ಪದ್ಯ ೨೬: ಸಂಜಯನಿಗೆ ವ್ಯಾಸರು ಯಾವ ಅಪ್ಪಣೆ ನೀಡಿದರು?

ಆವ ವಹಿಲದೊಳಾದುದಾವಿ
ರ್ಭಾವವೆಂದಾನರಿಯೆನಾಗಳೆ
ದೇವಮುನಿಯಡ್ಡೈಸಿ ಹಿಡಿದನು ಕೊರಳಡಾಯುಧವ
ಸಾವು ತಪ್ಪಿತು ಬಾದರಾಯಣ
ನೋವಿ ಕೃಪೆಯಲಿ ಮೈದಡವಿ ಸಂ
ಭಾವಿಸುತ ಕುರುಪತಿಯನರಸೆಂದೆನಗೆ ನೇಮಿಸಿದ (ಗದಾ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಷ್ಟು ಬೇಗದಿಂದ ವೇದವ್ಯಾಸ ಮುನಿಗಳು ಪ್ರಕಟವಾಗಿ ನನ್ನ ಕೊರಳಿಗೆ ಹೂಡಿದ್ದ ಕತ್ತಿಯನ್ನು ಹಿಡಿದುಕೊಂಡರೋ ತಿಳಿಯಲಿಲ್ಲ. ಸಾವು ತಪ್ಪಿತು. ಬಾದರಾಯಣನು ಪ್ರೀತಿಯಿಂದ ನನ್ನ ಮೈದಡವಿ ಕೌರವನನ್ನು ಹುಡುಕು ಎಂದು ಅಪ್ಪಣೆಕೊಟ್ಟನು.

ಅರ್ಥ:
ವಹಿಲ: ಬೇಗ, ತ್ವರೆ; ಆವಿರ್ಭಾವ: ಹುಟ್ಟುವುದು, ಪ್ರಕಟವಾಗುವುದು; ಅರಿ: ತಿಳಿ; ಮುನಿ: ಋಷಿ; ಅಡ್ಡೈಸು: ಅಡ್ಡ ಬಂದು; ಹಿಡಿ: ಗ್ರಹಿಸು; ಕೊರಳು: ಗಂಟಲು ಆಯುಧ: ಶಸ್ತ್ರ; ಸಾವು: ಮರಣ; ಕೃಪೆ: ದಯೆ; ಮೈದಡವಿ: ನೇವರಿಸು; ಸಂಭಾವಿಸು: ತೃಪ್ತಿಪಡಿಸು, ಗೌರವಿಸು; ಅರಸು: ಹುಡುಕು; ನೇಮಿಸು: ಅಪ್ಪಣೆ ಮಾಡು;

ಪದವಿಂಗಡಣೆ:
ಆವ+ ವಹಿಲದೊಳ್+ಆದುದ್+ಆವಿ
ರ್ಭಾವವೆಂದ್+ಆನ್+ಅರಿಯೆನ್+ಆಗಳೆ
ದೇವಮುನಿ+ಅಡ್ಡೈಸಿ +ಹಿಡಿದನು +ಕೊರಳಡ್+ಆಯುಧವ
ಸಾವು +ತಪ್ಪಿತು +ಬಾದರಾಯಣನ್
ಓವಿ+ ಕೃಪೆಯಲಿ +ಮೈದಡವಿ +ಸಂ
ಭಾವಿಸುತ +ಕುರುಪತಿಯನ್+ಅರಸ್+ಎಂದೆನಗೆ +ನೇಮಿಸಿದ

ಅಚ್ಚರಿ:
(೧) ಅ ಕಾರದ ಪದಗಳ ಬಳಕೆ – ಆವ ವಹಿಲದೊಳಾದುದಾವಿರ್ಭಾವವೆಂದಾನರಿಯೆನಾಗಳೆ
(೨) ವ್ಯಾಸರನ್ನು ಕರೆದ ಪರಿ – ಬಾದರಾಯಣ, ದೇವಮುನಿ

ಪದ್ಯ ೧: ದ್ರೋಣನ ರಥದ ಬಳಿಗೆ ಯಾರು ಬಂದರು?

ಕೇಳು ಧೃತರಾಷ್ಟ್ರವನಿಪ ಗುರು
ಬೀಳುಕೊಟ್ಟನು ದೇಹವನು ನ
ಮ್ಮಾಳ ವಿಧಿಯೇನಪಜಯದ ತವನಿಧಿಯಲೇ ನಮಗೆ
ಮೇಲೆ ಬಂದುದು ಕಷ್ಟವರಿಭೂ
ಪಾಲರಿಗೆ ಕೇಳಿದನು ಖಳ ಪಾಂ
ಚಾಲಸುತನೈತಂದನಲ್ಲಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೯ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ದ್ರೋಣನು ದೇಹತ್ಯಾಗ ಮಾಡಿದನು. ಅವನಿಗೆ ಬಂದ ವಿಧಿಯು ನಮ್ಮ ಸೋಲಿಗೆ ತವನಿಧಿ, ನಂತರ ವೈರಿರಾಜರಿಗೆ ಕಷ್ಟ ಬಂದಿತು. ದ್ರೋಣನ ದೇಹತ್ಯಾಗವನ್ನು ಕೇಳಿದ ಧೃಷ್ಟದ್ಯುಮ್ನನು ಕತ್ತಿಯನ್ನು ಝಳಪಿಸುತ್ತಾ ದ್ರೋಣನ ರಥದ ಬಳಿಗೆ ಬಂದನು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಗುರು: ಆಚಾರ್ಯ; ಬೀಳುಕೊಡು: ತೆರಳು; ದೇಹ: ಶರೀರ; ಆಳು: ಸೇವಕ; ವಿಧಿ: ನಿಯಮ; ಅಪಜಯ: ಸೋಲು; ನಿಧಿ: ಐಶ್ವರ್ಯ; ಬಂದು: ಆಗಮಿಸು; ಕಷ್ಟ: ತೊಂದರೆ; ಅರಿ: ವೈರಿ; ಭೂಪಾಲ: ರಾಜ; ಕೇಳು: ಆಲಿಸು; ಖಳ: ದುಷ್ಟ; ಸುತ: ಮಗ; ಐತಂದು: ಬಂದು ಸೇರು; ಜಡಿ: ಬೆದರಿಕೆ; ಆಯುಧ: ಶಸ್ತ್ರ; ತವ: ನಿನ್ನ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ಗುರು
ಬೀಳುಕೊಟ್ಟನು +ದೇಹವನು +ನ
ಮ್ಮಾಳ +ವಿಧಿಯೇನ್+ಅಪಜಯದ +ತವನಿಧಿಯಲೇ +ನಮಗೆ
ಮೇಲೆ +ಬಂದುದು +ಕಷ್ಟವ್+ಅರಿ+ಭೂ
ಪಾಲರಿಗೆ +ಕೇಳ್+ಇದನು +ಖಳ+ ಪಾಂ
ಚಾಲಸುತನ್ +ಐತಂದನ್+ಅಲ್ಲಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಅವನಿಪ, ಭೂಪಾಲ – ಸಮಾನಾರ್ಥಕ ಪದ
(೨) ದ್ರೋಣನು ಸತ್ತನು ಎಂದು ಹೇಳಲು – ಗುರು ಬೀಳುಕೊಟ್ಟನು ದೇಹವನು

ಪದ್ಯ ೫೩: ಕರ್ಣನ ಬಾಣವು ಎಲ್ಲಿ ರಂಧ್ರ ಮಾಡಿತು?

ಆರಿದನು ಪರಿಹರಿಸುವರು ಜಂ
ಭಾರಿ ಕೊಟ್ಟನು ಕಮಲಭವ ಕಾ
ಮಾರಿಗಳಿಗುಬ್ಬಸದ ಕೈದುವಜೇಯವೆಂದಿದನು
ಧಾರೆಯಲಿ ದಳ್ಳಿಸುವ ಕಿಡಿಗಳ
ಭಾರಿಯಾಯುಧವಸುರನುರವನು
ಡೋರುಗಳೆದುದು ಹಾಯ್ದುಹೋದುದು ವಾಸವನ ಹೊರೆಗೆ (ದ್ರೋಣ ಪರ್ವ, ೧೬ ಸಂಧಿ, ೫೩ ಪದ್ಯ)

ತಾತ್ಪರ್ಯ:
ಆ ಶಕ್ತಿಯನ್ನು ತಡೆಹಿಡಿಯುವವರು ಯಾರು? ಬ್ರಹ್ಮ, ರುದ್ರರಿಗೆ ಕೃಷ್ಣಸಾಧ್ಯವಾದ ಅಜೇಯ ಆಯುಧ ಎಂದು ಹೇಳಿ ಇಂದ್ರನು ಕರ್ಣನಿಗೆ ಕೊಟ್ಟಿದನು. ಅದರ ಅಲಗುಗಳು ಕಿಡಿಯನ್ನುಗುಳುತ್ತಿದ್ದವು. ಆ ಮಹಾಸ್ತ್ರವು ಘಟೋತ್ಕಚನ ಎದೆಯಲ್ಲಿ ಭಾರಿಯ ರಂಧ್ರ ಕೊರೆದು ಇಂದ್ರನ ಬಳಿಗೆ ಹೋಯಿತು.

ಅರ್ಥ:
ಪರಿಹರಿಸು: ನಿವಾರಿಸು; ಜಂಭಾರಿ: ಇಂದ್ರ; ಕೊಟ್ಟ: ನೀಡಿದ; ಕಮಲಭವ: ಬ್ರಹ್ಮ; ಕಾಮಾರಿ: ಕಾಮನ ವೈರಿ (ಶಂಕರ); ಉಬ್ಬಸ: ಮೇಲುಸಿರು; ಕೈದು: ಆಯುಧ; ಅಜೇಯ: ಗೆಲ್ಲಲಾಗದುದು; ಧಾರೆ: ವರ್ಷ; ದಳ್ಳಿಸು: ಧಗ್ ಎಂದು ಉರಿ; ಕಿಡಿ: ಬೆಂಕಿ; ಭಾರಿ: ದೊಡ್ಡ; ಆಯುಧ: ಶಸ್ತ್ರ; ಅಸುರ: ರಾಕ್ಷಸ; ಉರ: ಎದೆ; ಡೋರು: ರಂಧ್ರ, ತೂತು; ಹಾಯ್ದು: ಹೊಡೆ; ವಾಸವ: ಇಂದ್ರ; ಹೊರೆ: ರಕ್ಷಣೆ, ಆಶ್ರಯ;

ಪದವಿಂಗಡಣೆ:
ಆರಿದನು +ಪರಿಹರಿಸುವರು +ಜಂ
ಭಾರಿ +ಕೊಟ್ಟನು +ಕಮಲಭವ +ಕಾ
ಮಾರಿಗಳಿಗ್+ ಉಬ್ಬಸದ +ಕೈದುವ್+ಅಜೇಯವೆಂದಿದನು
ಧಾರೆಯಲಿ +ದಳ್ಳಿಸುವ +ಕಿಡಿಗಳ
ಭಾರಿ+ಆಯುಧವ್+ಅಸುರನ್+ಉರವನು
ಡೋರುಗಳೆದುದು +ಹಾಯ್ದುಹೋದುದು +ವಾಸವನ +ಹೊರೆಗೆ

ಅಚ್ಚರಿ:
(೧) ಜಂಭಾರಿ, ವಾಸವ – ಇಂದ್ರನನ್ನು ಕರೆದ ಪರಿ

ಪದ್ಯ ೫೨: ಕರ್ಣನು ಯಾವ ಬಾಣದಿಂದ ಘಟೋತ್ಕಚನನ್ನು ಹೊಡೆದನು?

ಕಾಯಲಾಪರೆ ದನುಜ ಕರೆ ಕಮ
ಲಾಯತಾಕ್ಷನನಿಂದು ಬದುಕುವು
ಪಾಯವುಳ್ಳಡೆ ಬೇಗ ಬೆಸಗೊಳು ಭೀಮ ಫಲುಗುಣರ
ಆಯುಧಕೆ ತೆರವಿಟ್ಟೆನೈ ನಿ
ನ್ನಾಯುಷವ ಹಿಂದಿಕ್ಕಿ ಕೊಂಬನ
ತಾಯೆನುತ ಬೊಬ್ಬಿರಿದು ಶಕ್ತಿಯಲಿಟ್ಟನಾ ಕರ್ಣ (ದ್ರೋಣ ಪರ್ವ, ೧೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕರ್ಣನು ಗರ್ಜಿಸುತ್ತಾ, ಎಲವೋ ರಾಕ್ಷಸ, ಈ ಶಕ್ತಿಗೆ ನಿನ್ನಾಯುಷ್ಯವೇ ಮುಗಿಯುತ್ತದೆ, ನಿನ್ನನ್ನು ಕಾಯಲು ಶಕ್ತನಾಗಿದ್ದರೆ ಕೃಷ್ಣನನ್ನು ಕರೆ, ಬದುಕುವ ಉಪಾಯ ಗೊತ್ತಿದ್ದರೆ, ಭೀಮಾರ್ಜುನರನ್ನು ಬೇಗ ಕರೆಸಿಕೋ. ನಿನ್ನನ್ನು ಹಿಂದಿಟ್ಟುಕೊಂಡು ಕಾಪಾಡುವವನನ್ನು ಕರೆದು ತಾ ಎನ್ನುತ್ತಾ ಗರ್ಜಿಸಿ ಶಕ್ತಿಯಿಂದ ಘಟೋತ್ಕಚನನ್ನು ಹೊಡೆದನು.

ಅರ್ಥ:
ಕಾಯಲು: ರಕ್ಷಿಸಲು; ದನುಜ: ರಾಕ್ಷಸ; ಕರೆ: ಬರೆಮಾಡು; ಕಮಲಾಯತಾಕ್ಷ: ಕಮಲದಂತೆ ಕಣ್ಣುಗಳನ್ನುಳ್ಳ (ಕೃಷ್ಣ); ಬದುಕು: ಜೀವಿಸು; ಉಪಾಯ: ಯುಕ್ತಿ, ಹಂಚಿಕೆ; ಬೇಗ: ವೇಗ, ರಭಸ; ಬೆಸಗು: ಕೆಲಸ; ಆಯುಧ: ಶಸ್ತ್ರ; ತೆರಹು: ಬರಿದು, ಖಾಲಿ; ಆಯುಷ್ಯ: ಜೀವಿತದ ಅವಧಿ; ಹಿಂದಿಡು: ತಳ್ಳು; ತಾ: ಬರೆಮಾಡು; ಬೊಬ್ಬಿರಿ: ಗರ್ಜಿಸು; ಶಕ್ತಿ: ಬಲ;

ಪದವಿಂಗಡಣೆ:
ಕಾಯಲಾಪರೆ+ ದನುಜ +ಕರೆ +ಕಮ
ಲಾಯತಾಕ್ಷನನ್+ಇಂದು +ಬದುಕು
ಉಪಾಯವುಳ್ಳಡೆ +ಬೇಗ +ಬೆಸಗೊಳು +ಭೀಮ +ಫಲುಗುಣರ
ಆಯುಧಕೆ +ತೆರವಿಟ್ಟೆನೈ +ನಿ
ನ್ನಾಯುಷವ +ಹಿಂದಿಕ್ಕಿ +ಕೊಂಬನ
ತಾಯೆನುತ +ಬೊಬ್ಬಿರಿದು +ಶಕ್ತಿಯಲಿಟ್ಟನಾ +ಕರ್ಣ

ಅಚ್ಚರಿ:
(೧) ಕೃಷ್ಣನನ್ನು ಕಮಲಾಯತಾಕ್ಷ ಎಂದು ಕರೆದಿರುವುದು
(೨) ರಕ್ಷಿಸುವವರು ಎಂದು ಹೇಳುವ ಪರಿ – ನಿನ್ನಾಯುಷವ ಹಿಂದಿಕ್ಕಿ ಕೊಂಬನ

ಪದ್ಯ ೪೪: ಘಟೋತ್ಕಚನು ಏನನ್ನು ಹಿಡಿದು ಮುನ್ನುಗ್ಗಿದನು?

ತೂರಿದರೆ ತನಿಹೊಟ್ಟು ಗಾಳಿಗೆ
ಹಾರುವುದು ಕುಲಗಿರಿಯ ಬೈಸಿಕೆ
ಜಾರುವುದೆ ಮಝ ಪೂತು ನಮ್ಮೀಯುಭಯ ಕಟಕದಲಿ
ತೋರಲಿಲ್ಲೆಣೆ ಜಗದೊಳೋಲೆಯ
ಕಾರ ನೀನಹೆಯೆನುತ ಸುರರಿರಿ
ಗಾರ ಕವಿದನು ಕರ್ಣನಳವಿಗೆ ಜಡಿವಡಾಯುಧದಿ (ದ್ರೋಣ ಪರ್ವ, ೧೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಕಾಳನ್ನು ತೂರಿದರೆ ಹೊಟ್ಟು ಗಾಳಿಗೆ ಹಾರಿಹೋಗುತ್ತದೆ. ಗಾಳಿ ಬೀಸಿದರೆ ಬೆಟ್ಟ ಸ್ಥಿರವಾಗಿಯೇ ಇರುತ್ತದೆ. ಹಾರಿಹೋಗುವುದಿಲ್ಲ. ನಿನಗೆ ಜಗತ್ತಿನಲ್ಲೇ ಎಣೆಯಾದವರಿಲ್ಲ. ನೀನು ಯೋಧನೇ ಸರಿ ಎನ್ನುತ್ತಾ ಘಟೋತ್ಕಚನು ಖಡ್ಗವನ್ನು ಹಿಡಿದು ನುಗ್ಗಿದನು.

ಅರ್ಥ:
ತೂರು: ಎಸೆ, ಬೀಸು; ತನಿ: ಹೆಚ್ಚಾಗು; ಹೊಟ್ಟು: ತೌಡು; ಗಾಳಿ: ವಾಯು; ಹಾರು: ಜಿಗಿ; ಕುಲಗಿರಿ: ದೊಡ್ಡ ಬೆಟ್ಟ; ಬೈಸಿಕೆ: ಕುಳಿತುಕೊಳ್ಳುವ ಒಂದು ಭಂಗಿ, ರೀತಿ; ಜಾರು: ಬೀಳು; ಮಝ: ಭಲೇ; ಪೂತು: ಕೊಂಡಾಟದ ಮಾತು; ಉಭಯ: ಎರಡು; ಕಟಕ: ಸೈನ್ಯ; ತೋರು: ಗೋಚರಿಸು; ಜಗ: ಪ್ರಪಂಚ; ಓಲೆಕಾರ: ಸೇವಕ; ಸುರ: ದೇವತೆ; ಅರಿ: ವೈರಿ; ಇರಿ: ಚುಚ್ಚು; ಕವಿ: ಆವರಿಸು; ಅಳವಿ: ಯುದ್ಧ; ಜಡಿ: ಬೆದರಿಕೆ; ಆಯುಧ: ಶಸ್ತ್ರ;

ಪದವಿಂಗಡಣೆ:
ತೂರಿದರೆ +ತನಿಹೊಟ್ಟು +ಗಾಳಿಗೆ
ಹಾರುವುದು +ಕುಲಗಿರಿಯ +ಬೈಸಿಕೆ
ಜಾರುವುದೆ +ಮಝ +ಪೂತು +ನಮ್ಮೀ+ಉಭಯ +ಕಟಕದಲಿ
ತೋರಲಿಲ್ಲ್+ಎಣೆ +ಜಗದೊಳ್+ಓಲೆಯ
ಕಾರ +ನೀನಹೆ+ಎನುತ +ಸುರರ್+ಇರಿ
ಗಾರ +ಕವಿದನು +ಕರ್ಣನ್+ಅಳವಿಗೆ +ಜಡಿವಡ್+ಆಯುಧದಿ

ಅಚ್ಚರಿ:
(೧) ಘಟೋತ್ಕಚನನ್ನು ಸುರರಿರಿಗಾರ (ದೇವತೆಗಳನ್ನು ಇರಿಯುವವ, ರಾಕ್ಷಸ) ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ತೂರಿದರೆ ತನಿಹೊಟ್ಟು ಗಾಳಿಗೆಹಾರುವುದು ಕುಲಗಿರಿಯ ಬೈಸಿಕೆ ಜಾರುವುದೆ

ಪದ್ಯ ೧೦: ಅಶ್ವತ್ಥಾಮನು ಯಾರ ಮೇಲೆ ಕತ್ತಿ ಹಿಡಿದು ಹೋದನು?

ಎಲವೊ ಫಡ ಮಾವನ ವಿಭಾಡಿಸಿ
ಗಳಹುವೀ ನಾಲಗೆಯ ಕೀಳುವೆ
ನೆಲೆ ಮಹಾದೇವಿಲ್ಲಿ ಮೇಳವೆನುತ್ತ ಖಂಡೆಯವ
ಸೆಳೆದು ಝೊಂಪಿಸಿ ಗುರುತನುಜನ
ವ್ವಳಿಸಲುಗಿದನಡಾಯುಧವನ
ಗ್ಗಳೆಯ ರವಿಸುತ ಮೇಲುವಾಯ್ದನು ದ್ರೋಣನಂದನನ (ದ್ರೋಣ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಎಲೋ ಕರ್ಣ, ಮಾವನನ್ನು ನಿಂದಿಸಿ ಬೊಗಳುತ್ತಿರುವ ನಿನ್ನ ನಾಲಗೆಯನ್ನು ಕೀಳುತ್ತೇನೆ, ಶಿವ ಶಿವ ನಮಗೆ ನೀನು ಸಮನೇ! ಎಂದು ಕತ್ತಿಯನ್ನು ಸೆಳೆದು ಕರ್ಣನ ಮೇಲೆ ನುಗ್ಗಲು, ಕರ್ಣನೂ ಕತ್ತಿಯನ್ನು ಸೆಳೆದು ಅಶ್ವತ್ಥಾಮನ ಮೇಲೆ ಹಾಯ್ದನು.

ಅರ್ಥ:
ಫಡ: ತಿರಸ್ಕಾರದ ಮಾತು; ವಿಭಾಡಿಸು: ನಾಶಮಾಡು; ಗಳಹ: ಮಾತಾಳಿ; ನಾಲಗೆ: ಜಿಹ್ವೆ; ಕೀಳು: ಎಳೆದು ಹಾಕು; ಮೇಳ: ಗುಂಪು; ಖಂಡೆಯ: ಕತ್ತಿ; ಸೆಳೆ: ಆಕರ್ಷಿಸು; ಝೊಂಪಿಸು: ಬೆಚ್ಚಿಬೀಳು; ತನುಜ: ಮಗ; ಅವ್ವಳಿಸು: ಆರ್ಭಟಿಸು; ಉಗಿ: ಹೊರಹಾಕು; ಆಯುಧ: ಶಸ್ತ್ರ; ಅಗ್ಗಳೆ: ಶ್ರೇಷ್ಠ; ರವಿಸುತ: ಸೂರ್ಯನ ಪುತ್ರ (ಕರ್ಣ); ಮೇಲುವಾಯ್ದ: ಮೇಲೆಬೀಳು; ನಂದನ: ಮಗ;

ಪದವಿಂಗಡಣೆ:
ಎಲವೊ +ಫಡ +ಮಾವನ +ವಿಭಾಡಿಸಿ
ಗಳಹುವ್+ಈ +ನಾಲಗೆಯ +ಕೀಳುವೆನ್
ಎಲೆ +ಮಹಾದೇವ್+ಇಲ್ಲಿ +ಮೇಳವೆನುತ್ತ +ಖಂಡೆಯವ
ಸೆಳೆದು +ಝೊಂಪಿಸಿ +ಗುರು+ತನುಜನ್
ಅವ್ವಳಿಸಲ್+ಉಗಿದನಡ್+ಆಯುಧವನ್
ಅಗ್ಗಳೆಯ +ರವಿಸುತ +ಮೇಲುವಾಯ್ದನು +ದ್ರೋಣ+ನಂದನನ

ಅಚ್ಚರಿ:
(೧) ಕರ್ಣನನ್ನು ಬಯ್ಯುವ ಪರಿ – ಎಲವೊ ಫಡ ಮಾವನ ವಿಭಾಡಿಸಿ ಗಳಹುವೀ ನಾಲಗೆಯ ಕೀಳುವೆ
(೨) ತನುಜ, ನಂದನ, ಸುತ – ಸಮಾನಾರ್ಥಕ ಪದ
(೩) ಅಶ್ವತ್ಥಾಮನನನ್ನು ದ್ರೋಣನಂದನ, ಗುರುತನುಜ ಎಂದು ಕರೆದಿರುವುದು

ಪದ್ಯ ೬೫: ಕೃಷ್ಣನು ಮಹಾಂಕುಶದ ಬಗ್ಗೆ ಏನು ಹೇಳಿದ?

ಆಡಬಾರದು ತೋರಿ ನುಡಿದರೆ
ಖೋಡಿ ನಿನಗಹುದೆಲೆ ಮರುಳೆ ನೀ
ನೋಡಲೆವೆ ಸೀವವು ಕಣಾ ನಿನ್ನಳವಿನಾಯುಧವೆ
ಹೂಡಲಾಪುದು ಜಗವನಂತಕ
ಗೂಡಲಾಪುದು ಮುನಿದರಿದ ಕೈ
ಮಾಡುವರೆ ನಿಲಬಾರದಜ ರುದ್ರಾಮರೇಂದ್ರರಿಗೆ (ದ್ರೋಣ ಪರ್ವ, ೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಅರ್ಜುನಾ, ನಾನು ಆಡಬಾರದು, ನಿನಗೆ ಬಿಡಿಸಿ ಹೇಳಿದರೆ ಮನಸ್ಸು ಕೆಡುತ್ತದೆ. ಹುಚ್ಚಾ, ಅದನ್ನು ನೋಡಿದರೆ ಎವೆಗಳು ಸೀದು ಹೋಗುತ್ತದೆ. ಅದನ್ನು ಗೆಲ್ಲಲು ನಿನಗೆ ಸತ್ವವಿಲ್ಲ. ಅದು ಜಗತ್ತನ್ನು ನಿಲ್ಲಿಸಬಲ್ಲದು, ಯಮನ ಬಾಯಿಗೆ ಜಗತ್ತನ್ನು ನೂಕಬಲ್ಲದು, ಇದು ಮುನಿದರೆ ಬ್ರಹ್ಮ ರುದ್ರ ಇಂದ್ರರು ಇದಿರಾಗಿ ನಿಲ್ಲಲಾರರು ಎಂದನು.

ಅರ್ಥ:
ಆಡು: ನುಡಿ; ತೊರು: ಪ್ರದರ್ಶಿಸು; ನುಡಿ: ಮಾತಾಡು; ಖೋಡಿ: ದುರುಳತನ, ನೀಚತನ; ಮರುಳ: ತಿಳಿಗೇಡಿ, ದಡ್ಡ; ಸೀವರಿಸು: ಬೇಜಾರಪಡು, ಚೀರು; ಸೀವು: ಸೀದು, ಕರಕಲಾಗು; ಅಳವಿ: ಶಕ್ತಿ; ಹೂಡು: ಅಣಿಗೊಳಿಸು; ಜಗ: ಪ್ರಪಂಚ; ಅಂತಕ: ಯಮ; ಗೂಡು: ನೆಲೆ; ಮುನಿ: ಕೋಪಗೊಳ್ಳು; ಕೈಮಾಡು: ಹೋರಾಡು; ನಿಲು: ನಿಲ್ಲು; ಅಜ: ಬ್ರಹ್ಮ; ರುದ್ರ: ಶಿವ; ಅಮರೇಂದ್ರ: ಇಂದ್ರ; ಅಮರ: ದೇವತೆ;

ಪದವಿಂಗಡಣೆ:
ಆಡಬಾರದು +ತೋರಿ +ನುಡಿದರೆ
ಖೋಡಿ +ನಿನಗಹುದ್+ಎಲೆ +ಮರುಳೆ +ನೀ
ನೋಡಲ್+ಎವೆ +ಸೀವವು +ಕಣಾ +ನಿನ್ನಳವಿನ್+ಆಯುಧವೆ
ಹೂಡಲಾಪುದು +ಜಗವನ್+ಅಂತಕ
ಗೂಡಲಾಪುದು +ಮುನಿದರಿದ +ಕೈ
ಮಾಡುವರೆ +ನಿಲಬಾರದ್+ಅಜ+ ರುದ್ರ+ಅಮರೇಂದ್ರರಿಗೆ

ಅಚ್ಚರಿ:
(೧) ಮಹಾಂಕುಶದ ಶಕ್ತಿ – ಮುನಿದರಿದ ಕೈಮಾಡುವರೆ ನಿಲಬಾರದಜರುದ್ರಾಮರೇಂದ್ರರಿಗೆ
(೨) ಗೂಡಲಾಪುದು, ಹೂಡಲಾಪುದು – ಪ್ರಾಸ ಪದಗಳು

ಪದ್ಯ ೬೩: ಕೃಷ್ಣನು ಅರ್ಜುನನನ್ನು ಏನು ಕೇಳಿದ?

ತಿರುಗಿ ಕಂಡನು ಕೃಷ್ಣನೀತನ
ಪರಿಯನರಿದನು ಮನದಲಿವನು
ತ್ತರವ ಕೇಳುವೆವೆಂದು ಪಾರ್ಥನ ನುಡಿಸಿದನು ನಗುತ
ಉರವಣಿಸುತಿದೆ ಮತ್ತೆ ಕರಿ ನಿಜ
ಕರದೊಳಾಯುಧವಿಲ್ಲ ಘನ ಸಂ
ಗರಕೆ ಬೇಸರು ತೋರಿತೇ ತನ್ನಾಣೆ ಹೇಳೆಂದ (ದ್ರೋಣ ಪರ್ವ, ೩ ಸಂಧಿ, ೬೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಹಿಂದಕ್ಕೆ ತಿರುಗಿ ಅರ್ಜುನನು ಕುಳಿತ ರೀತಿಯನ್ನು ನೋಡಿ ಅದಕ್ಕೆ ಕಾರಣವನ್ನು ಊಹಿಸಿ ತಿಳಿದು, ಇವನು ಏನು ಹೇಳುತ್ತಾನೋ ಕೇಳೋಣ ಎಂದು ನಗುತ್ತಾ ಅರ್ಜುನನನ್ನು ಮಾತನಾಡಿಸುತ್ತಾ, ಅರ್ಜುನಾ, ಸುಪ್ರತೀಕವು ಮತ್ತೆ ಮುನ್ನುಗ್ಗುತ್ತಿದೆ, ನಿನ್ನ ಕೈಯಲ್ಲಿ ಆಯುಧವಿಲ್ಲ, ಘನ ಸಂಗ್ರಾಮದ ನಡುವೆ ಬೇಸರವಾಯಿತೇ ನನ್ನಾಣೆ ಹೇಳು ಎಂದು ಕೇಳಿದನು.

ಅರ್ಥ:
ತಿರುಗು: ಸುತ್ತು; ಕಂಡು: ನೋಡು; ಪರಿ: ರೀತಿ; ಅರಿ: ತಿಳಿ; ಮನ: ಮನಸ್ಸು; ಉತ್ತರ: ಜವಾಬು; ಕೇಳು: ಆಲಿಸು; ನುಡಿ: ಮಾತು; ನಗು: ಹರ್ಷ; ಉರವಣಿಸು: ಆತುರಿಸು; ಕರಿ: ಆನೆ; ಕರ: ಹಸ್ತ; ಆಯುಧ: ಶಸ್ತ್ರ; ಘನ: ಶ್ರೇಷ್ಠ; ಸಂಗರ: ಯುದ್ಧ; ಬೇಸರ: ಬೇಜಾರು; ಆಣೆ: ಪ್ರಮಾಣ; ಹೇಳು: ತಿಳಿಸು;

ಪದವಿಂಗಡಣೆ:
ತಿರುಗಿ +ಕಂಡನು +ಕೃಷ್ಣನ್+ಈತನ
ಪರಿಯನ್+ಅರಿದನು +ಮನದಲ್+ಇವನ್
ಉತ್ತರವ +ಕೇಳುವೆವೆಂದು +ಪಾರ್ಥನ +ನುಡಿಸಿದನು+ ನಗುತ
ಉರವಣಿಸುತಿದೆ+ ಮತ್ತೆ +ಕರಿ+ ನಿಜ
ಕರದೊಳ್+ಆಯುಧವಿಲ್ಲ+ ಘನ+ ಸಂ
ಗರಕೆ+ ಬೇಸರು+ ತೋರಿತೇ+ ತನ್ನಾಣೆ+ ಹೇಳೆಂದ

ಅಚ್ಚರಿ:
(೧) ಅರ್ಜುನನನ್ನು ಛೇಡಿಸುವ ಪರಿ – ಉರವಣಿಸುತಿದೆ ಮತ್ತೆ ಕರಿ ನಿಜ ಕರದೊಳಾಯುಧವಿಲ್ಲ ಘನ ಸಂ
ಗರಕೆ ಬೇಸರು ತೋರಿತೇ

ಪದ್ಯ ೩೬: ಸೈನಿಕರು ಯಾವ ಕಾರ್ಯದಲ್ಲಿ ತೊಡಗಿದ್ದರು?

ಹಿಳಿದ ಲೋಹದ ಸೀಸಕಂಗಳ
ಬಲಿಸಿದರು ಹೋಳಾದ ಕವಚವ
ಹೊಲಿಸಿದರು ಬಾಹುರಕೆ ಸವಗದ ಬಿರುಕ ಬೆಸಸಿದರು
ಕಳಚಿದಾಯುಧದಾಯತದ ಕೀ
ಲ್ಗೊಳಿಸಿದರು ಖಡ್ಗಕ್ಕೆ ಕುಂತವ
ಕಳೆದು ಕಾವನು ತೊಡಿಸುತಿರ್ದುದು ಸೇನೆಯೆರಡರಲಿ (ಭೀಷ್ಮ ಪರ್ವ, ೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಎರಡೂ ಪಾಳೆಯಗಳಲ್ಲಿ ಸೈನಿಕರು, ಬಿರಿದು ಹೋದ ಸೀಸಕಗಳನ್ನು ಬಲಪಡಿಸಿದರು. ಹರಿದ ಕವಚಗಳನ್ನು ಹೊಲಿಸಿದರು. ಬಾಹುರಕ್ಷೆ ಕವಚಗಳ ಬಿರುಕನ್ನು ಸರಿಮಾಡಿದರು. ಹಿಡಿಕೆಯಿಂದ ಕಿತ್ತ ಆಯುಧಗಳಿಗೆ ಕೀಲನ್ನು ಹಾಕಿ ಭ್ರದ್ರಪಡಿಸಿದರು. ಖಡ್ಗಕ್ಕೆ ಕುಂತದ ಹಿಡಿಕೆಯನ್ನು ತೊಡಿಸಿದರು.

ಅರ್ಥ:
ಹಿಳಿ: ಸುರಿಸು, ವರ್ಷಿಸು; ಲೋಹ: ಖನಿಜ ಧಾತು; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಬಲಿಸು: ಭದ್ರಪಡಿಸು; ಹೋಳು: ಸೀಳು; ಕವಚ: ಹೊದಿಕೆ, ಉಕ್ಕಿನ ಅಂಗಿ; ಹೊಲಿಸು: ಸೇರಿಸು, ಹೆಣೆ; ಬಾಹು: ತೋಳು, ಭುಜ; ಸವಗ: ಕವಚ; ಬಿರುಕು: ಸೀಳು; ಬೆಸಸು: ಸೇರಿಸು; ಕಳಚು: ಸಡಲಿಸು; ಆಯುಧ: ಶಸ್ತ್ರ; ಆಯತ: ಉಚಿತವಾದ; ಕೀಲು:ಅಗುಳಿ; ಒಳಿಸು: ಸರಿಪಡಿಸು; ಖಡ್ಗ: ಕತ್ತಿ; ಕುಂತ: ಈಟಿ, ಭರ್ಜಿ; ಕಳೆ: ತೆಗೆ, ಹೊರತರು; ಕಾವು: ಶಾಖ; ತೊಡಿಸು: ಹೊದಿಸು; ಸೇನೆ: ಸೈನ್ಯ;

ಪದವಿಂಗಡಣೆ:
ಹಿಳಿದ +ಲೋಹದ +ಸೀಸಕಂಗಳ
ಬಲಿಸಿದರು +ಹೋಳಾದ +ಕವಚವ
ಹೊಲಿಸಿದರು +ಬಾಹುರಕೆ+ ಸವಗದ +ಬಿರುಕ+ ಬೆಸಸಿದರು
ಕಳಚಿದ್+ಆಯುಧದ್+ಆಯತದ+ ಕೀಲ್ಗ್
ಒಳಿಸಿದರು +ಖಡ್ಗಕ್ಕೆ +ಕುಂತವ
ಕಳೆದು +ಕಾವನು +ತೊಡಿಸುತಿರ್ದುದು +ಸೇನೆ+ಎರಡರಲಿ

ಅಚ್ಚರಿ:
(೧) ಕ ಕಾರದ ಸಾಲು ಪದ – ಖಡ್ಗಕ್ಕೆ ಕುಂತವ ಕಳೆದು ಕಾವನು

ಪದ್ಯ ೪೪: ಉತ್ತರನು ಸಾರಥಿಯನ್ನು ಯಾರೆಂದು ಊಹಿಸಿದನು?

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡಕು
ಮಾರರಾಯುಧತತಿಯ ನೀನೆಂತರಿವೆ ಹೇಳೆಂದ (ವಿರಾಟ ಪರ್ವ, ೭ ಸಂಧಿ, ೪೪ ಪದ್ಯ)

ತಾತ್ಪರ್ಯ:
ಎಲೈ ಸಾರಥಿ ನೀನಾದರು ಯಾರು? ಅರ್ಜುನನೋ, ನಕುಲನೋ, ವಾಯುಪುತ್ರನಾದ ಭೀಮನೋ, ವೀರ ಯುಧಿಷ್ಠಿರನೋ, ಸಹದೇವನೋ ಅಥವ ಅವರ ಬಾಂಧವನೋ, ಎಲೈ ಶೂರ,ನಾನು ಬೇಡಿಕೊಳ್ಳುತ್ತಿದ್ದೇನೆ, ದಯವಿಟ್ಟು ತಿಳಿಸು, ಈ ಪಾಂಡವರ ಆಯುಧಗಳೆಲ್ಲವೂ ನಿನಗೆ ಹೇಗೆ ತಿಳಿದಿದೆ ಎಂದು ಕೇಳಿದನು.

ಅರ್ಥ:
ವೀರ: ಶೂರ; ಸುತ: ಮಗ; ಮಾರುತ: ವಾಯು; ಮೇಣ್: ಅಥವ; ಬಾಂಧವ: ಸಂಬಂಹಿಕ; ಧೀರ: ಶೂರ; ಹೇಳು: ತಿಳಿಸು; ಬೇಡು: ಯಾಚಿಸು; ಕಾರಣ: ನಿಮಿತ್ತ, ಹೇತು; ವಿಸ್ತರಿಸು: ವಿವರಣೆ; ಕುಮಾರ: ಮಕ್ಕಳು; ಆಯುಧ: ಶಸ್ತ್ರ; ತತಿ: ಗುಂಪು; ಅರಿ: ತಿಳಿ; ಹೇಳು: ತಿಳಿಸು;

ಪದವಿಂಗಡಣೆ:
ಆರು+ ನೀನ್+ಅರ್ಜುನನೊ +ನಕುಲನೊ
ಮಾರುತನ +ಸುತನೋ +ಯುಧಿಷ್ಠಿರ
ವೀರನೋ +ಸಹದೇವನೋ +ಮೇಣ್+ಅವರ +ಬಾಂಧವನೊ
ಧೀರ +ಹೇಳೈ +ಬೇಡಿಕೊಂಬೆನು
ಕಾರಣವ +ವಿಸ್ತರಿಸು +ಪಾಂಡ+ಕು
ಮಾರರ್+ಆಯುಧ+ತತಿಯ+ ನೀನೆಂತರಿವೆ+ ಹೇಳೆಂದ

ಅಚ್ಚರಿ:
(೧) ವೀರ, ಧೀರ; ಸುತ, ಕುಮಾರ – ಸಮನಾರ್ಥಕ ಪದ