ಪದ್ಯ ೬: ಸಂಜಯನ ಪ್ರಾಣವನ್ನು ಯಾರು ಕಾಪಾಡಿದರು?

ಸೆಳೆದಡಾಯ್ಧವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ (ಗದಾ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಸಾತ್ಯಕಿಯು ಕತ್ತಿಯನ್ನೆಳೆದು, ಸಂಜಯನ ತಲೆಯ ಹಿಂಭಾಗಕ್ಕೆ ಹೊಡೆಯಲು ಸನ್ನದ್ಧನಾದನು. ಆದರೆ ಅದೇ ಸಮಯಕ್ಕೆ ವೇದವ್ಯಾಸರು ಅಲ್ಲಿಗೆ ಬಂದು, ಸಾತ್ಯಕಿ ಒಳ್ಳೆಯ ಕೆಲಸಕ್ಕೆ ಕೈಹಾಕಿದ್ದೀಯ, ಸಂಜಯನು ದುಷ್ಟನೇ? ಅವನು ನಮ್ಮ ಶಿಷ್ಯ, ನೀನು ಅವನನ್ನು ಕೊಲ್ಲಬಹುದೇ ಎಂದು ಕೇಳಿ ಅಡಾಯುಧವನ್ನು ತಪ್ಪಿಸಿದನು.

ಅರ್ಥ:
ಸೆಳೆ: ಜಗ್ಗು, ಎಳೆ; ಅಡಾಯ್ದ: ಅಡ್ಡ ಬಂದು; ಹೆಡತಲೆ: ಹಿಂದಲೆ; ಹೂಡು: ಕಟ್ಟು; ಅರಿ: ಸೀಳು; ಸಮಯ: ಕಾಲ; ಸುಳಿ: ಕಾಣಿಸಿಕೊಳ್ಳು; ಅಗ್ಗ: ಶ್ರೇಷ್ಠ; ಪುಣ್ಯ: ಸದಾಚಾರ; ಲೇಸು: ಒಳಿತು; ಖಳ: ದುಷ್ಟ; ಶಿಷ್ಯ: ವಿದ್ಯಾರ್ಥಿ; ಕೊಲು: ಸಾಯಿಸು; ಕೊಂಡು: ಪಡೆದು; ಕೊರಳು: ಗಂಟಲು; ಅಡಾಯುಧ: ಮೇಲಕ್ಕೆ ಬಾಗಿದ ಕತ್ತಿ;

ಪದವಿಂಗಡಣೆ:
ಸೆಳೆದ್+ಅಡಾಯ್ಧವ+ ಸಂಜಯನ+ ಹೆಡ
ತಲೆಗೆ +ಹೂಡಿದನ್+ಅರಿವ +ಸಮಯಕೆ
ಸುಳಿದನ್+ಅಗ್ಗದ +ಬಾದರಾಯಣನ್+ಅವನ+ ಪುಣ್ಯದಲಿ
ಎಲೆಲೆ +ಸಾತ್ಯಕಿ +ಲೇಸು+ಮಾಡಿದೆ
ಖಳನೆ +ಸಂಜಯನ್+ಎಮ್ಮ +ಶಿಷ್ಯನ
ಕೊಲುವುದೇ +ನೀನೆನುತ +ಕೊಂಡನು+ ಕೊರಳ್+ಅಡಾಯುಧವ

ಅಚ್ಚರಿ:
(೧) ತಲೆಯ ಹಿಂಭಾಗ ಎಂದು ಹೇಳಲು – ಹೆಡತಲೆ ಪದದ ಪ್ರಯೋಗ
(೨) ಸಂಜಯನನ್ನು ರಕ್ಷಿಸಿದ ಪರಿ – ಖಳನೆ ಸಂಜಯನೆಮ್ಮ ಶಿಷ್ಯನಕೊಲುವುದೇ

ಪದ್ಯ ೫: ಧೃಷ್ಟದ್ಯುಮ್ನನು ಸಂಜಯನನ್ನು ಎಲ್ಲಿಗೆ ಕಳಿಸಲು ಹೇಳಿದನು?

ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು (ಗದಾ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ಇತ್ತ, ಸಂಜಯನಿಗೆ ಮೃತ್ಯು ಬಂದಿತು. ಧೃಷ್ಟಧ್ಯುಮ್ನನು ಸಾತ್ಯಕಿಯನ್ನು ಕರೆದು ಇವನನ್ನು ಇರಿದು ಕೋಂದರೆ ಸರಿಯಾದೀತು. ಇವನು ಕುರುಡನಿಗೆ ಯುದ್ಧವಾರ್ತೆಯನ್ನು ಹೇಳುತ್ತಾನಂತೆ. ಕೌರವನು ಗೆಲ್ಲಬೇಕೆಂಬುದು ಇವನ ಮನಸ್ಸಿನಲ್ಲಿದೆ. ಈ ದುರಾತ್ಮನನ್ನು ಯಮಲೋಕಕ್ಕೆ ಕಳಿಸು ಎಂದು ಅಪ್ಪಣೆ ಮಾಡಿದನು.

ಅರ್ಥ:
ಮೃತ್ಯು: ಮರಣ; ಕುತ್ತು: ತೊಂದರೆ, ಆಪತ್ತು; ಕೆಡಹು: ನಾಶ; ಕುರುಡ: ಅಂಧ; ರಣ: ಯುದ್ಧ; ರಸ: ಸಾರ; ಬಿತ್ತರಿಸು: ವಿಸ್ತರಿಸು, ತಿಳಿಸು; ಜಯ: ಗೆಲುವು; ದುರಾತ್ಮ: ದುಷ್ಟ; ಕೈವರ್ತಿ: ಕೈಯಿಂದ ಹೊಸೆದು ಮಾಡಿದ ಬತ್ತಿ; ಯಮನಗರಿ: ನರಕ; ಕರೆ: ಆಗಮಿಸು;

ಪದವಿಂಗಡಣೆ:
ಇತ್ತಲೀ+ ಸಂಜಯನ +ತಂದುದು
ಮೃತ್ಯು +ಧೃಷ್ಟದ್ಯುಮ್ನನ್+ಈತನ
ಕುತ್ತಿ +ಕೆಡಹಿದಡ್+ಆಗದೇ+ ಕುರುಡಂಗೆ +ರಣರಸವ
ಬಿತ್ತರಿಸುವನು +ಕೌರವನ +ಜಯ
ದತ್ತಲ್+ಎರಕ +ದುರಾತ್ಮನನು +ಕೈ
ವರ್ತಿಸಾ +ಯಮನಗರಿಗೆಂದನು +ಸಾತ್ಯಕಿಯ +ಕರೆದು

ಅಚ್ಚರಿ:
(೧) ಸಾಯಿಸು ಎಂದು ಹೇಳುವ ಪರಿ – ದುರಾತ್ಮನನು ಕೈವರ್ತಿಸಾ ಯಮನಗರಿಗ್

ಪದ್ಯ ೪: ಪಾಂಡವರ ಸೈನ್ಯದಲ್ಲಿ ಎಷ್ಟು ಉಳಿಯಿತು?

ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೊರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು (ಗದಾ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಎಲೈ ರಾಜ ಜನಮೇಜಯ ಕೇಳು, ಪಾಂಡವಸೇನೆಯಲ್ಲಿ ಎರಡು ಸಾವಿರ ರಥಗಳು, ಏಳುನೂರು ಆನೆಗಳು, ಐದುಸಾವಿರ ಕುದುರೆಗಳು, ಒಂದು ಲಕ್ಷ ಕಾಲಾಳುಗಳು. ಸಾತ್ಯಕಿ ಯುಧಾಮನ್ಯು ಉತ್ತಮೌಜಸ, ಶಿಖಂಡಿ, ಧೃಷ್ಟದ್ಯುಮ್ನ, ಉಪಪಾಂಡವರು, ಉಳಿದರು.

ಅರ್ಥ:
ಧರಣಿಪತಿ: ರಾಜ; ಮೋಹರ: ಯುದ್ಧ; ಉಳಿದು: ಮಿಕ್ಕ; ತೇರು: ಬಂಡಿ; ಸಾವಿರ: ಸಹಸ್ರ; ಗಜ: ಆನೆ; ಪಾಯದಳ: ಸೈನಿಕ; ತುರಗ: ಅಶ್ವ; ಉರು: ಶ್ರೇಷ್ಠ; ಸೂನು: ಮಗ; ಸುತ: ಮಗ;

ಪದವಿಂಗಡಣೆ:
ಧರಣಿಪತಿ +ಕೇಳ್ +ಧರ್ಮಜನ +ಮೋ
ಹರದೊಳ್+ಉಳಿದುದು +ತೇರು +ಸಾವಿರವ್
ಎರಡು+ ಗಜವ್+ಏಳ್ನೊರು +ಮಿಕ್ಕುದು +ಲಕ್ಕ +ಪಾಯದಳ
ತುರಗ +ಸಾವಿರವ್+ಐದು +ಸಾತ್ಯಕಿ
ವರ +ಯುಧಾಮನ್ಯು+ಉತ್ತಮೌಂಜಸರ್
ಉರು +ಶಿಖಂಡಿ +ದ್ರುಪದ+ಸೂನು+ ದ್ರೌಪದೀ+ಸುತರು

ಅಚ್ಚರಿ:
(೧) ಸೂನು, ಸುತ – ಸಮಾನಾರ್ಥಕ ಪದ

ಪದ್ಯ ೩: ಯಾರ ವಿಷಬೀಜವು ಬಾಧಕವಾಯಿತು?

ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸಗೊಂಡ (ಗದಾ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಆಗ ಜನಮೇಜಯನು ಅಯ್ಯೋ ನಮ್ಮ ಪೂರ್ವರಾಜರಿಗೆ ಇಂತಹ ವಿಧಿ ಬಂದಿತು. ಕೌರವನು ಧರ್ಮಕಂಟಕನಾಗಿಬಿಟ್ಟನು. ಶಕುನಿಯ ಅಭಿಪ್ರಾಯವೆಂಬ ವಿಷಬೀಜವು ದುರ್ಯೋಧನನ ಐಶ್ವರ್ಯಕ್ಕೆ ಬಾಧಕವಾಯಿತು. ಯುಧಿಷ್ಠಿರನ ಸೇನೆ ಎಷ್ಟು ಉಳಿಯಿತು ಎಂದು ಕೇಳಿದನು.

ಅರ್ಥ:
ಅಕಟ: ಅಯ್ಯೋ; ಪೂರ್ವ: ಹಿಂದಿನ; ರಾಜ: ನೃಪ; ಪ್ರಕರ: ಗುಂಪು, ಸಮೂಹ; ವಿಧಿ: ನಿಯಮ; ಕಂಟಕ: ವಿಪತ್ತು; ಪ್ರಭಾವ: ಬಲ, ಪರಾಕ್ರಮ; ಮತ: ವಿಚಾರ; ವಿಷ: ನಂಜು; ಬೀಜ: ಉತ್ಪತ್ತಿ ಸ್ಥಾನ, ಮೂಲ; ಬಾಧಕ: ತೊಂದರೆ; ತಂದು: ಬರೆಮಾಡು; ಸಕಲ: ಎಲ್ಲಾ; ಬಲ: ಶಕ್ತಿ; ಪರಿಶೇಷ: ಉಳಿದ; ಅರಸ: ರಾಜ; ಬೆಸ: ಅಪ್ಪಣೆ, ಆದೇಶ;

ಪದವಿಂಗಡಣೆ:
ಅಕಟ +ನಮ್ಮಯ +ಪೂರ್ವರಾಜ
ಪ್ರಕರಕ್+ಈ+ ವಿಧಿಯಾಯ್ತಲಾ +ಕಂ
ಟಕನಲಾ +ಧರ್ಮಪ್ರಭಾವಕೆ +ಕೌರವೇಶ್ವರನು
ಶಕುನಿ+ಮತ +ವಿಷ+ಬೀಜವೇ+ ಬಾ
ಧಕವ+ ತಂದುದಲಾ+ ಯುಧಿಷ್ಠಿರ
ಸಕಲ +ಬಲ +ಪರಿಶೇಷವೇನೆಂದ್+ಅರಸ+ ಬೆಸಗೊಂಡ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಕಂಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
(೨) ಶಕುನಿಯನ್ನು ನೋಡಿದ ಪರಿ – ಶಕುನಿಮತ ವಿಷಬೀಜವೇ ಬಾಧಕವ ತಂದುದಲಾ

ಪದ್ಯ ೨: ದೈವ ವಿಹೀನರ ಸ್ಥಿತಿ ಹೇಗಿರುತ್ತದೆ?

ಆ ಸುಯೋಧನ ಸೇನೆಯಲಿ ಧರ
ಣೀಶ ಕೃಪ ಕೃತವರ್ಮ ಗುರುಸುತ
ರೈಸುಬಲದಲಿ ನಾಲ್ವರುಳಿದರು ಹೇಳಲೇನದನು
ಏಸು ಬಲವೆನಿತೈಶ್ವರಿಯವಿ
ದ್ದೇಸು ಭಟರೆನಿತಗ್ಗಳೆಯರಿ
ದ್ದೇಸರಲಿ ಫಲವೇನು ದೈವವೀಹೀನರಿವರೆಂದ (ಗದಾ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಆ ದುರ್ಯೋಧನನ ಸೈನ್ಯದಲ್ಲಿ ತಾನು, ಕೃಪ, ಕೃತವರ್ಮ, ಅಶ್ವತ್ಥಾಮ ಈ ನಾಲ್ವರನ್ನು ಬಿಟ್ಟರೆ ಇನ್ನಾರು ಉಳಿದಿರಲಿಲ್ಲ. ಎಷ್ಟು ಐಶ್ವರ್ಯವಿದ್ದರೇನು? ಎಷ್ಟು ಭಟರಿದ್ದರೇನು? ಎಷ್ಟು ಬಲಶಾಲಿಗಳಾಗಿದ್ದರೇನು, ದೈವವನ್ನು ದೂರಸರಿಸಿದವರಿಗೆ ಯಾವ ಫಲವೂ ದೊರೆಯದು.

ಅರ್ಥ:
ಸೇನೆ: ಸೈನ್ಯ; ಧರಣೀಶ: ರಾಜ; ಐಸು: ಎಷ್ಟು; ಬಲ: ಸೈನ್ಯ; ಉಳಿದ: ಮಿಕ್ಕ; ಹೇಳು: ತಿಳಿಸು; ಎನಿತು: ಎಷ್ಟು; ಐಶ್ವರ್ಯ: ಸಂಪತ್ತು; ಭಟ: ಸೈನಿಕ; ಅಗ್ಗ: ಶ್ರೇಷ್ಠ; ಫಲ: ಪ್ರಯೋಜನ; ದೈವ: ಭಗವಂತ; ವಿಹೀನ: ತ್ಯಜಿಸಿದ, ಇಲ್ಲದ;

ಪದವಿಂಗಡಣೆ:
ಆ +ಸುಯೋಧನ +ಸೇನೆಯಲಿ +ಧರ
ಣೀಶ +ಕೃಪ+ ಕೃತವರ್ಮ +ಗುರುಸುತರ್
ಐಸುಬಲದಲಿ +ನಾಲ್ವರುಳಿದರು+ ಹೇಳಲೇನದನು
ಏಸು+ ಬಲವ್+ಎನಿತ್+ಐಶ್ವರಿಯವ್
ಇದ್ದ್+ಏಸು +ಭಟರೆನಿತ್+ಅಗ್ಗಳೆಯರ್
ಇದ್ದೇಸರಲಿ +ಫಲವೇನು +ದೈವ+ವಿಹೀನರ್+ಇವರೆಂದ

ಅಚ್ಚರಿ:
(೧) ದೈವದ ಮಹತ್ವ – ಅಗ್ಗಳೆಯರಿದ್ದೇಸರಲಿ ಫಲವೇನು ದೈವವೀಹೀನರಿವರೆಂ

ನುಡಿಮುತ್ತುಗಳು: ಗದಾ ಪರ್ವ ೩ ಸಂಧಿ

  • ಏಸು ಬಲವೆನಿತೈಶ್ವರಿಯವಿದ್ದೇಸು ಭಟರೆನಿತಗ್ಗಳೆಯರಿದ್ದೇಸರಲಿ ಫಲವೇನು ದೈವವೀಹೀನರಿವರೆಂದ – ಪದ್ಯ  
  • ಕಂಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು – ಪದ್ಯ  
  • ಓಡದಿಹ ನರಿ ಹದ್ದು ಕಾಗೆಗೆಕೂಡೆ ಗದೆಯನು ಬೀಸುವನು – ಪದ್ಯ  ೧೦
  • ಛಲಚೇತನನು ಸಲೆ ಚಂಡಿಯಾದನು – ಪದ್ಯ  ೧೫
  • ರಾಜವನ ಮಾಕಂದನನು ಧೃತರಾಷ್ಟ್ರ ರಾಯನ ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು – ಪದ್ಯ  ೧೭
  • ಬಿಡದೆ ಬಾಗುವ ನೃಪರ ಮಕುಟದೊಳಿಡುವ ಕೋಮಲ ಚರಣವಿದರೊಳುನಡೆಯಲೆಂತೈ ಕಲಿತೆ – ಪದ್ಯ  ೧೮
  • ಶಶಿರುಚಿಗೆ ಸೈರಿಸದ ಸಿರಿಮುಡಿ, ಸುಗಂಧ ಪ್ರಸರಪೂರ್ಣಘ್ರಾಣ, ಸುಗೀತದರಸದ ಮಧುವಿಂಗಾಂತ ಕಿವಿ – ಪದ್ಯ  ೨೦
  • ಲಲಿತ ಮೃದುತರ ಹಂಸತೂಳದಲುಳಿತ ಕೋಮಲ ಕಾಯ – ಪದ್ಯ  ೨೧
  • ದೈವವನವಗಡಿಸಿ ದುಃಸ್ಥಿತಿಗೆ ಬಂದೈ – ಪದ್ಯ  ೨೪
  • ಕದನದಲಿ ನೀನೊಂದು ನೆಳಲುಳಿಯಲು – ಪದ್ಯ  ೨೭
  • ಭಾಳಲಿಪಿಗಳ ಲೆಕ್ಕವನು ಪ್ರತಿಕೂಲವಿಧಿ ಪಲ್ಲಟಿಸಿ ಬರೆದಡೆ – ಪದ್ಯ  ೨೮
  • ಪೂರ್ವ ಸುಕೃತದಸಾಳಿವನವೊಣಗಿದೊಡೆ – ಪದ್ಯ  ೨೮
  • ವಿಕ್ರಮದುದಧಿ ನೆಲೆಯಾಯಿತು – ಪದ್ಯ  ೨೯
  • ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು ಬಯಸುವ – ಪದ್ಯ  ೩೧
  • ಭಾನು ಭಾರಿಯ ತಮವತಿವಿವನದಾರ ನೆರವಿಯಲಿ – ಪದ್ಯ  ೩೧
  • ಬೇಹ ನಾಯಕರೋಲಗಿಸಿತಮರಿಯರನೀ – ಪದ್ಯ  ೩೨
  • ಕುರುರಾಯನೆಂಬೀ ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ – ಪದ್ಯ  ೩೩
  • ಕೌಂತೇಯರನು ಯಮ ಸದನದಲಿ ತೋರುವೆನು – ಪದ್ಯ  ೩೫
  • ಅಲರ್ದ ಹೊಂದಾವರೆಯ ನವಪರಿಮಳದ ಸಿಂಹಾಸನದಿ – ಪದ್ಯ  ೩೮
  • ಲಕ್ಷ್ಮೀ ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ – ಪದ್ಯ  ೩೮

ಪದ್ಯ ೧: ದುರ್ಯೋಧನನ ಪರಿಸ್ಥಿತಿ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರದಿಶಾಭಿಮುಖವಾಗಿ (ಗದಾ ಪರ್ವ, ೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವನು ಹೆಗಲಮೇಲೆ ಗದೆಯನ್ನಿಟ್ಟುಕೊಂಡು ಏಕಾಂಗಿಯಾಗಿ ರಣರಂಗದಲ್ಲಿ ಕಾಲು ನಡೆಯಿಂದ ಮುಂದುವರೆದನು. ಯಾವ ಪರಿವಾರದವರೂ ಅವನ ಸುತ್ತ ಕಾಣಲಿಲ್ಲ. ಛತ್ರ, ಚಾಮರ, ವೀಳೆಯ ಮೊದಲಾದ ವೈಭವಗಳಿಂದ ವಂಚಿತನಾಗಿ ಪೂರ್ವ ದಿಕ್ಕಿನ ಕಡೆಗೆ ನಡೆದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಹೆಗಲು: ಭುಜ; ಗದೆ: ಮುದ್ಗರ; ಕಾಲು: ಪಾದ; ನಡೆ: ಚಲಿಸು; ಹಾಯ್ದು: ಚಲಿಸು; ಏಕಾಂಗ: ಒಬ್ಬನೆ; ಕಳ: ಯುದ್ಧಭೂಮಿ; ಆಳ: ಸೇವಕ; ಕಾಣು: ತೋರು; ಛತ್ರ: ಕೊಡೆ; ಚಮರ: ಚಾಮರ; ವೀಳೆ: ತಾಂಬುಲ; ವಿಸ್ತಾರ: ಅಗಲ; ವಿಭವ: ಸಿರಿ, ಸಂಪತ್ತು; ಬೀಳುಕೊಡು: ತೆರಳು; ನಡೆ: ಚಲಿಸು; ಇಂದ್ರದಿಶ: ಪೂರ್ವದಿಕ್ಕು; ಅಭಿಮುಖ: ಎದುರು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕುರುಪತಿ +ಹೆಗಲ +ಗದೆಯಲಿ
ಕಾಲುನಡೆಯಲಿ +ಹಾಯ್ದನ್+ಏಕಾಂಗದಲಿ +ಕಳನೊಳಗೆ
ಆಳ +ಕಾಣೆನು +ಛತ್ರ +ಚಮರದ
ವೀಳೆಯದ +ವಿಸ್ತಾರ+ವಿಭವವ
ಬೀಳುಕೊಟ್ಟನು+ ನಡೆದನ್+ಇಂದ್ರ+ದಿಶ+ಅಭಿಮುಖವಾಗಿ

ಅಚ್ಚರಿ:
(೧) ದುರ್ಯೋಧನನ ಸ್ಥಿತಿ – ಕುರುಪತಿ ಹೆಗಲ ಗದೆಯಲಿ ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
(೨) ವೈಭವ ವಿಲ್ಲದ ಸ್ಥಿತಿ – ವಿಸ್ತಾರವಿಭವವ ಬೀಳುಕೊಟ್ಟನು

ಪದ್ಯ ೪೧: ದುರ್ಯೋಧನನ ಸೈನ್ಯದಲ್ಲಿ ಯಾರು ನಾಶ ಹೊಂದಿದರು?

ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪ್ತೈ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ (ಗದಾ ಪರ್ವ, ೨ ಸಂಧಿ, ೪೧ ಪದ್ಯ)

ತಾತ್ಪರ್ಯ:
ಕುದುರೆಗಳು, ರಾವುತರು, ಆನೆಗಳು, ಜೋದರು, ರಥಗಳು, ಕಾಲಾಳುಗಳು, ಈ ಚತುರಂಗ ಬಲದಲ್ಲಿ ಒಂದೂ ಉಳಿದಿರಲಿಲ್ಲ. ದುರ್ಯೋಧನನು ಕಾಲು ನಡೆಯಿಂದಲೇ ಜಾರಿ ತಪ್ಪಿಸಿಕೊಂಡು ಹೋದನು. ವೀರನಾರಾಯಣನ ಕರುಣೆಯಿಂದ ಪಾಂಡವರ ಅಭ್ಯುದಯ ಅತಿಶಯವಾಗಿ ಶೋಭಿಸಿತು.

ಅರ್ಥ:
ಕುದುರೆ: ಅಶ್ವ; ರಾವ್ತರು: ಕುದುರೆಸವಾರ; ಜೋದ: ಆನೆ ಸವಾರ; ಸಂತತಿ: ವಂಶ; ಮದ: ಅಮಲು, ಮತ್ತು; ಗಜ: ಆನೆ; ವ್ರಜ: ಗುಂಪು; ರಥಾವಳಿ: ರಥಗಳ ಗುಂಪು; ಪದಚರ: ಕಾಲಾಳು; ಚತುರಂಗಬಲ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಉಳಿ: ಮಿಕ್ಕ; ಪದ: ಪಾದ; ನೃಪತಿ: ರಾಜ; ಅಭ್ಯುದಯ: ಏಳಿಗೆ; ಕರುಣ: ದಯೆ;

ಪದವಿಂಗಡಣೆ:
ಕುದುರೆ +ರಾವ್ತರು +ಜೋದ+ಸಂತತಿ
ಮದ+ಗಜವ್ರಜವ್+ಅತಿ+ರಥಾವಳಿ
ಪದಚರರು+ ಚತುರಂಗಬಲವ್+ಒಂದುಳಿಯದ್+ಇದರೊಳಗೆ
ಪದದಲೇ +ಕೌರವ+ನೃಪತಿ+ ಜಾ
ರಿದನು +ಕುಂತೀಸುತರು +ಬಹಳ
ಅಭ್ಯುದಯರಾದರು +ವೀರನಾರಾಯಣನ +ಕರುಣದಲಿ

ಅಚ್ಚರಿ:
(೧) ಯುದ್ಧದಲ್ಲಿ ನಾಶವಾದುದು – ಕುದುರೆ, ರಾವ್ತರು, ಜೋದ, ಮದಗಜವ್ರಜ, ರಥಾವಳಿ, ಪದಚರರು, ಚತುರಂಗಬಲ

ಪದ್ಯ ೪೦: ಯುದ್ಧದ ಅಂತ್ಯದಲ್ಲಿ ಯಾರು ಉಳಿದಿದ್ದರು?

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿಧಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು (ಗದಾ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕೌರವನಿದಿರಿನಲ್ಲಿ ಛತ್ರ, ಚಾಮರಗಳನ್ನು ಹಿಡಿಯುವವರು, ತಾಂಬೂಲದ ಹಡಪವನ್ನು ಹಿಡಿದವರು, ಬಿರುದಾವಳಿಯವರು, ಪಾಠಕರು, ವಾದ್ಯ ವಾದಕರು, ಗಾಯಕರು, ನೀರು ತಿಂಡಿಗಳನ್ನು ಕೊಡುವವರು, ಆನೆ ಕುದುರೆಗಳ ಗಾಯಗಳನ್ನು ಚಿಕಿತ್ಸೆ ಮಾಡುವವರು, ರಥದ ಗಾಲಿಗಳನ್ನು ದಬ್ಬುವವರು, ಬಿಲ್ಲು ಬಾಣಗಳನ್ನು ಕೊಡುವವರು ಮಾತ್ರ ಇದ್ದರು.

ಅರ್ಥ:
ಉಳಿದ: ಮಿಕ್ಕ; ಇದಿರು: ಎದುರು; ಛತ್ರ: ಕೊಡೆ; ಚಮರಾವಳಿ: ಚಾಮರ; ಹಡಪಿಗ: ಅಡಕೆ ಎಲೆಯ ಚೀಲವನ್ನು ಹಿಡಿದವ; ಬಿರುದಾವಳಿ: ಗೌರವ ಸೂಚಕದ ಹೆಸರು; ಪಾಠಕ: ಹೊಗಳುಭಟ್ಟ; ವಾದ್ಯ: ಸಂಗೀತದ ಸಾಧನ; ಮಲ್ಲಗಾಯಕ: ಸಂಗೀತದಲ್ಲಿ ನಿಪುಣನಾದವ; ಸಲಿಲ: ನೀರು; ಭಕ್ಷ್ಯ: ಊಟ; ವಿಧಾನ: ರೀತಿ; ಗಜ: ಆನೆ; ಹಯ: ಕುದುರೆ; ಕುಲ: ವಂಶ; ರಕ್ಷ: ರಕ್ಷಣೆ, ಕಾಪಾಡು; ವ್ರಣ: ಹುಣ್ಣು; ಚಿಕಿತ್ಸ: ರೋಗಕ್ಕೆ ಮದ್ದು ನೀಡುವವ; ರಥ: ಬಂಡಿ; ಚಾರಕ: ಓಡಿಸುವ; ಕಾರ್ಮುಕ: ಬಿಲ್ಲು; ಬಾಣ: ಶರ;

ಪದವಿಂಗಡಣೆ:
ಉಳಿದುದ್+ಇದಿರಲಿ +ಛತ್ರ+ ಚಮರಾ
ವಳಿಯವರು +ಹಡಪಿಗರು +ಬಿರುದಾ
ವಳಿಯವರು +ಪಾಠಕರು +ವಾದ್ಯದ +ಮಲ್ಲಗಾಯಕರು
ಸಲಿಲ +ಭಕ್ಷ್ಯ+ವಿಧಾನ+ಗಜ+ಹಯ
ಕುಲದ+ ರಕ್ಷ+ವ್ರಣ+ಚಿಕಿತ್ಸಕ
ದಳಿತ+ ರಥಚಾರಕರು +ಕಾರ್ಮುಕ+ಬಾಣದಾಯಕರು

ಅಚ್ಚರಿ:
(೧) ಯುದ್ಧದಲ್ಲಿ ಸಹಾಯ ಮಾಡುವವರು – ಚಮರಾವಳಿ, ಹಡಪಿಗ, ಬಿರುದಾವಳಿ, ಪಾಠಕ, ಮಲ್ಲಗಾಯಕ, ವ್ರಣಚಿಕಿತ್ಸಕ, ರಥಚಾರಕ, ಬಾಣದಾಯಕ

ಪದ್ಯ ೩೯: ಭೀಮನು ಆನೆಗಳ ಮೇಲೆ ಹೇಗೆ ಆಕ್ರಮಣ ಮಾಡಿದನು?

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಿಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ (ಗದಾ ಪರ್ವ, ೨ ಸಂಧಿ, ೩೯ ಪದ್ಯ)

ತಾತ್ಪರ್ಯ:
ಎಡದಲ್ಲಿ ಬಲದಲ್ಲಿ ಕಾಲಲ್ಲಿ ಮೆಟ್ಟಿ ಗದೆಯಿಂದ ಅಪ್ಪಳಿಸಿ ಆನೆಗಳೆಲ್ಲವನ್ನೂ ಕೆಳಕ್ಕೆ ಕೆಡವಿದನು. ಕೌರವನ ನೂರು ಆನೆಗಳ ಹೆಣಗಳು ನಿಮಿಷ ಮಾತ್ರದಲ್ಲಿ ಸಾಲುಸಾಲಾಗಿ ಬಿದ್ದವು.

ಅರ್ಥ:
ಮೆಟ್ಟು: ತುಳಿ; ಬಲವಂಕ: ಬಲಭಾಗ; ಹೊರಗಟ್ಟು: ಬಿಸಾಡು, ನೂಕು; ವಾಮ: ಎಡಭಾಗ; ಗಜ: ಆನೆ; ಅಪ್ಪಳಿಸು: ತಟ್ಟು, ತಾಗು; ಪರಿಘ: ಗದೆ; ಘಟ್ಟಿಸು: ಹೊಡೆ, ಅಪ್ಪಳಿಸು; ಒಗ್ಗು: ಗುಂಪು, ಸಮೂಹ; ಥಟ್ಟು: ಗುಂಪು; ಕೆಡಹು: ನಾಹ್ಸ; ಅಮಮ: ಅಬ್ಬಬ್ಬಾ; ಹೆಣ: ಜೀವವಿಲ್ಲದ ಶರೀರ; ಸಾಲು: ಆವಳಿ; ನೃಪ: ರಾಜ; ನಿಮಿಷ: ಕ್ಷಣ;

ಪದವಿಂಗಡಣೆ:
ಮೆಟ್ಟಿದನು+ ಬಲವಂಕವನು+ ಹೊರ
ಗಟ್ಟಿದನು +ವಾಮದ +ಗಜಂಗಳನ್
ಇಟ್ಟನ್+ಒಂದರೊಳ್+ಒಂದನ್+ಅಪ್ಪಳಿಸಿದನು +ಪರಿಘದಲಿ
ಘಟ್ಟಿಸಿದನ್+ಒಗ್ಗಿನ +ಗಜಂಗಳ
ಥಟ್ಟು+ಕೆಡಹಿದನ್+ಅಮಮ +ಹೆಣ+ಸಾ
ಲಿಟ್ಟವೈ +ಕುರುನೃಪನ+ ನೂರಾನೆಗಳು +ನಿಮಿಷದಲಿ

ಅಚ್ಚರಿ:
(೧) ಮೆಟ್ಟಿದನು, ಅಟ್ಟಿದನು – ಪದಗಳ ಬಳಕೆ
(೨) ಆಶ್ಚರ್ಯವನ್ನು ಸೂಚಿಸುವ ಪರಿ – ಘಟ್ಟಿಸಿದನೊಗ್ಗಿನ ಗಜಂಗಳ ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ