ಪದ್ಯ ೪೩: ಯುದ್ಧದಲ್ಲಿ ನಾಶವಾದ ಸೈನ್ಯವೆಷ್ಟು?

ಅರಸು ಮಕ್ಕಳು ಮತ್ಸ್ಯ ಪಾಂಚಾ
ಲರಲಿ ಕೈಕೆಯ ಚೈದ್ಯ ಯಾದವ
ತುರುಕ ಬರ್ಬರ ಗೌಳ ಮಾಗಧ ಪಾರಿಯಾತ್ರರಲಿ
ಉರುಳಿತೊಂದೇ ಲಕ್ಷವುಳಿದೀ
ಕರಿ ವರೂಥ ಪದಾತಿ ತುರಗವ
ನರಸ ಲೆಕ್ಕಿಸಲಾರು ಬಲ್ಲರು ವೈರಿ ಸೇನೆಯಲಿ (ದ್ರೋಣ ಪರ್ವ, ೧೭ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲೈ ರಾಜ ಧೃತರಾಷ್ಟ್ರ ಕೇಳು, ರಾಜನ ಮಕ್ಕಳು, ಮತ್ಸ್ಯ, ಪಾಂಚಾಲ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ, ಮಾಗಧ, ಪಾರಿಯಾತ್ರ ರಾಜರೆಲ್ಲರು ಸೋಲನಪ್ಪಿದರು. ಒಂದು ಲಕ್ಷದಷ್ಟು ಸೈನ್ಯವು ನಾಶವಾಯಿತು, ಉಳಿದ ಚತುರಂಗ ಸೈನ್ಯದ ಆನೆ, ಕುದುರೆ, ರಥ, ಕಾಲಾಳುಗಳು ಎಷ್ಟು ನಾಶವಾಯಿತೆಂದು ವೈರಿ ಸೈನ್ಯದಲ್ಲಿ ಯಾರು ತಾನೆ ಬಲ್ಲರು ಎಂದು ಸಂಜಯನು ವಿವರಿಸಿದನು.

ಅರ್ಥ:
ಅರಸು: ರಾಜ; ಮಕ್ಕಳು: ಸುತರು; ಉರುಳು: ಬೀಳು; ಉಳಿದ: ಮಿಕ್ಕ; ಕರಿ: ಆನೆ; ವರೂಥ: ತೇರು, ರಥ; ಪದಾತಿ: ಸೈನಿಕ; ತುರಗ: ಅಶ್ವ; ಅರಸ: ರಾಜ; ಲೆಕ್ಕಿಸು: ಗಮನಿಸು; ಬಲ್ಲರು: ತಿಳಿದವ; ವೈರಿ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ಅರಸು +ಮಕ್ಕಳು +ಮತ್ಸ್ಯ +ಪಾಂಚಾ
ಲರಲಿ +ಕೈಕೆಯ +ಚೈದ್ಯ +ಯಾದವ
ತುರುಕ+ ಬರ್ಬರ +ಗೌಳ +ಮಾಗಧ +ಪಾರಿಯಾತ್ರರಲಿ
ಉರುಳಿತೊಂದೇ +ಲಕ್ಷವುಳಿದ್
ಈ+ ಕರಿ +ವರೂಥ +ಪದಾತಿ +ತುರಗವನ್
ಅರಸ +ಲೆಕ್ಕಿಸಲಾರು +ಬಲ್ಲರು +ವೈರಿ +ಸೇನೆಯಲಿ

ಅಚ್ಚರಿ:
(೧) ರಾಜಮನೆತನಗಳ ಹೆಸರು – ಮತ್ಸ್ಯ, ಪಾಂಚಾಲ, ಕೈಕೆಯ, ಚೈದ್ಯ, ಯಾದವ, ತುರುಕ, ಬರ್ಬರ, ಗೌಳ ಮಾಗಧ, ಪಾರಿಯಾತ್ರ

ಪದ್ಯ ೪೧: ದ್ರೋಣರನ್ನು ಯಾರು ಕೆಣಕಿದರು?

ಅವರ ಹರಿಬವ ಬೇಡಿ ಸೃಂಜಯ
ರವಗಡಿಸಿದರು ಕೈಕೆಯರು ನೃಪ
ನಿವಹದಗಣಿತ ಚೈದ್ಯಯಾದವ ಮಗಧ ಮಾಳವರು
ವಿವಿಧ ವಾದ್ಯ ನಿನಾದ ಗಡಹಯ
ರವ ರಥಧ್ವನಿ ಜಗದ ಜಂತ್ರವ
ತಿವಿದು ಕೆದರೆ ವಿರೋಧಿ ಬಲ ಕೆಣಕಿದುದು ಕಳಶಜನ (ದ್ರೋಣ ಪರ್ವ, ೧೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ಈ ಮೂವರ ಸೇಡನ್ನು ತೀರಿಸಿಕೊಳ್ಳಲು ಸೃಂಜಯ, ಕೈಕೆಯ, ಚೈದ್ಯ, ಯಾದವ, ಮಗಧ, ಮಾಳವರು ರಣವಾದ್ಯಗಳು ಬ್ರಹ್ಮಾಂಡವನ್ನೇ ತಿವಿಯುತ್ತಿರಲು ದ್ರೋಣನನ್ನು ಕೆಣಕಿದರು.

ಅರ್ಥ:
ಹರಿಬ: ಕೆಲಸ, ಕಾರ್ಯ; ಬೇಡು: ಯಾಚಿಸು; ಅವಗಡಿಸು: ಕಡೆಗಣಿಸು; ನಿವಹ: ಗುಂಪು; ಅಗಣಿತ: ಲೆಕ್ಕವಿಲ್ಲದ, ಎಣಿಕೆಗೆ ಮೀರಿದ; ವಿವಿಧ: ಹಲವಾರು; ನಿನಾದ: ಉಲಿವು; ಸದ್ದು; ಗಡ: ಅಲ್ಲವೆ; ಹಯ: ಕುದುರೆ; ರವ: ಶಬ್ದ; ಧ್ವನಿ: ಶಬ್ದ; ರಥ: ಬಂಡಿ; ಜಗ: ಪ್ರಪಂಚ; ಜಂತ್ರ: ಯಂತ್ರ, ವಾದ್ಯ; ತಿವಿ: ಚುಚ್ಚು; ಕೆದರು: ಹರಡು; ವಿರೋಧಿ: ಶತ್ರು; ಬಲ: ಸೈನ್ಯ; ಕೆಣಕು: ರೇಗಿಸು; ಕಳಶ: ಕುಂಭ;

ಪದವಿಂಗಡಣೆ:
ಅವರ +ಹರಿಬವ +ಬೇಡಿ +ಸೃಂಜಯರ್
ಅವಗಡಿಸಿದರು +ಕೈಕೆಯರು +ನೃಪ
ನಿವಹದ್+ಅಗಣಿತ +ಚೈದ್ಯ+ಯಾದವ +ಮಗಧ +ಮಾಳವರು
ವಿವಿಧ +ವಾದ್ಯ +ನಿನಾದ +ಗಡ+ಹಯ
ರವ +ರಥ+ಧ್ವನಿ +ಜಗದ +ಜಂತ್ರವ
ತಿವಿದು+ ಕೆದರೆ +ವಿರೋಧಿ +ಬಲ +ಕೆಣಕಿದುದು +ಕಳಶಜನ

ಅಚ್ಚರಿ:
(೧) ನಿನಾದ, ರವ, ಧ್ವನಿ – ಸಾಮ್ಯಾರ್ಥ ಪದಗಳು

ಪದ್ಯ ೬೮: ಘಟೋತ್ಕಚನು ಯಾರನ್ನು ನಾಶ ಮಾಡಿದನು?

ಒರಸಿದನು ರಣದಲಿ ಹಿಡಿಂಬಾ
ಸುರನ ಮಕ್ಕಳ ಚೈದ್ಯ ಮಾಗಧ
ನರಕ ಕಿಮ್ಮೀರಕ ಜಟಾಸುರಸೂನು ಸಂತತಿಯ
ಬರಲಿ ಕರ್ಣ ದ್ರೋಣರುಳಿದೀ
ಜರಡ ಜೋಡಿಸಬೇಡ ಭೀಮನ
ನರನ ಬಯಸುವರೆನ್ನೊಡನೆ ಕೈಮಾಡಹೇಳೆಂದ (ದ್ರೋಣ ಪರ್ವ, ೧೫ ಸಂಧಿ, ೬೮ ಪದ್ಯ)

ತಾತ್ಪರ್ಯ:
ಘಟೋತ್ಕಚನ ಯುದ್ಧದಲ್ಲಿ ಹಿಡಿಂಬ, ಶಿಶುಪಾಲ, ಜರಾಸಂಧ, ನರಕ, ಕಿಮ್ಮೀರ, ಜಟಾಸುರರ ಮಕ್ಕಳು ಅವರ ವಂಶದವರನ್ನು ನಾಶ ಮಾಡಿದನು. ಈ ಬಲಹೀನರನ್ನೇಕೆ ನನ್ನ ಮೇಲೆ ನುಗ್ಗಿಸುವಿರಿ, ಬರುವಂತಿದ್ದರೆ ಕರ್ಣ ದ್ರೋಣರು ಬರಲಿ, ಭೀಮಾರ್ಜುನರ ಮೇಲೆ ಯುದ್ಧಮಾಡ ಬಯಸುವವರು ನನ್ನ ಮೇಲೆ ಕೈಮಾಡಲಿ ಎಂದನು.

ಅರ್ಥ:
ಒರಸು: ನಾಶ; ರಣ: ಯುದ್ಧ; ಅಸುರ: ರಾಕ್ಷಸ; ಮಕ್ಕಳು: ಸುತ; ಸೂನು: ಮಗ; ಸಂತತಿ: ವಂಶ; ಬರಲಿ: ಆಗಮಿಸು; ಉಳಿದ: ಮಿಕ್ಕ; ಜರಡು: ಹುರುಳಿಲ್ಲದುದು; ಜೋಡಿಸು: ಕೂಡಿಸು; ನರ: ಅರ್ಜುನ; ಬಯಸು: ಇಚ್ಛಿಸು; ಕೈಮಾಡು: ಯುದ್ಧಮಾಡು;

ಪದವಿಂಗಡಣೆ:
ಒರಸಿದನು+ ರಣದಲಿ +ಹಿಡಿಂಬ
ಅಸುರನ +ಮಕ್ಕಳ +ಚೈದ್ಯ +ಮಾಗಧ
ನರಕ +ಕಿಮ್ಮೀರಕ +ಜಟಾಸುರ+ಸೂನು +ಸಂತತಿಯ
ಬರಲಿ+ ಕರ್ಣ+ ದ್ರೋಣರ್+ಉಳಿದೀ
ಜರಡ +ಜೋಡಿಸಬೇಡ +ಭೀಮನ
ನರನ +ಬಯಸುವರ್+ಎನ್ನೊಡನೆ +ಕೈಮಾಡ+ಹೇಳೆಂದ

ಅಚ್ಚರಿ:
(೧) ಮಕ್ಕಳು, ಸೂನು – ಸಮಾನಾರ್ಥಕ ಪದ
(೨) ಘಟೋತ್ಕಚನ ಬಲವನ್ನು ಹೇಳುವ ಪರಿ – ಬರಲಿ ಕರ್ಣ ದ್ರೋಣರುಳಿದೀಜರಡ ಜೋಡಿಸಬೇಡ

ಪದ್ಯ ೬೨: ದ್ರೋಣರ ಯುದ್ಧವು ಹೇಗಿತ್ತು?

ನಕುಲನನು ಮಸೆಗಾಣಿಸಿಯೆ ಸಾ
ತ್ಯಕಿಯ ವಿರಥನ ಮಾಡಿ ಪಾಂಚಾ
ಲಕರನೋಡಿಸಿ ಮತ್ಸ್ಯ ಕೇಕೆಯ ಬಲವ ಬರಿಕೈದು
ಸಕಲ ಸನ್ನಾಹದಲಿ ಚೈದ್ಯ
ಪ್ರಕರವನು ತವೆ ಕೊಂದು ಭೂಪಾ
ಲಕನ ಬೆಂಬತ್ತಿದನು ಭೀಮ ಘಟೋತ್ಕಚರ ಗೆಲಿದ (ದ್ರೋಣ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ನಕುಲನಿಗೆ ಗಾಯಗಳಾಗುವಂತೆ ಹೊಡೆದನು. ದ್ರೋಣನನ್ನೆದುರಿಸೆ ಸಾತ್ಯಕಿಯು ವಿರಥನಾದನು. ಪಾಂಚಾಲರು ಓಡಿಹೋದರು. ಮತ್ಸ್ಯ, ಕೇಕೆಯ ಬಲಗಳನ್ನು ಬಯಲು ಮಾಡಿದನು. ಚೈದ್ಯರನ್ನು ಸಂಹರಿಸಿದನು. ಬಳಿಕ ದೊರೆಯಾದ ಧರ್ಮಪುತ್ರನನ್ನು ಅಟ್ಟಿಸ್ಕೊಂಡು ಹೋಗಿ ಅಡ್ಡಬಂದ ಭೀಮ ಘಟೋತ್ಕಚರನ್ನು ಜಯಿಸಿದನು.

ಅರ್ಥ:
ಮಸೆ: ಹರಿತವಾದುದು; ವಿರಥ: ರಥವಿಲ್ಲದ ಸ್ಥಿತಿ; ಓಡು: ಧಾವಿಸು; ಬಲ: ಸೈನ್ಯ; ಬರಿಕೈ: ಬಯಲು ಮಾಡು; ಸಕಲ: ಎಲ್ಲಾ; ಸನ್ನಾಹ: ಬಂಧನ; ಪ್ರಕರ: ಗುಂಪು, ಸಮೂಹ; ತವೆ: ಅತಿಶಯವಾಗಿ, ಹೆಚ್ಚಾಗಿ; ಕೊಂದು: ಸಾಯಿಸು; ಭೂಪಾಲ: ರಾಜ; ಬೆಂಬತ್ತು: ಅಟ್ಟಿಸಿಕೊಂಡು ಹೋಗು; ಗೆಲಿದು: ಜಯಿಸು;

ಪದವಿಂಗಡಣೆ:
ನಕುಲನನು +ಮಸೆಗಾಣಿಸಿಯೆ +ಸಾ
ತ್ಯಕಿಯ +ವಿರಥನ+ ಮಾಡಿ +ಪಾಂಚಾ
ಲಕರನ್+ಓಡಿಸಿ +ಮತ್ಸ್ಯ +ಕೇಕೆಯ +ಬಲವ +ಬರಿಕೈದು
ಸಕಲ+ ಸನ್ನಾಹದಲಿ +ಚೈದ್ಯ
ಪ್ರಕರವನು +ತವೆ +ಕೊಂದು +ಭೂಪಾ
ಲಕನ +ಬೆಂಬತ್ತಿದನು +ಭೀಮ +ಘಟೋತ್ಕಚರ+ ಗೆಲಿದ

ಅಚ್ಚರಿ:
(೧) ಸೋಲಿಸಿದ ಎನ್ನುವ ಪದಗಳ ಬಳಕೆ ಮಸೆಗಾಣಿಸಿ, ವಿರಥ, ಓಡಿಸು, ಬರಿಕೈದು, ಕೊಂದು, ಗೆಲಿದು

ಪದ್ಯ ೩೪: ಅರ್ಜುನನು ಮಹಾಸ್ತ್ರವನ್ನು ಎಲ್ಲಿ ಪಠಿಸಿದನು?

ಕರೆದು ಸಾತ್ಯಕಿ ಭೀಮನನು ನೃಪ
ವರನ ಸುಯ್ದಾನದಲಿ ನಿಲಿಸಿದ
ನರಿಬಲಕೆ ನೂಕಿದನು ಕೈಕೆಯ ಚೈದ್ಯ ಸೃಂಜಯರ
ಮುರಮಥನನೊಡಗೂಡಿ ನಿಜ ಮೋ
ಹರವನಂದೈನೂರು ಬಿಲ್ಲಿಂ
ತರಕೆ ತೊಲಗಿ ಮಹಾಸ್ತ್ರಮಂತ್ರವ ಜಪಿಸಿದನು ಪಾರ್ಥ (ದ್ರೋಣ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಅರ್ಜುನನು ಸಾತ್ಯಕಿ ಭೀಮರನ್ನು ಕರೆದು ದೊರೆಯನ್ನು ರಕ್ಷಿಸಲು ನಿಲಿಸಿದನು. ಕೈಕೆಯ ಚೈದ್ಯ ಸೃಂಜಯರ ಸೈನ್ಯಗಳನ್ನು ಶತ್ರು ಸೈನ್ಯವನ್ನೆದುರಿಸಲು ಕಳಿಸಿದನು. ಅರ್ಜುನನು ಸೈನ್ಯದಿಂದ ಐದು ನೂರು ಬಿಲ್ಲುಗಳ ದೂರ ಹೋಗಿ ಮಹಾಸ್ತ್ರ ಮಂತ್ರವನ್ನು ಜಪಿಸಿದನು.

ಅರ್ಥ:
ಕರೆದು: ಬರೆಮಾಡು; ನೃಪ: ರಾಜ; ವರ: ಶ್ರೇಷ್ಠ; ಸುಯ್ದಾನ: ರಕ್ಷಣೆ; ನಿಲಿಸು: ಸ್ಥಿತವಾಗಿರು; ಅರಿ: ವೈರಿ; ಬಲ; ಸೈನ್ಯ; ನೂಕು: ತಳ್ಳು; ಮುರಮಥನ: ಕೃಷ್ಣ; ಒಡಗೂಡು: ಜೊತೆ; ಮೋಹರ: ಯುದ್ಧ; ಅಂತರ: ದೂರ; ತೊಲಗು: ಹೋಗು; ಅಸ್ತ್ರ: ಶಸ್ತ್ರ, ಆಯುಧ; ಜಪಿಸು: ಪಠಿಸು, ಮಂತ್ರಿಸು;

ಪದವಿಂಗಡಣೆ:
ಕರೆದು +ಸಾತ್ಯಕಿ +ಭೀಮನನು +ನೃಪ
ವರನ +ಸುಯ್ದಾನದಲಿ +ನಿಲಿಸಿದನ್
ಅರಿಬಲಕೆ +ನೂಕಿದನು +ಕೈಕೆಯ +ಚೈದ್ಯ +ಸೃಂಜಯರ
ಮುರಮಥನನ್+ಒಡಗೂಡಿ +ನಿಜ +ಮೋ
ಹರವನಂದ್+ಐನೂರು +ಬಿಲ್ಲಂ
ತರಕೆ+ ತೊಲಗಿ +ಮಹಾಸ್ತ್ರಮಂತ್ರವ +ಜಪಿಸಿದನು +ಪಾರ್ಥ

ಪದ್ಯ ೩೦: ಪಾಂಡವರ ಜೊತೆ ಯಾವ ರಾಜರು ಬಂದರು?

ಅರಸನೆಡವಂಕದಲಿ ಮತ್ಸ್ಯರು
ಬಿರುದ ಕೈಕೆಯ ಚೈದ್ಯ ಕೇರಳ
ಮರು ಯವನ ಸಂವೀರ ಕೌಸಲ ಪಾಂಡ್ಯ ಮಾಗಧರು
ಧರಣಿಪನ ಬಲವಂಕದಲಿ ಮೋ
ಹರಿಸಿ ಪಾಂಚಾಲಕರು ಚೂಣಿಯೊ
ಳುರವಣಿಸಿದರು ನಕುಲ ಸಾತ್ಯಕಿ ಭೀಮನಂದನರು (ದ್ರೋಣ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನ ಎಡಭಾಗದಲ್ಲಿ ಮತ್ಸ್ಯ, ಕೈಕೆಯ ಚೈದ್ಯ ಕೇರಳ ಯವನ ಸಂವೀರ, ಕೌಸಲ ಪಂಡ್ಯ ಮಾಗಧ ರಾಜರೂ, ಬಲದಲ್ಲಿ ಪಾಂಚಾಲರೂ ಯುದ್ಧಾಸಕ್ತರಾಗಿ ಬರುತ್ತಿದ್ದರು. ಇವರೊಡನೆ ನಕುಲ ಸಾತ್ಯಕಿ ಘಟೋತ್ಕಚರೂ ಬಂದರು.

ಅರ್ಥ:
ಅರಸ: ರಾಜ; ಎಡ: ವಾಮಭಾಗ; ಅಂಕ: ಭಾಗ; ಬಿರು: ಗಟ್ಟಿಯಾದುದು; ಧರಣಿಪ: ರಾಜ; ಬಲ: ದಕ್ಷಿಣ ಪಾರ್ಶ್ವ; ಮೋಹರ: ಸೈನ್ಯ, ದಂಡು; ಚೂಣಿ: ಮೊದಲು, ಕೊನೆ; ಉರವಣಿಸು: ಉತ್ಸಾಹದಿಂದಿರು, ಆತುರಿಸು; ನಂದನ: ಮಗ;

ಪದವಿಂಗಡಣೆ:
ಅರಸನ್+ಎಡವಂಕದಲಿ +ಮತ್ಸ್ಯರು
ಬಿರುದ +ಕೈಕೆಯ +ಚೈದ್ಯ +ಕೇರಳ
ಮರು +ಯವನ +ಸಂವೀರ +ಕೌಸಲ+ ಪಾಂಡ್ಯ +ಮಾಗಧರು
ಧರಣಿಪನ +ಬಲವಂಕದಲಿ +ಮೋ
ಹರಿಸಿ +ಪಾಂಚಾಲಕರು +ಚೂಣಿಯೊಳ್
ಉರವಣಿಸಿದರು +ನಕುಲ +ಸಾತ್ಯಕಿ +ಭೀಮನಂದನರು

ಅಚ್ಚರಿ:
(೧) ಪಾಂಡವರ ಪಕ್ಷದಲ್ಲಿದ್ದ ರಾಜರು – ಮತ್ಸ್ಯ, ಕೈಕೆಯ, ಚೈದ್ಯ, ಕೇರಳ, ಯವನ, ಸಂವೀರ, ಕೌಸಲ ಪಾಂಡ್ಯ, ಮಾಗಧ

ಪದ್ಯ ೧೮: ಭೀಷ್ಮನನ್ನು ಯಾರು ತಡೆದರು?

ಮೇಲೆ ಹೇಳಿಕೆಯಾಯ್ತು ವರ ಪಾಂ
ಚಾಲರಿಗೆ ಚೈದ್ಯರಿಗೆ ಮತ್ಸ್ಯ ನೃ
ಪಾಲ ಸೃಂಜಯರಾದಿಯಾದಕ್ಷೋಹಿಣೀ ದಳಕೆ
ಸೂಳು ಮಿಗೆ ಗರ್ಜಿಸುವ ಘನ ನಿ
ಸ್ಸಾಳ ಕೋಟಿಯ ಗಡಣದೊಳು ಕೆಂ
ಗೋಲ ಮಳೆಗರೆಯುತ್ತ ಗಂಗಾಸುತನ ಕೆಣಕಿದರು (ಭೀಷ್ಮ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೂಡಲೇ ಪಾಂಡವ ಸೈನ್ಯದಲ್ಲಿ ಪಾಂಚಾಲ, ಚೈದ್ಯ, ವಿರಾಟ ಸೃಂಜಯ ಮೊದಲಾದವರ ಅಕ್ಷೋಹಿಣೀ ಸೈನ್ಯಗಳಿಗೆ ಭೀಷ್ಮನನ್ನೆದುರಿಸಲು ಆಜ್ಞೆಯಾಯಿತು. ರಣಕಹಳೆ ರಣಭೇರಿಗಳು ಮೊರೆಯಲು, ಅವರೆಲ್ಲರೂ ಕೆಂಪಾದ ಬಾಣಗಳ ಮಳೆ ಸುರಿಸುತ್ತಾ ಭೀಷ್ಮನನ್ನು ತಡೆದರು.

ಅರ್ಥ:
ಹೇಳು: ತಿಳಿಸು; ವರ: ಶ್ರೇಷ್ಠ; ನೃಪಾಲ: ರಾಜ; ಆದಿ: ಮುಂತಾದ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ದಳ: ಸೈನ್ಯ; ಸೂಳು: ಆವೃತ್ತಿ, ಬಾರಿ; ಗರ್ಜಿಸು: ಆರ್ಭಟಿಸು; ಘನ: ಶ್ರೇಷ್ಠ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ; ಗಡಣ: ಗುಂಪು; ಕೆಂಗೋಲು: ಕೆಂಪಾದ ಬಾಣ; ಮಳೆ: ವರ್ಷ; ಸುತ: ಮಗ; ಕೆಣಕು: ರೇಗಿಸು, ಪ್ರಚೋದಿಸು;

ಪದವಿಂಗಡಣೆ:
ಮೇಲೆ +ಹೇಳಿಕೆಯಾಯ್ತು +ವರ +ಪಾಂ
ಚಾಲರಿಗೆ +ಚೈದ್ಯರಿಗೆ+ ಮತ್ಸ್ಯ +ನೃ
ಪಾಲ +ಸೃಂಜಯರಾದಿಯಾದ್+ ಅಕ್ಷೋಹಿಣೀ +ದಳಕೆ
ಸೂಳು +ಮಿಗೆ +ಗರ್ಜಿಸುವ +ಘನ +ನಿ
ಸ್ಸಾಳ +ಕೋಟಿಯ +ಗಡಣದೊಳು +ಕೆಂ
ಗೋಲ +ಮಳೆಗರೆಯುತ್ತ +ಗಂಗಾಸುತನ +ಕೆಣಕಿದರು

ಅಚ್ಚರಿ:
(೧) ಯುದ್ಧದ ವಿವರಣೆ – ಸೂಳು ಮಿಗೆ ಗರ್ಜಿಸುವ ಘನ ನಿಸ್ಸಾಳ ಕೋಟಿಯ ಗಡಣದೊಳು ಕೆಂಗೋಲ ಮಳೆಗರೆಯುತ್ತ

ಪದ್ಯ ೧೫: ದ್ವಾರಕೆಯ ಸೈನ್ಯದ ಗಾತ್ರವೇನು?

ಅವರೊಳೊಂದಕ್ಷೋಹಿಣಿಯದು ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕಂಡಿಹನು
ಅವರ ಹೊರೆಯಲಿ ವೀರಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು (ಭೀಷ್ಮ ಪರ್ವ, ೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅವರ ಬಳಿ ಒಂದು ಅಕ್ಷೋಹಿಣಿ ಸೈನ್ಯವಿದೆ, ಅದು ಕೃಷ್ಣನ ಮನೆಯಾದ ದ್ವಾರಕೆಯದು, ಧೃಷ್ಟಕೇತು, ಚೈದ್ಯನ ಮಗ ಅಲ್ಲಿದ್ದಾರೆ, ಅವರ ಬಳಿ ಯುದ್ಧದಲ್ಲಿ ಧುರಂಧರರಾದ ಸಹದೇವ ನಕುಲರಿದ್ದಾರೆ.

ಅರ್ಥ:
ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಮಾಧವ: ಕೃಷ್ಣ; ಮನೆ: ಆಲಯ; ಪ್ರವರ: ಪ್ರಧಾನ ವ್ಯಕ್ತಿ; ನಂದನ: ಮಗ; ಹೊರೆ: ಸಮೀಪ; ವೀರ: ಪರಾಕ್ರಮ; ಸೇನ: ಸೈನ್ಯ; ನಿವಹ: ಗುಂಪು; ಹರೆ: ವಿಸ್ತಾರ; ಆಹವ: ಯುದ್ಧ; ಧುರಂಧರ: ಪರಾಕ್ರಮಿ;

ಪದವಿಂಗಡಣೆ:
ಅವರೊಳ್+ಒಂದಕ್ಷೋಹಿಣಿಯದು+ ಮಾ
ಧವನ +ಮನೆಯದು +ಧೃಷ್ಟಕೇತು
ಪ್ರವರನ್+ಆತನು +ಚೈದ್ಯ+ನಂದನನ್+ಅವರ+ ಕಂಡಿಹನು
ಅವರ+ ಹೊರೆಯಲಿ +ವೀರ+ಸೇನಾ
ನಿವಹದೊಳು +ಸಹದೇವನ್+ಆತನ
ಸವಹರೆಯ +ನಕುಲಾಂಕನಿವರ+ಆಹವ +ಧುರಂಧರರು

ಅಚ್ಚರಿ:
(೧) ದ್ವಾರಕೆ ಎಂದು ಹೇಳಲು – ಮಾಧವನ ಮನೆ ಪದದ ಬಳಕೆ

ಪದ್ಯ ೪೦: ದ್ರೌಪದಿ ದಾಸಿಯಾಗಲು ಸಾಧ್ಯವೇ?

ತಿರುವ ಕೊರಳಲಿ ತೊಡಿಸಲಾರದೆ
ತೆರಳಿದರು ಚತುರಂತ ಪೃಥ್ವೀ
ಶ್ವರರು ಮಾಗಧ ಚೈದ್ಯ ಮೊದಲಾದತುಳ ಭುಜಬಲರು
ತಿರುವನೇರಿಸಿ ಧನುವನುಗಿದ
ಬ್ಬರಿಸಿ ಗಗನದ ಯಂತ್ರಮತ್ಸ್ಯವ
ಮುರಿದ ಪಾಂಡವರರಸಿ ತೊತ್ತಹಳೇ ಶಿವಾ ಎಂದ (ಸಭಾ ಪರ್ವ, ೧೫ ಸಂಧಿ, ೪೦ ಪದ್ಯ)

ತಾತ್ಪರ್ಯ:
ದ್ರುಪದನ ಮಗಳ ಸ್ವಯಂವರದಲ್ಲಿ ಹೆದೆಯನ್ನು ಬಿಲ್ಲಿಗೆ ತೊಡಿಸಲಾಗದೆ ಜರಾಸಂಧ, ಶಿಶುಪಾಲ ಮೊದಲಾದವರೆಲ್ಲರೂ ಸೇರಿ, ನಾಲ್ಕುಸಮುದ್ರ ಪರ್ಯಂತ ರಾಜರೆಲ್ಲರೂ ಸೋತು ಹಿಂದಿರುಗಿದರು. ಆ ಬಿಲ್ಲಿಗೆ ಹೆದೆಯನ್ನೇರಿಸಿ ಆಕಾಶದಲ್ಲಿದ್ದ ಮತ್ಸ್ಯಯಂತ್ರವನ್ನು ಭೇದಿಸಿದ ಪಾಂಡವರ ಪತ್ನಿಯು ದಾಸಿಯಾಗುವಳೇ? ಶಿವ ಶಿವಾ ಎಂದು ವಿದುರನು ನೊಂದನು.

ಅರ್ಥ:
ತಿರುವ: ತಿರುಗುವ, ಚಲಿಸುವ; ಕೊರಳು: ಕುತ್ತಿಗೆ; ತೊಡು: ಬಾಣವನ್ನು ಹೂಡು; ತೆರಳು: ಹೋಗು, ನಡೆ; ಚತುರಂತ: ನಾಲ್ಕು ದಿಕ್ಕುಗಳಲ್ಲಿಯೂ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಮಾಗಧ: ಜರಸಂಧ; ಚೈದ್ಯ: ಶಿಶುಪಾಲ; ಮೊದಲಾದ: ಮುಂತಾದ; ಅತುಳು: ಬಹಳ; ಭುಜಬಲ: ಪರಾಕ್ರಮಿ; ಧನು: ಬಿಲ್ಲು; ಉಗಿ: ಕಳಚು, ಹೊರದೂಡು; ಅಬ್ಬರ: ಅತಿಶಯ; ಗಗನ: ಆಗಸ; ಯಂತ್ರ: ಉಪಕರಣ; ಮತ್ಸ್ಯ: ಮೀನು; ಅರಸಿ: ರಾಣಿ; ತೊತ್ತು: ದಾಸಿ;

ಪದವಿಂಗಡಣೆ:
ತಿರುವ +ಕೊರಳಲಿ +ತೊಡಿಸಲಾರದೆ
ತೆರಳಿದರು +ಚತುರಂತ+ ಪೃಥ್ವೀ
ಶ್ವರರು +ಮಾಗಧ +ಚೈದ್ಯ +ಮೊದಲಾದ್+ಅತುಳ +ಭುಜಬಲರು
ತಿರುವನೇರಿಸಿ+ ಧನುವನ್+ಉಗಿದ್
ಅಬ್ಬರಿಸಿ +ಗಗನದ +ಯಂತ್ರ+ಮತ್ಸ್ಯವ
ಮುರಿದ+ ಪಾಂಡವರ್+ಅರಸಿ +ತೊತ್ತಹಳೇ +ಶಿವಾ +ಎಂದ

ಅಚ್ಚರಿ:
(೧) ತಿರುವ – ೧, ೪ ಸಾಲಿನ ಮೊದಲ ಪದ
(೨) ದ್ರೌಪದಿಯನ್ನು ಪಡೆಯುವುದು ಎಷ್ಟು ಕಷ್ಟ ಎಂದು ವಿವರಿಸುವ ಪದ್ಯ

ಪದ್ಯ ೬೬: ಯುದ್ಧವನ್ನು ಬಿಟ್ಟುಹೋದ ರಾಜರಿಗೆ ಶಿಶುಪಾಲನು ಏನು ಹೇಳಿದ?

ಚೆಲ್ಲಿತೀ ನೃಪಯೂಥ ಜಾರಲಿ
ಜಳ್ಳುಗಳು ಜಲಜಾಕ್ಷನ ಪ್ರತಿ
ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ
ಖುಲ್ಲರಾಯರು ನಿಲಲಿ ಗೊಲ್ಲರ
ಹಳ್ಳಿಕಾರನ ಕೂಡೆ ಬಿರುದಿನ
ಕಲ್ಲಿಗಳ ತಮ್ಮೆದೆಯೊಳೊತ್ತಲಿಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನು ಯುದ್ಧವನ್ನು ಬಿಟ್ಟು ಹೊರಟನು, ಅವನ ಹಿಂದೆ ಹಲವಾರು ರಾಜರು ಹೊರಟರು, ಹೀಗೆ ರಾಜರ ಸಮೂಹವು ಯುದ್ಧದಿಂದ ದೂರವುಳಿಯಲು, ಕೋಪಗೊಂಡ ಶಿಶುಪಾಲನು ಎಲ್ಲಾ ರಾಜರು ಓಡಿಹೋಗಲಿ, ಈ ಸತ್ವವಿಲ್ಲದ ರಾಜರಿಂದ ಏನು ಪ್ರಯೋಜನ, ನಾನೊಬ್ಬನೆ ಕೃಷ್ಣನನ್ನು ಎದುರಿಸಲು ಸಾಲದೇ? ದುಷ್ಟರಾದ ಈ ರಾಯರು ಆ ಗೋಕುಲದ ಗೋಪನೊಡನೆ ಹೋಗಿ ಅವನು ತರುವ ಬುತ್ತಿಯ ಚೀಲವನ್ನು ತಮ್ಮೆದೆಗೆ ಅವಚಿಕೊಳ್ಳಲಿ ಎಂದು ಹಂಗಿಸಿದನು.

ಅರ್ಥ:
ಚೆಲ್ಲು: ಹರಡು; ನೃಪ: ರಾಜ; ಯೂಥ: ಗುಂಪು, ಹಿಂಡು; ಜಾರ: ಬೀಳು; ಜೊಳ್ಳು: ಹುರುಳಿಲ್ಲದ; ಸಾರವಿಲ್ಲದ; ಜಲಜಾಕ್ಷ: ಕಮಲದಂತ ಕಣ್ಣುಳ್ಳವ (ಕೃಷ್ಣ); ಪ್ರತಿ: ಎದುರು; ಮಲ್ಲ: ಶೂರ; ಸಾಕು: ಇನ್ನು ಬೇಡ; ಹಾರು: ಲಂಘಿಸು,ವೇಗವಾಗಿ ಚಲಿಸು; ಕೆಲಬಲ: ಅಕ್ಕಪಕ್ಕ, ಎಡಬಲ; ಖುಲ್ಲ: ದುಷ್ಟ, ನೀಚ, ಅಲ್ಪ; ರಾಯ: ರಾಜ; ನಿಲಲಿ: ನಿಂತುಕೊಳ್ಳಲಿ; ಗೊಲ್ಲರ: ಗೋಪಾಲಕ; ಹಳ್ಳಿಕಾರ: ಹಳ್ಳಿಯವ; ಕೂಡೆ: ಜೊತೆ; ಬಿರುದು: ಪ್ರಸಿದ್ಧಿ, ಪ್ರಖ್ಯಾತಿ; ಕಲ್ಲಿ: ಹೆಣಿಕೆಯ ಚೀಲ; ಎದೆ: ವಕ್ಷಸ್ಥಳ; ಒತ್ತು: ಹತ್ತಿರ, ಲೇಪಿಸು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಚೆಲ್ಲಿತೀ+ ನೃಪಯೂಥ +ಜಾರಲಿ
ಜಳ್ಳುಗಳು +ಜಲಜಾಕ್ಷನ+ ಪ್ರತಿ
ಮಲ್ಲ+ ತಾನೇ +ಸಾಲದೇ+ ಹಾರುವೆನೆ +ಕೆಲಬಲನ
ಖುಲ್ಲರಾಯರು+ ನಿಲಲಿ +ಗೊಲ್ಲರ
ಹಳ್ಳಿಕಾರನ+ ಕೂಡೆ +ಬಿರುದಿನ
ಕಲ್ಲಿಗಳ+ ತಮ್ಮೆದೆಯೊಳ್+ಒತ್ತಲಿ+ಎಂದನಾ ಚೈದ್ಯ

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜಾರಲಿ ಜಳ್ಳುಗಳು ಜಲಜಾಕ್ಷನ
(೨) ಶಿಶುಪಾಲನ ಹಿರಿಮೆ ತಾನೇ ಹೇಳುವ ಪರಿ – ಪ್ರತಿ ಮಲ್ಲ ತಾನೇ ಸಾಲದೇ ಹಾರುವೆನೆ ಕೆಲಬಲನ