ಪದ್ಯ ೧೭: ಭೀಮನು ಕೌರವನ ಯಾವ ಭಾಗಕ್ಕೆ ಹೊಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ಹೊಯ್ಲುಗಳ ಗದೆಯಲಿ
ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ
ಅರಸನೆರಗಿದಡನಿಲಸುತ ಪೈ
ಸರಿಸಿ ಕಳಚಿದನಾ ಕ್ಷಣದೊಳ
ಬ್ಬರಿಸಿ ಹೊಯ್ದನು ಭೀಮ ಕೌರವನೃಪನ ಕಂಧರವ (ಗದಾ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜನೇ ಕೇಳು, ಭೀಮನು ಗದೆಯಂದ ಹೊಡೆದರೆ, ಅದರಿಂದುದುರುವ ಕಿಡಿಗಳು ಸೂರ್ಯಮಂಡಲವನ್ನು ಮುಸುಕುವುವು. ಕೌರವನು ಗದೆಯಿಂದ ಹೊಡೆಯಲು ಭೀಮನು ತಪ್ಪಿಸಿಕೊಂಡು, ಅಬ್ಬರಿಸಿ ಶತ್ರುವಿನ ಕೊರಳಿಗೆ ಹೊಡೆದನು.

ಅರ್ಥ:
ಧರಣಿಪತಿ: ರಾಜ; ಕೇಳು: ಆಲಿಸು; ಧರಧುರ: ಆರ್ಭಟ, ಕೋಲಾಹಲ; ಹೊಯ್ಲು: ಹೊಡೆತ; ಗದೆ: ಮುದ್ಗರ; ಹೊರಳು: ತಿರುಗು; ಕಿಡಿ: ಬೆಂಕಿ; ಝೊಂಪಿಸು: ಮೈಮರೆ, ಎಚ್ಚರತಪ್ಪು; ಉರು: ಹೆಚ್ಚಾದ, ಅತಿದೊಡ್ಡ; ಖದ್ಯೋತ: ಸೂರ್ಯ; ಮಂಡಲ: ವರ್ತುಲಾಕಾರ; ಅರಸ: ರಾಜ; ಎರಗು: ಬಾಗು; ಅನಿಲಸುತ: ಭೀಮ; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಕಳಚು: ಸಡಲಿಸು; ಕ್ಷಣ: ಸಮಯದ ಪ್ರಮಾಣ; ಅಬ್ಬರಿಸು: ಗರ್ಜಿಸು; ಹೊಯ್ದು: ಹೊಡೆ; ನೃಪ: ರಾಜ; ಕಂಧರ: ಕೊರಳು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ಹೊಯ್ಲುಗಳ +ಗದೆಯಲಿ
ಹೊರಳಿ+ಕಿಡಿ +ಝೊಂಪಿಸಿದುವ್+ಉರು +ಖದ್ಯೋತ +ಮಂಡಲವ
ಅರಸನ್+ಎರಗಿದಡ್+ಅನಿಲಸುತ +ಪೈ
ಸರಿಸಿ+ ಕಳಚಿದನಾ +ಕ್ಷಣದೊಳ್
ಅಬ್ಬರಿಸಿ+ ಹೊಯ್ದನು+ ಭೀಮ +ಕೌರವ+ನೃಪನ +ಕಂಧರವ

ಅಚ್ಚರಿ:
(೧) ರೂಪಕದ ಪ್ರಯೋಗ – ಗದೆಯಲಿ ಹೊರಳಿಗಿಡಿ ಝೊಂಪಿಸಿದುವುರು ಖದ್ಯೋತ ಮಂಡಲವ

ಪದ್ಯ ೭: ಹಿರಣ್ಯಕಶಿಪುವಿನ ಮರಣವು ಹೇಗಾಯಿತು?

ಮರಣವೆಂದಿಂಗಾಗದಂತಿರೆ
ವರವಕೊಂಡು ಹಿರಣ್ಯಕಾಸುರ
ಸುರನರೋರಗರನು ವಿಭಾಡಿಸಿ ಧರ್ಮಪದ್ಧತಿಗೆ
ಧರಧುರವ ಮಾಡಿದಡೆ ನರಕೇ
ಸರಿಯ ರೂಪಿನೊಳಾದಿವಿಶ್ವಂ
ಭರನು ಗೆಲಿದನು ಮಾಯೆಯನು ಮಾಯಾಭಿಯೋಗದಲಿ (ಗದಾ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಹಿಂದೆ ಹಿರಣ್ಯಕಶಿಪುವು ತನಗೆ ಮರಣವೇ ಸಂಭವಿಸದಂತಹ ವರವನ್ನು ಪಡೆದು ದೇವತೆಗಳು ಮನುಷ್ಯರು ನಾಗರನ್ನು ಹೊಡೆದು ಗೆದ್ದು ಮೆರೆಯುತ್ತಿರಲು, ವಿಷ್ಣುವು ನರಸಿಂಹ ರೂಪದಿಂದ ಅವನ ಮಾಯೆಯನ್ನು ಗೆದ್ದನು.

ಅರ್ಥ:
ಮರಣ: ಸಾವು; ವರ: ಶ್ರೇಷ್ಠ; ಅಸುರ: ರಾಕ್ಷಸ; ಸುರ: ದೇವ; ಉರಗ: ಹಾವು; ವಿಭಾಡಿಸು: ನಾಶಮಾಡು; ಪದ್ಧತಿ: ಹೆಜ್ಜೆಯ ಗುರುತು; ಧರ್ಮ: ಧಾರಣೆ ಮಾಡಿದುದು; ಧರಧುರ: ಆರ್ಭಟ, ಕೋಲಾಹಲ; ಕೇಸರಿ: ಸಿಂಹ; ರೂಪ: ಆಕಾರ; ವಿಶ್ವ: ಜಗತ್ತು; ವಿಶ್ವಂಭರ: ಜಗತ್ತನ್ನು ಕಾಪಾಡುವವನು; ಗೆಲಿದು: ಜಯಿಸು; ಮಾಯೆ: ಗಾರುಡಿ; ಅಭಿಯೋಗ: ಯುದ್ಧ, ಆಕ್ರಮಣ;

ಪದವಿಂಗಡಣೆ:
ಮರಣವ್+ಎಂದಿಂಗ್+ಆಗದಂತಿರೆ
ವರವಕೊಂಡು +ಹಿರಣ್ಯಕ+ಅಸುರ
ಸುರ+ನರ+ಉರಗರನು +ವಿಭಾಡಿಸಿ+ ಧರ್ಮಪದ್ಧತಿಗೆ
ಧರಧುರವ +ಮಾಡಿದಡೆ +ನರಕೇ
ಸರಿಯ +ರೂಪಿನೊಳ್+ಆದಿವಿಶ್ವಂ
ಭರನು +ಗೆಲಿದನು +ಮಾಯೆಯನು +ಮಾಯಾಭಿಯೋಗದಲಿ

ಅಚ್ಚರಿ:
(೧) ವಿಷ್ಣುವನ್ನು ಆದಿವಿಶ್ವಂಭರ ಎಂದು ಕರೆದಿರುವುದು
(೨) ಮೂರುಲೋಕ ಎಂದು ಹೇಳಲು – ಸುರನರೋರಗ ಪದದ ಬಳಕೆ

ಪದ್ಯ ೬೦: ದುರ್ಯೋಧನನು ಭೀಮನನ್ನು ಹೇಗೆ ತಡೆದನು?

ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ (ಗದಾ ಪರ್ವ, ೧ ಸಂಧಿ, ೬೦ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಭೀಮನ ಮಹಾಕದನದ ಭರದಲ್ಲಿ ಕೌರವನು ನೂರಾನೆಗಳ ನಡುವೆ ಇದಿರಾಗಿ ನಿಂತು ಕಾದಿದನು. ಬಾಣಗಳಿಂದ ಭೀಮನ ರಥವನ್ನು ತಡೆದು, ಕುದುರೆಗಳ ಸಾರಥಿ ಚಲನೆ ಚಾಕಚಕ್ಯತೆಗಳನ್ನು ನಿಮಿಷಾರ್ಧದಲ್ಲಿ ತಡೆದನು.

ಅರ್ಥ:
ಧರಣಿಪತಿ: ರಾಜ; ಧರಧುರ: ಆರ್ಭಟ, ಕೋಲಾಹಲ; ದೆಖ್ಖಾಳ: ಗೊಂದಲ, ಗಲಭೆ; ಅರಸ: ರಾಜ; ನಿಂದನು: ನಿಲ್ಲು; ಕಾದು: ಹೋರಾಡು; ಆನೆ: ಗಜ; ಮಲೆತ: ಕೊಬ್ಬಿದ; ಸರಳ: ಬಾಣ; ಸಾರ: ಸತ್ವ; ಅನಿಲಜ: ಭೀಮ; ರಥ: ಬಂಡಿ; ತುರಗ: ಕುದುರೆ; ಸಾರಥಿ: ಸೂತ; ಭರ: ಜೋರು; ನಿಲಿಸು: ತಡೆ; ರಾಯ: ರಾಜ;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಧರಧುರದ +ದೆಖ್ಖಾಳದಲಿ +ನ
ಮ್ಮರಸ+ ನಿಂದನು +ಕಾದಿದನು +ನೂರಾನೆಯಲಿ +ಮಲೆತು
ಸರಳ +ಸಾರದಲ್+ಅನಿಲಜನ +ರಥ
ತುರಗವನು +ಸಾರಥಿಯನ್+ಆತನ
ಭರವಸವ +ನಿಲಿಸಿದನು +ನಿಮಿಷಾರ್ಧದಲಿ +ಕುರುರಾಯ

ಅಚರಿ:
(೧) ಧರಣಿಪತಿ, ರಾಯ, ಅರಸ – ಸಮಾನಾರ್ಥಕ ಪದ
(೨) ಜೋಡಿ ಪದಗಳ ಪ್ರಯೋಗ – ಧರಧುರದ ದೆಖ್ಖಾಳದಲಿ, ನಿಲಿಸಿದನು ನಿಮಿಷಾರ್ಧದಲಿ

ಪದ್ಯ ೮೦: ಪಾಂಡವರು ಹೇಗೆ ಪಾಳೆಯಕ್ಕೆ ಬಂದರು?

ತಿರುಗಿದರು ಕೌರವರು ದ್ರೋಣನ
ಬೆರಳ ಸನ್ನೆಗೆ ಸನ್ನೆಗಾಳೆಗ
ಳುರವಣಿಸಿತೆನೆ ತಂಬಟದ ನಿಸ್ಸಾಳ ರಭಸದಲಿ
ಮುರಿದರಿವರಳ್ಳಿರಿವ ಬೊಬ್ಬೆಯ
ಧರಧುರದ ಕಹಳೆಗಳ ಭೇರಿಯ
ಭರಿತ ರವದಲಿ ವೀರನಾರಾಯಣನ ಕರುಣದಲಿ (ದ್ರೋಣ ಪರ್ವ, ೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ದ್ರೊಣನು ಸನ್ನೆ ಮಾಡಲು ಕೌರವ ಸೈನ್ಯವು ಹಿಂದೆಸರಿದು ಪಾಳೆಯಕ್ಕೆ ಹೋಯಿತು. ಇತ್ತ ಪಾಂಡವರು ಸನ್ನೆಗನುಸಾರವಾಗಿ ಕಿವಿ ಕಿವುಡಾಗುವಂತೆ ಅಬ್ಬರಿಸುತ್ತಾ, ಕಹಳೆ, ಭೇರಿಗಳ ಸದ್ದು ಮೊಳಗುತ್ತಿರಲು, ವೀರನಾರಾಯಣನ ಕರುಣೆಯಿಂದ ವಿಜಯಶಾಲಿಗಳಾಗಿ ಪಾಳೆಯಕ್ಕೆ ಬಂದರು.

ಅರ್ಥ:
ತಿರುಗು: ಚಲಿಸು; ಬೆರಳು: ಅಂಗುಲಿ; ಸನ್ನೆ: ಗುರುತು; ಕಾಳೆಗ: ಯುದ್ಧ; ಉರವಣಿಸು: ಆತುರಿಸು; ತಂಬಟ: ತಮಟೆ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ರಭಸ: ವೇಗ; ಮುರಿ: ಸೀಳು; ಅಳ್ಳಿರಿ: ನಡುಗಿಸು, ಚುಚ್ಚು; ಬೊಬ್ಬೆ: ಆರ್ಭಟ; ಧರಧುರ: ಆರ್ಭಟ, ಕೋಲಾಹಲ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ಭರಿತ: ತುಂಬಿದ; ರವ: ಶಬ್ದ; ಕರುಣ: ದಯೆ;

ಪದವಿಂಗಡಣೆ:
ತಿರುಗಿದರು +ಕೌರವರು +ದ್ರೋಣನ
ಬೆರಳ +ಸನ್ನೆಗೆ +ಸನ್ನೆ+ಕಾಳೆಗಳ್
ಉರವಣಿಸಿತ್+ಎನೆ +ತಂಬಟದ +ನಿಸ್ಸಾಳ +ರಭಸದಲಿ
ಮುರಿದರ್+ಇವರ್+ಅಳ್ಳಿರಿವ +ಬೊಬ್ಬೆಯ
ಧರಧುರದ +ಕಹಳೆಗಳ +ಭೇರಿಯ
ಭರಿತ+ ರವದಲಿ +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ತಂಬಟ, ನಿಸ್ಸಾಳ, ಕಹಳೆ, ಭೇರಿ – ರಣವಾದ್ಯಗಳು

ಪದ್ಯ ೩೯: ಭೀಷ್ಮನು ಧರ್ಮಜನಿಗೆ ಏನೆಂದು ಆಶೀರ್ವದಿಸಿದನು?

ಮುರಹರನ ಮಾತಹುದು ಸಾಕಿ
ನ್ನರಸ ಧರ್ಮಜ ಹೋಗು ದ್ರುಪದಾ
ದ್ಯರಿಗೆ ನೇಮವು ಪಾರ್ಥ ಮರಳೈ ತಂದೆ ಪಾಳಯಕೆ
ಧರೆಯ ಲೋಲುಪ್ತಿಯಲಿ ಸಲೆ ಕಾ
ತರಿಸಿ ತಪ್ಪಿದೆವೆಮ್ಮೊಳೆಂಬೀ
ಧರಧುರವ ನೆನೆಯದಿರಿ ವಿಜಯಿಗಳಾಗಿ ನೀವೆಂದ (ಭೀಷ್ಮ ಪರ್ವ, ೧೦ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಹೇಳಿದ ಮಾತು ಸರಿಯಾಗಿದೆ, ರಾಜ ಧರ್ಮಜ ನೀನಿನ್ನು ತೆರಳು, ದ್ರುಪದನೇ ಮೊದಲಾದವರಿಗೆ ಹೊರಡಲು ಅಪ್ಪಣೆಕೊಟ್ಟಿದ್ದೇನೆ, ಅಪ್ಪ ಅರ್ಜುನ ಇನ್ನು ಪಾಳೆಯಕ್ಕೆ ಹೋಗು, ಭೂಮಿಯ ಆಶೆಯಿಂದ ನನ್ನಲ್ಲಿ ತಪ್ಪಿದೆವೆಂದು ಎಂದೂ ಬಗೆಯ ಬೇಡಿರಿ, ನೀವು ಜಯಶಾಲಿಗಳಾಗಿರಿ ಎಂದು ಹರಸಿದನು.

ಅರ್ಥ:
ಮುರಹರ: ಕೃಷ್ಣ; ಮಾತು: ನುಡಿ; ಸಾಕು: ನಿಲ್ಲಿಸು; ಅರಸ: ರಾಜ; ಧರ್ಮಜ: ಯುಧಿಷ್ಠಿರ; ಹೋಗು: ತೆರಳು; ಆದಿ: ಮುಂತಾದ; ಮರಳು: ಹಿಂದಿರುಗು; ತಂದೆ: ಪಿತ; ಪಾಳಯ: ಸೀಮೆ; ಧರೆ: ಭೂಮಿ; ಲೋಲುಪ್ತಿ: ಸುಖ, ಸಂತೋಷ; ಸಲೆ: ಸದಾ, ಸರಿಯಾಗಿ; ಕಾತರಿಸು: ತವಕಗೊಳ್ಳು; ತಪ್ಪು: ಸುಳ್ಳಾಗು; ಧರಧುರ: ಆರ್ಭಟ, ಕೋಲಾಹಲ; ನೆನೆ: ಜ್ಞಾಪಿಸು; ವಿಜಯಿ: ಗೆಲುವು; ಅಹುದು: ಸರಿಯಾದುದು;

ಪದವಿಂಗಡಣೆ:
ಮುರಹರನ +ಮಾತ್+ಅಹುದು +ಸಾಕಿನ್ನ್
ಅರಸ +ಧರ್ಮಜ +ಹೋಗು +ದ್ರುಪದ
ಆದ್ಯರಿಗೆ+ ನೇಮವು +ಪಾರ್ಥ +ಮರಳೈ +ತಂದೆ +ಪಾಳಯಕೆ
ಧರೆಯ +ಲೋಲುಪ್ತಿಯಲಿ +ಸಲೆ +ಕಾ
ತರಿಸಿ +ತಪ್ಪಿದೆವ್+ಎಮ್ಮೊಳ್+ಎಂಬೀ
ಧರಧುರವ +ನೆನೆಯದಿರಿ +ವಿಜಯಿಗಳಾಗಿ +ನೀವೆಂದ

ಅಚ್ಚರಿ:
(೧) ಹೋಗು, ಮರಳು – ಸಮಾನಾರ್ಥಕ ಪದ

ಪದ್ಯ ೧೯: ಚತುರಂಗ ಸೈನ್ಯವೇಕೆ ಕಾರಣದಾಯಿತು?

ಕೊರಳ ತೆತ್ತುದು ಚೂಣಿ ದಳ ಮು
ಖ್ಯರಿಗೆ ಹೇಳಿಕೆಯಾಯ್ತು ಮೋಹರ
ವೆರಡರಲಿ ಮೊನೆಯುಳ್ಳ ನಾಯಕವಾಡಿ ನಲವಿನಲಿ
ಕರಿ ತುರಗ ರಥ ಪಾಯದಳದಲಿ
ಹೊರಳಿ ತಗ್ಗಿತು ರಥದ ಲಗ್ಗೆಯ
ಧರಧುರದ ದೆಖ್ಖಾಳ ಮಿಗೆ ನೂಕಿದರು ಸಂಗರಕೆ (ಭೀಷ್ಮ ಪರ್ವ, ೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮುಂಚೂಣೀಯಲ್ಲಿದ್ದ ಸೈನ್ಯದ ತುಕುಡಿಯ ಸೈನಿಕರು ಮಡಿದರು, ನಾಯಕರು ಬರಬೇಕೆಂದು ಸಾರಿದರು, ಎರಡೂ ದಳಗಳಲ್ಲಿ ನಾಯಕರು ತಮ್ಮ ರಥಗಳಲ್ಲಿ ಯುದ್ಧಕ್ಕೆ ನುಗ್ಗಿದರು. ಚತುರಂಗ ಸೈನ್ಯವು ಕಾಣದಾಯಿತು.

ಅರ್ಥ:
ಕೊರಳು: ಗಂಟಲು; ತೆತ್ತು: ತಿರಿಚು, ಸುತ್ತು; ಚೂಣಿ:ಮುಂದಿನ ಸಾಲು, ಮುಂಭಾಗ; ದಳ: ಸೈನ್ಯ; ಮುಖ್ಯ: ಪ್ರಮುಖ; ಹೇಳು: ತಿಳಿಸು; ಮೋಹರ: ಯುದ್ಧ; ಮೊನೆ: ತುದಿ; ನಾಯಕ: ಒಡೆಯ; ನಲವು: ಸಂತೋಷ; ಕರಿ: ಆನೆ; ತುರಗ: ಅಶ್ವ; ರಥ: ಬಂಡಿ; ಪಾಯದಳ: ಸೈನಿಕ; ಹೊರಳು: ತಿರುವು, ಬಾಗು; ತಗ್ಗು: ಬಾಗು; ರಥ: ಬಂಡಿ; ಲಗ್ಗೆ: ಮುತ್ತಿಗೆ, ಆಕ್ರಮಣ; ಧರಧುರ: ಆಧಿಕ್ಯ, ಅತಿಶಯ; ದೆಖ್ಖಾಳ: ಗೊಂದಲ, ಗಲಭೆ; ಮಿಗೆ: ಅಧಿಕ; ನೂಕು: ತಳ್ಳು; ಸಂಗರ: ಯುದ್ಧ;

ಪದವಿಂಗಡಣೆ:
ಕೊರಳ +ತೆತ್ತುದು +ಚೂಣಿ +ದಳ +ಮು
ಖ್ಯರಿಗೆ +ಹೇಳಿಕೆಯಾಯ್ತು +ಮೋಹರವ್
ಎರಡರಲಿ +ಮೊನೆಯುಳ್ಳ +ನಾಯಕವಾಡಿ +ನಲವಿನಲಿ
ಕರಿ +ತುರಗ +ರಥ +ಪಾಯದಳದಲಿ
ಹೊರಳಿ +ತಗ್ಗಿತು +ರಥದ +ಲಗ್ಗೆಯ
ಧರಧುರದ +ದೆಖ್ಖಾಳ +ಮಿಗೆ +ನೂಕಿದರು +ಸಂಗರಕೆ

ಅಚ್ಚರಿ:
(೧) ನಾಯಕ, ದಳಮುಖ್ಯ – ಸಾಮ್ಯಾರ್ಥ ಪದ
(೨) ಚತುರಂಗ ಸೈನ್ಯವನ್ನು ಹೇಳುವ ಪರಿ – ಕರಿ ತುರಗ ರಥ ಪಾಯದಳದಲಿ ಹೊರಳಿ ತಗ್ಗಿತು

ಪದ್ಯ ೪: ಅರ್ಜುನನು ಬಂದಿರುವುದು ಹೇಗೆ ತಿಳಿಯಿತು?

ಬಿರಿಯಲಬುಜಭವಾಂಡವಿದೆ ಕಪಿ
ವರನ ಕಳಕಳ ದೇವದತ್ತದ
ಧರಧುರದ ದೆಖ್ಖಾಳವಿದೆ ಗಾಂಡಿವದ ಬೊಬ್ಬೆಯಿದೆ
ನರನ ನಿಷ್ಠುರ ಸಿಂಹರವವಿದೆ
ತುರಗ ದಳ್ಳಿರಿ ಸಾರುತಿದೆ ಸಂ
ಗರಕೆ ಸಾಹಸಮಲ್ಲ ಮೊಳಗಿದನೆಂದನಾ ದ್ರೋಣ (ವಿರಾಟ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ಬ್ರಹ್ಮಾಂಡವು ಬಿರಿಯುವಂತೆ ಹನುಮಂತನು ಗರ್ಜಿಸಿದನು. ಅರ್ಜುನನ ಶಂಖವಾದ ದೇವದತ್ತದ ಆರ್ಭಟವು ಹಿರಿದಾಗಿದೆ, ಗಾಂಡಿವದ ಬೊಬ್ಬೆ ಕೇಳಿ ಬರುತ್ತಿದೆ, ಅರ್ಜುನನ ನಿಷ್ಠುರ ಸಿಂಹಗರ್ಜನೆ ಕೇಳುತ್ತಿದೆ, ಕುದುರೆಗಳ ಹೇಷಾರವದ ಸದ್ದು ಕೇಳಿ ಬರುತ್ತಿದೆ, ಮಹಾ ಪರಾಕ್ರಮಿಯಾದ ಅರ್ಜುನನು ಯುದ್ಧಕ್ಕೆ ಬಂದಿದ್ದಾನೆಂದು ದ್ರೋಣರು ಹೇಳಿದರು.

ಅರ್ಥ:
ಬಿರಿ: ಸೀಳು, ಕಠಿಣ; ಅಬುಜ: ಕಮಲ; ಅಬುಜಭವಾಂಡ: ಬ್ರಹ್ಮಾಂಡ; ಕಪಿ: ಹನುಮಂತ; ಕಳಕಳ: ಗೊಂದಲ; ಧರಧುರ: ಆರ್ಭಟ; ದೆಖ್ಖಾಳ: ಗೊಂದಲ, ಗಲಭೆ; ಬೊಬ್ಬೆ: ಆರ್ಭಟ; ನರ: ಅರ್ಜುನ; ನಿಷ್ಠುರ: ಕಠಿಣವಾದ; ಸಿಂಹ: ಕೇಸರಿ; ರವ: ಶಬ್ದ; ತುರಗ: ಕುದುರೆ; ದಳ್ಳುರಿ: ದೊಡ್ಡ ಉರಿ, ಬೆಂಕಿ; ಸಾರು: ಹರಡು; ಸಂಗರ: ಯುದ್ಧ; ಸಾಹಸಮಲ್ಲ: ಪರಾಕ್ರಮ; ಮೊಳಗು: ಧ್ವನಿ, ಸದ್ದು;

ಪದವಿಂಗಡಣೆ:
ಬಿರಿಯಲ್+ಅಬುಜಭವಾಂಡವಿದೆ +ಕಪಿ
ವರನ+ ಕಳಕಳ+ ದೇವದತ್ತದ
ಧರಧುರದ+ ದೆಖ್ಖಾಳವಿದೆ+ ಗಾಂಡಿವದ +ಬೊಬ್ಬೆಯಿದೆ
ನರನ +ನಿಷ್ಠುರ +ಸಿಂಹ+ರವವಿದೆ
ತುರಗ +ದಳ್ಳಿರಿ +ಸಾರುತಿದೆ+ ಸಂ
ಗರಕೆ +ಸಾಹಸಮಲ್ಲ+ ಮೊಳಗಿದನ್+ಎಂದನಾ +ದ್ರೋಣ

ಅಚ್ಚರಿ:
(೧) ಇದೆ ಪದದಿಂದ ಕೊನೆಗೊಳ್ಳುವ ಪದಗಳು – ಭವಾಂಡವಿದೆ, ದೆಖ್ಖಾಳವಿದೆ, ಬೊಬ್ಬೆಯಿದೆ, ರವವಿದೆ, ಸಾರುತಿದೆ
(೨) ದ ಕಾರದ ತ್ರಿವಳಿ ಪದ – ದೇವದತ್ತದ ಧರಧುರದ ದೆಖ್ಖಾಳವಿದೆ

ಪದ್ಯ ೩೮: ಕೌರವರು ಏಕೆ ಧೃತಿಗೆಟ್ಟರು?

ಧರಣಿ ಜಲ ಪವಕ ಸಮೀರಾ
ದ್ಯರುಗಳರಿತಿರಿ ಶಕ್ರ ನೈಋತ
ವರುಣವಾಯು ಕುಬೇರ ಯಮರೆಂಬಖಿಳ ದಿಗಧಿಪರು
ಬರೆದುಕೊಂಡಿರಿ ಭಾಷೆಯನು ಸುರ
ನರ ಫಣಿವ್ರಜವೆಂಬ ಭೀಮನ
ಧರಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ (ಸಭಾ ಪರ್ವ, ೧೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಭೂಮಿ, ಜಲ, ಅಗ್ನಿ, ವಾಯು ಮೊದಲಾದ ಪಂಚಮಹಾಭೂತಗಳೇ, ನೀವೇ ಸಾಕ್ಷಿ, ಇಂದ್ರ, ನಿರಋತಿ, ವರುಣ, ವಾಯು, ಕುಬೇರ, ಯಮರೆಂಬ ಅಷ್ಟದಿಕ್ಪಾಲಕರೇ ನಾನು ಮಾಡಿದ ಪ್ರತಿಜ್ಞೆಯನ್ನು ಬರೆದುಕೊಂಡಿರಿ. ಮನುಷ್ಯರು, ದೇವತೆಗಳು, ನಾಗರೆಂಬ ಮೂರು ಲೋಕದ ನಿವಾಸಿಗಳೇ ನಿಮ್ಮ ಆಣೆ, ನನ್ನ ಪ್ರತಿಜ್ಞೆಯನ್ನು ನಿಮ್ಮ ಸಮ್ಮುಖದಲ್ಲೇ ನೆರವೇರಿಸುತ್ತೇನೆಂಬ ಭೀಮನ ಅಬ್ಬರದ ಆಟಾಟೋಪಕ್ಕೆ ಕೌರವಉ ಎದೆಗೆಟ್ಟು ಧೈರ್ಯವನ್ನು ಕಳೆದುಕೊಂಡರು.

ಅರ್ಥ:
ಧರಣಿ: ಭೂಮಿ; ಜಲ: ನೀರು; ಪಾವಕ: ಅಗ್ನಿ; ಸಮೀರ: ವಾಯು; ಆದಿ: ಮುಂತಾದ; ಅರಿ: ತಿಳಿ; ಶಕ್ರ: ಇಂದ್ರ; ವರುಣ: ನೀರಿನ ಅಧಿದೇವತೆಯೂ ಪಶ್ಚಿಮ ದಿಕ್ಪಾಲಕನೂ ಆಗಿರುವ ಒಬ್ಬ ದೇವತೆ; ವಾಯು: ಗಾಳಿ, ಅನಿಲ; ಕುಬೇರ: ಅಷ್ಟದಿಕ್ಪಾಲಕರಲ್ಲಿ ಒಬ್ಬ, ಧನಪತಿ; ಯಮ: ಮೃತ್ಯುದೇವತೆ; ಅಖಿಳ: ಎಲ್ಲಾ; ದಿಗಧಿಪ: ದಿಕ್ಪಾಲಕ; ಬರೆದು: ಲೇಖಿಸು, ಅಕ್ಷರದಲ್ಲಿರಿಸು; ಭಾಷೆ: ಮಾತು, ಪ್ರಮಾಣ; ಸುರ: ದೇವತೆ; ನರ: ಮನುಷ್ಯ; ಫಣಿ: ಹಾವು; ವ್ರಜ: ಗುಂಪು; ಧರಧುರ: ಆರ್ಭಟ, ಕೋಲಾ ಹಲ; ಧಟ್ಟಣೆ: ಗುಂಪು; ಧೃತಿ: ಧೈರ್ಯ; ಸ್ತೋಮ: ಗುಂಪು;

ಪದವಿಂಗಡಣೆ:
ಧರಣಿ +ಜಲ +ಪಾವಕ +ಸಮೀರಾ
ದ್ಯರುಗಳ್+ಅರಿತಿರಿ+ ಶಕ್ರ +ನೈಋತ
ವರುಣ+ವಾಯು +ಕುಬೇರ +ಯಮರೆಂಬ್+ಅಖಿಳ +ದಿಗಧಿಪರು
ಬರೆದುಕೊಂಡಿರಿ+ ಭಾಷೆಯನು +ಸುರ
ನರ+ ಫಣಿ+ವ್ರಜವೆಂಬ+ ಭೀಮನ
ಧರಧುರದ +ಧಟ್ಟಣೆಗೆ +ಧೃತಿಗೆಟ್ಟುದು +ಕುರುಸ್ತೋಮ

ಅಚ್ಚರಿ:
(೧) ಸಮೀರ, ವಾಯು – ಸಮನಾರ್ಥಕ ಪದ
(೨) ಧ ಕಾರದ ತ್ರಿವಳಿ ಪದ – ಧರಧುರದ ಧಟ್ಟಣೆಗೆ ಧೃತಿಗೆಟ್ಟುದು

ಪದ್ಯ ೫೪: ಯಾವುದರಿಂದ ಹೊರಬರಲಾಗುತ್ತಿಲ್ಲ ಎಂದು ದುರ್ಯೊಧನನು ಹೇಳಿದನು?

ಅರಸನಭ್ಯುದಯವನು ಭೀಮನ
ಧರಧುರವನರ್ಜುನನ ಬಿಂಕವ
ನರಸಿಯಾಟೋಪವನು ಮಾದ್ರೀಸುತರ ಸಂಭ್ರಮವ
ಹೊರೆಯ ಧೃಷ್ಟದ್ಯುಮ್ನ ದ್ರುಪದಾ
ದ್ಯರ ವೃಥಾಡಂಬರವ ಕಂಡೆದೆ
ಬಿರಿದುದಳುಕಿದೆನಳುಕಿದೆನು ಸಂತವಿಸಲರಿದೆಂದ (ಸಭಾ ಪರ್ವ, ೧೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ಯುಧಿಷ್ಠಿರನ ಏಳಿಗೆ, ಭೀಮನ ಅಬ್ಬರ, ಅರ್ಜುನನ ಠೀವಿ, ದ್ರೌಪದಿಯ ಆಡಂಬರ, ನಕುಲ ಸಹದೇವರ ಸಂಭ್ರಮ, ಅವರ ಪರಿವಾರದವರಾದ ಧೃಷ್ಟದ್ಯುಮ್ನ, ದ್ರುಪದನೇ ಮೊದಲಾದವರ ಒಣಬಿಂಕಗಳನ್ನು ಕಂಡು ನನ್ನ ಎದೆ ಬಿರಿದು ಅಳುಕುತ್ತಿದೆ. ಅದರಿಂದ ಮೇಲೆ ಬರಲು ಆಗುತ್ತಿಲ್ಲ ಎಂದು ದುರ್ಯೋಧನನು ಕಡುನೊಂದು ಹೇಳಿದನು.

ಅರ್ಥ:
ಅರಸ: ರಾಜ; ಅಭ್ಯುದಯ: ಏಳಿಗೆ; ಧರಧುರ: ಆರ್ಭಟ; ಬಿಂಕ: ಗರ್ವ, ಜಂಬ; ಅರಸಿ: ರಾಣಿ; ಆಟೋಪ: ಆಡಂಬರ, ದರ್ಪ; ಸುತ: ಮಕ್ಕಳು; ಸಂಭ್ರಮ: ಉತ್ಸಾಹ, ಸಡಗರ; ಹೊರೆ: ಭಾರ; ಆದಿ: ಮುಂತಾದ; ವೃಥ: ಸುಮ್ಮನೆ; ಆಡಂಬರ: ತೋರಿಕೆ, ಢಂಭ; ಕಂಡು: ನೋಡಿ; ಬಿರಿ: ಸೀಳು; ಅಳುಕು: ಹಿಂಜರಿ, ಅಂಜು; ಸಂತವಿಸು: ಸಂತೋಷಿಸು; ಅರಿ: ತಿಳಿ;

ಪದವಿಂಗಡಣೆ:
ಅರಸನ್+ಅಭ್ಯುದಯವನು +ಭೀಮನ
ಧರಧುರವನ್+ಅರ್ಜುನನ +ಬಿಂಕವನ್
ಅರಸಿ+ಆಟೋಪವನು +ಮಾದ್ರೀಸುತರ+ ಸಂಭ್ರಮವ
ಹೊರೆಯ+ ಧೃಷ್ಟದ್ಯುಮ್ನ +ದ್ರುಪದಾ
ದ್ಯರ+ ವೃಥ+ಆಡಂಬರವ +ಕಂಡೆದೆ
ಬಿರಿದುದ್+ಅಳುಕಿದೆನ್+ಅಳುಕಿದೆನು+ ಸಂತವಿಸಲ್+ಅರಿದೆಂದ

ಅಚ್ಚರಿ:
(೧) ಹಿಂಜರಿಪಟ್ಟೆ ಎಂದು ಹೇಳಲು – ಅಳುಕಿದೆನ್ ೨ ಬಾರಿ ಪ್ರಯೋಗ
(೨) ಅಭ್ಯುದಯ, ಧರಧುರ, ಬಿಂಕ, ಆಟೋಪ, ಸಂಭ್ರಮ, ಆಡಂಬರ – ಪದಗಳ ಬಳಕೆ

ಪದ್ಯ ೫: ಸರ್ಪಾಸ್ತ್ರವು ಯಾವ ಶಬ್ದಮಾಡುತ್ತಾ ಹೊರಹೊಮ್ಮಿತು?

ಬೆರಳಲಂಬನು ತೂಗಲುರಿ ಫೂ
ತ್ಕರಣೆಯಲಿ ಪಂಠಿಸಿತು ಸುಯ್ಲಿನ
ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
ಉರವಣಿಸಿದವು ಗರಳ ರಸದ
ಬ್ಬರದ ಬೊಬ್ಬುಳಿಕೆಗಳು ಮುಸುಕಿತು
ಹೊರಳಿಗಿಡಿಗಳ ಛಟಛಟಧ್ವನಿ ಮಸಗಿತಡಿಗಡಿಗೆ (ಕರ್ಣ ಪರ್ವ, ೨೫ ಸಂಧಿ, ೫ ಪದ್ಯ)

ತಾತ್ಪರ್ಯ:
ಕರ್ಣನ ಬೆರಳಿನಲ್ಲಿ ಸರ್ಪಾಸ್ತ್ರವನ್ನು ಹಿಡಿದು ತೂಗಲು ಸರ್ಪವು ಫೂತ್ಕರಿಸಿತು. ಅದರ ಉಸಿರಿನಿಂದ ಬಿಳಿಯ ನೊರೆಯ ವಿಷದ ದ್ರವವು ಸುತ್ತುತ್ತಾ ಎಲ್ಲೆಡೆ ಹಬ್ಬಿತು. ವಿಷರಸದ ಹನಿಗಳು ಸುತ್ತಲೂ ವ್ಯಾಪಿಸಿತು. ಕಿಡಿಗಳ ತಂಡವು ಛಟಛಟವೆಂದು ಸದ್ದು ಮಾಡುತ್ತಿತ್ತು.

ಅರ್ಥ:
ಬೆರಳು: ಅಂಗುಲಿ; ಅಂಬು: ಬಾಣ; ತೂಗು: ಅಲ್ಲಾಡು; ಉರಿ: ಬೆಂಕಿಯ ಕಿಡಿ; ಫೂತ್ಕರಣೆ: ಹೊರಹಾಕು; ಪಂಠಿಸು: ಸುತ್ತುವರಿ; ಸುಯ್ಲು: ನಿಟ್ಟುಸಿರು; ಧರಧುರ: ಆರ್ಭಟ, ಕೋಲಾ ಹಲ; ಬೆಳು: ಬಿಳಿಯ; ನೊರೆ: ಬುರುಗು, ಫೇನ; ಲಹರಿ: ರಭಸ, ಆವೇಗ; ವಿಷ: ನಂಜು, ಗರಳ; ಲೋಳೆ:ಅ೦ಟುಅ೦ಟಾಗಿರುವ ದ್ರವ್ಯ; ಉರವಣಿಸು: ಆತುರಿಸು; ಗರಳ: ವಿಷ; ರಸ: ಸಾರ, ದ್ರವ; ಅಬ್ಬರ:ಆರ್ಭಟ; ಬೊಬ್ಬುಳಿಕೆ: ಗುಳ್ಳೆ, ಬುದ್ಬುದ; ಮುಸುಕು: ಹೊದಿಕೆ; ಹೊರಳು: ಚಲಿಸು; ಕಿಡಿ: ಬೆಂಕಿ; ಛಟ: ಬೆಂಕಿಯ ಕಿಡಿಗಳ ಶಬ್ದ; ಮಸಗು: ಹರಡು; ಅಡಿಗಡಿ: ಹೆಜ್ಜೆ ಹೆಜ್ಜೆ;

ಪದವಿಂಗಡಣೆ:
ಬೆರಳಲ್+ಅಂಬನು +ತೂಗಲ್+ಉರಿ +ಫೂ
ತ್ಕರಣೆಯಲಿ +ಪಂಠಿಸಿತು+ ಸುಯ್ಲಿನ
ಧರಧುರದ+ ಬೆಳುನೊರೆಯ +ಲಹರಿಯ +ವಿಷದ +ಲೋಳೆಗಳ
ಉರವಣಿಸಿದವು+ ಗರಳ+ ರಸದ್
ಅಬ್ಬರದ +ಬೊಬ್ಬುಳಿಕೆಗಳು +ಮುಸುಕಿತು
ಹೊರಳಿ+ಕಿಡಿಗಳ +ಛಟಛಟಧ್ವನಿ+ ಮಸಗಿತ್+ಅಡಿಗಡಿಗೆ

ಅಚ್ಚರಿ:
(೧) ಧರಧುರ, ಛಟಛಟ – ಪದಬಳಕೆ
(೨) ವಿಷವು ಹೊರಹೊಮ್ಮುವ ಪರಿ – ಧರಧುರದ ಬೆಳುನೊರೆಯ ಲಹರಿಯ ವಿಷದ ಲೋಳೆಗಳ
(೩) ಸಮನಾರ್ಥಕ ಪದಗಳು – ವಿಷ, ಗರಳ; ಉರಿ, ಕಿಡಿ –