೆ, ಆಸನ, ಪದ; ಬಿಡೆ: ತೊರೆ; ಕುಲಾದ್ರಿ: ದೊಡ್ಡ ಬೆಟ್ಟ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ರಿಪು
ಜಾಲ +ಜಡಿದುದು +ಕೊಳನ +ತಡಿಯಲಿ
ತೂಳಿದುದು +ಬಲು+ಬೊಬ್ಬೆ+ಅಬ್ಬರವ್+ಅಭ್ರ+ಮಂಡಲವ
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳ +ಬಹುವಿಧ +ವಾದ್ಯ+ರವ+ ಹೆ
ಗ್ಗಾಳೆಗಳು +ಚೀರಿದವು +ಬೈಸಿಕೆ +ಬಿಡೆ +ಕುಲಾದ್ರಿಗಳ

ಅಚ್ಚರಿ:
(೧) ಒಂದೇ ಪದದ ರಚನೆ – ಬಲುಬೊಬ್ಬೆಯಬ್ಬರವಭ್ರಮಂಡಲವ

ಪದ್ಯ ೨೧: ಭೂರಿಶ್ರವನು ಯಾವ ಸ್ಥಿತಿಗೆ ಹೋದನು?

ಎಲವೊ ಸಾತ್ಯಕಿ ಬದುಕಿದೈ ನರ
ನುಳುಹಿಕೊಂಡನು ಹೋಗೆನುತ ಹೆಡ
ತಲೆಯನೊದೆದನು ನಿಂದು ಬರಿಕೈ ಮುರಿದ ಗಜದಂತೆ
ಒಲೆವುತೈತಂದೊಂದು ರಣಮಂ
ಡಲದೊಳಗೆ ಪದ್ಮಾಸನವನನು
ಕೊಳಿಸಿ ಯೋಗಾರೂಢನಾದನು ವರಸಮಾಧಿಯಲಿ (ದ್ರೋಣ ಪರ್ವ, ೧೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭೂರಿಶ್ರವನು, ಎಲವೋ ಸಾತ್ಯಕಿ, ಅರ್ಜುನನು ನಿನ್ನನ್ನುಳಿಸಿಕೊಂಡ, ನೀನು ಬದುಕಿದೆ ಹೋಗು ಎಂದು ಸಾತ್ಯಕಿಯ ತಲೆಯನ್ನು ಒದೆದನು. ಸೊಂಡಿಲು ಮುರಿದ ಆನೆಯಂತೆ ತೂಗಾಡುತ್ತಾ ಬಂದು ರಣರಂಗದ ಒಮ್ದು ಪ್ರದೇಶದಲ್ಲಿ ಪದ್ಮಾಸನದಲ್ಲಿ ಕುಳಿತು ಯೋಗಾರೂಢನಾಗಿ ಸಮಾಧಿ ಸ್ಥಿತಿಯಲ್ಲಿದ್ದನು.

ಅರ್ಥ:
ಬದುಕು: ಜೀವಿಸು; ನರ: ಅರ್ಜುನ; ಉಳುಹು: ಕಾಪಾಡು; ಹೋಗು: ತೆರಳು; ಹೆಡತಲೆ: ಹಿಂದಲೆ; ಒದೆ: ಜಾಡಿಸು, ನೂಕು; ನಿಂದು: ನಿಲ್ಲು; ಬರಿಕೈ: ಏನೂ ಇಲ್ಲದೆ; ಮುರಿ: ಸೀಳು; ಗಜ: ಆನೆ; ಒಲೆ: ತೂಗಾಡು; ರಣ: ಯುದ್ಧ; ಮಂಡಲ: ಸೀಮೆ, ನಾಡಿನ ಒಂದು ಭಾಗ; ಪದ್ಮಾಸನ: ಯೋಗಾಸನದ ಭಂಗಿ; ಯೋಗ: ಧ್ಯಾನ; ವರ: ಶ್ರೇಷ್ಠ; ಸಮಾಧಿ: ಏಕಾಗ್ರತೆ;

ಪದವಿಂಗಡಣೆ:
ಎಲವೊ +ಸಾತ್ಯಕಿ +ಬದುಕಿದೈ +ನರನ್
ಉಳುಹಿಕೊಂಡನು +ಹೋಗೆನುತ +ಹೆಡ
ತಲೆಯನ್+ಒದೆದನು +ನಿಂದು +ಬರಿಕೈ+ ಮುರಿದ +ಗಜದಂತೆ
ಒಲೆವುತ್+ಐತಂದ್+ಒಂದು +ರಣ+ಮಂ
ಡಲದೊಳಗೆ +ಪದ್ಮಾಸನವನನು
ಕೊಳಿಸಿ+ ಯೋಗಾರೂಢನಾದನು +ವರ+ಸಮಾಧಿಯಲಿ

ಅಚ್ಚರಿ:
(೧) ಭೂರಿಶ್ರವನ ಸ್ಥಿತಿಯನ್ನು ಹೋಲಿಸಿದ ಪರಿ – ನಿಂದು ಬರಿಕೈ ಮುರಿದ ಗಜದಂತೆ

ಪದ್ಯ ೭: ಖಡ್ಗಗಳ ಕಾಂತಿಯು ಹೇಗಿತ್ತು?

ಒದಗಿತೆಡಬಲವಂಕದೊಯ್ಯಾ
ರದಲಿ ರಾವ್ತರು ಮುಂದೆ ತಲೆದೋ
ರಿದರು ಮುಂಗುಡಿಯವರು ಚೂಣಿಯ ಹೊಂತಕಾರಿಗಳು
ಅದಿರ್ವ ಖಡುಗದ ಕಾಂತಿ ಸೂರ್ಯನ
ಹೊದಿಸಿದುದು ಹೊದರೆದ್ದು ಕೊಂತದ
ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ (ದ್ರೋಣ ಪರ್ವ, ೧೨ ಸಂಧಿ, ೭ ಪದ್ಯ)

ತಾತ್ಪರ್ಯ:
ಭೀಮನ ಮುಂದೆ ಮುಂಗುಡಿಯ ಸೈನ್ಯವು ಹೊರಟಿತು. ಎಡಬಲದಲ್ಲಿ ರಾವುತರು ಸಂಭ್ರಮಿಸಿದರು. ಸೈನ್ಯದ ಮದಗರ್ವಿತರು ಮುಂಗುಡಿಯೊಡನಿದ್ದರು. ಖಡ್ಗಗಳ ಕಾಂತಿ ಸೂರ್ಯನನ್ನು ಮುಚ್ಚಿತು. ಕುಂತಗಳ ತುದಿಗಳನ್ನು ಕಂಡು ಸೂರ್ಯಮಂಡಲವು ರಾಹು ಬಂದನೆಂದು ಬೆದರಿತು.

ಅರ್ಥ:
ಒದಗು: ಹೊಂದಿಸು; ಎಡಬಲ: ಅಕ್ಕಪಕ್ಕ; ಒಯ್ಯಾರ: ಅಂದ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮುಂದೆ: ಎದುರು; ತಲೆ: ಶಿರ; ತೋರು: ಪ್ರದರ್ಶಿಸು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಚೂಣಿ: ಮುಂದಿನ ಸಾಲು, ಮುಂಭಾಗ; ಹೊಂತಕಾರಿ: ಮೋಸಗಾರ; ಅದಿರು: ಕಂಪಿಸು; ಖಡುಗ: ಕತ್ತಿ; ಕಾಂತಿ: ಪ್ರಕಾಶ; ಸೂರ್ಯ: ರವಿ; ಹೊದೆ: ಬತ್ತಳಿಕೆ, ಪೊದೆ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ಕೊಂತು: ದಿಂಡು; ತುದಿ: ಮುಂದಿನ ಭಾಗ; ಭಯ: ಅಂಜಿಕೆ; ರವಿ: ಸೂರ್ಯ; ಮಂಡಲ: ವರ್ತುಲಾಕಾರ;

ಪದವಿಂಗಡಣೆ:
ಒದಗಿತ್+ಎಡಬಲವ್+ಅಂಕದ್+ಒಯ್ಯಾ
ರದಲಿ +ರಾವ್ತರು +ಮುಂದೆ +ತಲೆದೋ
ರಿದರು +ಮುಂಗುಡಿಯವರು +ಚೂಣಿಯ +ಹೊಂತಕಾರಿಗಳು
ಅದಿರ್ವ +ಖಡುಗದ+ ಕಾಂತಿ +ಸೂರ್ಯನ
ಹೊದಿಸಿದುದು +ಹೊದರೆದ್ದು +ಕೊಂತದ
ತುದಿಗಳ್+ಇತ್ತವು +ರಾಹು+ಭಯವನು+ ರವಿಯ +ಮಂಡಲಕೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅದಿರ್ವ ಖಡುಗದ ಕಾಂತಿ ಸೂರ್ಯನ ಹೊದಿಸಿದುದು
(೨) ಉಪಮಾನದ ಪ್ರಯೋಗ – ಹೊದರೆದ್ದು ಕೊಂತದ ತುದಿಗಳಿತ್ತವು ರಾಹುಭಯವನು ರವಿಯ ಮಂಡಲಕೆ

ಪದ್ಯ ೭೯: ಯುದ್ಧದಲ್ಲಿ ಯಾರು ಆಯಾಸಗೊಂಡರು?

ಗುರುತನುಜ ರವಿಸೂನು ಮಾದ್ರೇ
ಶ್ವರ ಜಯದ್ರಥ ಕೌರವಾದಿಗ
ಳರಿ ಗದಾಘಾತದಲಿ ಕೈ ಮೈ ದಣಿದು ಮನದಣಿದು
ತೆರಳಿದರು ಬಳಿಕಪರಜಲಧಿಯೊ
ಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ (ದ್ರೋಣ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ಕರ್ಣ, ಶಲ್ಯ, ಜಯದ್ರಥ, ಕೌರವರು ಭೀಮನ ಗದೆಯ ಹೊಡೆತದಿಂದ ಕೈ, ಮೈ ಮನಸ್ಸುಗಳಿಂದ ದಣಿದರು. ಅಷ್ಟರಲ್ಲಿ ಪಶ್ಚಿಮ ಸಮುದ್ರದೊಳಕ್ಕೆ ಜ್ವಲಿಸುವ ಬಡಬಾನಲ ಶಿಖರಕ್ಕೆ ಎರಗುವಂತೆ ಸೂರ್ಯಮಂಡಲವು ಆಕಾಶದಿಂದ ಕೆಳಗಿಳಿಯಿತು.

ಅರ್ಥ:
ತನುಜ: ಮಗ; ಗುರು: ಆಚಾರ್ಯ; ರವಿ: ಸೂರ್ಯ; ಸೂನು: ಮಗ; ಮಾದ್ರೇಶ್ವರ: ಶಲ್ಯ, ಮದ್ರ ದೇಶದ ದೊರೆ; ಆದಿ: ಮುಂತಾದ; ಅರಿ: ಕತ್ತರಿಸು; ಗದೆ: ಮುದ್ಗರ; ಆಘಾತ: ಹೊಡೆತ; ಕೈ: ಹಸ್ತ; ಮೈ: ತನು; ದಣಿ: ಆಯಾಸ; ಮನ: ಮನಸ್ಸು; ತೆರಳು: ಹಿಂದಿರುಗು; ಬಳಿಕ: ನಂತರ; ಅಪರ: ಪಶ್ಚಿಮದಿಕ್ಕು; ಜಲಧಿ: ಸಾಗರ; ಉರಿ: ಬೆಂಕಿ; ವಡಬ: ಸಮುದ್ರದಲ್ಲಿರುವ ಬೆಂಕಿ, ಬಡ ಬಾಗ್ನಿ; ದೀಪ್ತ: ಪ್ರಕಾಶವುಳ್ಳ; ಶಿಖರ: ತುದಿ; ಎರಗು: ಬಾಗು; ಪತಂಗ: ಸೂರ್ಯ; ಮಂಡಲ:ವರ್ತುಲಾಕಾರ; ಇಳಿ: ಬಾಗು; ಅಂಬರ: ಆಗಸ;

ಪದವಿಂಗಡಣೆ:
ಗುರು+ತನುಜ +ರವಿ+ಸೂನು +ಮಾದ್ರೇ
ಶ್ವರ +ಜಯದ್ರಥ +ಕೌರವ್+ಆದಿಗಳ್
ಅರಿ +ಗದ+ಆಘಾತದಲಿ +ಕೈ +ಮೈ +ದಣಿದು +ಮನದಣಿದು
ತೆರಳಿದರು +ಬಳಿಕ್+ಅಪರ+ಜಲಧಿಯೊಳ್
ಉರಿವ +ವಡಬನ+ ದೀಪ್ತ+ಶಿಖರದೊಳ್
ಎರಗುವಂತೆ +ಪತಂಗ +ಮಂಡಲವ್+ಇಳಿದುದ್+ಅಂಬರವ

ಅಚ್ಚರಿ:
(೧) ಸೂರ್ಯ ಮುಳುಗಿದ ಎಂದು ಹೇಳುವ ಪರಿ – ಅಪರಜಲಧಿಯೊಳುರಿವ ವಡಬನ ದೀಪ್ತಶಿಖರದೊ
ಳೆರಗುವಂತೆ ಪತಂಗ ಮಂಡಲವಿಳಿದುದಂಬರವ

ಪದ್ಯ ೩೮: ತುಳುವರ ಪಡೆಯ ಆವೇಶ ಹೇಗಿತ್ತು?

ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡುವ ಮೀರುವ ಕಚ್ಚೆ ಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿ ತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ (ಭೀಷ್ಮ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕೆಳಗೆ ಕತ್ತಿಯನ್ನು ಬೀಸಿದರೆ ಕಾಲುಗಳು ಕತ್ತರಿಸಿದವು, ನಡುವಿಗೆ ಹೊಡೆದರೆ ದೇಹವೇ ಇಬ್ಭಾಗವಾಗಿ ಬೀಲುತ್ತಿತ್ತು, ಮೇಲೆ ಹೊಡೆದರೆ ತಲೆ ಹಾರುತ್ತಿತ್ತು, ಹಿಮ್ಮಡಿ ಮಂಡಿ ತೊಡೆಗಳನ್ನು ತಿವಿದು, ತುಳುವರು ಪರಾಕ್ರಮದಿಂದ ಕಾದಿದರು. ಅವರ ರಭಸಕ್ಕೆ ಭೂಮಿಯು ಬಿರಿಯಿತು.

ಅರ್ಥ:
ಪಡಿತಳ: ಆಕ್ರಮಣ; ಬೀಸು: ತೂಗುವಿಕೆ; ಕಾಲು: ಪಾದ; ನಡು: ಮಧ್ಯಭಾಗ; ತಾಗು: ಮುಟ್ಟು; ಮಂಡಲ: ವರ್ತುಲಾಕಾರ, ದೇಹ; ಉಡಿ: ಮುರಿ; ಬಿದ್ದು: ಕುಸಿ; ನಿಲುಕು: ನೀಡುವಿಕೆ, ಬಿಡುವು; ಉಪ್ಪರ: ಎತ್ತರ, ಉನ್ನತಿ, ಅತಿಶಯ; ಶಿರ: ತಲೆ; ಮನ್ನಿಸು: ಗೌರವಿಸು; ಮಡವ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಮೀರು: ದಾಟು; ಕಚ್ಚು: ತಿವಿ; ಮಂಡಿ: ಮೊಳಕಾಲು, ಜಾನು; ಪಡಿ: ಸಮಾನ, ಎದುರಾದ; ತೊಡೆ: ಊರು; ಹರಿಗೆ: ಚಿಲುಮೆ; ಕಡಿತಲೆ: ಕತ್ತಿ, ಗುರಾಣಿ; ಕಲಿ: ಶೂರ; ಇಳೆ: ಭೂಮಿ; ಹಿಳಿ:ನಾಶವಾಗು;

ಪದವಿಂಗಡಣೆ:
ಪಡಿತಳವ +ಬೀಸಿದರೆ +ಕಾಲಿ
ಕ್ಕಡಿ +ನಡುವ ತಾಗಿದರೆ+ ಮಂಡಲವ್
ಉಡಿದು +ಬಿದ್ದುದು +ನಿಲುಕಿನ್+ಉಪ್ಪರ +ಶಿರವ+ ಮನ್ನಿಸದು
ಮಡುವ +ಮೀರುವ+ ಕಚ್ಚೆ+ ಮಂಡಿಯ
ಪಡಿ+ತೊಡೆಯ +ತಲೆಮರೆಯ+ ಹರಿಗೆಯ
ಕಡಿತಲೆಯ+ ಕಲಿ +ತುಳುವಪಡೆ+ ಹೊಯ್ದಾಡಿತ್+ಇಳೆ +ಹಿಳಿಯೆ

ಅಚ್ಚರಿ:
(೧) ತುಳುವಪಡೆಯ ಶೌರ್ಯ – ಮಡುವ ಮೀರುವ ಕಚ್ಚೆ ಮಂಡಿಯ ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿ ತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ

ಪದ್ಯ ೫: ಯುಧಿಷ್ಠಿರನು ಹೇಗೆ ತೋರಿದನು?

ತಮದ ಗಂಟಲನೊಡೆದು ಹಾಯ್ದ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದೊಳು
ವಿಮಲ ಬಹಳ ಕ್ಷತ್ರರಶ್ಮಿಗ
ಳಮಮ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನುದಾರ ತೇಜದಲಿ (ವಿರಾಟ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ಕತ್ತಲಿನ ಗಂಟಲನ್ನು ಸೀಳಿ ಹೊರ ಬರುವ ಸೂರ್ಯನಮ್ತೆ, ತಾನು ಜೀವನೆಂಬ ಭ್ರಾಂತಿಯನ್ನು ಕಳೆದುಕೊಂಡ ಆತ್ಮನಂತೆ, ಕ್ಷಾತ್ರ ತೇಜಸ್ಸು ದಿಕ್ಕು ದಿಕ್ಕುಗಳನ್ನು ಬೆಳಗುತ್ತಿರಲು, ಯುಧಿಷ್ಠಿರನು ಮಹಾತೇಜಸ್ಸಿನಿಂದ ಬೆಳಗಿದನು.

ಅರ್ಥ:
ತಮ: ಅಂಧಕಾರ; ಗಂಟಲು: ಕಂಠ; ಒಡೆ: ಸೀಳು; ಹಾಯ್ದು: ಹೋರಾಡು; ದ್ಯುಮಣಿ: ಸೂರ್ಯ; ಜೀವ: ಪ್ರಾಣ; ಭ್ರಮೆ: ಭ್ರಾಂತಿ, ಉನ್ಮಾದ; ಕವಚ: ಹೊದಿಕೆ; ಕಳೆ: ನಿವಾರಿಸು; ಹೊಳೆ: ಪ್ರಕಾಶಿಸು; ವಿಮಲ: ನಿರ್ಮಲ; ಬಹಳ: ತುಂಬ; ಕ್ಷತ್ರ: ಕ್ಷತ್ರಿಯ; ರಶ್ಮಿ: ಕಿರಣ; ಅಮಮ: ಅಬ್ಬಬ್ಬ; ದೆಸೆ: ದಿಕ್ಕು; ಬೆಳಗು: ಹೊಳೆ; ಉತ್ತಮ: ಶ್ರೇಷ್ಠ; ಎಸೆ: ತೋರು; ಉದಾರ: ಧಾರಾಳ, ಶ್ರೇಷ್ಠವಾದ; ತೇಜ: ಪ್ರಕಾಶ;

ಪದವಿಂಗಡಣೆ:
ತಮದ+ ಗಂಟಲನ್+ಒಡೆದು +ಹಾಯ್ದ
ದ್ಯುಮಣಿ +ಮಂಡಲದಂತೆ +ಜೀವ
ಭ್ರಮೆಯ +ಕವಚವ+ ಕಳೆದು +ಹೊಳೆಹೊಳೆವ+ಆತ್ಮನಂದದೊಳು
ವಿಮಲ +ಬಹಳ +ಕ್ಷತ್ರ+ರಶ್ಮಿಗಳ್
ಅಮಮ +ದೆಸೆಗಳ+ ಬೆಳಗೆ+ ರಾಜೋ
ತ್ತಮ +ಯುಧಿಷ್ಠಿರ +ದೇವನ್+ಎಸೆದನ್+ಉದಾರ +ತೇಜದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಮದ ಗಂಟಲನೊಡೆದು ಹಾಯ್ದದ್ಯುಮಣಿ ಮಂಡಲದಂತೆ; ಜೀವ
ಭ್ರಮೆಯ ಕವಚವ ಕಳೆದು ಹೊಳೆಹೊಳೆವಾತ್ಮನಂದದೊಳು

ಪದ್ಯ ೧೨: ಭೂತವು ಪಾಂಡವರ ವನಕ್ಕೆ ಹೇಗೆ ಆಗಮಿಸಿತು?

ಎಂದು ನೇಮಿಸೆ ಭೂತ ಭುಗಿ ಭುಗಿ
ಲೆಂದು ಧಗ ಧಗಿಸುತ್ತಲುರಿ ಭುಗಿ
ಲೆಂದು ಕರ್ಬೊಗೆ ತುಡುಕಲಬುಜ ಭವಾಂಡಮಂಡಲವ
ನಿಂದು ನೋಡುತ ಕೆಲ ಬಲನ ನೋ
ರಂದದಿಂದವೆ ಪಾಂಡುಪುತ್ರರ
ನಂದಗೆಡಿಸುವ ಭರದೊಳೈದಿತು ಘೋರ ಕಾನನಕೆ (ಅರಣ್ಯ ಪರ್ವ, ೨೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕನಕನ ನೇಮವನ್ನು ಸ್ವೀಕರಿಸಿ ಭೂತವು ವನಕ್ಕೆ ಹೊರಟಿತು ಆದರಿಂದ ಧಗಧಗಿಸುವ ಉರಿ, ಭುಗಿಲ್ಭುಗಿಲೆಂದು ಸುತ್ತಲೂ ಹಬ್ಬುತ್ತಿತ್ತು. ಕಪ್ಪು ಹೊಗೆಯು ಬ್ರಹ್ಮಾಂಡವನ್ನೇ ವ್ಯಾಪಿಸುತ್ತಿತ್ತು. ಅದು ಅಲ್ಲಲ್ಲಿ ನಿಮ್ತು ಸುತ್ತಲೂ ನೋಡುತ್ತಾ ಪಾಂಡವರನ್ನು ಹತ್ಯೆ ಮಾಡಲೆಂದು ಕಾಡಿಗೆ ಹೊರಟಿತು.

ಅರ್ಥ:
ನೇಮಿಸು: ಅಪ್ಪಣೆ ಮಾಡು; ಭೂತ: ದೆವ್ವ; ಭುಗಿಲು: ಭುಗಿಲ್ ಎಂಬ ಶಬ್ದ; ಧಗ: ಬೆಂಕಿಯ ತೀವ್ರತೆಯನ್ನು ಹೇಳುವ ಶಬ್ದ; ಉರಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ತುಡುಕು: ಹೋರಾಡು, ಸೆಣಸು; ಅಬುಜ: ತಾವರೆ; ಭವಾಂಡ: ಬ್ರಹ್ಮಾಂಡ, ಪ್ರಪಂಚ; ಮಂಡಲ: ಜಗತ್ತು, ನಾಡಿನ ಒಂದು ಭಾಗ; ನಿಂದು: ನಿಲ್ಲು; ನೋಡು: ವೀಕ್ಷಿಸು; ಕೆಲ: ಸ್ವಲ್ಪ, ಪಕ್ಕ, ಮಗ್ಗುಲು; ಅಂದ: ಚೆಲುವು, ಸುಂದರ; ಕೆಡಿಸು: ಹಾಳುಮಾಡು; ಭರ:ವೇಗ; ಐದು: ಬಂದು ಸೇರು; ಘೋರ: ಉಗ್ರವಾದ; ಕಾನನ: ಕಾಡು; ಓರಂದ: ಒಂದೇ ಸಮಾನ;

ಪದವಿಂಗಡಣೆ:
ಎಂದು +ನೇಮಿಸೆ +ಭೂತ +ಭುಗಿ +ಭುಗಿ
ಲೆಂದು +ಧಗ +ಧಗಿಸುತ್ತಲ್+ಉರಿ +ಭುಗಿ
ಲೆಂದು +ಕರ್ಬೊಗೆ +ತುಡುಕಲ್+ಅಬುಜ +ಭವಾಂಡ+ಮಂಡಲವ
ನಿಂದು +ನೋಡುತ+ ಕೆಲ+ ಬಲನನ್
ಓರಂದದಿಂದವೆ+ ಪಾಂಡುಪುತ್ರರನ್
ಅಂದಗೆಡಿಸುವ +ಭರದೊಳೈದಿತು+ ಘೋರ +ಕಾನನಕೆ

ಅಚ್ಚರಿ:
(೧) ಭುಗಿ ಭುಗಿ, ಧಗ ದಗ – ಜೋಡಿ ಪದಗಳು

ಪದ್ಯ ೨೭: ಧೌಮ್ಯ ಮುನಿಗಳು ಯಾವ ರೀತಿ ಅಭಯವನ್ನು ನೀಡಿದರು?

ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಿಷ ಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ (ಅರಣ್ಯ ಪರ್ವ, ೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕಿಮ್ಮೀರನ ಗರ್ಜನೆ ಮತ್ತು ಹಾವಾಭಾವವನ್ನು ಕಂಡು ಬೆದರಿದ ಜನರನ್ನು ನೋಡಿದ ಧೌಮ್ಯ ಮುನಿಗಳು, ರಕ್ಷೋಘ್ನ ಸೂಕ್ತವನ್ನು ಮತ್ತೆ ಮತ್ತೆ ಜಪಿಸಿ ತಮ್ಮವರ ಸುತ್ತಲೂ ದಿಗ್ಬಂಧನವನ್ನು ಮಾಡಿದರು. ಎಲೆಲೆ ರಾಕ್ಷಸರು ಬಂದಿದ್ದಾರೆ ಅದರ ಭೀತಿ ಎಲ್ಲರನ್ನೂ ಆವರಿಸಿದೆ ಆದರೆ ಯಾರು ಓಡಿಹೋಗಬೇಡಿರಿ, ಪಾಂಡವರು ಕ್ಷಣಮಾತ್ರದಲ್ಲಿ ಈ ರಾಕ್ಷಸರನ್ನು ಸಂಹಾರಮಾಡುತ್ತಾದೆ ಎಂದು ಹೇಳಿದರು.

ಅರ್ಥ:
ಎಲೆಲೆ: ಎಲವೋ; ರಾಕ್ಷಸ: ದಾನವ; ಭೀತಿ: ಭಯ, ಹೆದರಿಕೆ; ಹೋಗು: ತೆರಳು; ನಿಲು: ನಿಲ್ಲು, ತಡೆ; ನಿಮಿಷ: ಕ್ಷಣ; ಗೆಲುವ: ಜಯ; ಅರಸು: ರಾಜ; ಮುನಿ: ಋಷಿ; ಸೂಕ್ತ: ವೇದದಲ್ಲಿಯ ಸ್ತೋತ್ರ ಭಾಗ; ವಿಧ: ರೀತಿ; ಹಲವು: ಬಹಳ; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ದಿಗು: ದಿಕ್ಕು; ಮಂಡಲ: ನಾಡಿನ ಒಂದು ಭಾಗ; ಬಂಧ: ಕಟ್ಟು, ಬಂಧನ; ರಚಿಸು: ನಿರ್ಮಿಸು; ಜನ: ಮನುಷ್ಯ, ನರ; ಸಂಕುಲ: ಗುಂಪು; ಸಂತೈಸು: ಸಮಾಧಾನಪಡಿಸು, ಸಾಂತ್ವನಗೊಳಿಸು; ಭೂಪತಿ: ರಾಜ;

ಪದವಿಂಗಡಣೆ:
ಎಲೆಲೆ +ರಾಕ್ಷಸ+ ಭೀತಿ +ಹೋಗದೆ
ನಿಲು +ನಿಲ್+ಎಲವೋ +ನಿಮಿಷ +ಮಾತ್ರಕೆ
ಗೆಲುವರ್+ಅರಸುಗಳ್+ಎನುತ +ಮುನಿ +ರಕ್ಷೋಘ್ನ +ಸೂಕ್ತವನು
ಹಲವು+ ವಿಧದಲಿ +ಜಪಿಸಿ+ ದಿಗು+ ಮಂ
ಡಲದ +ಬಂಧವ +ರಚಿಸಿ +ಜನ +ಸಂ
ಕುಲವ+ ಸಂತೈಸಿದನು+ ಧೌಮ್ಯನು +ಮುಂದೆ +ಭೂಪತಿಯ

ಅಚ್ಚರಿ:
(೧) ಮುನಿಗಳ ಅಭಯ: ಮುನಿ ರಕ್ಷೋಘ್ನ ಸೂಕ್ತವನು ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂಕುಲವ ಸಂತೈಸಿದನು