ಪದ್ಯ ೨: ಅಶ್ವತ್ಥಾಮನು ಯಾರ ಪಾಳೆಯದ ಹತ್ತಿರ ಬಂದನು?

ನಿಲುವೆವಿಲ್ಲಿ ವಿರೋಧಿಸಂತತಿ
ಯುಲುಹನಾಲಿಸಬಹುದು ಕೋಟಾ
ವಳಯವಿದೆ ಹತ್ತಿರೆಯೆನುತ ಗುರುಸೂನು ರಥವಿಳಿಯೆ
ಇಳಿದರಿಬ್ಬರು ಸೂತರಿಗೆ ಕೈ
ಕೊಳಿಸಿದರು ಕುದುರೆಗಳನಾ ಕಲು
ನೆಲದೊಳೊರಗಿದರವರು ಸಮರಶ್ರಮದ ಭಾರದಲಿ (ಗದಾ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಇಲ್ಲಿಯೇ ಕೋಟೆಯ ಹೊರಭಾಗದಲ್ಲಿ ನಿಲ್ಲೋಣ, ವೈರಿಗಳ ಸದ್ದು ಕೇಳುತ್ತಿದೆ ಎಂದು ಅಶ್ವತ್ಥಾಮನು ರಥವನ್ನಿಳಿದನು. ಉಳಿದಿಬ್ಬರೂ ರಥದ ಕುದುರೆಗಳನ್ನು ಸಾರಥಿಗೆ ನೀಡಿ, ಕಲ್ಲು ನೆಲದ ಮೇಲೆ ಅತೀವ ಆಯಾಸಗೊಂಡಿದ್ದ ಕಾರಣ ಮಲಗಿ ಬಿಟ್ಟರು.

ಅರ್ಥ:
ನಿಲುವು: ನಿಲ್ಲು, ತಡೆ; ವಿರೋಧಿ: ವೈರಿ, ಅರಿ; ಸಂತತಿ: ವಂಶ, ಪೀಳಿಗೆ; ಉಲುಹ: ಸದ್ದು; ಆಲಿಸು: ಕೇಳು; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ವಳಯ: ಆವರಣ; ಹತ್ತಿರ: ಸಮೀಪ; ಸೂನು: ಮಗ; ಗುರು: ಆಚಾರ್ಯ; ರಥ: ಬಂಡಿ; ಇಳಿ: ಕೆಳಕ್ಕೆ ನಡೆ; ಸೂತ: ಮಗ; ಕೈ: ಹಸ್ತ; ಕುದುರೆ: ಅಶ್ವ; ಕಲು: ಶಿಲ; ನೆಲ: ಭೂಮಿ; ಒರಗು: ಮಲಗು; ಸಮರ: ಯುದ್ಧ; ಶ್ರಮ: ಆಯಾಸ; ಭಾರ: ಹೊರೆ;

ಪದವಿಂಗಡಣೆ:
ನಿಲುವೆವ್+ಇಲ್ಲಿ +ವಿರೋಧಿ+ಸಂತತಿ
ಉಲುಹನ್+ಆಲಿಸಬಹುದು +ಕೋಟಾ
ವಳಯವಿದೆ +ಹತ್ತಿರೆ+ಎನುತ +ಗುರುಸೂನು +ರಥವಿಳಿಯೆ
ಇಳಿದರ್+ಇಬ್ಬರು+ ಸೂತರಿಗೆ+ ಕೈ
ಕೊಳಿಸಿದರು +ಕುದುರೆಗಳನ್+ಆ+ ಕಲು
ನೆಲದೊಳ್+ಒರಗಿದರ್+ಅವರು +ಸಮರ+ಶ್ರಮದ +ಭಾರದಲಿ

ಅಚ್ಚರಿ:
(೧) ಮಲಗಿದರು ಎಂದು ಹೇಳಲು – ಕಲುನೆಲದೊಳೊರಗಿದರವರು ಸಮರಶ್ರಮದ ಭಾರದಲಿ

ಪದ್ಯ ೪೧: ದುರ್ಯೋಧನನ ಸೈನ್ಯದಲ್ಲಿ ಯಾರು ನಾಶ ಹೊಂದಿದರು?

ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪ್ತೈ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ (ಗದಾ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕುದುರೆಗಳು, ರಾವುತರು, ಆನೆಗಳು, ಜೋದರು, ರಥಗಳು, ಕಾಲಾಳುಗಳು, ಈ ಚತುರಂಗ ಬಲದಲ್ಲಿ ಒಂದೂ ಉಳಿದಿರಲಿಲ್ಲ. ದುರ್ಯೋಧನನು ಕಾಲು ನಡೆಯಿಂದಲೇ ಜಾರಿ ತಪ್ಪಿಸಿಕೊಂಡು ಹೋದನು. ವೀರನಾರಾಯಣನ ಕರುಣೆಯಿಂದ ಪಾಂಡವರ ಅಭ್ಯುದಯ ಅತಿಶಯವಾಗಿ ಶೋಭಿಸಿತು.

ಅರ್ಥ:
ಕುದುರೆ: ಅಶ್ವ; ರಾವ್ತರು: ಕುದುರೆಸವಾರ; ಜೋದ: ಆನೆ ಸವಾರ; ಸಂತತಿ: ವಂಶ; ಮದ: ಅಮಲು, ಮತ್ತು; ಗಜ: ಆನೆ; ವ್ರಜ: ಗುಂಪು; ರಥಾವಳಿ: ರಥಗಳ ಗುಂಪು; ಪದಚರ: ಕಾಲಾಳು; ಚತುರಂಗಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಳಿ: ಮಿಕ್ಕ; ಪದ: ಪಾದ; ನೃಪತಿ: ರಾಜ; ಅಭ್ಯುದಯ: ಏಳಿಗೆ; ಕರುಣ: ದಯೆ;

ಪದವಿಂಗಡಣೆ:
ಕುದುರೆ +ರಾವ್ತರು +ಜೋದ+ಸಂತತಿ
ಮದ+ಗಜವ್ರಜವ್+ಅತಿ+ರಥಾವಳಿ
ಪದಚರರು+ ಚತುರಂಗಬಲವ್+ಒಂದುಳಿಯದ್+ಇದರೊಳಗೆ
ಪದದಲೇ +ಕೌರವ+ನೃಪತಿ+ ಜಾ
ರಿದನು +ಕುಂತೀಸುತರು +ಬಹಳ
ಅಭ್ಯುದಯರಾದರು +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಯುದ್ಧದಲ್ಲಿ ನಾಶವಾದುದು – ಕುದುರೆ, ರಾವ್ತರು, ಜೋದ, ಮದಗಜವ್ರಜ, ರಥಾವಳಿ, ಪದಚರರು, ಚತುರಂಗಬಲ

ಪದ್ಯ ೪೫: ದ್ರೋಣನನ್ನು ಸೈನ್ಯವು ಹೇಗೆ ಆವರಿಸಿತು?

ಸಾರಥಿಯ ತುಡುಕಿದರು ತಿವಿದರು
ತೇರ ಕುದುರೆಯನಿಭದ ಬರಿಕೈ
ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
ಭಾರಿಯೀಚಿನ ಮೇಲೆ ಬಿದ್ದವು
ವಾರುವಂಗಳ ಖುರನಿಕರವಸಿ
ಧಾರೆ ಮೊಗದಲಿ ಮೀಂಚಿದವು ಮುತ್ತಿದವು ಕಳಶಜನ (ದ್ರೋಣ ಪರ್ವ, ೧೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಾರಥಿಯನ್ನು ಹಿಡಿದರು, ತೇರಿನ ಕುದುರೆಯನ್ನು ಇರಿದರು, ಆನೆಗಳು ಸೊಂಡಿಲಿನಿಂದ ರಥದ ಅಚ್ಚನ್ನೂ, ಮೂಕಿಯನ್ನೂ ಅಲುಗಿಸಿದವು. ಈಚಿನ ಮೇಲೆ ಕುದುರೆಗಳು ಗೊರಸನ್ನಪ್ಪಳಿಸಿದವು. ಕತ್ತಿಗಳ ಅಲುಗುಗಳು ದ್ರೋಣನ ಮುಖದ ಬಳಿ ಮಿಂಚಿದವು.

ಅರ್ಥ:
ಸಾರಥಿ: ಸೂತ; ತುಡುಕು: ಹೋರಾಡು, ಸೆಣಸು; ತಿವಿ: ಚುಚ್ಚು; ತೇರು: ಬಂಡಿ, ರಥ; ಕುದುರೆ: ಅಶ್ವ; ಇಭ: ಆನೆ; ಬರಿ: ಕೇವಲ; ಕೈ: ಹಸ್ತ; ಹಿಡಿ: ಬಂಧಿಸು, ಗ್ರಹಿಸು; ಘಲ್ಲಿಸು: ಘಲ್ ಎಂಬ ಶಬ್ದ; ಕೂಬರ: ಬಂಡಿಯ ಈಸು; ಭಾರಿ: ದೊಡ್ಡ; ಬಿದ್ದು: ಬೀಳು; ವಾರುವ: ಕುದುರೆ, ಅಶ್ವ; ಖುರ: ಕುದುರೆ ದನಕರು ಮುಂ.ವುಗಳ ಕಾಲಿನ ಗೊರಸು; ನಿಕರ: ಗುಂಪು; ಅಸಿ: ಕತ್ತಿ; ಧಾರೆ: ವರ್ಷ; ಮೊಗ: ಮುಖ; ಮಿಂಚು: ಹೊಳಪು; ಕಳಶಜ: ದ್ರೋಣ;

ಪದವಿಂಗಡಣೆ:
ಸಾರಥಿಯ+ ತುಡುಕಿದರು +ತಿವಿದರು
ತೇರ +ಕುದುರೆಯನ್+ಇಭದ +ಬರಿಕೈ
ತೇರ +ಹಿಡಿದವು+ ಘಲ್ಲಿಸಿದವ್+ಅನುಕರುಷ +ಕೂಬರವ
ಭಾರಿ+ಈಚಿನ +ಮೇಲೆ +ಬಿದ್ದವು
ವಾರುವಂಗಳ +ಖುರನಿಕರವ್+ಅಸಿ
ಧಾರೆ+ ಮೊಗದಲಿ +ಮಿಂಚಿದವು +ಮುತ್ತಿದವು +ಕಳಶಜನ

ಅಚ್ಚರಿ:
(೧) ಆನೆ ಸೊಂಡಿಲು ಎಂದು ಹೇಳಲು – ಇಭದ ಬರಿಕೈ ತೇರ ಹಿಡಿದವು ಘಲ್ಲಿಸಿದವನುಕರುಷ ಕೂಬರವ
(೨) ಕುದುರೆ, ವಾರುವ – ಸಮಾನಾರ್ಥಕ ಪದಗಳು

ಪದ್ಯ ೧೬: ಕೌರವರ ಪರಾಭವ ಹೇಗೆ ಕಂಡಿತು?

ಇಳಿದ ಕುದುರೆಗೆ ಬಿಸುಟ ರಥಸಂ
ಕುಳಕೆ ಹಾಯ್ಕಿದ ಟೆಕ್ಕೆಯಕೆ ಕೈ
ಬಳಿಚಿದಾಯುಧತತಿಗೆ ನೂಕಿದ ಜೋಡು ಸೀಸಕಕೆ
ಕಳಚಿದಾಭರಣಾತಪತ್ರಾ
ವಳಿಗೆ ಕಾಣೆನು ಕಡೆಯನೀ ಪರಿ
ಕೊಲೆಗೆ ಭಂಗಕೆ ನಿನ್ನ ಬಿರುದರು ಬಂದುದಿಲ್ಲೆಂದ (ದ್ರೋಣ ಪರ್ವ, ೧೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇಳಿದ ಕುದುರೆಗಳಿಗೆ, ಬಿಟ್ಟೋಡಿದ ರಥಗಳಿಗೆ, ಕೆಳಗಿಳಿಸಿದ ಧ್ವಜಗಳಿಗೆ, ಕೈಯಿಂದ ಕೆಳಬಿದ್ದ ಆಯುಧಗಳಿಗೆ, ಸರಿಸಿ ಹಾಕಿದ ಕವಚ, ಸೀಸಕಗಳಿಗೆ, ಕಳಚಿಹಾಕಿದ ಆಭರನಗಳಿಗೆ, ಎಸೆದ ಕೊಡೆಗಳಿಗೆ ಲೆಕ್ಕವೇ ಇಲ್ಲ. ನಿನ್ನ ವೀರರು ಇಷ್ಟೊಂದು ಕೊಲೆಗೆ ಅಪಮಾನಕ್ಕೆ ಎಂದೂ ಸಿಕ್ಕಿರಲಿಲ್ಲ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಇಳಿ: ಕೆಳಕ್ಕೆ ಬಾ; ಕುದುರೆ: ಅಶ್ವ; ಬಿಸುಟು: ಹೊರಹಾಕು; ರಥ: ಬಂಡಿ; ಸಂಕುಳ: ಗುಂಪು; ಹಾಯ್ಕು: ಇಡು, ಇರಿಸು; ಟೆಕ್ಕೆ: ಬಾವುಟ, ಧ್ವಜ; ಕೈ: ಹಸ್ತ; ಆಯುಧ: ಶಸ್ತ್ರ; ತತಿ: ಗುಂಪು; ನೂಕು: ತಳ್ಳು; ಜೋಡು: ಜೊತೆ; ಸೀಸಕ: ಶಿರಸ್ತ್ರಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಆಭರಣ: ಒಡವೆ; ಆತಪತ್ರ: ಕೊಡೆ, ಛತ್ರಿ; ಆವಳಿ: ಗುಂಪು; ಕಾಣು: ತೋರು; ಪರಿ: ರೀತಿ; ಕೊಲೆ:ಸಾವು; ಭಂಗ: ಮುರಿಯುವಿಕೆ; ಬಿರುದರು: ವೀರರು;

ಪದವಿಂಗಡಣೆ:
ಇಳಿದ +ಕುದುರೆಗೆ +ಬಿಸುಟ +ರಥ+ಸಂ
ಕುಳಕೆ +ಹಾಯ್ಕಿದ +ಟೆಕ್ಕೆಯಕೆ +ಕೈ
ಬಳಿಚಿದ್+ಆಯುಧ+ತತಿಗೆ +ನೂಕಿದ +ಜೋಡು +ಸೀಸಕಕೆ
ಕಳಚಿದ್+ಆಭರಣ+ಆತಪತ್ರ
ಆವಳಿಗೆ +ಕಾಣೆನು +ಕಡೆಯನೀ +ಪರಿ
ಕೊಲೆಗೆ +ಭಂಗಕೆ +ನಿನ್ನ +ಬಿರುದರು+ ಬಂದುದಿಲ್ಲೆಂದ

ಅಚ್ಚರಿ:
(೧) ವೀರರು ಎಂದು ಹೇಳಲು – ಬಿರುದರು ಪದದ ಬಳಕೆ
(೨) ಸಂಕುಳ, ತತಿ – ಸಾಮ್ಯಾರ್ಥ ಪದ

ಪದ್ಯ ೧: ಘಟೋತ್ಕಚನು ಏನೆಂದು ಗರ್ಜಿಸಿದನು?

ಕೇಳು ಧೃತರಾಷ್ಟ್ರಾವನಿಪ ದೊರೆ
ಯಾಳನರಸುತ ಹೊಕ್ಕು ಸೂಠಿಯೊ
ಳಾಳುಕುದುರೆಯ ಥಟ್ಟನಿಬ್ಬಗಿಮಾಡಿ ದಳವುಳಿಸಿ
ಕೋಲ ತೊಡಚೈ ಕರ್ಣ ಕುರುಭೂ
ಪಾಲ ಕೈದುವ ಹಿಡಿ ಕೃಪಾದಿಗ
ಳೇಳಿ ಸಮ್ಮುಖವಾಗೆನುತ ಕೈಮಾಡಿ ಬೊಬ್ಬಿರಿದ (ದ್ರೋಣ ಪರ್ವ, ೧೬ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರನೇ ಕೇಳು, ಘಟೋತ್ಕಚನು ಕೌರವನ ಪ್ರಮುಖ ನಾಯಕರನ್ನು ಹುಡುಕುತ್ತಾ ಹೊಕ್ಕು ಸೈನ್ಯವನ್ನು ಬಗೆದು ನುಗ್ಗಿ, ಕರ್ಣಾ ಬಾಣವನ್ನು ಹೂಡು, ದುರ್ಯೋಧನಾ ಆಯುಧವನ್ನು ಹಿಡಿ, ಕೃಪಾಚಾರ್ಯರೇ ಮೊದಲಾದವರೆಲ್ಲರೂ ನನ್ನೆದುರು ಬನ್ನಿ ಎಂದು ಕೈಬೀಸಿ ಗರ್ಜಿಸಿದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ದೊರೆ: ರಾಜ; ಆಳು: ಸೈನಿಕ; ಅರಸು: ಹುಡುಕು; ಹೊಕ್ಕು: ಸೇರು; ಸೂಠಿ: ವೇಗ; ಕುದುರೆ: ಅಶ್ವ; ಥಟ್ಟು: ಗುಂಪು; ಇಬ್ಬಗಿ: ಎರಡು; ದಳ: ಸೈನ್ಯ; ಕೋಲ: ಬಾಣ; ತೊಡಚು: ಹೂಡು; ಭೂಪಾಲ: ರಾಜ; ಕೈದು: ಆಯುಧ; ಹಿಡಿ: ಗ್ರಹಿಸು; ಸಮ್ಮುಖ: ಎದುರುಗಡೆ; ಕೈಮಾಡು: ಹೋರಾಡು; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ+ಅವನಿಪ +ದೊರೆ
ಆಳನ್+ಅರಸುತ +ಹೊಕ್ಕು +ಸೂಠಿಯೊಳ್
ಆಳು+ಕುದುರೆಯ+ ಥಟ್ಟನ್+ಇಬ್ಬಗಿಮಾಡಿ +ದಳವುಳಿಸಿ
ಕೋಲ +ತೊಡಚೈ +ಕರ್ಣ +ಕುರು+ಭೂ
ಪಾಲ +ಕೈದುವ +ಹಿಡಿ +ಕೃಪಾದಿಗಳ್
ಏಳಿ +ಸಮ್ಮುಖವಾಗೆನುತ+ ಕೈಮಾಡಿ +ಬೊಬ್ಬಿರಿದ

ಅಚ್ಚರಿ:
(೧) ದೊರೆಯಾಳು, ಆಳುಕುದುರೆ – ಆಳು ಪದದ ಬಲಕೆ
(೨) ಅವನಿಪ, ಭೂಪಾಲ, ದೊರೆ – ಸಮಾನಾರ್ಥಕ ಪದ

ಪದ್ಯ ೧೭: ಭೀಮನು ದ್ರೋಣರ ಮೇಲೆ ಹೇಗೆ ಆಕ್ರಮಣ ಮಾಡಿದನು?

ಈತನೊಡನಂಬಿನಲಿ ಕಾದಲು
ಭೂತನಾಥಂಗರಿದು ಸಾರಥಿ
ಪೂತುರೇ ಎನುತಿಳಿದು ರಥವನು ತುಡುಕಿದನು ಗದೆಯ
ಆತನಸ್ತ್ರಕೆ ದಂಡೆಯೊಡ್ಡಿ ಮ
ಹಾತಿಬಳ ಕವಿದನು ವಿರೋಧಿಯ
ಸೂತನನು ಕೆಡೆಹೊಯ್ದು ಕೊಂದನು ರಥದ ಕುದುರೆಗಳ (ದ್ರೋಣ ಪರ್ವ, ೧೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೋಣರೊಡನೆ ಬಿಲ್ಲಿನ ಯುದ್ಧದಲ್ಲಿ ಗೆಲುವುದು ಶಂಕರನಿಗೂ ಅಸಾಧ್ಯ, ಎಂದು ಸಾರಥಿಗೆ ಹೇಳಿ, ಭಲೇ ಎಂದು ರಥವನ್ನಿಳಿದು ಗದೆಯನ್ನು ಹಿಡಿದು ದ್ರೋಣನ ಬಾಣಗಳಿಗೆ ಗದೆಯನ್ನು ಅಡ್ಡಹಿಡಿದು ದ್ರೋನನ ಮೇಲೆ ಕವಿದು ಅವನ ಸಾರಥಿ ಮತ್ತು ಕುದುರೆಗಳನ್ನು ಕೊಂದನು.

ಅರ್ಥ:
ಅಂಬು: ಬಾಣ; ಕಾದು: ಹೋರಾಡು; ಭೂತನಾಥ: ಶಿವ; ಅರಿ: ತಿಳಿ; ಸಾರಥಿ: ಸೂತ; ಪೂತು: ಭಲೇ; ಇಳಿ: ಕೆಳಕ್ಕೆ ಬಾ; ರಥ: ಬಂಡಿ; ತುಡುಕು: ಹೋರಾಡು, ಸೆಣಸು; ಗದೆ: ಮುದ್ಗರ; ಅಸ್ತ್ರ: ಶಸ್ತ್ರ; ದಂಡೆ: ಗುರಾಣಿ; ಮಹಾ: ದೊಡ್ಡ, ಶ್ರೇಷ್ಠ; ಬಳ: ಸೈನ್ಯ, ದಳ; ಕವಿ: ಆವರಿಸು; ವಿರೋಧಿ: ಶತ್ರು; ಸೂತ: ಸಾರಥಿ; ಕೆಡೆ: ಬೀಳು, ಕುಸಿ; ಹೊಯ್ದು: ಹೋರಾಡು; ಕೊಂದು: ಕೊಲ್ಲು; ರಥ: ಬಂಡಿ; ಕುದುರೆ: ಅಶ್ವ;

ಪದವಿಂಗಡಣೆ:
ಈತನೊಡನ್+ಅಂಬಿನಲಿ +ಕಾದಲು
ಭೂತನಾಥಂಗ್+ಅರಿದು +ಸಾರಥಿ
ಪೂತುರೇ +ಎನುತ್+ಇಳಿದು+ ರಥವನು +ತುಡುಕಿದನು +ಗದೆಯ
ಆತನ್+ಅಸ್ತ್ರಕೆ +ದಂಡೆಯೊಡ್ಡಿ+ ಮ
ಹಾತಿಬಳ +ಕವಿದನು +ವಿರೋಧಿಯ
ಸೂತನನು +ಕೆಡೆಹೊಯ್ದು +ಕೊಂದನು +ರಥದ +ಕುದುರೆಗಳ

ಅಚ್ಚರಿ:
(೧) ಸಾರಥಿ, ಸೂತ – ಸಮಾನಾರ್ಥಕ ಪದ

ಪದ್ಯ ೫: ಎರಡೂ ಸೈನ್ಯದಲ್ಲಿ ಯಾವ ರೀತಿಯ ವಿನೋಡ ಕಂಡು ಬಂತು?

ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ಡಣೆ ಸಘಾಡಿಸಿತೆರಡುಬಲದಲಿ ಭೂಪ ಕೇಳೆಂದ (ಭೀಷ್ಮ ಪರ್ವ, ೨ ಸಂಧಿ, ೫ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಎರಡು ಸೈನ್ಯದಲ್ಲಿ, ಕುಣಿಯುವ ಕುದುರೆಗಳು, ಆನೆಗಳ ಒಲೆದಾಟ, ಸಾರಥಿಗಳ ಸಿದ್ಧತೆ, ಗುರಾಣಿಗಳಿಂದ ಒಬ್ಬರನ್ನೊಬ್ಬರು ತಿವಿಯುವ ಕಾಲಾಳುಗಳ ವಿನೋದ ಎರಡೂ ಸೈನ್ಯದಲ್ಲಿ ಕಂಡು ಬಂತು.

ಅರ್ಥ:
ಕುಣಿ: ನರ್ತಿಸು; ಕುದುರೆ: ಅಶ್ವ; ಮದ: ಮತ್ತು, ಅಮಲು; ಬಲು: ಬಹಳ; ಭಾರಣೆ: ಮಹಿಮೆ, ಗೌರವ; ಒಲವು: ಪ್ರೀತಿ, ಸ್ನೇಹ; ಆನೆ: ಗಜ; ತುರಗ: ಅಶ್ವ, ಕುದುರೆ; ಕೆಣಕು: ರೇಗಿಸು, ಪ್ರಚೋದಿಸು; ಸರಳ: ಸುಲಭ, ಸರಾಗ; ಹಿಡಿ: ಬಂಧಿಸು; ತೇರು: ಬಂಡಿ; ಸೂತ: ರಥವನ್ನು ಓಡಿಸುವವ; ಓಜೆ: ಶ್ರೇಣಿ, ಸಾಲು; ಅಣೆ: ತಿವಿ, ಹೊಡೆ; ಹರಿಗೆ: ಚಿಲುಮೆ; ಅಣಸು: ಆಕ್ರಮಿಸು; ತಿವಿ: ಚುಚ್ಚು; ಅಗಿ: ಹೆದರು; ಭಟ: ಸೈನಿಕ; ಒಡ್ಡಣೆ: ಗುಂಪು; ಸಘಾಡ: ರಭಸ, ವೇಗ; ಬಲ: ಸೈನ್ಯ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕುಣಿವ +ಕುದುರೆಯ +ಮದದ +ಬಲು+ಭಾ
ರಣೆಯಲ್+ಒಲೆವ್+ಆನೆಗಳ +ತುರಗವ
ಕೆಣಕಿ+ ಸರಳಿಸಿ +ಹಿಡಿವ +ತೇರಿನ +ಸೂತರ್+ಓಜೆಗಳ
ಅಣೆವ +ಹರಿಗೆಯನ್+ಒಬ್ಬನೊಬ್ಬರನ್
ಅಣಸಿನಲಿ +ತಿವಿದ್+ಅಗಿವ +ಭಟರ್
ಒಡ್ಡಣೆ +ಸಘಾಡಿಸಿತ್+ಎರಡು+ಬಲದಲಿ +ಭೂಪ +ಕೇಳೆಂದ

ಅಚ್ಚರಿ:
(೧) ಸೈನ್ಯವನ್ನು ವಿವರಿಸುವ ಪರಿ – ಕುಣಿವ ಕುದುರೆ, ಒಲೆವ ಆನೆ, ಅಣೆವ ಹರಿಗೆ

ಪದ್ಯ ೭: ರಣರಂಗದಲ್ಲಿ ಯಾರು ಯಾರನ್ನು ಹಿಂದಿಕ್ಕಿದರು?

ಕುದುರೆ ಕುದುರೆಯ ಮುಂಚಿದವು ಕರಿ
ಮದಕರಿಯ ಹಿಂದಿಕ್ಕಿದವು ನೂ
ಕಿದವು ರಥ ರಥದಿಂದ ಮುನ್ನ ಮಹಾರಥಾದಿಗಳು
ಇದಿರೊಳೆಬ್ಬನನೊಬ್ಬನೊದಗುವ
ಕದನ ಭರದ ಪದಾತಿ ಪೂರಾ
ಯದಲಿ ಕವಿದುದು ಜಡಿವ ಬಹುವಿಧವಾದ್ಯರಭಸದಲಿ (ಕರ್ಣ ಪರ್ವ, ೧೩ ಸಂಧಿ, ೭ ಪದ್ಯ)

ತಾತ್ಪರ್ಯ:
ಕುದುರೆ ಇನ್ನೊಂದು ಕುದುರೆಯನ್ನು, ಆನೆ ಇನ್ನೊಂದು ಆನೆಯನ್ನು, ರಥವು ಇನ್ನೊಂದು ರಥವನ್ನು ಹಿಂದೆ ತಳ್ಳಿ ಮುಂದೆ ನುಗ್ಗಿತು. ಪದಾತಿಗಳು ವೈರಿಗಳನ್ನು ತಡೆದು ಕಾದುವ ಭರದಿಂದ ನುಗ್ಗಿದರು. ರಣವಾದ್ಯಗಳು ವೇಗವಾಗಿ ಮೊಳಗಿದವು.

ಅರ್ಥ:
ಕುದುರೆ: ಅಶ್ವ; ಮುಂಚೆ: ಮುಂದೆ, ಎದುರು; ಕರಿ: ಆನೆ; ಮದಕರಿ: ಮದದಾನೆ; ಹಿಂದಿಕ್ಕು: ಹಿಂದೆ ತಳ್ಳು; ರಥ: ಬಂಡಿ, ತೇರು; ಮುನ್ನ: ಮೊದಲು; ಮಹಾರಥ: ಪರಾಕ್ರಮಿ; ಇದಿರು: ಎದುರು; ಒದಗು: ಸಿಗುವ; ಕದನ: ಯುದ್ಧ; ಭರ: ವೇಗ; ಪದಾತಿ: ಸೈನಿಕ; ಪೂರಾಯ: ಪರಿಪೂರ್ಣ; ಕವಿ: ಆವರಿಸು; ಜಡಿ: ಬೆದರಿಕೆ, ಹೆದರಿಕೆ; ಬಹು: ಬಹಳ; ವಿಧ: ರೀತಿ; ವಾದ್ಯ: ಸಂಗೀತದ ಸಾಧನ; ರಭಸ; ಆವೇಶ, ವೇಗ;

ಪದವಿಂಗಡಣೆ:
ಕುದುರೆ +ಕುದುರೆಯ +ಮುಂಚಿದವು +ಕರಿ
ಮದಕರಿಯ +ಹಿಂದಿಕ್ಕಿದವು +ನೂ
ಕಿದವು +ರಥ +ರಥದಿಂದ +ಮುನ್ನ +ಮಹಾರಥಾದಿಗಳು
ಇದಿರೊಳ್+ಇಬ್ಬನನ್+ಒಬ್ಬನ್+ಒದಗುವ
ಕದನ+ ಭರದ +ಪದಾತಿ +ಪೂರಾ
ಯದಲಿ +ಕವಿದುದು +ಜಡಿವ+ ಬಹುವಿಧ+ವಾದ್ಯ+ರಭಸದಲಿ

ಅಚ್ಚರಿ:
(೧) ೪ ಸಾಲು ಒಂದೇ ಪದವಾಗಿ ರಚಿತವಾಗಿರುವುದು
(೨) ಜೋಡಿ ಪದಗಳು: ಕುದುರೆ, ಕರಿ, ರಥ

ಪದ್ಯ ೨೬: ಕರ್ಣನೇಕೆ ಶೂರನಲ್ಲ ಎಂದು ಶಲ್ಯನು ತಿಳಿದನು?

ಕ್ಷಣದೊಳೀಗಳೆ ಭೀಮ ಪಾರ್ಥರ
ರಣದೊಳಗೆ ತೋರುವೆನು ಕದಳಿಯ
ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ
ಬಣಗು ನೀ ಭಾರಂಕ ಭಟನೊಳ
ಗಣಕಿಸುವೆ ಫಡ ಪಾಡನರಿಯದೆ
ಸೆಣಸಿದರೆ ನೀ ಶೂರನೆಂಬರೆ ಕರ್ಣ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಈ ಕ್ಷಣವೇ ನಾನು ಭೀಮಾರ್ಜುನರನ್ನು ತೋರಿಸುವೆ, ಅವರು ನಿನ್ನ ಸೈನ್ಯವನ್ನು ಬಾಳೆಯನ್ನು ಕತ್ತರಿಸಿದಂತೆ ಕಡಿದು ಹಾಕುತ್ತಾರೆ. ಕ್ಷುದ್ರನಾದ ನೀನು ಮಹಾಪರಾಕ್ರಮಿಯನ್ನು ಅಲ್ಲಗಳೆಯುತ್ತಿರುವೆ. ನಿನ್ನ ಪಾಡು ಏನಾದೀತೆಂಬುದನ್ನು ತಿಳಿಯದೆ ಯುದ್ಧಕ್ಕೆ ತೊಡಗಿದರೆ, ಕರ್ಣ, ನಿನ್ನನು ಶೂರನೆನ್ನುವರೇ?

ಅರ್ಥ:
ಕ್ಷಣ: ಈ ವೇಳೆ, ಅತ್ಯಲ್ಪ ವೇಳೆ; ರಣ: ಯುದ್ಧ; ತೋರು: ಗೋಚರ, ನೋಡು; ಕದಳಿ: ಬಾಳೆ; ಹಣಿ: ಬಾಗು, ಮಣಿ; ಆಳು: ಸೇವಕ; ಕುದುರೆ: ಅಶ್ವ; ಕಾಣಲು: ಕಾಣಲಾಗದು, ತೋರದು; ಬಣಗು: ಅಲ್ಪವ್ಯಕ್ತಿ; ಭಾರಾಂಕ: ಮಹಾಯುದ್ಧ; ಭಟ: ಸೈನಿಕ; ಫಡ: ಬೆಳೆದು ನಿಂತ ಜೋಳ; ಪಾಡು: ರೀತಿ, ಬಗೆ; ಅರಿ: ತಿಳಿ; ಸೆಣಸು: ಹೋರಾಡು; ಶೂರ: ಪರಾಕ್ರಮ; ಕೇಳು: ಆಲಿಸು; ಅಣಕಿಸು: ಮೂದಲಿಸು;

ಪದವಿಂಗಡಣೆ:
ಕ್ಷಣದೊಳ್+ಈಗಳೆ +ಭೀಮ +ಪಾರ್ಥರ
ರಣದೊಳಗೆ+ ತೋರುವೆನು +ಕದಳಿಯ
ಹಣಿದವೋ +ನಿನ್ನಾಳು +ಕುದುರೆಯ +ಕಾಣಲಹುದ್+ಈಗ
ಬಣಗು +ನೀ +ಭಾರಂಕ +ಭಟನೊಳಗ್
ಅಣಕಿಸುವೆ+ ಫಡ+ ಪಾಡನರಿಯದೆ
ಸೆಣಸಿದರೆ +ನೀ +ಶೂರನೆಂಬರೆ+ ಕರ್ಣ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕದಳಿಯ ಹಣಿದವೋ ನಿನ್ನಾಳು ಕುದುರೆಯ ಕಾಣಲಹುದೀಗ

ಪದ್ಯ ೨೭: ಮತ್ತಾವ ಅಪಶಕುನಗಳು ಕರ್ಣನನ್ನು ಆವರಿಸಿದವು?

ಒದರಿದವು ನರಿ ಮುಂದೆ ಕರ್ಣನ
ಕುದುರೆಗಳು ಮುಗ್ಗಿದವು ಪರಿವೇ
ಷದಲಿ ಸಪ್ತಗ್ರಹದ ವಕ್ರತೆ ಸೂರ್ಯಮಂಡಲಕೆ
ಇದಿರಿನಲಿ ಬಿರುಗಾಳಿ ಧೂಳಿಯ
ಕೆದರಿ ಬೀಸಿತು ನಿಖಿಳಬಲ ಮು
ಚ್ಚಿದುದು ಕಂಗಳನವನಿಪತಿ ಕಂಡನು ಮಹಾದ್ಭುತವ (ಕರ್ಣ ಪರ್ವ, ೮ ಸಂಧಿ, ೨೭ ಪದ್ಯ)

ತಾತ್ಪರ್ಯ:
ರಥದಲ್ಲಿ ಏರುತ್ತಿದ್ದಂತೆ ನರಿಗಳು ಅರಿಚಿಕೊಂಡವು, ರಥಕ್ಕೆ ಕಟ್ಟಿದ ಕುದುರೆಗಳು ಮುಗ್ಗುರಿಸಿದವು. ಸಪ್ತ ಗ್ರಹಗಳು ವಕ್ರಗತಿಯಲ್ಲಿ ಸೂರ್ಯನ ಸುತ್ತ ಸುಳಿದವು. ಬಿರುಗಾಳಿ ಬೀಸಿ ಧೂಳು ತುಂಬಲು ಸೈನ್ಯವು ಕಣ್ಣು ಮುಚ್ಚಿತು. ದೊರೆಯು ಈ ಆಶ್ಚರ್ಯ ಸಂಗತಿಯನ್ನು ನೋಡಿದನು.

ಅರ್ಥ:
ಒದರು: ಕಿರುಚು, ಗರ್ಜಿಸು; ಮುಂದೆ: ಎದುರು; ಕುದುರೆ: ಅಶ್ವ; ಮುಗ್ಗು: ಎಡವು; ಪರಿವೇಷ: ಸುತ್ತುವರಿದಿರುವುದು; ಸಪ್ತ: ಏಳು; ಗ್ರಹ: ಆಕಾಶಚರಗಳು; ವಕ್ರ: ಡೊಂಕಾದ, ಅಡ್ಡಿ; ಸೂರ್ಯ: ರವಿ; ಮಂಡಲ: ವರ್ತುಲಾಕಾರ; ಇದಿರು: ಎದುರು; ಬಿರುಗಾಳಿ: ಜೋರಾದ ಗಾಳಿ, ಸುಂಟರಗಾಳಿ; ಧೂಳು: ಮಣ್ಣಿನ ಪುಡಿ; ಕೆದರು: ಹರಡು; ಬೀಸು: ಹಾರು, ಹರಡು; ನಿಖಿಳ: ಎಲ್ಲಾ; ಬಲ: ಸೈನ್ಯ; ಮುಚ್ಚು: ಹೊದಿಸು; ಕಂಗಳು: ಕಣ್ಣು; ಅವನಿಪತಿ: ರಾಜ; ಕಂಡನು: ನೋಡಿದನು;

ಪದವಿಂಗಡಣೆ:
ಒದರಿದವು+ ನರಿ +ಮುಂದೆ +ಕರ್ಣನ
ಕುದುರೆಗಳು +ಮುಗ್ಗಿದವು +ಪರಿವೇ
ಷದಲಿ +ಸಪ್ತಗ್ರಹದ +ವಕ್ರತೆ +ಸೂರ್ಯ+ಮಂಡಲಕೆ
ಇದಿರಿನಲಿ +ಬಿರುಗಾಳಿ +ಧೂಳಿಯ
ಕೆದರಿ+ ಬೀಸಿತು +ನಿಖಿಳ+ಬಲ +ಮು
ಚ್ಚಿದುದು +ಕಂಗಳನ್+ಅವನಿಪತಿ+ ಕಂಡನು +ಮಹಾದ್ಭುತವ

ಅಚ್ಚರಿ:
(೧) ಅಪಶಕುನಗಳು – ಒದರಿದವು ನರಿ, ಕುದುರೆಗಳು ಮುಗ್ಗಿದವು, ಸಪ್ತಗ್ರಹದ ವಕ್ರತೆ, ಬಿರುಗಾಳಿ ಧೂಳಿ ಕೆದರಿ ಬೀಸಿತು