ಪದ್ಯ ೧೨: ಕೌರವನು ಹೇಗೆ ಮೂರ್ಛಿತನಾದನು?

ದೂಟಿ ಬಿದ್ದವು ಸೀಸಕವು ಶತ
ಕೋಟಿ ಘಾಯದ ಘಟನೆಯೊಳು ಶತ
ಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ
ತಾಟಿತಸು ಕಂಠದಲುಸುರ ಪರಿ
ಪಾಟಿ ತಪ್ಪಿತು ಮೃತ್ಯುವಿನ ದರ
ಚೀಟಿ ಹಿಡಿದನೊ ಹೇಳೆನಲು ಮಲಗಿದನು ಮೈಮರೆದು (ಗದಾ ಪರ್ವ, ೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸಿಡಿಲ ಹೊಡೆತಕ್ಕೆ ಹಿಮಾಲಯದ ಶಿಖರ ಪುಡಿ ಪುಡಿಯಾದಂತೆ ಶಿರಸ್ತ್ರಾಣದ ಮಣಿಗಳು ಎಲ್ಲಾ ಕಡೆ ಸಿಡಿದವು. ಪ್ರಾಣವಿನ್ನೇನು ಹಾರಿಹೋಯಿತು, ಉಸಿರಾಟ ತಪ್ಪಿಯೇ ಬಿಟ್ಟಿತು, ಮೃತ್ಯುವಿನ ಚೀಟಿಯನ್ನು ಕೊಂಡುಕೊಂಡನೋ ಎಂಬಂತೆ ಕೌರವನು ಮೂರ್ಛಿತನಾದನು.

ಅರ್ಥ:
ದೂಟು: ಕುಪ್ಪಳಿಸು, ಹಾರು; ಬಿದ್ದು: ಬೀಳು; ಸೀಸಕ: ಶಿರಸ್ತ್ರಾಣ; ಶತ: ನೂರು; ಘಾಯ: ಪೆಟ್ಟು; ಘಟನೆ: ಆಗುವಿಕೆ; ಸಿಡಿ: ಹೊರಹೊಮ್ಮು; ಹೇಮಾಚಳ: ಹಿಮಾಲಯ; ಅಚಲ: ಬೆಟ್ಟ; ತುದಿ: ಅಗ್ರಭಾಗ; ತಾಟು: ತಾಗು; ಅಸು: ಪ್ರಾಣ; ಕಂಠ: ಗಂಟಲು; ಉಸುರು: ಜೀವ; ಪರಿಪಾಟಿ: ಸಮಾನ; ತಪ್ಪು: ಸರಿಯಿಲ್ಲದ; ಮೃತ್ಯು: ಸಾವು; ದರಚೀಟಿ: ಅಪ್ಪಣೆ ಚೀಟಿ; ಹಿಡಿ: ಗ್ರಹಿಸು; ಹೇಳು: ತಿಳಿಸು; ಮಲಗು: ನಿದ್ರಿಸು; ಮೈಮರೆದು: ಜ್ಞಾನವಿಲ್ಲದ ಸ್ಥಿತಿ;

ಪದವಿಂಗಡಣೆ:
ದೂಟಿ+ ಬಿದ್ದವು +ಸೀಸಕವು +ಶತ
ಕೋಟಿ +ಘಾಯದ +ಘಟನೆಯೊಳು +ಶತ
ಕೋಟಿ +ಘಾಯಕೆ +ಸಿಡಿದ +ಹೇಮಾಚಳದ +ತುದಿಯಂತೆ
ತಾಟಿತ್+ಅಸು+ಕಂಠದಲ್+ಉಸುರ +ಪರಿ
ಪಾಟಿ +ತಪ್ಪಿತು +ಮೃತ್ಯುವಿನ +ದರ
ಚೀಟಿ +ಹಿಡಿದನೊ +ಹೇಳೆನಲು +ಮಲಗಿದನು +ಮೈಮರೆದು

ಅಚ್ಚರಿ:
(೧) ಶತಕೋಟಿ – ೧, ೨ ಸಾಲಿನ ಕೊನೆಯ ಪದ
(೨) ಕೋಟಿ, ಚೀಟಿ, ಪರಿಪಾಟಿ, ದೂಟಿ – ಪ್ರಾಸ ಪದಗಳು
(೩) ಉಪಮಾನದ ಪ್ರಯೋಗ – ಶತಕೋಟಿ ಘಾಯಕೆ ಸಿಡಿದ ಹೇಮಾಚಳದ ತುದಿಯಂತೆ

ಪದ್ಯ ೨೭: ದುರ್ಯೋಧನನು ಎಷ್ಟು ಸೈನ್ಯದ ಜೊತೆ ಬಂದನು?

ಮೂರು ಕೋಟಿ ಪದಾತಿಯಲಿ ದೊರೆ
ಯೇರಿದನಲೈ ನಿನ್ನ ಮಗನು
ಬ್ಬೇರಿರಾವ್ತರು ಹೊಕ್ಕರೆರಡೇ ಲಕ್ಕ ತೇಜಿಯಲಿ
ಕೀರಿದರು ಮಾರೊಡ್ಡನಿವರವ
ರೇರಿ ಹೊಯ್ದರು ನಿನ್ನವರನೊಗು
ವೇರ ಬಾಯ್ಗಳ ರುಧಿರಜಲವದ್ದುದು ಚತುರ್ಬಲವ (ಶಲ್ಯ ಪರ್ವ, ೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ದುರ್ಯೋಧನನು ಮೂರುಕೋಟಿ ಪದಾತಿಗಳೊಡನೆ ಕದನಕ್ಕೆ ಬಂದನು. ಎರದು ಲಕ್ಷ ಕುದುರೆಗಲನ್ನೇರಿ ರಾವುತರು ಅಬ್ಬರಿಸುತ್ತಾ ಮುನ್ನುಗ್ಗಿದರು. ಕುರುಸೇನೆಯು ವಿರೋಧಿಸೇನೆಯನ್ನು ತಡೆದು ಹೊಡೆಯಿತು. ಅವರು ನಿಮ್ಮವರನ್ನು ಬಡಿದರು. ಚತುರಂಗ ಸೇನೆಯು ರಕ್ತದಿಂದ ತೋದು ಹೋಯಿತು.

ಅರ್ಥ:
ಕೋಟಿ: ಅಸಂಖ್ಯಾತ; ಪದಾತಿ: ಸೈನಿಕ; ದೊರೆ: ರಾಜ; ಉಬ್ಬೇರು: ಉತ್ಸಾಹದಿಂದ ಮೇಲೆ ಬೀಳು; ರಾವುತ: ಕುದುರೆ ಮೇಲೆ ಕೂತು ಯುದ್ಧ ಮಾಡುವವ; ಹೊಕ್ಕು: ಸೇರು; ತೇಜಿ: ಕುದುರೆ; ಕೀರು: ಕೂಗು, ಅರಚು; ಹೊಯ್ದು: ಹೊಡೆ; ರುಧಿರಜಲ: ರಕ್ತದ ನೀರು; ಅದ್ದು: ತೋಯು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಒಗು: ಹೊರಹೊಮ್ಮುವಿಕೆ, ಉತ್ಸಾಹ;

ಪದವಿಂಗಡಣೆ:
ಮೂರು +ಕೋಟಿ +ಪದಾತಿಯಲಿ +ದೊರೆ
ಏರಿದನಲೈ +ನಿನ್ನ +ಮಗನ್
ಉಬ್ಬೇರಿ+ರಾವ್ತರು+ ಹೊಕ್ಕರ್+ಎರಡೇ+ ಲಕ್ಕ+ ತೇಜಿಯಲಿ
ಕೀರಿದರು +ಮಾರೊಡ್ಡನ್+ಇವರವರ್
ಏರಿ +ಹೊಯ್ದರು +ನಿನ್ನವರನ್+ಒಗುವ್
ಏರ +ಬಾಯ್ಗಳ +ರುಧಿರಜಲವ್+ಅದ್ದುದು +ಚತುರ್ಬಲವ

ಅಚ್ಚರಿ:
(೧) ರಕ್ತವನ್ನು ಹೇಳಲು – ರುಧಿರಜಲ ಪದದ ಪ್ರಯೋಗ
(೨) ಏರಿ, ಉಬ್ಬೇರಿ, ಕೀರಿ – ಪ್ರಾಸ ಪದಗಳು

ಪದ್ಯ ೭: ಕೌರವಸೇನೆಯು ಹೇಗೆ ಕಂಡಿತು?

ಹತ್ತು ಸಾವಿರದೇಳುನೂರರು
ವತ್ತು ಗಜ ಹನ್ನೊಂದು ಸಾವಿರ
ಹತ್ತಿದವು ರಥವೆರಡು ಲಕ್ಕವನೆಣಿಸಿದರು ಹಯವ
ಪತ್ತಿ ಮೂರೇ ಕೋಟಿಯದು ಕೈ
ವರ್ತಿಸಿತು ದಳಪತಿಗೆ ಸಾಗರ
ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ (ಶಲ್ಯ ಪರ್ವ, ೨ ಸಂಧಿ, ೭ ಪದ್ಯ)

ತಾತ್ಪರ್ಯ:
ಹತ್ತು ಸಾವಿರದ ಏಳುನೂರು ಅರವತ್ತು ಆನೆಗಳು, ಹನ್ನೊಂದು ಸಾವಿರ ರಥಗಳು, ಒಂದು ಲಕ್ಷ ಕುದುರೆಗಳು, ಮೂರು ಕೋಟಿ ಕಾಲಾಳುಗಳು, ಶಲ್ಯನ ಆಜ್ಞೆಯನ್ನು ಕಾದು ನಿಂತರು ಸಾಗರದಂತಿದ್ದ ಕೌರವಸೇನೆ ಬತ್ತಿಹೋಗಿ ತಳದಲ್ಲಿ ನಿಂತ ನೀರಿನಂತೆ ಕಾಣಿಸಿತು.

ಅರ್ಥ:
ಸಾವಿರ: ಸಹಸ್ರ; ಗಜ: ಆನೆ; ಹತ್ತು: ಮೇಲೇರು; ರಥ: ಬಂಡಿ; ಎಣಿಸು: ಲೆಕ್ಕ ಹಾಕು; ಹಯ: ಕುದುರೆ; ಪತ್ತಿ: ಪದಾತಿ; ವರ್ತಿಸು: ಚಲಿಸು, ಗಮಿಸು; ದಳಪತಿ: ಸೇನಾಧಿಪತಿ; ಸಾಗರ: ಸಮುದ್ರ; ಬತ್ತು: ಬರಡಾಗು; ನಿಂದು: ನಿಲ್ಲು; ನೀರು: ಜಲ;

ಪದವಿಂಗಡಣೆ:
ಹತ್ತು+ ಸಾವಿರದ್+ಏಳುನೂರ್
ಅರುವತ್ತು +ಗಜ +ಹನ್ನೊಂದು +ಸಾವಿರ
ಹತ್ತಿದವು +ರಥವೆರಡು +ಲಕ್ಕವನ್+ಎಣಿಸಿದರು +ಹಯವ
ಪತ್ತಿ +ಮೂರೇ +ಕೋಟಿಯದು +ಕೈ
ವರ್ತಿಸಿತು +ದಳಪತಿಗೆ+ ಸಾಗರ
ಬತ್ತಲ್+ಎಡೆಯಲಿ +ನಿಂದ +ನೀರವೊಲಾಯ್ತು +ಕುರುಸೇನೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಾಗರ ಬತ್ತಲೆಡೆಯಲಿ ನಿಂದ ನೀರವೊಲಾಯ್ತು ಕುರುಸೇನೆ
(೨) ಹತ್ತು, ನೂರು, ಸಾವಿರ, ಲಕ್ಕ, ಕೋಟಿ – ಎಣಿಕೆಯ ಬಳಕೆ

ಪದ್ಯ ೩೬: ಪಾಂಚಾಲ ಸೈನ್ಯದಲ್ಲಿ ಎಷ್ಟು ಮಂದಿ ಅಳಿದರು?

ಆರು ಸಾವಿರ ತೇರು ಗಜ ಹದಿ
ನಾರುಸಾವಿರ ಲಕ್ಷ ಕುದುರೆಗ
ಳಾರು ಕೋಟಿ ಪದಾತಿ ಮುಗ್ಗಿತು ಮತ್ತೆ ಸಂದಣಿಸಿ
ಆರು ಲಕ್ಷ ತುರಂಗ ನೃಪರೈ
ನೂರು ಗಜಘಟೆ ಲಕ್ಷ ರಥ ಹದಿ
ಮೂರು ಸಾವಿರವಳಿದುದರಿಪಾಂಚಾಲ ಸೇನೆಯಲಿ (ದ್ರೋಣ ಪರ್ವ, ೧೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಆರು ಸಾವಿರ ರಥಗಳು, ಹದಿನಾರು ಸಾವಿರ ಆನೆಗಳು, ಲಕ್ಷ ಕುದುರೆಗಳು, ಆರು ಕೋಟಿ ಕಾಲಾಳುಗಳು ಸತ್ತರು. ಮತ್ತೆ ಸೈನ್ಯವು ಒಂದಾಗಿ ಮುತ್ತಿತು. ಆಗ ಪಾಂಚಾಲ ಸೇನೆಯಲ್ಲಿ ಆರು ಲಕ್ಷ ಕುದುರೆಗಳು, ಐನೂರು ರಾಜರು, ಲಕ್ಷ ಆನೆಗಳು, ಹದಿಮೂರು ಸಾವಿರ ರಥಗಳು ನಿರ್ನಾಮವಾದವು.

ಅರ್ಥ:
ಸಾವಿರ: ಸಹಸ್ರ; ತೇರು: ಬಂಡಿ, ರಥ; ಗಜ: ಆನೆ; ಕುದುರೆ: ಅಶ್ವ; ಪದಾತಿ: ಕಾಲಾಳು; ಮುಗ್ಗು: ಬಾಗು, ಮಣಿ; ಸಂದಣಿ: ಗುಂಪು; ನೃಪ: ರಾಜ; ಗಜಘಟೆ: ಆನೆಗಳ ಗುಂಪು; ರಥ: ಬಂಡಿ; ಅಳಿ: ನಾಶ; ಅರಿ: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಆರು +ಸಾವಿರ +ತೇರು +ಗಜ +ಹದಿ
ನಾರು+ಸಾವಿರ +ಲಕ್ಷ +ಕುದುರೆಗಳ್
ಆರು +ಕೋಟಿ +ಪದಾತಿ +ಮುಗ್ಗಿತು +ಮತ್ತೆ +ಸಂದಣಿಸಿ
ಆರು +ಲಕ್ಷ +ತುರಂಗ +ನೃಪರ್
ಐನೂರು +ಗಜಘಟೆ +ಲಕ್ಷ +ರಥ +ಹದಿ
ಮೂರು +ಸಾವಿರವ್+ಅಳಿದುದ್+ಅರಿ+ಪಾಂಚಾಲ +ಸೇನೆಯಲಿ

ಅಚ್ಚರಿ:
(೧) ಆರು, ಹದಿನಾರು; ಮೂರು, ಐನೂರು – ಪ್ರಾಸ ಪದಗಳು
(೨) ನೂರು, ಸಾವಿರ, ಲಕ್ಷ, ಕೋಟಿ – ಸಂಖ್ಯೆಗಳನ್ನು ಎಣಿಸುವ ಪದಗಳು

ಪದ್ಯ ೨೧: ದ್ರೋಣನ ಪ್ರಚಂಡತನವು ಹೇಗಿತ್ತು?

ಮತ್ತೆ ಕವಿದುದು ಹೆಣನ ತುಳಿದೊ
ತ್ತೊತ್ತೆಯಲಿ ರಿಪುಸೇನೆ ಮಂಜಿನ
ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ
ಮತ್ತೆ ನಿಮಿಷಾರ್ಧದಲಿ ಕಾಲನ
ತುತ್ತು ಜೋಡಿಸಿತೇನನೆಂಬೆನು
ಹತ್ತು ಕೋಟಿಯನಿಲುಹಿದನು ರಿಪುಚಾತುರಂಗದಲಿ (ದ್ರೋಣ ಪರ್ವ, ೧೮ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪಾಂಚಾಲ ಸೇನೆಯು ದ್ರೋಣನನ್ನು ಮತ್ತೆ ಮುತ್ತಿತು. ಮಂಜಿನಲ್ಲಿ ಮರೆಯಾದ ಸೂರ್ಯನಂತೆ ದ್ರೋನನು ಕಾಣಿಸಲೇ ಇಲ್ಲ. ನಿಮಿಷಾರ್ಧದಲ್ಲಿ ಹತ್ತು ಕೋಟಿ ಸೈನ್ಯವನ್ನು ಕೊಂದು ದ್ರೋನನು ಪ್ರಚಂಡತನವನ್ನು ತೋರಿಸಿದನು.

ಅರ್ಥ:
ಕವಿ: ಆವರಿಸು; ಹೆಣ: ಜೀವವಿಲ್ಲದ ಶರೀರ; ತುಳಿ: ಮೆಟ್ಟು; ಒತ್ತು: ಒತ್ತಡ; ರಿಪು: ವೈರಿ; ಸೇನೆ: ಸೈನ್ಯ; ಮಂಜು: ಇಬ್ಬನಿ, ಹಿಮ; ಮುತ್ತಿಗೆ: ಆವರಿಸುವಿಕೆ; ರವಿ: ಭಾನು; ಕಾಣು: ತೋರು; ಕಳಶ: ಕುಂಭ; ಸಂಭವ: ಹುಟ್ಟು; ಮತ್ತೆ: ಪುನಃ; ನಿಮಿಷ: ಕ್ಷಣ; ಕಾಲ: ಸಮಯ; ತುತ್ತು: ನಾಶಮಾಡು; ಜೋಡಿಸು: ಕೂಡಿಸು; ಹತ್ತು: ದಶ; ಕೋಟಿ: ಅಸಂಖ್ಯಾತ; ಇಳುಹು: ಇಳಿಸು, ಕತ್ತರಿಸು; ಚಾತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ;

ಪದವಿಂಗಡಣೆ:
ಮತ್ತೆ +ಕವಿದುದು +ಹೆಣನ +ತುಳಿದ್
ಒತ್ತೊತ್ತೆಯಲಿ +ರಿಪುಸೇನೆ +ಮಂಜಿನ
ಮುತ್ತಿಗೆಯ +ರವಿಯಂತೆ +ಕಾಣೆನು+ ಕಳಶಸಂಭವನ
ಮತ್ತೆ +ನಿಮಿಷಾರ್ಧದಲಿ +ಕಾಲನ
ತುತ್ತು +ಜೋಡಿಸಿತ್+ಏನನೆಂಬೆನು
ಹತ್ತು +ಕೋಟಿಯನ್+ ಇಳುಹಿದನು +ರಿಪು+ಚಾತುರಂಗದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳಿದೊತ್ತೊತ್ತೆಯಲಿ ರಿಪುಸೇನೆ ಮಂಜಿನ ಮುತ್ತಿಗೆಯ ರವಿಯಂತೆ ಕಾಣೆನು ಕಳಶಸಂಭವನ

ಪದ್ಯ ೩೦: ಸೈನ್ಯವು ದ್ರೋಣರನ್ನು ಹೇಗೆ ಎದುರು ನೋಡಿತು?

ಬಲವ ಕಲಿಯೇರಿಸಿ ಛಡಾಳದೊ
ಳುಲಿವ ಪಟಹ ಮೃದಂಗ ಕಹಳಾ
ವಳಿಯ ಬೊಗ್ಗಿನ ಬೊಬ್ಬಿರಿವ ನಿಸ್ಸಾಳ ಕೋಟಿಗಳ
ತಳಿತ ಝಲ್ಲರಿಗಳ ಪತಾಕಾ
ವಳಿಯ ಬಲಿದು ಪವಾಡಿಗಳ ಕಳ
ಕಳದ ಕೈವಾರದಲಿ ಕವಿದರು ದ್ರೋಣನಿದಿರಿನಲಿ (ದ್ರೋಣ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸೈನ್ಯಕ್ಕೆ ಪ್ರೋತ್ಸಾಹವನ್ನು ಕೊಟ್ಟು ಪಟಹ, ಮೃದಂಗ, ಕಹಳೆ, ನಿಸ್ಸಾಳ, ನಗಾರಿಗಳ ಸದ್ದು ಬೊಬ್ಬಿರಿಯುತ್ತಿರಲು, ಝಲ್ಲರಿ, ಧ್ವಜಗಳನ್ನು ಎತ್ತಿ ಕಟ್ಟಿರಲು, ಹೊಗಳುಭಟ್ಟರು ಘೋಷಿಸುತ್ತಿರಲು ಅವರು ದ್ರೋಣನನ್ನಿದಿರಿಸಿದರು.

ಅರ್ಥ:
ಬಲ: ಸೈನ್ಯ; ಕಲಿ: ಶೌರ್ಯ; ಏರು: ಹೆಚ್ಚಾಗು; ಛಡಾಳ: ಹೆಚ್ಚಳ, ಆಧಿಕ್ಯ; ಉಲಿ: ಶಬ್ದ; ಪಟಹ: ನಗಾರಿ; ಕಹಳೆ: ಕಾಳೆ, ರಣವಾದ್ಯ; ಆವಳಿ: ಗುಂಪು; ಬೊಗ್ಗು: ಕಹಳೆ; ಬೊಬ್ಬಿರಿ: ಗರ್ಜಿಸು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ತಳಿತ: ಚಿಗುರಿದ; ಝಲ್ಲರಿ: ಕುಚ್ಚು; ಪತಾಕ: ಬಾವುಟ; ಬಲಿ: ಹೆಚ್ಚು; ಪವಾಡಿ: ಹೊಗಳುಭಟ್ಟ, ಸ್ತುತಿಪಾಠಕ; ಕಳಕಳ: ಉದ್ವಿಗ್ನತೆ; ಕೈವಾರ: ಕೊಂಡಾಟ; ಕವಿ: ಆವರಿಸು; ಇದಿರು: ಎದುರು;

ಪದವಿಂಗಡಣೆ:
ಬಲವ+ ಕಲಿ+ಏರಿಸಿ +ಛಡಾಳದೊಳ್
ಉಲಿವ +ಪಟಹ +ಮೃದಂಗ +ಕಹಳಾ
ವಳಿಯ +ಬೊಗ್ಗಿನ +ಬೊಬ್ಬಿರಿವ +ನಿಸ್ಸಾಳ +ಕೋಟಿಗಳ
ತಳಿತ +ಝಲ್ಲರಿಗಳ +ಪತಾಕಾ
ವಳಿಯ +ಬಲಿದು +ಪವಾಡಿಗಳ +ಕಳ
ಕಳದ +ಕೈವಾರದಲಿ +ಕವಿದರು +ದ್ರೋಣನ್+ಇದಿರಿನಲಿ

ಅಚ್ಚರಿ:
(೧) ಕಹಳಾವಳಿ, ಪತಾಕಾವಳಿ – ಆವಳಿ ಪದದ ಬಳಕೆ
(೨) ಪಟಹ, ಮೃದಂಗ, ಕಹಳ, ಬೊಗ್ಗು, ನಿಸ್ಸಾಳ – ರಣವಾದ್ಯಗಳು

ಪದ್ಯ ೧೫: ಶಿವನಿಗೆ ಯಾರು ಜಯಘೋಷಗಳನ್ನು ಹಾಡುತ್ತಿದ್ದರು?

ಮುರಿಯೆ ಬಲವಂಕದಲುಘೇ ಎಂ
ದೆರಗಿದವು ಶ್ರುತಿಕೋಟಿ ವಾಮದ
ಕೊರಳ ಕೊಂಕಿನಲುಪನಿಷತ್ತುಗಳೆರಗಿದವು ಕೋಟಿ
ತಿರುಗೆ ಬೆನ್ನಲಿ ನೆರೆದ ಸಚರಾ
ಚರವುಘೇ ಎಂದುದು ಕಪರ್ದಿಯ
ಸರಿಸದಲಿ ಸಿಡಿಲಂತೆ ಮೊಳಗಿತು ವೀರ ಗಣನಿಕರ (ಕರ್ಣ ಪರ್ವ, ೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಶಿವನು ಬಲಕ್ಕೆ ನೋಡಲು ಅಸಂಖ್ಯಾತ ಶ್ರುತಿಗಳು ಉಘೇ ಎಂದು ನಮಸ್ಕರಿಸಿದವು. ಎಡಕ್ಕೆ ತಿರುಗಲು ಹಲವಾರು ಉಪನಿಷತ್ತುಗಳು ವಂದಿಸಿದವು. ಹಿಂದಕ್ಕೆ ತಿರುಗಿ ನೋಡಲು ಅಲ್ಲಿ ಸೇರಿದ್ದ ಎಲ್ಲಾ ಚರಾಚರರುಗಳು ಜಯಘೋಷವನ್ನು ಹಾಡುತ್ತಿದ್ದರು. ಶಿವನ ಗರ್ಜನೆಯೊಡನೆ
ವೀರರಾದ ಶಿವಗಣಗಳು ಸಿಡಿಲಿನಂತೆ ಗರ್ಜಿಸಿದವು.

ಅರ್ಥ:
ಮುರಿ: ತಿರುಗು; ಬಲ: ದಕ್ಷಿಣ ಪಾರ್ಶ್ವ; ವಂಕ: ಬದಿ; ಉಘೇ: ಜಯಘೋಷ; ಎರಗು:ನಮಸ್ಕಾರ ಮಾಡು; ಶ್ರುತಿ: ವೇದ; ಕೋಟಿ: ಲೆಕ್ಕವಿಲ್ಲದಷ್ಟು; ವಾಮ: ಎಡಭಾಗ; ಕೊರಳು: ಕಂಥ; ಕೊಂಕಿನ: ತಿರುಗು; ಉಪನಿಷತ್ತು: ವೇದದ ಕೊನೆಯ ಭಾಗ; ಎರಗು: ನಮಸ್ಕರಿಸು; ಕೋಟಿ: ಅಸಂಖ್ಯಾತ; ತಿರುಗು: ಸುತ್ತು, ದಿಕ್ಕನ್ನು ಬದಲಾಯಿಸು; ಬೆನ್ನು: ಹಿಂಬದಿ; ನೆರೆ: ಗುಂಪು; ಸಚರಾಚರ: ಚಲಿಸುವ ಮತ್ತು ಚಲಿಸದ; ಉಘೇ: ಜಯಘೋಷ; ಕಪರ್ದಿ:ಜಟಾಜೂಟವುಳ್ಳವ-ಶಿವ; ಸರಿಸು: ಪಕ್ಕಕ್ಕೆ ಇಡು; ಸರಿಸ: ಸಮೀಪ; ಸಿಡಿಲು: ಚಿಮ್ಮು, ಸಿಡಿ; ಮೊಳಗು: ಹೊರಹೊಮ್ಮು; ವೀರ: ಪರಾಕ್ರಮ; ಗಣ: ಶಿವನ ಪ್ರಮಥರ ಸಮೂಹ; ನಿಕರ: ಗುಂಪು;

ಪದವಿಂಗಡಣೆ:
ಮುರಿಯೆ+ ಬಲವಂಕದಲ್+ಉಘೇ +ಎಂದ್
ಎರಗಿದವು +ಶ್ರುತಿಕೋಟಿ +ವಾಮದ
ಕೊರಳ+ ಕೊಂಕಿನಲ್+ಉಪನಿಷತ್ತುಗಳ್+ಎರಗಿದವು +ಕೋಟಿ
ತಿರುಗೆ +ಬೆನ್ನಲಿ +ನೆರೆದ +ಸಚರಾ
ಚರವುಘೇ +ಎಂದುದು +ಕಪರ್ದಿಯ
ಸರಿಸದಲಿ +ಸಿಡಿಲಂತೆ +ಮೊಳಗಿತು +ವೀರ +ಗಣನಿಕರ

ಅಚ್ಚರಿ:
(೧) ಶಿವನನ್ನು ಕಪರ್ದಿ ಎಂದು ಕರೆದಿರುವುದು
(೨) ಉಘೇ, ಕೋಟಿ – ೨ ಬಾರಿ ಪ್ರಯೋಗ

ಪದ್ಯ ೨೨: ಕೃಷ್ಣನನ್ನು ಕಟ್ಟಿಹಾಕುವುದು ಹೇಗೆ ಹಾಸ್ಯಾಸ್ಪದದ ಸಂಗತಿ?

ಪೊಸತಲಾ ಶ್ರುತಿಕೋಟಿಗಳು ಉಪ
ನಿಷದ ರಾಶಿಗಳರಸಿ ಕಾಣವು
ಬಸಿರೊಳಗೆ ಬ್ರಹ್ಮಾಂಡಕೋಟಿಯ ಧರಿಸಿಕೊಂಡಿಹನು
ನುಸಿಗಳೀ ಕರ್ಣಾದಿ ದುಷ್ಟ
ಪ್ರಸರ ಮಂತ್ರಿಗಳಿವನ ನೇಮದೊ
ಳಸುರರಿಪುವನು ಬಿಗಿಯಲಳವಡಿಸಿದರು ನೇಣುಗಳ (ಉದ್ಯೋಗ ಪರ್ವ, ೧೦ ಸಂಧಿ, ೨೨ ಪದ್ಯ)

ತಾತ್ಪರ್ಯ:
ಕೃಷ್ಣನನ್ನು ವೇದಗಳು, ಅವುಗಳಲ್ಲಿರುವ ಉಪನಿಷತ್ತುಗಳು ಹುಡುಕಿದರು ಇವನನ್ನು ಕಾಣಲಾಗಲಿಲ್ಲ. ಇವನ ಹೊಟ್ಟೆಯಲ್ಲಿ ಅಸಂಖ್ಯಾತ ಬ್ರಹ್ಮಾಂಡಗಳಿವೆ. ಇಂತಹವನನ್ನು ಅಲ್ಪರಾದ ಕರ್ಣ ಮೊದಲಾದ ನೊರಜಿನಂತಿರುವ ದುರ್ಯೋಧನನ ಸಚಿವರು ಕಟ್ಟಿಹಾಕಲು ಹಗ್ಗವನ್ನು ಜೋಡಿಸುತ್ತಿದ್ದಾರೆ, ಇದು ಒಂದು ರೀತಿ ಹೊಸದಾಗಿ ತೋರುತ್ತಿದೆ, ಇದು ಹಾಸ್ಯಾಸ್ಪದವಲ್ಲವೇ ಎಂದು ವಿದುರ ಹೇಳಿದನು.

ಅರ್ಥ:
ಪೊಸ: ಹೊಸ; ಶ್ರುತಿ: ವೇದ; ಕೋಟಿ: ಅಸಂಖ್ಯಾತ; ಉಪನಿಷದ್: ವೇದಗಳ ಸಾರವನ್ನು ತಿಳಿಸುವ ಜ್ಞಾನದ ಆಗರ; ರಾಶಿ: ಗುಂಫು; ಅರಸು: ಹುಡುಕು; ಕಾಣು: ತೋರು; ಬಸಿರು: ಹೊಟ್ಟೆ; ಬ್ರಹ್ಮಾಂಡ: ಜಗತ್ತು; ಧರಿಸು: ಹೊರು; ನುಸಿ:ಧೂಳು, ನೊರಜು; ದುಷ್ಟ: ಕೆಟ್ಟ; ಪ್ರಸರ: ಹರಡು; ಮಂತ್ರಿ: ಸಚಿವ; ನೇಮ: ಕ್ರಮ, ರೀತಿ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಬಿಗಿ: ಹಿಡಿ, ಬಂಧಿಸು; ಅಳವಡಿಸು: ರೂಪಿಸು, ಹೊಂದಿಸು; ನೇಣು: ಹಗ್ಗ;

ಪದವಿಂಗಡಣೆ:
ಪೊಸತಲಾ+ ಶ್ರುತಿ+ಕೋಟಿಗಳು +ಉಪ
ನಿಷದ +ರಾಶಿಗಳ್+ಅರಸಿ +ಕಾಣವು
ಬಸಿರೊಳಗೆ +ಬ್ರಹ್ಮಾಂಡ+ಕೋಟಿಯ +ಧರಿಸಿ+ಕೊಂಡಿಹನು
ನುಸಿಗಳೀ+ ಕರ್ಣಾದಿ +ದುಷ್ಟ
ಪ್ರಸರ+ ಮಂತ್ರಿಗಳ್+ಇವನ +ನೇಮದೊಳ್
ಅಸುರರಿಪುವನು +ಬಿಗಿಯಲ್+ಅಳವಡಿಸಿದರು +ನೇಣುಗಳ