ಪದ್ಯ ೧೫: ಭಾನುಮತಿಯನ್ನು ಯಾರು ಹಿಂಬಾಲಿಸಿದರು?

ಧರಣಿಪತಿ ಹೊರವಂಟನಂತಃ
ಪುರವ ಬಿಸುಟರು ಭಾನುಮತಿ ಸಹಿ
ತರಸಿಯರು ಹೊರವಂಟರೇಕಾಂಬರದ ಬಿಡುಮುಡಿಯ
ಕರದಬಸುರಿನ ಹೊಯ್ಲ ಕಜ್ಜಳ
ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು ನೆರೆದುದು ಲಕ್ಕ ಸಂಖ್ಯೆಯಲಿ (ಗದಾ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭಾನುಮತಿಯೊಂದಿಗೆ ಅರಮನೆಯನ್ನು ಬಿಟ್ಟು ಹೊರಟನು. ರಾಣಿವಾಸದವರೆಲ್ಲರೂ ಏಕವಸ್ತ್ರವನ್ನು ಧರಿಸಿ ಮುಡಿಯನ್ನು ಬಿಚ್ಚಿಕೊಂಡು ಹೊರಟರು. ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿರಲು, ಕೈಯಿಂದ ಹೊಟ್ಟೆಯನ್ನು ಹೊಡೆದುಕೊಳ್ಳುತ್ತಾ ಲಕ್ಷ ಸಂಖ್ಯೆಯ ಸ್ತ್ರೀಯರು ಅವರನ್ನು ಹಿಂಬಾಲಿಸಿದರು.

ಅರ್ಥ:
ಧರಣಿಪತಿ: ರಾಜ; ಹೊರವಂಟ: ನಡೆ, ತೆರಳು; ಅಂತಃಪುರ: ರಾಣಿವಾಸದ ಅರಮನೆ; ಬಿಸುಟು: ಹೊರಹಾಕು; ಸಹಿತ: ಜೊತೆ; ಅರಸಿ: ರಾಣಿ; ಏಕ: ಒಂದೇ; ಅಂಬರ:ಬಟ್ಟೆ; ಬಿಡು: ತೆರೆದ; ಮುಡಿ: ಶಿರ, ಕೂದಲು; ಕರ: ಹಸ್ತ; ಬಸುರು: ಹೊಟ್ಟೆ; ಹೊಯ್ಲು: ಹೊಡೆತ; ಕಜ್ಜಳ: ಕಾಡಿಗೆ; ಲುಳಿ: ಸೊಗಸು, ಕಾಂತಿ; ನಯನ: ಕಣ್ಣು; ಅಂಬು: ನೀರು; ನಯನಾಂಬು: ಕಣ್ಣೀರು; ಕಾತರ: ಕಳವಳ, ಉತ್ಸುಕತೆ; ಕಮಲಾಕ್ಷಿ: ಕಮಲದಂತ ಕಣ್ಣುಳ್ಳ (ಹೆಣ್ಣು); ನೆರೆ: ಗುಂಪು; ಲಕ್ಕ: ಲಕ್ಷ; ಸಂಖ್ಯೆ: ಎಣಿಕೆ;

ಪದವಿಂಗಡಣೆ:
ಧರಣಿಪತಿ+ ಹೊರವಂಟನ್+ಅಂತಃ
ಪುರವ +ಬಿಸುಟರು +ಭಾನುಮತಿ +ಸಹಿತ್
ಅರಸಿಯರು +ಹೊರವಂಟರ್+ಏಕ+ಅಂಬರದ +ಬಿಡು+ಮುಡಿಯ
ಕರದ+ಬಸುರಿನ +ಹೊಯ್ಲ+ ಕಜ್ಜಳ
ಪರಿಲುಳಿತ +ನಯನಾಂಬುಗಳ +ಕಾ
ತರಿಪ+ ಕಮಲಾಕ್ಷಿಯರು +ನೆರೆದುದು +ಲಕ್ಕ +ಸಂಖ್ಯೆಯಲಿ

ಅಚ್ಚರಿ:
(೧) ನೋವನ್ನು ಚಿತ್ರಿಸುವ ಪರಿ – ಕರದಬಸುರಿನ ಹೊಯ್ಲ ಕಜ್ಜಳ ಪರಿಲುಳಿತ ನಯನಾಂಬುಗಳ ಕಾ
ತರಿಪ ಕಮಲಾಕ್ಷಿಯರು

ಪದ್ಯ ೫೩: ಶಬರರನ್ನು ಭೀಮನು ಹೇಗೆ ಸನ್ಮಾನಿಸಿದನು?

ಇತ್ತನವದಿರಿಗಂಗಚಿತ್ತವ
ನುತ್ತಮಾಂಬರ ವೀರ ನೂಪುರ
ಮುತ್ತಿನೇಕಾವಳಿಯ ಕರ್ಣಾಭರಣ ಮುದ್ರಿಕೆಯ
ಹೊತ್ತ ಹರುಷದ ಹೊಳೆವ ಕಂಗಲ
ತೆತ್ತಿಸಿದ ಪುಳಕದ ಸಘಾಡಿಕೆ
ವೆತ್ತ ಸುಮ್ಮಾನದಲಿ ಬಂದನು ರಯನರಮನೆಗೆ (ಗದಾ ಪರ್ವ, ೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ಭೀಮನು ಉತ್ತಮವಾದ ಬಟ್ಟೆಗಳು, ವೀರ ನೂಪುರ, ಮುತ್ತಿನ ಏಕಾವಳಿ, ಕರ್ಣಾಭರಣ, ಉಂಗುರಗಳನ್ನು ಇವರಿಗೆ ಉಡುಗೊರೆಯಾಗಿ ನೀಡಿದನು. ಕಣ್ಣುಗಳು ಹೊಳೆಯುತ್ತಿರಲು, ರೋಮಾಂಚನಗೊಂಡು ಅತಿಶಯ ಸಂತೋಷದಿಂದ ಧರ್ಮಜನ ಅರಮನೆಗೆ ಬಂದನು.

ಅರ್ಥ:
ಅಂಗ: ದೇಹದ ಭಾಗ; ಅಂಗಚಿತ್ತ: ಉಡುಗೊರೆಯಾಗಿ ತನ್ನ ಮೈ ಮೇಲಿನಿಂದ ತೆಗೆದು ಕೊಡುವ ವಸ್ತ್ರ; ಉತ್ತಮ: ಶ್ರೇಷ್ಠ; ಅಂಬರ: ಬಟ್ಟೆ; ವೀರ: ಶೂರ; ನೂಪುರ: ಕಾಲಿನ ಗೆಜ್ಜೆ; ಮುತ್ತು: ಮೌಕ್ತಿಕ; ಆಭರಣ: ಒಡವೆ; ಕರ್ಣ: ಕಿವಿ; ಕರ್ಣಾಭರಣ: ಓಲೆ; ಮುದ್ರಿಕೆ: ಸಂಕೇತವನ್ನು ಕೆತ್ತಿದ ಉಂಗುರ; ಹೊತ್ತು: ಪಡೆದು; ಹರುಷ: ಸಂತಸ; ಹೊಳೆ: ಪ್ರಕಾಶ; ಕಂಗಳು: ಕಣ್ಣು; ತೆತ್ತಿಸು: ಜೋಡಿಸು, ಕೂಡಿಸು; ಪುಳಕ: ರೋಮಾಂಚನ; ಸಘಾಡ: ರಭಸ; ಸುಮ್ಮಾನ: ಸಂತಸ; ಬಂದು: ಆಗಮಿಸು; ರಾಯ: ರಾಜ; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಇತ್ತನ್+ಅವದಿರಿಗ್+ಅಂಗಚಿತ್ತವನ್
ಉತ್ತಮ+ಅಂಬರ +ವೀರ +ನೂಪುರ
ಮುತ್ತಿನ್+ಏಕಾವಳಿಯ +ಕರ್ಣಾಭರಣ+ ಮುದ್ರಿಕೆಯ
ಹೊತ್ತ +ಹರುಷದ +ಹೊಳೆವ +ಕಂಗಳ
ತೆತ್ತಿಸಿದ +ಪುಳಕದ +ಸಘಾಡಿಕೆ
ವೆತ್ತ +ಸುಮ್ಮಾನದಲಿ +ಬಂದನು +ರಾಯನ್+ಅರಮನೆಗೆ

ಅಚ್ಚರಿ:
(೧) ೧ ಸಾಲು ಒಂದೇ ಪದವಾಗಿ ರಚನೆ – ಇತ್ತನವದಿರಿಗಂಗಚಿತ್ತವನುತ್ತಮಾಂಬರ
(೨) ಹ ಕಾರದ ತ್ರಿವಳಿ ಪದ – ಹೊತ್ತ ಹರುಷದ ಹೊಳೆವ

ಪದ್ಯ ೧೩: ಅಶ್ವತ್ಥಾಮನ ಯುದ್ಧದ ತೀವ್ರತೆ ಹೇಗಿತ್ತು?

ತಡೆದನಶ್ವತ್ಥಾಮ ಭೀಮನ
ಕಡುಹನಾ ಸಹದೇವ ನಕುಲರ
ನಡುಗಿಸಿದನುಡುಗಿಸಿದನಾಟೋಪವನು ಪವನಜನ
ಇಡಿದುದಂಬರವಂಬಿನಲಿ ಕೈ
ಗಡಿಯನಂಬಿನ ಲಕ್ಷ್ಯಭೇದವ
ನುಡಿಯಬಲ್ಲವನಾರು ಗುರುನಂದನನ ಸಮರದಲಿ (ಶಲ್ಯ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಭೀಮನ ಉಗ್ರತೆಯನ್ನು ತಡೆದು ನಿಲ್ಲಿಸಿದನು. ನಕುಲ ಸಹದೇವರನ್ನು ನಡುಗಿಸಿದನು. ಆಕಾಶವು ಬಾಣಗಳಿಂದ ತುಂಬಿತು. ಅವನ ಲಕ್ಷ್ಯ ಭೇದವನ್ನು ಅರಿಯಲು ಯಾರಿಗೆ ಸಾಧ್ಯ?

ಅರ್ಥ:
ತಡೆ: ನಿಲ್ಲು; ಕಡುಹು: ಪರಾಕ್ರಮ, ಸಾಹಸ; ಅಡುಗಿಸು: ಕಾಣದಂತೆ ಮಾಡು; ಉಡುಗು: ಅಡಗಿ ಹೋಗು; ಆಟೋಪ: ಆವೇಶ, ದರ್ಪ; ಪವನಜ: ಭೀಮ; ಇಡಿ: ಗ್ರಹಿಸು; ಅಂಬು: ಬಾಣ; ಅಂಬರ: ಆಗಸ; ಕಡಿ: ಸೀಳು; ಲಕ್ಷ್ಯ: ಗುರಿ; ಭೇದ: ಮುರಿ; ನುಡಿ: ಮಾತು; ಬಲ್ಲವ: ತಿಳಿದವ; ನಂದನ: ಮಗ; ಸಮರ: ಯುದ್ಧ;

ಪದವಿಂಗಡಣೆ:
ತಡೆದನ್+ಅಶ್ವತ್ಥಾಮ +ಭೀಮನ
ಕಡುಹನಾ+ ಸಹದೇವ +ನಕುಲರನ್
ಅಡುಗಿಸಿದನ್+ಉಡುಗಿಸಿದನ್+ಆಟೋಪವನು +ಪವನಜನ
ಇಡಿದುದ್+ಅಂಬರವ್+ಅಂಬಿನಲಿ +ಕೈ
ಗಡಿಯನ್+ಅಂಬಿನ +ಲಕ್ಷ್ಯ+ಭೇದವ
ನುಡಿಯಬಲ್ಲವನಾರು +ಗುರುನಂದನನ +ಸಮರದಲಿ

ಅಚ್ಚರಿ:
(೧) ರೂಪಕದ ಬಳಕೆ – ಇಡಿದುದಂಬರವಂಬಿನಲಿ; ಅಂಬರ, ಅಂಬು ಪದದ ಬಳಕೆ
(೨) ಅಡುಗಿಸು, ಉಡುಗಿಸು ಪದಗಳ ಬಳಕೆ
(೩) ಅಡುಗಿಸಿದನುಡುಗಿಸಿದನಾಟೋಪವನು, ಇಡಿದುದಂಬರವಂಬಿನಲಿ – ಒಂದೇ ಪದವಾಗಿ ಬಳಕೆ

ಪದ್ಯ ೨: ಸೂರ್ಯನು ಯಾವ ಯೋಚನೆಯಲ್ಲಿ ಹುಟ್ಟಿದನು?

ನೆಗ್ಗಿದನು ಗಾಂಗೇಯನಮರರೊ
ಳೊಗ್ಗಿದನು ಕಲಿದ್ರೋಣನೆನ್ನವ
ನಗ್ಗಳಿಕೆಗೂಣೆಯವ ಬೆರೆಸಿದನೆನ್ನ ಬಿಂಬದಲಿ
ಉಗ್ಗಡದ ರಣವಿದಕೆ ಶಲ್ಯನ
ನಗ್ಗಿಸುವನೀ ಕೌರವೇಶ್ವರ
ನೆಗ್ಗ ನೋಡುವೆನೆಂಬವೊಲು ರವಿಯಡರ್ದನಂಬರವ (ಶಲ್ಯ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಷ್ಮನು ನೆಗ್ಗಿಹೋದ, ದ್ರೋಣನು ದೇವತೆಗಳೊಡನೆ ಸೇರಿದನು. ನನ್ನ ಮಗನಿಗೆ ನನ್ನ ಸಂಗತಿಯನ್ನೇ ಹೇಳಿ ದುರ್ಬಲಗೊಳಿಸಿದನು. ಇಂದಿನ ಮಹಾಸಮರದಲ್ಲಿ ಶಲ್ಯನನ್ನು ಕಳೆದುಕೊಳ್ಳುವ ರೀತಿಯನ್ನು ನೋಡುತ್ತೇನೆ ಎಂದುಕೊಂಡನೋ ಎಂಬಂತೆ, ಸೂರ್ಯನು ಹುಟ್ಟಿದನು.

ಅರ್ಥ:
ನೆಗ್ಗು: ಕುಗ್ಗು, ಕುಸಿ; ಗಾಂಗೇಯ: ಭೀಷ್ಮ; ಅಮರ: ದೇವ; ಒಗ್ಗು: ಸೇರು; ಕಲಿ: ಶೂರ; ಅಗ್ಗಳಿಕೆ: ಶ್ರೇಷ್ಠ; ಊಣೆ: ನ್ಯೂನತೆ, ಕುಂದು; ಬೆರೆಸು: ಸೇರಿಸು; ಬಿಂಬ: ಕಾಂತಿ; ಉಗ್ಗಡ: ಉತ್ಕಟತೆ, ಅತಿಶಯ; ರಣ: ಯುದ್ಧರಂಗ; ನಗ್ಗು: ಕುಗ್ಗು, ಕುಸಿ; ಎಗ್ಗು: ದಡ್ಡತನ; ನೋಡು: ವೀಕ್ಷಿಸು; ರವಿ: ಸೂರ್ಯ; ಅಡರು: ಹೊರಬಂದ, ಮೇಲಕ್ಕೇರು; ಅಂಬರ: ಆಗಸ;

ಪದವಿಂಗಡಣೆ:
ನೆಗ್ಗಿದನು +ಗಾಂಗೇಯನ್+ಅಮರರೊಳ್
ಒಗ್ಗಿದನು +ಕಲಿದ್ರೋಣನ್+ಎನ್ನವನ್
ಅಗ್ಗಳಿಕೆಗ್+ಊಣೆಯವ +ಬೆರೆಸಿದನ್+ಎನ್ನ +ಬಿಂಬದಲಿ
ಉಗ್ಗಡದ +ರಣವಿದಕೆ +ಶಲ್ಯನನ್
ಅಗ್ಗಿಸುವನ್+ಈ+ ಕೌರವೇಶ್ವರನ್
ಎಗ್ಗ +ನೋಡುವೆನ್+ಎಂಬವೊಲು +ರವಿ+ಅಡರ್ದನ್+ಅಂಬರವ

ಅಚ್ಚರಿ:
(೧) ಬೆಳಗಾಯಿತು ಎಂದು ಹೇಳಲು – ರವಿಯಡರ್ದನಂಬರವ ಪದಗುಚ್ಛದ ಬಳಕೆ

ಪದ್ಯ ೫೫: ಪಾಂಡವ ಸೈನ್ಯದಲ್ಲಿ ಯಾವ ರಸವು ತುಂಬಿತ್ತು?

ಬಿಸುಟ ಕೈದುಗಳೆಲ್ಲವನು ಕೈ
ವಶವ ಮಾಡಿತು ಸೇನೆ ಲಜ್ಜಾ
ರಸಕೆ ಗುರಿಯಾಯ್ತೊಮ್ಮೆ ಮರಳಿದು ಹರುಷಮಯರಸಕೆ
ಮುಸುಕುದಲೆಯಲಿ ಮುರಿದುದದು ಭಯ
ರಸದ ರಹಿಯಲಿ ತಿರುಗಿತಿದು ರವಿ
ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ (ದ್ರೋಣ ಪರ್ವ, ೧೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ತಾನು ಹೊರಹಾಕಿದ್ದ ಆಯುಧಗಳೆಲ್ಲವನ್ನೂ ಪಾಂಡವಸೇನೆ ತೆಗೆದುಕೊಂಡಿತು. ನಾಚಿಕೆಗೀಡಾಗಿದ್ದ ಸೇನೆಯು ಹರ್ಷಿಸಿತು. ಕೌರವ ಸೈನ್ಯವು ತಲೆಗೆ ಮುಸುಕು ಹಾಕಿಕೊಂಡು ಬೀಡಿಗೆ ಭಯಪಡುತ್ತಾ ತಿರುಗಿ ಬಂದಿತು. ಸೂರ್ಯನು ವಿರಾಗದಿಂದ ಮುಖದಿರುಗಿಸಿ ಆಕಾಶವನ್ನು ಬಿಟ್ಟುಹೋದನು.

ಅರ್ಥ:
ಬಿಸುಟು: ಹೊರಹಾಕು; ಕೈದು: ಆಯುಧ; ಕೈ: ಹಸ್ತ; ವಶ: ಅಧೀನ; ಕೈವಶ: ಪಡೆ; ಸೇನೆ: ಸೈನ್ಯ; ಲಜ್ಜೆ: ನಾಚಿಕೆ; ರಸ: ಸಾರ; ಗುರಿ: ಈಡು, ಉದ್ದೇಶ; ಮರಳು: ಹಿಂದಿರುಗು; ಹರುಷ: ಸಂತಸ; ಮುಸುಕು: ಆವರಿಸು; ತಲೆ: ಶಿರ; ಮುರಿ: ಸೀಳು; ಭಯ: ಅಂಜಿಕೆ; ರಹಿ: ರೀತಿ, ಪ್ರಕಾರ; ತಿರುಗು: ಅಲೆದಾಡು, ಸುತ್ತು; ರವಿ: ಸೂರ್ಯ; ಮುಸುಡು: ಮುಖ; ವಿರಾಗ: ವಿರಕ್ತಿ, ವೈರಾಗ್ಯ; ಬೀಳ್ಕೊಡು: ತೆರಳು; ಅಂಬರ: ಆಗಸ;

ಪದವಿಂಗಡಣೆ:
ಬಿಸುಟ +ಕೈದುಗಳ್+ಎಲ್ಲವನು+ ಕೈ
ವಶವ +ಮಾಡಿತು +ಸೇನೆ +ಲಜ್ಜಾ
ರಸಕೆ +ಗುರಿಯಾಯ್ತ್+ಒಮ್ಮೆ +ಮರಳಿದು +ಹರುಷಮಯ+ರಸಕೆ
ಮುಸುಕು+ತಲೆಯಲಿ +ಮುರಿದುದದು +ಭಯ
ರಸದ +ರಹಿಯಲಿ +ತಿರುಗಿತಿದು+ ರವಿ
ಮುಸುಡ +ತಿರುಹಿ +ವಿರಾಗದಲಿ+ ಬೀಳ್ಕೊಟ್ಟನ್+ಅಂಬರವ

ಅಚ್ಚರಿ:
(೧) ದಿನ ಕಳೆಯಿತು ಎಂದು ಹೇಳಲು – ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ
(೨) ಲಜ್ಜಾರಸ, ಭಯರಸ, ಹರುಷರಸ – ರಸ ಪದದ ಬಳಕೆ

ಪದ್ಯ ೩೨: ದ್ರೋಣನ ಮೇಲೆ ಹೇಗೆ ಆಕ್ರಮಣವಾಯಿತು?

ಮೇಲೆ ಬಿದ್ದುದು ಮುಳಿಸಿನಲಿ ಪಾಂ
ಚಾಲರಾಯನ ಥಟ್ಟು ನಿಶಿತ ಶ
ರಾಳಿಯಲಿ ಹೂಳಿದನು ಧೃಷ್ಟದ್ಯುಮ್ನನಂಬರವ
ಬಾಲಕರಲೇ ಖಡ್ಗಧಾರೆಯ
ಮೇಲೆ ಮೋಹಿದ ಮಧುವ ಸವಿಯಲಿ
ನಾಲಗೆಯಲಿವರೊಲ್ಲರೆಂದನು ನಗುತ ಕಲಿದ್ರೋಣ (ದ್ರೋಣ ಪರ್ವ, ೧೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಚಾಲ ಸೈನ್ಯವು ದ್ರೋಣನ ಮೇಲೆ ಹಲ್ಲೆ ಮಾಡಿತು, ಧೃಷ್ಟದ್ಯುಮ್ನನು ಆಕಾಶ ತುಂಬುವಂತೆ ಬಾಣಗಳನ್ನು ಬಿಟ್ಟನು. ದ್ರೋಣನು ಎಷ್ಟೇ ಆಗಲಿ, ಇವರು ಬಾಲಕರು, ಖಡ್ಗದ ಅಲಗಿಗೆ ಹಚ್ಚಿದ ಜೇನುತುಪ್ಪವನ್ನು ನಾಲಗೆಯಲ್ಲಿ ನೆಕ್ಕಲಿ, ಇವರು ಸುಮ್ಮನಿರುವವರಲ್ಲ ಎಂದನು.

ಅರ್ಥ:
ಬಿದ್ದು: ಬೀಳು, ಕುಸಿ; ಮುಳಿಸು: ಕೋಪ; ರಾಯ: ರಾಜ; ಥಟ್ಟು: ಗುಂಪು; ನಿಶಿತ: ಹರಿತವಾದುದು; ಶರಾಳಿ: ಬಾಣಗಳ ಗುಂಪು; ಹೂಳು: ಹೂತು ಹಾಕು; ಅಂಬರ: ಆಕಾಶ; ಬಾಲಕ: ಮಗು; ಖಡ್ಗ: ಕತ್ತಿ; ಧಾರೆ: ಮಳೆ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಮಧು: ಜೇನು; ಸವಿ: ಸಿಹಿ; ನಾಲಗೆ: ಜಿಹ್ವೆ; ಒಲ್ಲೆ: ಬೇಡ; ನಗು: ಹರ್ಷ; ಕಲಿ: ಶೂರ;

ಪದವಿಂಗಡಣೆ:
ಮೇಲೆ +ಬಿದ್ದುದು +ಮುಳಿಸಿನಲಿ +ಪಾಂ
ಚಾಲರಾಯನ +ಥಟ್ಟು +ನಿಶಿತ +ಶ
ರಾಳಿಯಲಿ +ಹೂಳಿದನು +ಧೃಷ್ಟದ್ಯುಮ್ನನ್+ಅಂಬರವ
ಬಾಲಕರಲೇ+ ಖಡ್ಗಧಾರೆಯ
ಮೇಲೆ +ಮೋಹಿದ +ಮಧುವ +ಸವಿಯಲಿ
ನಾಲಗೆಯಲ್+ಇವರ್+ಒಲ್ಲರೆಂದನು +ನಗುತ +ಕಲಿದ್ರೋಣ

ಅಚ್ಚರಿ:
(೧) ರೂಪಕದ ಪ್ರಯೋಗ – ಬಾಲಕರಲೇ ಖಡ್ಗಧಾರೆಯ ಮೇಲೆ ಮೋಹಿದ ಮಧುವ ಸವಿಯಲಿ ನಾಲಗೆಯಲಿವರೊಲ್ಲರೆಂದನು

ಪದ್ಯ ೧: ಘಟೋತ್ಕಚನ ದೇಹವು ಭೂಮಿಯ ಮೇಲೆ ಹೇಗೆ ಬಿತ್ತು?

ಕೇಳು ಧೃತರಾಷ್ಟ್ರವನಿಪ ನಿ
ಮ್ಮಾಳನವರಾಳನು ವಿಭಾಡಿಸಿ
ನೀಲಗಿರಿಯೆಡೆವೊಕ್ಕುದೆನೆ ಖಳನೊಡಲು ನಿಡುಗೆಡೆಯೆ
ಕಾಳೆಗದ ಕೈಚಳಕದವನು
ಬ್ಬಾಳುತನವಕ್ಕುಡಿಸೆಯಿಕ್ಕೆಲ
ದಾಳು ತೆಗೆದುದು ಬಿಗಿದ ಕತ್ತಲೆ ಮೊಗೆದುದಂಬರವ (ದ್ರೋಣ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ನೀಲಗಿರಿಯು ಎರಡೂ ಸೈನ್ಯಗಳ ಮೇಲೆ ಬಿದ್ದಿತೆನ್ನುವಂತೆ ಘಟೋತ್ಕಚನ ದೇಹವು ಭೂಮಿಗೆ ಬಿದ್ದಿತು. ಯುದ್ಧ ಚಾತುರ್ಯವುಳ್ಳ ಅವನ ಕೈಗಳು ನಿಷ್ಕ್ರಿಯವಾಗಲು, ಎರಡು ಕಡೆಯ ಸೈನ್ಯಗಳೂ ಹಿಂದೆಗೆದವು. ಕತ್ತಲೆ ಆಕಾಶವನ್ನು ಆವರಿಸಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ಆಳು: ಸೇವಕ, ಸೈನಿಕ; ವಿಭಾಡಿಸು: ನಾಶಮಾಡು; ಗಿರಿ: ಬೆಟ್ಟ; ಒಕ್ಕು: ಹರಿ, ಪ್ರವಹಿಸು; ಖಳ: ದುಷ್ಟ, ದಾನವ; ನಿಡುಗೆಡೆ: ನೇರವಾಗಿ ಬೀಳು; ಕಾಳೆಗ: ಯುದ್ಧ; ಕೈಚಳಕ: ನೈಪುಣ್ಯ; ಉಬ್ಬಾಳು: ಉತ್ಸಾಹಿಯಾದ ಶೂರ; ಇಕ್ಕೆಲ: ಎರಡೂ ಕಡೆ; ತೆಗೆ: ಹೊರತರು; ಬಿಗಿ: ಬಂಧಿಸು; ಕತ್ತಲೆ: ಅಂಧಕಾರ; ಮೊಗೆ: ನುಂಗು, ಕಬಳಿಸು; ಅಂಬರ: ಆಗಸ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ನಿ
ಮ್ಮಾಳನ್+ಅವರಾಳನು+ ವಿಭಾಡಿಸಿ
ನೀಲಗಿರಿಯೆಡೆವೊಕ್ಕುದೆನೆ+ ಖಳನೊಡಲು +ನಿಡುಗೆಡೆಯೆ
ಕಾಳೆಗದ +ಕೈಚಳಕದವನ್
ಉಬ್ಬಾಳುತನವಕ್ಕುಡಿಸೆ+ಇಕ್ಕೆಲ
ದಾಳು +ತೆಗೆದುದು +ಬಿಗಿದ +ಕತ್ತಲೆ +ಮೊಗೆದುದ್+ಅಂಬರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಿಮ್ಮಾಳನವರಾಳನು ವಿಭಾಡಿಸಿ ನೀಲಗಿರಿಯೆಡೆವೊಕ್ಕುದೆನೆ ಖಳನೊಡಲು ನಿಡುಗೆಡೆಯೆ

ಪದ್ಯ ೩೧: ಕೌರವರು ಅರ್ಜುನನನ್ನು ಹೇಗೆ ಹಂಗಿಸಿದರು?

ಫಡಫಡರ್ಜುನ ಹೋಗು ಹೋಗಳ
ವಡದು ಸೈಂಧವನಳಿವು ಭಾಷೆಯ
ನಡಸಬಲ್ಲರೆ ಬೇಗ ಬೆಳಗಿಸು ಹವ್ಯವಾಹನನ
ಕಡಲ ಮಧ್ಯದ ಗಿರಿಗೆ ಸುರಪತಿ
ಕದುಗಿ ಮಾಡುವುದೇನೆನುತ ಕೈ
ಗಡಿಯ ಬಿಲ್ಲಾಳುಗಳು ಬಿಗಿದರು ಸರಳಲಂಬರವ (ದ್ರೋಣ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕೌರವ ವೀರರು, ಅರ್ಜುನ, ಸೈಂಧವನನ್ನು ಕೊಲ್ಲಲಾಗುವುದಿಲ್ಲ. ಪ್ರತಿಜ್ಞೆಯನ್ನು ಪೂರೈಸಬೇಕೆಂದಿದ್ದರೆ, ಬೇಗ ಬೆಂಕಿಯನ್ನು ಹೊತ್ತಿಸು, ಸಮುದ್ರದಲ್ಲಿ ಮುಳುಗಿರುವ ಪರ್ವತದ ಮೇಲೆ ಇಮ್ದ್ರನು ಸಿಟ್ಟಾಗಿ ಏನು ಮಾಡಬಲ್ಲ? ಎಂದು ಹಂಗಿಸುತ್ತಾ ಆಕಾಶವನ್ನು ಬಾಣಗಳಿಂದ ತುಂಬಿದರು.

ಅರ್ಥ:
ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಅಳವಡಿಸು: ಸರಿಮಾಡು; ಅಳಿವು: ನಾಶ; ಭಾಷೆ: ನುಡಿ; ಅಡಸು: ಆಕ್ರಮಿಸು, ಮುತ್ತು; ಬೇಗ: ತ್ವರಿತ; ಬೆಳಗು: ಹೊಳೆ; ಹವ್ಯವಾಹನ: ಅಗ್ನಿ; ಕಡಲು: ಸಾಗರ; ಮಧ್ಯ: ನಡುವೆ; ಗಿರಿ: ಬೆಟ್ಟ; ಸುರಪತಿ: ಇಂದ್ರ; ಕಡುಗು: ಶಕ್ತಿಗುಂದು; ಕೈಗಡಿಯ: ಶೂರ, ಪರಾಕ್ರಮ; ಬಿಲ್ಲಾಳು: ಬಿಲ್ಲುಗಾರ; ಬಿಗಿ: ಭದ್ರವಾಗಿರುವುದು; ಸರಳು: ಬಾಣ; ಅಂಬರ: ಆಗಸ;

ಪದವಿಂಗಡಣೆ:
ಫಡಫಡ್+ಅರ್ಜುನ +ಹೋಗು +ಹೋಗ್
ಅಳವಡದು +ಸೈಂಧವನ್+ಅಳಿವು +ಭಾಷೆಯನ್
ಅಡಸಬಲ್ಲರೆ+ ಬೇಗ +ಬೆಳಗಿಸು +ಹವ್ಯವಾಹನನ
ಕಡಲ +ಮಧ್ಯದ +ಗಿರಿಗೆ +ಸುರಪತಿ
ಕದುಗಿ +ಮಾಡುವುದೇನ್+ಎನುತ +ಕೈ
ಗಡಿಯ +ಬಿಲ್ಲಾಳುಗಳು +ಬಿಗಿದರು+ ಸರಳಲ್+ಅಂಬರವ

ಅಚ್ಚರಿ:
(೧) ರೂಪಕದ ಪ್ರಯೋಗ – ಕಡಲ ಮಧ್ಯದ ಗಿರಿಗೆ ಸುರಪತಿ ಕದುಗಿ ಮಾಡುವುದೇನ್

ಪದ್ಯ ೬: ಅಭಿಮನ್ಯುವಿನ ಯುದ್ಧವು ಯಾರನ್ನು ನಾಚಿಸಿತು?

ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿಪ ಕವಿ ಯಾರಿನ್ನು ಪಾರ್ಥ ಕುಮಾರನಾಹವವ (ದ್ರೋಣ ಪರ್ವ, ೬ ಸಂಧಿ, ೬ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ರಥಗಳ ರಾಶಿಯನ್ನು ಕಂಡು ಮೇರುಪರ್ವತ ನಾಚಿತು, ಹಾರಿದ ತಲೆಗಳು ತುಂಬಿದುದರಿಂದ ಆಕಾಶ ನಾಚಿತು, ಹರಿದು ಕಡಲಾದ ರಕ್ತವು ಸಮುದ್ರದ ಬಿಂಕವನ್ನು ಬಿಡಿಸಿತು, ಅಬ್ಬಬ್ಬಾ ಶಿವ ಶಿವಾ ಅಭಿಮನ್ಯುವಿನ ಯುದ್ಧವನ್ನು ವರ್ಣಿಸುವ ಕರಿ ಯಾರು?

ಅರ್ಥ:
ಕೆಡೆ: ಬೀಳು, ಕುಸಿ; ರಥ: ಬಂಡಿ, ತೇರು; ಕಾಂಚನ: ಚಿನ್ನ; ಅದ್ರಿ: ಬೆಟ್ಟ; ಅಡಸು: ಬಿಗಿಯಾಗಿ ಒತ್ತು; ನಾಚಿಕೆ: ಲಜ್ಜೆ; ಅಭ್ರ: ಆಗಸ; ಇಡಿ: ಚಚ್ಚು, ಕುಟ್ಟು; ತಲೆ: ಶಿರ; ಬೀರು: ಒಗೆ, ಎಸೆ; ಭಂಗ: ಮುರಿಯುವಿಕೆ; ಅನುಪಮ: ಹೋಲಿಕೆಗೆ ಮೀರಿದ; ಅಂಬರ: ಆಗಸ; ಕಡಲು: ಸಾಗರ; ಅರುಣಾಂಬು: ಕೆಂಪಾದ ನೀರು (ರಕ್ತ); ಜಲಧಿ: ಸಾಗರ; ಬಿಡಿಸು: ತೊರೆ; ಬಿಂಕ: ಗರ್ವ, ಜಂಬ; ನುಡಿ: ಮಾತು; ಕವಿ: ಆವರಿಸು; ಕುಮಾರ: ಮಗ; ಆಹವ: ಯುದ್ಧ;

ಪದವಿಂಗಡಣೆ:
ಕೆಡೆದ +ರಥ +ಸಲೆ +ಕಾಂಚನ+ಅದ್ರಿಯನ್
ಅಡಸಿದವು +ನಾಚಿಕೆಯನ್+ಅಭ್ರದೊಳ್
ಇಡಿಯೆ +ತಲೆ +ಬೀರಿದವು +ಭಂಗವನ್+ಅನುಪಮ+ಅಂಬರಕೆ
ಕಡಲುವರಿವ್+ಅರುಣಾಂಬು +ಜಲಧಿಗೆ
ಬಿಡಿಸಿದವು+ ಬಿಂಕವನು +ಶಿವ +ಶಿವ
ನುಡಿಪ +ಕವಿ +ಯಾರಿನ್ನು +ಪಾರ್ಥ +ಕುಮಾರನ್+ಆಹವವ

ಅಚ್ಚರಿ:
(೧) ರೂಪಕದ ಪ್ರಯೋಗ – ಕೆಡೆದ ರಥ ಸಲೆ ಕಾಂಚನಾದ್ರಿಯನಡಸಿದವು; ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ; ಕಡಲುವರಿವರುಣಾಂಬು ಜಲಧಿಗೆ ಬಿಡಿಸಿದವು ಬಿಂಕವನು

ಪದ್ಯ ೪೩: ಸೂರ್ಯೋದಯವು ಹೇಗೆ ಕಂಡಿತು?

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ (ದ್ರೋಣ ಪರ್ವ, ೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ರಾತ್ರಿಯಲ್ಲಿ ಚಂದ್ರನು ರಾಜ್ಯಭಾರ ಮಾಡುತ್ತಿದ್ದನು. ಅವನು ಹೋಗಲು ಅರಾಜಕತೆಯುಂಟಾಯಿತು. ಕುಮುದಗಳು ಬಾಗಿಲುಗಳು ಮುಚ್ಚಿದವು. ದುಂಬಿಗಳು ಮಕರಂದದ ಸಿರಿವಂತರಾದ ಕಮಲಗಳ ಅರಮನೆಗಳನ್ನು ಮುತ್ತಿದವು. ಆಕಾಶವನ್ನು ಸೂರ್ಯರಶ್ಮಿಗಳು ತುಂಬಿದವು. ಜನರ ಕಣ್ಣುಗಳನ್ನು ಮುಚ್ಚಿದ್ದ ರೆಪ್ಪೆಗಳು ತೆರೆದವು. ಚಕ್ರವಾಕ ಪಕ್ಷಿಗಳ ಸೆರೆಯನ್ನು ಬಿಡಿಸಿದರು.

ಅರ್ಥ:
ಜಗ: ಪ್ರಪಂಚ; ಅರಾಜಕ: ಅವ್ಯವಸ್ಥೆ; ಕುಮುದ: ಬಿಳಿಯ ನೈದಿಲೆ, ನೈದಿಲೆ; ಆಳಿ: ಸಮೂಹ; ಬಾಗಿಲು: ದ್ವಾರ; ಹೂಡು: ಅಣಿಗೊಳಿಸು; ಸೂರು: ಧ್ವನಿ, ಉಲಿ, ಸ್ವರ; ಕವಿ: ಆವರಿಸು; ದುಂಬಿ: ಭ್ರಮರ; ಸಿರಿ: ಸಂಪತ್ತು; ಅರಮನೆ: ರಾಜರ ಆಲಯ; ಉಗಿ: ಹೊರಹಾಕು; ಅಂಬರ: ಆಗಸ; ಮಯೂಖ: ಕಿರಣ, ರಶ್ಮಿ; ಆಳಿ: ಗುಂಪು; ಭುವನ: ಭೂಮಿ; ಜನ: ಮನುಷ್ಯ; ಕಂಗಳು: ಕಣ್ಣು; ತಗಹು: ಅಡ್ಡಿ, ತಡೆ; ತೆಗೆ: ಹೊರಹಾಕು; ಸೆರೆ: ಬಂಧನ; ಜಕ್ಕವಕ್ಕಿ: ಚಕ್ರವಾಕ ಪಕ್ಷಿ;

ಪದವಿಂಗಡಣೆ:
ಜಗವ್+ಅರಾಜಕವಾಯ್ತು+ ಕುಮುದಾ
ಳಿಗಳ +ಬಾಗಿಲು +ಹೂಡಿದವು +ಸೂ
ರೆಗರು+ ಕವಿದುದು +ತುಂಬಿಗಳು +ಸಿರಿವಂತರ್+ಅರಮನೆಯ
ಉಗಿದವ್+ಅಂಬರವನು +ಮಯೂಖಾ
ಳಿಗಳು +ಭುವನದ +ಜನದ+ ಕಂಗಳ
ತಗಹು+ ತೆಗೆದುದು +ಸೆರೆಯ +ಬಿಟ್ಟರು +ಜಕ್ಕವಕ್ಕಿಗಳ

ಅಚ್ಚರಿ:
(೧) ಸೂರ್ಯೋದಯವನ್ನು ಅತ್ಯಂತ ಸೃಜನಾತ್ಮಕತೆಯಲ್ಲಿ ವರ್ಣಿಸಿರುವುದು