ಪದ್ಯ ೨೯: ಯುದ್ಧವು ಹೇಗೆ ನಡೆಯಿತು?

ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಿಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು (ಗದಾ ಪರ್ವ, ೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ರಥಿಕರು ಬಿಟ್ಟ ಬಾಣಗಳ ಸೋನೆಮಳೆ ಸುರಿಯಿತು. ಆನೆಗಳ ಸೇನೆಯಿಂದ ಕಕ್ಕಡೆ, ಗಂಡುಗೊಡಲಿ, ಶೂಲ, ಮುಸುಂಡಿ, ಈಟಿ, ಭರ್ಜಿ, ಸಬಳ ಶಕ್ತಿಗಳು ಹೊರಟು ಪಾಂಡವರ ಸೇನೆಯನ್ನು ಘಾತಿಸಿದವು. ರಥಗಳ ಮದದಾನೆಗಳ ದಾಳಿಗಳಿಗೆ ಶತ್ರುಗಳು ಗಾಯಗೊಂಡರು.

ಅರ್ಥ:
ಸುರಿ: ಹರದು; ಅಂಬು: ಬಾಣ; ಸೋನೆ: ಮಳೆ; ರಥಿಕ: ರಥಿ; ಕರಿಘಟೆ: ಆನೆಯ ಗುಂಪು; ಥಟ್ಟು: ಗುಂಪು; ಕಕ್ಕಡೆ: ಗರಗಸ; ಪರಶು: ಕೊಡಲಿ, ಕುಠಾರ; ಶೂಲ: ಚೂಪಾದ ತುದಿಯುಳ್ಳ ಒಂದು ಬಗೆಯ ಆಯುಧ, ತ್ರಿಶೂಲ; ಮುಸುಂಡಿ: ಮುಖಹೇಡಿ, ಮಕೇಡಿ, ಅಂಜುಬುರುಕ; ಸೆಲ್ಲೆಹ: ಈಟಿ, ಭರ್ಜಿ; ಸಬಳ: ಈಟಿ, ಭರ್ಜಿ; ಶಕ್ತಿ: ಬಲ; ಅರಿ: ವೈರಿ; ಅಬ್ಧಿ: ಸಾಗರ; ಈಸು: ಈಜು, ಬಾಳು; ತುರಗ: ಕುದುರೆ; ರಥ: ಬಂಡಿ; ಬೀಸು: ತೂಗುವಿಕೆ; ಮದ: ಅಮಲು, ಮತ್ತ; ಕರಿ: ಆನೆ; ಘಾಯ: ಪೆಟ್ಟು; ಒದಗು: ಲಭ್ಯ, ದೊರೆತುದು; ರಾಯ: ರಾಜ; ರಾವುತ: ಕುದುರೆ ಸವಾರ, ಅಶ್ವಾರೋಹಿ;

ಪದವಿಂಗಡಣೆ:
ಸುರಿದುದ್+ಅಂಬಿನ +ಸೋನೆ +ರಥಿಕರ
ಕರಿ+ಘಟೆಯ +ಥಟ್ಟಿಂದ +ಕಕ್ಕಡೆ
ಪರಶು +ಶೂಲ+ ಮುಸುಂಡಿ +ಸೆಲ್ಲೆಹ +ಸಬಳ +ಶಕ್ತಿಗಳು
ಅರಿ+ಬಲ+ಅಬ್ಧಿಯನ್+ಈಸಿದವು +ತತ್
ತುರಗ +ರಥವನು +ಬೀಸಿದವು +ಮದ
ಕರಿಗಳ್+ಇಕ್ಕಡಿ+ಘಾಯಕ್+ಒದಗಿತು +ರಾಯ+ರಾವುತರು

ಅಚ್ಚರಿ:
(೧) ಕರಿ – ೨, ೬ ಸಾಲಿನ ಮೊದಲ ಪದ
(೨) ಕಕ್ಕಡೆ, ಪರಶು, ಶೂಲ, ಮುಸುಂಡಿ, ಸೆಲ್ಲೆಹ, ಸಬಳ – ಆಯುಧಗಳ ವಿವರ್
(೩) ರೂಪಕದ ಪ್ರಯೋಗ – ಸುರಿದುದಂಬಿನ ಸೋನೆ; ಅರಿಬಲಾಬ್ಧಿಯನೀಸಿದವು

ಪದ್ಯ ೪: ಶಕುನಿಯು ಎಷ್ಟು ಸೈನ್ಯದೊಡನೆ ನಿಂತಿದ್ದನು?

ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ (ಗದಾ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಐನೂರು ಆನೆಗಳು, ಮೂವತ್ತೆರಡು ಸಾವಿರ ಕಾಲಾಳುಗಳು, ಸಾವಿರದನೂರು ರಥಗಳು, ಕೆಲ ರಾಜರು, ತುರುಕ, ಬರ್ಬರ ಪಾರಸೀಕರ ಐದು ಸಾವಿರ ಕುದುರೆಗಳೊಡನೆ ಶಕುನಿಯು ಸೈನ್ಯದ ಬಲಭಾಗದಲ್ಲಿದ್ದನು.

ಅರ್ಥ:
ಕರಿಘಟೆ: ಆನೆಗಳ ಗುಂಪು; ಸಾವಿರ: ಸಹಸ್ರ; ಪಾಯದಳ: ಕಾಲಾಳು; ನೂರು: ಶತ; ವರೂಥ: ತೇರು, ರಥ; ಅವನಿಪ: ರಾಜ; ಸಹಿತ: ಜೊತೆ; ತುರಗ: ಅಶ್ವ; ಸಹಿತ: ಜೊತೆ; ಮೋಹರ: ಯುದ್ಧ; ಥಟ್ಟು: ಗುಂಪು; ಬಲ: ಸೈನ್ಯ; ಬಾಹೆ: ಪಕ್ಕ, ಪಾರ್ಶ್ವ;

ಪದವಿಂಗಡಣೆ:
ಕರಿಘಟೆಗಳ್+ಐನೂರು +ಮೂವ
ತ್ತೆರಡು +ಸಾವಿರ +ಪಾಯದಳ+ ಸಾ
ವಿರದ +ನೂರು +ವರೂಥ +ವಂಗಡದ್+ಅವನಿಪರು+ ಸಹಿತ
ತುರುಕ +ಬರ್ಬರ +ಪಾರಸೀಕರ
ತುರಗವ್+ಐಸಾವಿರ+ ಸಹಿತ+ ಮೋ
ಹರಿಸಿ +ನಿಂದನು +ಶಕುನಿ +ಥಟ್ಟಿನ +ಬಲದ +ಬಾಹೆಯಲಿ

ಅಚ್ಚರಿ:
(೧) ಐನೂರು ಐಸಾವಿರ – ಐ ಪದದ ಬಳಕೆ

ಪದ್ಯ ೩: ಎಷ್ಟು ಸೈನ್ಯವು ಉಳಿದಿತ್ತು?

ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು (ಗದಾ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಈಗ ದುರ್ಯೋಧನನ ಬಳಿ ಹನ್ನೊಂದು ಸಾವಿರ ಆನೆಗಳು, ಇಪ್ಪತ್ತು ಸಾವಿರ ಕುದುರೆಗಲು, ಎರಡು ಸಾವಿರ ರಥಗಳು, ಒಂದು ಲಕ್ಷ ಕಾಲಾಳುಗಳು, ಮುನ್ನೂರು ರಾಜರು ಮಾತ್ರ ಉಳಿದಿದ್ದಾರೆ. ಯುದ್ಧದ ಮೊದಲಲ್ಲಿದ್ದ ಹನ್ನೊಂದು ಅಕ್ಷೋಹಿಣಿಯಲ್ಲಿ ಉಳಿದವರು ಇಷ್ಟು ಮಾತ್ರ ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಸಾವಿರ: ಸಹಸ್ರ; ಕರಿಘಟೆ: ಆನೆಗಳ ಗುಂಪು; ತುರಗ: ಕುದುರೆ; ದಳ: ಸೈನ್ಯ; ರಥ: ಬಂಡಿ; ಕಾಲಾಳು: ಸೈನಿಕ; ವಿಸ್ತಾರ: ಅಗಲ; ಧರಣಿಪತಿ: ರಾಜ; ಏಕಾದಶ: ಹನ್ನೊಂದು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಶೇಷ: ಉಳಿದ; ನಿಂದು: ನಿಲ್ಲು;

ಪದವಿಂಗಡಣೆ:
ಅರಸ +ಕೇಳೈ +ಮೂರು +ಸಾವಿರ
ಕರಿಘಟೆಗಳ್+ಇಪ್ಪತ್ತು +ಸಾವಿರ
ತುರಗದಳ+ ರಥವ್+ಎರಡು+ಸಾವಿರ +ಲಕ್ಷ +ಕಾಲಾಳು
ಅರಸುಗಳು +ಮೂನೂರು +ನಿಂದುದು
ಕುರುಬಲದ +ವಿಸ್ತಾರ +ಕೌರವ
ಧರಣಿಪತಿ+ಏಕಾದಶ+ಅಕ್ಷೋಹಿಣಿಯ +ಶೇಷವಿದು

ಅಚ್ಚರಿ:
(೧) ಅರಸ, ಧರಣಿಪತಿ – ಸಮಾನಾರ್ಥಕ ಪದ
(೨) ಸಾವಿರ ೧-೩ ಸಾಲಿನಲ್ಲಿ ಬರುವ ಪದ

ಪದ್ಯ ೧೫: ಅಶ್ವತ್ಥಾಮನು ಆನೆಗಳ ಗುಂಪನ್ನು ಹೇಗೆ ನಾಶ ಮಾಡಿದನು?

ಏನ ಹೇಳುವೆ ಗಜಘಟಾಪ್ರತಿ
ಮಾನದಲಿ ಕೋದಂಬುಗಳು ಹಿಂ
ಡಾನೆಗಳನೇಳೆಂಟನೊದೆದೋಡಿದವು ಪಂಚಕವ
ಭಾನುರಶ್ಮಿಗಳಂಧಕಾರದ
ಮಾನಗರ್ವವ ಮುರಿವವೊಲು ಗುರು
ಸೂನುವಿನ ಶರ ಸವರಿದವು ಕರಿಘಟೆಯ ಬಲುಮೆಳೆಯ (ಶಲ್ಯ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನ ಒಂದು ಬಾಣವು ಏಳೆಂಟು ಆನೆಗಳನ್ನು ಸಂಹರಿಸುತ್ತಿದ್ದವು. ಸೂರ್ಯನ ಕಿರಣಗಳು ಕತ್ತಲೆಯನ್ನು ಮುರಿಯುವಂತೆ ಅಶ್ವತ್ಥಾಮನ ಬಾಣಗಳು ಆನೆಗಳ ಗುಂಪನ್ನು ನಾಶಮಾಡುತ್ತಿದ್ದವು.

ಅರ್ಥ:
ಹೇಳು: ತಿಳಿಸು; ಗಜ: ಆನೆ; ಘಟ: ಗುಮ್ಫು; ಪ್ರತಿಮಾನ: ಸದೃಶವಾದುದು, ಆನೆಯ ದಂತಗಳ ಮಧ್ಯಪ್ರದೇಶ; ಅಂಬು: ಬಾಣ; ಹಿಂಡಾನೆ: ಗುಂಪಿನಲ್ಲಿರುವ ಆನೆ; ಒದೆ: ನೂಕು; ಪಂಚಕ: ಐದು; ಭಾನು: ಸೂರ್ಯ; ರಶ್ಮಿ: ಕಿರಣ; ಅಂಧಕಾರ: ಕತ್ತಲೆ; ಮಾನ:ಅಳತೆ, ಸೇರು, ಅಭಿಮಾನ; ಗರ್ವ: ಅಹಂಕಾರ; ಮುರಿ: ಸೀಳು; ಸೂನು: ಮಗ; ಶರ: ಬಾಣ; ಸವರು: ನಾಶಮಾಡು; ಕರಿಘಟೆ: ಆನೆಯ ಗುಂಪು; ಬಲುಮಳೆ: ಜೋರಾದ ವರ್ಷ;

ಪದವಿಂಗಡಣೆ:
ಏನ +ಹೇಳುವೆ +ಗಜಘಟ+ಅಪ್ರತಿ
ಮಾನದಲಿ+ ಕೋದಂಬುಗಳು+ ಹಿಂ
ಡಾನೆಗಳನ್+ಏಳೆಂಟನ್+ಒದೆದ್+ಓಡಿದವು +ಪಂಚಕವ
ಭಾನು+ರಶ್ಮಿಗಳ್+ಅಂಧಕಾರದ
ಮಾನ+ಗರ್ವವ +ಮುರಿವವೊಲು +ಗುರು
ಸೂನುವಿನ +ಶರ +ಸವರಿದವು +ಕರಿಘಟೆಯ +ಬಲುಮೆಳೆಯ

ಅಚ್ಚರಿ:
(೧) ಗಜಘಟ, ಕರಿಘಟೆ, ಹಿಂಡಾನೆ – ಸಾಮ್ಯಾರ್ಥ ಪದ
(೨) ಉಪಮಾನದ ಪ್ರಯೋಗ – ಭಾನುರಶ್ಮಿಗಳಂಧಕಾರದಮಾನಗರ್ವವ ಮುರಿವವೊಲು
(೩) ೪ ಸಾಲು ಒಂದೇ ಪದವಾಗಿ ರಚಿತವಾದುದು – ಭಾನುರಶ್ಮಿಗಳಂಧಕಾರದ

ಪದ್ಯ ೪೨: ಯುದ್ಧದಲ್ಲಿ ಯಾವ ರೀತಿಯ ಮಂಜು ಆವರಿಸಿತು?

ಧರಣಿಪತಿ ಕೇಳ್ ಭೀಮಸೇನನ
ಕರಿಘಟೆಗಳಿಟ್ಟಣಿಸಿದವು ಮೋ
ಹರಿಸಿದವು ಸಾತ್ಯಕಿಯ ರಥವಾ ದ್ರೌಪದೀಸುತರ
ಬಿರುದ ಭಟರೌಕಿದರು ರಾಯನ
ಧುರದ ಧೀವಸಿಗಳು ನಿಹಾರದ
ಲುರವಣಿಸಿದರು ಶಲ್ಯನಂಬಿನ ಮಳೆಯ ಮನ್ನಿಸದೆ (ಶಲ್ಯ ಪರ್ವ, ೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಶಲ್ಯನ ಬಾಣಗಳನ್ನು ಲೆಕ್ಕಿಸದೆ ಭೀಮನ ದಳದ ಆನೆಗಳು ಮುಮ್ದಾದವು. ಸಾತ್ಯಕಿ ಉಪಪಾಂಡವರು ಮೊದಲಾದ ಯುದ್ಧ ನಿಪುಣರೂ ಪ್ರಖ್ಯಾತರೂ ಆದ ವೀರರು ಯುದ್ಧಕ್ಕೆ ಬರಲು ಧೂಳಿನ ಮಂಜು ಕವಿಯಿತು.

ಅರ್ಥ:
ಧರಣಿಪತಿ: ರಾಜ; ಕರಿಘಟೆ: ಆನೆಗಳ ಗುಂಪು; ಇಟ್ಟಣಿಸು: ದಟ್ಟವಾಗು, ಒತ್ತಾಗು; ಮೋಹರ: ಯುದ್ಧ; ರಥ: ಬಂಡಿ; ಸುತ: ಮಗ; ಬಿರುದು: ಗೌರವ ಸೂಚಕ ಹೆಸರು; ಭಟ: ಸೈನಿಕ; ಔಕು: ನೂಕು; ರಾಯ: ರಾಜ; ಧುರ: ಯುದ್ಧ, ಕಾಳಗ; ಧೀವಸಿ: ಸಾಹಸ, ವೀರ; ನಿಹಾರ: ಮಂಜು; ಉರವಣೆ: ಆತುರ, ಆಧಿಕ್ಯ; ಅಂಬು: ಬಾಣ; ಮಳೆ: ವರ್ಷ; ಮನ್ನಿಸು: ಅಂಗೀಕರಿಸು, ಒಪ್ಪು;

ಪದವಿಂಗಡಣೆ:
ಧರಣಿಪತಿ +ಕೇಳ್ +ಭೀಮಸೇನನ
ಕರಿಘಟೆಗಳ್+ಇಟ್ಟಣಿಸಿದವು +ಮೋ
ಹರಿಸಿದವು+ ಸಾತ್ಯಕಿಯ +ರಥವಾ +ದ್ರೌಪದೀ+ಸುತರ
ಬಿರುದ +ಭಟರ್+ಔಕಿದರು +ರಾಯನ
ಧುರದ +ಧೀವಸಿಗಳು +ನಿಹಾರದಲ್
ಉರವಣಿಸಿದರು +ಶಲ್ಯನ್+ಅಂಬಿನ +ಮಳೆಯ +ಮನ್ನಿಸದೆ

ಅಚ್ಚರಿ:
(೧) ರೂಪಕದ ಪ್ರಯೋಗ – ರಾಯನ ಧುರದ ಧೀವಸಿಗಳು ನಿಹಾರದಲುರವಣಿಸಿದರು

ಪದ್ಯ ೧೬: ಸೈನಿಕರ ಹೋರಾಟ ಹೇಗಿತ್ತು?

ಒರಲೆ ಗಜ ದಾಡೆಗಳ ಕೈಗಳ
ಹರಿಯಹೊಯ್ದರು ಪಾರಕರು ಮು
ಕ್ಕುರಿಕಿದರೆ ಸಬಳಿಗರು ಕೋದೆತ್ತಿದರು ಕರಿಘಟೆಯ
ತರುಬಿದರೆ ಕಡಿನಾಲ್ಕ ತೋರಿಸಿ
ಮೆರೆದರುರೆ ರಾವುತರು ರಾವ್ತರ
ತರುಬಿದರು ತನಿಚೂಣಿ ಮಸಗಿತು ತಾರುಥಟ್ಟಿನಲಿ (ಶಲ್ಯ ಪರ್ವ, ೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಆನೆಗಳ ದಾಡೆಗಳನ್ನೂ ಸೊಂಡಿಲನ್ನೂ ಮುರಿಯುವಂತೆ ಪಾರಕರು ಹೊಡೆದರು, ಮೇಲೆ ಬಿದ್ದರೆ ಭಲ್ಲೆಹದಿಂದ ಆನೆಯನ್ನು ಆಚೆಗೆ ದೂಕಿದರು. ತಮ್ಮ ಮೇಲೆ ಆಕ್ರಮಿಸಿದರೆ ರಾವುತರು ನಾಲ್ಕು ತುಂಡು ಮಾಡಿದರು. ರಾವುತರು ರಾವುತರನ್ನು ಕೊಂದರು. ಸಂಕುಲ ಸಮರದಲ್ಲಿ ಅತಿಶಯವಾದ ಸಾಹಸವನ್ನು ತೋರಿದರು.

ಅರ್ಥ:
ಒರಲು: ಅರಚು, ಕೂಗಿಕೊಳ್ಳು; ಗಜ: ಆನೆ; ದಾಡೆ: ದವಡೆ, ಒಸಡು; ಕೈ: ಹಸ್ತ; ಹರಿ: ಸೀಳು; ಪಾರಕ: ದಾಟಿಸುವವನು, ಆಚೀಚೆ ಚಲಿಸುವವ; ಮುಕ್ಕುರು: ಮೇಲೆ ಬೀಳು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು; ಎತ್ತು: ಮೇಲೇಳು; ಕರಿಘಟೆ: ಆನೆಯ ಗುಂಪು; ತರುಬು: ತಡೆ, ನಿಲ್ಲಿಸು; ಕಡಿ: ಸೀಳು; ತೋರಿಸು: ಗೋಚರಿಸು; ಮೆರೆ: ಪ್ರಕಾಶ; ಉರೆ: ಹೆಚ್ಚು; ರಾವುತ: ಕುದುರೆ ಸವಾರ, ಅಶ್ವಾರೋಹಿ; ತರುಬು: ತಡೆ, ನಿಲ್ಲಿಸು; ತನಿ: ಚೆನ್ನಾಗಿ ಬೆಳೆದುದು; ಚೂಣಿ:ಮುಂದಿನ ಸಾಲು; ಮಸಗು: ಹರಡು; ಕೆರಳು; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು;

ಪದವಿಂಗಡಣೆ:
ಒರಲೆ +ಗಜ +ದಾಡೆಗಳ +ಕೈಗಳ
ಹರಿಯಹೊಯ್ದರು +ಪಾರಕರು +ಮು
ಕ್ಕುರಿಕಿದರೆ +ಸಬಳಿಗರು +ಕೋದೆತ್ತಿದರು +ಕರಿ+ಘಟೆಯ
ತರುಬಿದರೆ +ಕಡಿನಾಲ್ಕ +ತೋರಿಸಿ
ಮೆರೆದರ್+ಉರೆ +ರಾವುತರು +ರಾವ್ತರ
ತರುಬಿದರು +ತನಿಚೂಣಿ +ಮಸಗಿತು+ ತಾರು+ಥಟ್ಟಿನಲಿ

ಅಚ್ಚರಿ:
(೧) ಗಜ, ಕರಿ; ಘಟೆ, ಥಟ್ಟು – ಸಮಾನಾರ್ಥಕ ಪದ

ಪದ್ಯ ೩೬: ದ್ರೋಣನು ಸಂಹರಿಸಿದ ಸೈನ್ಯದ ಸಂಖ್ಯೆ ಎಷ್ಟು?

ಮತ್ತೆ ಮುರಿದನು ವೈರಿ ಬಲದಲಿ
ಹತ್ತು ಸಾವಿರ ಕರಿಘಟೆಯ ನೈ
ವತ್ತು ಸಾವಿರ ಹಯವ ನಿರ್ಛಾಸಿರ ಮಹಾರಥರ
ಹತ್ತುಕೋಟಿ ಪದಾತಿಯನು ಕೈ
ವರ್ತಿಸಿದ ನಂತಕನವರಿಗಿವ
ರತ್ತ ಬಿಟ್ಟನು ರಥವನಾ ದ್ರುಪದಾದಿ ನಾಯಕರ (ದ್ರೋಣ ಪರ್ವ, ೧೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ದ್ರೋಣನು ಮತ್ತೆ ಹತ್ತು ಸಾವಿರ ಆನೆಗಳು, ಐವತ್ತು ಸಾವಿರ ಕುದುರೆಗಳು, ಎರಡು ಸಾವಿರ ಮಹಾರಥರು, ಹತ್ತುಕೋಟಿ ಕಾಲಾಳುಗಳನ್ನು ಯಮದೂತರ ಕೈಗೊಪ್ಪಿಸಿ, ದ್ರುಪದನೇ ಮೊದಲಾದವರ ಕಡೆಗೆ ರಥವನ್ನು ತಿರುಗಿಸಿದನು.

ಅರ್ಥ:
ಮುರಿ: ಸೀಳು; ವೈರಿ: ಶತ್ರು; ಬಲ: ಸೈನ್ಯ; ಸಾವಿರ: ಸಹಸ್ರ; ಕರಿಘಟೆ: ಆನೆಗಳ ಗುಂಪು; ಹಯ: ಕುದುರೆ; ಇರ್ಛಾಸಿರ: ಎರಡು ಸಾವಿರ; ಮಹಾರಥ: ಪರಾಕ್ರಮಿ; ಕೋಟಿ: ಅಸಂಖ್ಯಾತ; ಪದಾತಿ: ಕಾಲಾಳು; ಅಂತಕ: ಯಮ; ಕೈ: ಹಸ್ತ; ವರ್ತಿಸು: ವ್ಯವಹರಿಸು, ಮಾಡು; ರಥ: ಬಂಡಿ; ನಾಯಕ: ಒಡೆಯ;

ಪದವಿಂಗಡಣೆ:
ಮತ್ತೆ +ಮುರಿದನು +ವೈರಿ +ಬಲದಲಿ
ಹತ್ತು +ಸಾವಿರ +ಕರಿಘಟೆಯನ್ +
ಐವತ್ತು +ಸಾವಿರ +ಹಯವನ್+ಇರ್ಛಾಸಿರ +ಮಹಾರಥರ
ಹತ್ತುಕೋಟಿ +ಪದಾತಿಯನು+ ಕೈ
ವರ್ತಿಸಿದನ್ + ಅಂತಕನ್+ಅವರಿಗ್+ಇವ
ರತ್ತ +ಬಿಟ್ಟನು +ರಥವನಾ+ ದ್ರುಪದಾದಿ+ ನಾಯಕರ

ಅಚ್ಚರಿ:
(೧) ಹತ್ತು, ಐವತ್ತು – ಪ್ರಾಸ ಪದಗಳು

ಪದ್ಯ ೫೪: ಘಟೋತ್ಕಚನು ಭೂಮಿಗೆ ಬಿದ್ದ ಪರಿಣಾಮ ಏನಾಯಿತು?

ಆರಿ ಬೊಬ್ಬಿರಿವುತ್ತ ಕಂಡದು
ಪಾರುಖಾಣೆಯನಸುರನಸು ಬಲು
ಭಾರಿಯೊಡಲೊರ್ಗುಡಿಸಿ ಕೆಡೆದುದು ಬಿರಿದ ಗಿರಿಯಂತೆ
ತೇರು ತುರಗ ಪದಾತಿ ಕರಿಘಟೆ
ವೈರಿ ಬಲದಲಿ ನಮ್ಮ ಬಲದಲಿ
ತೀರಿತೊಂದಕ್ಷೋಣಿ ಸುರರಿಪು ಬಿದ್ದ ಭಾರದಲಿ (ದ್ರೋಣ ಪರ್ವ, ೧೬ ಸಂಧಿ, ೫೪ ಪದ್ಯ)

ತಾತ್ಪರ್ಯ:
ಘಟೋತ್ಕಚನ ಪ್ರಾಣವು ಹಾರಿ ಹೋಗಲು ಅವನ ದೇಹವೂ ಕುಸಿದು ಬಿದ್ದು ನಮ್ಮ ಅವರ ಸೈನ್ಯಗಲಲ್ಲಿ ಒಂದು ಅಕ್ಷೋಹಿಣೀ ಸೇನೆ ಅದರ ಕೆಳಗೆ ಸಿಕ್ಕು ನಾಶವಾಯಿತು. ಎರಡು ಸೈನ್ಯಗಳೂ ಅದನ್ನು ಕಂಡವು.

ಅರ್ಥ:
ಬೊಬ್ಬಿರಿ: ಗರ್ಜಿಸು; ಕಂಡು: ನೋಡು; ಪಾರು: ನೋಡು, ಅವಲೋಕಿಸು; ಖಾಣ: ಮನೆ; ಅಸುರ: ರಾಕ್ಷಸ; ಅಸು: ಪ್ರಾಣ; ಭಾರಿ: ದೊಡ್ಡ; ಒಡಲು: ದೇಹ; ಕೆಡೆ: ಬೀಳು, ಕುಸಿ; ಬಿರಿ: ಬಿರುಕು, ಸೀಳು; ಗಿರಿ: ಬೆಟ್ಟ; ತೇರು: ರಥ; ತುರಗ: ಅಶ್ವ; ಪದಾತಿ: ಸೈನಿಕ; ಕರಿಘಟೆ: ಆನೆಗಳ ಗುಂಪು; ವೈರಿ: ಶತ್ರು; ಬಲ: ಶಕ್ತಿ, ಸೈನ್ಯ; ತೀರು: ಅಂತ್ಯ, ಮುಕ್ತಾಯ; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಸುರರಿಪು: ದೇವತೆಗಳ ವೈರಿ (ರಾಕ್ಷಸ); ಬಿದ್ದು: ಬೀಳು, ಕುಸಿ; ಭಾರ: ಹೊರೆ, ತೂಕ; ಆರಿ: ಕಿರುಚು;

ಪದವಿಂಗಡಣೆ:
ಆರಿ+ ಬೊಬ್ಬಿರಿವುತ್ತ+ ಕಂಡದು
ಪಾರು+ಖಾಣೆಯನ್+ಅಸುರನ್+ಅಸು +ಬಲು
ಭಾರಿ+ಒಡಲೊರ್ಗುಡಿಸಿ +ಕೆಡೆದುದು +ಬಿರಿದ +ಗಿರಿಯಂತೆ
ತೇರು +ತುರಗ +ಪದಾತಿ +ಕರಿಘಟೆ
ವೈರಿ +ಬಲದಲಿ +ನಮ್ಮ +ಬಲದಲಿ
ತೀರಿತೊಂದ್+ಅಕ್ಷೋಣಿ +ಸುರರಿಪು +ಬಿದ್ದ +ಭಾರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಲುಭಾರಿಯೊಡಲೊರ್ಗುಡಿಸಿ ಕೆಡೆದುದು ಬಿರಿದ ಗಿರಿಯಂತೆ
(೨) ಅಸುರ, ಸುರರಿಪು – ಘಟೋತ್ಕಚನ ಕರೆದ ಪರಿ

ಪದ್ಯ ೧೮: ಅರ್ಜುನನು ಮತ್ತಾವ ರಾಜರನ್ನು ಕೆಡಹಿದನು?

ಕರಿಘಟೆಯನಂಬಟ್ಟಭೂಪನ
ಶಿರವನೆಚ್ಚನು ಪಾರಸೀಕರ
ತುರಗ ಕವಿಯಲು ಕುಸುರಿದರಿದನು ಕೋಟಿಸಂಖ್ಯೆಗಳ
ಬಿರುದ ಹೊಗಳಿಸಿಕೊಂಡು ದಾತಾ
ರರ ಹಣವ ಸಲೆ ತಿಂದು ಹೆಚ್ಚಿದ
ಹಿರಿಯ ಡೊಳ್ಳಿನ ರಾವುತರ ಕೆಡಹಿದನು ನಿಮಿಷದಲಿ (ದ್ರೋಣ ಪರ್ವ, ೧೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಆನೆಗಳನ್ನೂ, ಅಂಬಟ್ಟರಾಜನ ತಲೆಯನ್ನೂ, ಅರ್ಜುನನು ಕತ್ತರಿಸಿದನು. ಪಾರಸೀಕರ ಕೋಟಿ ಸಂಖ್ಯೆಯ ಕುದುರೆಗಳನ್ನೂ ಚೂರು ಚೂರಾಗುವಂತೆ ಕತ್ತರಿಸಿದನು. ತಮ್ಮ ರಾಜರ ಹಣವನ್ನು ತಿಂದು ಬಿರುದನ್ನು ಹೊಗಳಿಸಿಕೊಳ್ಳುತ್ತಾ ಬಂದ ರಾವುತರನ್ನು ನಿಮಿಷಮಾತ್ರದಲ್ಲಿ ಕೆಡಹಿದನು.

ಅರ್ಥ:
ಕರಿ: ಆನೆ; ಘಟೆ: ಗುಂಪು; ಭೂಪ: ರಾಜ; ಶಿರ: ತಲೆ; ಎಚ್ಚು: ಬಾಣ ಪ್ರಯೋಗ ಮಾಡು; ತುರಗ: ಅಶ್ವ; ಕವಿ: ಆವರಿಸು; ಕುಸುರಿ: ತುಂಡು; ಅರಿ: ಸೀಳು; ಕೋಟಿ: ಅಸಂಖ್ಯಾತ; ಸಂಖ್ಯೆ: ಎಣಿಕೆ; ಬಿರುದು: ಗೌರವ ಸೂಚಕ ಪದ; ಹೊಗಳು: ಪ್ರಶಂಸೆ; ದಾತಾರ: ಕೊಡುವವನು, ದಾನಿ; ಹಣ: ಐಶ್ವರ್ಯ; ಸಲೆ: ಒಂದೇ ಸಮನೆ; ತಿಂದು: ಉಂಡು; ಹೆಚ್ಚು: ಅಧಿಕ; ಹಿರಿಯ: ದೊಡ್ಡವ; ಡೊಳ್ಳು:ಚರ್ಮದ ವಾದ್ಯ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಕೆಡಹು: ನಾಶಗೊಳಿಸು; ನಿಮಿಷ: ಕ್ಷಣಮಾತ್ರದಲಿ;

ಪದವಿಂಗಡಣೆ:
ಕರಿಘಟೆಯನ್+ಅಂಬಟ್ಟ+ಭೂಪನ
ಶಿರವನ್+ಎಚ್ಚನು +ಪಾರಸೀಕರ
ತುರಗ +ಕವಿಯಲು +ಕುಸುರಿದ್+ಅರಿದನು +ಕೋಟಿ+ಸಂಖ್ಯೆಗಳ
ಬಿರುದ +ಹೊಗಳಿಸಿಕೊಂಡು +ದಾತಾ
ರರ +ಹಣವ +ಸಲೆ +ತಿಂದು +ಹೆಚ್ಚಿದ
ಹಿರಿಯ +ಡೊಳ್ಳಿನ +ರಾವುತರ +ಕೆಡಹಿದನು +ನಿಮಿಷದಲಿ

ಅಚ್ಚರಿ:
(೧) ಪರಾಕ್ರಮಿಗಳು ಎಂದು ಹೇಳುವ ಪರಿ – ಬಿರುದ ಹೊಗಳಿಸಿಕೊಂಡು ದಾತಾರರ ಹಣವ ಸಲೆ ತಿಂದು ಹೆಚ್ಚಿದಹಿರಿಯ ಡೊಳ್ಳಿನ ರಾವುತರ

ಪದ್ಯ ೧೨: ರಣರಂಗಕ್ಕೆ ಚತುರಂಗ ಸೈನ್ಯವು ಹೇಗೆ ಬಂದಿತು?

ನಡೆದುದುರುಸನ್ನಾಹದಲಿ ಸೂ
ಳಡಸಿ ಮೊರೆವ ಗಭೀರ ಭೇರಿಯ
ಕಡುರವದ ರಿಪುಭಟರ ಬೈಗುಳ ಗೌರುಗಹಳೆಗಳ
ಎಡಬಲಕೆ ತನಿಹೊಳೆವ ತೇಜಿಯ
ಕಡುಮದದ ಕರಿಘಟೆಯ ತೇರಿನ
ನಿಡುವರಿಯ ಕಾಲಾಳ ಕಳಕಳವಾಯ್ತು ರಣದೊಳಗೆ (ದ್ರೋಣ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಮತ್ತೆ ಮತ್ತೆ ಗಂಭೀರ ಶಬ್ದಮಾಡುವ ಭೇರಿ, ಜೋರಾಗಿ ಶಬ್ದಮಾಡುವ ಕಹಳೆ, ಸುತ್ತೆತ್ತ ಹಬ್ಬುತ್ತಿರಲು, ಕುದುರೆ, ಆನೆ, ರಥ ಕಾಲಾಳುಗಳು ಸದ್ದುಮಾಡುತ್ತಾ ರಣರಂಗಕ್ಕೆ ಬಂದವು.

ಅರ್ಥ:
ನಡೆದು: ಮುಂದುವರೆದು; ಉರು: ವಿಶೇಷವಾದ; ಸನ್ನಾಹ: ಕವಚ, ಜೋಡು, ಗುಂಪು; ಸೂಳು: ಸರದಿ, ಸಮಯ; ಅಡಸು: ಬಿಗಿಯಾಗಿ ಒತ್ತು, ಆಕ್ರಮಿಸು; ಮೊರೆ: ಕೂಗು; ಗಭೀರ: ಆಳವಾದುದು, ಗಹನ; ಭೇರಿ: ಒಂದು ಬಗೆಯ ಚರ್ಮವಾದ್ಯ, ನಗಾರಿ, ದುಂದುಭಿ; ಕಡು: ದೊಡ್ಡ; ರವ: ಶಬ್ದ; ರಿಪು: ವೈರಿ; ಭಟ: ಸೈನಿಕ; ಬೈಗುಳ: ಜರೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಎಡಬಲ: ಅಕ್ಕಪಕ್ಕ; ತನಿ: ಹೆಚ್ಚಾಗು; ಹೊಳೆ: ಪ್ರಕಾಶ; ತೇಜಿ: ಕುದುರೆ; ಕಡು: ಬಹಳ; ಮದ: ಗರ್ವ; ಕರಿಘಟೆ: ಆನೆಯ ಗುಂಪು; ತೇರು: ಬಂಡಿ; ನಿಡು: ದೀರ್ಘ, ಉದ್ದವಾದ; ಕಾಲಾಳು: ಸೈನಿಕ; ಕಳಕಳ: ಉದ್ವಿಗ್ನ; ರಣ: ಯುದ್ಧಭೂಮಿ;

ಪದವಿಂಗಡಣೆ:
ನಡೆದುದ್+ಉರು+ಸನ್ನಾಹದಲಿ +ಸೂಳ್
ಅಡಸಿ +ಮೊರೆವ+ ಗಭೀರ +ಭೇರಿಯ
ಕಡುರವದ +ರಿಪುಭಟರ +ಬೈಗುಳ +ಗೌರು+ಕಹಳೆಗಳ
ಎಡಬಲಕೆ +ತನಿಹೊಳೆವ +ತೇಜಿಯ
ಕಡುಮದದ +ಕರಿಘಟೆಯ +ತೇರಿನ
ನಿಡುವರಿಯ +ಕಾಲಾಳ +ಕಳಕಳವಾಯ್ತು +ರಣದೊಳಗೆ

ಅಚ್ಚರಿ:
(೧) ಮೊರೆ, ಗಭೀರ, ಕಡುರವ, ಗೌರು, ಕಳಕಳ – ಶಬ್ದವನ್ನು ವರ್ಣಿಸುವ ಪದಗಳು