ಪದ್ಯ ೪: ಪಾಂಡವರಲ್ಲಿ ಯಾರು ಸರೋವರವನ್ನು ಮುತ್ತಿದರು?

ವರ ಯುಧಾಮನ್ಯೂತ್ತಮೌಂಜಸ
ರಿರಲು ಪಂಚದ್ರೌಪದೀಸುತ
ರರಸ ನಿಮ್ಮ ಯುಯುತ್ಸು ಸೃಂಜಯ ಸೋಮಕಾದಿಗಳು
ಕರಿಗಳೈನೂರೈದು ಸಾವಿರ
ತುರಗಪಯದಳವೆಂಟು ಸಾವಿರ
ವೆರಡು ಸಾವಿರ ರಥವಿದರಿಮೋಹರದ ಪರಿಶೇಷ (ಗದಾ ಪರ್ವ, ೫ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವ ಸೇನೆಯಲ್ಲಿ ಯುಧಾಮನ್ಯು, ಉತ್ತಮೌಜಸ, ಉಪಪಾಂಡವರು, ಯುಯುತ್ಸು, ಸೃಂಜಯ ಸೋಮಕನೇ ಮೊದಲಾದವರೂ, ಐದುನೂರು ಆನೆಗಳೂ, ಐದುಸಾವಿರ ಕುದುರೆಗಳೂ, ಎರಡು ಸಾವಿರ ರಥಗಳೂ, ಎಂಟು ಸಾವಿರ ಕಾಲಾಳುಗಳೂ, ಉಳಿದವರು, ಎಲ್ಲರೂ ದ್ವೈಪಾಯನ ಸರೋವರವನ್ನು ಮುತ್ತಿದರು.

ಅರ್ಥ:
ವರ: ಶ್ರೇಷ್ಠ; ಸುತ: ಮಗ; ಅರಸ: ರಾಜ; ಆದಿ: ಮುಂತಾದ; ಕರಿ: ಆನೆ; ಸಾವಿರ: ಸಹಸ್ರ; ತುರಗ: ಅಶ್ವ; ರಥ: ಬಂಡಿ; ಮೋಹರ: ಯುದ್ಧ; ಪರಿಶೇಷ: ಉಳಿದಿದ್ದು; ಪಯದಳ: ಕಾಲಾಳುಗಳ ಸೈನ್ಯ;

ಪದವಿಂಗಡಣೆ:
ವರ +ಯುಧಾಮನ್ಯ+ಉತ್ತಮೌಂಜಸರ್
ಇರಲು +ಪಂಚ+ದ್ರೌಪದೀ+ಸುತರ್
ಅರಸ +ನಿಮ್ಮ +ಯುಯುತ್ಸು +ಸೃಂಜಯ +ಸೋಮಕಾದಿಗಳು
ಕರಿಗಳ್+ಐನೂರೈದು+ ಸಾವಿರ
ತುರಗ+ಪಯದಳವೆಂಟು +ಸಾವಿರವ್
ಎರಡು +ಸಾವಿರ +ರಥವಿದರಿ+ಮೋಹರದ +ಪರಿಶೇಷ

ಅಚ್ಚರಿ:
(೧) ಸಾವಿರ – ೩ ಬಾರಿ ಪ್ರಯೋಗ

ಪದ್ಯ ೩: ಕೊಳದ ಬಳಿ ಯಾರು ಬಂದು ನಿಂತರು?

ಬಂದುದರಿಬಲ ಕೊಳನ ತೀರದ
ಲಂದು ವೇಢೈಸಿದರು ಸರಸಿಯ
ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ
ಅಂದಣದಲೈತಂದು ಧರ್ಮಜ
ನಿಂದನರ್ಜುನ ಭೀಮ ಯಮಳ ಮು
ಕುಂದ ಸಾತ್ಯಕಿ ದ್ರುಪದಸೂನು ಶಿಖಂಡಿಗಳು ಸಹಿತ (ಗದಾ ಪರ್ವ, ೫ ಸಂಧಿ, ೩ ಪದ್ಯ)

ತಾತ್ಪರ್ಯ:
ಶತ್ರುಸೇನೆಯು ಬಂದು ಕೊಳದ ತೀರವನ್ನು ಮುತ್ತಿ ಸುತ್ತುವರಿದು ಭೂಮಿ ಬಿರಿಯುವಂತೆ ಬೊಬ್ಬೆಯನ್ನು ಹಾಕಿದರು. ಯುಧಿಷ್ಠಿರನು ಪಲ್ಲಕ್ಕಿಯಲ್ಲಿ ಬಂದಿಳಿದು ನಿಂತನು. ಅವನೊಡನೆ ಭೀಮಾರ್ಜುನನಕುಲಸಹದೇವರೂ, ಶ್ರೀಕೃಷ್ಣನೂ ಧೃಷ್ಟದ್ಯುಮ್ನ ಶಿಖಂಡಿ ಬಂದು ನಿಂತರು.

ಅರ್ಥ:
ಅರಿ: ವೈರಿ; ಬಲ: ಸೈನ್ಯ; ಕೊಳ: ಸರೋವರ; ತೀರ: ದಡ; ವೇಡೈಸು: ಸುತ್ತುವರಿ; ಸರಸಿ: ಸರೋವರ; ಬಂದಿಕಾರ: ಕಳ್ಳ, ಸೆರೆಹಿಡಿಯಲ್ಪಟ್ಟವ; ಬೊಬ್ಬಿರಿ: ಗರ್ಜಿಸು; ಅಬ್ಬರ: ಆರ್ಭಟ; ಧರೆ: ಭೂಮಿ; ಬಿರಿ: ಬಿರುಕು, ಸೀಳು; ಅಂದಣ: ಪಲ್ಲಕ್ಕಿ, ಮೇನೆ; ಐತಂದು: ಬಂದು ಸೇರು; ಸೂನು: ಮಗ; ಸಹಿತ: ಜೊತೆ; ನಿಂದು: ನಿಲ್ಲು; ಯಮಳ: ನಕುಲ ಸಹದೇವ;

ಪದವಿಂಗಡಣೆ:
ಬಂದುದ್+ಅರಿಬಲ+ ಕೊಳನ +ತೀರದಲ್
ಅಂದು +ವೇಢೈಸಿದರು+ ಸರಸಿಯ
ಬಂದಿಕಾರರು +ಬೊಬ್ಬಿರಿದರ್+ಅಬ್ಬರಕೆ +ಧರೆ +ಬಿರಿಯೆ
ಅಂದಣದಲ್+ಐತಂದು +ಧರ್ಮಜ
ನಿಂದನ್+ಅರ್ಜುನ +ಭೀಮ +ಯಮಳ +ಮು
ಕುಂದ +ಸಾತ್ಯಕಿ +ದ್ರುಪದ+ಸೂನು +ಶಿಖಂಡಿಗಳು+ ಸಹಿತ

ಅಚ್ಚರಿ:
(೧) ಕೊಳ, ಸರಸಿ – ಸಮಾನಾರ್ಥಕ ಪದ
(೨) ಶಬ್ದದ ತೀವ್ರತೆ – ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ

ನುಡಿಮುತ್ತುಗಳು: ಗದಾ ಪರ್ವ ೫ ಸಂಧಿ

  • ಸರಸಿಯ ಬಂದಿಕಾರರು ಬೊಬ್ಬಿರಿದರಬ್ಬರಕೆ ಧರೆ ಬಿರಿಯೆ – ಪದ್ಯ  
  • ಕಂಟಕದಿನುತ್ತರಿಸುವುದು ಕಂಟಕವ ಮಾಯಾವಿಗಳ ವಿದ್ಯೆಗಳ ಪರಿಹರಿಸುವುದು ಮಾಯೆಯಿಂ ಪ್ರತಿಗರಳದಲಿ ಗರಳವನು – ಪದ್ಯ  
  • ಕಾಲನೇಮಿಯ ತಲೆಯ ಕೊಂಡನು ಚಕ್ರದಲಿ ದೈತ್ಯಾರಿ ಪೂರ್ವದಲಿ – ಪದ್ಯ  
  • ಢಾಳರನು ಢವಳರನು ಠಕ್ಕಿನ ಠೌಳಿಕಾರರನವರ ವಿದ್ಯೆಯಲಾಳಿಗೊಂಡಡೆ ದೋಷವಿಲ್ಲ – ಪದ್ಯ  ೧೧
  • ನಿರ್ಭೀತಿಯಲಿ ನಿಮ್ಮರಸಿಯುಟ್ಟುದ ನೀತ ಸುಲಿಸಿದನಿವನು ಸುಜನನೆ – ಪದ್ಯ  ೧೨
  • ಸಲಿಲವ್ಯಾಳನೇ ನೀನಕಟ ಜಲದೊಳಗಾಳುವರೆ ಕಾಳಾಯ್ತು ನಿನ್ನಲಿ ಗರುವ ಶಶಿವಂಶ – ಪದ್ಯ  ೧೪
  • ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ – ಪದ್ಯ  ೧೫
  • ಪಲಾಯನ ಪಂಡಿತನನುತ್ತರನನಾತನ ಗಂಡ ನೀನಾದೈ ಪಲಾಯನಸಿರಿಯ ಸೂರೆಯಲಿ – ಪದ್ಯ  ೧೮
  • ಮಡದಿಯರು ತಮತಮಗೆ ನಗರೇ ಹೊಯ್ದು ಕರತಳವ – ಪದ್ಯ  ೧೯
  • ಸಾವಿನಲಿ ಹಿಂದುಳಿದ ಜೀವನ ಜೀವನವೆ ಜೀವನನಿವಾಸವಿದಾವ ಗರುವಿಕೆ – ಪದ್ಯ  ೨೦
  • ಓಡಿ ಪಾತಾಳವನು ಹೊಕ್ಕಡೆಕೂಡೆ ಸಂಧಿಸಿ ನಿನ್ನ ಬೇಂಟೆಯನಾಡದಿಹ ಠಾವುಂಟೆ ಕುರುಪತಿ – ಪದ್ಯ  ೨೧
  • ಭೂವಳಯಮಾನ್ಯನು ದೈನ್ಯವೃತ್ತಿಯ ಬಳಸುವರೆ – ಪದ್ಯ  ೨೩
  • ಭೀಮವನದಾವಾಗ್ನಿ ಹೊರವಡು ಭೀಮಭಾಸ್ಕರರಾಹು ಹೊರವಡು ಭೀಮಗರ್ಜನೆ ಮಧುರಗೀತವೆ – ಪದ್ಯ  ೨೬
  • ಅಡಗಿದಡೆ ಬಿಡುವೆನೆ ಭಯಜ್ವರ ಹಿಡಿದ ನಿನ್ನನು ಸೆಳೆದು ರಣದಲಿ ತೊಡೆಯ ಕಳಚವ ಮೃತ್ಯು – ಪದ್ಯ  ೨೭
  • ಅನುಚಿತವು ಸಲಿಲಪ್ರವೇಶವು ಜನಪತಿಗೆ ಕರ್ತವ್ಯವೆಂಬುದು ಜನಜನಿತ – ಪದ್ಯ  ೩೦
  • ಮಂತ್ರಾಕ್ಷರಕೆ ಜವನಿಕೆಯಾದುದೈ – ಪದ್ಯ  ೩೧
  • ದುರುದುರಿಪ ಬಿಸುಸುಯ್ಲ ಸೆಕೆಯಲಿ ಮರುಗಿ ಕುದಿದುದು ನೀರು – ಪದ್ಯ  ೩೨
  • ಜಲಧಿ ಮಧ್ಯದೊಳೇಳ್ವ ವಡಬಾನಲನವೊಲು – ಪದ್ಯ  ೩೪
  • ಚಾಮೀಕರ ಪರಿಷ್ಕೃತ ವಜ್ರಮಯ ಬಂಧುರದ ಸೀಸಕ – ಪದ್ಯ  ೩೯
  • ಹುಟ್ಟಿದವರಿಗೆ ಸಾವು ಹಣೆಯಲಿ ಕಟ್ಟಿಹುದು ವಿಧಿ – ಪದ್ಯ  ೪೪
  • ಮೆಚ್ಚಿದನು ಯಮಸೂನು ಛಲ ನಿನಗೊಚ್ಚತವಲೈ – ಪದ್ಯ  ೪೫
  • ಬಾಯಿಬಡಿಕನು ಸತ್ವದಲಿ ನಾಗಾಯುತದ ಬಲವೆಂಬ ಡೊಂಬಿನ ವಾಯುವಿನ ಮಗ – ಪದ್ಯ  ೪೭
  • ಲಟಕಟಿಸಿದವು ಕಣ್ಣಾಲಿ ಬದ್ಧಭ್ರುಕುಟಿಭಂಗದಲಿ – ಪದ್ಯ  ೫೫

ಪದ್ಯ ೨: ಸರೋವರದಲ್ಲಿ ಯಾವ ರೀತಿ ತಳಮಳವಾಯಿತು?

ತಳಮಳಲ ಮೊಗೆಮೊಗೆದು ಕದಡಿತು
ಕೊಳನ ಜಲಚರನಿಚಯವೀ ಬೊ
ಬ್ಬುಳಿಕೆ ಮಿಗಲೊಬ್ಬುಳಿಕೆ ನೆಗೆದವು ವಿಗತವೈರದಲಿ
ದಳವ ಬಿಗಿದಂಬುಜದೊಳಡಗಿದ
ವಳಿನಿಕರ ಹಾರಿದವು ಹಂಸಾ
ವಳಿ ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು (ಗದಾ ಪರ್ವ, ೫ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ಮಹಾ ಶಬ್ದಕ್ಕೆ ಸರೋವರದ ತಲದ ಮಳಲು ಮೇಲೆದ್ದು ನೀರು ಕದಡಿತು. ಜಲಚರಕಗಳು ವೈರವನ್ನು ಮರೆತು ಒಟ್ಟಾಗಿ ಮೇಲಕ್ಕೆ ನೆಗೆದವು. ಕಮಲಪುಷ್ಪಗಳಲ್ಲಿದ್ದ ದುಂಬಿಗಳು ಬೆದರಿ ಅಲ್ಲಿಯೇ ಅಡಗಿಕೊಂಡವು. ಹಂಸಗಳು ಹಾರಿಹೋದವು. ಚಕ್ರವಾಕ ಪಕ್ಷಿಗಳು ಜಾರಿಕೊಂಡು ಆಚೆಗೆ ಹೋದವು.

ಅರ್ಥ:
ತಳಮಳ: ಗೊಂದಲ; ಮೊಗೆ: ಹೊರಹಾಕು; ಕದಡು: ಬಗ್ಗಡ, ರಾಡಿ, ಕಲಕಿದ ದ್ರವ; ಕೊಳ: ಸರೋವರ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ನಿಚಯ: ಗುಂಪು; ಬೊಬ್ಬುಳಿ: ನೀರುಗುಳ್ಳೆ; ಉಬ್ಬು: ಅತಿಶಯ, ಹೆಚ್ಚಾಗು; ನೆಗೆ: ಜಿಗಿ; ವಿಗತ: ಮರೆತ; ವೈರ: ಶತ್ರು, ಹಗೆತನ; ದಳ: ಸೈನ್ಯ; ಬಿಗಿ: ಗಟ್ಟಿ,ದೃಢ; ಅಂಬುಜ: ತಾವರೆ; ಅಡಗು: ಬಚ್ಚಿಟ್ಟುಕೊಳ್ಳು; ಅಳಿ: ದುಂಬಿ; ನಿಕರ: ಗುಂಪು; ಹಾರು: ಲಂಘಿಸು; ಹಂಸ: ಮರಾಲ; ಜವಾಯಿಲತನ: ವೇಗ, ಕ್ಷಿಪ್ರತೆ; ಜಗುಳು: ಜಾರು, ಸಡಿಲವಾಗು; ಜಕ್ಕವಕ್ಕಿ: ಚಕ್ರವಾಕ ಪಕ್ಷಿ; ಆವಳಿ: ಗುಂಪು;

ಪದವಿಂಗಡಣೆ:
ತಳಮಳಲ +ಮೊಗೆಮೊಗೆದು +ಕದಡಿತು
ಕೊಳನ +ಜಲಚರ+ನಿಚಯವ್+ಈ+ ಬೊ
ಬ್ಬುಳಿಕೆ +ಮಿಗಲೊಬ್ಬುಳಿಕೆ+ ನೆಗೆದವು+ ವಿಗತ+ ವೈರದಲಿ
ದಳವ +ಬಿಗಿದ್+ಅಂಬುಜದೊಳ್+ಅಡಗಿದವ್
ಅಳಿ+ನಿಕರ +ಹಾರಿದವು +ಹಂಸಾ
ವಳಿ +ಜವಾಯಿಲತನದಿ +ಜಗುಳ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧) ನಿಕರ, ನಿಚಯ, ಆವಳಿ – ಸಮಾನಾರ್ಥಕ ಪದ
(೨) ಜ ಕಾರದ ತ್ರಿವಳಿ ಪದ – ಜವಾಯಿಲತನದಿ ಜಗುಳ್ದವು ಜಕ್ಕವಕ್ಕಿಗಳು

ಪದ್ಯ ೧: ಪಾಂಡವರು ಕೊಳದ ಬಳಿ ಹೇಗೆ ಶಬ್ದವನ್ನು ಮಾಡಿದರು?

ಕೇಳು ಧೃತರಾಷ್ಟ್ರವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಶತ್ರುಗಳು ಕೊಳದ ಸುತ್ತಲೂ ಗುಂಪುಗಟ್ಟಿ ಗರ್ಜಿಸಲಾರಂಭಿಸಿದರು. ಭೇರಿಗಳು ಮತ್ತೆ ಮತ್ತೆ ಬಡಿದವು. ಹೆಗ್ಗಾಳೆಗಳು ಚೀರಿದವು. ಅನೇಕ ವಾದ್ಯಗಳನ್ನು ಬಾರಿಸಿದರು. ಆ ಶಬ್ದಕ್ಕೆ ಕುಲಗಿರಿಗಳ ಬೆಸುಗೆ ಬಿಟ್ಟಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ರಿಪು: ವೈರಿ; ಜಾಲ: ಗುಂಪು; ಜಡಿ: ಬೆದರಿಕೆ, ಗದರಿಸು; ಕೊಳ: ಸರೋವರ; ತಡಿ: ದಡ; ತೂಳ:ಆವೇಶ, ಉನ್ಮಾದ; ಬಲು: ಬಹಳ; ಬೊಬ್ಬೆ: ಆರ್ಭಟ, ಗರ್ಜನೆ; ಅಬ್ಬರ: ಆರ್ಭಟ; ಅಭ್ರ: ಆಗಸ; ಮಂಡಲ: ವರ್ತುಲಾಕಾರ, ಜಗತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ಬಹುವಿಧ: ಬಹಳ; ವಾದ್ಯ: ಸಂಗೀತದ ಸಾಧನ; ಹೆಗ್ಗಾಳೆ: ದೊಡ್ಡ ಕಹಳೆ; ಚೀರು: ಗರ್ಜಿಸು, ಕೂಗು; ಬೈಸಿಕೆ: ಬೆಸುಗೆ, ಆಸನ, ಪದ; ಬಿಡೆ: ತೊರೆ; ಕುಲಾದ್ರಿ: ದೊಡ್ಡ ಬೆಟ್ಟ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ರಿಪು
ಜಾಲ +ಜಡಿದುದು +ಕೊಳನ +ತಡಿಯಲಿ
ತೂಳಿದುದು +ಬಲು+ಬೊಬ್ಬೆ+ಅಬ್ಬರವ್+ಅಭ್ರ+ಮಂಡಲವ
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳ +ಬಹುವಿಧ +ವಾದ್ಯ+ರವ+ ಹೆ
ಗ್ಗಾಳೆಗಳು +ಚೀರಿದವು +ಬೈಸಿಕೆ +ಬಿಡೆ +ಕುಲಾದ್ರಿಗಳ

ಅಚ್ಚರಿ:
(೧) ಒಂದೇ ಪದದ ರಚನೆ – ಬಲುಬೊಬ್ಬೆಯಬ್ಬರವಭ್ರಮಂಡಲವ